

ಹಣಕಾಸು ಆಯೋಗ ಎಲ್ಲ 28 ರಾಜ್ಯಗಳನ್ನೂ ಸಾಮಾನ್ಯ ಹಾಗೂ ವಿಶೇಷ ಗುಂಪುಗಳಾಗಿ ವಿಂಗಡಿಸಿದೆ. 17 ರಾಜ್ಯಗಳು ಸಾಮಾನ್ಯ ಗುಂಪಿಗೆ ಸೇರಿದರೆ 11 ರಾಜ್ಯಗಳು ವಿಶೇಷ ಗುಂಪಿಗೆ ಸೇರಿವೆ. ಸಾಮಾನ್ಯ ವಿಭಾಗದ 17 ರಾಜ್ಯಗಳಲ್ಲಿ 7 ರಾಜ್ಯಗಳು ಕಡಿಮೆ ಆದಾಯ ಹೊಂದಿದ ರಾಜ್ಯಗಳಾಗಿವೆ. ತಲಾ 5 ರಾಜ್ಯಗಳು ಮಧ್ಯಮ ಮತ್ತು ಅತೀ ಹೆಚ್ಚು ಆದಾಯ ಹೊಂದಿದ ರಾಜ್ಯಗಳಾಗಿವೆ.
ಇದೇ ಫೆಬ್ರವರಿ ತಿಂಗಳಲ್ಲಿ 15ನೇ ಹಣಕಾಸು ಆಯೋಗ ವರದಿ ಸಲ್ಲಿಸಿದೆ. ಈ ವರದಿಯನ್ನು ಪರಿಶೀಲಿಸಿದಾಗ ಕರ್ನಾಟಕಕ್ಕೆ ನಷ್ಟ ಆಗಿರುವುದು ಕಂಡುಬರುತ್ತದೆ. ಈ ನಷ್ಟವನ್ನು ಯಾವ ರೀತಿ ನೀಗಿಸಬೇಕು ಎಂಬ ಚಿಂತನೆಯನ್ನು ಇಲ್ಲಿ ಮಾಡಲಾಗಿದೆ. 2000ದಲ್ಲಿ ಸಂವಿಧಾನಕ್ಕೆ 80ನೇ ತಿದ್ದುಪಡಿ ಮಾಡಲಾಯಿತು. ಆ ಪ್ರಕಾರ ಇಲ್ಲಿಯವರೆಗೆ ಕೇಂದ್ರ ಸರ್ಕಾರ ರಾಜ್ಯಗಳ ಜೊತೆಗೆ ತನ್ನ ಆದಾಯತೆರಿಗೆ ಹಾಗೂ ಕೇಂದ್ರ ಅಬಕಾರಿ ತೆರಿಗೆಯನ್ನು ಹಂಚಿಕೊಳ್ಳುತ್ತಿತ್ತು. ಸಂವಿಧಾನ ತಿದ್ದುಪಡಿ ಆದ ಮೇಲೆ ಕೇಂದ್ರ ತನ್ನ ಎಲ್ಲ ತೆರಿಗೆಗಳ ಭಾಗವನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳಲು ಅವಕಾಶ ಮಾಡಲಾಗಿದೆ. ಇದರಿಂದಾಗಿ ರಾಜ್ಯಗಳಿಗೆ ಕೇಂದ್ರದಿಂದ ಹರಿದು ಬರುವ ಹಣಕಾಸಿನ ಪ್ರಮಾಣ ಇನ್ನೂ ಹೆಚ್ಚಿಗೆ ಆಯಿತು. ಜೊತೆಗೆ 14ನೇ ಹಣಕಾಸು ಆಯೋಗ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇ.32ರಿಂದ 42ಕ್ಕೆ ಹೆಚ್ಚಿಸಿತು. ಇದು ಕೂಡ ರಾಜ್ಯಗಳಿಗೆ ಅನುಕೂಲವಾಯಿತು.
ಸದರೀ ಮೊತ್ತವನ್ನು ರಾಜ್ಯಗಳ ನಡುವೆ ಹಂಚಲು ಹಣಕಾಸು ಆಯೋಗಗಳು ಕೆಲ ಮಾರ್ಗಸೂಚಿ ಅನುಸರಿಸುತ್ತವೆ. ಎಲ್ಲ ರಾಜ್ಯಗಳ ನಡುವೆ ಹಣದ ಪ್ರಮಾಣ ಸಮಾನರೀತಿಯಲ್ಲಿ ಹಂಚಲ್ಪಡಬೇಕು ಎಂಬುದೇ ಇದರ ಉದ್ದೇಶ. ಅದಕ್ಕಾಗಿ ಕೆಲ ಮಾನದಂಡ ಅನುಸರಿಸಲಾಗುತ್ತದೆ. ಉದಾಹರಣೆಗೆ, ರಾಜ್ಯದ ಜನಸಂಖ್ಯೆ, ಆದಾಯದ ಅಂತರ, ಒಟ್ಟು ಕ್ಷೇತ್ರ, ಅರಣ್ಯಪ್ರದೇಶ, ತೆರಿಗೆ ಸಂಗ್ರಹ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ- ಮುಂತಾದವು. ಹಣಕಾಸು ಆಯೋಗ ಎಲ್ಲ 28 ರಾಜ್ಯಗಳನ್ನೂ ಸಾಮಾನ್ಯ ಹಾಗೂ ವಿಶೇಷ ಗುಂಪುಗಳಾಗಿ ವಿಂಗಡಿಸಿದೆ. 17 ರಾಜ್ಯಗಳು ಸಾಮಾನ್ಯ ಗುಂಪಿಗೆೆ ಸೇರಿದರೆ 11 ರಾಜ್ಯಗಳು ವಿಶೇಷ ಗುಂಪಿಗೆ ಸೇರಿವೆ. ಸಾಮಾನ್ಯ ವಿಭಾಗದ 17 ರಾಜ್ಯಗಳಲ್ಲಿ 7 ರಾಜ್ಯಗಳು ಕಡಿಮೆ ಆದಾಯ ಹೊಂದಿದ ರಾಜ್ಯಗಳಾಗಿವೆ. ತಲಾ 5 ರಾಜ್ಯಗಳು ಮಧ್ಯಮ ಮತ್ತು ಅತೀ ಹೆಚ್ಚು ಆದಾಯ ಹೊಂದಿದ ರಾಜ್ಯಗಳಾಗಿವೆ. ಕೇಂದ್ರದಿಂದ ಬರತಕ್ಕ ತೆರಿಗೆ ಹಣದ ಪ್ರಮಾಣದಲ್ಲಿ ಸಾಮಾನ್ಯ ರಾಜ್ಯಗಳ ಪಾಲೇ ಹೆಚ್ಚಿಗೆ ಅಂದರೆ ಶೇ.87ರಿಂದ 97 ರಷ್ಟಿರುತ್ತದೆ. (70 ವರ್ಷದ ಅವಧಿಯಲ್ಲಿ) ಇನ್ನುಳಿದ 13% ರಿಂದ 3% ಭಾಗ ಮಾತ್ರ ವಿಶೇಷ ರಾಜ್ಯಗಳಿಗೆ ಹಂಚಲ್ಪಡುತ್ತದೆ.
ಹೆಚ್ಚು ಪಾಲು ಪಡೆಯುತ್ತಿರುವ ರಾಜ್ಯಗಳು: ಸಾಮಾನ್ಯ ವಿಭಾಗದ ರಾಜ್ಯಗಳಲ್ಲಿ ಹೆಚ್ಚು ಹಣ ಪಡೆಯುತ್ತಿರುವ ರಾಜ್ಯಗಳೆಂದರೆ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ತಮಿಳನಾಡು, ಬಿಹಾರ ಮುಂತಾದವು. ಈ ರಾಜ್ಯಗಳು ಒಟ್ಟು ಹಂಚಲ್ಪಡುವ ಹಣದ ಪ್ರಮಾಣದಲ್ಲಿ ಶೇ.65 ರಿಂದ 84 ಭಾಗವನ್ನು ಪಡೆಯುತ್ತಿವೆ. ಉಳಿದ 21 ರಾಜ್ಯಗಳು ಕೇವಲ ಶೇ.16ರಿಂದ 35ರಷ್ಟು ಪಡೆಯುತ್ತಿವೆ. ಇದು ರಾಜ್ಯರಾಜ್ಯಗಳ ನಡುವಿರುವ ಅಸಮಾನತೆಗೆ ಸಾಕ್ಷಿ. 70 ವರ್ಷಗಳವರೆಗೆ ಇಷ್ಟೊಂದು ದೊಡ್ಡಪ್ರಮಾಣದ ಹಣ ಪಡೆದರೂ ಅವು ಮೊದಲು ಯಾವ ಸ್ಥಿತಿಯಲ್ಲಿ ಇದ್ದವೊ ಅದೇ ಸ್ಥಿತಿಯಲ್ಲಿ ಇರುವುದು ಶೋಚನೀಯ. ಅವುಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದಕ್ಕೆ ಕಾರಣ ಹಣಕಾಸು ಆಯೋಗಗಳು ಅಳವಡಿಸಿದ ಮಾನದಂಡಗಳೆಂದರೆ ತಪ್ಪಾಗಲಿಕ್ಕಿಲ್ಲ. ಅವುಗಳ ಪ್ರಕಾರ ಯಾವ ರಾಜ್ಯಗಳ ತಲಾ ಆದಾಯ ಕಡಿಮೆ ಇದೆ, ಯಾವ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಿದೆ, ಎಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಅಂಥ ರಾಜ್ಯಗಳಿಗೆ ಹೆಚ್ಚಿನ ಧನಸಹಾಯ ಮಾಡಲಾಗುತ್ತದೆ. ಇದರಿಂದ ಯಾವ ರಾಜ್ಯವೂ ಸುಧಾರಣೆಯತ್ತ ಸಾಗಲು ಪ್ರಯತ್ನ ಮಾಡುವದಿಲ್ಲ. ಒಂದು ರೀತಿಯಲ್ಲಿ ‘ಆರ್ಥಿಕ ಅಭಿವೃದ್ಧಿ ಹೊಂದದೆ ಇರುವುದೇ’ ಹೆಚ್ಚಿನ ಅನುದಾನ ಪಡೆಯಲು ಸಹಾಯವಾಗುವ ಹಾಗಿದೆ. ಇದರರ್ಥ ‘ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿಯುವಿಕೆ’ ರಾಜ್ಯಕ್ಕೆ ಹೆಚ್ಚಿನ ಹಣ ಪಡೆಯಲು ಸಹಾಯಕಾರಿಯಾದಂತೆ! ಇದು ಒಳ್ಳೆಯ ಬೆಳವಣಿಗೆ ಅಲ್ಲ.
ಬಡ, ಮಧ್ಯಮ ಮತ್ತು ಶ್ರೀಮಂತ ರಾಜ್ಯಗಳ ಪಾಲು: ಒಟ್ಟು ಹಂಚಲ್ಪಡುವ ತೆರಿಗೆ ಹಣದಲ್ಲಿ ಬಡರಾಜ್ಯಗಳ ಪಾಲು ಶೇ.40 ರಿಂದ 54. ಮಧ್ಯಮ ಆದಾಯ ಹೊಂದಿರುವ ರಾಜ್ಯಗಳ ಪಾಲು ಕಳೆದ 70 ವರ್ಷಗಳಲ್ಲಿ ಶೇ.38 ರಿಂದ 21.4ಕ್ಕೆ ಇಳಿದಿದೆ. ಅದೇ ರೀತಿ ಶ್ರೀಮಂತ ರಾಜ್ಯಗಳ ಪಾಲು ಕೂಡ ಶೇ.19 ರಿಂದ 11ಕ್ಕೆ ಕುಸಿದಿದೆ. ಇದು ಕೂಡ ಒಳ್ಳೆಯ ಬೆಳವಣಿಗೆ ಅಲ್ಲ. ಏಕೆಂದರೆ ಇದು ಅಭಿವೃದ್ಧಿ ಹೊಂದುವ ರಾಜ್ಯಗಳಿಗೆ ಕೆಟ್ಟಸಂದೇಶ ರವಾನಿಸುತ್ತದೆ. ಅಲ್ಲದೆ ಬೆಳವಣಿಗೆ ಹೊಂದಿದ ಮತ್ತು ಹೊಂದುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ನೆರವಿನ ಅವಶ್ಯಕತೆ ಇರುತ್ತದೆ. ಹೊರತಾಗಿ ಅವುಗಳಿಗೆ ಹರಿಯುವ ಹಣದ ಪ್ರಮಾಣ ಕಡಿಮೆ. ಹಾಗಾಗಿ, ಅವುಗಳ ಅಭಿವೃದ್ಧಿಗೆ ಅದು ಮಾರಕವಾಗುತ್ತದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕಳೆದ 70 ವರ್ಷಗಳಲ್ಲಿ ಕಡಿಮೆ ಆದಾಯವಿರುವ ರಾಜ್ಯಗಳು ತಮ್ಮ ಪಾಲನ್ನು ಶೇ.11.87ರಷ್ಟು ಹೆಚ್ಚಿಸಿಕೊಂಡರೆ, ಮಧ್ಯಮ ಆದಾಯ ಇರುವ ರಾಜ್ಯಗಳು ಶೇ.6.33 ಮತ್ತು ಶ್ರೀಮಂತ ರಾಜ್ಯಗಳು ಶೇ.5.54 ಪಾಲನ್ನು ಕಳೆದುಕೊಂಡಿವೆ. ಕಡಿಮೆ ಆದಾಯ ಇರುವ ರಾಜ್ಯಗಳಿಗೆ ಒಂದು ನಿರ್ದಿಷ್ಟ ಗುರಿಸಾಧನೆಗೆ ಧನಸಹಾಯ ನೀಡಬೇಕು. ಅಂದಾಗಲೇ ಪ್ರತಿಯೊಂದು ರಾಜ್ಯ ತನ್ನ ಸ್ಥಿತಿಗತಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ. ಇಲ್ಲದಿದ್ದರೆ ಆರ್ಥಿಕ ಹಿಂದುಳುವಿಕೆಗೆ ಕೊನೆಯೇ ಇಲ್ಲದಂತಾಗುತ್ತದೆ.
ಹೆಚ್ಚುತ್ತಿರುವ ಅಸಮಾನತೆ: 15ನೇ ಹಣಕಾಸು ಆಯೋಗದ ವರದಿ ಎರಡು ಮುಖ್ಯ ಬದಲಾವಣೆ ಮಾಡಿದೆ. ಮೊದಲನೆಯದಾಗಿ, ರಾಜ್ಯಗಳಿಗೆ ಹಂಚಲ್ಪಡಬಹುದಾದ ತೆರಿಗೆ ಹಣದ ಪ್ರಮಾಣವನ್ನು ಶೇ.42 ರಿಂದ 31ಕ್ಕೆ ಇಳಿಕೆ ಮಾಡಿರುವುದು. ಎರಡನೆಯದಾಗಿ, 1971ರ ಜನಸಂಖ್ಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು. ಇದರಿಂದಾಗಿ ದಕ್ಷಿಣ ರಾಜ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ಪಾಲಿನಲ್ಲಿ ತುಂಬ ಇಳಿಕೆಯಾಗಿದೆ.
ಲಾಭ ಪಡೆದ ರಾಜ್ಯಗಳು: 20 ರಾಜ್ಯಗಳು ಶೇಕಡಾವಾರು ಪಾಲನ್ನು ಹೆಚ್ಚಿಸಿಕೊಂಡಿವೆ. 8 ರಾಜ್ಯಗಳು ಶೇಕಡಾವಾರು ಪಾಲಿನಲ್ಲಿ ಕಡಿತವನ್ನು ಕಂಡಿವೆ. ಸುಧಾರಣೆ ಕಂಡಿರುವ 20 ರಾಜ್ಯಗಳಲ್ಲಿ 11 ಸಾಮಾನ್ಯವರ್ಗಕ್ಕೆ, 9 ವಿಶೇಷ ವರ್ಗಕ್ಕೆ ಸೇರಿದವು. ಸಾಮಾನ್ಯ ವರ್ಗಕ್ಕೆ ಸೇರಿದ ರಾಜ್ಯಗಳ ಪಾಲು ಶೇ.50.9 ಇದ್ದುದು 52.3ಕ್ಕೆ ಏರಿಕೆಯಾಗಿದೆ. ಇದರರ್ಥ ಹೆಚ್ಚು ಪಾಲು ಪಡೆಯುವ ರಾಜ್ಯಗಳೇ ಪಾಲನ್ನು ಮತ್ತಷ್ಟು ಹೆಚ್ಚಿಸಿಕೊಂಡಿವೆ.
ನಷ್ಟ ಅನುಭವಿಸಿದ ರಾಜ್ಯಗಳು: ಈಗಾಗಲೇ ತಿಳಿಸಿದ ಹಾಗೆ ಒಟ್ಟು 8 ರಾಜ್ಯಗಳು ತಮ್ಮ ಪಾಲಿನಲ್ಲಿ ಕಡಿತವನ್ನು ಕಂಡಿವೆ. ಅವುಗಳಲ್ಲಿ 6 ಸಾಮಾನ್ಯ, 2 ವಿಶೇಷ ವರ್ಗಕ್ಕೆ ಸೇರಿವೆ. ಕೇಂದ್ರ ತೆರಿಗೆ ಪಾಲಿನಲ್ಲಿ ಇವುಗಳಿಗೆ ಶೇ.2.35ರಷ್ಟು ಕಡಿತವಾಗಿದೆ. ಈ 8 ರಾಜ್ಯಗಳಲ್ಲಿ 4 ದಕ್ಷಿಣ ಭಾರತಕ್ಕೆ ಮತ್ತು 4 ಉತ್ತರ ಭಾರತಕ್ಕೆ ಸೇರಿವೆ. ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳ ಪಾಲು ಶೇ.2.12 ಕಡಿಮೆ ಆಗಿದೆ. ಉತ್ತರ ಭಾರತದ ರಾಜ್ಯಗಳಾದ ಒಡಿಶಾ, ಉತ್ತರ ಪ್ರದೇಶ, ಹರಿಯಾಣ, ಅಸ್ಸಾಂ ರಾಜ್ಯಗಳ ಪಾಲು ಶೇ.0.23ರಷ್ಟು ಮಾತ್ರ ಕಡಿಮೆ ಆಗಿದೆ.
ಕರ್ನಾಟಕಕ್ಕೆ ನಷ್ಟ: 14ನೇ ಹಣಕಾಸು ವರದಿ ಪ್ರಕಾರ ನಮ್ಮ ರಾಜ್ಯದ ಪಾಲು ಶೇ.4.71ರಷ್ಟಿತ್ತು. ಅದು 15ನೇ ಹಣಕಾಸು ವರದಿ ಪ್ರಕಾರ ಶೇ.3.64ಕ್ಕೆ ಸೀಮಿತವಾಗಿದೆ. ಇದರಿಂದಾಗಿ ಕರ್ನಾಟಕ ಪ್ರತಿವರ್ಷ 9000 ರೂಪಾಯಿ ಕೋಟಿಯಿಂದ 11000 ಕೋಟಿ ರೂಪಾಯಿವರೆಗೆ ನಷ್ಟ ಅನುಭವಿಸುವಂತಾಗಿದೆ. ಇನ್ನೊಂದು ದೃಷ್ಟಿಯಲ್ಲಿ ಹೇಳುವುದಾದರೆ, ನಮ್ಮ ರಾಜ್ಯ ಪ್ರತಿ 100 ರೂಪಾಯಿ ತೆರಿಗೆ ಸಂಗ್ರಹದಲ್ಲಿ ಕೇವಲ 40 ರೂಪಾಯಿ ಪಡೆಯುತ್ತಿದೆ. ಕಳೆದ ವರ್ಷ ಇದು 53 ರೂಪಾಯಿ ಇತ್ತು, ಆದರೆ ಉತ್ತರಪ್ರದೇಶ ಪ್ರತಿ 100 ರೂಪಾಯಿ ತೆರಿಗೆ ಸಂಗ್ರಹಕ್ಕೆ 256 ರೂಪಾಯಿ ಪಡೆದರೆ ಬಿಹಾರ 298 ರೂಪಾಯಿ ಪಡೆಯುತ್ತಿದೆ.
ದಕ್ಷಿಣ ರಾಜ್ಯಗಳ ಈ ನಷ್ಟವನ್ನು ನೀಗಿಸುವ ಸಲುವಾಗಿ 15ನೇ ಹಣಕಾಸು ಆಯೋಗ 6750 ಕೋಟಿ ರೂಪಾಯಿ ವಿಶೇಷ ಅನುದಾನವನ್ನು 3 ರಾಜ್ಯಗಳಿಗೆ ಕೊಡಲು ಶಿಫಾರಸು ಮಾಡಿದೆ. ಆ ಪೈಕಿ ಕರ್ನಾಟಕಕ್ಕೆ 5475 ಕೋಟಿ ರೂಪಾಯಿ ಕೊಡಬೇಕೆಂದು ಸೂಚಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ನಿರಾಕರಿಸುತ್ತದೆ ಅಲ್ಲದೆ ಹಣಕಾಸು ಆಯೋಗಕ್ಕೆ ತನ್ನ ಸಲಹೆಯನ್ನು ಮರುಪರಿಶೀಲಿಸುವಂತೆ ಸೂಚಿಸುತ್ತದೆ. ಇದು ಕರ್ನಾಟಕಕ್ಕೆ ಆದ ದೊಡ್ಡ ಅನ್ಯಾಯ. ಇದರ ವಿರುದ್ಧ ರಾಜ್ಯ ಸರ್ಕಾರ ದನಿಯತ್ತಿ, ತನಗೆ ಬರಬೇಕಾದ ನ್ಯಾಯಯುತ ಪಾಲನ್ನು ಪಡೆಯಲು ಪ್ರಯತ್ನ ಮಾಡಬೇಕು. ಇದೇ ಅಕ್ಟೊಬರ್ 30ಕ್ಕೆ 15ನೇ ಹಣಕಾಸು ಆಯೋಗ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿರುವುದರಿಂದ ಈಗ ಅನ್ಯಾಯಕ್ಕೆ ಒಳಗಾಗಿರುವ ದಕ್ಷಿಣದ ಎಲ್ಲ ರಾಜ್ಯಗಳೂ ಒಂದುಗೂಡಿ ಕೇಂದ್ರ ಸರ್ಕಾರ ಹಾಗೂ 15ನೇ ಹಣಕಾಸು ಆಯೋಗದ ಮುಂದೆ ಬೇಡಿಕೆಯನ್ನು ಮಂಡಿಸಬೇಕು.
(ಲೇಖಕರು ಆರ್ಥಿಕ ತಜ್ಞರು)