ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮ: ಇಂದು ಸಂವಿಧಾನ ದಿನ

Ambedkar
Published on
ಒಂದು ದೇಶದ ಆಡಳಿತ ನಡೆಸಲು ಸಂವಿಧಾನವು ಅತ್ಯಗತ್ಯವಾಗಿರುತ್ತದೆ. ದೇಶ ಮುನ್ನಡೆಸಲು ಬೇಕಾದ ಕಾನೂನು, ನಿಯಮಗಳು, ಮಾರ್ಗಸೂಚಿಗಳನ್ನು ಸಂವಿಧಾನವು ಒಳಗೊಂಡಿರುತ್ತದೆ. ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳು, ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ಕೂಡ ಹೊಂದಿರುತ್ತದೆ.

ಭಾರತದ ಸಂವಿಧಾನವನ್ನು 1947ರ ಡಿಸೆಂಬರ್ 9 ರಿಂದ 1949ರ ನವೆಂಬರ್ 26ರವರೆಗಿನ ಅವಧಿಯಲ್ಲಿ ನಡೆದ ಸಂವಿಧಾನ ರಚನಾ ಸಭೆಯ ಮೂಲಕ ಸಿದ್ಧಪಡಿಸಲಾಯಿತು. 1950ರ ಜನವರಿ 26ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಭಾರತದ ಸಂವಿಧಾನವು ಮೂಲತಃ 365 ವಿಧಿಗಳು, 22 ಭಾಗಗಳು, 8 ಅನುಚ್ಛೇದಗಳನ್ನು ಹೊಂದಿದೆ. ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ಭಾರತದ್ದಾಗಿದೆ. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿ 1,17,369 ಶಬ್ದಗಳನ್ನು ಹೊಂದಿದೆ.

ಸಂವಿಧಾನ ರಚನೆ ಸಮಿತಿ: 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾದ ನಂತರ ಸಂವಿಧಾನ ರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಭಾರತದ ಜತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆಯ್ಕೆ ಮಾಡಿದ್ದರು. ಈ ಪ್ರಾಂತೀಯ ಸಭೆಗಳಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಆರಿಸಲಾಯಿತು. ಈ ಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್, ಬಿ.ಎನ್.ರಾವ್ ಮತ್ತು ಕೆ.ಎಂ. ಮುನ್ಶಿ ಅವರೂ ಸಭೆಯ ಸದಸ್ಯರಾಗಿದ್ದರು. ಡಾ. ರಾಜೇಂದ್ರ ಪ್ರಸಾದ್ ಸಂವಿಧಾನ ರಚನಾಸಭೆಯ ಅಧ್ಯಕ್ಷರಾಗಿಯೂ ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನ ರಚನಾಸಭೆಯು ಎರಡು ವರ್ಷ 11 ತಿಂಗಳು 18 ದಿನಗಳ ಕಾಲದ ಅವಧಿಯಲ್ಲಿ 166 ದಿನ ಸಮಾವೇಶಗೊಂಡಿತು. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಅಂತಿಮ ಕರಡನ್ನು 1949ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಂಡಿಸಿದರು.

ಸಂವಿಧಾನದ ಪೀಠಿಕೆ: ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿಯನ್ನು ನಮ್ಮ ದೇಶ ಅಳವಡಿಸಿಕೊಂಡಿರುವುದನ್ನು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಸಂವಿಧಾನದ ಉದ್ದೇಶ ಮತ್ತು ಆಶಯಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಹೇಳಲಾಗಿದೆ. ‘ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಿ; ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವವನ್ನು ಪೋ›ತ್ಸಾಹಿಸಲು ನಿರ್ಧರಿಸಿ ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ 1949ರ ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ’ ಎಂದು ಪೀಠಿಕೆಯಲ್ಲಿ ವಿವರಿಸಲಾಗಿದೆ.

ಅಧ್ಯಯನ-ಅಳವಡಿಕೆ: ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನವನ್ನು ಕೈಗೊಂಡು, ಅವುಗಳಲ್ಲಿನ ಆಯ್ದ ವಿಚಾರಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಬ್ರಿಟನ್ನಿನ ಸಂವಿಧಾನದಲ್ಲಿರುವ ಸರಕಾರದ ಸಂಸದೀಯ ಸ್ವರೂಪ, ಏಕಸ್ವಾಮ್ಯ ಪೌರತ್ವ, ನ್ಯಾಯದ ಪ್ರಭುತ್ವ, ಲೋಕಸಭಾಧ್ಯಕ್ಷ ಮತ್ತವರ ಪಾತ್ರ, ಶಾಸನ ರಚನೆಯ ವಿಧಾನ, ನ್ಯಾಯ ನಿರ್ಧರಿಸುವ ಕಾರ್ಯವಿಧಾನ; ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳು, ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ, ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ; ಐರ್ಲೆಂಡ್ ಸಂವಿಧಾನದಲ್ಲಿನ ರಾಜ್ಯ ನೀತಿ ನಿರ್ದೇಶಕ ತತ್ವಗಳು; ಫ್ರಾನ್ಸ್ ಸಂವಿಧಾನದಲ್ಲಿನ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಆದರ್ಶಗಳು; ಕೆನಡಾ ಸಂವಿಧಾನದಲ್ಲಿನ ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ; ಜಪಾನ್ ಸಂವಿಧಾನದಲ್ಲಿನ ಮೂಲಭೂತ ಕರ್ತವ್ಯಗಳು; ಜರ್ಮನಿ ಸಂವಿಧಾನದಲ್ಲಿನ ತುರ್ತು ಪರಿಸ್ಥಿತಿಯ ಏರ್ಪಾಡು ಮುಂತಾದ ವಿಚಾರಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನಮ್ಮಲ್ಲಿ ಅಳವಡಿಸಿಕೊಳ್ಳಲಾಗಿದೆ.

ಆಡಳಿತದ ದಿಕ್ಸೂಚಿ:ಭಾರತದ ಸಂವಿಧಾನವು ದೇಶದ ಗುರಿಗಳು, ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಕುರಿತಂತೆ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳಿಗಿರುವ ಹಕ್ಕುಗಳನ್ನು ಮತ್ತು  ಕರ್ತವ್ಯಗಳನ್ನು ನಿಗದಿಪಡಿಸುತ್ತದೆ. ಸರ್ಕಾರದ ಮೂಲ ರಚನೆ ಹೇಗಿರಬೇಕು ಎಂಬುದನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಇದರನುಸಾರ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂದು ಮೂರು ಮುಖ್ಯ ಅಂಗಗಳು ಇವೆ. ಈ ಮೂರು ಅಂಗಗಳ ಅಧಿಕಾರ ಹಾಗೂ ಜವಾಬ್ದಾರಿಯನ್ನು ಸಂವಿಧಾನದಲ್ಲಿ ವಿವರಿಸಲಾಗಿದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧ ಹಾಗೂ ಜನತೆ ಹಾಗೂ ಸರ್ಕಾರದ ನಡುವಿನ ಸಂಬಂಧವನ್ನೂ ಸಂವಿಧಾನವು ನಿಯಂತ್ರಿಸುತ್ತದೆ. ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನಮಾನವನ್ನು ಇದು ಹೊಂದಿರುತ್ತದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net