ಅಯ್ಯೋ... ನಾಯಿ ಬಂತು ನಾಯಿ!

photo-3-689cd9a5c733e
Published on

ಬೀದಿನಾಯಿಗಳ ಹಾವಳಿ ಮತ್ತು ಅದು ಸೃಷ್ಟಿಸಿರುವ ಆತಂಕದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ (ಎನ್​ಸಿಆರ್) ಬೀದಿನಾಯಿಗಳನ್ನು ಎಂಟು ವಾರದೊಳಗೆ ಹಿಡಿದು, ಸಂತಾನ ಶಕ್ತಿ ಹರಣ ಮಾಡಿ, ಶಾಶ್ವತ ಆಶ್ರಯ ಕೇಂದ್ರಗಳಿಗೆ ರವಾನಿಸುವಂತೆ ಆಗಸ್ಟ್ 11ರಂದು ಸೂಚಿಸಿದೆ. ದೆಹಲಿ ಅಷ್ಟೇ ಅಲ್ಲ ಈ ಸಮಸ್ಯೆ ದೇಶದ ಎಲ್ಲ ಕಡೆಯೂ ಇದ್ದು, ಶ್ವಾನಭೀತಿ ಜನರನ್ನು ಕಂಗೆಡಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಕೂಡ ಪದೇಪದೆ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಿವೆ.

ಬೀದಿನಾಯಿಗಳ ಸಮಸ್ಯೆ ನಿವಾರಿಸಿ, ಜನರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಿ ಎಂಬ ಜನಾಗ್ರಹ ಒಂದೆಡೆಯಾದರೆ, ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಕಳಿಸುವುದು ಸಮಸ್ಯೆಗೆ ಶಾಶ್ವತ ಹಾಗೂ ವ್ಯಾವಹಾರಿಕ ಪರಿಹಾರವಲ್ಲ ಎಂದು ಪ್ರಾಣಿ ದಯಾ ಸಂಘಗಳು ಮತ್ತು ಶ್ವಾನಪ್ರಿಯರು ಹೇಳುತ್ತಿದ್ದಾರೆ. ಆದರೆ, ನಾಯಿ ಕಡಿತ, ಹಬ್ಬುತ್ತಿರುವ ರೇಬಿಸ್ ಕಾಯಿಲೆಯ ಪ್ರಮಾಣವನ್ನು ಅವಲೋಕಿಸಿದರೆ ನಿಜಕ್ಕೂ ಗಾಬರಿಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ನಾಯಿ ಕಡಿತ ಮತ್ತು ರೇಬಿಸ್​ನಿಂದ ಪ್ರತಿವರ್ಷ ಜಗತ್ತಿನಾದ್ಯಂತ 55 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ! ಇನ್ನು ಚಿಂತೆಯ ವಿಷಯವೆಂದರೆ ಈ ಪೈಕಿ ಪ್ರತಿ ಮೂರನೇ ವ್ಯಕ್ತಿ ಭಾರತೀಯ ಅಂದರೆ 18ರಿಂದ 20 ಸಾವಿರ ಭಾರತೀಯರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಶೇಕಡ 50ಕ್ಕೂ ಹೆಚ್ಚು 15 ವರ್ಷದೊಳಗಿನ ಮಕ್ಕಳೇ ಆಗಿದ್ದಾರೆ. ಅಂದರೆ ಮಕ್ಕಳ ಪಾಲಿಗೆ ಬೀದಿನಾಯಿಗಳು ದೊಡ್ಡ ಆಪತ್ತಾಗಿ ಕಾಡುತ್ತಿರುವುದನ್ನು ಅಂಕಿಸಂಖ್ಯೆಗಳೇ ಸ್ಪಷ್ಟವಾಗಿ ಸಾರುತ್ತವೆ.

ಹೆಚ್ಚುತ್ತಿವೆ ಪ್ರಕರಣಗಳು: ಕೇಂದ್ರ ಪಶುಸಂಗೋಪನಾ ಸಚಿವ ಎಸ್.ಪಿ. ಸಿಂಗ್ ಬಘೇಲ್ 2025ರ ಏಪ್ರಿಲ್ 1ರಂದು ಲೋಕಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ 2024ರಲ್ಲಿ ದೇಶದಲ್ಲಿ ನಾಯಿ ಕಡಿತದ 37.15 ಲಕ್ಷ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಇವುಗಳ ಸಂಖ್ಯೆ 30.52 ಲಕ್ಷ ಇತ್ತು ಎಂಬುದನ್ನು ಗಮನಿಸಿದರೆ ಒಂದೇ ವರ್ಷದಲ್ಲಿ ನಾಯಿ ಕಡಿತದ ಪ್ರಕರಣಗಳು 6.63 ಲಕ್ಷದಷ್ಟು ಹೆಚ್ಚಿವೆ. ಅಧ್ಯಯನಗಳ ಪ್ರಕಾರ, 2012ರಿಂದ 2020ರ ಅವಧಿಯಲ್ಲಿ ನಾಯಿ ಕಡಿತದ ಪ್ರಕರಣಗಳು ದ್ವಿಗುಣಗೊಂಡಿರುವುದು, ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಇದಕ್ಕೆ ಪ್ರಮುಖ ಕಾರಣ ನಗರ ಮತ್ತು ಮಹಾನಗರಗಳಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವುದು. ದೇಶದಲ್ಲಿ 1.53 ಕೋಟಿ ಬೀದಿನಾಯಿಗಳಿವೆ ಎಂದು ಸರ್ಕಾರ ಹೇಳಿದರೆ, ಸರ್ಕಾರೇತರ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ 6 ಕೋಟಿಗೂ ಹೆಚ್ಚು. ಮತ್ತು ವರ್ಷದಿಂದ ವರ್ಷಕ್ಕೆ ಬೀದಿನಾಯಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ.

ಆಹಾರ ಲಭ್ಯತೆಯ ಸವಾಲು

ಬೀದಿನಾಯಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದು ಅವುಗಳಿಗೆ ಆಹಾರ ಲಭ್ಯತೆಯ ಸಮಸ್ಯೆಯನ್ನು ತಂದೊಡ್ಡಿದೆ. ಸಾಮಾನ್ಯವಾಗಿ ಬೀದಿನಾಯಿಗಳು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಇದಕ್ಕಾಗಿ ತ್ಯಾಜ್ಯಗಳ ಡಂಪ್ ಯಾರ್ಡ್, ಮಾಂಸದಂಗಡಿ ಮತ್ತು ಬೀದಿತಿಂಡಿ ಅಂಗಡಿಗಳ ಸುತ್ತಮುತ್ತಲೇ ನೆರೆದಿರುತ್ತವೆ.

ಕ್ರೂರ ಸ್ವಭಾವವೇಕೆ?

ಬೀದಿನಾಯಿಗಳು ಇತ್ತೀಚಿನ ವರ್ಷ ಗಳಲ್ಲಿ ಕ್ರೂರಸ್ವಭಾವ ಬೆಳೆಸಿಕೊಂಡಿವೆ. ಇದಕ್ಕೆ ಮನುಷ್ಯ ಮಾಡಿರುವ ಕೆಲ ಪ್ರಮಾದಗಳೇ ಕಾರಣ ಎನ್ನುತ್ತಾರೆ ತಜ್ಞರು.

* ಬೀದಿನಾಯಿಗಳು ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಬೀದಿನಾಯಿಗಳ ಲಾಲನೆ-ಪೋಷಣೆಯಲ್ಲಿ ಮಾನವನ ಹಸ್ತಕ್ಷೇಪ ಮೊದಲಿನಿಂದಲೂ ಇದೆಯಾದರೂ ಕೋವಿಡ್ ಲಾಕ್​ಡೌನ್ ಸಮಯದಲ್ಲಿ ತೀವ್ರವಾಗಿ ಹೆಚ್ಚಿತು. ಲಾಕ್​ಡೌನ್ ಅವಧಿಯಲ್ಲಿ ಬೀದಿನಾಯಿಗಳಿಗೆ ಫೀಡ್ ಮಾಡುವುದು ಫ್ಯಾಷನ್ ಆಗಿಬಿಟ್ಟಿತು. ಬೀದಿನಾಯಿಗಳಿಗೆ ನೆರವಾಗುವ ನೆಪದಲ್ಲಿ ಜನರು ಅವುಗಳಿಗೆ ಎರಡೂ ಹೊತ್ತಿನ ಆಹಾರ ನೀಡಿದರು. ಆದರೆ, ಲಾಕ್​ಡೌನ್ ಮುಗಿದ ಮೇಲೆ ಇದು ನಿಂತುಹೋಯಿತು. ಇದರಿಂದ, ಬೀದಿನಾಯಿಗಳು ಕ್ರಮೇಣ ಅವಲಂಬಿತವಾದವು. ಆಹಾರಕ್ಕಾಗಿ ಜನರ ಮೇಲೆ ದಾಳಿ ಮಾಡತೊಡಗಿದವು. ಜನರನ್ನು ಕಚ್ಚತೊಡಗಿದವು.

*ಬೀದಿನಾಯಿಗಳು ಹಸಿವಿನಿಂದ ಸಾಯುವುದಿಲ್ಲ. ಏಕೆಂದರೆ, ಅವು ತಮ್ಮ ಆಹಾರ ಹುಡುಕಿಕೊಳ್ಳುವಲ್ಲಿ ಸಮರ್ಥವಾಗಿವೆ. ಬೀದಿನಾಯಿಗಳ ಮರಣಕ್ಕೆ ಪ್ರಮುಖ ಕಾರಣ ಅನಾರೋಗ್ಯ ಮತ್ತು ರಸ್ತೆ ಅಪಘಾತಗಳು. ಬೆಳಗ್ಗೆ-ಸಂಜೆ ನಿಯಮಿತವಾಗಿ ಕರೊನಾ ಅವಧಿಯಲ್ಲಿ ಬೀದಿನಾಯಿಗಳ ಎದುರಿಗೆ ಊಟದ ತಟ್ಟೆ ಇಡುತ್ತಿದ್ದರಿಂದ, ಅವುಗಳಿಂದ ಆಹಾರ ಹುಡುಕುವ ಕೆಲಸವನ್ನೇ ಕಸಿದುಕೊಂಡೆವು. ಕ್ರಮೇಣ ಜನರಿಂದ ಆಹಾರ ಸಿಗುವುದು ನಿಂತ ಮೇಲೆ ಅವುಗಳ ಸ್ವಭಾವ ಆಕ್ರಮಕವಾಯಿತು.

*ಜನರಿಂದ ಆಹಾರ ದೊರೆಯುತ್ತಿದ್ದಂತೆ ಬೀದಿನಾಯಿಗಳ ಸ್ವಭಾವ ಸಾಕುನಾಯಿಗಳಂತಾಯಿತು. ಆಹಾರ ನೀಡುವ ವ್ಯಕ್ತಿಯನ್ನೇ ಯಜಮಾನನಂತೆ ನೋಡತೊಡಗಿದವು ಮತ್ತು ತಾವಿರುವ ರಸ್ತೆಯನ್ನು ತಮ್ಮದೇ ಪ್ರದೇಶ ಎಂದು ಭಾವಿಸಿ, ಅಲ್ಲಿ ಬೇರೆ ಯಾರಾದರೂ ಬಂದರೆ ಅದನ್ನು ಅಪಾಯ ಎಂದು ಭಾವಿಸಿ ಕಚ್ಚತೊಡಗಿದವು. ಅಂದರೆ, ಬೀದಿನಾಯಿಗಳ ಸ್ವಾಭಾವಿಕ ಗುಣ ಮತ್ತು ಸ್ವಭಾವವನ್ನು ಮನುಷ್ಯರೇ ಬದಲಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ.

ಪ್ರಧಾನಿ ಮಧ್ಯ ಪ್ರವೇಶಿಸಲಿ

ಬೀದಿನಾಯಿಗಳನ್ನು ಶಾಶ್ವತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿ ಸುವ ಯೋಜನೆ ಅಪ್ರಾಯೋಗಿಕವಾಗಿದ್ದು, ಶ್ವಾನಗಳ ಸಹಜ ಬದುಕಿನ ಹಕ್ಕನ್ನು ಇದು ಕಸಿದು ಕೊಂಡು, ಅವುಗಳನ್ನು ಕೈದಿಗಳ ಮಾದರಿ ಸೆರೆಯಲ್ಲಿ ಇಟ್ಟಂತಾಗುತ್ತದೆ ಎಂದು ಪ್ರಾಣಿ ದಯಾ ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ. ಕೆಲ ರಾಜಕಾರಣಿಗಳು, ಬಾಲಿವುಡ್ ನಟರು ಮತ್ತು ಸಾಮಾಜಿಕ ಕಾರ್ಯಕರ್ತರು ಇದಕ್ಕೆ ದನಿಗೂಡಿಸಿದ್ದಾರೆ.

ಮೇನಕಾ ವಿರೋಧ: ‘ದೆಹಲಿಯಲ್ಲಿ 3 ಲಕ್ಷ ಬೀದಿನಾಯಿಗಳಿಗೆ 3 ಸಾವಿರ ಶೆಲ್ಟರ್ ಹೋಮ್ಳು ಬೇಕು. ಮತ್ತು ಈ ಆಶ್ರಯ ಕೇಂದ್ರಗಳನ್ನು ಜನರು ವಾಸಿಸುವ ಕಾಲನಿಗಳಲ್ಲಿ ಆಗಲಿ ಅಥವಾ ಕೃಷಿಭೂಮಿಯಲ್ಲಾಗಲಿ ಸ್ಥಾಪಿಸುವಂತಿಲ್ಲ. ನಗರದಿಂದ ಹೊರಗಡೆ ಇರುವ ಪ್ರದೇಶಗಳನ್ನೇ ಇದಕ್ಕಾಗಿ ಶೋಧಿಸಬೇಕಾಗುತ್ತದೆ. 3 ಸಾವಿರ ಆಶ್ರಯ ಕೇಂದ್ರಗಳನ್ನು ನೋಡಿಕೊಳ್ಳಲು ಸಾವಿರಾರು ಸಿಬ್ಬಂದಿ ಬೇಕು. ಅಲ್ಲದೆ, 3 ಲಕ್ಷ ಬೀದಿನಾಯಿಗಳಿಗೆ ಆಹಾರ, ಅವುಗಳ ಲಾಲನೆಪಾಲನೆ, ಆರೋಗ್ಯ ಇತ್ಯಾದಿಗಾಗಿ ವಾರಕ್ಕೆ 3ರಿಂದ 4 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಹಾಗಾಗಿ, ಈ ನಿರ್ಣಯ ವ್ಯಾವಹಾರಿಕವಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಆಗ್ರಹಿಸಿದ್ದಾರೆ. ‘ಬೀದಿನಾಯಿಗಳನ್ನು ಶೆಲ್ಟರ್ ಹೋಮ್ಳಿಗೆ ಅಟ್ಟುವುದು ಕ್ರೂರತೆಯ ಪ್ರತೀಕ’ ಎಂದು ಮೇನಕಾ ಪುತ್ರ ಮತ್ತು ಮಾಜಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಬಾಲಿವುಡ್ ನಟರ ಪ್ರತಿಕ್ರಿಯೆ: ನಟ ಜಾನ್ ಅಬ್ರಹಂ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ದೆಹಲಿಯಲ್ಲಿರುವುದು ಕಮ್ಯುನಿಟಿ ಡಾಗ್ಸ್. ಅವುಗಳನ್ನು ತುಂಬ ಜನರು ಪ್ರೀತಿ ಮತ್ತು ಸಹಾನುಭೂತಿಯಿಂದ ಕಾಣುತ್ತಾರೆ. ಈ ಶ್ವಾನಗಳು ಕೂಡ ದೆಹಲಿ ನಿವಾಸಿಗಳೇ ಆಗಿದ್ದು, ಹಲವು ಪೀಳಿಗೆಗಳಿಂದ ಮನುಷ್ಯರ ಜತೆ ಇವೆ. ಈಗ ಅವುಗಳನ್ನು ಪ್ರತ್ಯೇಕಿಸುವುದು ಬೇಡ ಎಂದಿದ್ದಾರೆ. ನಟ ವರುಣ್ ಧವನ್ ಮತ್ತು ನಟಿ ಜಾಹ್ನವಿ ಕಪೂರ್ ಪ್ರತಿಕ್ರಿಯಿಸಿ, ‘ಬೀದಿನಾಯಿಗಳನ್ನು ಸೆರೆಯಲ್ಲಿ ಇಟ್ಟಂತಾಗುತ್ತದೆ. ಹಾಗಾಗುವುದು ಬೇಡ’ ಎಂದಿದ್ದಾರೆ.

ಮರುಪರಿಶೀಲನೆಗೆ ಸಿಜೆಐ ಸಮ್ಮತಿ

ನವದೆಹಲಿ: ದೆಹಲಿ ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್​ಸಿಆರ್) ಬೀದಿ ನಾಯಿಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಹೊರಡಿಸಿದ್ದ ಆದೇಶವನ್ನು ಮರುಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಬುಧವಾರ ಆಶ್ವಾಸನೆ ನೀಡಿದ್ದಾರೆ. ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣ ಹೆಚ್ಚುತ್ತಿರುವುದರಿಂದ ಬೀದಿ ನಾಯಿಗಳನ್ನು ಜನ ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಕೋರ್ಟ್ ಸೋಮವಾರ ಹೊರಡಿಸಿದ್ದ ಆದೇಶಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿವಾಸಿಗಳ ಕಲ್ಯಾಣ ಸಂಘಗಳು (ಆರ್​ಡಬ್ಲ್ಯುಎ) ಆದೇಶವನ್ನು ಸ್ವಾಗತಿಸಿದ್ದರೆ ಪ್ರಾಣಿ ದಯಾ ಸಂಘಗಳ ಕಾರ್ಯಕರ್ತರು ವಿರೋಧಿಸಿದ್ದರು. ಶ್ವಾನಗಳನ್ನು ಸ್ಥಳಾಂತರಿಸಲು ಪೌರ ಸಂಸ್ಥೆಗಳು ಹಣಕಾಸಿನ ಕೊರತೆ ಎದುರಿಸುತ್ತಿವೆ ಎಂಬುದು ಅವರ ವಾದವಾಗಿದೆ. ಬುಧವಾರ ಬೆಳಿಗ್ಗೆ ಸಿಜೆಐ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದಾಗ ‘ಈ ಬಗ್ಗೆ ನಾನು ಪರಿಶೀಲಿಸುತ್ತೇನೆ’ ಎಂದು ಹೇಳಿದರು.

ಸಮರೋಪಾದಿ ಲಸಿಕೆ ಅಭಿಯಾನ

ಸುಪ್ರೀಂ ಕೋರ್ಟ್ ಖಡಕ್ ಆದೇಶದ ಬಳಿಕ ಬೀದಿನಾಯಿಗಳ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಕೇಂದ್ರದ ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಸಚಿವಾಲಯಗಳು ಜಂಟಿಯಾಗಿ ಕ್ರಿಯಾಯೋಜನೆ ರೂಪಿಸಿದ್ದು, ಈ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಗಳವಾರ ಅಡ್ವೈಸರಿ ಜಾರಿ ಮಾಡಿದೆ. ದೇಶದಲ್ಲಿ ಒಟ್ಟು 1.53 ಕೋಟಿ ಬೀದಿನಾಯಿಗಳಿದ್ದು, ಇವುಗಳ ಪೈಕಿ ಶೇಕಡ 70ರಷ್ಟು ಬೀದಿನಾಯಿಗಳಿಗೆ ಒಂದು ವರ್ಷದೊಳಗೆ ಲಸಿಕೆ ನೀಡುವಂತೆ ಮತ್ತು ಸಂತಾನ ಶಕ್ತಿ ಹರಣ ಮಾಡುವಂತೆ ಗುರಿ ನಿಗದಿ ಪಡಿಸಿದೆ. ಇದಕ್ಕಾಗಿ, ಆಯಾ ರಾಜ್ಯಗಳು ಎನಿಮಲ್ ವೆಲ್​ಫೋರ್ ಬೋರ್ಡ್​ನ ಸಹಕಾರ ಪಡೆಯುವಂತೆ ಸೂಚಿಸಿದೆ.

ಬೀದಿನಾಯಿ ಕಡಿತ ಪ್ರಕರಣದ ಸಾವಿರಾರು ದೂರುಗಳು ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದೆ. ಅಲ್ಲದೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮತ್ತು ಲಸಿಕೆ ಪಡೆದ ಬೀದಿನಾಯಿಗಳ ಕಿವಿಗೆ ಗ್ರೀನ್ ಟ್ಯಾಗ್ ಅಳವಡಿಸುವಂತೆ, ಆ ಗ್ರೀನ್ ಟ್ಯಾಗ್​ನಲ್ಲಿ ಲಸಿಕೆ ಮತ್ತು ಚಿಕಿತ್ಸೆಯ ವಿವರ ನಮೂದಿಸುವಂತೆ ಹೇಳಿದೆ. ಬೀದಿನಾಯಿಗಳಿಗೆ ಲಸಿಕೆ ನೀಡುವುದು ಮತ್ತು ಅವುಗಳ ಜನ ಸಂಖ್ಯೆ ನಿಯಂತ್ರಣ ವಿಷಯದಲ್ಲಿ ದೇಶದಲ್ಲೇ ರಾಜಸ್ಥಾನ ಮತ್ತು ಉತ್ತರಪ್ರದೇಶ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿವೆ ಎಂದು ಕೇಂದ್ರ ತನ್ನ ಅಡ್ವೈಸರಿಯಲ್ಲಿ ಉಲ್ಲೇಖಿಸಿದೆ.

ಬೇರೆ ದೇಶಗಳಲ್ಲಿ ಹೇಗಿದೆ?

ಟರ್ಕಿ 40 ಲಕ್ಷ ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು 2024ರಲ್ಲಿ ನಿರ್ಧಾರ ಕೈಗೊಂಡಿತು. ಇದಕ್ಕೆ ವಿರೋಧ ವ್ಯಕ್ತವಾದರೂ, ನ್ಯಾಯಾಲಯ ಈ ಆದೇಶ ಬದಲಿಸುವುದಿಲ್ಲ ಎಂದಿತು.

ಬ್ರಿಟನ್​ನಲ್ಲಿ ಬೀದಿನಾಯಿ ಯೋಗಕ್ಷೇಮವನ್ನು ಅಲ್ಲಿನ ಸ್ಥಳೀಯ ಆಡಳಿತಗಳು ನೋಡಿಕೊಳ್ಳುತ್ತವೆ. 2023-24ರಲ್ಲಿ 36 ಸಾವಿರ ನಾಯಿಗಳಿಗೆ ಆಶ್ರಯ ಒದಗಿಸಲಾಗಿದೆ.

ಸಿಂಗಾಪುರದಲ್ಲಿ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ನೀಡಲಾಗುತ್ತದೆ ಮತ್ತು ಅವುಗಳನ್ನು ಸಂತಾನ ಶಕ್ತಿ ಹರಣಕ್ಕೆ ಒಳಪಡಿಸಲಾಗುತ್ತದೆ. ಈ ಜವಾಬ್ದಾರಿಯನ್ನು ಸರ್ಕಾರದ ಏಜೆನ್ಸಿ ನಿರ್ವಹಿಸುತ್ತದೆ.

ಅಮೆರಿಕದಲ್ಲೂ ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಅವುಗಳನ್ನು ಮತ್ತೆ ಬೀದಿಗೆ ಬಿಡುವುದಿಲ್ಲ. ಜಪಾನ್​ನಲ್ಲೂ ಇದೇ ಕ್ರಮವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net