ಹದಿಹರೆಯದವರಿಗೆ ಕಲಿಸುವುದು ಎಂದರೆ ಅದು ಕತ್ತಿಯ ಮೇಲೆ ವ್ಯಾಯಾಮ ಎನ್ನುವುದು ನಿಮಗೆ ತಿಳಿದಿರಲಿ..

edit 1
Published on

ಭಾರತದಲ್ಲಿ 2500 ಐಐಟಿ ಸೀಟ್​ಗಳಿಗೆ 25 ಲಕ್ಷ ವಿದ್ಯಾರ್ಥಿಗಳು ಸ್ಪರ್ಧಿಸುತ್ತಾರೆ. ಮಕ್ಕಳು ಮಹಾಸಮುದ್ರದಲ್ಲಿರುವ ಅಸಂಖ್ಯಾತ ಮೀನುಗಳು. ಐಐಟಿ/ಮೆಡಿಸಿನ್ ಸಣ್ಣ ಕೆರೆ. ಸಮದ್ರದಿಂದ ಕೆರೆಗೆ ಹಾಕಲಾದ ‘ನೀಟ್’, ‘ಸಿಇಟಿ’ ಎಂಬ ಸಣ್ಣ ಪೈಪಿನಲ್ಲಿ ಎಷ್ಟೋ ಮೀನುಗಳು ವಿಲಿವಿಲಿ ಒದ್ದಾಡುತ್ತ ಇರುತ್ತವೆ.

ಮಕ್ಕಳು ಮನೆಯಲ್ಲಿ ಒಂದು ಥರ, ಕ್ಲಾಸ್​ರೂಮ್ಲ್ಲಿ ಒಂದು ಥರ ಇರುತ್ತಾರೆ. ಹಾಗಾಗಿ, ಇಂಥ ಬೆಳವಣಿಗೆಗಳ ಬಗ್ಗೆ ಮಕ್ಕಳ ಪಾಲಕರು ಶಿಕ್ಷಕರೊಂದಿಗೆ ಆಗಾಗ ಚರ್ಚೆ ಮಾಡಬೇಕು. ಈ ನಿಟ್ಟಿನಲ್ಲಿ, ಮಕ್ಕಳ ಟೀಚರ್ ದೃಷ್ಟಿಯಲ್ಲಿ ನೀವೆಂಥ ಪಾಲಕರು? ಅವರ ದೃಷ್ಟಿಯಲ್ಲಿ ಪಾಲಕರು ಹತ್ತು ವಿಧ. ಇದರ ನಾಲ್ಕು ಆಯಾಮಗಳ ಬಗ್ಗೆ ಕಳೆದ ಅಂಕಣದಲ್ಲಿ ರ್ಚಚಿಸಲಾಗಿತ್ತು. ಮುಂದಿನದ್ದನ್ನು ಈಗ ಗಮನಿಸೋಣ.

5) ಘೊಸ್ಟ್ ರೈಟರ್ಸ್: ಮಕ್ಕಳನ್ನು ಶಾಲೆಗೆ ಸೇರಿಸುವ ದಿನವಾದರೂ, ಇವರು ಶಾಲೆಗೆ ಬಂದಿದ್ದರೇ ಎನ್ನುವುದು ಕೂಡ ಅನುಮಾನವೇ. ಪೇರೆಂಟ್ಸ್ ಹೆಸರು ಲಿಸ್ಟ್ ನಲ್ಲಿ ಇರುತ್ತದೆ. ಅದರೆ ಯಾವ ಪೇರೆಂಟ್ಸ್ ಮೀಟಿಂಗ್​ಗೂ ಇವರು ಬರುವುದಿಲ್ಲ. ಕಡೇ ಪಕ್ಷ ಶಾಲೆಗೆ ಫೋನ್ ಕೂಡ ಮಾಡುವುದಿಲ್ಲ.

6) ಅನಿಮೇಷರು: ಕಣ್ಣರೆಪ್ಪೆ ಬಡಿಯದವರನ್ನು ಅನಿಮೇಷರು (ದೇವತೆಗಳು) ಅನ್ನುತ್ತಾರೆ. ನಿದ್ದೆಮಾಡದ ಈ ಗುಂಪಿನ ಪೇರೆಂಟ್ಸ್ ಕೂಡ ಅನಿಮೇಷರು. ಇವರನ್ನು ಕಂಡರೆ ಟೀಚರ್ಸ್ ಭಯಭ್ರಾಂತರಾಗುತ್ತಾರೆ. ‘ರಾತ್ರಿ ಹನ್ನೊಂದರ ನಂತರ ಮೆಸೇಜ್ ಬಂದರೆ ಅದು ಖಂಡಿತಾ ಆ ಸ್ಟೂಡೆಂಟ್ ತಾಯಿಯದೇ ಆಗಿರುತ್ತದೆ’ ಎಂದು ಒಬ್ಬ ಟೀಚರ್ ಹೇಳಿದಳು. ‘ಯಾವಾಗ ನನ್ನ ಮೇಲ್ ಚೆಕ್ ಮಾಡಿದರೂ ಅದರಲ್ಲಿ ಕಡೇ ಪಕ್ಷ ಆರು ಮೆಸೇಜ್​ಗಳು ಆಕೆಯಿಂದಲೇ ಬಂದಿರುತ್ತವೆ. ಅವೂ ಸಣ್ಣವೇನೂ ಅಲ್ಲ. ಒಂದೊಂದೂ ಕಾದಂಬರಿಯಷ್ಟು ದೀರ್ಘವಾಗಿ ಇರುತ್ತವೆ. ನಮ್ಮ ಹುಡುಗ ಇತ್ತೀಚೆಗೆ ನಿದ್ದೆಯಲ್ಲಿ ಬಹಳ ತಲೆ ಕೆರೆದುಕೊಳ್ಳುತ್ತಾನೆ. ಕ್ಲಾಸ್​ನಲ್ಲಿ ಬೇರೆ ಹುಡುಗರು ಯಾವ ಶಾಂಪೂ ಬಳಸುತ್ತಾರೋ ವಿಚಾರಿಸಿ. ನಿದ್ರೆಯಲ್ಲಿ ಆ ರೀತಿ ತಲೆ ಕೆರೆದುಕೊಳ್ಳುವುದು ಲುಕೇಮಿಯಾಗೆ ದಾರಿ ಮಾಡಬಹುದು ಎಂದು ಎಲ್ಲಿಯೋ ಓದಿದ್ದೆ’ ಎಂದು ಆಕೆ ಕಳಿಸುವ ಮೆಸೇಜ್​ಗಳು ನಮ್ಮ ರಕ್ತದ ಒತ್ತಡವನ್ನು, ಹೃದಯದ ಬಡಿತವನ್ನು ಹೆಚ್ಚಿಸುತ್ತವೆ ಎಂದು ಟೀಚರ್ ಗೋಳಾಡಿದರು.

7) ಬಿನ್ ಲಾಡೆನ್​ಗಳು: ತಾವು ನಂಬಿದ್ದು ಮಾತ್ರ ಸರಿ. ಬೇರೆಯವರು ಏನೇ ಹೇಳಿದರೂ ಇವರು ಕೇಳುವುದಿಲ್ಲ. ಇವರ ದೃಷ್ಟಿಯಲ್ಲಿ ಇವರ ಮಕ್ಕಳ ಹೊರತಾಗಿ, ಉಳಿದವರೆಲ್ಲರೂ (ಟೀಚರ್​ಗಳು ಸೇರಿ) ವೇಸ್ಟ್​ಬಾಡಿಗಳು. ‘ನಿಮ್ಮ ಮಗ ಮನೆಯಲ್ಲಿ ಓದುವುದಿಲ್ಲವೇನು?’ ಎಂದು ಟೀಚರ್ ಕೇಳಿದರೆ, ‘ಹೌದು, ಆ ವಯಸ್ಸಿನಲ್ಲಿ ನಾನು ಕೂಡ ಓದುತ್ತಿರಲಿಲ್ಲ. ಆದರೆ ಈಗ ಯಾವ ಹಂತ ತಲುಪಿದ್ದೇನೆ ನೋಡಿ. ನನ್ನ ಗಂಡ ಸಾಫ್ಟ್​ವೇರು... ಬಿ.ಇ. ಎಂಟೇ ವರ್ಷಗಳಲ್ಲಿ ಮುಗಿಸಿದರಂತೆ. ಒಂದು ಸಲ ಕಾಲೇಜ್​ನಿಂದ ಸಸ್ಪೆಂಡೂ ಆಗಿದ್ದರಂತೆ. ಆದರೂ ಈಗ ನಾವು ಸಂತೋಷವಾಗಿಲ್ಲವೇನು? ಚೆನ್ನಾಗಿ ಓದಿದ ನೀವೆಲ್ಲ ಏನಾಗಿದ್ದೀರಿ ಈಗ? ನಮ್ಮ ತಾತ ಶತಾವಧಾನಿ. ನಮ್ಮ ಹುಡುಗನಿಗೆ ಆ ಜೀನ್ಸೇ ಬಂದಿವೆ. ನೀವು ಸರಿಯಾಗಿ ಪಾಠ ಹೇಳದೆ ಅವನು ಚೇಷ್ಟೆ ಹುಡುಗ ಎಂದು ಹೆಸರಿಟ್ಟಿದ್ದೀರಿ’ ಎಂದು ಮಕ್ಕಳ ಪರ ವಹಿಸಿಕೊಂಡು ಮಾತಾಡುತ್ತಾರೆ. ಒಬ್ಬ ಕಾಲೇಜಿನ ಕರೆಸ್ಪಾಂಡೆಂಟ್, ‘ನಿಮ್ಮ ಮಗ ಕುಡಿದು ಕಾಲೇಜ್​ಗೆ ಬರ್ತಿದ್ದಾನೆ’ ಎಂದು ಹೇಳಿದಾಗ, ‘ಈ ವಯಸ್ಸಿನಲ್ಲಿ ಅಲ್ಲದಿದ್ದರೆ ಇನ್ಯಾವಾಗ ಕುಡಿಬೇಕ್ರಿ?’ ಎಂದೊಬ್ಬ ತಂದೆ ಹೇಳಿದ್ದನ್ನು ಕೇಳಿದೆ.

8) ಸ್ಯುಡೋ ಅಂಬಾನಿಗಳು: ಇವರ ದೃಷ್ಟಿಯಲ್ಲಿ ಟೀಚರ್​ಗಳೆಲ್ಲ ಇವರ ಕಂಪನಿ ನೌಕರರು. ತಾವು ಕಟ್ಟುವ ಫೀಸ್​ನಿಂದಲೇ ಅವರಿಗೆ ನಾಲ್ಕು ತುತ್ತು ಸಿಗುತ್ತಿದೆ. ‘ಹುಡುಗ ಕಾಲೇಜ್​ಗೆ ಸರಿಯಾಗಿ ಬರುತ್ತಿಲ್ಲ, ಹಿಂದಿನ ಬೆಂಚ್​ನಲ್ಲಿ ಕುಳಿತು ಮೊಬೈಲ್ ಫೋನ್​ನಲ್ಲಿ ಪಾರ್ನ್ ವಿಡಿಯೋಸ್ ನೋಡುತ್ತಾನೆ. ಹುಡುಗಿಯರನ್ನು ರ್ಯಾಗ್ ಮಾಡಿ ಅಳಿಸುತ್ತಾನೆ’ ಎಂದು ಕರೆಸ್ಪಾಂಡೆಂಟ್ ಹೇಳಿದಾಗ, ‘ನೂರೆಕರೆ ನೀರಾವರಿ ಭೂಮಿ ಇದೆ. ಹೆಸರಿನ ಪಕ್ಕದಲ್ಲೊಂದು ಡಿಗ್ರಿ ಇರಲಿ ಅಂತ ಕಾಲೇಜ್​ಗೆ ಸೇರಿಸಿದ್ದೇವೆ. ನಿಮಗಿಷ್ಟವಿಲ್ಲದಿದ್ದರೆ ಹೇಳಿ, ಬೇರೆ ಕಾಲೇಜ್​ಗೆ ಸೇರಿಸುತ್ತೇವೆ’ ಎಂದು ಒಬ್ಬ ದೊಡ್ಡ ಮನುಷ್ಯ ಹೇಳಿದ್ದನ್ನು ಸ್ವತಃ ಕೇಳಿಸಿಕೊಂಡಿದ್ದೇನೆ.

9) ರಂಗಭೂಮಿ ನಟರು: ಬಾಲ್ಯದಲ್ಲಿ ನಡೆದ ಯಾವುದೋ ಘಟನೆಯ ಕಾರಣಕ್ಕೆ ಇವರಿಗೆ ಟೀಚರ್​ಗಳ ಮೇಲೆ ದ್ವೇಷ, ಸಿಟ್ಟು, ಅಸಹನೆ ಇರುತ್ತದೆ. ಪ್ರತಿ ಸಣ್ಣ ವಿಷಯಕ್ಕೂ ಗಟ್ಟಿಯಾಗಿ ಕೂಗಾಡುತ್ತ ಡ್ರಾಮಾ ಸೃಷ್ಟಿ ಮಾಡುತ್ತಾರೆ. ಅದು ಕೂಡ ಪ್ಲೇಗ್ರೌಂಡ್​ನಲ್ಲಿ. ನೂರಾರು ಮಂದಿಯ ಎದುರಿನಲ್ಲಿ. ಮಧ್ಯ ಮಧ್ಯದಲ್ಲಿ ಅಳುತ್ತಾರೆ. ತಮಗಾದ ಘೊರ ಅನ್ಯಾಯ ಏನೆಂದು ಮಕ್ಕಳನ್ನು ಕರೆದೊಯ್ಯಲು ಬಂದಿರುವ ಪ್ರತಿ ಪೇರೆಂಟ್​ಗೂ ತಿಳಿಯಬೇಕು. ಬೋರ್ಡ್ ಸದಸ್ಯರು ಎಮರ್ಜೆನ್ಸಿ ಮೀಟಿಂಗ್ ಕರೆದು ಆ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಅಲ್ಲಿಯವರೆಗೆ ಇವರ ಮನಸ್ಸಿಗೆ ಸಮಾಧಾನ ಇರುವುದಿಲ್ಲ.

10) ಉತ್ತಮ ಪೇರೆಂಟ್: ಟೀಚರ್​ಗಳನ್ನು ಇವರು ದ್ರೋಣಾಚಾರ್ಯರೆಂದೇ ಭಾವಿಸುತ್ತಾರೆ. ಬಹಳ ಗೌರವ ಕೊಡುತ್ತಾರೆ. ಮಕ್ಕಳ ಮಾರ್ಕ್ಸ್ ಬಗ್ಗೆ, ಮಾನಸಿಕ ಸ್ಥಿತಿ ಬಗ್ಗೆ, ಕ್ಲಾಸ್​ನಲ್ಲಿ ಅವನ ನಡವಳಿಕೆ ಬಗ್ಗೆ ಆಗಾಗ ವಿಚಾರಿಸುತ್ತಿರುತ್ತಾರೆ. ಎಲ್ಲ ಪೇರೆಂಟ್ಸ್ ಮೀಟಿಂಗ್​ಗೆ ಹಾಜರಾಗುತ್ತಾರೆ. ಸಣ್ಣಪುಟ್ಟ ವಿಷಯಗಳಿಗೆ ಗಲಾಟೆ ಮಾಡುವುದಿಲ್ಲ. ಅರ್ಥ ಮಾಡಿಕೊಳ್ಳುತ್ತಾರೆ.

ಸೆಪರೇಷನ್ ಆಂಗ್ಸೈಟೀ: ‘ನಮ್ಮ ಏಳು ವರ್ಷದ ಮಗಳು ಶಾಲೆಗೆ ಹೋಗಬೇಕೆಂದರೆ ನಾನಾ ರೀತಿ ಹಟ ಮಾಡುತ್ತಾಳೆ. ಶಾಲೆಯಲ್ಲಿ ಟೀಚರ್​ಗೆ ‘ಹೊಟ್ಟೆ ನೋವು, ತಲೆನೋವು ಇದೆ. ಮನೆಗೆ ಹೋಗ್ತೀನಿ’ ಎಂದು ಹೇಳುತ್ತಾಳೆ. ವಾರದಲ್ಲಿ ಎರಡು ಬಾರಿಯಾದರೂ ನಾವು ಸ್ಕೂಲ್​ಗೆ ಹೋಗಿ ಕ್ಲಾಸ್ ಮಧ್ಯದಲ್ಲೇ ಮನೆಗೆ ಕರೆತರಬೇಕಾಗುತ್ತದೆ. ಡಾಕ್ಟರ್ ಹತ್ತಿರ ಕರೆದೊಯ್ದರೆ ಯಾವ ಕಾಯಿಲೆಯೂ ಇಲ್ಲ ಅನ್ನುತ್ತಾರೆ. ಏನು ಮಾಡಬೇಕೋ ತೋಚುತ್ತಿಲ್ಲ’ ಎಂದು ಒಬ್ಬರು ಬರೆದಿದ್ದಾರೆ.

ತಾವು ಪ್ರೀತಿಸುವುವರಿಂದ ದೂರ ಇರ(ಹೋಗ)ಬೇಕಾದಾಗ ಮಕ್ಕಳಲ್ಲಿ ಕಂಡು ಬರುವ ಲಕ್ಷಣ ಇದು. ಅಗತ್ಯಕ್ಕಿಂತ ಹೆಚ್ಚು ಪ್ರೀತಿ, ಅಕ್ಕರೆ ತೋರಿಸಿದಾಗ ಮಕ್ಕಳಲ್ಲಿ ಈ ಅವಲಂಬಿಸುವ ಗುಣ ಹೆಚ್ಚಾಗುತ್ತದೆ. ಒಂದು ವಯಸ್ಸು ಬಂದ ಮಕ್ಕಳನ್ನು ಸೆಪರೇಟ್ ಆಗಿ ಮಲಗಿಸಬೇಕು. ತಮ್ಮ ಮೇಲೆ ಮಕ್ಕಳು ಅವಲಂಬಿಸುವುದನ್ನೇ ಪಾಲಕರು ‘ಪ್ರೀತಿ’ ಎಂದು ತಿಳಿಯುತ್ತಾರೆ. ಪ್ರೀತಿಯೇ ಬೇರೆ, ಅವಲಂಬನೆಯೇ ಬೇರೆ. ದಿನಕ್ಕೆ ಐದಾರು ಬಾರಿ ಶಾಲೆಗೆ ಫೋನ್ ಮಾಡುವುದು, ಹೊರಗೆ ಎಲ್ಲಾದರೂ ಇದ್ದರೆ, ‘ಎಲ್ಲಿದ್ದೀಯ? ಯಾರ ಜೊತೆ ಇದ್ದೀಯ? ಏನು ಮಾಡುತ್ತಿದ್ದೀಯ?’ ಎಂದು ವಿಚಾರಿಸುವುದು ಪ್ರೀತಿಯಲ್ಲ. ಅದು ಪಾಲಕರ ಅಭದ್ರತಾ ಭಾವ.

ಯಾವಾಗ ದೊಡ್ಡವರಲ್ಲಿ ಈ ಅಭದ್ರತಾ ಭಾವ ಹೆಚ್ಚಾಗುತ್ತದೋ ಆಗ ಮಕ್ಕಳು ಮಾನಸಿಕ ಅನಾರೋಗಕ್ಕೆ ಗುರಿಯಾಗುತ್ತಾರೆ. ವಯಸ್ಸು ಬೆಳೆದ ಮೇಲೂ ಒಂಟಿಯಾಗಿ ಮಲಗಲು ನಿರಾಕರಿಸುತ್ತಾರೆ. ಈ ಸ್ಥಿತಿ ಮೀರಿದರೆ ‘ಪ್ಯಾನಿಕ್ ಅಟ್ಯಾಕ್’ ಕೂಡ ಆಗುತ್ತದೆ. ಎರಡು, ಮೂರು ವಯಸ್ಸಿನವರೆಗೆ ಸರಿ. ಆದರೆ ಆ ನಂತರ ಇಂತಹ ಆಂಗ್ಸೈಟಿ ಕಂಡು ಬಂದರೆ ಪಾಲಕರು ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ತಾತನ, ಮಾವನ ಮನೆಗೆ ಒಬ್ಬನನ್ನೇ ಕಳಿಸುವುದು, ಔಟ್​ಡೋರ್ ಗೇಮ್ಸ್​ನಲ್ಲಿ ಭಾಗವಹಿಸುವಂತೆ ಮಾಡುವುದು, ಮೊದಲಾದವು ಎಚ್ಚರಿಕಾ ಕ್ರಮಗಳು. ಪರಿಸ್ಥಿತಿ ಕೈ ಮೀರಿದರೆ ಮನೋವೈದ್ಯರನ್ನು ಸಂರ್ಪಸಬೇಕು.

ಹದಿಹರೆಯದವರಿಗೆ ಕಲಿಸುವುದು ಎಂದರೆ ಅದು ಕತ್ತಿಯ ಮೇಲೆ ವ್ಯಾಯಾಮ.

‘ಇವತ್ತು ಶಾಲೆಯಲ್ಲಿ ಏನು ಹೇಳಿದರೋ?’ ಎಂದು ಕೇಳಿದಳು ತಾಯಿ.

‘ಬೋರ್ಡ್ ಮೇಲೆ ಬರೆದಿರುವುದನ್ನು ನೋಡಿ ಬರಿ ಅಂದರು’ ಉತ್ತರಿಸಿದ ಮಗ.

‘ಮತ್ತೆ ಬರೆದೆಯಾ?’

‘ಇಲ್ಲಮ್ಮಾ’

‘ಯಾಕೋ?’

‘ಓದುವುದಕ್ಕೆ ಕಲಿಸಲಿಲ್ಲ. ಅದವರ ಸಿಲಬಸ್​ನಲ್ಲಿ ಇಲ್ಲವಂತೆ’

ಇದು ಇಂದಿನ ಕಾರ್ಪೇರೇಟ್ ಶಾಲೆಗಳ ಪರಿಸ್ಥಿತಿ. ಅವರು ವಿದ್ಯೆಯನ್ನು ಕಲಿಸುವುದಿಲ್ಲ. ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಲಿಸುತ್ತಾರಷ್ಟೇ. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ಏಕೆಂದರೆ ಮಕ್ಕಳು ಅಲ್ಲಿಗೆ ಸೇರುವುದು ಮಾರ್ಕ್ಸ್ ಸಲುವಾಗಿಯೇ ಅಲ್ಲವೇ?

ಭಾರತದಲ್ಲಿ 2500 ಐಐಟಿ ಸೀಟ್​ಗಳಿಗೆ 25 ಲಕ್ಷ ವಿದ್ಯಾರ್ಥಿಗಳು ಸ್ಪರ್ಧಿಸುತ್ತಾರೆ. ಮಕ್ಕಳು ಮಹಾಸಮುದ್ರದಲ್ಲಿರುವ ಅಸಂಖ್ಯಾತ ಮೀನುಗಳು. ಐಐಟಿ/ಮೆಡಿಸಿನ್ ಸಣ್ಣ ಕೆರೆ. ಸಮದ್ರದಿಂದ ಕೆರೆಗೆ ಹಾಕಲಾದ ‘ನೀಟ್’, ‘ಸಿಇಟಿ’ ಎಂಬ ಸಣ್ಣ ಪೈಪಿನಲ್ಲಿ ಎಷ್ಟೋ ಮೀನುಗಳು ವಿಲಿವಿಲಿ ಒದ್ದಾಡುತ್ತ ಇರುತ್ತವೆ. ಬಹಳ ಡಿಪ್ರೆಸ್ ಆಗುತ್ತವೆ. ಕೆಲವು ಸತ್ತೇ ಹೋಗುತ್ತವೆ.

ತಮ್ಮ ಮಕ್ಕಳಿಗೆ ಐಐಟಿಗೆ ಸಾಕಾಗುವಷ್ಟು ಜ್ಞಾನ, ಬುದ್ಧಿಶಕ್ತಿ ಇಲ್ಲವೆಂದು ತಿಳಿದ ಮೇಲೂ ಅವರನ್ನು ಕೋಚಿಂಗ್ ಸೆಂಟರ್​ಗಳಿಗೆ ಸೇರಿಸುವುದರ ಬಗ್ಗೆ ಎರಡು ವಾದಗಳಿವೆ. ‘ಮಕ್ಕಳನ್ನು ಅವರ ಶಕ್ತಿಗೆ ಮೀರಿ ಹಿಂಡುವುದು ತಪ್ಪು. ನಮ್ಮ ಹುಡುಗರು ಐಐಟಿ ಓದುತ್ತಿದ್ದಾರೆ ಎಂಬ ಸಂತೃಪ್ತಿಯಲ್ಲಿ ಆರು ವರ್ಷ ಬದುಕುವುದಕ್ಕಾಗಿ (ಇತರರಿಗೆ ಹೇಳಿಕೊಳ್ಳುವುದಕ್ಕಾಗಿ) ಮಾತ್ರವೇ ಇದು ಸಹಕಾರಿ’ ಎಂದು ಒಂದು ವಾದವಾದರೆ, ‘ಉನ್ನತ ವ್ಯಾಸಂಗ ಮಾಡಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ? ಅವರಿಗೆ ಬುದ್ಧಿಶಕ್ತಿ, ತಿಳಿವಳಿಕೆ ಇಲ್ಲವೆಂದು ಸಣ್ಣವಯಸ್ಸಿನಲ್ಲಿಯೇ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ?’ ಇದು ಇನ್ನೊಂದು ವಾದ.

ಕಾರ್ಪೇರೇಟ್ ಶಾಲೆಗಳವರು ಹಿಂಡುಹಿಂಡಾಗಿ ಬಂದ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ರ್ಯಾಂಕ್ ಬರುವ ವಿದ್ಯಾರ್ಥಿಗಳನ್ನು ಒಂದು ಗುಂಪಿನಲ್ಲಿ ಸೇರಿಸುತ್ತಾರೆ. ಲಕ್ಷಗಟ್ಟಲೇ ಫೀಸ್ ತೆಗೆದುಕೊಳ್ಳುವ ಶಿಕ್ಷಕರಿಂದ ಇವರಿಗೆ ವಿಶೇಷವಾಗಿ ಕಲಿಸುತ್ತಾರೆ. ಮುಂದೆ ಈ ಮಕ್ಕಳ ಹೆಸರುಗಳೇ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಉಳಿದವರನ್ನು (ಬಿ, ಸಿ, ಎಂದರೆ ನೊಂದುಕೊಳ್ಳುತ್ತಾರೆಂದು) ‘ಅಬ್ದುಲ್ ಕಲಾಂ’, ‘ವಿಶ್ವೇಶ್ವರಯ್ಯ’ ಸೆಕ್ಷನ್​ಗಳಲ್ಲಿ ಹಾಕುತ್ತಾರೆ. ಇವರಿಗೆ ‘ಸಾಧಾರಣ’ ಶಿಕ್ಷಕರು ಪಾಠ ಮಾಡುತ್ತಾರೆ. ಪಾಠಗಳೆಂದರೆ ದೊಡ್ಡದಾಗಿ ಹೇಳುವುದೇನೂ ಇರುವುದಿಲ್ಲ. ಹೆಡ್​ಆಫೀಸಿನಿಂದ ಬಂದ ಸಿಲೆಬಸ್ ಪ್ರಕಾರ, ಪರೀಕ್ಷೆಗಳಲ್ಲಿ ಬರಲಿರುವ ಪ್ರಶ್ನೆಗಳಿಗೆ ಉತ್ತರ ಬರೆಸುವುದು ಈ ಶಿಕ್ಷಕರ ಡ್ಯೂಟಿ. ವಿದ್ಯೆ ಕಲಿಸುವುದಕ್ಕಿಂತ ಮುಖ್ಯವಾಗಿ ಮುಂದಿನ ವರ್ಷಕ್ಕಾಗಿ ಹೊಸ ವಿದ್ಯಾರ್ಥಿಗಳನ್ನು ಹುಡುಕುವುದು ಇವರ ಜವಾಬ್ದಾರಿ! ‘ದೊಡ್ಡ’ ಲೆಕ್ಚರರ್​ಗೆ ಕೊಡುವ ಸಂಬಳದಲ್ಲಿ ಹತ್ತನೇ ಒಂದು ಭಾಗ ಇವರಿಗೆ ಕೊಡುತ್ತಾರೆ. ಆ ಫ್ರಸ್ಟ್ರೇಷನ್ ಅನ್ನು ಇವರು ಮಕ್ಕಳ ಮೇಲೆ ತೋರಿಸುತ್ತಾರೆ. ಸಿಇಟಿ ಫೇಲ್ ಆದರೆ ‘ಈ ಸಾರಿ ಲಾಂಗ್​ಟಮ್ರ್ ಕೋಚಿಂಗ್ ಸೇರು, ಖಂಡಿತ ಪಾಸಾಗ್ತೀಯ’ ಎಂದು ಈ ಕನಸಿನ ವ್ಯಾಪಾರಿಗಳು ಭ್ರಾಂತಿ ಹುಟ್ಟಿಸುತ್ತಾರೆ. ಲಾಂಗ್​ಟಮ್ರ್ ಕೋರ್ಸ್ ಮಾಡಿದವರಲ್ಲಿ ಒಬ್ಬರೋ, ಇಬ್ಬರೋ ಸಿಇಟಿಯಲ್ಲಿ ಯಶಸ್ಸು ಪಡೆಯುತ್ತಾರೆ. ಮೂರು ಲಾಂಗ್​ಟಮ್ರ್ ಕೋರ್ಸ್ ಮಾಡಿಯೂ ಫೇಲ್ ಆದ ಮೇಲೆ, ತಾವು ನಿಷ್ಪ್ರಯೋಜಕರೆಂಬ ಅಭಿಪ್ರಾಯ ವಿದ್ಯಾರ್ಥಿಗಳಲ್ಲಿ ಬಂದಿರುತ್ತದೆ. ಸೈಕಾಲಜಿಸ್ಟ್​ರ ಬಳಿಗೆ ಅಂತಹ ಡಿಪ್ರೆಷನ್ ಕೇಸ್​ಗಳು ವಾರಕ್ಕೊಂದರಂತೆ ಬರುತ್ತವೆ. ಆದ್ದರಿಂದ, ಪಾಲಕರು ಮಕ್ಕಳ ಸಾಮರ್ಥ್ಯ ಮತ್ತು ಮಿತಿಯನ್ನು ಅರಿತುಕೊಳ್ಳುವುದು ಅಷ್ಟೇ ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net