ಮಕ್ಕಳು-ಪೋಷಕರಿಗೆ ವರವಾದ ಮುಕ್ತ ಶಾಲಾ ಶಿಕ್ಷಣ

NIOS
Published on
ಆ ಹುಡುಗ ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದ. ಕೋವಿಡ್ ಸಂಕಷ್ಟದಿಂದ ಆರ್ಥಿಕವಾಗಿ ಕಂಗೆಟ್ಟ ಪಾಲಕರು ಶಾಲೆ ಕೇಳಿದ ಶುಲ್ಕ ಕಟ್ಟಲು ಸಾಧ್ಯವಾಗದೆ ಸರ್ಕಾರಿ ಶಾಲೆಗೆ ಮಗನನ್ನು ದಾಖಲಿಸಲು ವರ್ಗಾವಣೆ ಪತ್ರ ನೀಡುವಂತೆ ಶಾಲೆಯನ್ನು ಕೋರಿದರು. ‘ಹಣ ಕಟ್ಟದೇ ವರ್ಗಾವಣೆ ಪತ್ರ ನೀಡಲಾಗದು’ ಎಂದು ಶಾಲೆ ತಿಳಿಸಿದಾಗ ಮಗನ ವಿದ್ಯಾಭ್ಯಾಸ ಮೊಟಕಾಗುವ ಆತಂಕದಿಂದ ಕಂಗಾಲಾದರು. ಇಂಥ ಸಂದರ್ಭದಲ್ಲಿ ಪರಿಹಾರವಾಗಿ ಮುಕ್ತ ಶಾಲಾ ಶಿಕ್ಷಣದ ರಾಷ್ಟ್ರೀಯ ಸಂಸ್ಥೆಯಲ್ಲಿ (National Institute of Open Schooling-NIOS) ಮಗನ ವಿವರ ನೋಂದಣಿ ಮಾಡಿಸಿ, ವಿದ್ಯಾಭ್ಯಾಸ ಮುಂದುವರಿಸಲು ಕ್ರಮ ಕೈಗೊಂಡು ನಿಶ್ಚಿಂತರಾದರು.

ಚಿಕ್ಕಪುಟ್ಟ ವೃತ್ತಿಯಲ್ಲಿರುವವರು, ಕೂಲಿ ಕಾರ್ವಿುಕರು ಉಜ್ವಲ ಭವಿಷ್ಯದ ಬದುಕಿನ ಭರವಸೆಗಾಗಿ ಲಕ್ಷಾಂತರ ಡೊನೇಶನ್ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ. ಆದರೆ, ಕೋವಿಡ್ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನ ಈಗಿನ ಸನ್ನಿವೇಶದಲ್ಲಿ ಖಾಸಗಿ ಶಾಲೆಗಳಿಂದ ಬಿಡಿಸಿ, ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿರುವುದು ಕಂಡುಬರುತ್ತಿದೆ. ಕೆಲವು ಶಾಲೆಗಳು ವರ್ಗಾವಣೆ ಪತ್ರ ನೀಡದ ಕಾರಣ, ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲೆಗೆ ದಾಖಲಾಗದ, ಶಾಲೆ ಬಿಟ್ಟ ಮಕ್ಕಳಿಗೆ ಶಿಕ್ಷಣ ನೀಡಲು ಕೇಂದ್ರ ಸರ್ಕಾರದಿಂದ ಸ್ಥಾಪಿತವಾದ ಎನ್.ಐ.ಓ.ಎಸ್. ಪರಿಹಾರವಾಗಬಲ್ಲದು ಎಂಬ ಬಗ್ಗೆ ಅನೇಕರಿಗೆ ತಿಳಿಯದು.

ಅನಿವಾರ್ಯ ಕಾರಣದಿಂದ ಶಾಲೆಗೆ ದಾಖಲಾಗಲು ಸಾಧ್ಯವಾಗದ ಮಕ್ಕಳು ಅಥವಾ ಶಾಲೆಗೆ ದಾಖಲಾಗಿ ಶಾಲೆ ಬಿಟ್ಟ ಮಕ್ಕಳು ವಯೋಮಾನಕ್ಕೆ ಅನುಗುಣವಾಗಿ ಶಿಕ್ಷಣ ಹಾಗೂ ವೃತ್ತಿ ಸಂಬಂಧಿತ ಕೌಶಲಗಳ ಗಳಿಕೆಗೆ ಎನ್.ಐ.ಓ.ಎಸ್. ಆಶಾಕಿರಣವಾಗಿದೆ. 1979ರಲ್ಲಿ ಸಿ.ಬಿ.ಎಸ್.ಇ. ಬೋರ್ಡ್ ಅಡಿ ಕಾರ್ಯನಿರ್ವಹಣೆ ಆರಂಭಿಸಿದ ಎನ್.ಐ.ಓ.ಎಸ್. 1989ರಿಂದ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ವಿಶ್ವದಲ್ಲಿಯೇ ಅತಿ ದೊಡ್ಡ ಮುಕ್ತ ಕಲಿಕಾ ವ್ಯವಸ್ಥೆಯನ್ನು ಇದು ಹೊಂದಿದೆ. ದೇಶದಾದ್ಯಂತ 7400 ಅಧ್ಯಯನ ಕೇಂದ್ರಗಳ ಮೂಲಕ ಈವರೆಗೆ 27 ಲಕ್ಷಕ್ಕೂ ಅಧಿಕ ಜನ ಶಾಲಾ ಶಿಕ್ಷಣದ ವಿವಿಧ ಹಂತಗಳ ವಿದ್ಯಾಭ್ಯಾಸ ಪೂರೈಸಿದ್ದಾರೆ.

ಎನ್.ಐ.ಓ.ಎಸ್.ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಎ, ಬಿ, ಸಿ ಎಂಬ ಮೂರು ಹಂತಗಳಲ್ಲಿ ನೀಡಲಾಗುತ್ತದೆ. ಸಾಮಾನ್ಯ ಶಾಲೆಗಳ 3ನೇ ತರಗತಿಗೆ ಸಮನಾದ ‘ಎ’ ಹಂತಕ್ಕೆ 7+ ವರ್ಷ ಆದವರು, 5ನೇ ತರಗತಿಗೆ ಸಮನಾದ ‘ಬಿ’ ಹಂತಕ್ಕೆ 9+ ವರ್ಷ ಆದವರು ಮತ್ತು 8ನೇ ತರಗತಿಗೆ ಸಮನಾದ ‘ಸಿ’ ಹಂತಕ್ಕೆ 12+ ವರ್ಷ ಆದವರು ಪ್ರವೇಶ ಹೊಂದಬಹುದಾಗಿದೆ. ಅದೇ ರೀತಿ ‘ಸಿ’ ಹಂತ ಪೂರೈಸಿದವರು 10ನೇ ತರಗತಿಯ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು. 14+ ವರ್ಷ ಆದ ಯಾವುದೇ ಪೂರ್ವ ವಿದ್ಯಾರ್ಹತೆ ಇಲ್ಲದ ಹದಿಹರೆಯದವರು ಹಾಗೂ ವಯಸ್ಕರು ‘ಸ್ವ-ಕಲಿಕೆ ಮಾಡಲು ಸಮರ್ಥನಾಗಿದ್ದೇನೆ’ ಎಂಬ ಘೊಷಣೆಯೊಂದಿಗೆ ನೇರ ಪ್ರವೇಶ ಹೊಂದಬಹುದು. 15+ ವರ್ಷ ಆಗಿದ್ದು ಎನ್.ಐ.ಓ.ಎಸ್.ನಿಂದ

ಅಥವಾ ದೇಶದ ಯಾವುದೇ ಅಧಿಕೃತ ಬೋರ್ಡ್​ನಲ್ಲಿ ಹತ್ತನೇ ತರಗತಿ ಪಾಸಾದವರು 12ನೇ ತರಗತಿಗೆ ಸಮನಾದ ಕೋರ್ಸ್​ಗೆ ದಾಖಲಾಗಲು ಅವಕಾಶ ಇದೆ. ಎನ್.ಐ.ಒ.ಎಸ್.ನ ಎಲ್ಲ ಕೋರ್ಸ್​ಗಲ್ಲಿ ಶೈಕ್ಷಣಿಕ ವಿಷಯಗಳ ಜೊತೆ ಕೃಷಿ, ವಾಣಿಜ್ಯ, ವ್ಯಾಪಾರ, ಇಂಜಿನಿಯರಿಂಗ್, ತಂತ್ರಜ್ಞಾನ, ಕಂಪ್ಯೂಟರ್ ಸಂಬಂಧಿತ ವೃತ್ತಿ ಕೋರ್ಸ್​ಗಳನ್ನು ಕಲಿಯಲು ಅವಕಾಶ ಇದೆ. ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಇಂಥ ವೃತ್ತಿ ಆಧಾರಿತ ಕೌಶಲಗಳ ಕಲಿಕೆ ನೆರವು ಕಲ್ಪಿಸುತ್ತವೆ. ಎನ್.ಐ.ಒ.ಎಸ್. ಕೋರ್ಸ್​ಗಳಲ್ಲಿ ಪಾಸಾಗಿ ಪ್ರಮಾಣಪತ್ರ ಪಡೆದವರು ಮುಂದಿನ ವಿದ್ಯಾಭ್ಯಾಸವನ್ನು ಇತರ ವಿಶ್ವವಿದ್ಯಾಲಯಗಳಲ್ಲಿ ಮುಂದುವರಿಸಲು ಅವಕಾಶ ಇದೆ. ಕೋವಿಡ್ ಕಾರಣ ಉಂಟಾಗಿರುವ ಶೈಕ್ಷಣಿಕ ಬಿಕ್ಕಟ್ಟು ನಿವಾರಣೆಗೆ ಮುಕ್ತ ಶಿಕ್ಷಣ ಒದಗಿಸುವ ಜಾಲವನ್ನು ದೇಶದಾದ್ಯಂತ ವಿಸ್ತರಿಸುವ ಸದವಕಾಶ ಇದೆ. ಬದುಕಿನ ವಿವಿಧ ಸಮಸ್ಯೆಗಳ ಕಾರಣ ಶಾಲೆ ಬಿಟ್ಟ ಅನೇಕರು ಎನ್.ಐ.ಓ.ಎಸ್. ಮೂಲಕ ಶಿಕ್ಷಣ ಪಡೆದು ವೈದ್ಯ, ಇಂಜಿನಿಯರ್, ಉದ್ಯಮಿ, ಉದ್ಯೋಗಿ ಆದ ಯಶಸ್ಸಿನ ನಿದರ್ಶನಗಳು ಎನ್.ಐ.ಒ.ಎಸ್. ಜಾಲತಾಣದಲ್ಲಿ ( https://nios.ac.in ) ಗಮನಿಸಬಹುದು.

ಮಕ್ಕಳು ಶಿಕ್ಷಣ ಪಡೆಯಲು ಶಾಲೆ ನಿಗದಿಪಡಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಭೌತಿಕವಾಗಿ ಹಾಜರಾಗಿಯೇ ಕಲಿಯಬೇಕು ಎಂಬ ಮಿತಿಯಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ‘ಈ ರೀತಿ ಕಲಿಯವ ಹಕ್ಕಿನಿಂದ ಏಕೆ ವಂಚಿತರಾಗಬೇಕು?’ ಎಂದು ತತ್ತ್ವಶಾಸ್ತ್ರಜ್ಞ ಇವಾನ್ ಇಲ್ಲಿಚ್ ‘ಡಿಸ್ಕೂಲಿಂಗ್ ಸೊಸೈಟಿ’ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ಎಲ್ಲರೂ ಶಿಕ್ಷಣ ಪಡೆಯಲು ಸಾಧ್ಯವಾಗುವಂಥ ಶಾಲೆಗಳ ರೀತಿಯಲ್ಲಿ ಕಾರ್ಯನಿರ್ವಹಿಸುವ ಪರ್ಯಾಯ ಸಂಸ್ಥೆಗಳನ್ನು ಕಟ್ಟುವ ಅವಶ್ಯಕತೆಯನ್ನು ಇಲ್ಲಿಚ್ ಪ್ರತಿಪಾದಿಸುತ್ತಾರೆ. ದೊಡ್ಡ ಶಾಲೆಗಳು ಎನ್.ಐ.ಓ.ಎಸ್. ಜೊತೆ ಕೈಜೋಡಿಸಿ, ದೇಶದ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುವಂತೆ ಮಾಡಲು ಕೋವಿಡ್ ಸನ್ನಿವೇಶ ಕಲ್ಪಿಸಿರುವ ಅವಕಾಶವನ್ನು ಬಳಸಿಕೊಳ್ಳಬೇಕಿದೆ.

(ಲೇಖಕರು ಡಿ.ಎಸ್.ಇ.ಆರ್.ಟಿ.ಯ ಹಿರಿಯ ಸಹಾಯಕ ನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net