ಒಂದು ದೇಶ ಒಂದು ಚುನಾವಣೆಯ ಆಚೆ ಈಚೆ…

voting
Published on

ಸ್ವಾತಂತ್ರ್ಯಾ ನಂತರದಲ್ಲಿ 1967ವರೆಗೆ ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದವು. ಆದರೆ 1968 ಮತ್ತು 1969ರ ಅವಧಿಯಲ್ಲಿ ಕೆಲ ರಾಜ್ಯಗಳ ವಿಧಾನಸಭೆಗಳು ಅವಧಿಪೂರ್ವ ವಿಸರ್ಜನೆ ಆದುದರಿಂದ ಈ ಸಂಪ್ರದಾಯ ಹಳಿತಪ್ಪಿತು.

ಈಗ ಏಕ ಚುನಾವಣೆ ಪರಿಕಲ್ಪನೆಗೆ ಹೊಸ ವೇಗ ಓಘ ಬಂದಿದೆ ಎಂದು ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಬಲವಾದ ಪ್ರತಿಪಾದಕರು. ಹಿಂದೆಯೇ ಅವರು ದೇಶದ ಗಮನವನ್ನು ಅತ್ತ ಸೆಳೆದಿದ್ದರು. 2018ರಲ್ಲಿ ಭಾರತ ಕಾನೂನು ಆಯೋಗವು ಈ ಬಗ್ಗೆ ಒಂದು ಕರಡನ್ನು ಬಿಡುಗಡೆ ಮಾಡಿತು. ಒಂದು ವರ್ಷದ ಅವಧಿಯಲ್ಲಿ ಪಂಚಾಯತ್​ದಿಂದ ಹಿಡಿದು ಲೋಕಸಭೆವರೆಗೆ ನಿರ್ದಿಷ್ಟ ಕಾಲಾವಧಿಯಲ್ಲಿ ಚುನಾವಣೆಗಳನ್ನು ನಡೆಸಬೇಕು ಎಂಬ ಅಂಶ ಅದರಲ್ಲಿತ್ತು. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಸಾರ್ವಜನಿಕ ಹಣ ಉಳಿಯುತ್ತದೆ; ಆಡಳಿತ ಯಂತ್ರ ಮತ್ತು ಭದ್ರತಾ ಪಡೆಗಳ ಮೇಲೆ ಬೀಳುವ ಹೊರೆ ಕಡಿಮೆಯಾಗುತ್ತದೆ; ಸರ್ಕಾರಗಳ ನೀತಿ ನಿರ್ಧಾರಗಳನ್ನು ಕ್ಲುಪ್ತ ಕಾಲಕ್ಕೆ ಅನುಷ್ಠಾನಕ್ಕೆ ತರಬಹುದು ಮತ್ತು ಸದಾ ಚುನಾವಣೆಗಳತ್ತಲೇ ತಲೆಬಿಸಿ ಮಾಡಿಕೊಳ್ಳುವ ಬದಲಿಗೆ ಅಭಿವೃದ್ಧಿಯತ್ತ ಚಿತ್ತ ಹರಿಸಬಹುದು ಎಂದು ಇದರ ಅನುಕೂಲಗಳ ಬಗ್ಗೆ ಕಾನೂನು ಆಯೋಗವು ವಿವರಿಸಿತ್ತು.

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸಲು ಕೇಂದ್ರೀಯ ಚುನಾವಣಾ ಆಯೋಗಕ್ಕೆ 4500 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಸಂಸದೀಯ ಸಮಿತಿಯೊಂದು ಅಂದಾಜಿಸಿತ್ತು. ದೇಶಾದ್ಯಂತ ಎರಡು ಹಂತಗಳಲ್ಲಿ ಚುನಾವಣೆಗಳನ್ನು ನಡೆಸುವುದು ಹೆಚ್ಚು ಪ್ರಾಯೋಗಿಕವಾಗುತ್ತದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಕಾನೂನು-ನ್ಯಾಯ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ತನ್ನ 79ನೆಯ ವರದಿಯಲ್ಲಿ ಹೇಳಿತ್ತು.

‘ಒಂದು ದೇಶ ಒಂದು ಚುನಾವಣೆ’ ವಿಷಯದ ಕುರಿತು ಪರಿಶೀಲನೆ ನಡೆಸಲು ಉನ್ನತ ಸಮಿತಿಯನ್ನು ನೇಮಿಸಿ ಕೇಂದ್ರ ಸರ್ಕಾರವು 2023ರ ಸೆಪ್ಟೆಂಬರ್ 2ರಂದು ಅಧಿಸೂಚನೆ ಹೊರಡಿಸಿತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಈ ಸಮಿತಿಯು ಕೇಂದ್ರ ಗೃಹಸಚಿವ ಅಮಿತ್ ಷಾ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ ಮೇಘ್ವಾಲ್, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್, 15ನೆಯ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಸವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಮುಂತಾದವರನ್ನು ಒಳಗೊಂಡಿತ್ತು. ಇದೇ ವರ್ಷದ ಮಾರ್ಚ್ 14ರಂದು ಸಮಿತಿಯು ತನ್ನ ಅಂತಿಮ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುಮು ಅವರಿಗೆ ಸಲ್ಲಿಸಿತು. ಈ ವರದಿ 18000 ಪುಟಗಳನ್ನು ಹೊಂದಿದ್ದು, ಐದು ಸಂಪುಟಗಳಲ್ಲಿ ವಿಶದಪಡಿಸಿದೆ. ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಹಾಲಿ ಲೋಕಸಭಾ (ಅಂದರೆ ಮೇ ತಿಂಗಳಲ್ಲಿ ನಡೆದದ್ದು) ಚುನಾವಣೆ ಮುಗಿದ ನಂತರ, 2029ರ ಸಾರ್ವತ್ರಿಕ ಚುನಾವಣೆಯಿಂದ ಹೊಸ ಚುನಾವಣಾ ಚಕ್ರ ಆರಂಭಿಸುವ ನಿಟ್ಟಿನಲ್ಲಿ ಒಂದು ಸಮಯವನ್ನು ಗೊತ್ತುಪಡಿಸಬೇಕು. ಈ ಸಮಯಕ್ಕೆ, ಐದು ವರ್ಷ ಪೂರೈಸದ ರಾಜ್ಯ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸಲು ಮತ್ತು ಆ ಹೊತ್ತಿಗೆ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸಿದ ವಿಧಾನಸಭೆಗಳನ್ನು ಅವಧಿಪೂರ್ವ ವಿಸರ್ಜನೆ ಮಾಡಲು ಕ್ರಮ ಕೈಗೊಳ್ಳಬೇಕು. ಏಕ ಚುನಾವಣೆ ಕಾರ್ಯಸಾಧ್ಯ ಆಗುವ ದಿಸೆಯಲ್ಲಿ ಒಟ್ಟು 18 ಸಂವಿಧಾನ ತಿದ್ದುಪಡಿಗಳು ಆಗಬೇಕು. ಅದರಲ್ಲಿ ಬಹು ಮುಖ್ಯವಾದುದು 83ನೆಯ ಪರಿಚ್ಛೇದ (ಸಂಸತ್ ಸದನಗಳ ಅವಧಿ) ಮತ್ತು 172ನೆಯ ಪರಿಚ್ಛೇದ (ರಾಜ್ಯ ವಿಧಾನಸಭೆಗಳ ಅವಧಿ). ಇದರ ಜೊತೆಗೆ, ಕೇಂದ್ರವು ಅಂಗೀಕರಿಸುವ ಕೆಲ ತಿದ್ದುಪಡಿಗಳನ್ನು ರಾಜ್ಯಗಳು ಸ್ಥಿರೀಕರಿಸಬೇಕು. ಸವೋಚ್ಚ ನ್ಯಾಯಾಲಯದ ನಾಲ್ವರು ನಿವೃತ್ತ ಮುಖ್ಯ ನ್ಯಾಯಾಧೀಶರು, ಉಚ್ಚ ನ್ಯಾಯಾಲಯಗಳ ಮೂವರು ಮಾಜಿ ಮುಖ್ಯ ನ್ಯಾಯಾಧೀಶರು ಹಾಗೂ ಚುನಾವಣಾ ಆಯೋಗದ ಮಾಜಿ ಆಯುಕ್ತರ ಸಲಹೆಗಳನ್ನು ಆಯೋಗವು ಪಡೆದಿತ್ತು. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಇಂಡಿಯನ್ ಚೆಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅನಿಸಿಕೆಗಳನ್ನು ಕೇಳಲಾಗಿತ್ತು. ಒಟ್ಟು 47 ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಿದ್ದು ಈ ಪೈಕಿ 32 ಪಕ್ಷಗಳು ಏಕ ಚುನಾವಣೆಯನ್ನು ಬೆಂಬಲಿಸಿವೆ. ಇದರಿಂದ ದೇಶದ ಸಂಪನ್ಮೂಲ ಉಳಿಯುವುದಲ್ಲದೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿರುವುದಾಗಿ ಆಯೋಗವು ತನ್ನ ವರದಿಯಲ್ಲಿ ದಾಖಲಿಸಿದೆ.

‘ಏಕ ಚುನಾವಣೆಯು ಸಂವಿಧಾನದ ಮೂಲ ಸ್ವರೂಪವನ್ನು ಬದಲಿಸುತ್ತದೆ; ಈ ಚಿಂತನೆಯು ಪ್ರಜಾಪ್ರಭುತ್ವವಿರೋಧಿ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಇದರಿಂದ ಪ್ರಾದೇಶಿಕ ಪಕ್ಷಗಳು ಮೂಲೆಗೆ ಸರಿದು ರಾಷ್ಟ್ರೀಯ ಪಕ್ಷಗಳ ಮೇಲುಗೈ ಆಗುತ್ತದೆ’ ಎಂದು ಈ ಪ್ರಸ್ತಾಪ ವಿರೋಧಿಸುವ ಪಕ್ಷಗಳು ಹೇಳಿವೆ ಎಂದು ಉನ್ನತಾಧಿಕಾರ ಸಮಿತಿ ವಿವರಿಸಿದೆ. ಇದರ ಜೊತೆಗೆ 21,554 ಸಾರ್ವಜನಿಕ ಅಭಿಪ್ರಾಯಗಳನ್ನು ದಾಖಲಿಸಲಾಗಿದ್ದು ಈ ಪೈಕಿ ಶೇ.81ರಷ್ಟು ಜನರು ಏಕ ಚುನಾವಣೆ ಪರವಾಗಿ ಒಲವು ತೋರಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ಸಮಿತಿಯು ಒಟ್ಟು 191 ದಿನಗಳ ಕಾಲ ಕಾರ್ಯನಿರ್ವಹಿಸಿತ್ತು. ಇದೇ ಸೆಪ್ಟೆಂಬರ್ 18ರಂದು ಕೇಂದ್ರ ಸಚಿವ ಸಂಪುಟವು ‘ಒಂದು ದೇಶ ಒಂದು ಚುನಾವಣೆ’ಗೆ ಅನುಮೋದನೆ ನೀಡಿದೆ. ಸಮಿತಿ ಶಿಫಾರಸಿನ ಅನ್ವಯ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬೇಕು. ಅದಾದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕು. ಈ ಸಮಿತಿ ವರದಿ ತರುವಾಯದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

ಈ ಪರಿಕಲ್ಪನೆ ಸಾಕಾರವಾಗಬೇಕು ಎಂದಾದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಅನಿವಾರ್ಯ. ಅಂದರೆ, ತಿದ್ದುಪಡಿ ಪ್ರಸ್ತಾವನೆಗೆ ಸಂಸತ್​ನಲ್ಲಿ ಮೂರನೇ ಎರಡರಷ್ಟು ಸಂಸದರ ಬೆಂಬಲ ಅಗತ್ಯ. ಅಂದರೆ ಲೋಕಸಭೆಯಲ್ಲಿ 362 ಮತ್ತು ರಾಜ್ಯಸಭೆಯಲ್ಲಿ 167 ಸದಸ್ಯರು ತಿದ್ದುಪಡಿ ಪರವಾಗಿ ಮತ ಚಲಾಯಿಸಬೇಕು. ಆದರೆ, ಬದಲಾದ ರಾಜಕೀಯ ಸಮೀಕರಣದಲ್ಲಿ ಅದು ಅಸಾಧ್ಯ ಎಂಬುದು ಸ್ಪಷ್ಟ. ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಒಟ್ಟು ಬಲ 293. ಇನ್ನೊಂದೆಡೆ, ಈ ಪ್ರಸ್ತಾಪವನ್ನು ಪ್ರಬಲವಾಗಿ ವಿರೋಧಿಸುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬಲ 233. ಹೀಗಾಗಿ ಸಂವಿಧಾನ ತಿದ್ದುಪಡಿಗೆ ಅಗತ್ಯವಾದ ಮತ ಸಿಗುವುದು ಕಷ್ಟಸಾಧ್ಯ. ಇದಲ್ಲದೆ, ಏಕ ಚುನಾವಣೆ ವಾಸ್ತವಕ್ಕೆ ಬರಲು ರಾಜ್ಯ ಸರ್ಕಾರಗಳ ಸಹಕಾರವೂ ಬೇಕಾಗುತ್ತದೆ. ಐಎನ್​ಡಿಐಎ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಸಹಕಾರ ಸಿಗುವುದು ಕನಸು. ಹೀಗಿರುವಾಗ ಪ್ರಧಾನಿ ಮೋದಿ ಯಾವ ಲೆಕ್ಕಾಚಾರದ ಮೇಲೆ ಈ ದಾಳ ಉರುಳಿಸಿದ್ದಾರೆ ಎಂದು ಬಿಜೆಪಿಯೇತರ ಪಕ್ಷಗಳ ನಾಯಕರು ಕುತೂಹಲಗೊಂಡಿದ್ದಾರೆ.

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳ ಕನಸನ್ನು ಬಿತ್ತಿ ಅದೇ ಪ್ರಕಾರ ಪ್ರಚಾರ ನಡೆಸಿತ್ತು. ಮೋದಿ ನಾಮಬಲ ಇದ್ದರೂ ಬಿಜೆಪಿ ಯಾಕೆ ಕಡಿಮೆ ಸೀಟು ಪಡೆಯಿತು? ಕಾಂಗ್ರೆಸ್, ಸಮಾಜವಾದಿ ಪಕ್ಷ ಮುಂತಾದವು ಯಾಕೆ ಹೆಚ್ಚು ಸ್ಥಾನ ಗಳಿಸಿದವು ಎಂಬ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆ-ವಿಶ್ಲೇಷಣೆಗಳು ನಡೆದಿವೆ. ಹಿಂದಿನ ಎರಡು ಅವಧಿಗಳ ಹಾಗೆ ಸಂಸತ್​ನಲ್ಲಿ ಮಜಬೂತ ಬಹುಮತ ಇಲ್ಲದ ಕಾರಣಕ್ಕೆ ಧಾಡಸಿ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರಧಾನಿ ಮೋದಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನಿಜ. ಇಂಥ ಪರಿಸ್ಥಿತಿ ಇದ್ದಲ್ಲಿ ನೋಟು ಅಮಾನ್ಯೀಕರಣ, ಜಿಎಸ್​ಟಿ ಜಾರಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಂಥ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗ ಸಾಧ್ಯವೇ ಇಲ್ಲ. ಬಿಜೆಪಿಗೆ ಈಗ ಕಡಿಮೆ ಸೀಟು ಬಂದಿರುವುದು ಹೌದಾದರೂ, ಸದ್ಯದ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಆಗಲಿ ಅಥವಾ ಬೇರೆ ಯಾರೇ ವಿಪಕ್ಷ ನಾಯಕರು ಜನಪ್ರಿಯತೆಯಲ್ಲಿ ಮೋದಿ ಸನಿಹಕ್ಕೆ ಬರುವುದು ಸುಲಭವಲ್ಲ. ಇವತ್ತಿಗೂ ಮೋದಿಯನ್ನು ಅಭಿಮಾನದಿಂದ ನೋಡುವ-ಆರಾಧಿಸುವ, ಅವರ ನೀತಿ ನಿರ್ಧಾರಗಳನ್ನು ಸಮರ್ಥಿಸುವ ದೊಡ್ಡ ವರ್ಗವೇ ಇದೆ. ಹೀಗಾಗಿ ಹಾಲಿ ಸನ್ನಿವೇಶದಲ್ಲಿ ‘ಒಂದು ದೇಶ ಒಂದು ಚುನಾವಣೆ’ ಜಾರಿಗೆ ಬಂದಲ್ಲಿ, ಚುನಾವಣೆ ಸಂದರ್ಭದಲ್ಲಿ ಮೋದಿ ಮೋಡಿ ಆವರಿಸಿ ಬಿಜೆಪಿಗೆ ದೊಡ್ಡ ಲಾಭ ಆಗಬಹುದು ಎಂಬ ಕಾರಣಕ್ಕಾಗಿ ಸಹ ವಿರೋಧ ಪಕ್ಷಗಳ ನಾಯಕರು ಈ ಚಿಂತನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ‘ಒಂದು ದೇಶ ಒಂದು ಚುನಾವಣೆ’ಗೆ ವಿರೋಧ ಮಾಡುವವರು ಕೂಡ ತಮ್ಮದೇ ಆದ ವಾದಸರಣಿಯನ್ನು ಮುಂದಿಡುತ್ತಾರೆ. ಏಕ ಚುನಾವಣೆಯು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು; ಲೋಕಸಭೆ ಚುನಾವಣೆಯ ಸಮಯಕ್ಕೆ ನಡೆಯಬೇಕು ಎಂಬ ಉದ್ದೇಶದಿಂದ ರಾಜ್ಯವೊಂದರ ವಿಧಾನಸಭಾ ಅವಧಿಯನ್ನು ತಗ್ಗಿಸುವುದು ರಾಜ್ಯಗಳ ಸಂವಿಧಾನದತ್ತ ಅಧಿಕಾರದ ಮೇಲೆ ಪ್ರಹಾರ ಮಾಡಿದ ಹಾಗೆ; ಭಾರತದಂಥ ದೇಶಕ್ಕೆ ಚುನಾವಣೆಗಳನ್ನು ನಡೆಸುವುದು ಹೇಳುವಷ್ಟು ದೊಡ್ಡ ಖರ್ಚಿನ ಬಾಬತ್ತೇನಲ್ಲ. ಅಲ್ಲದೆ ಚುನಾವಣಾ ಖರ್ಚಿನಲ್ಲಿ ರಾಜ್ಯಗಳು ಸಹ ಭರಿಸಬೇಕಾಗುತ್ತದೆ. ಐದು ವರ್ಷಕ್ಕೆ ಒಮ್ಮೆ ಚುನಾವಣೆ ಎಂದಾದಲ್ಲಿ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಸೋಮಾರಿತನ ಬೆಳೆಸಿಕೊಂಡು ಜನರ ಒಡನಾಟ ಕಡಿಮೆ ಮಾಡುವ ಅಪಾಯವೂ ಇರುತ್ತದೆ. ಅದೇ ಆಗೀಗ ಒಂದಲ್ಲ ಒಂದು ಚುನಾವಣೆ ನಡೆಯುತ್ತಿದ್ದರೆ ಜನರ ಎದುರು ಬರಬೇಕು ಎಂಬ ಕಾರಣಕ್ಕಾಗಿ ನಾಯಕರು ಮತ್ತು ಪಕ್ಷಗಳು ಅಲರ್ಟ್ ಆಗಿರುತ್ತಾರೆ ಎಂಬ ವಾದ ಮುಂದಿಡುವವರೂ ಇದ್ದಾರೆ.

ಯಾವುದೇ ಚುನಾವಣೆ ಘೊಷಣೆ ಆದ ಕೂಡಲೇ ನೀತಿ ಸಂಹಿತೆ ಜಾರಿಗೆ ಬರಬೇಕು ಎಂಬುದು ನಿಯಮ. ಇದರಿಂದ ಅಭಿವೃದ್ಧಿ ಚಟುವಟಿಕೆಗಳು ನಡೆಯದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ಜನಸಾಮಾನ್ಯರ ಆಕ್ಷೇಪ ಕೂಡ ಹೌದು. ಒಂದು ರಸ್ತೆ ರಿಪೇರಿ ಕೂಡ ಮಾಡಿಸಲು ಆಗದ ಸ್ಥಿತಿ ಜನಪ್ರತಿನಿಧಿಗಳದ್ದು. ಇದನ್ನು ತಪ್ಪಿಸಲು ಏಕ ಚುನಾವಣೆಯೇ ಮದ್ದು ಎಂಬುದು ಬಿಜೆಪಿ ಪ್ರತಿಪಾದನೆ. ಅಂದಹಾಗೆ ಈ ವಿಷಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸಹ ಪ್ರಮುಖ ಸ್ಥಾನ ಪಡೆದಿದೆ. ‘ರೀ ಸ್ವಾಮಿ! ನಿಮ್ದು ಒಳ್ಳೇ ಕಥೆ ಆಯ್ತು. ನೀತಿ ಸಂಹಿತೆ ಜಾರಿಯಲ್ಲಿ ಇದೆ ಎಂಬ ಕಾರಣಕ್ಕೆ ಅಭಿವೃದ್ಧಿ ಚಟುವಟಿಕೆ ನಡೆಯಲ್ಲ ಅಂತಾದರೆ, ನಮ್ಮ ದೇಶದಲ್ಲಿ ಇಷ್ಟು ವರ್ಷದಿಂದ ಚುನಾವಣೆಗಳು ನಡೆಯುತ್ತ ಬಂದಿವೆ. ಹಾಗಾದರೆ ಅಭಿವೃದ್ಧಿ ಆಗೇ ಇಲ್ಲ ಅಂತೀರಾ?’ ಅಂತ ಕೇಳುತ್ತಾರೆ ಏಕಚುನಾವಣೆ ವಿರೋಧಿಗಳು. ಅದೂ ಅಲ್ಲದೆ ಇಷ್ಟು ದೊಡ್ಡ ಕಸರತ್ತು ನಡೆಸುವುದು ಆಡಳಿತ ಯಂತ್ರದಿಂದ ಸಾಧ್ಯವೇ ಎಂಬ ಅನುಮಾನವನ್ನು ಸಹ ಇವರು ವ್ಯಕ್ತಪಡಿಸುತ್ತಾರೆ.

ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಅಂದಾಕ್ಷಣ ಏಕ ಚುನಾವಣೆ ಜಾರಿಯಾಗೇ ಹೋಯಿತು ಎಂದಲ್ಲ. ಆ ಹಾದಿ ಬಲು ದೂರವಿದೆ. ರಾಜಕೀಯ ಪಕ್ಷಗಳ ಜೊತೆಗೆ ಜನರನ್ನೂ ಒಳಗೊಂಡಂತೆ ರಾಷ್ಟ್ರವ್ಯಾಪಿ ಚರ್ಚೆ ನಡೆದಲ್ಲಿ ಈ ನಿಟ್ಟಿನಲ್ಲಿ ಒಂದು ನಿರ್ಣಯಕ್ಕೆ ಬರಲು ಅನುವಾದೀತು.

ಬೆಲ್ಜಿಯಂ, ಸ್ವೀಡನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಏಕ ಚುನಾವಣೆ ರೂಢಿ ಇದೆ. ನೇಪಾಳದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ಒಂದೇ ಕಾಲಕ್ಕೆ ನಡೆಸಲು ಅಲ್ಲಿನ ಸರ್ಕಾರವು 2017ರ ಆಗಸ್ಟ್ 21ರಂದು ಆದೇಶ ಹೊರಡಿಸಿತ್ತು. ಆದರೆ ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದ್ದರಿಂದ ಸರ್ಕಾರ ತನ್ನ ನಿಲುವು ಬದಲಿಸಿ, 2017ರ ನವೆಂಬರ್ 17 ಮತ್ತು ಡಿಸೆಂಬರ್ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಸಲು ಒಪ್ಪಿತು.

ಕೊನೇ ಮಾತು: ಭಾರತದಲ್ಲಿ ಚುನಾವಣೆ ಎಂದರೆ ಕೇವಲ ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಮಾತ್ರ ಅಲ್ಲ. ಎಲೆಕ್ಷನ್ ಎಂದರೆ ಪ್ರಜಾಪ್ರಭುತ್ವದ ಉತ್ಸವ. ಹಬ್ಬದ ಎಲ್ಲ ರಂಗು-ಲಕ್ಷಣ ಇಲ್ಲಿ ಹರಡುತ್ತದೆ. ಈಗ ಚುನಾವಣಾ ಪ್ರಚಾರದ ನಿಯಮ ಬದಲಾವಣೆ ಆಗಿರುವುದರಿಂದ ಮೊದಲಿನ ಅಬ್ಬರಾರ್ಭಟ ಕಾಣಿಸದು ಎಂಬುದನ್ನು ಬಿಟ್ಟರೆ ಚುನಾವಣೆ ಖದರ್ ಏನೂ ಕಮ್ಮಿ ಆಗಿಲ್ಲ. ಓಡಾಟ-ಹೋರಾಟ-ಮೇಲಾಟ (ಕೆಲವೊಮ್ಮೆ ಹೊಡೆದಾಟ!) ಇವೆಲ್ಲ ಚುನಾವಣೆಯ ಅವಿಭಾಜ್ಯ ಅಂಗಗಳು. ಹೀಗಿರುವಾಗ ಐದು ವರ್ಷಕ್ಕೆ ಒಮ್ಮೆ ಮಾತ್ರ ಚುನಾವಣೆ ಎಂಬ ಕಲ್ಪನೆಯೇ ಕೆಲವರಿಗೆ ಅಪಥ್ಯವಾದೀತು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net