

ಇದಕ್ಕೆ ತಕ್ಕಂತೆ ಸನ್ ಬಾಲ್ಯದಿಂದಲೇ ಉತ್ತಮ ಕಾರ್ಯಗಳನ್ನು ಮಾಡುತ್ತ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಕಲಿಕೆಗಾಗಿ ಸುಬೋಧಿ ಎಂಬ ಗುರುಗಳ ಬಳಿ ತೆರಳಿದ ಸನ್ ವಿಶೇಷ ವಿದ್ಯೆಯೊಂದನ್ನು ಕರಗತ ಮಾಡಿಕೊಂಡ. ಅದರಂತೆ, ಅನೇಕ ಸಾಹಸಗಳನ್ನು ಮಾಡುತ್ತಿದ್ದ. ತನ್ನ ದೇಹವನ್ನು 72 ಬಗೆಗಳಲ್ಲಿ ಬದಲಾಯಿಸಿಕೊಳ್ಳಬಲ್ಲವನಾಗಿದ್ದ. ವಾನರ ರಾಜ್ಯದಲ್ಲಿ ಆತನಿಗೆ ದೇವತೆಯ ಸ್ಥಾನ ದೊರಕಿತು. ಚಿರಂಜೀವಿಯಾದ. ಇದೆಲ್ಲದರ ಪರಿಣಾಮ ಆತನಿಗೆ ಅಹಂಕಾರ ಬಂದು ಅಲ್ಲಿನ ಅರಸನಿಗೆ ಕಿರುಕುಳ ಕೊಡಲಾರಂಭಿಸಿದ. ಸನ್ ವೂಕಾಂಗ್ಗೆ ಬುದ್ಧಿ ಕಲಿಸಬೇಕೆಂದು ಅರಸನು ಭಗವಾನ್ ಬುದ್ಧನ ಮೊರೆಹೋದ.
ಬುದ್ಧನು ವೂಕಾಂಗ್ನನ್ನು ಕರೆಸಿ, ದೇಹವನ್ನು ಕಿರಿದಾಗಿಸಿಕೊಂಡು ತನ್ನ ಹಸ್ತದ ಮೇಲೆ ನಿಲ್ಲುವಂತೆ ಸೂಚಿಸಿದ. ಆಗ ಬುದ್ಧ ಅವನನ್ನು ತನ್ನ ಮುಷ್ಟಿಯೊಳಗೆ ಭದ್ರವಾಗಿ ಹಿಡಿದು, ‘ಈಗ ತಪ್ಪಿಸಿಕೊಂಡು ಹೋಗು ನೋಡೋಣ’ ಎಂದ. ಈ ಯತ್ನದಲ್ಲಿ ವಿಫಲನಾದ ವೂಕಾಂಗ್ಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ. ಆಗ ಚೀನಾದ ದೊರೆ ಆತನನ್ನು ವನವಾಸಕ್ಕೆ ಕಳಿಸಿದ. ಸನ್ ವನವಾಸದಲ್ಲಿದ್ದಾಗ ಬೋಧಿಸತ್ವ ವಾನ್ಯಿನ್ ಭೇಟಿಯಾದ. ‘ಯಾತ್ರಿಕನಾದ ಹ್ಯೂಯೆನ್ ತ್ಸಾಂಗ್ ಭಾರತಕ್ಕೆ ಹೋಗಿಬರುವ ವೇಳೆಯಲ್ಲಿ ಆತನಿಗೆ ರಕ್ಷಣೆ ನೀಡಿದರೆ ನಿನ್ನೆಲ್ಲ ಪಾಪಗಳು ಪರಿಹಾರವಾಗುತ್ತವೆ’ ಎಂದು ಸನ್ಗೆ ಹೇಳಿದ. ಅದರಂತೆ, ಸನ್ ವ್ಯೂಕಾಂಗ್ ಅದೃಶ್ಯರೂಪ ತಳೆದು ಯಾತ್ರಿಕ ಹ್ಯೂಯೆನ್ ತ್ಸಾಂಗ್ಗೆ ರಕ್ಷಣೆ ನೀಡಿದ. ಆ ಯಾತ್ರಿಕ ಚೀನಾಕ್ಕೆ ಮರಳಿದ ತರುವಾಯ ವೂಕಾಂಗ್ನ ಎಲ್ಲ ಪಾಪಗಳು ಪರಿಹಾರವಾದವು. ನಂತರದಲ್ಲಿ ಆತ ಬುದ್ಧನ ಸಮಾನವಾದ ಸ್ಥಾನ ಪಡೆದು ಜನಮನದಲ್ಲಿ ಚಿರಸ್ಥಾಯಿಯಾದ. (ಇಲ್ಲಿ ಸನ್ ವೂಕಾಂಗ್ನ ಅಹಂಕಾರ, ತಪು್ಪಗಳನ್ನು ಹೊರತುಪಡಿಸಿ ನೋಡಿದರೆ, ನಮ್ಮ ರಾಮಾಯಣದ ಹನುಮಂತನಿಗೂ ಆತನಿಗೂ ಸಾಮ್ಯ ಗೋಚರಿಸುತ್ತದೆ)
***
ಜಾರ್ಜಿಯಾದ ರಾಷ್ಟ್ರಕವಿ ಎಂಬ ಮನ್ನಣೆಗೆ ಪಾತ್ರನಾದವನು ಶೋತಾ ರುಸ್ತಾವೇಲಿ. ಈತನು ರಾಣಿ ಥಾಮರ್ಳ ಆಸ್ಥಾನದಲ್ಲಿ ಹಣಕಾಸು ಮಂತ್ರಿಯಾಗಿದ್ದ. ‘ಚಿರತೆಯ ಚರ್ಮದ ಸರದಾರ’ (ಖಜಛಿ ಓಜಿಜಜಠಿ ಜ್ಞಿ ಠಿಜಛಿ ಕಚ್ಞಠಿಜಛ್ಟಿ’ಠ ಖkಜ್ಞಿ) ಎಂಬುದು ಈತನ ಮಹಾಕಾವ್ಯದ ಹೆಸರು. ಈ ಕೃತಿ ಜಾರ್ಜಿಯಾದಲ್ಲಿ ಬಹು ಜನಪ್ರಿಯ- ನಮ್ಮಲ್ಲಿಯ ರಾಮಾಯಣ, ಮಹಾಭಾರತಗಳಂತೆ. ಸರಿಸುಮಾರು ಎಲ್ಲ ಜಾರ್ಜಿಯನ್ನರ ಮನೆಗಳಲ್ಲೂ ಈ ಕೃತಿ ಇರುತ್ತದೆ. ಮನೆಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಈ ಕೃತಿಯ ಪ್ರತಿ ಕೊಡುವುದು ಅಲ್ಲಿನ ಸಂಪ್ರದಾಯ. ತಲಾ ನಾಲ್ಕು ಸಾಲುಗಳ 1600 ಚರಣಗಳನ್ನು ಈ ಮಹಾಕಾವ್ಯ ಹೊಂದಿದ್ದು, ಇದರ ಮುಖ್ಯ ಪಾತ್ರಧಾರಿ ಭಾರತೀಯ!
***
ರಸ್ತೆ ಎಂದರೆ ಕೇವಲ ಪಯಣದ ಹಾದಿಯಲ್ಲ. ಅದು ಮಾನವನ ನಡೆಗೆ ಇಂಬು ನೀಡುವ ಜೊತೆಗೆ ಆತನ ಬದುಕನ್ನೇ ಬದಲಿಸಬಲ್ಲ ಮಾಂತ್ರಿಕ ಶಕ್ತಿ ಹೊಂದಿದೆ. ವಿವಿಧ ಸಂಸ್ಕೃತಿಗಳು ಹೇಗೆ ಸಾಮ್ಯ ಹೊಂದಿವೆ ಎಂಬುದನ್ನು ಇದು ನಿರೂಪಿಸುತ್ತದೆ. ಅದೇ ರೀತಿ, ಸಾಂಸ್ಕೃತಿಕ ಕೊಡುಕೊಳ್ಳುವಿಕೆಗೂ, ಸಂಸ್ಕೃತಿಯ ಪಯಣಕ್ಕೂ ಇದು ವೇದಿಕೆಯಾಗಬಲ್ಲದು. ಈ ಮೇಲೆ ಉಲ್ಲೇಖಿಸಿದ ಎರಡು ದೃಷ್ಟಾಂತ ಕಥೆಗಳಿಗೂ, ಇಲ್ಲಿ ಹೇಳಹೊರಟಿರುವ ರಸ್ತೆಗೂ ಸಂಬಂಧವಿದೆ. ಇದೊಂದು ಐತಿಹಾಸಿಕ ರಸ್ತೆ. ಅನೇಕ ಸಾಮ್ರಾಜ್ಯಗಳ ಏಳುಬೀಳಿಗೆ ಸಾಕ್ಷಿಯಾಗಿದೆ. ಅನೇಕ ದೇಶಗಳ ರಾಜರು ದಂಡಯಾತ್ರೆ ನಡೆಸಲು ಈ ರಸ್ತೆ ಮೂಲಕವೇ ಸಾಗಿದ್ದಾರೆ. ಅವರ ಸೋಲುಗೆಲುವುಗಳನ್ನೂ ಈ ರಸ್ತೆ ಕಂಡಿದೆ; ಹಲವರ ಅಹಂಕಾರವನ್ನು ಮುರಿದಿದೆ. ರಾಜರ ಸೈನ್ಯದ ಕುದುರೆ, ಒಂಟೆ, ಆನೆಗಳ ಭಾರವನ್ನು ಹೊತ್ತಿದ್ದು ಇದೇ ರಸ್ತೆ. ಮಾನವನಿಗೆ ಸವಾಲೆಸೆದು ಅವನ ಸಂಭ್ರಮಕ್ಕೂ- ದುಃಖಕ್ಕೂ ಮಡಿಲಾದದ್ದು ಇದೇ ರಸ್ತೆ.
ಈ ದಾರಿಗುಂಟ ಸಾಗಿದ ಅಸಂಖ್ಯಾತ ವ್ಯಾಪಾರಿಗಳು, ವರ್ತಕರು ಅಗಣಿತ ಸಂಪತ್ತನ್ನು ಗಳಿಸಿದರು. ತನ್ಮೂಲಕ ಅನೇಕ ನಗರಗಳು ಸಂಪತ್ತಿನ ಗಣಿಗಳೇ ಆದವು. ಹಾಗೇ, ಅನೇಕ ವಿದ್ವಾಂಸರು, ಜ್ಞಾನಿಗಳೂ ಇದೇ ರಸ್ತೆಯ ಮೂಲಕ ಸಾಗಿ, ಬೆಳಕನ್ನು ಹಂಚಿದರು. ರೋಮ್ ಪರ್ಷಿಯಾ, ಭಾರತ ಹಾಗೂ ಚೀನಾ ಮುಂತಾದ ಪುರಾತನ ನಾಗರಿಕತೆಗಳನ್ನು ಬೆಸೆದ, ಕ್ರಿಸ್ತಪೂರ್ವ ಎರಡನೆಯ ಶತಮಾನದಿಂದ ಕ್ರಿಸ್ತಶಕ 15ನೆಯ ಶತಮಾನದವರೆಗೆ ವ್ಯಾಪಕ ಬಳಕೆಯಲ್ಲಿದ್ದ, ಮೂರು ಖಂಡಗಳಿಗೆ ಸಂಪರ್ಕಸೇತುವಾದ ಹೆಗ್ಗಳಿಕೆ ಈ ರಸ್ತೆಯದು. ಈ ರಸ್ತೆಯಲ್ಲಿ ಎಷ್ಟು ಚಿನ್ನ ಸಾಗಿತು, ಎಷ್ಟು ಪ್ರಮಾಣದ ರೇಷ್ಮೆ ಬಟ್ಟೆ ಪಯಣಿಸಿತು, ಬೆಲೆಬಾಳುವ ಮುತ್ತುರತ್ನಗಳು ಎಷ್ಟು ಕೈಬದಲಾದವು, ಮಸಾಲೆ ಪದಾರ್ಥಗಳ ಘಮ ಎಲ್ಲೆಲ್ಲಿ ಹರಡಿತು ಎಂಬುದನ್ನು ಸುಲಭವಾಗಿ ಅಂದಾಜಿಸಲಾಗುವುದಿಲ್ಲ. ಅಳೆಯುವವನ ಕೈ ಸೋಲುತ್ತದೆ. ಇದುವೇ- ದಿ ಗ್ರೇಟ್ ಸಿಲ್ಕ್ ರೂಟ್ ಅಥವಾ ರೇಷ್ಮೆ ರಸ್ತೆ.
ಈ ರೇಷ್ಮೆ ರಸ್ತೆಯ ಸಂಪೂರ್ಣ ಚಿತ್ರಣವನ್ನು ಡಾ. ಡಿ.ವಿ. ಗುರುಪ್ರಸಾದ್ ಅವರು ‘ಸಿಲ್ಕ್ ರೂಟ್’ ಕೃತಿಯಲ್ಲಿ ಒಂದು ಅಪರೂಪದ ಆಕರ ಗ್ರಂಥವಾಗುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಸುಮಾರು 2200 ವರ್ಷಗಳ ಹಿಂದೆ ಆರಂಭಿಕ ರೂಪ ಪಡೆದು, ಕ್ರಮೇಣ ಹಂತಹಂತವಾಗಿ ವಿಸ್ತಾರ ರೂಪದಲ್ಲಿ ಬೆಳೆದ ಈ ರಸ್ತೆ ಜಗತ್ತಿನ ವಿವಿಧ ಭಾಗಗಳ ನಡುವೆ ಸಂಪರ್ಕ ಕಲ್ಪಿಸಿ, ಮಾನವನ ಬೆಳವಣಿಗೆಗೆ ಕಾರಣವಾದ ಬಗೆಯನ್ನು ಲೇಖಕರು ಸಮರ್ಥವಾಗಿ ನಿರೂಪಿಸಿದ್ದಾರೆ. ಪತ್ತೆದಾರಿ ಶೈಲಿಯ ರೀತಿಯಲ್ಲಿ, ಒಮ್ಮೆ ಓದತೊಡಗಿದರೆ ಪೂರ್ಣಗೊಳಿಸುವವರೆಗೆ ಬಿಡದ ಹಾಗೇ ಓದಿಸಿಕೊಂಡು ಹೋಗುತ್ತದೆ.
ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಮಧ್ಯ ಏಷ್ಯಾವನ್ನು ಝಾಂಗ್ನು ಎಂಬ ಅಲೆಮಾರಿ ಗುಂಪು ಆಳುತ್ತಿತ್ತು. ಚೀನಾದ ಉತ್ತರ ಮತ್ತು ವಾಯವ್ಯ ಭಾಗಗಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತ, ಕೈಗೆ ಸಿಕ್ಕಿದ್ದನ್ನೆಲ್ಲ ದೋಚುವುದು ಇವರಿಗೆ ರೂಢಿಯಾಗಿತ್ತು. ಈ ಆಕ್ರಮಣ ತಡೆಯುವ ಉದ್ದೇಶದಿಂದ ಅಂದಿನ ಚೀನಾ ಅರಸ ವೂದಿ ದೇಶದ ಗಡಿಭಾಗದಲ್ಲಿ ದೊಡ್ಡ ಗೋಡೆಯನ್ನು ನಿರ್ವಿುಸತೊಡಗಿದ. ಇದೇ ಗೋಡೆ ಮುಂದೆ ‘ಚೀನಾದ ಮಹಾಗೋಡೆ’ ಎಂದು ಹೆಸರಾಯಿತು. ಆದರೆ ಗೋಡೆ ನಿರ್ವಿುಸಿದ ಮಾತ್ರಕ್ಕೆ ದಾಳಿ ತಡೆಯಲು ಆಗಲಿಲ್ಲ. ಹೀಗಾಗಿ ನೆರೆದೇಶಗಳೊಂದಿಗೆ ಸ್ನೇಹಸಂಬಂಧ ಅಗತ್ಯ ಎಂದು ರಾಜ ಭಾವಿಸಿದ. ಆದರೆ ಇಲ್ಲೆಲ್ಲ ತೆರಳುವುದು ಅಂದು ಸುಲಭವಾಗಿರಲಿಲ್ಲವಲ್ಲ.
ಹೀಗಾಗಿ, ರಸ್ತೆ ನಿರ್ವಿುಸಲು ಮುಂದಾದರು. ಅಂದು ಚೀನಾದ ರಾಜಧಾನಿಯಾಗಿದ್ದ ಕ್ಷಿಯಾನ್ ನಗರದಿಂದ 1000 ಕಿಲೋಮೀಟರ್ ದೂರದಲ್ಲಿದ್ದ ಇಂದಿನ ಶಿನ್ ಜಿಯಾಂಗ್ ಪ್ರಾಂತ್ಯಕ್ಕೆ ರಸ್ತೆ ನಿರ್ಮಾಣ ಮಾಡುವ ಯೋಜನೆ ತಯಾರಾಯಿತು. ಕ್ರಿಸ್ತಪೂರ್ವ 130ರ ಸುಮಾರಿಗೆ ರಸ್ತೆ ನಿರ್ವಿುಸಲು ತೊಡಗಿದರು. ಇದೇ ರಸ್ತೆ ಮುಂದೆ, ನಾನಾ ಕವಲುಗಳನ್ನು, ತಿರುವುಗಳನ್ನು ಪಡೆಯುತ್ತ ಖಂಡಗಳನ್ನು ಬೆಸೆಯುವ ಸಂಪರ್ಕರಸ್ತೆಯಾಯಿತು. ಚೀನಾದ ಕ್ಷಿಯಾನ್ನಲ್ಲಿ ಆರಂಭವಾಗಿ ಟರ್ಕಿಯ ಇಸ್ತಾಂಬುಲ್ನಲ್ಲಿ ಅಂತಿಮಗಮ್ಯವಾಗಿ ಇತಿಹಾಸದಲ್ಲಿ ಸ್ಥಾನಪಡೆಯಿತು.
ಚೀನಾದ ರೇಷ್ಮೆಗೆ ರೋಮನ್ನರಿಂದ ಬೇಡಿಕೆ ಅಧಿಕವಾಗಿತ್ತು. ಇದಕ್ಕೆ ಪ್ರತಿಯಾಗಿ ರೋಮನ್ನರು ಬಂಗಾರ ಮತ್ತು ಬೆಳ್ಳಿಯನ್ನು ನೀಡುತ್ತಿದ್ದರು. ಹೀಗೆ ಕ್ರಮೇಣ ಈ ರಸ್ತೆಯಲ್ಲಿ ಪೂರ್ವ ದೇಶಗಳಿಂದ ಪಾಶ್ಚಿಮಾತ್ಯ ದೇಶಗಳಿಗೆ ರೇಷ್ಮೆಯ ಜೊತೆಗೆ, ಅಮೂಲ್ಯ ಹರಳುಗಳು, ಸುಗಂಧ ದ್ರವ್ಯಗಳು, ಪಿಂಗಾಣಿ ವಸ್ತುಗಳು, ಚಹಾ, ಸಾಂಬಾರ ಪದಾರ್ಥಗಳು, ಔಷಧ ಇತ್ಯಾದಿ ಮಾರಾಟವಾಗತೊಡಗಿತು. ಜಾಗತಿಕ ಇತಿಹಾಸವನ್ನು ಬೇರೆ ಬೇರೆ ಬಗೆಯಲ್ಲಿ ಪ್ರಭಾವಿಸಿದ ಗನ್ ಪೌಡರ್ (ಬಂದೂಕಿಗೆ ಬಳಸುವ ಸಿಡಿಮದ್ದು) ಹಾಗೂ ಕಾಗದ ಕೂಡ ಇದೇ ದಾರಿಯಲ್ಲಿ ಸಾಗಿದವು.
ಕಜಕಿಸ್ತಾನ, ಉಜ್ಬೇಕಿಸ್ತಾನ, ಅಜರ್ಬೈಜಾನ್, ಜಾರ್ಜಿಯಾ, ಪರ್ಷಿಯಾ, ಈಜಿಪ್ಟ್, ಇಟಲಿ ಹಾಗೂ ಭಾರತ ಮುಂತಾದ ದೇಶಗಳ ಅನೇಕಾನೇಕ ನಗರಗಳು ಈ ರೇಷ್ಮೆ ರಸ್ತೆಯ ಭಾಗವಾಗಿರುವುದು ವಿಶೇಷ. ಇತಿಹಾಸದ ನಾನಾ ಹಂತಗಳಲ್ಲಿ ಕಾಣಸಿಗುವ ಹ್ಯೂಯೆನ್ ತ್ಸಾಂಗ್, ಫಾಹಿಯಾನ್, ಮಾರ್ಕೆ ಪೋಲೊ, ಅಲೆಕ್ಸಾಂಡರ್, ನಾದಿರ್ ಶಾ, ಬಾಬರ್, ತೈಮೂರ್ ಮುಂತಾದ ಪಾತ್ರಗಳು ಈ ರಸ್ತೆಯ ವಿವರಗಳಲ್ಲಿ ಜೀವ ತಳೆಯುತ್ತವೆ. ಬುಖಾರಾ, ಬಾಕು, ಅಲೆಕ್ಸಾಂಡ್ರಿಯಾ, ತಿಬಿಲೀಸಿ, ಮಸ್ಕೇಟಾ, ರೋಮ್ ವೆನಿಸ್, ಪೆಟ್ರಾ, ಸಮರಕಂಡ, ಟೆಹರಾನ್, ಇಸ್ತಾಂಬುಲ್ ಮುಂತಾದ ನಗರಗಳು ಈ ರಸ್ತೆಯ ಜೊತೆಗೆ ಬೆಸೆದುಕೊಂಡಿವೆ. ಈ ನಗರಗಳ ಮುಖ್ಯ ಮಾರುಕಟ್ಟೆಗಳು, ರೇಷ್ಮೆ ರಸ್ತೆ ಕಾಲದ ಅವಶೇಷಗಳು, ವಾಸ್ತುಶಿಲ್ಪ, ಉದ್ಯಾನ ರಚನೆ... ಇವೆಲ್ಲ ಇತಿಹಾಸದ ಕುತೂಹಲಿಗಳಿಗೆ ಅಧ್ಯಯನದ ವಸ್ತು.
ಈ ರೇಷ್ಮೆ ರಸ್ತೆ ಉದ್ದಕ್ಕೂ ಒಂದೇ ರಸ್ತೆಯಾಗಿರಲಿಲ್ಲ. ನೂರಾರು ಕವಲುಗಳನ್ನು ಪಡೆಯುತ್ತ ಸಾಗಿತು. ಚೀನಾದಿಂದ ಹೊರಟ ರೇಷ್ಮೆ ಯುರೋಪಿನ ನಗರ ತಲುಪಲು ಎರಡು ಮೂರು ವರ್ಷವೇ ಬೇಕಾಗುತ್ತಿತ್ತು. ದಾರಿಯಲ್ಲಿ ಕಳ್ಳಕಾಕರ ಕಾಟ, ನೈಸರ್ಗಿಕ ವಿಪತ್ತು ಇತ್ಯಾದಿ ಕಾರಣಕ್ಕೆ ಸಾಮಗ್ರಿ ನಷ್ಟವಾಗುವುದೂ ಇತ್ತು. ರಿಲೇ ಆಟದ ರೀತಿ ಒಂದು ನಗರದಿಂದ ಮುಂದಿನ ನಗರಕ್ಕೆ ಸರಕು ತಲುಪಿಸುವ ಕಾರ್ಯ ನಡೆಯುತ್ತಿತ್ತು. ಭೂ ಮಾರ್ಗದ ತೊಂದರೆಗಳನ್ನು ಕಂಡು ಸಮುದ್ರ ಮಾರ್ಗದ ಹುಡುಕಾಟವೂ ನಡೆಯಿತು. ಹಾಗಂತ ಜಲಮಾರ್ಗವೂ ಸುಲಭವೇನಾಗಿರಲಿಲ್ಲ. ಸವಾಲುಗಳು ಇದ್ದೇ ಇದ್ದವು. ಹೀಗಾಗಿ ರೇಷ್ಮೆ ರಸ್ತೆಯು ಭೂ ಹಾಗೂ ಜಲ ಮಾರ್ಗಗಳೆರಡರಲ್ಲೂ ವಿಸ್ತರಿಸಿತ್ತು.
ಈ ರಸ್ತೆ ಪಯಣದಲ್ಲಿ ಭಾರತದ ಪಾತ್ರ ಏನಿತ್ತು ಎಂಬುದು ಕೂಡ ಕುತೂಹಲಕರ. ರೇಷ್ಮೆ ರಸ್ತೆಯ ಮೇಲಿದ್ದ ಹಲವು ನಗರಗಳು ದೊಡ್ಡ ವಾಣಿಜ್ಯ ಕೇಂದ್ರಗಳಾಗಿ ಬೆಳೆದವು. ಭಾರತದ ತಕ್ಷಶಿಲೆ ಇಂಥ ಒಂದು ಕೇಂದ್ರವಾಗಿತ್ತು. ಪೂರ್ವ-ಪಶ್ಚಿಮ ಮಾರ್ಗದ ರೇಷ್ಮೆ ರಸ್ತೆಯನ್ನು ತಲುಪಲು ಭಾರತದಿಂದ ಇದ್ದ ಪ್ರಮುಖ ಮಾರ್ಗ ತಾಮ್ರಲಿಪ್ತಿ- ತಕ್ಷಶಿಲೆ ಮಾರ್ಗವಾಗಿತ್ತು. ಕ್ರಿಪೂ 540 ರಲ್ಲಿ ಪರ್ಷಿಯಾದ ಅಕೆಮೆನಿಡ್ ಅರಸರು ತಕ್ಷಶಿಲೆಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿಸಿಕೊಂಡಿದ್ದರು. ಕ್ರಿಪೂ 356ರಲ್ಲಿ ಅಲೆಕ್ಸಾಂಡರ್ ತಕ್ಷಶಿಲೆಯನ್ನು ತನ್ನದಾಗಿಸಿಕೊಂಡಿದ್ದ. ಪ್ರಾಚೀನ ಕಾಲದಿಂದಲೂ ತಕ್ಷಶಿಲೆ ಶಿಕ್ಷಣ ಕೇಂದ್ರವಾಗಿ ಹೆಸರುಗಳಿಸಿತ್ತು. ತಕ್ಷಶಿಲೆಯಿಂದ ಜ್ಞಾನಗಂಗೆಯು ವಿಶ್ವದ ಇತರ ದೇಶಗಳಿಗೆ ಪ್ರವಹಿಸಲು ರೇಷ್ಮೆ ರಸ್ತೆ ಕೂಡ ಒಂದು ಸಾಧನವಾಯಿತು. ಹಿಂದು ಧರ್ಮದ ಕಂಪು ಇತರ ದೇಶಗಳಿಗೆ ಪಸರಿಸಲೂ ರೇಷ್ಮೆ ರಸ್ತೆ ಇಂಬಾಯಿತು. ಭಾರತದ ಸಾಹಿತ್ಯವೂ ವಿಶ್ವದ ಹಲವೆಡೆ ಪಸರಿಸಿತು.
ಈ ಕೃತಿ ಪ್ರವಾಸ ಕಥನವಾಗಿ ಮಾತ್ರ ಉಳಿಯುವುದಿಲ್ಲ. ಅದರೊಟ್ಟಿಗೆ, ಚಾರಿತ್ರಿಕ ಕೃತಿಯೂ ಆಗಿ ಮೈದಳೆದಿದೆ. ಇಲ್ಲಿ ಬರುವ ಯಾವುದೇ ನಗರ ಅಥವಾ ಸ್ಥಳದ ಮೇಲ್ನೋಟದ ಮಾಹಿತಿ ಮಾತ್ರ ನೀಡದೆ, ಅಧ್ಯಯನದ ಆಳಕ್ಕಿಳಿದು ಅಲ್ಲಿನ ಜನಜೀವನ, ಸಾಮಾಜಿಕ-ಆರ್ಥಿಕ ಸ್ಥಿತಿಗತಿ, ಆಡಳಿತ ವ್ಯವಸ್ಥೆ, ಕಲೆ-ಸಂಸ್ಕೃತಿ, ಸಂಗೀತ, ಕೃಷಿ ಕೈಗಾರಿಕೆ- ಈ ಎಲ್ಲ ಸಮಗ್ರ ಮಾಹಿತಿ ನೀಡುವುದರಿಂದಾಗಿ, ನಾವೇ ಖುದ್ದು ಅಲ್ಲಿಗೆ ಹೋದ ಅನುಭವ ಮೂಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಇತಿಹಾಸದ ಜೊತೆಗೆ ವರ್ತಮಾನವನ್ನೂ ಕಟ್ಟಿಕೊಡುವುದರಿಂದಾಗಿ ಸಮಗ್ರ ಚಿತ್ರಣ ಸಿಗುತ್ತದೆ. ಪ್ರಸಿದ್ಧ ಮಸೀದಿಗಳು, ಚರ್ಚುಗಳು, ದೇಗುಲಗಳ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನೀಡಿದ್ದಾರೆ. ಆ ಕಾಲದ ಮಾರುಕಟ್ಟೆಗಳ ಮಹತ್ವ ಹಾಗೂ ಈಗಿನ ಸ್ಥಿತಿಗತಿಯನ್ನು ತೆರೆದಿಟ್ಟಿದ್ದಾರೆ.
ಕೊನೇ ಮಾತು: ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿ ನಿವೃತ್ತರಾದ ಡಿ.ವಿ.ಗುರುಪ್ರಸಾದ್ ಅವರು ಪ್ರಾಚೀನ ರೇಷ್ಮೆ ರಸ್ತೆ ಪಸರಿಸಿದ್ದ ಹತ್ತು ದೇಶಗಳು ಮತ್ತು ಹದಿನಾರು ನಗರಗಳಲ್ಲಿ ಪ್ರವಾಸ ಮಾಡಿ, ಪ್ರತ್ಯಕ್ಷಾನುಭವ ಪಡೆದು ಕೃತಿ ರಚಿಸಿದ್ದು ಅಸಾಧಾರಣ ಸಾಹಸವೇ ಸರಿ. ಒಂದು ವಿಷಯದ ಬಗ್ಗೆ ಪ್ಯಾಷನ್ ಇದ್ದಾಗ ಮಾತ್ರ ಇಂಥ ಕೆಲಸ ಕಾರ್ಯರೂಪಕ್ಕೆ ಬರುತ್ತದೆ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಜಾಗತಿಕ ಭೂಪಟವನ್ನು ನೋಡುವಾಗೆಲ್ಲ, ರೇಷ್ಮೆ ರಸ್ತೆ ಹಾದುಹೋದ ದೇಶಗಳಿಗೆ ಹೋಗಬೇಕೆಂಬ ಬಯಕೆ ಮೂಡಿದ್ದನ್ನು ಲೇಖಕರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಆಗ ಮೊಳೆದ ಕನಸನ್ನು ಅನೇಕ ವರ್ಷಗಳವರೆಗೆ ಜೋಪಾನ ಮಾಡಿಕೊಂಡು ಕೊನೆಗೂ ಆ ಕನಸನ್ನು ನನಸು ಮಾಡಿಕೊಂಡ ಅವರ ಛಾತಿಗೆ ಭಲೇ ಎನ್ನಲೇಬೇಕು. ರೇಷ್ಮೆ ರಸ್ತೆಯಿದ್ದ ಪಾಕಿಸ್ತಾನ, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ, ಇರಾಕ್, ಸಿರಿಯಾ ಹಾಗೂ ಲೆಬನಾನ್ ದೇಶಗಳಿಗೆ ಹೋಗಲು ಅವರಿಗೆ ಆಗಿಲ್ಲ. ಈ ದೇಶಗಳಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದರೆ, ಅಲ್ಲಿಗೆ ಹೋಗಿ ಅಧ್ಯಯನ ನಡೆಸಿ, ಈ ಕೃತಿಯ ಮುಂದಿನ ಆವೃತ್ತಿಯಲ್ಲಿ ಚಿತ್ರಣ ನೀಡುವುದಾಗಿ ಲೇಖಕರು ಹೇಳಿದ್ದಾರೆ. ಈ ಮೂಲಕ, ರೇಷ್ಮೆ ರಸ್ತೆ ಕೃತಿಯ ಎರಡನೆಯ ಭಾಗಕ್ಕೆ ಕಾಯುವಂತೆ ಮಾಡಿದ್ದಾರೆ!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)