ಒಂದು ಧರ್ಮ, ಎರಡು ಹಾದಿಗಳು...

Column F
Published on
ಇಂದು ನಾವು ಕಾಣುತ್ತಿರುವ ಅತಿದೊಡ್ಡ ಧಾರ್ವಿುಕ-ಸಾಮಾಜಿಕ-ಸಾಂಸ್ಕೃತಿಕ-ಶೈಕ್ಷಣಿಕ ವಿಪರ್ಯಾಸವೆಂದರೆ ಇಸ್ಲಾಂನ ಜನ್ಮಸ್ಥಳ ಮತ್ತು ಶತಮಾನಗಳಿಂದಲೂ ಉಗ್ರ ಮೂಲಭೂತವಾದಕ್ಕೆ ಹೆಸರಾಗಿದ್ದ ಸೌದಿ ಅರೇಬಿಯಾದ ಮುಸ್ಲಿಂ ಸಮಾಜ ಉದಾರವಾದದತ್ತ ಸಾಗುತ್ತಿದ್ದರೆ, ಶತಮಾನಗಳಿಂದಲೂ ಉದಾರವಾಗಿದ್ದ ಭಾರತೀಯ ಉಪಖಂಡದ ಮುಸ್ಲಿಂ ಸಮಾಜ ಮೂಲಭೂತವಾದದತ್ತ ವೇಗವಾಗಿ ಸಾಗುತ್ತಿದೆ! ಈ ಪರಸ್ಪರ ವಿರುದ್ಧ ದಿಕ್ಕಿನ ಚಲನೆ ಕಳೆದ ಒಂದು-ಒಂದೂವರೆ ದಶಕದಲ್ಲಿ ವೇಗ ಪಡೆದುಕೊಳ್ಳುತ್ತಿದೆ.

ಭಾರತೀಯ ಉಪಖಂಡದಲ್ಲಿ ನೂರು ವರ್ಷಗಳ ಹಿಂದೆಯೇ ನಿಧಾನವಾಗಿ ತಲೆಯೆತ್ತತೊಡಗಿದ ಅದು 1947ರ ನಂತರ ಪಾಕಿಸ್ತಾನಕ್ಕೆ ಸೀಮಿತಗೊಂಡು ಅಲ್ಲಿ ಗಟ್ಟಿಯಾಗಿ ಬೇರಿಳಿಸಿಕೊಳ್ಳತೊಡಗಿತು. ಮುಸ್ಲಿಂ ಧರ್ಮಗುರುಗಳ ಒತ್ತಡಕ್ಕೆ ಸಿಕ್ಕಿದ ಅಧ್ಯಕ್ಷ ಇಸ್ಕಂದರ್ ಮಿರ್ಜಾ 1956ರಲ್ಲಿ ಪಾಕಿಸ್ತಾನವನ್ನು ‘ಇಸ್ಲಾಮಿಕ್ ಗಣರಾಜ್ಯ’ ಎಂದು ಸಾಂವಿಧಾನಿಕವಾಗಿ ಘೊಷಿಸಿದರು. ಇಷ್ಟಾಗಿಯೂ ಮುಂದಿನ ಹದಿನೈದು ವರ್ಷಗಳವರೆಗೆ ಪಾಕಿಸ್ತಾನ ಉದಾರವಾದಿ ಮುಸ್ಲಿಂ ದೇಶವಾಗಿಯೇ ಮುಂದುವರಿಯಿತು. ಅದರ ಆ ಸ್ವರೂಪವನ್ನು ಹಿಂತಿರುಗಲಾಗದ ಮಟ್ಟಕ್ಕೆ ಬದಲಾಯಿಸಿದ್ದು 1972-77ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಝುುಲ್ಪಿಕರ್ ಆಲಿ ಭುಟ್ಟೋ. ಮದ್ಯಪಾನ ನಿಷೇದ, ಭಾನುವಾರದ ಬದಲು ಶುಕ್ರವಾರವನ್ನು ಸರ್ಕಾರಿ ರಜಾದಿನವನ್ನಾಗಿಸುವುದು ಹಾಗೂ ಅಹ್ಮದೀಯರನ್ನು ಮುಸ್ಲಿಮರಲ್ಲವೆಂದು ಘೊಷಿಸುವುದು- 1950ರ ದಶಕದಿಂದಲೂ ಮೌಲ್ವಿಗಳ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಅಯೂಬ್ ಖಾನ್ ಮತ್ತು ಯಾಯ್ಹಾ ಖಾನ್​ರ ಸೇನಾ ಸರ್ಕಾರಗಳು ಸೊಪ್ಪುಹಾಕಿರಲಿಲ್ಲ. ಅಂತಿಮವಾಗಿ ಆ ಬೇಡಿಕೆಗಳನ್ನು 1974ರಲ್ಲಿ ಮನ್ನಿಸಿ ಜಾರಿಗೆ ತಂದದ್ದು ಪ್ರಜಾಪ್ರಭುತ್ವ ವಿಧಾನದಲ್ಲಿ ಆಯ್ಕೆಯಾಗಿದ್ದ ಭುಟ್ಟೋ ಎನ್ನುವುದೊಂದು ವಿಪರ್ಯಾಸವೇ ಸರಿ. ನಂತರದ ಸೇನಾ ಸರ್ವಾಧಿಕಾರಿ ಜಿಯಾ-ಉಲ್-ಹಕ್ ಇಸ್ಲಾಮೀಕರಣ ಪ್ರಕ್ರಿಯೆಯನ್ನು ಮತ್ತೊಂದು ಮಜಲಿಗೊಯ್ದರು. ತಾನು ಇಸ್ಲಾಂನ ನಿಷ್ಠಾವಂತ ಸೇವಕ ಎಂದು ಬಣ್ಣಿಸಿಕೊಂಡ ಜಿಯಾ ಹಲವಾರು ಇಸ್ಲಾಮಿಕ್ ಕಾನೂನುಗಳನ್ನು ಅನುಷ್ಠಾನಕ್ಕೆ ತಂದರು. ಜತೆಗೆ ಇಸ್ಲಾಮಿಕ್ ಧಾರ್ವಿುಕ ಶಿಕ್ಷಣ ನೀಡುವ ಸುಮಾರು 25 ಸಾವಿರ ಮದ್ರಸಾಗಳನ್ನು ತೆರೆಯಲು ಜಿಯಾ ಅವಕಾಶ ಮಾಡಿಕೊಟ್ಟರು. ಮುಂದಿನ ಒಂದು ದಶಕದೊಳಗೆ ಜಿಹಾದಿ ಕಾರ್ಖಾನೆಗಳಾಗಿ ಬೆಳೆದ ಅವುಗಳ ಸಂಖ್ಯೆ ಈಗ 40 ಸಾವಿರವನ್ನು ದಾಟಿದೆ. ಗಡಿನಾಡಿನಲ್ಲಿದ್ದ ಅಂತಹ ಜಿಹಾದಿ ಕಾರ್ಖಾನೆಗಳಲ್ಲೇ ಅಫ್ಘನ್ ತಾಲಿಬಾನ್, ಪಾಕ್ ತಾಲಿಬಾನ್, ಹಖ್ಖಾನಿ ನೆಟ್​ವರ್ಕ್​ಗಳಂಥ ಉಗ್ರ ಮೂಲಭೂತವಾದಿ ಸಂಘಟನೆಗಳು ಅವತರಿಸಿದ್ದು. ಅಫ್ಘನ್ ತಾಲಿಬಾನ್ 1996-2001ರ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ಚಲಾಯಿಸಿದರೆ ಪಾಕ್ ತಾಲಿಬಾನ್ 2009ರಲ್ಲಿ ಗಡಿನಾಡಿನ ಸ್ವಾತ್ ಕಣಿವೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡದ್ದಲ್ಲದೆ ರಾಜಧಾನಿ ಇಸ್ಲಾಮಾಬಾದ್​ಗೆ ಕೇವಲ ನೂರ್ ಕಿಲೋಮೀಟರ್ ಹತ್ತಿರದ ಬುನೇರ್ ಪಟ್ಟಣದವರೆಗೆ ಮುಂದೊತ್ತಿ ಬಂದಿತ್ತು! ಅದರ ಆಟಾಟೋಪವನ್ನು ಇಳಿಸಲು ಮತ್ತು ಅದರ ಚಟುವಟಿಕೆಗಳನ್ನು ಸ್ವಾತ್ ಮತ್ತು ಸುತ್ತಮುತ್ತಲಿಗಷ್ಟೇ ಸೀಮಿತಗೊಳಿಸಲು ಪಾಕ್ ಸೇನೆ ಸತತ ಎಂಟು ತಿಂಗಳವರೆಗೆ ಹೋರಾಡಬೇಕಾಯಿತು. ಆದರೆ ಅದಕ್ಕೆ ಎರಡು ವರ್ಷ ಮೊದಲು ಇಸ್ಲಾಮಾಬಾದ್​ನಲ್ಲಿ ನಡೆದ ಘಟನೆಗಳು ಉಪಖಂಡ ಮತ್ತು ಸೌದಿ ಅರೇಬಿಯಾದಲ್ಲಿ ಇಸ್ಲಾಮ್ ಹಿಡಿಯುತ್ತಿರುವ ವಿಭಿನ್ನ ಹಾದಿಗಳ ಕುರಿತಾದ ನಮ್ಮ ಇಂದಿನ ವಿಶ್ಲೇಷಣೆಗೆ ಪೀಠಿಕೆಯಾಗುತ್ತವೆ.

ಸರ್ಕಾರಿ ಧನಸಹಾಯದಿಂದಲೇ ನಡೆಯುತ್ತಿದ್ದ ಇಸ್ಲಾಮಾಬಾದ್​ನ ಲಾಲ್ ಮಸ್ಜಿದ್ ಅಥವಾ ಕೆಂಪು ಮಸೀದಿ ಮೂಲಭೂತವಾದಿಗಳ ಅಡ್ಡೆಯಾದದ್ದು ಜಗತ್ತಿಗೆ ಢಾಣಾಡಂಗುರವಾದದ್ದು 2007ರ ಬೇಸಿಗೆಯಲ್ಲಿ, ಪಾಕಿಸ್ತಾನದಲ್ಲಿ ತಾಲಿಬಾನ್ ಮಾದರಿಯ ಮೂಲಭೂತವಾದಿ ವ್ಯವಸ್ಥೆಯನ್ನು ಸ್ಥಾಪಿಸುವ ತಮ್ಮ ಗುರಿಯನ್ನು ಲಾಲ್ ಮಸ್ಜಿದ್​ನ ಮುಖ್ಯ ಮೌಲ್ವಿಗಳಾದ ಮೌಲಾನಾ ಅಬ್ದುಲ್ ಅಜೀಜ್ ಹಾಗೂ ಮೌಲಾನಾ ಅಬ್ದುಲ್ ರಶೀದ್ ಘಾಜಿ ಎಂಬ ಸಹೋದರರು ಬಹಿರಂಗವಾಗಿಯೇ ಘೊಷಿಸತೊಡಗಿದಾಗ. ‘ರಾಷ್ಟ್ರದ ಎಲ್ಲ ರಂಗಗಳಲ್ಲೂ ಇಸ್ಲಾಮಿಕ್ ಕಾನೂನುಗಳನ್ನು ಸರ್ಕಾರ ಜಾರಿಗೆ ತರಬೇಕು... ಅದಕ್ಕಾಗಿ ನಾವು ಹೋರಾಡುತ್ತೇವೆ... ದೇಶದ ಮೂಲೆಮೂಲೆಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನೆಸಗಲು ನಾವು ತಯಾರಾಗಿದ್ದೇವೆ...’ ಎಂದು ಇವರಿಬ್ಬರು ತಮ್ಮ ಕಾನೂನುಬಾಹಿರ ಎಫ್​ಎಂ ರೇಡಿಯೋ ಮೂಲಕ ಬೆದರಿಕೆಯೊಡ್ಡಿದರೆ ಮದ್ರಸಾಗಳ ವಿದ್ಯಾರ್ಥಿಗಳು ರಾಜಧಾನಿಯಲ್ಲಿ ದೊಣ್ಣೆಗಳನ್ನು ಹಿಡಿದು ತಿರುಗುತ್ತ ಕ್ಯಾಸೆಟ್, ಸಿಡಿ ಮತ್ತಿತರ ಇಸ್ಲಾಮೇತರ ಸರಕುಗಳ ಅಂಗಡಿಗಳ ಮೇಲೆ ದಾಳಿಯೆಸಗತೊಡಗಿದರು. ಲಾಲ್ ಮಸ್ಜಿದ್​ಗೆ ಸೇರಿದ ಜಾಮಿಯಾ ಹಫ್ಸಾ ಎಂಬ ಮಹಿಳಾ ವಿಶ್ವವಿದ್ಯಾಲಯದ ಬುರ್ಕಾಧಾರಿ ವಿದ್ಯಾರ್ಥಿನಿಯರು ಸರ್ಕಾರಿ ಕಟ್ಟಡವೊಂದನ್ನು ಆಕ್ರಮಿಸಿಕೊಳ್ಳುವುದಲ್ಲದೆ ವೇಶ್ಯಾವಾಟಿಕೆಗಳೆಂದು ಸಂಶಯಿಸಲ್ಪಟ್ಟ ಮನೆಗಳ ಮೇಲೆ ದಾಳಿಯೆಸಗಲಾರಂಭಿಸಿದ್ದೂ ಆಯಿತು. ಸಹವಿದ್ಯಾಭ್ಯಾಸವನ್ನು ರದ್ದುಪಡಿಸಬೇಕೆಂದು ಈ ವಿದ್ಯಾರ್ಥಿನಿಯರೂ ಸೇರಿ ಮೂಲಭೂತವಾದಿಗಳು ಕೂಗೆತ್ತಿದರು. ದೇಶದ ಪ್ರತಿಷ್ಠಿತ ವಿದ್ಯಾಕೇಂದ್ರವಾದ ರಾಜಧಾನಿಯ ಕಾಯದ್ ಎ ಆಜಮ್ ಯೂನಿವರ್ಸಿಟಿಯನ್ನು ಲಾಲ್ ಮಸ್ಜಿದ್​ನ ಮೌಲ್ವಿಗಳು ವೇಶ್ಯಾವಾಟಿಕೆ ಎಂದು ಬಣ್ಣಿಸಿ, ಇಸ್ಲಾಮಿಗೆ ವಿರುದ್ಧವಾಗಿ ಉಡುಪು ಧರಿಸುವ ಹಾಗೂ ಬುರ್ಕಾ ಧರಿಸದ ಅಧ್ಯಾಪಕಿಯರು ಮತ್ತು ವಿದ್ಯಾರ್ಥಿನಿಯರ ಮುಖಕ್ಕೆ ಆಸಿಡ್ ಎರಚಿ ಬುದ್ಧಿ ಕಲಿಸಲು ತಮ್ಮ ಬುರ್ಕಾ ಬ್ರಿಗೇಡ್ ಕಳುಹಿಸುವುದಾಗಿ ಬೆದರಿಕೆಯೊಡ್ಡಿದರು. ಇವರೆಲ್ಲರ ಉಪಟಳವನ್ನು ಹತ್ತಿಕ್ಕಲು ಕೊನೆಗೆ ಸರ್ಕಾರ ಸೇನೆಯನ್ನು ನಿಯೋಜಿಸಿದಾಗ ಮೌಲಾನಾ ಅಬ್ದುಲ್ ಅಜೀಜ್ ಹೆಂಗಸಿನಂತೆ ಬುರ್ಖಾ ಧರಿಸಿ ಓಡಿಹೋಗಲು ಹವಣಿಸಿದ್ದ!

ಭಾರತದ ಮುಸ್ಲಿಂ ಸಮುದಾಯದ ಒಂದು ಪುಟ್ಟ ವರ್ಗ ಈಗ ಆ ಹಾದಿಯನ್ನು ಆಯ್ಕೆ ಮಾಡಿಕೊಂಡಂತಿದೆ. ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಲ್ಲಿ ತಲೆಗೂದಲು ಮುಚ್ಚುವ ಹಿಜಾಬ್ ಧರಿಸುವ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವನ್ನು ತಾವು ಮುಂದೆ ನಿಂತು ಮುನ್ನಡೆಸುತ್ತಿದ್ದೇವೆ ಎಂದು ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರೊಬ್ಬರೇ ಮಾಧ್ಯಮದ ಮುಂದೆ ಘಂಟಾಘೊಷವಾಗಿ ಸಾರಿದ್ದಾರೆ. ಅವರ ಮಾತು ನಿಜವೇ ಆಗಿರುವುದಾದರೆ, ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್​ನ ಆರು ಜನ ವಿದ್ಯಾರ್ಥಿನಿಯರು ಪಿಎಫ್​ಐ ನಿರ್ದೇಶನದಂತೇ ನಡೆದುಕೊಳ್ಳುತ್ತಿರುವುದಾದರೆ, ಇದರಲ್ಲಿ ಜಮಾತ್-ಎ-ಇಸ್ಲಾಮಿ-ಇ-ಹಿಂದ್ ಸಹ ಭಾಗಿಯಾಗಿರುವ ವರದಿಗಳೂ ನಿಜವೇ ಆದರೆ ಪಾಕಿಸ್ತಾನದ ಲಾಲ್ ಮಸ್ಜಿದ್​ನ ಮೌಲ್ವಿಗಳು ಮತ್ತು ಬುರ್ಕಾ ಬ್ರಿಗೇಡ್ ಭಾರತದಲ್ಲಿಂದು ಮೊಳಕೆಯೊಡೆಯುತ್ತಿವೆ ಎಂದೆನಿಸದಿರಲಾರದು.

ಹೀಗೆ ಭಾರತದಲ್ಲಿ ಇಸ್ಲಾಮಿಕ್ ವೇಷಭೂಷಣವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ತನ್ನ ಪ್ರಯತ್ನಕ್ಕೆ ಧನಸಹಾಯ ನೀಡಬೇಕೆಂದು ಜಮಾತ್ ಮಾಡಿದ ಬೇಡಿಕೆಗೆ ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ಯೂನಿವರ್ಸಿಟಿ ಸಕಾರಾತ್ಮಕವಾಗಿ ಸ್ಪಂದಿಸಿದೆ, ಅದರ ಜತೆ ಇನ್ನಿತರ ಸೌದಿ ಸಂಸ್ಥೆಗಳೂ ಭಾರತದಲ್ಲಿ ಕಟ್ಟಾ ಇಸ್ಲಾಮಿಕ್ ಆಚರಣೆಗಳ ಅನುಷ್ಠಾನಕ್ಕೆ ಧನಸಹಾಯ ನೀಡುತ್ತಿವೆ ಎಂಬ ವರದಿಗಳೂ ಇವೆ.

ಹೇಳೀಕೇಳೀ ಸೌದಿ ಅರೇಬಿಯಾ ಇಸ್ಲಾಮ್ ಧರ್ಮದ ಜನ್ಮಸ್ಥಳ, ಇಸ್ಲಾಮ್ ಐದು ಆಚರಣೆಗಳಾದ ಹಜ್ ಯಾತ್ರೆಗೆಂದು ಜಗತ್ತಿನ ಮುಸ್ಲಿಮರು ಯಾತ್ರೆ ಹೋಗುವುದೂ ಆ ದೇಶದಲ್ಲೇ ಇರುವ ಮೆಕ್ಕಾ ಮತ್ತು ಮದೀನಾ ಪಟ್ಟಣಗಳಿಗೆ. ತೈಲ ನಿರ್ಯಾತದಿಂದ ಆರ್ಥಿಕವಾಗಿ ಬಲಾಢ್ಯವಾಗಿರುವ ಸೌದಿ ಅರೇಬಿಯಾ ವಿದೇಶಗಳಲ್ಲಿ ಇಸ್ಲಾಮನ್ನು ಸದೃಢಗೊಳಿಸಲು ಕಾರ್ಯಯೋಜನೆಗಳನ್ನು ರೂಪಿಸುತ್ತದೆ ಎನ್ನುವುದರಲ್ಲಿ ಅಚ್ಚರಿ ಪಡುವಂತಹದೇನೂ ಇಲ್ಲ. ಆದರೆ ಪ್ರಶ್ನೆಯೆಂದರೆ ಭಾರತೀಯ ಉಪಖಂಡದಲ್ಲಿನ ಮುಸ್ಲಿಂ ಮಹಿಳೆಯರನ್ನು ಬುರ್ಕಾದೊಳಗೆ ಅಡಗಿಸಲು ಹಣ ನೀಡುವ ಸೌದಿ ಅರೇಬಿಯಾ ತನ್ನ ಮಹಿಳೆಯರನ್ನು ಹೇಗೆ ನೋಡಿಕೊಳ್ಳುತ್ತಿದೆ? ಜತೆಗೆ, ಸೌದಿ ಅರೇಬಿಯಾ ತನ್ನಲ್ಲಿ ಉಳಿಸಿ ಬೆಳೆಸುತ್ತಿರುವ ಇಸ್ಲಾಮ್ ಸ್ವರೂಪ ಯಾವ ಬಗೆಯದು?

1925ರಲ್ಲಿ ಬ್ರಿಟಿಷರ ಸಹಾಯದಿಂದ ಅಬ್ದುಲ್ಲಜೀಜ್ ಬಿನ್ ಸೌದ್ ತನ್ನ ನಜ್ದ್ ಮತ್ತು ನೆರೆಯ ಹೇಜಾಝå್ಗಳನ್ನು ಒಟ್ಟುಗೂಡಿಸಿ ಹೊಸ ರಾಜ್ಯವೊಂದನ್ನು ಸ್ಥಾಪಿಸಿ ಅದಕ್ಕೆ ತನ್ನ ಮನೆತನದ ಹೆಸರನ್ನೇ ಇಟ್ಟು ಸೌದಿ ಅರೇಬಿಯಾ ಎಂದು ಕರೆದ ಮೇಲೆ ಅಲ್ಲಿ ಕಟ್ಟುನಿಟ್ಟಾಗಿ ಆಚರಣೆಗೆ ಬಂದದ್ದು ವಹಾಬಿ ಸುನ್ನಿ ಮೂಲಭೂತವಾದ. ಮುಂದಿನ ಎಂಟು ದಶಕಗಳಲ್ಲಿ ಮೆಕ್ಕಾ ಮತ್ತು ಮದೀನಾಗಳ ಹಲವಾರು ಮಸೀದಿಗಳು ಮತ್ತು ಸಮಾಧಿಸ್ಥಳಗಳನ್ನು ಇಸ್ಲಾಮ್ೆ ವಿರುದ್ಧ ಎಂದು ಘೊಷಿಸಿ ಕೆಡವಲಾಯಿತು. ಹೀಗೆ ನಾಶವಾದ ಐತಿಹಾಸಿಕ ಹಾಗೂ ಧಾರ್ವಿುಕ ಕಟ್ಟಡಗಳ ಸಂಖ್ಯೆ ನಾನೂರರಿಂದ ಐನೂರು ಎಂದು ಇಸ್ಲಾಮಿಕ್ ಹೆರಿಟೇಜ್ ರೀಸರ್ಚ್ ಫೌಂಡೇಶನ್​ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಇರ್ಫಾನ್ ಅಲ್-ಅಲಾವಿ ಹೇಳುತ್ತಾರೆ!

ಈ ಕಟ್ಟಡಗಳ ಜತೆಗೆ ವಹಾಬಿಗಳು ದಾಳಿಯೆಸಗಿದ್ದು ಜನರ ಜೀವನವಿಧಾನದ ಮೇಲೆ. ಸಂಗೀತದಿಂದ ಹಿಡಿದು ಎಲ್ಲ ಸಾಂಸ್ಕೃತಿಕ ಹಾಗೂ ಮನರಂಜನಾ ಚಟುವಟಿಕೆಗಳು ಇಸ್ಲಾಮ್ೆ ವಿರುದ್ಧವೆಂದು ಬಹಿಷ್ಕೃತಗೊಂಡವು. ಇದರ ಪರಿಣಾಮ ಅತಿಯಾದದ್ದು ಮಹಿಳೆಯರ ಮೇಲೆ. ಅವರನ್ನು ಭಾವನೆ, ಸ್ವತಂತ್ರ ಚಿಂತನೆ, ಆಸೆಆಕಾಂಕ್ಷೆಗಳಿರುವ ಜೀವಿ ಎಂದೇ ಸೌದಿ ವ್ಯವಸ್ಥೆ ಪರಿಗಣಿಸಲಿಲ್ಲ.

ಕಳೆದ ಆರುವರ್ಷಗಳಿಂದ ಎಲ್ಲವೂ ಬದಲಾಗುತ್ತಿದೆ, ಊಹಿಸಲಾಗದಷ್ಟು ವೇಗವಾಗಿ!

36 ವರ್ಷಗಳ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅಲ್ ಸೌದ್ ತರುತ್ತಿರುವ ಬದಲಾವಣೆಗಳು ಅಭೂತಪೂರ್ವ. ಮೊದಲಿಗೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಇರಾದೆಯಿಂದ 2016ರಲ್ಲಿ ಮನರಂಜನಾ ಪ್ರಾಧಿಕಾರವನ್ನು ಸಲ್ಮಾನ್ ಸ್ಥಾಪಿಸಿದರು. ಅದಕ್ಕನುಗುಣವಾಗಿ ಮರುವರ್ಷ ದೇಶದ ಅತಿ ದೊಡ್ಡ ಕ್ರೀಡಾ, ಸಾಂಸ್ಕೃತಿಕ ಹಾಗೂ ಮನರಂಜನಾ ನಗರವನ್ನು ರಾಜಧಾನಿ ರಿಯಾಧ್​ನ ನೈಋತ್ಯದಲ್ಲಿರುವ ಅಲ್ ಖಿದಿಯಾದಲ್ಲಿ ಸ್ಥಾಪಿಸುವ ಯೋಜನೆ ಪ್ರಕಟಿಸಿದರು. ಇದು ಪೂರ್ಣಗೊಂಡ ನಂತರ ಸಾಂಸ್ಕೃತಿಕ ಹಾಗೂ ಕ್ರೀಡಾ ಮನರಂಜನೆಗಾಗಿ ಸೌದಿಗಳು ಜಗತ್ತಿನೆಲ್ಲೆಡೆ ಅಲೆಯಬೇಕಾಗುವುದಿಲ್ಲ. ಅವುಗಳಿಗಾಗಿ ಇನ್ನು ವಿದೇಶೀಯರೂ ಅರೇಬಿಯಾಗೆ ಬರಬಹುದು! ವಿದೇಶೀಯರಿಗೆ ದೇಶದಲ್ಲಿ ವಸತಿ ಖರೀದಿಸುವ ಹಾಗೂ ಶಾಶ್ವತವಾಗಿ ನೆಲೆಸುವ ಅವಕಾಶವನ್ನೂ ರಾಜಕುಮಾರ ಸಲ್ಮಾನ್ 2019ರಲ್ಲಿ ‘ಪ್ರೀಮಿಯಂ ರೆಸಿಡೆನ್ಸಿ ಫಾರ್ ಫಾರಿನರ್ಸ್’ ಯೋಜನೆ ಮೂಲಕ ನೀಡಿದ್ದಾರೆ.

2018ರ ಏಪ್ರಿಲ್​ನಲ್ಲಿ ಮೂರು ದಶಕಗಳ ನಂತರ ಸಿನಿಮಾಗೃಹಗಳು ಪುನರಾರಂಭವಾದವು. 2030ರ ಹೊತ್ತಿಗೆ ದೇಶದಾದ್ಯಂತ ಎರಡು ಸಾವಿರ ಸಿನಿಮಾಗೃಹಗಳು ಚಾಲನೆಗೊಳ್ಳುವ ನಿರೀಕ್ಷೆಯಿದೆ. ರಾಜಕುಮಾರ ಸಲ್ಮಾನ್ ಮಹಿಳೆಯರಿಗೆ ನೀಡುತ್ತಿರುವ ಸ್ವಾತಂತ್ರ್ಯ ಅಚ್ಚರಿಯ ಜತೆ ಮೆಚ್ಚುಗೆಯನ್ನೂ ಉಂಟುಮಾಡುತ್ತದೆ. 2017 ಡಿಸೆಂಬರ್​ನಲ್ಲಿ ಸಲ್ಮಾನ್ ಪ್ರಥಮ ಬಾರಿಗೆ ಸಂಗೀತೋತ್ಸವ ಆಯೋಜಿಸಿದರು. ಮತ್ತು ಇದರಲ್ಲಿ ಗಾಯಕಿಯ ಸಂಗೀತ ಕಾರ್ಯಕ್ರಮವೂ ಇದ್ದದ್ದೊಂದು ಕ್ರಾಂತಿಕಾರಕ ಬೆಳವಣಿಗೆ. ಮುಂದಿನ ತಿಂಗಳಲ್ಲೇ ಅವರು ಮಹಿಳೆಯರಿಗೆ ಫುಟ್​ಬಾಲ್ ಕ್ರೀಡಾಂಗಣಗಳಿಗೆ ಪ್ರೇಕ್ಷಕರಾಗಿ ಪ್ರವೇಶಿಸುವ ಅವಕಾಶ ಕಲ್ಪಿಸಿದರು. ಕಾರ್ ಚಲಾಯಿಸುವ ಸ್ವಾತಂತ್ರ್ಯ ಮಹಿಳೆಯರಿಗೆ ದೊರೆಯಿತು. ಅಲ್ಲದೆ, ಮಹಿಳೆಯರಿಗೆ ಅಬಾಯಾ ಅಥವಾ ಬುರ್ಕಾದ ಅಗತ್ಯವಿಲ್ಲ ಎಂದೂ ಹೇಳಿಯೂ ಆಗಿದೆ. 2020ರಲ್ಲಿ ಚಾಟಿ ಏಟಿನ ಶಿಕ್ಷೆಯನ್ನು ಸಲ್ಮಾನ್ ನಿಲುಗಡೆಗೆ ತಂದದ್ದೂ ಒಂದು ಮಹಿಳಾಪರ ನಡೆ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಸಣ್ಣಸಣ್ಣ ಕಾರಣಗಳಿಗೂ ಈ ಶಿಕ್ಷೆಗೆ ಅತಿಯಾಗಿ ಗುರಿಯಾಗುತ್ತಿದ್ದವರು ಮಹಿಳೆಯರು.

ರಾಜಕುಮಾರ ಸಲ್ಮಾನ್​ರ ಚಿಂತನೆಗಳ ಚಿತ್ರಣ ನಮಗೆ ಸಿಗುವುದು 2018ರಲ್ಲಿ ಬ್ರಿಟಿಷ್ ಪತ್ರಿಕೆ ‘ದ ಗಾರ್ಡಿಯನ್’ಗೆ ನೀಡಿದ ಸಂದರ್ಶನದಲ್ಲಿ. ದೇಶವನ್ನು ಉದಾರವಾದಿ ಮುಸ್ಲಿಂ ದೇಶವನ್ನಾಗಿ ಪರಿವರ್ತಿಸುವುದು ತಮ್ಮ ಗುರಿ ಎಂದವರು ಹೇಳಿದ್ದರು. ಇತರ ಧರ್ಮಗಳಿಗೂ ಸೌದಿ ನೆಲದಲ್ಲಿ ಅವಕಾಶ ನೀಡುವ ಯೋಜನೆಯನ್ನೂ ಅವರು ಜಗತ್ತಿಗೆ ಸಾರಿದ್ದಾರೆ.

ಮತ್ತೊಂದು ದೀರ್ಘ ಸಂದರ್ಶನದಲ್ಲಿ ಅವರು ಕುರಾನ್ ದೇಶದ ಸಂವಿಧಾನ, ಅದರಂತೆ ನಡೆಯುವುದು ತಾವೂ ಸೇರಿದಂತೆ ಇಡೀ ದೇಶದ ಕರ್ತವ್ಯ ಎಂದು ಹೇಳುವುದರ ಜತೆಗೇ ಕುರಾನ್​ನಲ್ಲಿ ಇಲ್ಲದ ಯಾವುದನ್ನೂ ದೇಶದ ಮೇಲೆ ಹೇರುವುದಿಲ್ಲ ಎಂದರು. ಮೂಲ ಇಸ್ಲಾಮಿಕ್ ನೀತಿಸಂಹಿತೆಗೆ ಕಾಲಕಾಲಕ್ಕೆ ಸೇರಿಸಲ್ಪಟ್ಟ ಹದೀತ್​ಗಳನ್ನು ಹುಡುಕಿ ಅವು ಕುರಾನ್​ಗೆ

ವಿರುದ್ಧವಾಗಿದ್ದರೆ ಅವುಗಳನ್ನು ತೆಗೆಯಬೇಕೆಂದು ಮತ್ತು ಆ ಮೂಲಕ ಇಸ್ಲಾಮನ್ನು ಮಾನವೀಯಗೊಳಿಸಬೇಕೆಂದು ಸಲ್ಮಾನ್ ಹೇಳಿದರು. ಈ ಕುರಿತಾಗಿ ಅವರು ಪ್ರವಾದಿಯವರ ಜೀವನಚರಿತ್ರೆಯಿಂದ ಆಯ್ದ ಒಂದು ಪ್ರಕರಣವನ್ನು ಉಲ್ಲೇಖಿಸಿದರು. ಅದರ ಪ್ರಕಾರ ಮೊದಲಿಗೆ ಹದೀತ್​ಗಳ ರಚನೆಯಾದಾಗ ಅವೆಲ್ಲವನ್ನೂ ಸುಟ್ಟುಹಾಕುವಂತೆ, ಮತ್ತೆಂದೂ ಹದೀತ್​ಗಳನ್ನು ರಚಿಸದಂತೆ ಪ್ರವಾದಿಗಳು ಆದೇಶಿಸಿದರಂತೆ.

ಹೀಗೆ ಒಂದುಕಾಲದಲ್ಲಿ ಕಟ್ಟಾ ಮೂಲಭೂತವಾದಿ ದೇಶವಾಗಿದ್ದ ಸೌದಿ ಅರೇಬಿಯಾ ರಾಜಕುಮಾರ ಸಲ್ಮಾನ್​ರ ಚಿಂತನೆಗಳು ಹಾಗೂ ಕಾರ್ಯವಿಧಾನಗಳಿಂದ ಉದಾರವಾದಿಯಾಗಿ ಬದಲಾಗುತ್ತಿದೆ. ಇದರಿಂದ ಇಸ್ಲಾಮಾಬಾದ್​ನ ಲಾಲ್ ಮಸ್ಜಿದ್ ಮತ್ತು ಜಾಮಿಯ ಹಫ್ಸಾ, ನಮ್ಮಲ್ಲೇ ಇರುವ ಜಮಾತ್-ಎ-ಇಸ್ಲಾಮ್​ಇ ಹಿಂದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್​ನ ಆರು ಜನ ವಿದ್ಯಾರ್ಥಿನಿಯರು ಮತ್ತು ದೇಶಾದ್ಯಂತ ಅವರನ್ನು ಅನುಸರಿಸತೊಡಗಿರುವ ನೂರಾರು ವಿದ್ಯಾರ್ಥಿನಿಯರು ಕಲಿಯುವುದು ಏನೂ ಇಲ್ಲವೇ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net