ಸಾಧನಾಮಾರ್ಗದಲ್ಲಿ ಪ್ರಶಸ್ತವಾಗಿ ಸಾಗುವ ಸಾರ್ಥಕ ಬಗೆ

Column F
Published on
ಯಮ-ನಿಯಮದಿಂದ ಸಮಾಧಿಯವರೆಗೆ ಹಂತ-ಹಂತವಾಗಿ ಸಾಧನೆ ಮಾಡುತ್ತ, ಚಿತ್ತವೃತ್ತಿ ನಿರೋಧವನ್ನು ಸಾಧಿಸಿ- ಅಂದರೆ ಮನಸ್ಸಿನಲ್ಲಿರುವ ಅಲೆಗಳನ್ನು ವಿವಿಧ ಯೋಗಾಭ್ಯಾಸಗಳಿಂದ ನಿಯಂತ್ರಿಸಿ, ಸ್ತಬ್ಧೀಕರಿಸಿ, ಮತ್ತು ಕ್ಲೇಶ ಸಂಸ್ಕಾರಗಳನ್ನು ಶಮನಗೊಳಿಸಿ ಯೋಗಿ ಸಮಾಧಿ ಸ್ಥಿತಿಯನ್ನು ಅನುಭವಿಸುತ್ತಾನೆ.

ಪತಂಜಲಿ ಮಹರ್ಷಿಯ ಸಮಕಾಲೀನ ಮತ್ತು ಅದಕ್ಕೂ ಪೂರ್ವಭಾವಿಯಾಗಿ ಅನುಷ್ಠಾನಕ್ಕೆ ಬಂದಂಥ ಆಧ್ಯಾತ್ಮಿಕ ಚಿಂತನೆ ಮತ್ತು ಅದರ ಪ್ರಾಯೋಗಿಕ ಅಭ್ಯಾಸಗಳ ಸಾರವೇ ‘ಪಾತಂಜಲ ಯೋಗ ಸೂತ್ರ’. ಇದು ಸಂಕ್ಷಿಪ್ತವಾಗಿ ಆಧ್ಯಾತ್ಮಿಕ ಸತ್ಯ ಮತ್ತು ಅದರ ಸಾಧನಾ ಮಾರ್ಗವನ್ನು ತಿಳಿಸುವ ಸೂತ್ರಸಾಹಿತ್ಯ. ‘ಯೋಗಸೂತ್ರ’ ಮಾನವನ ಮುಖ್ಯ ಉಪಕರಣವಾದ ಮನಸ್ಸಿನ ಪ್ರಕ್ರಿಯೆಗಳನ್ನು ಆಳವಾಗಿ ಅರಿತು ನೇರ ಮತ್ತು ಹಂತಹಂತವಾಗಿ ನಮಗೆ ಆಧ್ಯಾತ್ಮಿಕ ಸಾಧನೆಗೆ ಮಾರ್ಗದರ್ಶನ ಮಾಡುವ ಪ್ರಾಯೋಗಿಕ ಗ್ರಂಥ. ಆದ್ದರಿಂದ ಆಧ್ಯಾತ್ಮಿಕ ಸಾಧಕರ ಜೀವನದಲ್ಲಿ ಇದಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಭಾರತದಲ್ಲಿ ಪತಂಜಲಿ ಮಹರ್ಷಿಗಿಂತ ಮೊದಲೇ ಯೋಗ ಸಾಧನೆಯು ಬೇರೆ ಬೇರೆ ಮೂಲಗಳಿಂದ ಉಗಮವಾದ ಆಧ್ಯಾತ್ಮಿಕ ಪರಂಪರೆಗಳಲ್ಲಿ ಪ್ರಚಲಿತವಾಗಿತ್ತು. ಪತಂಜಲಿ ಮಹರ್ಷಿ ಅವುಗಳನ್ನು ತಲರ್ಸ³ಯಾಗಿ ಅಧ್ಯಯನ ಮಾಡಿ, ಸಮನ್ವಯೀಕರಿಸಿ ಅದರ ಮುಖ್ಯಾಂಶಗಳನ್ನು ಅನುಕ್ರಮವಾಗಿ ಸೂತ್ರ ರೂಪದಲ್ಲಿ ನಮಗೆ ನೀಡಿದ್ದಾರೆ.

ಯೋಗಸೂತ್ರವು ಸಾಂಖ್ಯತತ್ತ್ವವನ್ನು ಆಧರಿಸಿದೆ. ಯೋಗದ ಆತ್ಯಂತಿಕ ಗುರಿಯೇ ಪ್ರಕೃತಿ-ಪುರುಷರ ವಿಯೋಗ ಮತ್ತು ತನ್ಮೂಲಕ ಕೈವಲ್ಯವನ್ನು ಪಡೆಯುವುದು. ಯೋಗಸಾಧನೆಯ ಮುಖ್ಯ ಉದ್ದೇಶ ಚಿತ್ತವೃತ್ತಿ ನಿರೋಧದ ಮೂಲಕ ಏಕಾಗ್ರತೆ ಪಡೆಯುವುದು. ನಿರೋಧವೆಂದರೆ ಕ್ಲೇಶ-ಸಂಸ್ಕಾರಗಳನ್ನು ಹಾಗೂ ಕ್ಲೇಶವೃತ್ತಿಯನ್ನು ನಿಷ್ಕ್ರಿಯಗೊಳಿಸುವುದು.

ಚಿತ್ತದಲ್ಲಿ ಉದ್ಭವವಾಗುವ ಚಿಂತನೆಯ ಅಲೆಗಳಿಗೆ ‘ವೃತ್ತಿ’ಗಳೆಂದು ಹೆಸರು. ಶ್ರೀಶಂಕರರು ಚಿತ್ತವೃತ್ತಿಯನ್ನು ಪ್ರತ್ಯಯ ಎಂದು ಕರೆದಿದ್ದಾರೆ. ಚಿತ್ತದಲ್ಲಿ ಏಳುವ ವೃತ್ತಿಗಳ ಮೂಲಕ ಮಾತ್ರ ಪ್ರಪಂಚದಲ್ಲಿರುವ ವಿಷಯಗಳ ಮತ್ತು ವಸ್ತುಗಳ ಜ್ಞಾನವುಂಟಾಗುವುದು. ಆದ್ದರಿಂದ ಪಂಚಶಿಖಾಚಾರ್ಯರು ‘ಏಕಮೇವ ದರ್ಶನಂವೃತ್ತಿರೇವ ದರ್ಶನಂ’ ಎಂದು ಹೇಳುತ್ತಾರೆ. ಈ ವೃತ್ತಿಜ್ಞಾನವನ್ನೇ ‘ಖ್ಯಾತಿ’ಯೆಂದು ಕರೆದಿದ್ದಾರೆ. ಮನಸ್ಸಿನ ಮೂಲಕ ಪಡೆಯುವ ಎಲ್ಲ ಜ್ಞಾನಗಳಿಗೂ ‘ಖ್ಯಾತಿ’ ಎಂದು ಹೆಸರು.

ಮನುಷ್ಯನ ರಚನೆಯಲ್ಲಿ ಪ್ರಕೃತಿಯ ಆಶ್ರಯದಲ್ಲಿದ್ದ ಮನಸ್ಸನ್ನು ಅಷ್ಟಾಂಗಮಾರ್ಗಗಳ ಮೂಲಕ ಮತ್ತು ಕ್ರಿಯಾಯೋಗದ ಮೂಲಕ ಮನಸ್ಸಿನಲ್ಲಿರುವ ಕ್ಲೇಶ-ಸಂಸ್ಕಾರಗಳನ್ನು ನಿರೋಧಿಸುವುದು, ಅಂದರೆ ನಿಷ್ಕ್ರಿಯಗೊಳಿಸುವುದು- ಇದು ಯೋಗಸಾಧನೆಯ ಪ್ರಮುಖ ಘಟ್ಟ. ಅಭ್ಯಾಸ ಮತ್ತು ವೈರಾಗ್ಯದಿಂದ ಕೂಡ ಮನಸ್ಸಿನ ವೃತ್ತಿಗೆ ಮೂಲಕಾರಣವಾದ ಅವಿದ್ಯಾಜನಿತ ಸಂಸ್ಕಾರಗಳನ್ನು ನಿರೋಧಿಸಲಾಗುತ್ತದೆ.

ಮನುಷ್ಯನ ರಚನೆಯಲ್ಲಿ ಅಭಿವ್ಯಕ್ತವಾದ ಮತ್ತು ಅವಿದ್ಯೆಗೆ ಕಾರಣವಾದ ಪ್ರಕೃತಿಯ ವಿವಿಧ ಸ್ತರಗಳ ಕೋಟೆಯನ್ನು ಭೇದಿಸಿ, ಚೈತನ್ಯದ ಅನುಭೂತಿಯನ್ನು ಕೊಡುವ ಅಸಂಪ್ರಜ್ಞಾತ ಎಂಬ ಸಮಾಧಿಯ ಅಂತಿಮ ಸ್ಥಿತಿಯ ಮೂಲಕ ಕೈವಲ್ಯವನ್ನು ಪಡೆಯುವುದು ಯೋಗ ಸಾಧನೆಯ ಪರಮಗುರಿ. ಹೀಗೆ ಚಿತ್ತವೃತ್ತಿ ನಿರೋಧದ ಮೂಲಕ ಪುರುಷ (ಚೈತನ್ಯ) ಮತ್ತು ಪ್ರಕೃತಿಯ ಸಂಯೋಗವನ್ನು ವಿಂಗಡಿಸಿದಾಗ ಯೋಗ ಸೂತ್ರವು ಹೇಳುವಂತೆ, ‘ತದಾ ದ್ರಷ್ಟುಃ ಸ್ವರೂಪೇ ಅವಸ್ಥಾನಮ್- ಅಂದರೆ, ಪುರುಷನು ಮಾತ್ರ ತಾನು ತಾನಾಗಿಯೇ ಧ್ಯಾನದಲ್ಲಿ ನೆಲೆನಿಂತಾಗ ಸಮಾಧಿಯ ಅನುಭವವಾಗುವುದು.

ಕೈವಲ್ಯವನ್ನು ಪಡೆಯಲು ‘ಯೋಗಸೂತ್ರ’ ಮುಖ್ಯವಾಗಿ ಅಷ್ಟಾಂಗ ಯೋಗದ ಸಾಧನಾಪ್ರಣಾಳಿಯನ್ನು ಸೂಚಿಸುತ್ತದೆ. ನಂತರ ಧ್ಯಾನದ ಅಭ್ಯಾಸದಿಂದ ಉತ್ಪನ್ನವಾದ ಅಂತಃಪ್ರಜ್ಞೆಯ ಮೂಲಕ ವಿವೇಕಖ್ಯಾತಿ ಎಂಬ ಪ್ರಜ್ಞಾವೃತ್ತಿ ಪ್ರಾಪ್ತವಾಗುವುದು. ಈ ಅನುಭವದ ಸ್ಥಿತಿಯಲ್ಲಿ ಜನಿತವಾದ ಪ್ರಸಂಖ್ಯಾನಾಗ್ನಿ ಸಂಸ್ಕಾರಗಳನ್ನು ಧಗ್ಧಬೀಜವಾಗಿಸಿ ಪುನಃ ಅವುಗಳು ಅಂಕುರಿಸುವ ಶಕ್ತಿಯನ್ನು ನಾಶಮಾಡುತ್ತದೆ. ಈ ತೀವ್ರವಾದ ಸಂಪ್ರಜ್ಞಾತ ಸ್ಥಿತಿಯ ಧ್ಯಾನದಿಂದ ಉತ್ಪನ್ನವಾದ ಪ್ರಜ್ಞೆಯ ಬೆಳಕಾದ, ಪ್ರಸಂಖ್ಯಾನಾಗ್ನಿಯಿಂದ ಸಮಸ್ತ ಸಂಸ್ಕಾರವೂ ನಾಶವಾಗಿ, ಯೋಗಿಯು ಅಸಂಪ್ರಜ್ಞಾತ ಎಂಬ ಉನ್ನತ ಸಮಾಧಿಸ್ಥಿತಿಯಲ್ಲಿ ಆರೂಢನಾಗುತ್ತಾನೆ. ಹೀಗೆ ಯೋಗಸಾಧಕನು ಅಸಂಪ್ರಜ್ಞಾತ ಸಮಾಧಿ ಮೂಲಕ ಪುರುಷ-ಪ್ರಕೃತಿ ವಿಯೋಗ ಹೊಂದಿ ಕೈವಲ್ಯ ಪದವನ್ನು ಪಡೆಯುತ್ತಾನೆ.

ಹೀಗೆ ‘ಯೋಗಸೂತ್ರ’ದಲ್ಲಿ ಮೂರು ರೀತಿಯ ಸಾಧನಾಕ್ರಮಗಳನ್ನು ಗುರುತಿಸಬಹುದು.1. ಅಷ್ಟಾಂಗಯೋಗ: ಇದು ಯೋಗ ಜೀವನದಲ್ಲಿ ಆಸಕ್ತಿಯುಳ್ಳ ಜನಸಾಮಾನ್ಯರು ಅನುಸರಿಸಬಹುದಾದ ಪ್ರಚಲಿತವಾದ ಸಾಧನ ಪ್ರಣಾಳಿ.2. ಕ್ರಿಯಾಯೋಗ: ಇದು ಮಧ್ಯಮಾಧಿಕಾರಿಗಳಿಗೆ. ಯೋಗ ಜೀವನಕ್ಕೆ ಬೇಕಾದ ಪ್ರಾಥಮಿಕ ಸಂಸ್ಕಾರವುಳ್ಳವರು ಅನುಷ್ಠಾನ ಮಾಡಬಹುದಾದ ಪಥ.3. ಪರವೈರಾಗ್ಯದ ಪಥ: ಇದು ಮುಖ್ಯವಾಗಿ ಉತ್ತಮಾಧಿಕಾರಿಗಳಿಗೆ.ಅಷ್ಟಾಂಗಯೋಗ: ಪಾತಂಜಲ ಯೋಗಸೂತ್ರದಲ್ಲಿ ಕಂಡುಬರುವ ಸಾಧನ ಮಾರ್ಗಗಳಲ್ಲಿ ಅಷ್ಟಾಂಗ ಯೋಗ ಅತ್ಯಂತ ಪ್ರಚಲಿತ. ಇದು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ- ಎಂಬ ಎಂಟು ಹಂತಗಳನ್ನು ಒಳಗೊಂಡಿದೆ. ಪಾತಂಜಲ ಮಹರ್ಷಿಯ ಸಮಕಾಲೀನ ಭಾರತದಲ್ಲಿ ಪ್ರಚಲಿತವಾದ ಎಲ್ಲ ಸಾಧನಾ ವಿಜ್ಞಾನದ ವಿವಿಧ ಪ್ರಾಯೋಗಿಕ ವಿಷಯಗಳನ್ನು ಇಲ್ಲಿ ಸಮುಚ್ಚಯಗೊಳಿಸಲಾಗಿದೆ. ಇದು ಮನುಷ್ಯನ ವ್ಯಕ್ತಿತ್ವದ ರಚನೆ, ಮನೋವಿಜ್ಞಾನ, ಸಂಸ್ಕಾರ, ಜೀವನಕ್ರಮ, ಪ್ರಕೃತಿ ನಿಯಮ ಮತ್ತು ಮನುಷ್ಯನಲ್ಲಿ ಅಂತರ್ಗತವಾಗಿರುವ ದೈವೀ ಚೈತನ್ಯ ಮುಂತಾದವುಗಳನ್ನು ಪರಿಗಣಿಸಿ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಅನುವು ಮಾಡಿಕೊಡುವ ಸೂಕ್ತವೂ, ಸ್ಪಷ್ಟವೂ ಆದ ಸಾಧನ ಮಾರ್ಗ. ಎಲ್ಲ ಅವಶ್ಯಕ ವಿಷಯಗಳನ್ನು ಅಳವಡಿಸಿಕೊಂಡು, ಅವುಗಳನ್ನು ಎಂಟು ಹಂತಗಳನ್ನಾಗಿ ಕ್ರಮವಾಗಿ ವಿಂಗಡಿಸಿ, ಅಭ್ಯಾಸ ಮಾಡಲು ಸುಲಭವಾಗುವಂತೆ ಸಿದ್ಧಪಡಿಸಿದ ಪರಿಣಾಮಕಾರಿ ಸಾಧನ ಮಾರ್ಗವಾಗಿದೆ ಇದು. ಗೀತೆಯಲ್ಲಿ ಉಲ್ಲೇಖಿಸಿದ ಸಾಂಖ್ಯಯೋಗ, ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ, ಜ್ಞಾನಯೋಗ, ಮೊದಲಾದ ವಿವಿಧ ಯೋಗ ಮಾರ್ಗಗಳ ಪ್ರಾಯೋಗಿಕ ಸಾರವನ್ನು ಈ ಅಷ್ಟಾಂಗಯೋಗದಲ್ಲಿ ಅಳವಡಿಸಿಕೊಂಡಂತೆ ತೋರುತ್ತದೆ. ಆದುದರಿಂದ ನಿಜವಾಗಿ ಅಧ್ಯಾತ್ಮ ಸಾಧನೆಯನ್ನು ಕೈಗೊಳ್ಳಲು ಬಯಸುವ ಸಾಧಕರು ಪಾತಂಜಲ ಅಷ್ಟಾಂಗ ಯೋಗವನ್ನು ಅಧ್ಯಯನ ಮಾಡಿ ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಂಡರೆ ಸಾಧನೆಯ ಪಥ ಸುಗಮವಾಗುವುದು. ಸಾಧನೆಗೆ ಅತ್ಯಗತ್ಯವಾದ ಮನೋನಿಗ್ರಹ ಮತ್ತು ಇಂದ್ರಿಯ ನಿಗ್ರಹ ಸಾಧಿಸಲು ಬೇಕಾದ ಮನೋವೈಜ್ಞಾನಿಕ ತಿಳಿವಳಿಕೆ ಇದರಿಂದ ದೊರಕುವುದು.

ಯಮ-ನಿಯಮದಿಂದ ಸಮಾಧಿಯವರೆಗೆ ಹಂತ ಹಂತವಾಗಿ ಸಾಧನೆ ಮಾಡುತ್ತ, ಚಿತ್ತವೃತ್ತಿ ನಿರೋಧವನ್ನು ಸಾಧಿಸಿ- ಅಂದರೆ ಮನಸ್ಸಿನಲ್ಲಿರುವ ಅಲೆಗಳನ್ನು ವಿವಿಧ ಯೋಗಾಭ್ಯಾಸಗಳಿಂದ ನಿಯಂತ್ರಿಸಿ, ಸ್ತಬ್ಧೀಕರಿಸಿ, ಮತ್ತು ಕ್ಲೇಶ ಸಂಸ್ಕಾರಗಳನ್ನು ಶಮನಗೊಳಿಸಿ ಯೋಗಿ ಸಮಾಧಿ ಸ್ಥಿತಿಯನ್ನು ಅನುಭವಿಸುತ್ತಾನೆ.

ಅಷ್ಟಾಂಗ ಮಾರ್ಗದ ಎಂಟು ಅಂಗಗಳು:

ಯಮನಿಯಮಾಸನ ಪ್ರಾಣಾಯಾಮಪ್ರತ್ಯಾಹಾರಧಾರಣಧ್ಯಾನ ಸಮಾಧಯೋಖಷ್ಟಾವಂಗಾನಿ| (ಪಾತಂಜಲ ಯೋಗಸೂತ್ರ, 2.39)

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ ಇವು ಅಷ್ಟಾಂಗಗಳು. ಅಷ್ಟಾಂಗ ಮಾರ್ಗದ ಮೊದಲನೆಯ ಸಾಧನಾ ಕ್ರಮದ ಬಾಹ್ಯ ಮತ್ತು ಆಂತರಿಕ ಜೀವನದ ಮೌಲ್ಯಗಳ ಅಭ್ಯಾಸ ಮಾಡಲು ಪಾಲಿಸಬೇಕಾದ ಶಿಸ್ತೆಂದರೆ ಯಮ ಮತ್ತು ನಿಯಮಗಳಾಗಿವೆ. ಇವು ಆಧ್ಯಾತ್ಮಿಕ ಜೀವನಕ್ಕೆ ಸೂಕ್ತ ತಳಹದಿ ಕೊಡುತ್ತವೆ. ಇವು ವಿಶ್ವಮಾನ್ಯವೂ ಸಾರ್ವತ್ರಿಕವೂ ಆದ ನೈತಿಕ ಆಚಾರ ಸಂಹಿತೆ ; ಇವುಗಳ ಆಧಾರದಿಂದ ಮಾತ್ರವೇ ಯೋಗದ ಸೌಧವನ್ನು ಸುಭದ್ರವಾಗಿ ನಿರ್ವಿುಸಬಹುದು.

ಅಹಿಂಸಾಸತ್ಯಾಸ್ತೇಯಬ್ರಹ್ಮಚರ್ಯಾಪರಿಗ್ರಹಾ ಯಮಾಃ |

(ಪಾತಂಜಲ ಯೋಗಸೂತ್ರ, 2.30)

ಅಹಿಂಸೆ, ಸತ್ಯ, ಅಸ್ತೇಯ ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇವುಗಳು ಯಮ ಎನಿಸುತ್ತವೆ. ಯಮ ಎಂಬುದು ಸಾಧಕನು ನಿತ್ಯಜೀವನದಲ್ಲಿ ಅನುಸರಿಸಬೇಕಾದ ಬಾಹ್ಯ ನಿಯಮಗಳು.

ಅಹಿಂಸೆ: ಇಲ್ಲಿ ಅಹಿಂಸೆ ಎಂದರೆ ಇತರ ಜೀವರಾಶಿಗಳಿಗೆ, ನಮ್ಮೊಂದಿಗೆ ಸಹಬಾಳ್ವೆ ನಡೆಸುತ್ತಿರುವ ವ್ಯಕ್ತಿಗಳಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಾನಿ ಉಂಟು ಮಾಡದೇ ಇರುವುದು. ಅಹಿಂಸೆ ಪ್ರತಿಷ್ಠಿತನಾದವನ ಸನ್ನಿಧಿಯಲ್ಲಿ ಹಿಂಸಾಪ್ರವೃತ್ತಿಯ ಪ್ರಾಣಿಗಳು ಮತ್ತು ಕ್ರೂರ ವ್ಯಕ್ತಿಗಳು ಕೂಡ ವೈರತ್ಯಾಗವನ್ನು ಮಾಡಿ ಶಾಂತಿಯನ್ನು ಅನುಭವಿಸುತ್ತವೆ- ಬುದ್ಧದೇವನ ಸನ್ನಿಧಿಯಲ್ಲಿ ಕ್ರೂರಿಯಾದ ಅಂಗುಲಿಮಾಲನು ಪರಿವರ್ತನೆಗೊಂಡಂತೆ. ಸ್ವಾಮಿ ವಿವೇಕಾನಂದರ ಸಾನ್ನಿಧ್ಯದಲ್ಲಿ ಒಮ್ಮೆ ಒಂದು ಹುಲಿ ಶಾಂತಗೊಂಡಂತೆ.

ಅಹಿಂಸಾಪ್ರತಿಷ್ಠಾಯಾಂ ತತ್ಸನಿಧೌ ವೈರಾತ್ಯಾಗಃ | (ಪಾ., 2.35)

ಸತ್ಯ: ಮನಸ್ಸು ಮತ್ತು ವಚನದಲ್ಲಿ ಯಥಾರ್ಥತೆಯೇ ಸತ್ಯ. ಸತ್ಯವನ್ನೇ ಹೇಳುವುದರಲ್ಲಿ ನಿರತನಾಗಿದ್ದವನ ಪ್ರತಿಯೊಂದು ಸಾಧನಾಕ್ರಿಯೆಯೂ ಪರಿಣಾಮಕಾರಿಯಾಗುವುದು ಮತ್ತು ಅವನನ್ನು ಪರಿವರ್ತನೆಗೊಳಿಸುವುದು. ಸತ್ಯಸ್ವರೂಪವಾದ ಚೈತನ್ಯದ ಅನುಭೂತಿಯ ಪಥದಲ್ಲಿ ಸಾಧಕನು ಬಹುಬೇಗ ಮುಂದುವರಿಯುತ್ತಾನೆ. ಅವನ ಸತ್ಕರ್ಮಗಳು ಶೀಘ್ರ ಫಲಪ್ರದವಾಗಿ ಅವನನ್ನು ರಕ್ಷಿಸುತ್ತವೆ.

ಸತ್ಯಪ್ರತಿಷ್ಠಾಯಾ ಕ್ರಿಯಾಲಾಶ್ರಯತ್ವಮ್ ಅಸ್ತೇಯಃ | (ಪಾ., 2.36)

ಅಸ್ತೇಯ: ಅಸ್ತೇಯವೆಂದರೆ ಇತರರ ವಸ್ತುಗಳನ್ನು ಬಯಸದೆ ಹಾಗೂ ಅವಲಂಬಿಸದೆ, ತನ್ನಿಂದ ತಾನೇ ನ್ಯಾಯಸಮ್ಮತವಾಗಿ ಸಹಜವಾಗಿ ಒದಗಿಬಂದ ವಸ್ತುಗಳಲ್ಲಿ ಸಂತೃಪ್ತನಾಗಿರಬೇಕು. ಅಸ್ತೇಯದಲ್ಲಿ ನೆಲೆ ನಿಂತ ಯೋಗಿಗೆ ಶ್ರೇಷ್ಠವಾದ ವಸ್ತುಗಳು ದೊರಕುತ್ತವೆ.

ಬ್ರಹ್ಮಚರ್ಯ ಪ್ರತಿಷ್ಠಾಯಾಂ ವೀರ್ಯಲಾಭಃ | (ಪಾ., 2.38)

ಬ್ರಹ್ಮಚರ್ಯದಲ್ಲಿ ಅವನು ಪ್ರತಿಷ್ಠಿತನಾದ ಮೇಲೆ ಅವನಿಗೆ ವೀರ್ಯಶಕ್ತಿಯ ಲಾಭವಾಗುತ್ತದೆ. ಇಂದ್ರಿಯ ನಿಗ್ರಹಕ್ಕೆ ಬ್ರಹ್ಮಚರ್ಯವೇ ಆಧಾರ. ಇದು ಅಂತಃಶಕ್ತಿ ಮತ್ತು ಸದ್ಗುಣಗಳಿಂದ ಕೂಡಿದ ಬುದ್ಧಿಬಲವನ್ನು ವರ್ಧಿಸುತ್ತದೆ. ಬ್ರಹ್ಮಚರ್ಯವೂ ಸ್ಮೃತಿಶಕ್ತಿಯನ್ನು ಕೂಡ ತೀಕ್ಷ್ಣವಾಗಿಸುತ್ತದೆ. ತನ್ಮೂಲಕ ಜ್ಞಾನವನ್ನು ಸ್ಮೃತಿಯಲ್ಲಿ ಧರಿಸಿ ಅದರಂತೆ ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಸ್ವಾಮಿ ವಿವೇಕಾನಂದರು, ಸಂತ ರಾಮತೀರ್ಥರು ಮೊದಲಾದ ನೂರಾರು ಸಂತಶ್ರೇಷ್ಠರು ಜೀವನ ಮತ್ತು ಸಂದೇಶದಿಂದ, ಬ್ರಹ್ಮಚರ್ಯದ ಪಾಲನೆಯಿಂದ ಹೀಗೆ ಅಸಾಧಾರಣ ಮೇಧಾಶಕ್ತಿ ಮತ್ತು ಸ್ಮೃತಿಶಕ್ತಿ ಉತ್ಪನ್ನವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಪರಿಗ್ರಹ

ಅಪರಿಗ್ರಹಸ್ಥೆ ೖರ್ಯು ಜನ್ಮಕಥಂತಾಸಂಬೋಧಃ | (ಪಾ., 2-39)

ಅಪರಿಗ್ರಹವೆಂದರೆ ಇನ್ನೊಬ್ಬರಿಂದ ವಸ್ತುಗಳನ್ನು ಸ್ವೀಕರಿಸದೇ ಇರುವುದು ಮತ್ತು ಮಾನಸಿಕವಾಗಿ ಇತರರ ವಸ್ತುಗಳನ್ನು ಬಯಸದೆ ಇರುವುದು. ಈ ಗುಣದಲ್ಲಿ ನೆಲೆನಿಂತವನಿಗೆ ಅವನ ಪೂರ್ವಜನ್ಮದ ಜ್ಞಾನ ಉಂಟಾಗುವುದು. ಮಾತ್ರವಲ್ಲ, ಪುನರ್ಜನ್ಮವು ಯಾವ ಕಾರಣದಿಂದ ಪ್ರಾಪ್ತವಾಯಿತು ಎಂಬ ತಿಳಿವಳಿಕೆ ಉಂಟಾಗಿ ಮುಂದಿನ ಜನ್ಮದಿಂದ ಮುಕ್ತನಾಗಲು ಬೇಕಾದ ಮುಕ್ತಿಸಾಧನ ಮಾರ್ಗ ಸ್ಪಷ್ಟವಾಗುವುದು. ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ಬೇಕಾದ ಸ್ಪಷ್ಟ ವಿವೇಕವು ಸಾಧಕನಿಗೆ ದೊರಕುವುದು. ಆದುದರಿಂದ ಸಾಧಕನು ಪರಾವಲಂಬನೆಯಿಂದ ಮುಕ್ತನಾಗಬೇಕು. ಸಾಧ್ಯವಾದ ಮಟ್ಟಿಗೆ ಸ್ವತಂತ್ರವಾಗಿ ಜೀವನ ನಡೆಸಬೇಕು. ಅಪರಿಗ್ರಹದಲ್ಲಿ ಅವನು ಪ್ರತಿಷ್ಠಿತನಾದ ಮೇಲೆ ಅವನ ಜನ್ಮಗಳು ಏಕೆ, ಯಾವ ಕಾರಣದಿಂದ ಎಂಬ ಜ್ಞಾನವು ಅವನಿಗೆ ಬರುತ್ತದೆ. ಹೀಗೆ ಕ್ಲಿಷ್ಟವಿಲ್ಲದ, ಆಧ್ಯಾತ್ಮಿಕ ಔನ್ನತ್ಯದೆಡೆಗೆ ಸಾಗಲು ಅನುವಾಗುವ ಪಥವನ್ನು ಪಾತಂಜಲಿ ಯೋಗಸೂತ್ರ ದಯಪಾಲಿಸಿದ್ದು, ಅದು ಭಾರತದ ದೊಡ್ಡ ಸಾಂಸ್ಕೃತಿಕ-ಆಧ್ಯಾತ್ಮಿಕ ಆಸ್ತಿ.

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net