

ಹಿಂದೆಲ್ಲಾ ಅಡುಗೆ ಮನೆಗೂ ಬಾಗಿಲು ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ಮಾದರಿಯ ತೆರೆದ ಅಡುಗೆ ಮನೆ (ಓಪನ್ ಕಿಚನ್) ಪರಿಕಲ್ಪನೆಗೆ ಅದ್ಯತೆ ಹೆಚ್ಚಿದೆ.
ಅಡುಗೆ ಕೋಣೆ ಅಡುಗೆ ಮಾಡಲಷ್ಟೇ ಅಲ್ಲ, ಅಲ್ಲಿ ಅಡುಗೆ ಸಾಮಗ್ರಿಗಳ ದಾಸ್ತಾನು ಮಾಡಲಾಗುತ್ತಿತ್ತು. ಇದು ಯಾರಿಗೂ ಕಾಣಿಸಬಾರದು ಎಂದು ಬಾಗಿಲು ಸಹ ಅಳವಡಿಸುತ್ತಿದ್ದ ಕಾಲವಿತ್ತು. ಹೀಗಾಗಿ ಕೋಣೆಯ ಅಲಂಕಾರಕ್ಕೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ. ಆದರೆ ಇಂದು ಮನೆಗೆ ಬರುವ ಅತಿಥಿಗಳಿಗೆ ನೇರವಾಗಿಯೇ ಕಾಣುವಂತೆ ತೆರೆದ ಅಡುಗೆ ಮನೆಗಳನ್ನು ನಿರ್ವಿುಸಲಾಗುತ್ತಿದೆ. ಹೀಗಾಗಿ ಈಗ ಮನೆಯ ಇತರ ಭಾಗಗಳಿಗಿಂತ ಅಡುಗೆ ಮನೆಗೆ ಹೆಚ್ಚು ಪ್ರಾಶಸ್ಱ ನೀಡಲಾಗುತ್ತಿದೆ.
ಮನೆ ಚಿಕ್ಕದಿರಲಿ, ದೊಡ್ಡದಿರಲಿ ಒಳಗೆ ಪ್ರವೇಶಿಸುತ್ತಲೇ ಅಡುಗೆ ಕೋಣೆ ಕಾಣಿಸಬೇಕು. ಹೀಗಾಗಿ ಅಡುಗೆ ಕೋಣೆಗೆ ಆಕರ್ಷಕ ಕಪಾಟುಗಳು ಹಾಗೂ ಸಜ್ಜೆಗಳನ್ನು ನಿರ್ವಿುಸಲಾಗುತ್ತಿದೆ. ಧಾನ್ಯಗಳು, ಮಸಾಲೆ ಪದಾರ್ಥಗಳು, ಪಾತ್ರೆಗಳು ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಕಪಾಟುಗಳು ಬಂದಿವೆ.
ಅಡುಗೆ ಬೇಯಿಸುವ ಒಲೆ ಕೂಡ ಸಜ್ಜೆಯೊಳಗೆ ಮರೆಯಾಗುವ ರೀತಿಯಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಇದರ ಜತೆಗೆ ಸರಿಯಾದ ವೆಂಟಿಲೇಷನ್, ಕಿಟಕಿ ಮತ್ತು ಎಕ್ಸಾಸ್ಟ್ ಫ್ಯಾನ್, ಚಿಮಣಿ ಅಳವಡಿಸಿದರೆ ಮತ್ತಷ್ಟು ಮೆರಗು. ಇದರಿಂದ ಅಡುಗೆ ಕೋಣೆಗೆ ಗಾಳಿ ಬೆಳಕು ಸಹ ಸಹಜವಾಗಿ ಹೆಚ್ಚಲಿದೆ. ಇವೆಲ್ಲವುಗಳಿಂದ ಅಡುಗೆ ಕೋಣೆಗಳ ಆಕರ್ಷಣೆಗೆ ಅದ್ಯತೆ ಹೆಚ್ಚಿದೆ.
ಆದರೆ ಕೆಲವರಿಗೆ ಇದು ಇಷ್ಟವಿಲ್ಲ. ಮನೆಗೆ ಬರುವ ಅತಿಥಿಗಳಿಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುವುದು ನೇರವಾಗಿ ಕಾಣಿಸುತ್ತದೆ. ಕೊಳಕಾದ ಪಾತ್ರೆಗಳು, ಗೋಡೆಗಳ ಮೇಲೆ ಎಣ್ಣೆ ಜಿಡ್ಡಿನ ಕಲೆಗಳು, ಪಾತ್ರೆಗಳು ನೇರವಾಗಿ ಕಾಣಿಸುತ್ತದೆ ಎಂಬ ಕಾರಣಕ್ಕೆ. ಆದರೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವವರು ಆಕರ್ಷಕ ವಿನ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.
ತಮ್ಮ ಮನೆಗೆ ತೆರೆದ ಅಡುಗೆ ಕೋಣೆ ನಿರ್ವಿುಸಿರುವ ಕವಿತಾ ಹೇಳುವಂತೆ, ಅಡುಗೆ ಕೋಣೆ ಪ್ರತ್ಯೇಕವಾಗಿದ್ದರೆ ದಿನವಿಡೀ ಒಬ್ಬರೇ ಕೆಲಸ ಮಾಡಬೇಕು. ಇದರಿಂದ ಮನೆಯವರೊಂದಿಗೆ ಬೆರೆಯಲು ಹೆಚ್ಚು ಸಮಯ ಸಿಗುವುದಿಲ್ಲ. ಆದರೆ ತೆರೆದ ಅಡುಗೆ ಕೋಣೆಯಲ್ಲಿ ಮನೆಯವರೊಂದಿಗೆ ಮಾತನಾಡುತ್ತಲೇ ಕೆಲಸ ಮಾಡಬಹುದು. ಮಕ್ಕಳ ಓದಿನ ಕಡೆಗೂ ಗಮನ ಹರಿಸಬಹುದು. ಯಾರೂ ಇಲ್ಲದ ಸಂದರ್ಭದಲ್ಲಿ ಟಿವಿ ನೋಡುತ್ತ ಅಡುಗೆ ಮಾಡಬಹುದು.
ಅತಿಥಿಗಳು ಬಂದರೆ ಅವರೊಂದಿಗೆ ಹರಟುತ್ತಲೇ ಕೆಲಸ ಮುಂದುವರೆಸಬಹುದು. ಅಲ್ಲದೆ ಕೋಣೆ ನೇರವಾಗಿ ಎಲ್ಲರಿಗೂ ಕಾಣಿಸುವುದರಿಂದ ಅದರ ಸ್ವಚ್ಛತೆ ಕಡೆ ಗಮನ ಹರಿಸಲು ಸಾಧ್ಯ. ಇಲ್ಲಿಂದ ಡೈನಿಂಗ್ ಹಾಲ್ಗೆ ಸುಲಭವಾಗಿ ಅಡುಗೆ ಸಾಮಗ್ರಿಗಳನ್ನು ಒಯ್ಯಬಹುದಾಗಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ದಿನೇ ದಿನೇ ತೆರೆದ ಅಡುಗೆ ಮನೆ ಪರಿಕಲ್ಪನೆ ಜನಪ್ರಿಯವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಅಕರ್ಷಕ ವಿನ್ಯಾಸಗಳು ಲಭ್ಯವಿದೆ. ಮನೆಯ ಎಲ್ಲ ಭಾಗಗಳಿಗಿಂತ ಅಡುಗೆ ಕೋಣೆ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಇವುಗಳ ಕಡೆಗೆ ಗಮನವಿರಲಿ
ತೆರೆದ ಅಡುಗೆ ಕೋಣೆ ನಿರ್ವಿುಸುವಾಗ ಗೋಡೆಗಳಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಮಾಡುವ ಸ್ಥಳ, ಪಾತ್ರೆಗಳನ್ನಿಡುವ ಸ್ಥಳ ಎಲ್ಲೆಲ್ಲಿ ಇರಬೇಕು, ಕಪಾಟುಗಳಿಗೆ ಹೊಂದುವ ಗೋಡೆಗಳ ಟೈಲ್ಸ್, ಫ್ಲೋರಿಂಗ್, ಬೆಳಕಿನ ವ್ಯವಸ್ಥೆ ಈ ಎಲ್ಲದರ ಬಗ್ಗೆ ಗಮನಹರಿಸಬೇಕು. ಹಾಗೆಯೇ ಪದಾರ್ಥಗಳನ್ನು ಸಂಗ್ರಹಿಸಿಡುವ ಪರಿಕರಗಳು, ಕಾಫಿ ಕಪ್ಸ್, ನೀರಿನ ಜಗ್ ಹೀಗೆ ಪ್ರತಿಯೊಂದು ಪರಿಕರಗಳ ಆಯ್ಕೆಯ ಬಗ್ಗೆಯೂ ಎಚ್ಚರವಹಿಸಬೇಕು.
| ಪಂಕಜ ಕೆ.ಎಂ.