

ಈ ವರ್ಷದಿಂದಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ರಾಜ್ಯದಲ್ಲಿ ಪದವಿ ಹಂತದಲ್ಲಿ ಅಳವಡಿಸಿಕೊಳ್ಳಲಾಗುವುದೆಂದು ಕರ್ನಾಟಕ ಸರ್ಕಾರ ಘೊಷಿಸಿದೆ. ತನ್ನ ಈ ಮಹತ್ವದ ನಿರ್ಧಾರದ ಜೊತೆಗೆ ಸರ್ಕಾರ ಅನೇಕ ಪ್ರಮಾದಗಳನ್ನು ಎಸಗುತ್ತಿರುವಂತೆ ಕಾಣುತ್ತಿದೆ. ಹೊಸ ಶಿಕ್ಷಣ ನೀತಿಯ ಸ್ವರೂಪ ಎಂಥದ್ದು? ಪಠ್ಯ ಯಾವುದು? ಕಲಿಕೆ ಹೇಗಿರಲಿದೆ? ಅದನ್ನು ಅನುಷ್ಠಾನಕ್ಕೆ ತರುವುದು ಹೇಗೆ? ಎಂಬುದೆಲ್ಲವೂ ಇನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಆದರೆ ಈ ನೀತಿಯನ್ನು ಜಾರಿಗೊಳಿಸಲು ಹೊರಟಿರುವ ಉನ್ನತಶಿಕ್ಷಣ ಇಲಾಖೆಯಿಂದ ಈ ಕುರಿತು ಸ್ಪಷ್ಟವಾದ ಯಾವುದೆ ಮಾಹಿತಿ ಕಾಲೇಜು ಹಂತದಲ್ಲಿ ಹಾಗೂ ವಿದ್ಯಾರ್ಥಿ ವಲಯದಲ್ಲಿ ಇಲ್ಲ. ವಿಪರ್ಯಾಸವೆಂದರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ಪಡೆಯಬಹುದಷ್ಟೆ.
ಪದವಿ ಹಂತವೆಂದರೆ ಪ್ರತಿ ವಿದ್ಯಾರ್ಥಿಯ ಭವಿಷ್ಯ ನಿರ್ಧರಿಸುವ ಮಹತ್ವದ ಘಟ್ಟ. ಹಾಗಾಗಿ ಬೋಧಿಸುವ ಉಪನ್ಯಾಸಕರಿಗೂ ಕಲಿಯುವ ವಿದ್ಯಾರ್ಥಿಗಳಿಗೂ ಇದರ ಸಂಪೂರ್ಣ ಅರಿವು ಇರಲೇಬೇಕು. ಎನ್ಇಪಿ ಬಗ್ಗೆ ಇಲಾಖೆ ಸಾಕಷ್ಟು ಅರಿವು ಮೂಡಿಸಿಯೇ ಜಾರಿ ಪ್ರಕ್ರಿಯೆ ಆರಂಭಿಸಬೇಕು. ಪ್ರಮುಖವಾದ ವಿಚಾರವೆಂದರೆ, ನೂತನ ಶಿಕ್ಷಣ ನೀತಿ ಜಾರಿ ಕುರಿತಂತೆ ಕರ್ನಾಟಕ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿರುವ ಭಾಷೆಗಳ ಆಯ್ಕೆಯ ವಿಚಾರ. ಪದವಿಯ ಮೊದಲೆರಡು ವರ್ಷ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ತೆಗೆದುಕೊಳ್ಳುವುದರ ಜೊತೆಗೆ ಇನ್ನೊಂದು ಭಾಷೆಯನ್ನು ಐಚ್ಛಿಕವಾಗಿ ತೆಗೆದುಕೊಳ್ಳಬಹುದಾಗಿದೆ. ಇದರರ್ಥ ಇನ್ನು ಮುಂದೆ ಕರ್ನಾಟಕದಲ್ಲಿ ಪದವಿ ಓದುವ ಪ್ರತಿ ವಿದ್ಯಾರ್ಥಿ ಕನ್ನಡವನ್ನು ಕಡ್ಡಾಯವಾಗಿ ಓದುವುದರ ಜೊತೆಗೆ ಇನ್ನೊಂದು ಭಾಷೆಯಾಗಿ ಇಂಗ್ಲಿಷ್, ಸಂಸ್ಕೃತ, ಹಿಂದಿ, ಉರ್ದು ಇತ್ಯಾದಿ ತನ್ನಿಚ್ಛೆಯ ಯಾವುದಾದರೂ ಒಂದು ಭಾಷೆಯನ್ನು ಆಯ್ದುಕೊಳ್ಳಬೇಕು. ಮೇಲ್ನೋಟಕ್ಕೆ ಈ ಆದೇಶ ಉತ್ತಮ ನಿರ್ಧಾರವೆಂಬುದಾಗಿಯೂ ಮತ್ತು ಪ್ರತಿ ವಿದ್ಯಾರ್ಥಿಯೂ ಕನ್ನಡ ಕಲಿಯುವುದರ ಜೊತೆಗೆ ಯಾವುದೋ ತನ್ನಿಚ್ಛೆಯ ಭಾಷೆಯನ್ನೂ ಕಲಿಯಬಹುದಲ್ಲ ಎಂದೆನಿಸಿದರೂ ಇದರಿಂದ ಆಗುವ ಸಾಧಕಕ್ಕಿಂತಲೂ ಬಾಧಕವೇ ಹೆಚ್ಚು ಎಂಬುದನ್ನು ಪ್ರಾಯೋಗಿಕವಾಗಿ ವಿಚಾರ ಮಾಡಿದಾಗ ತಿಳಿಯುವುದು. ಸುತ್ತೋಲೆಯಲ್ಲಿ ಎಲ್ಲಿಯೂ ಕನ್ನಡ ಭಾಷೆ ಕಡ್ಡಾಯವೆಂಬ ಪದವನ್ನು ಬಳಸದೇ ‘ಕನ್ನಡ ಮತ್ತು ಇನ್ನೊಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ನಮೂದಿಸಲಾಗಿದೆ.
ಕನ್ನಡ ತೆಗೆದುಕೊಂಡ ಬಳಿಕ ವಿದ್ಯಾರ್ಥಿಯ ಕೈಯಲ್ಲಿ ಒಂದೇ ಒಂದು ಭಾಷೆಯ ಆಯ್ಕೆ ಉಳಿಯುತ್ತದೆ. ಆ ಒಂದು ಭಾಷೆಯ ಆಯ್ಕೆಯ ವಿಚಾರದಲ್ಲಿ ವಿದ್ಯಾರ್ಥಿ ಸಾಕಷ್ಟು ಚೌಕಾಶಿ ಮಾಡಲೇಬೇಕು ಎಂಬ ಪರಿಸ್ಥಿತಿ ನಿರ್ವಣವಾಗಿದೆ. ಅಲ್ಲಿ ಆಂಗ್ಲಭಾಷೆಯೂ ಐಚ್ಛಿಕ ಭಾಷೆಯಾಗಿರುವುದರಿಂದ ಸಹಜವಾಗಿಯೇ ಆಂಗ್ಲಭಾಷೆಯನ್ನೇ ವಿದ್ಯಾರ್ಥಿ ಆಯ್ದುಕೊಳ್ಳುವುದಕ್ಕೆ ಮನಸು ಮಾಡಬಹುದು. ಇಂಗ್ಲಿಷ್ ಜಾಗತಿಕ ಮಟ್ಟದ ವ್ಯಾವಹಾರಿಕ ಭಾಷೆಯಾಗಿರುವುದರಿಂದ ವಿದ್ಯಾಸಂಸ್ಥೆಗಳೂ ಇನ್ನೊಂದು ಭಾಷೆಯ ಆಯ್ಕೆಯ ವಿಚಾರದಲ್ಲಿ ಆಂಗ್ಲಭಾಷೆಯನ್ನೇ ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬಹುದು. ಇದರಿಂದ ವಿದ್ಯಾರ್ಥಿಗಳು ಪದವಿ ಹಂತ ತಲುಪಿದರೂ ತಮ್ಮಿಷ್ಟದ ಭಾಷೆ ಕಲಿಯಲು ಸರ್ವಸ್ವತಂತ್ರರಲ್ಲ. ಅಲ್ಲದೆ, ನಮ್ಮ ದೇಶದ ಪ್ರಾಚೀನ ಭಾಷೆಯಾದ ಸಂಸ್ಕೃತ ಸೇರಿದಂತೆ, ಹಿಂದಿ, ಉರ್ದು ಇತ್ಯಾದಿ ನಾನಾ ಭಾಷೆಗಳು ಕಾಲೇಜು ಹಂತದಲ್ಲಿ ಹಿನ್ನಡೆ ಸಾಧಿಸುವ ಸಹಜವಾದ ಅಪಾಯ ಎದುರಾಗಿದೆ. ರಾಜ್ಯದ ನಾನಾ ಪದವಿ ಕಾಲೇಜುಗಳಲ್ಲಿ ಈ ಭಾಷೆಗಳನ್ನು ಅನೇಕ ವರ್ಷಗಳಿಂದ ಬೋಧಿಸುತ್ತಿರುವ ಐದು ಸಾವಿರಕ್ಕೂ ಹೆಚ್ಚು ಉಪನ್ಯಾಸಕರಿಗೆ ತಮ್ಮ ಭವಿಷ್ಯದ ಚಿಂತೆ ಶುರುವಾಗಿದೆ.
ಹೊಸ ಶಿಕ್ಷಣ ನೀತಿಯು ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಕಡ್ಡಾಯ ಮಾಡಿರುವುದು ಸ್ವಾಗತಾರ್ಹ. ಆದರೆ ಹೊಸನೀತಿಯ ಆಶಯದಂತೆ ಪ್ರತಿ ವಿದ್ಯಾರ್ಥಿಯೂ ಉನ್ನತ ಸ್ತರಗಳಿಗೆ ಹೊದಂತೆಲ್ಲ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯಲು ಅವಕಾಶವಿರಬೇಕು. ಅದರಲ್ಲಿಯೂ, ‘ನಮ್ಮ ದೇಶದ ಎಲ್ಲಭಾಷೆಗಳ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುವ ಸಂಸ್ಕೃತ ಭಾಷೆಯ ಕಲಿಕೆಗೆ ವಿಶೇಷ ಅವಕಾಶವನ್ನು ಕಲ್ಪಿಸಲಾಗುವುದು. ಸಂಸ್ಕೃತದ ಸಾಂಸ್ಕೃತಿಕ ಮಹತ್ವ ಹಾಗೂ ವೈಜ್ಞಾನಿಕ ಸ್ವರೂಪಗಳಿಂದಾಗಿ ಅದನ್ನು ಉನ್ನತ ಶಿಕ್ಷಣದಲ್ಲಿಯೂ ವಿದ್ಯಾರ್ಥಿಗಳು ಕಲಿಯಲು ವಿಶೇಷ ಅವಕಾಶ ಕಲ್ಪಿಸಲಾಗುವುದು’ ಎಂಬುದಾಗಿ ಹೊಸಶಿಕ್ಷಣ ನೀತಿಯ ಆಶಯದಲ್ಲಿ ಹೇಳಲಾಗಿದೆ. ಆದರೆ ನಮ್ಮ ಸರ್ಕಾರದ ಪ್ರಸ್ತುತ ಆದೇಶವು ಈ ಆಶಯಕ್ಕೆ ತದ್ವಿರುದ್ಧವೆಂಬಂತಿದೆ. ಮೇಲಾಗಿ ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಾನೇ ತಾನಾಗಿ ಬಯಸುವ ವಿದ್ಯಾರ್ಥಿ ಕೂಡ ಈ ಭಾಷೆಯನ್ನು ಆರಿಸಿಕೊಳ್ಳಲು ಅನುಮಾನ ಪಡುವಂತಾಗಿದೆ.
ಭಾಷೆಯ ಆಯ್ಕೆ ವಿಚಾರದಲ್ಲಿ ಸರ್ಕಾರವು ಮೂಗು ತೂರಿಸಿರುವುದರಿಂದ ತಮ್ಮ ಭವಿಷ್ಯ ಹೇಗಿರಲಿದೆಯೆಂದು ಸಾವಿರಾರು ಉಪನ್ಯಾಸಕರು ಚಿಂತಿತರಾಗಿದ್ದರೆ, ಸಂಸ್ಕೃತ, ಹಿಂದಿಯಂಥ ಮಹತ್ವದ ಸಾಹಿತ್ಯಿಕ ವಿಷಯಗಳನ್ನೊಳಗೊಂಡ ಭಾಷೆಗಳನ್ನು ಗಂಭೀರವಾಗಿ ಓದಬಹುದಾದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಆ ಅವಕಾಶ ತಪ್ಪಿಹೋಗುವುದೆಂಬ ಕಳವಳವನ್ನು ಅನೇಕ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಗಮನಾರ್ಹ ವಿಷಯವೆಂದರೆ, ಇತ್ತೀಚೆಗೆ ವಿಜಯವಾಣಿಯ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರು, ಸಂಸ್ಕೃತ ಭಾಷೆಯನ್ನು ಕಲಿಯುವುದರ ಮಹತ್ವವನ್ನು ತಿಳಿಸುತ್ತ, ಇತಿಹಾಸ, ಪುರಾತತ್ತ್ವಶಾಸ್ತ್ರಗಳಂತಹ ಪಾರಂಪರಿಕ ವಿಷಯಗಳನ್ನು ಓದುವ ಭಾರತೀಯ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಓದದೇ ಹೋದರೆ ಅವರ ವಿದ್ಯಾಭ್ಯಾಸವೇ ಅಪೂರ್ಣ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಕಲಿಕೆಗೆ ಶಾಲಾ-ಕಾಲೇಜುಗಳಲ್ಲಿ ಅಷ್ಟಾಗಿ ಅವಕಾಶವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪಾರಂಪರಿಕ ವಿಷಯ ಅಥವಾ ಯಾವುದೇ ಭಾಷೆಯ ಸಾಹಿತ್ಯವನ್ನು ಮುಖ್ಯವಿಷಯವಾಗಿ ಓದುವ ವಿದ್ಯಾರ್ಥಿಗೆ ಸಂಸ್ಕೃತ ಹಾಗೂ ಇನ್ನಿತರ ಭಾಷೆಗಳ ಅಧ್ಯಯನಕ್ಕೆ ಅವಕಾಶವಿರಲೇ ಬೇಕು. ಆರಂಭಿಕ ಹಂತದಲ್ಲಿಯೇ ಇಂತಹ ಸಣ್ಣಪುಟ್ಟ ಗೊಂದಲಗಳಿಗೆ ತೆರೆ ಎಳೆದರೆ ದೇಶದಲ್ಲಿಯೇ ಎನ್ಇಪಿ ಮಾದರಿ ಎನಿಸಿ, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಹೊಸಭಾಷ್ಯವನ್ನು ಬರೆಯಬಹುದು.
| ಡಾ. ಗಣಪತಿ ಆರ್. ಭಟ್ ಸಂಸ್ಕೃತ ಉಪನ್ಯಾಸಕ ಹಾಗೂ ರೇಡಿಯೋ ನಿರೂಪಕ