ಕಲ್ಪತರುವಿಗೆ ನೂರೆಂಟು ಸಂಕಷ್ಟ: ಇಳುವರಿ ಕುಂಠಿತದಿಂದ ಬೆಳೆಗಾರರು ಹೈರಾಣ | ಮರಳಲಿ ತೆಂಗಿನ ಗತವೈಭವ

photo-3-68b5e127df10f
Published on

ತುಮಕೂರು ಸೇರಿ ಕರ್ನಾಟಕದ 17 ಜಿಲ್ಲೆಗಳ 134 ತಾಲೂಕುಗಳಲ್ಲಿ ತೆಂಗು ಬೆಳೆಯುವ ರೈತರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಬೇಡಿದ್ದೆಲ್ಲವನ್ನೂ ನೀಡುವ ‘ಕಲ್ಪವೃಕ್ಷ’ ರೈತರ ಮೇಲೆ ಮುನಿದಿದೆ, ಇಳುವರಿ ಗಣನೀಯವಾಗಿ ಕುಂಠಿತವಾಗಿದೆ. ವಿವಿಧ ರೋಗಗಳಿಂದ ತೋಟಗಳಲ್ಲಿ ತೆಂಗಿನ ಗತವೈಭವ ಮರೆಯಾಗಿದೆ. ತೆಂಗು ಬೆಳೆಗಾರರನ್ನು ಉಳಿಸಲು ಸಾಧ್ಯವಾಗುವ ‘ನೀರಾ ನೀತಿ’ಗೆ ರಾಜ್ಯದಲ್ಲಿ ಎಳ್ಳುನೀರು ಬಿಡಲಾಗಿದೆ. ರೈತರು ಬಯಸುವ ಸಿಹಿನೀರಾ ನೀತಿ, ಎಳನೀರು ಮಾರುಕಟ್ಟೆ, ಸಂಶೋಧನಾ ಪಾರ್ಕ್, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸೃಷ್ಟಿಸಲು ತೆಂಗು ಉತ್ಪಾದಕರ ಸಹಕಾರ ಸಂಘ ಬೇಡಿಕೆಯಾಗಿಯೇ ಉಳಿದಿವೆ. ಸದಾ ರೈತಪರವಾಗಿರುವ ವಿಜಯವಾಣಿ ಸೆ.2 ವಿಶ್ವ ತೆಂಗು ದಿನದ ಹಿನ್ನೆಲೆಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದೆ.

ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಎನ್ನಿಸಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿಯಲ್ಲಿ ಇತ್ತೀಚಿನ ವರ್ಷದವರೆಗೂ ಬಿಳಿಚೀಟಿ ವ್ಯವಹಾರದ ಮೂಲಕವೇ ರೈತರನ್ನು ಶೋಷಿಸಲಾಗಿತ್ತು. ಇತ್ತೀಚೆಗೆ ಜಾರಿಗೊಳಿಸಿದ ಇ-ಟೆಂಡರ್ ವ್ಯವಸ್ಥೆ ಹಾಗೂ ಹರಾಜು ದಿನಾಂಕ ಬದಲಾವಣೆ ಸೇರಿ ವಿವಿಧ ಕ್ರಾಂತಿಕಾರಕ ನಿರ್ಧಾರದಿಂದ ಕೊಬ್ಬರಿಗೆ ನೈಜ ಬೆಲೆ ಸಿಗಲಾರಂಭಿಸಿದೆ. 19 ಸಾವಿರ ರೂ. ಉತ್ಪಾದನಾ ವೆಚ್ಚವಿರುವ ಕ್ವಿಂಟಾಲ್ ಕೊಬ್ಬರಿ ಬೆಲೆ 12 ಸಾವಿರ ರೂ. ಆಸುಪಾಸಿನಲ್ಲಿಯೇ ಇರುತ್ತಿತ್ತು. ಈಗ ಬರೋಬ್ಬರಿ 30 ಸಾವಿರ ರೂ. ತಲುಪಿರುವುದು ಸಾರ್ವಕಾಲಿಕ ಸೋಜಿಗ ಎನ್ನಿಸಿದೆ. ಈ ಬೆಲೆಯೇ ಇದ್ದರೆ ತೆಂಗು ಬೆಳೆಗಾರರಿಗೆ ತೊಂದರೆ ಇಲ್ಲ. ಆದರೆ, ಇದೇ ಬೆಲೆಯನ್ನು ಉಳಿಸಿಕೊಳ್ಳಲು ರವಾನೆದಾರರು, ವ್ಯಾಪಾರಸ್ಥರಿಗೆ ಮನಸ್ಸಿಲ್ಲ. ವಿವಿಧ ಮಾರುಕಟ್ಟೆ ತಂತ್ರಗಳನ್ನು ಪ್ರಯೋಗಿಸಿ ಬೆಲೆ ಇಳಿಸುವ ಚಾಳಿಗೆ ಇತಿಶ್ರೀ ಹಾಡಬೇಕಿದೆ. ಆನ್​ಲೈನ್ ಮಾರುಕಟ್ಟೆಯಲ್ಲಿ ತೆಂಗಿಗಿರುವ ಬೇಡಿಕೆಯನ್ನು ಉಳಿಸಿಕೊಳ್ಳಬೇಕಿದೆ.

ತೆಂಗಿನ ಮಟ್ಟೆ, ಚಿಪ್ಪಿಗೂ ಬೇಕಿದೆ ಮೌಲ್ಯವರ್ಧನೆ: ಪ್ರಸ್ತುತ ಮಾರುಕಟ್ಟೆಯಲ್ಲಿ ತೆಂಗಿನ ಮಟ್ಟೆ ಹಾಗೂ ಚಿಪು್ಪ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದು, ಸದಾ ಕಾಲವೂ ಇದಕ್ಕೆ ಮಾರುಕಟ್ಟೆ ಒದಗಿಸುವ ಸವಾಲಿದೆ. ತೆಂಗಿನ ಮಟ್ಟೆ ಉಪಯೋಗಿಸಿಕೊಂಡು ಪೀಠೋಪಕರಣ ತಯಾರಿಸುವ ಉದ್ಯಮ ಆರಂಭಿಸಲು ಯುವಕರಿಗೆ ಸಹಾಯಧನ ನೀಡುವ ಯೋಜನೆ ಕೈಬಿಡಲಾಗಿದೆ. ಕೇರಳದಲ್ಲಿರುವ ತೆಂಗಿನ ನಾರು ಅಭಿವೃದ್ಧಿ ಮಂಡಳಿಯಲ್ಲಿ ಭರಪೂರ ಅನುದಾನ ಲಭ್ಯವಿದ್ದು, ಅದನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕದ ರೈತರು ಹಿಂದೆ ಬಿದ್ದಿದ್ದಾರೆ. ಮಂಡಳಿಯ ಶೇಕಡ 90 ಅನುದಾನ ಕೇರಳ ಹಾಗೂ ತಮಿಳುನಾಡಿನ ರೈತರು ಬಳಸಿಕೊಳ್ಳುತ್ತಿದ್ದಾರೆ. ನಾರು ಬಳಸಿಕೊಂಡು ಉದ್ಯಮ ಸ್ಥಾಪಿಸಲು ಅವಕಾಶವಿದ್ದು, ಈ ಬಗ್ಗೆ ವೈಜ್ಞಾನಿಕವಾದ ಅಧ್ಯಯನ ನಡೆಸಿ ರೂಪಿಸಿದ್ದ ಮಹತ್ವಾಕಾಂಕ್ಷಿಯ 400 ಕೋಟಿ ರೂ. ಯೋಜನೆ ನನೆಗುದಿಗೆ ಬಿದ್ದಿದೆ. ಯೋಜನೆ ಒಪ್ಪಿ ಆರಂಭದಲ್ಲಿ 86 ಕೋಟಿ ರೂ. ನೀಡಿದ್ದ ರಾಜ್ಯ ಸರ್ಕಾರ ಯೋಜನೆ ಪೂರ್ಣಗೊಳಿಸಲು 4 ವರ್ಷದ ಕಾಲಮಿತಿ ನೀಡಿತ್ತು. ಸಣ್ಣ ಕೈಗಾರಿಕೆ ಇಲಾಖೆ 30 ಕೋಟಿ ರೂ. ಮಾತ್ರ ಖರ್ಚು ಮಾಡಿ ಉಳಿದ ಹಣ ವಾಪಸಾಗಿ ಯೋಜನೆ ನನೆಗುದಿಗೆ ಬಿದ್ದಿದೆ. ಡಾಂಬರ್, ಕಾಂಕ್ರೀಟ್ ರಸ್ತೆ ನಿರ್ವಣದಲ್ಲಿಯೂ ತೆಂಗಿನ ನಾರನ್ನು ಬಳಸಿಕೊಂಡರೆ ತೇವಾಂಶ ಹೀರುತ್ತದೆ, ರಸ್ತೆಯ ಗುಣಮಟ್ಟ ಹೆಚ್ಚಿಸಬಹುದು ಎಂಬುದು ವೈಜ್ಞಾನಿಕವಾಗಿ ದೃಢವಾಗಿದ್ದರೂ ಅದನ್ನು ಬಳಸಲು ಅಧಿಕಾರಿಗಳು ಮುಂದಾಗುತ್ತಿಲ್ಲ.

ಕಾಂಡ ಸೋರುವ ರೋಗ: ಕಾಂಡ ಸೋರುವ ರೋಗ. ಇದು ಶಿಲೀಂದ್ರದಿಂದ ಬರುತ್ತದೆ. ರೋಗಕ್ಕೆ ತುತ್ತಾದ ಮರಗಳ ಗರಿಗಳು ಒಣಗಿ ಮರದಲ್ಲೇ ನೇತಾಡುತ್ತಿರುತ್ತವೆ. ಕಾಂಡದ ಬಿರುಕುಗಳಿಂದ ಕಪ್ಪು, ಕಂದು ಬಣ್ಣದ ದ್ರವ ಹೊರಗೆ ಬರುತ್ತದೆ. ಕ್ರಮೇಣ ರೋಗ ಉಲ್ಬಣವಾದಂತೆ ಹರಳು, ಎಳನೀರು, ಕಾಯಿಗಳು ಉದುರಿ ಪೂರ್ತಿ ಮರ ಒಣಗುತ್ತದೆ.

ಫೆಡರೇಷನ್ ಬೇಡಿಕೆ ಈಡೇರಿಲ್ಲ: ತೆಂಗು ವಲಯ ಹಾಗೂ ಮೌಲ್ಯವರ್ಧನೆಗೆ ಪೂರಕವಾಗಿ ಕೆಎಂಎಫ್ ಮಾದರಿಯಲ್ಲಿ ಸಹಕಾರ ಸಂಸ್ಥೆ ಸ್ಥಾಪಿಸಬೇಕು ಎಂದು ಕೂಗು ಇದೆ. ಸಿಹಿನೀರಾ, ಎಳನೀರು, ಕಾಯಿ, ಕೊಬ್ಬರಿ, ಮಟ್ಟೆ, ಚಿಪ್ಪು, ನಾರು ಸೇರಿ ಕಲ್ಪವೃಕ್ಷದಿಂದ ಉತ್ಪಾದನೆಯಾಗುವ ಎಲ್ಲ ವಸ್ತುಗಳಿಗೂ ಮೌಲ್ಯವರ್ಧನೆ ಮಾಡಿ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಿಸಿ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಕೆಲಸ ಮಾಡಲು ಸಾಧ್ಯವಿದೆ. ಪ್ರತಿಗ್ರಾಮದಲ್ಲಿಯೂ ಸಹಕಾರ ಸಂಘಗಳು ಆರಂಭವಾದರೆ ತೆಂಗು ಹಾಗೂ ತೆಂಗು ನಂಬಿರುವ ರೈತರು ಉಳಿಯಲು ಸಾಧ್ಯ.

ಗಂಗಾಪಾಣಿ ಎಳನೀರು!

ತುಮಕೂರು ಜಿಲ್ಲೆಯ ಎಳನೀರು ವಿಶಿಷ್ಟ ರುಚಿಯಿಂದ ಪ್ರಖ್ಯಾತಿ ಪಡೆದಿದೆ, ತಿಪಟೂರು ತಾಲೂಕಿನ ಹೊನ್ನವಳ್ಳಿ ಮೂಲ ‘ಗಂಗಾಪಾಣಿ’ ತಳಿಯ ಎಳನೀರಿಗೆ ದೀರ್ಘ ಇತಿಹಾಸವಿದೆ. ಮೈಸೂರು ಮಹಾರಾಜರು ಈ ಗಂಗಾಪಾಣಿ ಎಳನೀರನ್ನು ಬಯಸಿ ಕುಡಿಯುತ್ತಿದ್ದರು. ಪರಂಗಿಹಣ್ಣಿನ ಆಕಾರದ ಈ ಎಳನೀರು ಸಿಹಿ ಜತೆಗೆ ವಿಶೇಷವಾದ ಸುಗಂಧ. 250 ಎಂಎಲ್ ನೀರು ಒಂದು ಕಾಯಲ್ಲಿ ಸಿಗುತ್ತದೆ. ಆದರೆ, ಕೊಬ್ಬರಿಯ ಆಸೆಯಿಂದ ಈ ತಳಿಯ ತೆಂಗಿನ ಮರ ಕಡಿಮೆಯಾಗಿದೆ. ಹವಾಮಾನದ ವೈಪರೀತ್ಯದಿಂದ ನೀರಿನ ಪ್ರಮಾಣ ಕೂಡ ಕಡಿಮೆಯಾಗುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ಕಾಡುತ್ತಿದೆ ರೋಗಬಾಧೆ

ರಾಮನಗರ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಆದರೆ, ನೀರಿನ ಕೊರತೆಯಿಂದ ಜಿಲ್ಲೆಯಲ್ಲಿ ನುಸಿ ಮತ್ತು ಕಪ್ಪುತಲೆ ಹುಳು ಬಾಧೆ ಹೆಚ್ಚಿದ್ದು, ಇಳುವರಿ ಕುಂಠಿತವಾಗುತ್ತಿದೆ. ಜಿಲ್ಲೆಯ ಮಾಗಡಿ ತಾಲೂಕಿನ ಚಂದೂರಾಯರಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ತೆಂಗು ಸಂಸ್ಕರಣ ಘಟಕ ನಿರ್ಮಾಣ ಮಾಡಲಾಗಿದೆ ಯಾದರೂ ಇನ್ನು ಇದು ಕಾರ್ಯಾಚರಣೆ ಆರಂಭಿಸದಿರುವುದು ರೈತರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ.

ಗುಣಮಟ್ಟದ ಇಳುವರಿ ಕುಂಠಿತ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಗುಣಮಟ್ಟದ ಇಳುವರಿ ಸಮಸ್ಯೆ ಹಿನ್ನೆಲೆಯಲ್ಲಿ ಸ್ಥಳೀಯ ಉತ್ಪನ್ನಗಳಿಗಿಂತಲೂ ಹೊರಭಾಗದಿಂದ ಪೂರೈಕೆಯ ಅವಲಂಬನೆ, ಮರದಿಂದ ತೆಂಗಿನ ಕಾಯಿ ಇಳಿಸುವಿಕೆ, ಸಾಗಾಣೆ ಸೇರಿ ನಿರ್ವಹಣೆ ವೆಚ್ಚ ದುಬಾರಿಯಾಗಿದೆ. ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ.

ಸಾವಯವ ಗೊಬ್ಬರದ ಕೊರತೆ

ಚಿತ್ರದುರ್ಗ ಜಿಲ್ಲೆಯ ತೆಂಗು ತಿಪಟೂರು ಮಾರುಕಟ್ಟೆಗೆ ಹೋಗುತ್ತದೆ. ವ್ಯಾಪಾರಸ್ಥರು ತೋಟಗಳಿಗೆ ಬಂದು ತೆಂಗಿನಕಾಯಿಗಳನ್ನು ಖರೀದಿಸುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲ. ಆದರೆ, ಒಂದು ಕಡೆ ರೋಗಬಾಧೆ, ಎಳನೀರು ಆಗುವುದಕ್ಕಿಂತ ಮುಂಚೆ ಕೊಯ್ಲು ಮಾಡುವುದು, ನಿರ್ವಹಣೆ ಕೊರತೆ, ಸಾವಯವ ಗೊಬ್ಬರದ ಕೊರತೆ ಕಾರಣಕ್ಕೆ ಗೊನೆಗಳಲ್ಲಿ ಗುಣಮಟ್ಟ ಕುಸಿತವಾಗುತ್ತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಅತಿವೃಷ್ಟಿಯಿಂದ ಭಾರಿ ಹಾನಿ

ದಾವಣಗೆರೆ ಜಿಲ್ಲೆಯಲ್ಲಿ 7500 ಹೆಕ್ಟೇರ್​ನಲ್ಲಿ ತೆಂಗು ಬೆಳೆಯಲಾಗುತ್ತದೆ. ಹರಿಹರ ಮತ್ತು ದಾವಣಗೆರೆ ತಾಲೂಕುಗಳಲ್ಲಿ ತೆಂಗು ಕೃಷಿ ಜಾಸ್ತಿ ಇದೆ. ಕಳೆದ ಎರಡು ವರ್ಷಗಳಿಂದ ಮಳೆ ಹೆಚ್ಚಾಗಿದೆ. ಇದರಿಂದ ಶೇ.50-80ರಷ್ಟು ಇಳುವರಿ ಕುಸಿತ ಕಂಡಿದೆ. ಈ ಹಿಂದೆ ಒಂದು ತೆಂಗಿನ ಗಿಡದಲ್ಲಿ 130-140 ಕಾಯಿಗಳ ಇಳುವರಿ ಬರುತ್ತಿತ್ತು. ಈಗ ಕೇವಲ 20-30 ಕಾಯಿ ಬಂದರೆ ಹೆಚ್ಚು ಎನ್ನುತ್ತಾರೆ ರೈತರು. ಇಳುವರಿ ಕುಸಿತ ಕಂಡಿರುವುದರಿಂದ ದರ ಹೆಚ್ಚಾಗಿದೆ. ಕೆಜಿಗೆ 24 ರೂ. ಇದ್ದ ದರ ಈಗ 59-62 ರೂ.ಗಳಿಗೆ ಏರಿಕೆಯಾಗಿದೆ.

‘ಒಂದು ಜಿಲ್ಲೆ ಒಂದು ಉತ್ಪನ್ನ’ಕ್ಕೆ ನಿರಾಸಕ್ತಿ

ರೈತರು, ಯುವಕರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಘೊಷಿಸಿದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಗೆ ತುಮಕೂರು ಹಾಗೂ ರಾಮನಗರದಲ್ಲಿ ತೆಂಗು ಆಯ್ಕೆಯಾದರೂ ಪ್ರಯೋಜನ ಪಡೆದವರ ಸಂಖ್ಯೆ 10 ದಾಟಿಲ್ಲ. ಉತ್ಪನ್ನಗಳ ಆಧಾರಿತ ಸಂಸ್ಕರಣಾ ಘಟಕ ತೆರೆಯಲು ಶೇ.35 ಸಹಾಯಧನದೊಂದಿಗೆ (ಗರಿಷ್ಠ 10 ಲಕ್ಷ ರೂ.) ಸಾಲ ಸೌಲಭ್ಯ ನೀಡಲಾಗಿದೆ. ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳೂ ಉತ್ಸಾಹ ತೋರಿಸುತ್ತಿಲ್ಲ. ತೆಂಗಿಗೆ ಸಂಬಂಧಿಸಿದ ಕೊಬ್ಬರಿ ಎಣ್ಣೆ, ಬಿಸ್ಕೆಟ್, ಕ್ರೀಮ್ ಪೌಡರ್, ಐಸ್ಕ್ರೀಮ್ ಮೊದಲಾದ ಸá-ಮಾರು 30 ಬಗೆಯ ತೆಂಗು ಉತ್ಪನ್ನಗಳನ್ನು ತಯಾರಿಸುವ ಅವಕಾಶವಿದೆ.

ಸಿಹಿ ನೀರಾ ಇಳಿದರಷ್ಟೇ ತೆಂಗಿಗೆ ಉಳಿಗಾಲ

ನೀರಾ ಚಳವಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಹಿಂದಿನಿಂದಲೂ ಸಿಹಿನೀರಾ ಇಳಿಸಲು ಬೇಡಿಕೆಯಿದ್ದರೂ ಸರ್ಕಾರಗಳು ಮನಸ್ಸು ಮಾಡಿಲ್ಲ. ನೀರಾ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನರದೌರ್ಬಲ್ಯ ಹೊಂದಿದವರಿಗೆ ನೀರಾ ದಿವ್ಯ ಔಷಧ. ನೀರಾದಿಂದ ಬೆಲ್ಲ, ಕಲ್ಲುಸಕ್ಕರೆ, ಜ್ಯೂಸ್, ಜಾಮ್ ಚಾಕಲೇಟ್, ಬಿಸ್ಕೆಟ್, ಸಿರಪ್, ಇನ್ನಿತರ ಸಿಹಿತಿಂಡಿ ತಯಾರಿಸಬಹುದು. ಇದರಿಂದ ತೆಂಗು ಬೆಳೆಗಾರರು ಆಧುನಿಕ ಜೀವನಶೈಲಿಯ ಜನರಿರುವ ಪ್ರಪಂಚದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು.

ನಿಲ್ಲದ ಕಾಡುಪ್ರಾಣಿಗಳ ಕಾಟ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತೆಂಗಿನ ಇಳುವರಿ ಕಳೆದ ಸಾಲಿಗಿಂತ ಈ ಬಾರಿ ಕುಸಿದಿದೆ. ಕೋತಿ ಮತ್ತು ಕಾಡುಪ್ರಾಣಿಗಳ ಕಾಟ, ಸುರುಳಿರೋಗ, ಕೀಟಬಾಧೆ, ನುರಿತ ಕಾರ್ವಿುಕರ ಅಭಾವ, ವಿಪರೀತ ಮಳೆ ಕೃಷಿಕರಿಗೆ ಸವಾಲಾಗಿದೆ. ತಲಪಾಡಿ, ಉಳ್ಳಾಲ, ಮಂಗಳೂರು, ಉಡುಪಿ ಭಾಗದ ಕಡಲ ಕಿನಾರೆಯ ತೆಂಗಿನ ತೋಟಗಳಲ್ಲಿ ಬಿಳಿ ಕೀಟಬಾಧೆಯಿದ್ದು, ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗಗಳಲ್ಲಿ ಹಲವು ತೋಟಗಳಲ್ಲಿ ಕಂಡುಬಂದಿದೆ.

ಇಕ್ಕಟ್ಟಿಗೆ ಸಿಲುಕಿದ ರೈತರು

ತೆಂಗಿನ ಬೆಲೆ ಏರಿಳಿತ ರೈತನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೇ ದಿನದಲ್ಲಿ ಬೆಲೆ ಮೂರ್ನಾಲ್ಕು ಸಾವಿರ ತಗ್ಗಿರುವ ನಿದರ್ಶನಗಳೂ ಇವೆ. ಇದು ದಾಸ್ತಾನು ಮಾಡಿರá-ವ ರೈತರನ್ನು ಚಿಂತೆಗೆ ದೂಡಿದ್ದರೆ, ದಲ್ಲಾಳಿಗಳಿಗೂ ಬೆಲೆ ಏರಿಳಿತದ ಬಿಸಿ ತಟ್ಟಿದ್ದು ಹಲವರು ನಷ್ಟ ಅನುಭವಿಸಿ ಅಂಗಡಿ ಬಂದ್ ಮಾಡಿದ್ದಾರೆ. ಎಳನೀರನ್ನು ರಾಷ್ಟ್ರೀಯ ಪಾನೀಯವೆಂದು ಘೊಷಿಸಿ ಶಾಲಾ ಮಕ್ಕಳ ಬಿಸಿಯೂಟದ ವೇಳೆ ಮಕ್ಕಳಿಗೆ ಎಳನೀರು ನೀಡುವ ಮೂಲಕ ಬೆಳೆಗಾರರನ್ನು ಸರ್ಕಾರ ಪೋ›ತ್ಸಾಹಿಸಬೇಕು ಎನ್ನುವ ಬೇಡಿಕೆ ರೈತರದ್ದು.

ಹವಾಮಾನ ಬದಲಾವಣೆಯ ಹೊಡೆತ

ಏಷ್ಯಾದ ಅತಿದೊಡ್ಡ ಹಾಗೂ ಹೆಚ್ಚು ವಹಿವಾಟು ನಡೆಯುವ ಎಳನೀರು ಮಾರುಕಟ್ಟೆ (ಎಪಿಎಂಸಿ) ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿದೆ. ದಿನದಿಂದ ದಿನಕ್ಕೆ ತೆಂಗಿನ ಕಾಯಿ ಬೆಲೆ ಗಗನಕ್ಕೇರುತ್ತಿದೆ. ಆದರೆ ತೆಂಗು ಬೆಳೆಗಾರರು ಹಾಗೂ ಉಪ ಉತ್ಪನ್ನ ತಯಾರಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ವಿಪರ್ಯಾಸದ ಸಂಗತಿ. ತೆಂಗು ಹಾಗೂ ಅದರ ಉಪ ಉತ್ಪನ್ನಗಳ ಬೆಳೆಗಾರರು ಮುಖ್ಯವಾಗಿ ಹವಾಮಾನ ಬದಲಾವಣೆ, ಇಳುವರಿ ಕುಸಿತ, ರೋಗಗಳು, ಬೆಲೆ ಏರಿಳಿತ, ಮಾರುಕಟ್ಟೆ ಸಮಸ್ಯೆಗಳು, ಬೆಂಬಲ ಕೊರತೆ, ಮೂಲಸೌಕರ್ಯದ ಕೊರತೆ ಮತ್ತು ಉಪ ಉತ್ಪನ್ನಗಳಿಗೆ ಸಮರ್ಪಕ ಮಾರುಕಟ್ಟೆ ಲಭ್ಯವಿಲ್ಲದಿರುವುದು ಸೇರಿದಂತೆ ಹಲವಾರು ಗಂಭೀರ ತೊಂದರೆ ಎದುರಿಸುತ್ತಿದ್ದಾರೆ.

ಮಂಗಗಳ ಹಾವಳಿಯಿಂದ ಬೆಳೆನಷ್ಟ

ಮಂಗನ ಕಾಟದಿಂದ ಉತ್ತರ ಕನ್ನಡ ಜಿಲ್ಲೆಯ ತೆಂಗು ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ತೆಂಗಿನ ತೋಟಗಳಿಗೆ ನುಗ್ಗುವ ವಾನರ ಸೇನೆ, ಬೆಳೆಯುವ ಹಂತದಲ್ಲಿರುವ ಎಳನೀರನ್ನು ಕಿತ್ತು, ನೀರು ಕುಡಿದು ಬಿಸಾಡುತ್ತದೆ. ಅಲ್ಲದೆ, ನುಸಿ ಪೀಡೆಯಿಂದಲೂ ಇಳುವರಿ, ಕಾಯಿಗಳ ಗಾತ್ರ ಕುಂಠಿತವಾಗುತ್ತಿದೆ. ದುಂಬಿಗಳು ಮರಗಳನ್ನು ನಾಶಪಡಿಸುತ್ತಿವೆ ಎನ್ನುತ್ತಾರೆ ಬೆಳೆಗಾರ ನಾಗರಾಜ ಹೆಗಡೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 10,706 ಹೆಕ್ಟೇರ್​ನಷ್ಟು ತೆಂಗಿನ ಬೆಳೆ ಇದ್ದು, ವಾರ್ಷಿಕ 83 ಸಾವಿರ ಟನ್ ತೆಂಗು ಉತ್ಪಾದನೆಯಾಗುತ್ತಿದ್ದು, ಬಹುಪಾಲು ಕುಮಟಾ ತಾಲೂಕು ಪೂರೈಸುತ್ತದೆ.

ಕೈಕೊಟ್ಟ ಫಸಲು

ಹಾಸನ ಜಿಲ್ಲೆಯಲ್ಲಿ ತೆಂಗು ಬೆಳೆಗೆ ತಗುಲಿರುವ ಮಾರಕ ಕಪ್ಪುತಲೆ ಹುಳು ಬಿಳಿನೊಣ (ವೈಟ್​ಪ್ಲೈ) ವನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ, ಜಾವಗಲ್, ಬಾಣಾವರ, ಕಸಬಾ ಹಾಗೂ ಕಣಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 52 ಸಾವಿರ ಹೆಕ್ಟೇರ್​ನಲ್ಲಿ ತೆಂಗು ಬೆಳೆಯಲಾಗಿದ್ದು, ರಸಸೋರುವಿಕೆ, ಕಪ್ಪುತಲೆ ಹುಳುವಿನ ಬಾಧೆ, ಗರಿ ರೋಗ ಸೇರಿದಂತೆ ಹಲವು ಕಾರಣದಿಂದಾಗಿ ಪ್ರಸಕ್ತ ಅವಧಿಯಲ್ಲಿ ಫಸಲು ಕೈಕೊಟ್ಟಿದೆ. ಲಕ್ಷಾಂತರ ತೆಂಗಿನ ಮರಗಳು ಗರಿ ಸುಳಿ ಉದುರಿ ಬಿದ್ದು ಹೋಗಿವೆ.

ತೆಂಗು ಬೆಳೆ ಕಪ್ಪುತಲೆ ಹುಳು, ಬಿಳಿನೊಣ, ರಸಸೋರುವಿಕೆ, ಗರಿರೋಗ ಇನ್ನಿತರ ಕಾರಣದಿಂದಾಗಿ ವಿನಾಶದ ಅಂಚಿಗೆ ಬಂದು ನಿಂತಿರುವುದು ನೋವಿನ ಸಂಗತಿ. ಇದರಿಂದಾಗಿ ತೆಂಗು ಆಧಾರಿತ ಉತ್ಪನ್ನಗಳು ಮೂಲೆಗುಂಪಾಗುವ ಸಾಧ್ಯತೆ ಹೆಚ್ಚಿದೆ. | ಸತೀಶ್ ನಾಗತಿಹಳ್ಳಿ, ಪ್ರಗತಿಪರ ಕೃಷಿಕ, ಅರಸೀಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net