ಗಿಫ್ಟ್​ಬಾಕ್ಸ್ ಒಳಗೆ ಮಾನವ ಕಳ್ಳಸಾಗಣೆ !

NB 12 Feb 20
Published on

ಬೆಂಗಳೂರು: ಮಾನವ ಕಳ್ಳಸಾಗಣೆ ಕುರಿತ ಸಿನಿಮಾಗಳು ಕನ್ನಡದಲ್ಲಿ ಬಂದುಹೋಗಿವೆ. ಆದರೆ, ಅವುಗಳಿಗಿಂತ ‘ಗಿಫ್ಟ್ ಬಾಕ್ಸ್’ ಚಿತ್ರ ವಿಶೇಷ ಎಂಬುದು ನಿರ್ದೇಶಕ ರಘು ಎಸ್.ಪಿ. ಅಂಬೋಣ. ಸಮಾಜದ ವ್ಯಾಘ್ರ ಮುಖಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿರುವ ಅವರು, ಕೆಲವೊಂದಿಷ್ಟು ಅಧ್ಯಯನ ನಡೆಸಿ ಹೊಸ ಕಥೆಯನ್ನು ಹಿಡಿದು ಇದೇ ವಾರ ಆಗಮಿಸುತ್ತಿದ್ದಾರೆ. ಅಂದರೆ, ಫೆ. 14ರಂದು ‘ಗಿಫ್ಟ್ ಬಾಕ್ಸ್’ ಚಿತ್ರ ತೆರೆಗೆ ಬರುತ್ತಿದೆ. ನಾಯಕನಾಗಿ ರಿತ್ವಿಕ್ ಮಠದ್, ನಾಯಕಿಯಾಗಿ ಅಮಿತಾ ಕುಲಾಲ್ ಮತ್ತು ದೀಪ್ತಿ ನಟಸಿದ್ದಾರೆ.

ವಿಶೇಷ ಕಥಾಹಂದರದ ಸಿನಿಮಾದಲ್ಲಿ ಪಾತ್ರ ನಿಭಾಯಿಸಿದ್ದಕ್ಕೆ ಖುಷಿ ವ್ಯಕ್ತಪಡಿಸುವ ಅಮಿತಾ, ‘ವೃತ್ತಿ ಬದುಕಿಗೆ ಈ ಸಿನಿಮಾ ಮೂಲಕ ಟರ್ನಿಂಗ್ ಪಾಯಿಂಟ್ ಸಿಗಲಿದೆ. ನಾನು ಇಲ್ಲಿಯವರೆಗೆ ಮೂರು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಇದು ಬಹಳ ವಿಭಿನ್ನ ಮತ್ತು ಬೇರೆ ರೀತಿಯ ಅನುಭವ ನೀಡಿದ ಚಿತ್ರವಾಗಿದೆ. ಈ ಪಾತ್ರದ ತಯಾರಿಗಾಗಿ ಮೈಸೂರಿನ ರಂಗಾಯಣದಲ್ಲಿ ರಿಹರ್ಸಲ್ ಮಾಡಿದ್ದೆವು. ನಿರ್ದೇಶಕ ರಘು ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಪ್ರೇಕ್ಷಕರಿಗೆ ಬೇರೆಯದ್ದೇ ಅನುಭವ ನೀಡುವ ಸಿನಿಮಾ ಇದಾಗಲಿದೆ’ ಎಂಬುದು ಅಮಿತಾ ಕುಲಾಲ್ ಮಾತು. ಈ ಹಿಂದೆ ‘ಪಲ್ಲಟ’ ಸಿನಿಮಾ ನಿರ್ದೇಶನ ಮಾಡಿದ್ದ ರಘುಗೆ ‘ಗಿಫ್ಟ್​ಬಾಕ್ಸ್’ ಎರಡನೇ ಚಿತ್ರ. ನಾಯಕ, ನಾಯಕಿಯಷ್ಟೇ ಒಂದು ಗಿಫ್ಟ್​ಬಾಕ್ಸ್ ಸಹ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದೆಯಂತೆ. ‘ಮಾನವ ಕಳ್ಳ ಸಾಗಾಟ ಜಾಲದಲ್ಲಿ ಬರೀ ಹೆಣ್ಣುಮಕ್ಕಳೇ ಅಲ್ಲ, ಪುರುಷರು ಸಹ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಜಾಲದಲ್ಲಿ ಸಿಲುಕಿದ ಅಮಾಯಕನೊಬ್ಬ ಅದರಿಂದ ಹೊರಬರಲು ಪಡುವ ಕಷ್ಟಗಳೇನು ಎಂಬುದೇ ಈ ‘ಗಿಫ್ಟ್ ಬಾಕ್ಸ್’ ಎಂದು ಸಿನಿಮಾದಲ್ಲಿ ಹೇಳಹೊರಟಿರುವ ಕಥೆಯನ್ನು ವಿವರಿಸುತ್ತಾರೆ ನಿರ್ದೇಶಕರು. ಅಂದಹಾಗೆ, ಮೈಸೂರಿನಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ರಘು. ಸ್ನೇಹಿತರ ಜತೆಗೂಡಿ ಬಂಡವಾಳ ಹೂಡಿ ನಿರ್ವಪಕರೂ ಆಗಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಮಾನವ ಕಳ್ಳ ಸಾಗಣೆ ಬಗ್ಗೆ ಸಿನಿಮಾ ಮಾಡುತ್ತಾರೆ, ಆದರೆ ಇಲ್ಲಿ ಒಬ್ಬ ಯುವಕ ಈ ದಂಧೆಯೊಳಗೆ ಸಿಲುಕಿಕೊಂಡಾಗ ಆತ ಅನುಭವಿಸುವ ಯಾತನೆಯನ್ನು ತೋರಿಸಲಾಗಿದೆ. ಸಸ್ಪೆನ್ಸ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. | ಅಮಿತಾ ಕುಲಾಲ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net