ಪ್ರತಿಪಕ್ಷಗಳು ಜವಾಬ್ದಾರಿ ಅರಿಯಲಿ

Janamata
Published on

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ- ‘ದೇಶದಲ್ಲಿ ಕರೊನಾ ಹೆಚ್ಚಾಗಿರುವುದು ತಬ್ಲಿಘಿಗಳಿಂದಲ್ಲ, ಕೇಂದ್ರ ಸರ್ಕಾರದಿಂದ’ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ, ಕರೊನಾ ಸಂದರ್ಭದಲ್ಲೂ ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿರುವುದು ರಾಜ್ಯದ ಜನತೆಗೆ ಬೇಸರವುಂಟು ಮಾಡಿದೆ. ಈ ಸಂದರ್ಭದಲ್ಲಿ ಸರ್ಕಾರದ ಕೆಲಸಗಳಿಗೆ ಹೆಗಲಾಗಬೇಕಿದ್ದ, ರಚನಾತ್ಮಕ ಸಲಹೆ, ಸೂಚನೆಗಳನ್ನು ನೀಡಬೇಕಿದ್ದ ವಿಪಕ್ಷಗಳು ಈ ರೀತಿಯಾಗಿ ವೃಥಾ ಆರೋಪಗಳನ್ನು ಮಾಡುತ್ತ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ರೂಪಿಸಿಕೊಂಡಿವೆ. ಈ ಮೂಲಕ ಅಲ್ಪಸಂಖ್ಯಾತ ವರ್ಗ ಮತ್ತು ಮತ್ತೊಂದೆಡೆ ಸುಳ್ಳು ನಾಟಕವಾಡುತ್ತ ವಲಸೆ ಕಾರ್ವಿುಕರನ್ನು ತಮ್ಮತ್ತ ಸೆಳೆದುಕೊಳ್ಳುವ ಒಳಉದ್ದೇಶವಿದೆ ಎನಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಜವಾಬ್ದಾರಿ ಮಹತ್ತರವಾದದ್ದು. ಪ್ರಸಕ್ತ ರಾಜ್ಯ, ದೇಶ ಸಂಕಷ್ಟದಲ್ಲಿವೆ. ಕರೊನಾದಿಂದ ಆರ್ಥಿಕ ಪರಿಸ್ಥಿತಿ ದಿನೇದಿನೆ ಬಿಗಡಾಯಿಸುತ್ತಿದೆ. ಕೂಲಿಕಾರ್ವಿುಕರು, ರೈತರು, ಮಧ್ಯಮವರ್ಗದವರು ನಾಳೆಗಳು ಹೇಗೆ ಎಂದು ಚಿಂತಿತರಾಗಿದ್ದಾರೆ. ಉದ್ಯೋಗಗಳು ನಷ್ಟವಾಗುತ್ತಿವೆ. ಇಂಥ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪ್ರಸಕ್ತ ಸ್ಥಿತಿಯ ವಿರುದ್ಧ ಹೋರಾಡಬೇಕಿದೆ, ಜನಸಾಮಾನ್ಯರಲ್ಲಿ ಸ್ಥೈರ್ಯ ತುಂಬಬೇಕಿದೆ. ಸರ್ಕಾರ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ವಿಪಕ್ಷಗಳಿಗೆ ಇದು ಮನವರಿಕೆ ಆಗಬೇಕಿದೆ. ಕರೊನಾ ಸಂದರ್ಭದಲ್ಲಿ ರಾಜಕೀಯದ ಹೇಳಿಕೆಗಳು ಸೂಕ್ತವಲ್ಲ. ರಾಜಕೀಯವನ್ನು ಬದಿಗಿಟ್ಟು ಜನರ ಹಿತರಕ್ಷಣೆಯೇ ಮುಖ್ಯವಾಗಬೇಕು. ಪ್ರತಿಪಕ್ಷಗಳು ಜವಾಬ್ದಾರಿ ಅರಿತು ವರ್ತಿಸಲಿ ಎಂಬುದೇ ಆಶಯ.

| ಶ್ರೀರಂಗ ಪುರಾಣಿಕ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net