ಜನಮತ: ಎನ್​ಡಿಎಯಲ್ಲಿ ಮಹಿಳೆಯರಿಗೆ ಅವಕಾಶ

nda
Published on

ಇದುವರೆಗೆ ಪುರುಷರಿಗಷ್ಟೇ ಸೀಮಿತವಾಗಿದ್ದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶದಲ್ಲಿ ಮಹಿಳೆಯರಿಗೆ ಅವಕಾಶ ಇರಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರಿಂದಾಗಿ ಇನ್ಪೆಂಟ್ರಿ, ಮೆಕನೈಸ್ಡ ಇನ್ಪೆಂಟ್ರಿ, ಆರ್ಟಿಲರಿ, ಆರ್ಮ್ಡ್​ ಮೊಮೊದಲಾದ ಫೈಟಿಂಗ್ ಫೋರ್ಸ್​ಗಳ ಸಕ್ರಿಯ ಬಟಾಲಿಯನ್​ಗಳ ಕಮಾಂಡ್ ಮಾಡುವ ಅವಕಾಶ ಮಹಿಳೆಯರಿಗೆ ಸಿಗಲಿದೆ.

ಫೈಟಿಂಗ್ ಟ್ರೂಪ್ಸ್​ಗಳಲ್ಲಿ ತರಬೇತಿ ಸ್ತರ ಹೆಚ್ಚು ಕಠಿಣ, ಪ್ರಮೋಶನ್ನಿನ ಮಾನದಂಡ ಕ್ಲಿಷ್ಟ, ಸೈನಿಕ ಸವಾಲುಗಳನ್ನು ಎದುರಿಸುವ ದೈಹಿಕ ಸಾಮರ್ಥ್ಯ ಉನ್ನತವಾಗಿರುತ್ತದೆ. ತಾಂತ್ರಿಕ ವಿಭಾಗಗಳ ಮೂಲಕ ಹಿನ್ನೆಲೆಯಲ್ಲಿ ದುಡಿಯುವ ಅವಕಾಶದಿಂದ ತೃಪ್ತರಾಗದೇ ಮುನ್ನೆಲೆಗೆ ಬರಲು ಕಾತರರಾಗಿರುವ ಮಹಿಳೆಯರು ನ್ಯಾಯಾಲಯದ ಮೂಲಕ ನ್ಯಾಯ ದೊರಕಿಸಿಕೊಂಡಿದ್ದಾರೆ. ಒಂದು ದೇಶದ ಸೇನೆಯ ಮನೋಬಲ, ಸಾಮರ್ಥ್ಯ, ಯುದ್ಧಕುಶಲತೆ, ಯಂತ್ರ-ತಂತ್ರ ಎಲ್ಲದರ ಮೇಲೆ ಆ ದೇಶದ ಜನರ ಸುಖದ ಬದುಕು ನಿಂತಿರುತ್ತದೆ. ಹತಾಶ-ನಿರಾಶ, ನಾಯಕತ್ವ ಇಲ್ಲದ ಸೇನೆ ಸಂಖ್ಯೆಯಲ್ಲಿ ಎಷ್ಟು ದೊಡ್ಡದಿದ್ದರೂ ಶತ್ರವನ್ನು ಎದುರಿಸಲಾರದು ಎನ್ನುವುದನ್ನು ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿ ಕಂಡಿದ್ದೇವೆ.

ಮಾನವ ಅಧಿಕಾರದ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದ ಉಗ್ರವಾದಿ ಗಳೊಂದಿಗೆ ಸೆಣಸಬೇಕಾದ, ಅಂತಾರಾಷ್ಟ್ರೀಯ ನಿಯಮಗಳಿಗೆ ಕ್ಯಾರೇ ಎನ್ನದೆ ಯುದ್ಧಬಂದಿಗಳಿಗೆ ಚಿತ್ರಹಿಂಸೆ ನೀಡುವ ಪಾಕ್-ಚೀನೀ ಶತ್ರುಗಳನ್ನು ಎದುರಿಸಬೇಕಾ ದವರು ಇನ್ಪೆಂಟ್ರಿ, ಆರ್ಟಿಲರಿಗಳು. ಮಂಚೂಣಿಯಲ್ಲಿ ಕಾರ್ಯನಿರ್ವ ಹಿಸುವ ಸೇನೆಯ ಫೈಟಿಂಗ್ ಟ್ರೂಪ್​ಗಳು. ಶತ್ರುವಿನೊಂದಿಗೆ ಮುಖಾಮುಖಿಯಾಗಿ ಸೆಣಸುವ ಇನ್ಪೆಂಟ್ರಿಯ ಅಧಿಕಾರಿಗಳು ಜವಾನರಿಗೆ ಮುಂದಿನಿಂದ ನಾಯಕತ್ವ ಪ್ರದಾನ ಮಾಡುವ ಕ್ಷಮತೆ ಹೊಂದಿರಬೇಕು. ಅಧಿಕಾರಿಗಾಗಿ ತಮ್ಮ ಜೀವವನ್ನೇ ಬಲಿಗೊಡಲು ಜವಾನರು ಸಿದ್ಧರಾಗಿರಬೇಕಾದರೆ ಆ ಅಧಿಕಾರಿ ಅಷ್ಟು ಸಮರ್ಥರಾಗಿರಬೇಕು. ಪುರುಷ ಅಧಿಕಾರಿಗೆ ಸಮಾನವಾಗಿ ಮಹಿಳಾ ಅಧಿಕಾರಿಗಳು ಕಠಿಣ ದೈಹಿಕ ಮಾನದಂಡಗಳನ್ನು ಪೂರೈಸಲು ಶಕ್ತರಾದರೆ ಮಾತ್ರ ತಂಡಕ್ಕೆ ನಾಯಕತ್ವ ನೀಡಬಲ್ಲ ನೈತಿಕ ಅಧಿಕಾರ ಪಡೆಯಬಲ್ಲರು. ಇದುವರೆಗೆ ಸಪೋರ್ಟಿಂಗ್ ಸರ್ವೀಸ್​ಗಳಿಗೆ ಸೀಮಿತವಾಗಿದ್ದ ಮಹಿಳೆಯರಿಗೆ ಇಂತಹ ಅನೇಕ ದೈಹಿಕ ಷರತ್ತುಗಳಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಮಹಿಳೆ ಎಂಬ ಕಾರಣಕ್ಕಾಗಿ ನೀಡುವ ರಿಯಾಯಿತಿಗಳಿಂದ ಸೇನೆಯ ಹೋರಾಡುವ ಕ್ಷಮತೆ ಮೇಲೆ ಪ್ರಭಾವ ಬೀರದಿರಲಿ. ಯಾವುದೇ ರಿಯಾಯತಿ ಇಲ್ಲದೆ ಸಾಮರ್ಥ್ಯ ತೋರುವ ವೀರಾಂಗನೆಯರಿಗಷ್ಟೇ ಈ ಅವಕಾಶ ಲಭಿಸಲಿ.

| ಚಂದ್ರಶೇಖರ ನಾವಡ ಮಾಜಿ ಸೈನಿಕ, ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net