

ಪ್ರಾಚೀನ ಕಾಲದಲ್ಲಿ ದಾಯ್ ಜನಾಂಗದಲ್ಲಿ ನಮ್ಮ ತೆನಾಲಿ ರಾಮಕೃಷ್ಣ, ಬೀರಬಲ್ರಂತೆ ಐಸು ಮತ್ತು ಐಶಿ ಎಂಬ ಸಹೋದರರು ಚುರುಕು ಬುದ್ಧಿವಂತಿಕೆಗೆ ಹೆಸರಾಗಿದ್ದರು.ಈ ಸಹೋದರರನ್ನು ಕಂಡರೆ ಆ ಊರಿನ ಶ್ರೀಮಂತನೊಬ್ಬನಿಗೆ ಹೊಟ್ಟೆ ಉರಿಯುತ್ತಿತ್ತು. ಏನಾದರೂ ಮಾಡಿ ಇವರನ್ನು ಮೂರ್ಖರನ್ನಾಗಿ ಸೋಲಿಸಬೇಕೆಂಬುದು ಅವನ ಮಹದಾಸೆಯಾಗಿತು. ಒಂದು ದಿನ ಸುತ್ತಲೂ ಸೇರಿದ್ದ ಜನರಿಗೆ, ‘ಇಂದು ನಾನು ಏನಾದರೂ ಮಾಡಿ ಐಶಿಯನ್ನು ಮೂರ್ಖನನ್ನಾಗಿ ಮಾಡಿಯೇ ತೀರುತ್ತೇನೆ’ ಎಂದು ಹೇಳಿ ತನ್ನ ಸೇವಕರಿಗೆ ಅವನನ್ನು ಕರೆದುಕೊಂಡು ಬರುವಂತೆ ಆಜ್ಞಾಪಿಸಿದ. ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಬಂದ ಐಶಿ ಶ್ರೀಮಂತನಿಗೆ ಕೈಮುಗಿದ. ಆಗ ಶ್ರೀಮಂತ, ‘ನೀನು ಈ ಊರಿನಲ್ಲಿ ಎಲ್ಲರಿಗಿಂತ ತುಂಬಾ ಬುದ್ಧಿವಂತನೆಂದು ಹೇಳುತ್ತಾರೆ. ನಾನು ನಿನ್ನನ್ನು ಪರೀಕ್ಷಿಸುತ್ತೇನೆ. ಎಲ್ಲಿ ನನ್ನನ್ನು ಕುರ್ಚಿ ಬಿಟ್ಟು ಏಳುವಂತೆ ಮಾಡು ನೋಡೋಣ’ ಎಂದು ಸವಾಲು ಹಾಕಿದ.
ಐಶಿಗೆ ಗಲಿಬಿಲಿಯಾಯಿತು. ಆದರೆ ಅದನ್ನು ತೋರಗೊಡದೆ ಒಂದು ಕ್ಷಣ ಯೋಚಿಸಿ ಬಹಳ ಭಕ್ತಿಯಿಂದ, ‘ಮಹಾಸ್ವಾಮಿ ನೀವು ಈ ಊರಿಗೆ ಹಿರಿಯರು, ಮೇಲಾಗಿ ಭಾರಿ ಶ್ರೀಮಂತರಲ್ಲದೆ ಮುಖಂಡರೂ ಹೌದು. ಈಗ ತಾವು ಕುಳಿತಿರುವ ಆಸನ ಸಾಮಾನ್ಯವಾದುದಲ್ಲ. ಅದು ಪವಿತ್ರ ಸ್ಥಾನವಾಗಿದೆ. ಇಂತಹ ಪವಿತ್ರವಾದ ಆಸನದ ಮೇಲೆ ಕುಳಿತಿರುವವರ ಜೊತೆ ತಮಾಷೆ ಮಾಡುವುದು ಸಭ್ಯತೆಯಲ್ಲ. ನೀವು ನಿಜವಾಗಿಯೂ ನನ್ನೊಡನೆ ಪಂದ್ಯ ಹೂಡುವುದೇ ಆದರೆ ಇಗೋ ಈ ಕಡೆ ಇರುವ ಕೊನೆಯ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಆಗ ನಿಮ್ಮನ್ನು ನಾನು ಸೋಲಿಸುತ್ತೇನೆಯೋ ಇಲ್ಲವೋ ನೋಡಿ’ ಎಂದ. ಶ್ರೀಮಂತನಿಗೆ ಈ ಮಾತು ನಿಜವೆನ್ನಿಸಿತು. ಅವನು ತಾನು ಕುಳಿತಿರುವ ಆಸನ ಅರಸನ ದೊಡ್ಡ ಸ್ಥಾನವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಅದರ ಮೇಲೆ ಕುಳಿತು ಸವಾಲು ಹಾಕುವುದು ಸರಿಯಲ್ಲ ಎಂದು ಯೋಚಿಸಿ ಕೂಡಲೇ ತಾನು ಕುಳಿತಿದ್ದ ಕುರ್ಚಿಯಿಂದ ಎದ್ದು ಐಶಿ ತೋರಿಸಿದ ಕುರ್ಚಿಯ ಮೇಲೆ ಕುಳಿತುಕೊಂಡು, ‘ಈಗ ನನ್ನ ಸವಾಲಿಗೆ ಏನು ಹೇಳುತ್ತೀಯಾ? ಸೋಲೊಪ್ಪಿಕೊಂಡಿಯಾ?’ ಎಂದು ಪ್ರಶ್ನಿಸಿದನು.
ಅದಕ್ಕೆ ಐಶಿ, ‘ಮಹಾಸ್ವಾಮಿ ನಿಮ್ಮ ಸವಾಲನ್ನು ನಾನು ಸ್ವೀಕರಿಸಿಯೂ ಆಯಿತು. ಅದರಲ್ಲಿ ಜಯಶಾಲಿಯೂ ಆಗಿದ್ದಾಯಿತು. ನೀವು ಕುಳಿತಿದ್ದ ಕುರ್ಚಿಯಿಂದ ನಿಮ್ಮನ್ನು ಈಗಾಗಲೇ ಎಬ್ಬಿಸಿಬಿಟ್ಟಿದ್ದೇನೆ. ಅದನ್ನು ನೀವು ಗಮನಿಸಲಿಲ್ಲವೆಂದು ತೋರುತ್ತದೆ. ಮಹಾಸ್ವಾಮಿ ನಾನಿನ್ನು ಬರುತ್ತೇನೆ’ ಎನ್ನುತ್ತ ಮನೆಗೆ ನಡೆದನು. ಶ್ರೀಮಂತ ಗರ್ವಭಂಗದಿಂದ ಅವಮಾನಿತನಾದನು.ಬುದ್ಧಿವಂತಿಕೆ ದೊಡ್ಡ ಸಂಪತ್ತು. ಬುದ್ಧಿವಂತಿಕೆ, ಜ್ಞಾನ, ಸತ್ಯ ಇಂಥವುಗಳನ್ನೆಲ್ಲ ಪರೀಕ್ಷಿಸುವುದೆಂದರೆ ಗಾಳಿ ಗುದ್ದಿ ಕೈ ನೋಯಿಸಿಕೊಂಡಂತೆ. ಪಾಠ ಕಲಿಸಿ ಪರೀಕ್ಷೆ ಇಡುವುದು ವಿದ್ಯೆ, ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ. ತನ್ನ ದಡ್ಡತನವನ್ನು ಅರಿಯದವನೇ ಮೂರ್ಖ, ಅರಿತವನೇ ಬುದ್ಧಿವಂತ. ಅರಿತು ಬುದ್ಧಿವಂತರಂತಾಗಿ ಬಾಳೋಣ.
(ಲೇಖಕರು ಹವ್ಯಾಸಿ ಬರಹಗಾರರು)