ಅಗ್ನಿಪರೀಕ್ಷೆ ಮತ್ತು ಭುಜದ ಮೇಲೆ ಸೇನೆಯ ಸ್ಟಾರ್​!

Cloumn Diksuchi
Published on

ಈ ಕರೊನಾ ಕಾಲದಲ್ಲಿ ಕೆಲ ವೈದ್ಯರು ಕರ್ತವ್ಯಕ್ಕೆ ಬರಲಿಲ್ಲವೆಂಬುದು ಹೌದಾದರೂ, ಹೆಚ್ಚಿನ ಮಂದಿ ಈ ಅದೃಶ್ಯ ವೈರಿಯ ವಿರುದ್ಧದ ಸಮರಕ್ಕೆ ಸೈ ಎಂದರು. ತಾವೇ ಖುದ್ದು ಸೋಂಕಿಗೆ ಒಳಗಾಗುವ ಸಾಧ್ಯತೆ ಇದ್ದರೂ, ಹೆದರದೆ ಚಿಕಿತ್ಸೆ ನೀಡಿದರು. ಕೆಲ ಕಡೆಗಳಲ್ಲಿ ವೈದ್ಯರ ಚಿಕಿತ್ಸೆ ಬಗ್ಗೆ ಅನುಮಾನಗೊಂಡು ಅಥವಾ ಸಂಶಯದಿಂದ ಹಲ್ಲೆಗೈದ ವಿಷಾದಕರ ಪ್ರಕರಣಗಳೂ ನಡೆದವು.

ಜೀವನವೇ ಹಾಗೆ. ಇಷ್ಟು ದಿನ ಎಷ್ಟೆಲ್ಲ ಕಷ್ಟಪಟ್ಟೆವು. ಕೊನೆಗೂ ದೇವರು ಕಣ್ಣುತೆರೆದ. ಇನ್ನೇನು ಎಲ್ಲವೂ ಸರಿಹೋಯಿತು, ಉಳಿದ ಕಾಲವನ್ನು ಆರಾಮಾಗಿ ಕಳೆಯಬಹುದು ಎಂದುಕೊಳ್ಳುತ್ತಿರುವಾಗಲೆ, ವಿಧಿಯು ದಾರಿಯ ಮೇಲೆ ಮುಳ್ಳಿನ ಬಲೆಯನ್ನು ಹರಡಿ, "ದಾಟು ನೋಡೋಣ' ಎಂದು ಸವಾಲೆಸೆಯುತ್ತದೆ. ಆ ಮುಳ್ಳನ್ನು ದಾಟದಿದ್ದರೆ ಮುಂದೆ ಸಾಗಲು ಆಗುವುದಿಲ್ಲ. ಹಾಗಂತ ಅದು ಸುಲಭವೇ? ಅಂಥ ಸತ್ವಪರೀೆಯ ಸಂದರ್ಭದಲ್ಲಿ ಎದೆಗುಂದದೆ ಇರುವವನು ಗೆದ್ದಾನು, ಇಲ್ಲವಾದರೆ ಬಿದ್ದಾನು.

ನಿತಿಕಾ ಕೌಲ್​ ಬದುಕಿನಲ್ಲಿ ಆದದ್ದೂ ಹೀಗೇ. ಪತಿ ವಿಭೂತಿ ಶಂಕರ್​ ಧೌಂಡಿಯಾಲ್​ ಭಾರತೀಯ ಸೇನೆಯಲ್ಲಿ ಮೇಜರ್​ ಹುದ್ದೆಯಲ್ಲಿದ್ದರು. 2018ರಲ್ಲಿ ಇವರ ವಿವಾಹವಾಗಿತ್ತು. ಬದುಕಿನ ಬಗ್ಗೆ ಹತ್ತಾರು ಕನಸು ಹೆಣೆದಿದ್ದ ನಿತಿಕಾ, ಮದುವೆಯ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕೆಂದು ಪ್ಲಾನ್​ ಮಾಡುತ್ತಿದ್ದರು. ವಿಧಿಯ ಒಂದು ಏಟಿಗೆ ಬದುಕೇ ಕುಸಿಯಿತು. 2019ರ ೆಬ್ರವರಿಯಲ್ಲಿ ಜಮ್ಮು&ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್​ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ವಿಭೂತಿ ಶಂಕರ್​ ಹುತಾತ್ಮರಾದರು. 2019ರ ೆಬ್ರವರಿ 14ರಂದು ಜಮ್ಮು&ಶ್ರೀನಗರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸೇನಾ ವಾಹನಗಳ ಮೇಲೆ ಜೈಷ್​ ಭಯೋತ್ಪಾದನಾ ಸಂಟನೆಯ ಆತ್ಮಹತ್ಯಾ ಬಾಂಬರ್​ ಒಬ್ಬ ವಾಹನವನ್ನು ನುಗ್ಗಿಸಿದಾಗ ಸಂಭವಿಸಿದ ಸ್ಫೋಟದಲ್ಲಿ 40 ಮಂದಿ ಸಿಆರ್​ಪಿಎ್​ ಯೋಧರು ಹುತಾತ್ಮರಾಗಿದ್ದರು. ಇದು ಭಾರತೀಯ ಸೇನೆಯ ಮೇಲೆ ನಡೆದ ದೊಡ್ಡ ಉಗ್ರದಾಳಿಯಾಗಿತ್ತು. ಸಹಜವಾಗಿಯೇ ಸೇನೆ ಸೇಡಿಗಾಗಿ ತಹತಹಿಸುತ್ತಿತ್ತು. ನಂತರದಲ್ಲಿ ಬಾಲಾಕೋಟ್​ ವಾಯುದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳಲಾಯಿತು. ಎಷ್ಟರಮಟ್ಟಿಗೆ ಎಂದರೆ, ಪಾಕಿಸ್ತಾನದ ಗಡಿ ದಾಟಿ ತೆರಳಿದ ಭಾರತದ ಯುದ್ಧ ವಿಮಾನಗಳು ಖೆಬರ್​ ಪಂಕ್ತುನಖ್ವಾ ಪ್ರದೇಶದ ಬಾಲಾಕೋಟ್​ನಲ್ಲಿ ಬಾಂಬ್​ ಹಾಕಿದವು. ಇದರಿಂದ ಅನೇಕ ಭಯೋತ್ಪಾದನಾ ಶಿಬಿರಗಳು ನಾಶಗೊಂಡು, ಅನೇಕ ಉಗ್ರರು ಹತ್ಯೇಗಿಡಾದರು. ಪಾಕಿಸ್ತಾನಕ್ಕೆ ಮರೆಯಲಾಗದ ಪೆಟ್ಟು ಬಿತ್ತು.

ಇನ್ನೊಂದೆಡೆ, ಪುಲ್ವಾಮಾ ದಾಳಿಕೋರ ಉಗ್ರರನ್ನು ಹುಡುಕಲು ಸೇನೆ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು, ಈ ಶೋಧ ಕಾರ್ಯಾಚರಣೆಯಲ್ಲಿ ವಿಭೂತಿ ಶಂಕರ್​ ಅವರೂ ಭಾಗವಹಿಸಿದ್ದರು. ಇವರ ತಂಡ ಜೈಷ್​ ಕಮಾಂಡರ್​ ಕಮ್ರಾನ್​ ಎಂಬಾತನನ್ನು ಹಿಡಿಯುವಲ್ಲಿ ಯಶಸ್ವಿಯಾಯಿತಾದರೂ, ಭಯೋತ್ಪಾದಕರ ದಾಳಿಯಿಂದಾಗಿ ವಿಭೂತಿ ಶಂಕರ್​ ಹಾಗೂ ಇತರ ಮೂವರು ಹುತಾತ್ಮರಾದರು. ಇದಾಗಿ ಎರಡು ವರ್ಷಗಳಾಗಿವೆ. ಇದೀಗ ನಿತಿಕಾ ಕೌಲ್​ ಕೂಡ ಪತಿಯ ಹೆಜ್ಜೆಯನ್ನನುಸರಿಸಿ ಸೇನೆಯನ್ನೇ ಸೇರಿದ್ದಾರೆ. ಚೆನ್ನೆ$ನ ಆಫೀಸರ್ಸ್​ ಟ್ರೇನಿಂಗ್​ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದ ಅವರು, ಈಚೆಗೆ ಲೆಫ್ಟಿನೆಂಟ್​ ಆಗಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಕಡಿಮೆ ಅವಧಿಯಲ್ಲಿ ಶಾರ್ಟ್​ಸರ್ವಿಸ್​ ಕಮಿಷನ್​ ಪರೀೆ ಮತ್ತು ತರಬೇತಿ ಮುಗಿಸಿದ ಹೆಗ್ಗಳಿಕೆ ಅವರದು. ಹಾಗಂತ ನಿತಿಕಾ ಕೌಲ್​ ಸುಲಭದಲ್ಲೇನು ಈ ಎರಡು ವರ್ಷ ಕಳೆಯಲಿಲ್ಲ. ಅದೊಂದು ಅಗ್ನಿಪರೀೆಯೇ ಆಗಿತ್ತು. "ಪತಿಯ ಸಾವು ಯಾವ ಹೆಣ್ಣಿಗಾದರೂ ಬಲುದೊಡ್ಡ ಆಘಾತವೇ. ಈ ಸ್ಥಿತಿಯಿಂದ ಚೇತರಿಸಿಕೊಂಡು ಮತ್ತೆ ಮಾಮೂಲಿನಂತಾಗಲು ನನಗೆ ಸಾಕಷ್ಟು ಸಮಯವೇ ಹಿಡಿಯಿತು. ಪತಿಯ ನೆನಪಿನಿಂದ ಹೊರಬರುವುದು ಕಷ್ಟಕರವಾಗಿತ್ತು. ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಆ ನೋವನ್ನು ಮರೆಯಲೆತ್ನಿಸಿದೆ. ಬದುಕಿನಲ್ಲಿ ಬರುವ ಅನಿರೀತ ಟನೆಗಳಿಂದ ಆಘಾತವಾಗುವುದು ಸಹಜ. ನಾವು ವಾಸ್ತವವನ್ನು ಅರಿತು ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು. ಹಾಗೆಂದೇ ನಾನು ಪತಿಯಂತೆ ಸೇನೆ ಸೇರುವ ದೃಢನಿರ್ಧಾರ ಕೈಗೊಂಡೆ. 2020ರ ಸೆಪ್ಟೆಂಬರ್​ನಲ್ಲಿ ಪರೀೆ ಬರೆಯಲು ನಿಶ್ಚಯಿಸಿದೆ. ಕೆಲಸ ಮತ್ತು ದಿನನಿತ್ಯದ ಕಾರ್ಯಗಳಲ್ಲಿ ಬದುಕಿನ ಬಗ್ಗೆ ಸಕಾರಾತ್ಮಕತೆ ಕಂಡುಕೊಂಡು ಮುಂದಡಿ ಇಟ್ಟೆ' ಎಂದು ಅವರು ನೆನಪಿನ ಸುರುಳಿಯನ್ನು ತೆರೆದಿಡುತ್ತಾರೆ. ಸೇನಾ ಸಮವಸ್ತ್ರ ಧರಿಸಿದ್ದು ಪತಿಗೆ ಸಲ್ಲಿಸಿದ ನೈಜಗೌರವ ಎಂದು ಅವರು ಕಣ್ಣಾಲಿ ತುಂಬಿಕೊಂಡು ಹೆಮ್ಮೆಯಿಂದಲೇ ಹೇಳುತ್ತಾರೆ. ಇದಲ್ಲವೆ ಬದುಕಿನ ಸಾರ್ಥಕತೆ...

"ನಿತಿಕಾ ಕೌಲ್​, ನೀವು ಬದ್ಧತೆ ಮತ್ತು ಸಂಕಲ್ಪಶಕ್ತಿಯ ದ್ಯೋತಕ. ಭಾರತೀಯ ನಾರಿಶಕ್ತಿಯ ಪ್ರತಿಕ. ನಿಮ್ಮ ಭುಜದ ಮೇಲೆ ಸೇನೆಯ ಸ್ಟಾರ್​ ನೋಡಿ ನಿಮ್ಮ ಪತಿ ವಿಭೂತಿ ಶಂಕರ್​ ಅವರು ಹೆಮ್ಮೆ ಮತ್ತು ಸಂತಸದಿಂದ ಬೀಗಿರಬಹುದು' ಎಂದು ಕೇಂದ್ರ ಸಚಿವೆ ಸ್ಮ$ತಿ ಇರಾನಿ ಹೇಳುವ ಮೂಲಕ ನಿತಿಕಾ ಸಾಹಸಕ್ಕೆ ಭೇಷ್​ ಎಂದಿದ್ದು ಸಹಜವೇ ಎನ್ನಿ. ಈ ಬಿಕ್ಕಟ್ಟುಗಳೇ ಹಾಗೆ. ಕಷ್ಟ ಎದುರಾದಾಗ ಅನೇಕರು ಕುಸಿದುಹೋಗುತ್ತಾರೆ. "ದೇವರೇ ಪ್ರಪಂಚದಲ್ಲಿ ಬೇರೆ ಯಾರಿಗೂ ಇಲ್ಲದ ಕಷ್ಟ ನನಗೇ ಯಾಕೆ'ಎಂದು ಗೋಳಾಡುತ್ತಾರೆ. ವಿಚಿತ್ರ ಎಂದರೆ, ಬಹುತೇಕ ಎಲ್ಲರೂ ತಮಗೆ ಮಾತ್ರ ಕಷ್ಟ ಎಂದು ಭಾವಿಸುತ್ತಾರೆ. ಅಂದರೆ ಹೆಚ್ಚಿನ ಜನರಿಗೆ ಕಷ್ಟಪರಂಪರೆ ತಪ್ಪಿದ್ದಲ್ಲ ಅಂತಾಯ್ತು. ಇನ್ನು ಕೆಲವರಿರುತ್ತಾರೆ, ಸವಾಲು ಎದುರಾದಾಗ ಅದನ್ನು ಕಷ್ಟ ಎಂದು ಭಾವಿಸದೆ ಅವಕಾಶದ ಏಣಿಯನ್ನಾಗಿ ಮಾಡಿಕೊಂಡು, ಸಾಧನೆಯ ಹಾದಿಯಲ್ಲಿ ಮೇಲೇರಿಬಿಡುತ್ತಾರೆ. ರಾಜಕೀಯ ರಂಗದಲ್ಲಿ ರಾಮಕೃಷ್ಣ ಹೆಗಡೆಯವರ ಬಗ್ಗೆ ಇಂಥದೊಂದು ಮಾತು ಚಾಲ್ತಿಯಲ್ಲಿತ್ತು.
ಈಗ ಒಂದೂವರೆ ವರ್ಷದಿಂದ ಕರೊನಾ ದಾಳಿ ನಡೆದಿದೆಯಲ್ಲ, ಈ ಅದೃಶ್ಯ ವೈರಾಣು ಅನೇಕರ ಸತ್ವಪರೀೆ ಮಾಡಿದೆ, ಇನ್ನು ಅನೇಕರ ಸತ್ವವನ್ನೇ ಹೀರಿದೆ. ಸಹಜವಾಗಿಯೇ ಇಂಥ ಆರೋಗ್ಯ ಸಮರದಲ್ಲಿ ವೈದ್ಯರು, ದಾದಿಯರು ಮತ್ತಿತರ ಆರೋಗ್ಯ ಸಿಬ್ಬಂದಿ ಮುಂಚೂಣಿಯಲ್ಲಿರುತ್ತಾರೆ. ಅದರಲ್ಲೂ ಕರೊನಾ ದಾಂಗುಡಿಯಿಟ್ಟ ಆರಂಭಿಕ ದಿನಗಳಲ್ಲಿ, ಈ ಸಾಂಕ್ರಾಮಿಕದ ಬಗ್ಗೆ ಸರಿಯಾದ ಅರಿವು, ಮಾಹಿತಿ ಇಲ್ಲದ ಕಾಲಟ್ಟದಲ್ಲಿ ಇವರು ಎದುರಿಸಿದ ಸವಾಲು ಒಂದೆರಡಲ್ಲ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಭಯ. ಯಾವ ಪ್ರಕ್ರಿಯೆ ನಡೆಸಿದರೆ ಸರಿಯೋ ತಪ್ಪೋ ಎಂದು ಗೊತ್ತಾಗದ ಅಯೋಮಯ. ಅಂತೂ ಕ್ರಮೇಣ ಕರೊನಾ ವೈರಸ್​ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿತು. ಚಿಕಿತ್ಸೆ ಮತ್ತು ಸೋಂಕಿತರ ದೇಖರೇಖ ವಿಚಾರದಲ್ಲಿ ಮಾಹಿತಿ ಲಭಿಸಿತು. ಕರೊನಾ ವಿರುದ್ಧ ಸಮರದಲ್ಲಿ ದೇಶದಲ್ಲಿ ನೂರಾರು ವೈದ್ಯರು ಪ್ರಾಣತೆತ್ತಿದ್ದಾರೆ. ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​ (ಐಎಂಎ) ಪ್ರಕಾರ, ಕರೊನಾ ಮೊದಲನೆಯ ಅಲೆಯಲ್ಲಿ 748 ವೈದ್ಯರು ಸಾವಿಗೀಡಾಗಿದ್ದಾರೆ. ಎರಡನೆಯ ಅಲೆಯಲ್ಲಿ ಈವರೆಗೆ 624 ವೈದ್ಯರು ಕರೊನಾಕ್ಕೆ ಬಲಿಯಾಗಿದ್ದಾರೆ. ಇನ್ನು, ಕರೊನಾಕ್ಕೆ ಬಲಿಯಾದ ವೈದ್ಯಕಿಯ ಸಿಬ್ಬಂದಿ ಲೆಕ್ಕ ಬೇರೆ. ಈ ಕರೊನಾ ವೈದ್ಯರ ಮೆಲೆ ಎಂಥ ಒತ್ತಡ ಸೃಷ್ಟಿಸಿದೆಯೆಂದರೆ, ಕರೊನಾ ರೋಗಿಗಳು ಮತ್ತು ಅವರ ಕುಟುಂಬದವರ ಪಾಡನ್ನು ನೋಡಿನೋಡಿ ಯುವವೈದ್ಯನೊಬ್ಬ ದೆಹಲಿಯ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಈ ಅಪಾಯದ ಕಾಲದಲ್ಲಿ ಕೆಲ ವೈದ್ಯರು ಕರ್ತವ್ಯಕ್ಕೆ ಬರಲಿಲ್ಲವೆಂಬುದು ಹೌದಾದರೂ, ಹೆಚ್ಚಿನ ಮಂದಿ ಈ ಅದೃಶ್ಯ ವೈರಿಯ ವಿರುದ್ಧದ ಸಮರಕ್ಕೆ ಸೈ ಎಂದರು. ತಾವೇ ಖುದ್ದು ಸೋಂಕಿಗೆ ಒಳಗಾಗುವ ಸಾಧ್ಯತೆ ಇದ್ದರೂ, ಹೆದರದೆ ಚಿಕಿತ್ಸೆ ನೀಡಿದರು. ಕೆಲ ಕಡೆಗಳಲ್ಲಿ ವೈದ್ಯರ ಚಿಕಿತ್ಸೆ ಬಗ್ಗೆ ಅನುಮಾನಗೊಂಡು ಅಥವಾ ಸಂಶಯದಿಂದ ಹಲ್ಲೆಗೈದ ವಿಷಾದಕರ ಪ್ರಕರಣಗಳೂ ನಡೆದವು.

ಮಂಚಿಕೇರಿಯ ನಾಗರಾಜ ಡಾಕ್ಟ್ರು: ಲಾಕ್​ಡೌನ್​ ಸಂದರ್ಭದಲ್ಲಿ ಎಲ್ಲ ಆಸ್ಪತ್ರೆಗಳೂ ತೆರೆದಿರದ್ದರಿಂದ, ಅದರಲ್ಲೂ ಸಣ್ಣ ಕ್ಲಿನಿಕ್​ಗಳು ಮುಚ್ಚಿದ್ದರಿಂದ ಜನರು ವಿಪರೀತ ತೊಂದರೆ ಅನುಭವಿಸಬೇಕಾಯಿತು. ಒಟ್ಟಿನಲ್ಲಿ ವೈದ್ಯರು&ರೋಗಿಗಳು ಇಬ್ಬರಿಗೂ ಕಷ್ಟಕಾಲ. ಅದರಲ್ಲೂ ಹಳ್ಳಿಗಳಲ್ಲಿ ದೂರದೂರದಲ್ಲಿ ಒಂದೊಂದು ಆಸ್ಪತ್ರೆ ಇರುವ ಕಡೆಗಳಲ್ಲಿ ಜನರ ಸಮಸ್ಯೆ ಅಷ್ಟಿಷ್ಟಲ್ಲ. ಸಣ್ಣ ಜ್ವರ ಬಂದರೂ, ಕೆಮ್ಮು ಬಂದರೂ ಹೆದರಬೇಕಾದ ಸನ್ನಿವೇಶ. ವಾಹನಗಳು ಸಿಗುವುದಿಲ್ಲ. ಬಸ್ಸು ಇಲ್ಲ. ವಯಸ್ಸಾದವರಿಗೆ ಅನಾರೋಗ್ಯವಾದರೆ ಮತ್ತಷ್ಟು ಜೀತಿ. ಕರೆದುಕೊಂಡು ಹೋಗುವ ಹಾಗಿಲ್ಲ, ಬಿಡುವ ಹಾಗಿಲ್ಲ. ಉ.ಕನ್ನಡ ಜಿಲ್ಲೆಯ ಎಷ್ಟೋ ಕಡೆಗಳಲ್ಲಿ ಸಂಪರ್ಕ ವ್ಯವಸ್ಥೆ ಸರಿ ಇರದ ಕಾರಣ ರೋಗಿಗಳನ್ನು ಕಂಬಳಿಯಲ್ಲಿ ಹಾಕಿಕೊಂಡು ಹೆಗಲ ಮೇಲೆ ಹೊತ್ತು ಸಾಗುವ ನಿದರ್ಶನಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಇನ್ನಷ್ಟು ಕಷ್ಟ. ಇಂಥ ಸನ್ನಿವೇಶದಲ್ಲಿ ಮನೆಗೇ ಬಂದು ರೋಗಿಗಳನ್ನು ಪರೀಸಿ ಚಿಕಿತ್ಸೆ ನೀಡುವ ವೈದ್ಯರು ಇರುವುದು ಇದ್ದುದರಲ್ಲಿ ಸಮಾಧಾನಕರವೆಂದೇ ಹೇಳಬೇಕು. ಇವರು ಅಕ್ಷರಶ@ ಆಪದ್ಬಾಂಧವರೇ ಸರಿ. ಉ. ಕನ್ನಡದ ಯಲ್ಲಾಪುರ ತಾಲೂಕಿನ ಮಂಚಿಕೇರಿ ಎಂಬಲ್ಲಿ ನಾಗರಾಜ ಎಂಬ ವೈದ್ಯರಿದ್ದಾರೆ. ಸುತ್ತಮುತ್ತ ಊರುಗಳ ಜನರ ಬಾಯಲ್ಲಿ "ನಾಗರಾಜ ಡಾಕ್ಟ್ರು' ಎಂದೇ ಪ್ರಸಿದ್ಧ. ಈ ಇಳಿವಯಸ್ಸಿನನಲ್ಲೂ ಹತ್ತಿಪ್ಪತ್ತು ಕಿಲೋಮೀಟರ್​ ಪಯಣಿಸಿ ರೋಗಿಗಳ ಮನೆಗೆ ಹೋಗಿ, ಪರೀಸುತ್ತಾರೆ, ಔಷಧ ಕೊಡುತ್ತಾರೆ, ಸೂಕ್ತ ಸಲಹೆ ಸೂಚನೆ ನೀಡುತ್ತಾರೆ. ಹೀಗಾಗಿ ಎಷ್ಟೋ ಮನೆಗಳಲ್ಲಿ ಯಾರಿಗಾದರೂ ಅರಾಮಿಲ್ಲ ಎಂದಾದಲ್ಲಿ ಆಸ್ಪತ್ರೆಗೆ ಹೋಗಬೇಕು ಎಂಬ ಅಗತ್ಯವಿಲ್ಲ. ನಾಗರಾಜ ಡಾಕ್ಟರಿಗೆ ೋನ್​ ಮಾಡಿದರಾಯಿತು. ಔಷಧಸಮೇತ ಹಾಜರ್​. ಕೆಲ ದಿನಗಳ ಹಿಂದೆ ಆ ಭಾಗದಲ್ಲಿ ಸಹ ಕರೊನಾ ಪ್ರಕರಣಗಳ ಸಂಖ್ಯೆ ಜಾಸ್ತಿ ಇತ್ತು. ಅಂಥ ಸಂದರ್ಭದಲ್ಲೂ ಇವರ ಕಾಯಕ ಮುಂದುವರಿದಿತ್ತು. ನನ್ನ ಪರಿಚಿತರೊಬ್ಬರ ಮನೆಯ ಅಜ್ಜಿಗೆ 95 ವರ್ಷ ದಾಟಿದೆ. ಮನೆಗೇ ಬಂದು ಅವರಿಗೆ ಕಾಯಂ ಆಗಿ ಔಷಧ ನೀಡುವುದು ಈ ಡಾಕ್ಟರೇ. ಅದಿಲ್ಲವಾದಲ್ಲಿ ಅನಾರೋಗ್ಯವಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸುಲಭವಾಗುತ್ತಿರಲಿಲ್ಲ.

ಇನ್ನು ಕೆಲವು ವೈದ್ಯರು ಈ ಕರೊನಾ ಸಂದರ್ಭವನ್ನು ಸಂಶೋಧನೆಗೆ, ಅಧ್ಯಯನಕ್ಕೆ ಕೂಡ ಬಳಸಿಕೊಂಡರು. ಈ ಲಿತಾಂಶಗಳು ಮುಂದಿನ ದಿನಗಳಲ್ಲಿಯೂ ವೈದ್ಯಕಿಯ ಲೋಕಕ್ಕೆ ಪ್ರಯೋಜನಕ್ಕೆ ಬರಲಿದೆ. ಬೆಂಗಳೂರಿನ ಡಾ.ವಿಶಾಲ್​ ರಾವ್​ ಅವರು ಇಂಥ ಪ್ರಯೋಗಶೀಲರಲ್ಲೊಬ್ಬರು. ಇವರು ಕ್ಯಾನ್ಸರ್​ ತಜ್ಞರು. ಕರೊನಾ ಆರಂಭಿಕ ದಿನಗಳಲ್ಲಿ ಪ್ಲಾಸ್ಮಾ ಚಿಕಿತ್ಸೆ ಬಗ್ಗೆ ಪ್ರಯೋಗಗಳು ನಡೆದವು. ನಮ್ಮ ರಾಜ್ಯದಲ್ಲಿ ಈ ಪ್ರಯೋಗ ನಡೆಸಿದ ವಿರಳರಲ್ಲಿ ಡಾ. ರಾವ್​ ಒಬ್ಬರು. ಮಕ್ಕಳಿಗೆ ಪೋಲಿಯೊ ಲಸಿಕೆ ಕೊಡಿಸಿದರೆ ಕರೊನಾ ತಡೆಗಟ್ಟುವಲ್ಲಿ ಪರಿಣಾಮ ಆಗುತ್ತದೆಂದು ವಿಶಾಲ್​ ರಾವ್​ ಅವರು ಮಂಡಿಸಿದರು. ಅವರ ಪ್ರಯೋಗ ಮುಂದುವರಿದಿದೆ. ದೇಶವಿದೇಶಗಳ ಅನೇಕ ವೈದ್ಯಕಿಯ ರ್ಜನಲ್​ಗಳಲ್ಲಿ ಅವರು ಬರೆದ ಕರೊನಾಸಂಬಂಧಿ ಅಧ್ಯಯನ ವರದಿಗಳು ಪ್ರಕಟವಾಗಿವೆ. "ಒಂದರ್ಥದಲ್ಲಿ ಈ ಕರೊನಾ ಎಂಬುದು ನಮ್ಮನ್ನೆಲ್ಲ ಹೈರಾಣ ಮಾಡಿಬಿಟ್ಟಿದೆ. ಕರೊನಾ ಎರಡನೆಯ ಅಲೆ ತಗ್ಗಿತು ಎನ್ನುವಷ್ಟರಲ್ಲಿ ಬ್ಲಾ$್ಯಕ್​ ಂಗಸ್​ ಪ್ರಕರಣಗಳು ಬರುತ್ತಿವೆ. ಆದರೂ ಎಂಥದೇ ಪರಿಸ್ಥಿತಿಯಲ್ಲೂ ನಾವು ನಮ್ಮಕರ್ತವ್ಯ ಮಾಡಲೇಬೇಕು. ವೈದ್ಯಲೋಕಕ್ಕೆ ಇದೊಂದು ಸವಾಲು' ಎಂದು ಅವರು ಉತ್ಸಾಹದಿಂದಲೇ ಹೇಳುತ್ತಾರೆ. ಇಂಥ ಕ್ರಿಯಾಶೀಲತೆ ಮತ್ತು ವೃತ್ತಿಪ್ರೀತಿಯೇ ರೋಗಿಗಳು&ಕುಟುಂಬಿಕರ ಅರ್ಧನೋವನ್ನು ಮರೆಸುತ್ತದೆ.

ಕೊನೇ ಮಾತು: ವೈದ್ಯರ ಬಗ್ಗೆ ಜನರಲ್ಲಿ ಗೌರವಭಾವನೆ ಇನ್ನೂ ಇದೆ. ಆದರೂ, ಅನಗತ್ಯವಾಗಿ ಟೆಸ್ಟ್​ ಮಾಡಿಸಲು ಹೇಳುತ್ತಾರೆ, ಆರೋಗ್ಯಸೇವೆ ದುಬಾರಿ ಇತ್ಯಾದಿ ಆಕ್ಷೇಪಗಳೂ ಇವೆ. ಜನರು ಮತ್ತು ವೈದ್ಯರಂಗದ ನಡುವಣ ಈ ಅವಿಶ್ವಾಸದ ಗೆರೆ ಅಳಿಸಿದರೆ ಇನ್ನಷ್ಟು ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ.

(ಲೇಖಕರು "ವಿಜಯವಾಣಿ' ಡೆಪ್ಯೂಟಿ ಎಡಿಟರ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net