ಕಥೆ 45: ಒಂದು + ಮತ್ತು ನೂರು ಕಥೆಗಳಲ್ಲಿ ಒಂದು ಕಥೆ..

KER
Published on

ನಿವೃತ್ತ ಪ್ರಾಂಶುಪಾಲ, ಬರಹಗಾರ ಪ್ರೊ. ಕೆ.ಈ.ರಾಧಾಕೃಷ್ಣ ಅವರ ‘ಒಂದು +ಮತ್ತು ನೂರು ಕಥೆಗಳು’ ಕೃತಿ ಈಚೆಗೆ ಬಿಡುಗಡೆಯಾಗಿದ್ದು, ಅದರಿಂದ ಆಯ್ದ ಒಂದು ಕತೆಯನ್ನು ಇಲ್ಲಿ ನೀಡಲಾಗಿದೆ. ಸಂಕಲನದ ಕಥೆಗಳಿಗೆ ಅವರು ಶೀರ್ಷಿಕೆ ನೀಡಿಲ್ಲ. ಸಂಖ್ಯಾನಾಮಧೇಯಗಳನ್ನೇ ನೀಡಿದ್ದಾರೆ.

‘ಮಹಾಪ್ರಭುಗಳೇ, ಜನಸಾಮಾನ್ಯರು, ರೈತಾಪಿವರ್ಗ, ಯುವಕರು, ವ್ಯಾಪಾರಿಗಳು, ಹೆಂಗಸರು, ವೃದ್ಧರು, ಪ್ರಭುತ್ವ ಸೇವಕರು ಎಲ್ಲರೂ ಅಸಂತೋಷದಲ್ಲಿದ್ದಾರೆ. ತಾವು ಅವರನ್ನೆಲ್ಲಾ ಕರೆದು ಅಹವಾಲುಗಳನ್ನು ಆಲಿಸಿ ಪರಿಹರಿಸದಿದ್ದರೆ ಪ್ರಭುತ್ವಕ್ಕೆ ಹಾನಿ ಮಂತ್ರಿಗಳು ಶ್ರೀಮನ್ಮಮಹಾರಾಜರಲ್ಲಿ ಧೈರ್ಯಮಾಡಿ ಬಿನ್ನವಿಸಿಕೊಂಡರು.

ಶ್ರೀಮನ್ಮಹಾರಾಜರು ಮಂತ್ರಿಗಳನ್ನು ತದೇಕಚಿತ್ತರಾಗಿ, ಅಡಿಯಿಂದ ಮುಡಿಯವರೆಗೆ ನೋಡಿ, ಸ್ವಲ್ಪ ಹೊತ್ತು ಆಲೋಚನಾಮಗ್ನರಾಗಿ, ಹೇಳಿದರು. ‘ಸರಿ ತಾವು ಕೊಟ್ಟ ಮಾಹಿತಿ ಮತ್ತು ಸಲಹೆಗೆ ಧನ್ಯವಾದಗಳು. ತಾವೀಗ ನಿರ್ಗಮಿಸಬಹುದು.’

ಶ್ರೀಮನ್ಮಹಾರಾಜರು ಒಂದು ವಾರದ ಬಳಿಕ ಈ ಎಲ್ಲಾ ವರ್ಗ ಸಮುದಾಯಗಳ ಸಭೆ ಸೇರಿಸಿದರು. ‘ಎಲ್ಲಾ ಪ್ರಜಾರಕ್ಷಕ, ಪ್ರಜಾವತ್ಸಲ, ಪ್ರಜಾಮುಖಿ, ಪ್ರಜಾಪರಿಪಾಲಕ, ಪರಮದಯಾಳು, ಪ್ರಜಾಕಣ್ಮಣಿ, ಏಕೈಕ ಪ್ರಜಾನಾಯಕ, ಶ್ರೀಮನ್ಮಹಾರಾಜರಿಗೆ ಉಘೕ ಉಘೕ’ ಎನ್ನುವ ಭಟ್ಟಂಗಿಗಳ ಜಯಘೊಷಗಳೊಂದಿಗೆ ಜನ ಸಮುದಾಯ ಸೇರಿದ್ದ ಮಹಾ ಮೈದಾನದಲ್ಲಿ ಅವರಿಗೆಂದೇ ರಕ್ಷಕ ಕವಚದಿಂದ ಸುತ್ತಲ್ಪಟ್ಟ ಎತ್ತರದ ವೇದಿಕೆಯೇರಿ ದಶದಿಕ್ಕುಗಳತ್ತ ವಿಹಂಗಮ ನೋಟ ಬೀರಿ, ಕೈಎತ್ತಿ, ಕೈಬೀಸಿ, ಕೈಯಲ್ಲಾಡಿಸಿ, ಕೈಮುಗಿದಾಗ, ಸಭೆ ಸ್ತಬ್ಧ. ಎಲ್ಲೆಲ್ಲೂ ನಿಶ್ಶಬ್ದ. ಬಳಿಕ ಗುಸುಗುಸು. ಕೊನೆಗೆ ಅಲ್ಲಲ್ಲಿ, ಇಲ್ಲಿಲ್ಲಿ, ಮತ್ತಲ್ಲಿ ಗುಂಪುಗಳಿಂದ ಉಘೕ, ಉಘೕ ಎನ್ನುವ ಘೊಷ. ಈ ಘೊಷ ಇಡೀ ಸಮುದಾಯವನ್ನು ವ್ಯಾಪಿಸಿ, ಅವು ದಶದಿಕ್ಕುಗಳಿಗೂ ಹರಡಿತು.

ಮೊದಲೇ ನಿಗದಿ ಪಡಿಸಿದಂತೆ ಒಂದೊಂದು ವರ್ಗದ ಮುಂದಾಳುಗಳು ಮುಂದೆ ಬಂದು, ಭೂಮಿತನಕ ಬಾಗಿ, ನಿಂತುಕೊಂಡರು. ಆಗ ಪಕ್ಕದಲ್ಲೇ ಇದ್ದ ಮಂತ್ರಿಗಳು ‘ಇವರು ವ್ಯಾಪಾರಿ ವರ್ಗದವರು. ತಮ್ಮ ತಮ್ಮ ವ್ಯವಹಾರ ವಾಣಿಜ್ಯಗಳಲ್ಲಿ ಶ್ರೀಮನ್ಮಹಾರಾಜರ ಕೃಪೆಯಿಂದ ಅಭಿವೃದ್ಧಿ ಹೊಂದಿ ಪ್ರಭುತ್ವದ ಸೇವೆ ಮಾಡುತ್ತಿದ್ದಾರೆ. ಕ್ಷೇಮವಾಗಿದ್ದಾರೆ’ ಎಂದರು. ವ್ಯಾಪಾರಿವರ್ಗ ಮತ್ತೊಮ್ಮೆ ಮೂರು ಸಲ ಸಲಾಮಿಸಿ, ಬಾಗಿ, ತಲೆಗಳನ್ನು ಚೆನ್ನಾಗಿ ಅಲ್ಲಾಡಿಸಿ, ನಿರ್ಗಮಿಸಿದರು... ಜನ ‘ಉಘೕ ಉಘೕ’ ಅಂದರು.

ಬಳಿಕ ಯುವ ಜನ ತಂಡ. ಮಂತ್ರಿಗಳು; ‘ಈ ಯುವಜನರು ನಮ್ಮ ಕ್ರಿಯಾಶೀಲ, ಕ್ರಿಯಾಚೈತನ್ಯ ಭವಿಷ್ಯದ ಬುನಾದಿ, ವರ್ತಮಾನದ ಶಕ್ತಿಯನ್ನು ಪ್ರತಿನಿಧಿಸುತ್ತಾರೆ. ಇವರೆಲ್ಲಾ ತಮತಮಗೆ ವಿದ್ಯಾಭ್ಯಾಸ, ಉದ್ಯೋಗ, ಮನರಂಜನೆ ಎಲ್ಲವೂ ಪ್ರಭುತ್ವದ ಕೃಪಾಕಟಾಕ್ಷದಿಂದ ಹೇರಳವಾಗಿ ಲಭಿಸುತ್ತದೆ. ಎಲ್ಲರೂ ತೃಪ್ತರಾಗಿದ್ದಾರೆ’ ಎಂದರು.

ಆದರೆ, ಓರ್ವ ಯುವಕನ ಅಸಮ್ಮತಿಯ ಮುಖಭಾವವನ್ನು ಗಮನಿಸಿದ, ಶ್ರೀಮನ್ಮಹಾರಾಜರ ಕಣ್ಸನ್ನೆಯನ್ನು ಸೂಕ್ಷ್ಮವಾಗಿ ಅರಿತ ಸುಭಟರಿಬ್ಬರು ಅವನ ಬಳಿ ಆ ಕಡೆ ಈ ಕಡೆ ಬಂದು ನಿಂತರು. ಪರಿಸ್ಥಿತಿಯನ್ನು ಗಮನಿಸಿದ ತಕ್ಷಣ ಈ ಯುವಕ, ‘ಯುವಜನಮಾನಸ ಚಕ್ರವರ್ತಿಗೆ ಉಘೕ ಉಘೕ’ ಎಂದಾಗ, ಜನ ಸಮುದಾಯದ ಮಧ್ಯೆ ಮಧ್ಯೆ ಇದ್ದ ಗುಂಪುಗಳಿಂದ ಶುರುವಾದ ‘ಉಘೕ ಉಘೕ’ ಧ್ವನಿ ಆಗ ಸರ್ವವ್ಯಾಪ್ತಿಯಾಗಿ ಹರಡಿತು.

ಹೀಗೆ, ವೃದ್ಧರ ವರ್ಗ, ಪ್ರಭುತ್ವಸೇವಕರ ವರ್ಗ, ಜನಸಾಮಾನ್ಯ ವರ್ಗ ಎಲ್ಲಾ ವರ್ಗಗಳ ಪ್ರತಿನಿಧಿತ್ವದ ಬಾಯಿಯಾಗಿ ಮಂತ್ರಿಗಳು ]ೕಮನ್ಮಹಾರಾಜರಿಗೆ ವರದಿ ಒಪ್ಪಿಸುತ್ತಿದ್ದರು. ಆಳುವ ಪ್ರಭುಗಳು, ಅವರನ್ನೆಲ್ಲಾ ವಿಹಂಗಮವಾಗಿ ನೋಡಿ ಒಮೊಮ್ಮೆ ಮುಗುಳ್ನಕ್ಕು, ಒಮ್ಮೊಮ್ಮೆ, ದಿಟ್ಟಿಸಿ ನೋಡಿ ಬಿಡುತ್ತಿದ್ದರು. ‘ಅಲ್ಲವೇ... ಮಹಾಪ್ರಭುಗಳಲ್ಲವೇ. ಅವರ ಮನಸ್ಸಿಗೆ ಗೊತ್ತಾಗದ್ದು ಏನಿದೆ? ಅಲ್ಲವೇ? ರಾಜಾ ಪ್ರತ್ಯಕ್ಷ ದೇವತಾಃ ಅಲ್ಲವೇ? ದೇವತೆಗಳಿಗೆ ಗೊತ್ತಾಗದ್ದು ಏನಿದೆ ಅಲ್ಲವೇ? ನಾವೇನೂ ಬಾಯಿಬಿಟ್ಟು ಹೇಳಬೇಕಾಗಿಲ್ಲವಲ್ಲ ಅಲ್ಲವೇ? ಅದಕ್ಕಾಗಿಯೇ ಅಗ್ನಿವಾಹಕನಂತೆ ಮಂತ್ರಿಗಳು ಇರುವುದಲ್ಲವೇ?’ ಎಂದು ಓರ್ವ ‘ಅಲ್ಲವೇ... ಅಲ್ಲವೇ...’ ಎಂದು ಪದೇ ಪದೇ ಉಗ್ಗಿಸಿ ಮಾತನಾಡುತ್ತಿದ್ದ ಆದರೆ ಓರ್ವ ವಯೋವೃದ್ಧರು ಯಾರನ್ನು ಉದ್ದೇಶಿಸಿ, ಯಾರಿಗೋ ಕೇಳುವಂತೆ, ಯಾವುದೋ ದಿಕ್ಕನ್ನು ನೋಡಿ, ಪದೇ ಪದೇ ಈ ಪದಗಳನ್ನೇ ಪುನರುಚ್ಚರಿಸುತ್ತಿದ್ದರು...

ಕೊನೆಗೆ ಎರಡು ತಂಡಗಳು ಉಳಿದಿದ್ದವು. ಒಂದು ಹೆಂಗಸರ ತಂಡ. ಇನ್ನೊಂದು ರೈತಾಪಿ ವರ್ಗ.

ಹೆಂಗಸರ ತಂಡದ ಸರದಿ ಬಂದಾಗ ಶ್ರೀಮನ್ಮಹಾರಾಜರು ಹೆಚ್ಚು ಮಂದಸ್ಮಿತರಾದರು. ತಾವೇ ಕೆಲವರನ್ನು ಸಿಂಹಾಸನದ ಬಳಿ ಕರೆದರು. ಮಂತ್ರಿಗಳು ಇನ್ನೇನು ಬಾಯಿ ತೆರೆಯಬೇಕು ಎನ್ನುವಷ್ಟರಲ್ಲಿ, ಅವರೇ ತಮ್ಮ ದಿವ್ಯಮುಖವಾಣಿಯಿಂದ ಉದ್ಗರಿಸಿದರು. ‘ತಾಯಂದಿರೇ, ನಿಮ್ಮದೇನೂ ಅಹವಾಲುಗಳಿಲ್ಲಾ ತಾನೇ. ನೀವುಗಳೆಲ್ಲಾ ನಿಮ್ಮ ನಿಮ್ಮ ಸ್ವಕ್ಷೇತ್ರಗಳಲ್ಲಿ, ನಿಮ್ಮ ನಿಮ್ಮ ಕೈಂಕರ್ಯಗಳನ್ನು ಪೂರೈಸಿಕೊಂಡು, ನಮ್ಮ ಘನ ಪ್ರಭುತ್ವದಲ್ಲಿ ಸುರಕ್ಷಿತರಾಗಿದ್ದೀರಿ ಎಂದು ನಮಗೆ ತಿಳಿದು ಬಂದಿದೆ. ಹೌದು ತಾನೇ’ ಅಂದರು. ಸಿಂಹಾಸನದ ಸಾನ್ನಿಧ್ಯದ ಸನಿಹವಿದ್ದ ಮಹಿಳಾಮಣಿಗಳ ಸ್ವಶಕ್ತಿಗುಂಪು ‘ಹೌದು, ಹೌದು’ ಎಂದು ತಮ್ಮ ಗೋಣುಗಳನ್ನು ವಯ್ಯಾರದಿಂದ ಅಲ್ಲಾಡಿಸಿದರು. ಅವರಲ್ಲೆಲ್ಲಾ ಏನೋ ಒಂದು ಧನ್ಯಭಾವ.

ಈ ಮಧ್ಯೆ ಕೆಲವು ಹಿರೀಕರು, ತಮ್ಮ ತಮ್ಮಲ್ಲೇ ಪಿಸುಗುಟ್ಟಿಕೊಳ್ಳುತ್ತಿದ್ದರು. ‘ಅಂದಹಾಗೆ, ನಮ್ಮ ಹಳೆಯ ವೃದ್ಧ ಮಂತ್ರಿಗಳು ಎಲ್ಲಿಗೆ ಹೋದರು. ಕರುಣಾಮಯಿಯಾದ ಇವರ ಪಿತಾಮಹ ಮಹಾರಾಜರ ಕಾಲದಿಂದಲೂ, ಪ್ರಭುತ್ವದ ಸೇವೆ ಮಾಡಿದ್ದ ಹಿರಿಯರು ಅವರು... ಎಲ್ಲಿಗೆ ಹೋದರು. ಅವರು ಪರಂಧಾಮವನೈದಿದ್ದಾರೆ’ ಎಂದು ಒಬ್ಬರು, ‘ಇಲ್ಲ ಇಲ್ಲ, ಕಾಡಿಗೆ ಹೋಗಿದ್ದಾರೆ... ತಪಸ್ಸು ಮಾಡುತ್ತಿದ್ದಾರಂತೆ’ ಅಂತ ಇನ್ನೊಬ್ಬರು...

‘ಇಲ್ಲ ಇಲ್ಲ. ನನಗೆ ಚೆನ್ನಾಗಿ ಗೊತ್ತು... ಅವರು... ಅವರೂ... ಯಾಕಪ್ಪಾ ನಮಗೆ ಬೇಕು ಈ ಅರಮನೆಯ ಸುದ್ದಿ ಸಹವಾಸ... ತಮ್ಮ ತಲೆ ಉಳಿಸಿಕೊಂಡರೆ ಸಾಕು. ಜಾತಸ್ಯ ಮರಣಂಧೃವಂ ಎಂಬುದು ಅರ್ವಾಚೀನ ವಾಕ್ಯವಾದರೂ, ಅದನ್ನು ನಾವಾಗಿ ಯಾಕೆ ನಮ್ಮ ತಲೆಯ ಮೇಲೆ ಎಳೆದುಕೊಳ್ಳಬೇಕು’ ಇನ್ನೊಬ್ಬರು ಪಿಸುಗುಟ್ಟಿದರು. ‘ಹೀಗೆ... ಹೀಗೆ ಇದಕ್ಕೇ, ನಾವು ಧೈರ್ಯ ಕಳೆದುಕೊಂಡು ನಿರ್ವೀಯರಾಗಿ ಉಘೕ... ಉಘೕ... ಮಂದಿಯಾದದ್ದು’ ಎಂದು ಅವರು ಸ್ವಲ್ಪ ಗಟ್ಟಿಯಾಗೇ ಹೇಳಿದಾಗ ಅಕ್ಕಪಕ್ಕದಲ್ಲಿದ್ದ ಬಲಾಢ್ಯರು ಕೆಂಗಣ್ಣುಗಳನ್ನು ಅಗಲಿಸಿದರು.

ಪಿಸುಮಾತುಗಳೆಲ್ಲಾ ಉದರಂಭರಣವಾಯಿತು.

ಕೊನೆಗೆ ಬಂದದ್ದು ರೈತಾಪಿ ತಂಡ. ಆ ತಂಡದ ದಿರುಸು, ನಡೆಗಳನ್ನು ನೋಡಿದ ತಕ್ಷಣವೇ ಅವರು ಬೆವರಿಗರು ಎಂದು ಗೊತ್ತಾಗುವುದಕ್ಕೆ ಕಷ್ಟವಾಗುತ್ತಿರಲಿಲ್ಲ. ಈ ತಂಡ ವೇದಿಕೆಗೆ ಬಂದ ತಕ್ಷಣ ಜನಸಮುದಾಯದ ಅಲ್ಲಿ ಅಲ್ಲಿ ಕೆಲವರು ಏಳಲು ಶುರು ಮಾಡಿದರು. ಭೋಜನದ ವ್ಯವಸ್ಥೆ ಶುರುವಾಗಿದೆ ಎಂದು ಯಾರದೋ ಮೂಗಿಗೆ ಅನ್ನದ ವಾಸನೆ ಬಡೆದು, ಅದು ಒಂದು ಮೂಗಿನಿಂದ, ಇನ್ನೊಂದು ಮೂಗಿಗೆ, ಅದರಿಂದ ಮತ್ತೊಂದಕ್ಕೆ, ಹೀಗೆ ಬೃಹತ್ ಜನಸ್ತೋಮದ ಮೂಗುಗಳನ್ನು ಆವರಿಸಿಕೊಂಡು, ಮೂಗಿನ ಹೊಳ್ಳೆಗಳು ಅರಳಿಸಿಕೊಂಡು, ಜಿಹ್ವೆಗಳು

ಅನ್ನರಸಗ್ರಹಣಕ್ಕಾಗಿ ಚೈತನ್ಯದ ಲವಲವಿಕೆಯನ್ನು ತೋರಿದರೂ, ಜನ ಸಮುದಾಯದ ಮಧ್ಯದಲ್ಲಿದ್ದ ರಕ್ಷಕಭಟರ ತಂಡ ಭೂಮಿಯನ್ನು ಎರಡೆರಡು ಸಲ ತಮ್ಮ ಕೈದೂಣ್ಣೆಗಳಿಂದ ಬಲವಾಗಿ ಬಡಿದಾಗ ಇಡೀ ಬೃಹತ್ ಜನ ಸಾಗರ, ಮತ್ತೆ ಸ್ತಬ್ಧವಾಯಿತು. ನಿಶ್ಚೇಷ್ಟಿತವಾಯಿತು.

ರೈತಾಪಿ ತಂಡ ವೇದಿಕೆಯನ್ನೇರಿದಾಗ, ಶ್ರೀಮನ್ಮಹಾರಾಜರು ತಾವೇ ಸಿಂಹಾಸನದಿಂದ ಎದ್ದುನಿಂತು, ತಂಡದ ಬಳಿ ಬಂದು... ‘ಅನ್ನದಾತರು... ಅನ್ನದಾತರು...’ ಎಂದು ಕೆಲವರಿಗೆ ಕೈಮುಗಿದು, ಕೆಲವರಿಗೆ ಕೈಲುಕಿ, ಕೆಲವರನ್ನು ಆಲಿಂಗಿಸಿದಾಗ, ರಕ್ಷಕಭಟರು, ಪ್ರಭುಗಳ ಬೆನ್ನಹಿಂದೆ ಮುಂದೆ, ಅಕ್ಕಪಕ್ಕಗಳಲ್ಲಿ ಸರಿಸರಿದು ಗೊಂದಲಕ್ಕೀಡಾದರು. ರೈತರು ಹಾಗೇ ನಿಂತರು. ಪ್ರಭುಗಳು ಗಾಂಭೀರ್ಯದಿಂದ ನಡೆದರು.

ಶ್ರೀಮನ್ಮಹಾರಾಜರು ಚಂಡೆಮದ್ದಲೆ, ನಗಾರಿ-ಭೇರಿ, ಡೋಲು, ಶಂಖ, ಜಾಗಟೆಗಳ ವೈವಿಧ್ಯಮಯ ಶಬ್ದ ಸಂಗೀತದ ಜತೆ ರಕ್ಷಕಭಟರಿಂದ ಸುತ್ತುವರಿದು, ಹೊಸ ಮಂತ್ರಿಗಳ ಕೈಹಿಡಿದುಕೊಂಡು ದಿಗ್ವಿಜಯ ಭಾವದಿಂದ ಗಜ ಗಾಂಭೀರ್ಯದಿಂದ ನಿರ್ಗಮಿಸುತ್ತಿದ್ದಾಗ... ಜನಜಂಗುಳಿ ಮತ್ತೆ ‘ಉಘೕ, ಉಘೕ’ ಎಂದು ಬೊಬ್ಬಿರಿದು, ಕೆಲವರ ಗಂಟಲುಗಳೂ ಹರಿದು, ಕೆಲವರ ಧ್ವನಿಪೆಟ್ಟಿಗೆ ಕುಸಿದು, ಈ ಗಲಿಬಿಲಿಯಲ್ಲಿ ಕೆಲವರ ಬಟ್ಟೆಗಳು ಹರಿದು... ಹೋಯಿತು... ಹೋಯಿತು...

ಆದರೆ... ವೇದಿಕೆಯ ಮೇಲೆ, ಕಂಬಳಿ ಶಲ್ಯ ಹೊದ್ದುಕೊಂಡಿದ್ದ ಓರ್ವ ವೃದ್ಧ ರೈತ ಹಾಗೇ ಕೂತಿದ್ದ. ಬಲಗೈಯಲ್ಲಿ ಊರುಗೋಲನ್ನು ಹಿಡಿದಿದ್ದ ಕಾರಣ, ಎಡಗೈಯನ್ನು ಮೇಲೆತ್ತಿ, ಕೈನಡುಗುತ್ತಿದ್ದ ಕಾರಣ, ಮುಷ್ಟಿಯಲ್ಲಿ ಬೆರಳುಗಳನ್ನು ಹಿಡಿದುಕೊಂಡು, ‘ಉಗ್ಗೆ... ಉಗ್ಗೇ... ಉಗ್ಗೇ... ಉಗ್ಗೇ...’ ಎಂದು ಕೂಗುತ್ತಿದ್ದ.

(ಉಗ್ಗೆ = ಅನ್ನ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net