ಟ್ರೇಲರ್​ನಲ್ಲಿ ಒಂದು ಗಂಟೆಯ ಕಥೆ; ಪ್ರೇಮಿಗಳ ದಿನದಂದು ಬಿಡುಗಡೆ

Ondu Ganteya Kathe 12 Feb 20
Published on

ಬೆಂಗಳೂರು: ‘ಒಂದು ಮುತ್ತಿನ ಕಥೆ’, ‘ಒಂದು ಮೊಟ್ಟೆಯ ಕಥೆ’ಗಳನ್ನು ನೋಡಿರುವ ಕನ್ನಡ ಸಿನಿಪ್ರಿಯರಿಗೆ ‘ಒಂದು ಗಂಟೆಯ ಕಥೆ’ ನೋಡುವ ಅವಕಾಶ ಸದ್ಯದಲ್ಲೇ ಒದಗಿ ಬರಲಿದೆ. ಅರ್ಥಾತ್, ‘ಒಂದು ಗಂಟೆಯ ಕಥೆ’ ಎಂಬ ಟೈಟಲ್​ನ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದ್ದು, ಈಗಾಗಲೇ ದುನಿಯಾ ವಿಜಯ್ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರೇಮಿಗಳ ದಿನವಾದ ಶುಕ್ರವಾರ ಅಧಿಕೃತವಾಗಿ ರಿಲೀಸ್ ಆಗಲಿದೆ.

ಶೀರ್ಷಿಕೆ ನೋಡುತ್ತಿದ್ದಂತೆ ಇದು ಒಂದು ಗಂಟೆ ಅವಧಿಯ ಸಿನಿಮಾ ಅಲ್ಲ, ಮಾಮೂಲಿ ಪೂರ್ಣಾವಧಿಯ ಚಿತ್ರವೇ. ಅಷ್ಟಕ್ಕೂ ಈ ಚಿತ್ರ ಒಂದು ನೈಜ ಘಟನೆ ಆಧಾರಿತವಾಗಿ ಮೂಡಿಬಂದಿರುವುದರಿಂದ ಈ ಶೀರ್ಷಿಕೆ ಬಳಸಲಾಗಿದೆಯಂತೆ. ‘ಶ್ರೀ’, ‘ತಾರಕ್’, ‘ಮಿಲನ’ ಚಿತ್ರಗಳ ನಿಮಾಪಕ ಕೆ.ಎಸ್. ದುಷ್ಯಂತ್ ಅರ್ಪಿಸಿ, ‘ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ಕಶ್ಯಪ್ ದಾಕೋಜು ಈ ಚಿತ್ರವನ್ನು ನಿರ್ವಿುಸಿದ್ದಾರೆ. ಈ ಸಿನಿಮಾಗೆ ‘ಮತ್ತೆ ಮುಂಗಾರು’ ಖ್ಯಾತಿಯ ದ್ವಾರ್ಕಿ ರಾಘವ್ ಚಿತ್ರಕತೆ, ಸಾಹಿತ್ಯ ಬರೆಯುವ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ನಿರ್ಮಾಪಕ ಕಶ್ಯಪ್ ದಾಕೋಜು ಅವರಿಗೆ ಇದು ನಾಲ್ಕನೇ ಚಿತ್ರ. ನೈಜ ಘಟನೆಯೊಂದರ  ಸ್ಫೂರ್ತಿಯಿಂದ ತಯಾರಾದ ಈ ಚಿತ್ರ ಬಹುಮುಖ್ಯವಾದ ಸಂದೇಶದೊಂದಿಗೆ ಸಂಪೂರ್ಣ ಹಾಸ್ಯಮಯವಾಗಿ ಮೂಡಿಬಂದಿರುತ್ತದೆ. 130 ಕಲಾವಿದರು ಇರುವ ಈ ಸಿನಿಮಾ ಹಾಸ್ಯಮಯವಾಗಿ ಸಾಗುತ್ತ ಗಂಭೀರವಾಗಿ ಮುಗಿಯುವುದೇ ಇಲ್ಲಿನ ವಿಶೇಷ. ಕೇರಳ, ಆಂಧ್ರಪ್ರದೇಶ, ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಇತ್ತೀಚೆಗಷ್ಟೇ ನಟ-ನಿರ್ದೇಶಕ ದುನಿಯಾ ವಿಜಯ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ನಟರಾದ ಪ್ರಣಯ ರಾಜ ಶ್ರೀನಾಥ್, ಸುನಿಲ್ ರಾವ್, ಶ್ರೀನಗರ ಕಿಟ್ಟಿ, ದಿಗಂತ್, ಅವಿನಾಶ್, ಅಚ್ಯುತ್ ಕುಮಾರ್, ಮಯೂರ್ ಪಟೇಲ್, ನಟಿಯರಾದ ಪದ್ಮಜಾರಾವ್, ಮಯೂರಿ ಕ್ಯಾಥರಿನ್ ಮುಂತಾದವರು ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಡಿ-ಬೀಟ್ಸ್’ ಕಂಪನಿಯ ಯೂ-ಟ್ಯೂಬ್​ನಲ್ಲಿ ಫೆ.14ರಂದು ಟ್ರೇಲರ್ ಬಿಡುಗಡೆ ಆಗಲಿದೆ. ಅಜಯ್ ರಾಜ್ (ನಂಜುಂಡ), ಶನಾಯ ಕಾಟ್ವೆ, ಸ್ವಾತಿ ಶರ್ಮ, ಚಿದಾನಂದ್, ಪ್ರಶಾಂತ್ ಸಿದ್ಧಿ, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ, ಯಶವಂತ್ ಸರ್​ದೇಶಪಾಂಡೆ, ನಾಗೇಂದ್ರ ಷಾ, ಮಿಮಿಕ್ರಿ ಗೋಪಿ, ಸಿಲ್ಲಿ ಲಲ್ಲಿ ಆನಂದ್, ಕುಳ್ಳ ಸೋಮು, ಮಜಾ ಟಾಕೀಸ್ ರೆಮೊ, ರುಕ್ಮಿಣಿ ಸೇರಿ ಕಲಾವಿದರ ಬಳಗವೇ ಇದೆ. ಚಿತ್ರಕ್ಕೆ ಡೆನ್ನಿಸ್ ವಲ್ಲಭನ್ ಸಂಗೀತ, ಸೂರ್ಯಕಾಂತ್ ಛಾಯಾಗ್ರಹಣ, ಗಣೇಶ್ ಸಂಕಲನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net