

ಜೀವನ ಎಂದರೆ ಸಾವಿಗಾಗಿ ಸುದೀರ್ಘ ತಯಾರಿ! ಇದು ಅನುಭಾವಿಯೊಬ್ಬನ ವ್ಯಾಖ್ಯಾನ. ಹೌದಲ್ಲವೆ, ನಾವೆಲ್ಲ ಬದುಕಬೇಕು ಎಂದು ಒದ್ದಾಡುತ್ತೇವೆ, ಹೆಣಗಾಡುತ್ತೇವೆ, ಏನೇನೋ ಕಸರತ್ತು ಮಾಡುತ್ತೇವೆ. ಆದರೆ ಕೊನೆಗೊಂದು ದಿನ ಸಾವಿನೆದುರು ಮಂಡಿಯೂರಲೇಬೇಕು. ಇದೆಂಥ ಚೋದ್ಯ! ಸೃಷ್ಟಿಯ ರಹಸ್ಯ!
‘ಅಷ್ಟಕ್ಕೂ ಜೀವನ ಎಂದರೇನು? ನಾವು ಜನಿಸುತ್ತೇವೆ, ಸ್ವಲ್ಪ ಕಾಲ ಇಲ್ಲಿರುತ್ತೇವೆ, ನಂತರ ಸಾಯುತ್ತೇವೆ’ ಎಂದು ಸರಳವಾಗಿ ವಿವರಿಸಲೆತ್ನಿಸುತ್ತಾನೆ, ಅಮೆರಿಕನ್ ಬರಹಗಾರ ಇ.ಬಿ.ವೈಟ್. ಜೀವನವನ್ನು ಕಬ್ಬಿಣದ ಕಡಲೆಯಾಗಿ ತೆಗೆದುಕೊಂಡರೆ ಗಟ್ಟಿಯೇ. ಹತ್ತಿಯಂತೆ ತೆಗೆದುಕೊಂಡರೆ ಅಷ್ಟೇ ಹಗುರ. ಲೈಫು ಇಷ್ಟೇನೆ!
‘ಮೃತರು ನಿಜವಾಗಿ ಮೃತರಲ್ಲ. ಆದರೆ ನಾವು ಎಂದು ಅವರನ್ನು ಮರೆಯುವೆವೋ ಆಗ ಅದು ಅವರ ನಿಜವಾದ ಸಾವು’ ಎಂದು ಮಾನವ ಸಂಬಂಧದ ಮಜಲನ್ನು ಮತ್ತೊಂದು ಎತ್ತರಕ್ಕೆ ಒಯ್ಯುತ್ತಾಳೆ, ಜಾರ್ಜ್ ಎಲಿಯಟ್ (ಮೇರಿ ಆನ್ ಇವಾನ್ಸ್) ಎಷ್ಟು ಖರೆ ಅಲ್ಲವೆ? ನಿಜ, ಯಾರು ಮೃತಪಟ್ಟರೂ ಅವರ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತ ಬಳಗ ಇವರೆಲ್ಲ ಹೆಚ್ಚೆಂದರೆ ಸ್ಮಶಾನದವರೆಗೆ ಬರಬಲ್ಲರು. ಅದಕ್ಕೂ ಮೀರಿ ಅವರು ಏನೂ ಮಾಡಲಾಗದು. ಆದರೆ ಅಗಲಿದವರನ್ನು ಸದಾ ಎದೆಯಲ್ಲಿಟ್ಟುಕೊಂಡರೆ ಅದುವೇ ನಿಜವಾದ ಸ್ಮರಣೆ. ಪ್ರೀತಿಪಾತ್ರರು ಬಹುಬೇಗ ತಮ್ಮನ್ನು ಮರೆತುಬಿಟ್ಟರೆ ಅಗಲಿದವರ ಆತ್ಮ ಕೊರಗುತ್ತದೆಯೇನೋ...
‘ಕೆಲವರು 25ನೇ ವಯಸ್ಸಿನಲ್ಲಿಯೇ ಸಾವನ್ನಪು್ಪತ್ತಾರೆ. ಆದರೆ 75ನೇ ವಯಸ್ಸಿನವರೆಗೂ ಅವರ ಅಂತ್ಯಕ್ರಿಯೆ ನಡೆಯುವುದಿಲ್ಲ’ ಎನ್ನುವ ಮೂಲಕ, ಮೃತರ ನೆನಪನ್ನು ಹೇಗೆ ಎದೆಯಲ್ಲಿ ಜತನವಾಗಿ ಕಾಪಿಟ್ಟುಕೊಳ್ಳಬೇಕೆಂಬುದನ್ನು ಪರೋಕ್ಷವಾಗಿ ತಿಳಿಸುತ್ತಾನೆ ಬೆಂಜಮಿನ್ ಫ್ರಾಂಕ್ಲಿನ್. ಜಾರ್ಜ್ ಎಲಿಯಟ್ ಮಾತನ್ನು ಇದು ಹೋಲುತ್ತದೆ. ಹಾಗೆಂದೇ ಕೆಲವರು ನೂರಾರು ವರ್ಷಗಳಾದರೂ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿರುತ್ತಾರೆ. ಇಂಥವರ ಬಗ್ಗೆ, ‘ಛೆ, ಅವನು ಇಷ್ಟು ಬೇಗ ಹೋಗಬಾರದಿತ್ತು’ ಎಂಬ ಮಾತು ಕೇಳಿಬರುತ್ತಲೇ ಇರುತ್ತದೆ. ಸಾವಿಗೆ ಸಾರ್ಥಕತೆ ದಕ್ಕುವುದು ಹೀಗೆ.
‘ಸಾವು ಎಂದರೆ, ನೀನು ಹುಟ್ಟುವುದಕ್ಕೆ ಮುನ್ನ ಯಾವ ಸ್ಥಿತಿಯಲ್ಲಿದ್ದೆಯೋ ಆ ಸ್ಥಿತಿಗೆ ಹೋಗುವುದು’ ಎನ್ನುತ್ತಾನೆ ಇನ್ನೊಬ್ಬ ತತ್ತ್ವಜ್ಞಾನಿ. ಈ ಸತ್ಯವನ್ನು ಅರಿಯುವುದಕ್ಕೆ ನಮ್ಮ ಭಾರತೀಯ ಪರಂಪರೆ ಒತ್ತುನೀಡಿದೆ. ಇಡೀ ಬದುಕನ್ನೇ ಈ ಸತ್ಯಶೋಧನೆಗೆ ಮುಡುಪಿಟ್ಟವರ ದೊಡ್ಡ ಯಾದಿಯೇ ಭಾರತದಲ್ಲಿ ಸಿಗುತ್ತದೆ. ಎಷ್ಟೆಂದರೆ, ಲೌಕಿಕ ಬದುಕನ್ನೇ ಇವರು ಸಾರಾಸಗಟಾಗಿ ಬೇಡವೆಂದವರು.
ಒಬ್ಬ ವ್ಯಕ್ತಿ ತಾನೇ ಭೌತಿಕವಾಗಿ ಸಾಯಬೇಕೆಂದಿಲ್ಲ. ಮಾನಸಿಕವಾಗಿಯೂ ಜಡವಾಗಬಹುದು. ‘ಸ್ನೇಹಿತನೊಬ್ಬ ತೀರಿಕೊಂಡರೆ ನೀನು ಕೂಡ ಸತ್ತಂತೆಯೇ ಸರಿ’ ಎಂದು ಗೆಳೆತನದ ಬಾಂಧವ್ಯದ ಪರಿಯನ್ನು ಕಟ್ಟಿಕೊಡುತ್ತಾನೆ, ಫ್ರೆಂಚ್ ಕಾದಂಬರಿಕಾರ ಗಸ್ಟೋವ್ ಫ್ಲಾಬರ್ಟ್. ಅಂದರೆ ನಮ್ಮ ಆತ್ಮಸಂಗಾತಿಗಳು ಸಾವನ್ನಪ್ಪಿದರೂ ನಾವು ಕೂಡ ಮೃತರಾದಂತೆ. ‘ಎರಡು ದೇಹ ಒಂದು ಮನಸು’ ಎನ್ನುವ ಪರಿಕಲ್ಪನೆಗೆ ಇದು ಹೊಂದಿಕೆಯಾಗುತ್ತದೆ. ಕುಚಿಕು ಗೆಳೆಯರು ದೂರದಲ್ಲಿದ್ದರೂ ಹತ್ತಿರದಲ್ಲಿದ್ದಂತೆ ಭಾಸವಾಗುತ್ತಾರೆ. ಅವರು ಶಾಶ್ವತವಾಗಿ ದೂರವಾದರೆ ನಮಗೂ ಅಸ್ತಿತ್ವವಿಲ್ಲ ಎನ್ನುವುದು ಗೆಳೆತನದ ಅದ್ಭುತ ಭಾಷ್ಯ.
ಎಲ್ಲೋ ಕೆಲ ಅಪವಾದಗಳನ್ನು ಹೊರತುಪಡಿಸಿದರೆ, ಜಗತ್ತಿನ ಬಹುತೇಕ ಎಲ್ಲ ಜನಸಮುದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಅದರಲ್ಲೂ ಹಿಂದೂ ಧರ್ಮ ಸಾವನ್ನು ಬೇರೆಯದೇ ಬಗೆಯಲ್ಲಿ ವ್ಯಾಖ್ಯಾನಿಸುತ್ತದೆ. ಭಗವಾನ್ ಶ್ರೀಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನಲ್ಲ-ಆತ್ಮ ಅವಿನಾಶೀ. ಅದನ್ನು ಶಸ್ತ್ರದಿಂದಲೂ ಕತ್ತರಿಸಲಾಗದು ಅಂತ. ‘ಬಟ್ಟೆ ಹೊಲಸಾದಾಗ ಅಥವಾ ಹಾಳಾದಾಗ ಅದನ್ನು ತೆಗೆದು ಬೇರೆ ಬಟ್ಟೆ ಧರಿಸುತ್ತೇವೆ. ಅದೇ ರೀತಿ, ಆಯುಷ್ಯ ತೀರಿದ ಮೇಲೆ ದೇಹವನ್ನು ತ್ಯಜಿಸಿ ಆತ್ಮ ಬೇರೆ ದೇಹವನ್ನು ಆಶ್ರಯಿಸುತ್ತದೆ’ ಎಂದು ಪ್ರಾಜ್ಞರು ಹೇಳುತ್ತಾರೆ. ಹಾಗೆಂದೇ ಆತ್ಮಾನುಭವಕ್ಕೆ ನಮ್ಮ ಪರಂಪರೆಯಲ್ಲಿ ಅತೀವ ಮಹತ್ವ ಕೊಡಲಾಗಿದೆ. ಹೀಗೆ ಆತ್ಮವನ್ನು ಅರಿತವನು ಸೃಷ್ಟಿಯ ಮೂಲತತ್ವವನ್ನು ಅರಿತಂತೆಯೇ ಸರಿ.
ಮಾನವನ ಬದುಕನ್ನು ಪ್ರಯಾಣಕ್ಕೂ ಹೋಲಿಸಲಾಗುತ್ತದೆ. ಬಸ್ ಅಥವಾ ರೈಲಿನಲ್ಲಿ ಹೋಗುವಾಗ ನಮ್ಮ ನಮ್ಮ ಸ್ಟಾಪ್ ಬಂದಾಗ ಇಳಿಯುತ್ತೇವೆ. ನಂತರ ಬಸ್ ಮುಂದೆ ಸಾಗುತ್ತದೆ. ಸ್ವಲ್ಪ ದೂರ ಹೋದಮೇಲೆ ಮತ್ಯಾರೋ ಇಳಿಯುತ್ತಾರೆ. ಬಸ್ ಮುಂದೆ ಹೋಗುತ್ತದೆ. ಬಳಿಕ ಇನ್ಯಾರೋ ಇಳಿಯುತ್ತಾರೆ... ಹೀಗೆ ಬಸ್ ತನ್ನ ಗಮ್ಯ ಸೇರುವವರೆಗೆ ಈ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಈಶ ಫೌಂಡೇಷನ್ ಸ್ಥಾಪಕ, ಆಧ್ಯಾತ್ಮಿಕ ಮಾರ್ಗದರ್ಶಕ ಸದ್ಗುರು ಅವರು ಆಗಾಗ ಹೇಳುತ್ತಿರುತ್ತಾರೆ- ಸಾವಿನ ಭಯ ಹೋಗಬೇಕು ಎಂದಾದಲ್ಲಿ ಸ್ಮಶಾನಕ್ಕೆ ಹೋಗಬೇಕು ಅಂತ! ಹೌದು, ಸ್ಮಶಾನ ಎಂದರೆ ಅದು ಬೇರೆಯದೇ ಲೋಕ. ಅಲ್ಲಿ ನಗೆಗೆ ಜಾಗವಿಲ್ಲ, ಅಳು, ಆಕ್ರಂದನವೇ ಅಲ್ಲಿ ಆಳ್ವಿಕೆ ನಡೆಸುತ್ತಿರುತ್ತದೆ. ಆದರೆ ಒಂದಿಲ್ಲೊಂದು ದಿನ ಎಲ್ಲರೂ ಅಲ್ಲಿಗೆ ಹೋಗಲೇಬೇಕು. ಹರಿಶ್ಚಂದ್ರನಂತಹ ರಾಜನೇ ಸಂದರ್ಭದ ಶಿಶುವಾಗಿ ಸ್ಮಶಾನ ಕಾಯಬೇಕಾದ ಸ್ಥಿತಿ ಬಂದಿತ್ತಲ್ಲವೆ?
ಎಷ್ಟೋ ಜನರು ಜೀವನದ ಜಂಜಡಗಳಿಂದ, ಸಮಸ್ಯೆ ಗಳಿಂದ ಬೇಸತ್ತು ಕೊನೆಗೊಮ್ಮೆ ಈ ಜೀವನವೇ ಬೇಡ ಎಂದು ನಿರ್ಧರಿಸಿಬಿಡುತ್ತಾರೆ. ಆತ್ಮಹತ್ಯೆಗೆ ಮುಂದಾಗುತ್ತಾರೆ. ಆದರೆ ಹೀಗೆ ಸಾಯಲು ಹೊರಟವರಲ್ಲಿ ಎಷ್ಟೋ ಜನರು ಕೊನೇ ಘಳಿಗೆಯಲ್ಲಿ ಮನಸ್ಸು ಬದಲಾಗಿಯೋ ಅಥವಾ ಸಾಯಲು ಹೆದರಿಕೆಯಾಗಿಯೋ ವಾಪಸ್ ಬಂದುಬಿಡುತ್ತಾರೆ. ಹಾಗಿಲ್ಲವಾದಲ್ಲಿ ನಮ್ಮಲ್ಲಿ ಆತ್ಮಹತ್ಯೆಗಳ ಸಂಖ್ಯೆ ಇನ್ನೂ ಹೆಚ್ಚಿಗೆ ಇರುತ್ತಿತ್ತು. ‘ಆತ್ಮಹತ್ಯೆ ಮಹಾಪಾಪ’ ಎಂದು ಮಾತಿದೆ. ಅಂದರೆ, ಇದರಿಂದ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ ಎಂಬುದು ಒಂದು ದೃಷ್ಟಿಕೋನ. ಇನ್ನೊಂದು, ಹೀಗೆ ಮಾಡಿಕೊಂಡಲ್ಲಿ ಮತ್ತೆ ಜನಿಸಿ ಬರಬೇಕಾಗುತ್ತದೆ ಎನ್ನುತ್ತದೆ ಭಾರತೀಯ ಸಿದ್ಧಾಂತ.
ರಾಜ್ಯಶಾಸ್ತ್ರದ ಕುರಿತು ಸಾರ್ವಕಾಲಿಕ ಸಿದ್ಧಾಂತಗಳನ್ನು ನೀಡಿದ ಆಚಾರ್ಯ ಚಾಣಕ್ಯ, ‘ವ್ಯಕ್ತಿ ತನ್ನ ಕಾರ್ಯಗಳಿಂದ ಶ್ರೇಷ್ಠನೆನಿಸಿಕೊಳ್ಳುತ್ತಾನೆಯೇ ಹುಟ್ಟಿನಿಂದ ಅಲ್ಲ’ ಎನ್ನುವ ಮೂಲಕ, ಮಾನವ ಸಾಧನೆಗೆ ಹೆಣಗಬೇಕು, ತುಡಿಯಬೇಕು ಎನ್ನುವ ಸಂದೇಶ ನೀಡುತ್ತಾನೆ, ‘ಒಬ್ಬ ವ್ಯಕ್ತಿ ಒಂದು ಆದರ್ಶಕ್ಕಾಗಿ ಸಾಯಬಹುದು. ಆದರೆ ಆತನ ಸಾವಿನ ನಂತರ ಆ ಆದರ್ಶವು ಸಾವಿರಾರು ಜನರೆದೆಯಲ್ಲಿ ಮರುಹುಟ್ಟು ಪಡೆಯುತ್ತದೆ’ ಎನ್ನುತ್ತಾರೆ ಸುಭಾಷ್ ಚಂದ್ರ ಬೋಸ್. ಖುದ್ದು ಬೋಸ್ ಅವರೇ ಇದಕ್ಕೊಂದು ಮಹಾನಿದರ್ಶನವಾಗಿದ್ದರು. ಹೀಗೆಂದೇ, ಭಗತ್ ಸಿಂಗ್ರಂಥವರ ಹೆಸರು ಈಗಲೂ ನಮ್ಮನ್ನು ಪ್ರಭಾವಿತಗೊಳಿಸುತ್ತದೆ; ಆದರ್ಶ ಸಾಧನೆಗೋಸ್ಕರ ಅವರು ತೋರಿದ ಧೈರ್ಯ, ಮಾಡಿದ ತ್ಯಾಗ ಸದಾ ನಮ್ಮ ಮನಸಲ್ಲಿ ನೆಲೆಸಿರುತ್ತದೆ. ಇತಿಹಾಸದಲ್ಲಿ ಇಂಥ ಸಾವಿರ ಸಾವಿರ ಹೆಸರುಗಳಿವೆ. ‘ನನ್ನ ಕೆಚ್ಚು, ಧೈರ್ಯವನ್ನು ಸಾಬೀತುಪಡಿಸುವ ಮುನ್ನವೇ ಸಾವೇನಾದರೂ ಬಂದುನಿಂತರೆ ಆ ಸಾವನ್ನೇ ಸಾಯಿಸಿಬಿಡುತ್ತೇನೆ’ ಎಂದು ಗುಡುಗಿದ್ದರು ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ. ಹೇಳಿದಂತೆ ನಡೆದುಕೊಂಡ ಇವರು, ಕಾರ್ಗಿಲ್ ಸಮರ ಕಾಲದಲ್ಲಿ ಕೆಚ್ಚೆದೆ ಪ್ರದರ್ಶಿಸಿ, ಹುತಾತ್ಮರಾದರು. ಆಗ ಅವರ ವಯಸ್ಸು ಕೇವಲ 24! ಈ ಕಲಿತನಕ್ಕೆ ಸಲಾಂ ಎನ್ನದೆ ಇರಲು ಸಾಧ್ಯವೇ?
ಸೈನಿಕರಿಗೆ ಇಂಥದೊಂದು ದಿಟ್ಟತನ, ಕೆಚ್ಚು ಸಹಜವಾಗಿಯೇ ಬಂದಿರುತ್ತದೆಯೇನೋ. ಅವರಿಗೆ ನೀಡಲಾಗುವ ತರಬೇತಿ ಸಹ ಹಾಗೇ ಇರುತ್ತದೆಯೆನ್ನಿ. ಸಾವಿಗೆ ಇವರು ಹೆದರುವವರೇ ಅಲ್ಲ. ಹಾಗಿಲ್ಲವಾದಲ್ಲಿ, ಹೆಸರು ಕೇಳಿದರೆ ಸಾಕು, ಬೆನ್ನಿನಲ್ಲಿ ನಡುಕ ಹುಟ್ಟಿಸುವಂಥ ಗಲ್ವಾನ್ ಕಣಿವೆ; ಹಿಮಕೊರೆಯುವ ಮತ್ತು ಯಾವ ಹೊತ್ತಿನಲ್ಲಿ ಉಗ್ರರು ಮರಾಮೋಸದಿಂದ ಒಳನುಸುಳುತ್ತಾರೋ ಎಂದು ಜಾಗೃತರಾಗಿ ಕಾವಲು ಕಾಯಬೇಕಾದ ಕಾಶ್ಮೀರದ ಗಡಿಗಳಲ್ಲಿ ಒಂಟಿಯಾಗಿ ಬಂದೂಕು ಹೆಗಲೇರಿಸಿಕೊಂಡು ನಿಲ್ಲುವುದೆಂದರೆ ಹುಡುಗಾಟವಾ? ಎದೆಯಲ್ಲಿ ಕುಟುಂಬದವರ ಚಿತ್ರವನ್ನು ಬಚ್ಚಿಟ್ಟುಕೊಂಡು, ಕರ್ತವ್ಯಕ್ಕೆ ಓಗೊಟ್ಟು ನಿಲ್ಲುವ ಎದೆಗಾರಿಕೆ ಗಳಿಸುವುದು ಸುಮ್ಮನೆ ಆಗುವ ಕೆಲಸವಲ್ಲ.
ಜನನ-ಮರಣ ಎಂಬುದು ಒಂದು ಚಕ್ರವಿದ್ದಂತೆ ಎಂಬುದು ಭಾರತೀಯ ಸಿದ್ಧಾಂತ. ಮೋಕ್ಷ ದೊರೆಯುವವರೆಗೆ ತನ್ನ ತನ್ನ ಕರ್ವನುಸಾರ ಈ ಜಗತ್ತಿಗೆ ಬರುತ್ತಲೇ ಇರಬೇಕಾಗುತ್ತದೆ. ಹೀಗಾಗಿ ನಮ್ಮ ಋಷಿಮುನಿಗಳು ಜೀವನಕ್ಕೆ ಕೊಟ್ಟ ಪ್ರಾಮುಖ್ಯವನ್ನು ಸಾವಿನ ನಂತರದ ವಿಚಾರಕ್ಕೂ ನೀಡಿದರು. ಮೋಕ್ಷಕ್ಕೇ ಹೆಚ್ಚು ಪ್ರಾಧಾನ್ಯವಿತ್ತರು. ಪುನರ್ಜನ್ಮವನ್ನು ನಾವು ನಂಬುವುದರಿಂದ, ಮಾನವನಾಗಿ ಜನಿಸಿದ ಮೇಲೆ ಅರಿವಿನಿಂದ, ತಿಳಿವಳಿಕೆಯಿಂದ ಕಾರ್ಯಮಾಡಬೇಕು. ಈ ಜನ್ಮವನ್ನು ಮೋಕ್ಷಸಾಧನೆಗೆ ಬಳಸಿಕೊಳ್ಳಬೇಕು ಎಂಬುದು ಜ್ಞಾನಿಗಳ ಕಿವಿಮಾತು. ಶಂಕರಾಚಾರ್ಯರು ‘ಪುನರಪಿ ಜನನಂ ಪುನರಪಿ ಮರಣಂ...’ ಎಂದು ಈ ಸಿದ್ಧಾಂತವನ್ನು ಸ್ಪಷ್ಟವಾಗಿ ಸಾರಿದರು.
‘ಜನ್ಮವೂ ದುಃಖ, ಮುಪ್ಪೂ ದುಃಖ, ಮರಣವೂ ದುಃಖ. ಇದನ್ನು ಪುನಃ ಪುನಃ ಒದಗಿಸುವ ವಿಷಯವಾಸನೆಯೂ ದುಃಖವೇ. ವಿವೇಕಿಗಳಿಗೆ ಎಲ್ಲವೂ ದುಃಖರೂಪಗಳೇ ಸರಿ. ‘ಮುಕ್ತಿ ಬೇಕಾದರೆ ವಿಷಯಗಳನ್ನು ವಿಷದಂತೆ ತ್ಯಜಿಸು’ ಎಂಬ ಉಕ್ತಿಯಿದೆ. ಇದರಿಂದ ಸಂಸಾರ, ಜನನ-ಮರಣಗಳ ನಿವೃತ್ತಿಯಾಗಿ ಶಾಶ್ವತವಾದ ಸುಖವು ಸಿಗುತ್ತದೆ. ಅದೇ ಮುಕ್ತಿ’ ಎಂದು ವಿವರಿಸಿದ್ದಾರೆ, ವರದಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳು. ‘ಯಾರು ದೇವರಿಗಾಗಿ ಸದಾಕಾಲ ಪರಿತಪಿಸುವರೋ ಅವರ ಜೀವನ ಧನ್ಯ’ ಎಂದು ಜೀವನದ ಆಧ್ಯಾತ್ಮಿಕ ಆಯಾಮವನ್ನು ತೆರೆದಿಡುತ್ತಾರೆ ಗುರು ಗೋವಿಂದ ಸಿಂಹ. ದೇವರ ಸಾಕ್ಷಾತ್ಕಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸಾವಿರ ಸಾವಿರ ಮಹಾಪುರುಷರನ್ನು, ಆಧ್ಯಾತ್ಮಿಕ ಸಾಧಕರನ್ನು ಭಾರತ ಕಂಡಿದೆ. ‘ಇರುವುದೊಂದೇ ಜೀವನ, ಅದನ್ನು ಮನಸ್ಸು ತೃಪ್ತಿಯಾಗುವಷ್ಟು ಅನುಭವಿಸು’ಎಂಬ ಲೌಕಿಕ ಸಿದ್ಧಾಂತಕ್ಕೆ ವ್ಯತಿರಿಕ್ತವಾದುದು ನಮ್ಮ ಪರಂಪರೆ.
ನಾವು ಚಿಕ್ಕವರಿದ್ದಾಗ ಒಂದು ಕ್ಯಾಲೆಂಡರ್ ಬರುತ್ತಿತ್ತು. ಅದರಲ್ಲಿ ಯಾವ ತಪು್ಪ ಮಾಡಿದರೆ ನರಕದಲ್ಲಿ ಯಾವ ಶಿಕ್ಷೆ ಎಂಬುದನ್ನು ಚಿತ್ರದ ಮೂಲಕ ಹೇಳುತ್ತಿದ್ದರು. ಕಾದ ಎಣ್ಣೆಯಲ್ಲಿ ಸುಡುವುದು, ಅಂಗಛೇದನ ಹೀಗೆ ವಿವಿಧ ಶಿಕ್ಷೆಗಳನ್ನು ಅದರಲ್ಲಿ ಚಿತ್ರಿಸಲಾಗುತ್ತಿತ್ತು. ಅದನ್ನು ನೋಡಿದಾಗ ಒಂದು ರೀತಿಯ ಭಯ ಆವರಿಸುತ್ತಿತ್ತಾದರೂ, ತಪು್ಪ ಮಾಡಿದರೆ ಶಿಕ್ಷೆ ತಪ್ಪದೆಂಬ ಸಂದೇಶ ಗಟ್ಟಿಯಾಗಿ ಮನಸಲ್ಲಿ ಅಚ್ಚೊತ್ತುತ್ತಿತ್ತು. ‘ಹುಟ್ಟು ಮತ್ತು ಸಾವು ಎರಡೂ ಪ್ರಮುಖವಾದುದು; ಅದನ್ನು ವ್ಯರ್ಥಮಾಡಬೇಡಿ’ ಎಂದು ಎಚ್ಚರಿಸುತ್ತಾನೆ, ಬೌದ್ಧ ಸಂನ್ಯಾಸಿ ಬೋಧಿವರ್ಮ. ‘ಮಾನವಜನ್ಮ ದೊಡ್ಡದು ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ಪುರಂದರದಾಸರ ಕಿವಿಮಾತು ಇದನ್ನೇ ಧ್ವನಿಸುತ್ತದೆ.
ಕೊನೇ ಮಾತು: ಸಾವಿನ ಬಗ್ಗೆ ಎಷ್ಟು ತಿಳಿದುಕೊಂಡರೂ, ತಾತ್ವಿಕವಾಗಿ ಮಾತಾಡಿ ದರೂ, ಅದು ಅನಿವಾರ್ಯ ಎಂದು ಗೊತ್ತಿದ್ದರೂ ಕೆಲವು ಸಾವುಗಳನ್ನು ಅರಗಿಸಿ ಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ಈಗಿದ್ದವರು ಈಗಿಲ್ಲ ಎಂದರೆ ಆ ಸತ್ಯವನ್ನು ಭರಿಸುವುದಾದರೂ ಹೇಗೆ? ಸಾವನ್ನು ಜಯಿಸಲಾಗದು. ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತರಲಾಗದು. ಅಗಲಿದವರನ್ನು ಎದೆಯಲ್ಲಿಟ್ಟುಕೊಂಡು, ಅವರ ನೆನಪಿನದೀಪ ಆರದಂತೆ ನೋಡಿಕೊಂಡು ಹೋಗುವುದಷ್ಟೇ ಮನುಜನ ಎದುರು ಇರುವ ದಾರಿ.
‘ಜನನ, ಮರಣ, ತಾಯಿಯ ಉದರದಲ್ಲಿ ವಾಸ... ಇವು ಪುನಃ ಪುನಃ ಬರುತ್ತಿರುತ್ತವೆ. ಹೇ ಮುರಾರಿ, ಕೃಪೆದೋರಿ ನನ್ನನ್ನು ದುಸ್ತರವಾದ ಮತ್ತು ಪಾರವಿಲ್ಲದ ಸಂಸಾರಸಾಗರದಿಂದ ರಕ್ಷಿಸು’. ನಮ್ಮ ಬದುಕು ಕೇವಲ ಸಾವಯವ ಸ್ತರಕ್ಕೆ ಸೀಮಿತವಾಗಬಾರದು ಎಂದು ಎಚ್ಚರಿಸುವ ಶ್ರೀ ಶಂಕರ ಭಗವತ್ಪಾದರು ಮತ್ತೆ ಮತ್ತೆ ಜನಿಸಿ ಬಂದು ಅದೇ ಲೌಕಿಕ ಮತ್ತು ಯಾಂತ್ರಿಕವಾದ ಕೆಲಸವನ್ನೇ ಮಾಡುತ್ತಿದ್ದರೆ ನಾವು ಸೀಮಿತ ಜೀವನಕ್ಕೆ ಒಳಪಡುತ್ತೇವೆಂದು ಎಚ್ಚರಿಸುತ್ತಾರೆ. ಲೌಕಿಕ ಜೀವನವು ಅತಿಯಾದ ಹೊಂದಾಣಿಕೆ ಮಾಡಿಕೊಂಡು ಬದುಕಲು ಉತ್ತೇ ಜಿಸುತ್ತದೆಯಾದ್ದರಿಂದ ಅದರಲ್ಲಿ ಸ್ವಾರಸ್ಯವೂ ಇರದು. ಇತಿ-ಮಿತಿಗಳು ಇಲ್ಲದ ಸ್ಥಿತಿಯೇ ಮುಕ್ತಿ. ಶತಕೋಟಿ ಜನ್ಮಗಳ ಪುಣ್ಯವಿಲ್ಲದೆ ಮುಕ್ತಿ ದೊರಕದು. ಸಂಸಾರ ಬಂಧನವನ್ನು ಹೋಗಲಾಡಿಸಲು, ಅಜ್ಞಾನವನ್ನು ನಾಶಮಾಡಲು ಬ್ರಹ್ಮವಿದ್ಯೆಯ ಮೊರೆ ಹೋಗಬೇಕು. ಬ್ರಹ್ಮಜ್ಞಾನಿಯ ಸಕಲ ಕಾಮನೆಗಳೂ ಇಚ್ಛಾಮಾತ್ರದಿಂದ ಸಾಕಾರಗೊಳ್ಳುತ್ತವೆ... ಎಂಬುದೇ ಶಂಕರರ ಸಂದೇಶ.
| ಸ್ವಾಮಿ ವೀರೇಶಾನಂದ ಸರಸ್ವತೀ ರಾಮಕೃಷ್ಣ-ವಿವೇಕಾನಂದ ಆಶ್ರಮ ತುಮಕೂರು
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)