ಭಾರತೀಯನೇ, ನಿನ್ನ ನಿದ್ದೆಗೆ ಎಂದೂ ಭಂಗವಿಲ್ಲ!

photo (3)
Published on

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

"The older I grow the more Hindu I am becoming' ಅರ್ಥಾತ್ ‘ನನ್ನ ವಯಸ್ಸು ಮಾಗಿದಂತೆಲ್ಲ ನಾನು ಹೆಚ್ಚು ಹೆಚ್ಚು ಹಿಂದುವಾಗುತ್ತಿದ್ದೇನೆ’ ಎಂದು ಉದ್ಗರಿಸಿದ್ದು ಸರ್ ವಿ.ಎಸ್. ನೈಪಾಲ್, ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟ ನೊಬೆಲ್ ಪ್ರಶಸ್ತಿ ಪುರಸ್ಕೃತ. ಇವರು ಟ್ರಿನಿಡಾಡ್​ದಲ್ಲಿ ಜನಿಸಿದ ಬ್ರಿಟಿಷ್ ನಾಗರಿಕ, ಮಹಾನ್ ಲೇಖಕ. ಅದ್ಭುತ ಸಾಹಿತ್ಯ ಪ್ರತಿಭೆಯುಳ್ಳವರು. ಅವರ ಈ ಮಾತಿನಿಂದ ಚೇಳು ಕುಟುಕಿದಂತೆ ಕುಣಿದದ್ದು ನಗರ ನಕ್ಸಲ್ ಆಗಿದ್ದ ಕರ್ನಾಟಕದ ಸ್ವಯಂಘೊಷಿತ ಬುದ್ಧಿಜೀವಿ ಒಬ್ಬರು. ಬಹಳಷ್ಟು ನೊಬೆಲ್ ವಿಜೇತರು ಮತ್ತು ಆ ಮಟ್ಟದ ವಿದ್ವಾಂಸರು ಪಾಶ್ಚಾತ್ಯ ಜಗತ್ತಿನಲ್ಲಿ ಅಲಾಸ್ಕಾದಿಂದ ಹಿಡಿದು ಸ್ಕಾಂಡಿನೇವಿಯನ್ ಪರ್ಯಾಯದ್ವೀಪದವರೆಗೆ ಸನಾತನ ಧರ್ಮವನ್ನು ಕುರಿತು ಇದೇ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ಕಾರಣ ಸ್ಪಷ್ಟ. ಸನಾತನಧರ್ಮದಲ್ಲಿರುವ ವಿಶ್ವವೈಶಾಲ್ಯ ಮತ್ತು ಪ್ರಶ್ನಾತೀತ ವೈಜ್ಞಾನಿಕ ದೃಷ್ಟಿಕೋನ. ಆಧುನಿಕ ವೈಜ್ಞಾನಿಕ ಚಿಂತನೆಗಳೂ ಸನಾತನ ಧರ್ಮದ ನಿಗೂಢ ಹಾಗೂ ಉನ್ನತ ಸತ್ಯಗಳ ಕೇವಲ ಹೊರಮೈಯಂತೆ ಕಾಣುತ್ತವೆ ಎಂದು ಪಾಶ್ಚಾತ್ಯ ಲೋಕದ ಮಹಾನ್ ವಿಜ್ಞಾನಿಗಳೇ ಹೇಳುವಾಗ ಇದನ್ನು ನಂಬದಿರುವುದು ಹೇಗೆ?

ಷಿಕಾಗೋ ಸಮ್ಮೇಳನದಲ್ಲಿ ತಮ್ಮ ಕೊನೆಯ ಭಾಷಣವನ್ನು ಪ್ರಸ್ತುತಪಡಿಸುತ್ತ ವಿಶ್ವಧರ್ಮ ಹೇಗಿರುತ್ತೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ- ‘ಈ ಜಗತ್ತಿನಲ್ಲಿ ವಿಶ್ವಧರ್ಮ ಎನ್ನಿಸಿಕೊಳ್ಳುವಂಥದೇನಾದರೂ ಇರಬೇಕಾದರೆ ಅದು ದೇಶಕಾಲಗಳ ಮಿತಿಯನ್ನು ಮೀರಿರಬೇಕು. ಅದು ತಾನೂ ಅನಂತವಾಗಿರಬೇಕಲ್ಲದೆ ಅನಂತನಾದ ಭಗವಂತನನ್ನು ಸಾರಬೇಕು. ಆ ಧರ್ಮಭಾಸ್ಕರನ ಬೆಳಕು ಕೃಷ್ಣನ ಅನುಯಾಯಿಗಳ ಮೇಲೆ, ಕ್ರಿಸ್ತನ ಅನುಯಾಯಿಗಳ ಮೇಲೆ, ಪಾಪಿಗಳ ಮೇಲೆ, ಪುಣ್ಯವಂತರ ಮೇಲೆ ಎಲ್ಲರ ಮೇಲೆಯೂ ಒಂದೇ ಸಮನಾಗಿ ಬೀಳಬೇಕು. ಅದು ವೈದಿಕವಾಗಲಿ, ಮಹಮ್ಮದೀಯವಾಗಲಿ, ಬೌದ್ಧವಾಗಲಿ ಅಥವಾ ಕ್ರೖೆಸ್ತವಾಗಲಿ ಆಗಿರದೆ, ಇವೆಲ್ಲದರ ಸಮಗ್ರೀಕರಣವಾಗಿರಬೇಕು. ಸುಧಾರಣೆ ಅಥವಾ ಅಭಿವೃದ್ಧಿಗೆ ಅಪಾರ ಅವಕಾಶವನ್ನು ಹೊಂದಿರಬೇಕು. ಅದು ಕಾಡುಜನರಿಂದ ಹಿಡಿದು, ಹೃದಯ-ಬುದ್ಧಿಗಳ ತುತ್ತತುದಿಗೇರಿ ಸಾಮಾನ್ಯ ಮಾನವೀಯತೆಯ ಮೇರೆಯನ್ನೇ ಮೀರಿರುವ ಮಹಾಮಾನವರವರೆಗೆ ಸರ್ವರಿಗೂ ಆಶ್ರಯವನ್ನೀಯುವಂಥದಾಗಿರಬೇಕು. ಅದು ಮಾನವನಿಗೆ ತನ್ನ ನೈಜ ದಿವ್ಯಸ್ವರೂಪವನ್ನು ಕಂಡುಕೊಳ್ಳುವಂತೆ ಮಾಡುವಲ್ಲಿ ಆ ಧರ್ಮದ ವಿಶಾಲ ಪರಿಧಿಯು ಕೇಂದ್ರೀಕೃತವಾಗಿರಬೇಕು.

ಅಂತಹ ಧರ್ಮವೊಂದನ್ನು ಕೊಡಿ; ಆಗ ಜಗತ್ತಿನ ರಾಷ್ಟ್ರಗಳೆಲ್ಲವೂ ಅದನ್ನು ಅನುಸರಿಸುವುವು’. ಇಲ್ಲಿ ಸ್ವಾಮಿ ವಿವೇಕಾನಂದರು ನೇರವಾಗಿ ಪ್ರಸ್ತಾಪಿಸದಿದ್ದರೂ ಅವರು ಸ್ಪಷ್ಟವಾಗಿ ಸೂಚಿಸುತ್ತಿರುವುದು ಸನಾತನ ಧರ್ಮವನ್ನೇ. ಇಷ್ಟೇ ಸ್ಪಷ್ಟವಾಗಿ ಕಾಣುವುದೂ ಬೇರೆಲ್ಲ ಧರ್ಮಗಳು ವಿವೇಕಾನಂದರು ಪ್ರತಿಪಾದಿಸಿದ ವಿಶ್ವಧರ್ಮದ ಒಂದು ಮುಖವನ್ನಷ್ಟೇ ಒಳಗೊಂಡಿದೆ. ಸಮಗ್ರವನ್ನಲ್ಲ ಎಂದು. ಇದೇ ಪೂರ್ಣಸತ್ಯಕ್ಕೂ ಅದರ ಕೇವಲ ಒಂದು ಮುಖಕ್ಕೂ (ಆಂಶಿಕ ಸತ್ಯಕ್ಕೂ ) ಇರುವ ವ್ಯತ್ಯಾಸ. ಅಷ್ಟೇ ಅಲ್ಲ ಈ ಸನಾತನಸತ್ಯ (ತತ್ವ) ಆಧುನಿಕ ವಿಜ್ಞಾನದ ಪ್ರಮುಖ ಮೆಟ್ಟಿಲುಗಳನ್ನೆಲ್ಲ ಒಳಗೊಂಡಿದೆ. ಈವತ್ತಿನ conservation laws, ಶೂನ್ಯದ ಕಲ್ಪನೆ, ದಶಮಾಂಶ ಪದ್ಧತಿಯಿಂದ ಹಿಡಿದು ಕಂಪ್ಯೂಟರ್​ನಲ್ಲಿ ಬಳಸುವ base 2 system, ನಾಲ್ಕು ಮೂಲಭೂತ ಬಲಗಳು, ವಿವಿಧ ರೀತಿಯ ಆಕರ್ಷಣೆ ವಿಕರ್ಷಣೆಗಳು. ಅಷ್ಟೇ ಏಕೆ? ಕಾಲ ಮತ್ತು ದೇಶ ಮತ್ತು ಅವುಗಳ ಸಾಪೇಕ್ಷತೆ, ಮುಂದುವರಿದು ‘ದೃಶ್ಯ’ ಪ್ರಪಂಚದ ‘ದೃಕ್’ ಮೇಲಿನ ಅವಲಂಬನೆ ಇತ್ಯಾದಿಗಳ ಉದ್ದನೆಯ ಪಟ್ಟಿಯೇ ಇದೆ.

ಈ ಚಿಂತನೆಗಳ ಮೂಲಸ್ರೋತ ವೇದಗಳು. ಆ ಕಾರಣಕ್ಕಾಗಿಯೇ ಅವೇ ಜಗತ್ತಿಗೆ ಭಾರತದ ಅತ್ಯಮೂಲ್ಯ ಕೊಡುಗೆ. ಈ ಸಾಧನೆಯನ್ನು Prof. Max Muller Astounding ಎಂದು ಶ್ಲಾಘಿಸುತ್ತಾರೆ. ಆದ್ದರಿಂದಲೇ ವೇದಗಳು ಭಾರತದ ಅತ್ಯಮೂಲ್ಯ ಸಂಪತ್ತು. ಮುದ್ರಣಯಂತ್ರವಿಲ್ಲದಿದ್ದ ಕಾಲದಲ್ಲಿ ಈ ವೇದಗಳ ಪರಂಪರೆ ಮುಂದುವರಿಯಲು ಅವುಗಳನ್ನು ಕಂಠಪಾಠ ಮಾಡಿ ಅವುಗಳ ಶುದ್ಧರೂಪಕ್ಕೆ ಧಕ್ಕೆಯಾಗದಂತೆ ಕಾಪಾಡಿದ ಹಿಂದು ಜನಾಂಗಕ್ಕೆ ಇಡೀ ಮನುಕುಲವೇ ಶಾಶ್ವತವಾಗಿ ಋಣಿಯಾಗಿದೆ ಎಂದು ಇಂಗ್ಲೆಂಡಿನ ಒಂದು ಚಿಂತಕ ವರ್ಗ ಸ್ಪಷ್ಟ ಮಾತುಗಳಲ್ಲಿ ಉಲ್ಲೇಖಿಸುತ್ತದೆ. ಭಾರತ ಮತ್ತು ಅದರ ಧರ್ಮದ ಪರಿಚಯ ಪಾಶ್ಚಾತ್ಯ ರಾಷ್ಟ್ರಗಳಿಗೆ ದಿನೇದಿನೇ ಹೆಚ್ಚಿದಂತೆಲ್ಲ ಒಂದು ಕಡೆ ಅಸಹನೆ, ಅಸೂಯೆಜನ್ಯ ತಳಮಳ ಇನ್ನೊಂದೆಡೆ ಅದರ ಬಗ್ಗೆ ಹೆಚ್ಚಿನ ಕುತೂಹಲ ಜಾಗೃತಗೊಳ್ಳುತ್ತಿದೆ. ಕುತೂಹಲ ಹೆಚ್ಚು ಹೆಚ್ಚು ಅಧ್ಯಯನ, ಪ್ರೇಮ, ಗೌರವಗಳೆಡೆಗೆ ಎಡೆಮಾಡಿ ಇಂದು ಇಟಲಿ, ರಷ್ಯಾ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ತಂಡೋಪತಂಡವಾಗಿ ಸನಾತನ ಧರ್ಮದೆಡೆಗೆ ಧಾವಿಸುತ್ತಿದ್ದಾರೆ ಮತ್ತು ಅಪ್ಪಿಕೊಳ್ಳುತ್ತಿದ್ದಾರೆ ಸಹ.

ದಕ್ಷಿಣ ಅಮೆರಿಕ, ಆಫ್ರಿಕನ್ ರಾಷ್ಟ್ರಗಳೂ ಯುರೋಪಿನೊಡನೆ ಸ್ಪರ್ಧೆಗಿಳಿದಂತಿವೆ. 2017ರಲ್ಲಿ Prof. Max Muller Astounding (ಸಂಸ್ಥಾಪಕ ಡಾ.ಟಿಮೋತಿ ಕಿರ್ನನ್)ನಲ್ಲಿ ಕಜ.ಈ ಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಐವತ್ತೈದು. ಈ ಐವತೆôದು ಜನರೂ ಬೇರೆ ಬೇರೆ ರಾಷ್ಟ್ರದವರೇ. ಭಾರತೀಯರಲ್ಲ. ಈ ಸಂಸ್ಥೆಗೆ ಅಂದು ನಾನು ಆಹ್ವಾನಿಸಲ್ಪಟ್ಟಿದ್ದು ಅವರೆಲ್ಲರೊಡನೆ ಸಂವಾದ ಮತ್ತು ಸಂದರ್ಶನದಲ್ಲಿ ಪಾಲ್ಗೊಂಡಿದ್ದೆ. ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನಕ್ಕಾಗಿ ಇರುವ ಬೇಡಿಕೆಯನ್ನು ಪೂರ್ಣಪ್ರಮಾಣದಲ್ಲಿ ಈಡೇರಿಸಲಾಗದೆ ಡಿಗ್ರಿ ಮಟ್ಟದಲ್ಲೂ ಸಂಸ್ಕೃತವನ್ನು ಸೇರ್ಪಡೆಗೊಳಿಸಬೇಕಾದ ಅನಿವಾರ್ಯತೆ ತಲೆದೋರಿದೆ. ಕ್ರೊವೇಷಿಯಾ, ಹಂಗೇರಿ ಮೊದಲಾದ ಯುರೋಪಿಯನ್ ರಾಷ್ಟ್ರಗಳಲ್ಲಿ ಮಹಾಶಿವರಾತ್ರಿಯಂದು ಜಾಗರಣೆ ಮತ್ತು ರುದ್ರಾಭಿಷೇಕ ಇಂದು ಸಾಮಾನ್ಯ ದೃಶ್ಯ. ಸನಾತನ ಸಂಸ್ಕೃತಿಯ ಈ ಅಸಾಮಾನ್ಯ ವಿಸ್ತರಣೆ ಸಹ್ಯವಾಗದಿರುವುದು ಭಾರತದಲ್ಲಿನ ಸ್ವಘೊಷಿತ ಬುದ್ಧಿಜೀವಿ ಮತ್ತು ಅನ್ಯಮತೀಯ ಧರ್ವಂಧರಿಗೆ ಮಾತ್ರ. ‘ಸೆಕ್ಯುಲರ್’ ಪದವೇ ಇವರ ಗುರಾಣಿ.

ಇದರ ಪರಿಣಾಮವೇ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಹಿಂದು ವಿರೋಧಿ ಅಲೆ ಆಗಾಗ್ಗೆ ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಏಳುವುದು. ಆಗೆಲ್ಲ ಅವರು ಅಪಪ್ರಚಾರ ಮಾಡುವುದು ‘ಹಿಂದೂ ಧರ್ಮ ಪುರೋಗಾಮಿ (?); ಪ್ರಗತಿಗಾಮಿ ಅಲ್ಲ. ಇಲ್ಲಿ ಜಾತೀಯತೆ, ಅಸ್ಪೃಶ್ಯತೆ ಮತ್ತು ಸ್ತ್ರೀಯರ ಬಗ್ಗೆ ಕೀಳು ಭಾವನೆ ಇದೆ’ ಎಂದು ಇನ್ನೂರು ವರ್ಷಗಳ ಹಿಂದೆ ಕ್ರಿಶ್ಚಿಯನ್ ಪಾದ್ರಿಗಳು ಊದುತ್ತಿದ್ದ ಬಾಜಾಭಜಂತ್ರಿಗಳ ನಾದವನ್ನೇ. ‘ಜಾತೀಯತೆ ಕೇಳವರ್ಗಗಳನ್ನು ಶೋಷಿಸುತ್ತದೆ. ನಾವು ಅವರಿಗೆ ಸಹಾಯ ಮಾಡಬೇಕಾಗಿದೆ. ವಸತಿ, ಶಿಕ್ಷಣ ಇತ್ಯಾದಿಗಳಿಗಾಗಿ’ ಎಂದು ಹೇರಳವಾಗಿ ದತ್ತಿದಾನಗಳನ್ನು ಪಡೆಯುತ್ತಾರೆ ಅಲ್ಲಿಯ ಮತಪ್ರಚಾರಕರು. ಆಗೆಲ್ಲ ಅವರು ತಮಗೆ ಆಧಾರವಾಗಿ ಬಳಸುವುದು ಭಾರತದ ಕೆಲ ಪಟ್ಟಭದ್ರಹಿತಾಸಕ್ತಿಗಳು ಪಾಲ್ಗೊಳ್ಳುವ ಚರ್ಚೆ, ಅವರೇ ಬರೆದ ಪುಸ್ತಕಗಳು, ಕೆಲ ಸಿನಿಮಾಗಳು ಇತ್ಯಾದಿಗಳನ್ನು. ಆಶ್ಚರ್ಯಕರ ಸಂಗತಿಯೆಂದರೆ ಇವರಲ್ಲಿ ಬಹಳಷ್ಟು ಜನ ಮತಾಂತರಗೊಂಡವರು ಇಲ್ಲವೆ ಎಡಪಂಥೀಯರು.

ಒಟ್ಟಿನಲ್ಲಿ ಅನ್ಯಮತೀಯರು ಇಲ್ಲವೆ ಅನ್ಯಮತಗಳೊಡನೆ ಸಹಾನುಭೂತಿಯುಳ್ಳವರು ಅಥವಾ ಭಾರತದ ಮೂಲಧರ್ಮದ ದ್ವೇಷಿಗಳು. ಒಂದು ರೀತಿಯಲ್ಲಿ ವಿವೇಕಾನಂದರ ಮಾತಿನಲ್ಲೇ ಹೇಳಬೇಕೆಂದರೆ, ‘ಭಾರತದ ಎಲ್ಲ ಸಮಸ್ಯೆಗಳಿಗೂ ಅದರ ಧರ್ಮವೇ ಕಾರಣ ಎಂದು ತಾವೂ ನಂಬಿ ಮತ್ತೊಬ್ಬರನ್ನೂ ನಂಬಿಸುವ ಕಾರ್ಯಕ್ಕೆ ವ್ರತಬದ್ಧರಾದ ಮೂಢಮತಿಗಳು’. ಬಡವರು ಮತ್ತು ಸ್ತ್ರೀಯರನ್ನು ದಾಳವಾಗಿ ಉಪಯೋಗಿಸಿಕೊಂಡರೆ ಸಾರ್ವಜನಿಕ ಸಹಾನುಭೂತಿಯನ್ನು ಸುಲಭವಾಗಿ ಗಳಿಸಿಬಿಡಬಹುದು ಎಂದು ಚೆನ್ನಾಗಿಯೇ ಬಲ್ಲ ಇವರು ‘ಸ್ತ್ರೀಶೋಷಣೆ’ಯನ್ನು ಪರಿಣಾಮಕಾರಿ ದಾಳವನ್ನಾಗಿ ರೂಪಿಸಿದ್ದು ಶಬರಿಮಲೆ ದೇವಾಲಯದ ವಿಷಯದಲ್ಲಿ. ಅದರ ಮುಂದುವರಿದ ಭಾಗವೇ ಈಗಿನ ಧರ್ಮಸ್ಥಳದ ಸುತ್ತಲಿನ ಪ್ರಸಂಗ. ದುರ್ಬಲ ವರ್ಗಗಳು, ಸ್ತ್ರೀವರ್ಗದ ಬಗ್ಗೆ ಸ್ವಾಮಿ ವಿವೇಕಾನಂದ, ಶ್ರೀರಾಮಕೃಷ್ಣರು ಮತ್ತು ಶ್ರೀಶಾರದಾ ಮಾತೆಯ ಹೃದಯ ಮಿಡಿದಷ್ಟು ಇವರ ಹೃದಯಗಳು ಮಿಡಿಯಬಲ್ಲವೇ? ಸನಾತನ ಹಿಂದು ಧರ್ಮ ಅವರಿಗೆ ಎಂದಾದರೂ ದ್ರೋಹ ಬಗೆದಿದೆಯೇ? ಅವರ ಧರ್ಮವನ್ನು ಅನುಸರಿಸುತ್ತಿರುವ ದೇಶಗಳಲ್ಲಿ ವಿಶೇಷವಾಗಿ ಆಫ್ರಿಕನ್ ರಾಷ್ಟ್ರಗಳಲ್ಲಿ ಬಡತನ, ಅನಕ್ಷರತೆ ಅನಾರೋಗ್ಯಗಳ ಲೇಶವು ಇಲ್ಲದೆ ಸ್ತ್ರೀಯರು ದೇವತೆಗಳಂತೆ ಜೀವಿಸುತ್ತಿರುವರೆ?

ಅವುಗಳನ್ನೆಲ್ಲ ಉಪಾಯವಾಗಿ ಮುಚ್ಚಿಟ್ಟು ಅದಕ್ಕೆ ಬೇರೆ ಕಾರಣಗಳನ್ನು ಕೊಟ್ಟು ‘ಭಾರತದ ಎಲ್ಲ ಸಮಸ್ಯೆಗಳಿಗೆ ಹಿಂದು ಧರ್ಮವೇ ಏಕಮೇವ ಕಾರಣ’ ಎಂಬುದನ್ನು ಜಗತ್ತಿನ ಮುಂದೆ ಪ್ರತಿಬಿಂಬಿಸುವ ಕೆಲಸದಲ್ಲಿ ಸಾಕಷ್ಟು ಯಶಸ್ಸನ್ನೂ ಸಾಧಿಸಿವೆ ಈ ಪಟ್ಟಭದ್ರ ಹಿತಾಸಕ್ತಿಗಳು. ಅಲ್ಲಿಯ ಧರ್ಮ, ರಾಜಕಾರಣ, ಮಾಧ್ಯಮ, ಆಕ್ಸ್​ಫರ್ಡ್ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಚರ್ಚಾಕೂಟ ಇವೆಲ್ಲವೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಭಾರತದ ಶಕ್ತಿ ಅದರ ಧರ್ಮ, ಅದರಲ್ಲೂ ವೇದ ಪ್ರಣೀತ ಧರ್ಮ ಎನ್ನುವುದನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡ ಈ ಬುದ್ಧಿಮತ್ತೆ ತನ್ನ ಮೊದಲ ಪ್ರಹಾರ ನೀಡಿದ್ದು ‘ಆರ್ಯರು ಹೊರಗಿನವರು’ ಎಂದು ಅದರ ನೇರ ಪರಿಣಾಮ ಆರ್ಯ, ದ್ರಾವಿಡ ಕಂದಕ. ರಾಮ, ಕೃಷ್ಣ, ಶಂಕರಾಚಾರ್ಯರ ಕುರಿತು ಅವಹೇಳನೆಗಳು.

ಕಾರಣವೇ ಇಲ್ಲದೆ ಕಂಚಿ ಶಂಕರಚಾರ್ಯರ ಬಂಧನ ಮತ್ತು ಅದಕ್ಕೆ ಇನ್ನಿಲ್ಲದ ರೀತಿಯ ಪ್ರಚಾರ ಮತ್ತು ಪ್ರಚಾರವಿಲ್ಲದ ಬಿಡುಗಡೆ, ದುರ್ಗೆಯ ಅವಹೇಳನ, ಜಾನಪದ, ಗ್ರಾಮೀಣ ಹಬ್ಬಗಳ ಅವಹೇಳನ, ಉತ್ಸವಗಳಿಗೆ ನಿರ್ಬಂಧನ. ಪುಣ್ಯಕ್ಷೇತ್ರ ಮತ್ತು ಅವುಗಳ ಮುಖ್ಯಸ್ಥರ ಮೇಲೆ ಗಂಭೀರ ಆರೋಪಗಳ ಮಳೆ ಸುರಿಸಿ ಅವರ ಬೆಂಬಲಿಗರು ಹಿಂದೆ ಸರಿಯುವಂತೆ ಮಾಡುವುದು, ಪಕ್ಕದ ರಾಷ್ಟ್ರವೊಂದರ ಮೂಲಕ ಭಯೋತ್ಪಾದನೆಯನ್ನು ನಡೆಸುವುದು, ಪಕ್ಕದಲ್ಲಿ ಕ್ರಿಶ್ಚಿಯನ್ ರಾಷ್ಟ್ರವೊಂದನ್ನು ನಿರ್ವಿುಸಲು ಯೋಜನೆ ಹಾಕುವುದು ಈ ವಿಷಯಗಳನ್ನೆಲ್ಲ ಗಂಭೀರವಾಗಿ ಯೋಚಿಸಿ ಮಹಾನ್ ಚಿಂತಕ ರಾಜೀವ್ ಮಲ್ಹೋತ್ರ ‘ಈಜಿಡಜಿಛಜ್ಞಿಜ ಐಛಜಿಚ’ ಎಂಬ ಪುಸ್ತಕವನ್ನೇ ಬರೆದಿದ್ದಾರೆ. ಆಳ, ವಿಸ್ತೃತ ಮತ್ತು ದೀರ್ಘಕಾಲದ ಅಧ್ಯಯನ ಮತ್ತು ಸಂಶೋಧನೆಯ ಫಲ ಈ ಪುಸ್ತಕ ‘ಭಾರತ ಭಂಜನ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಕನ್ನಡದಲ್ಲೂ ಲಭ್ಯವಿದೆ.

ಭಾರತದ ಒಳಗಿರುವ ಧರ್ಮಬಾಹಿರ, ಅನ್ಯಧರ್ವಿುಯ, ಅತೃಪ್ತ, ವಿಭಜನಕಾರಿ ರಾಷ್ಟ್ರದ್ರೋಹಿ ಶಕ್ತಿಗಳನ್ನು ಉಪಯೋಗಿಸಿಕೊಂಡು ದೇಶವಾಸಿಗಳಿಗೆ ತಮ್ಮ ಧರ್ಮ, ದೇಶಗಳ ಬಗೆಗಿನ ಅಭಿಮಾನವನ್ನು ಸಂಪೂರ್ಣವಾಗಿ ನಿಮೂಲಗೊಳಿಸುವುದು ಹೇಗೆ? ಭಾರತ ಮತ್ತು ಸನಾತನ ಧರ್ಮದೊಂದಿಗಿನ ಅವರ ಭಾವನಾತ್ಮಕ ಹಾಗೂ ಆಳವಾದ ಅನುಭಂದಗಳನ್ನು ಸಡಿಲಿಸುವುದು ಹೇಗೆ ಎನ್ನುವ ವಿಷಯವನ್ನೇ ಕೇಂದ್ರವಾಗಿಟ್ಟುಕೊಂಡ ವ್ಯವಸ್ಥಿತ ಹುನ್ನಾರಗಳು ದೇಶದ ಅಲ್ಲಲ್ಲಿ ತಮ್ಮ ವೇದಿಕೆಗಳನ್ನು ನಿರ್ವಿುಸಿಕೊಂಡಿವೆ. ತಮಿಳುನಾಡಿಗೆ ಈ ವಿಷಯದಲ್ಲಿ ಅಗ್ರಸ್ಥಾನ. ಆದ್ದರಿಂದಲೇ ಒಬ್ಬ ಸಚಿವ, ಒಬ್ಬ ಸಿನಿಮಾ ನಟ, ಒಬ್ಬ ಸಂಸದ ಆಗಾಗ್ಗೆ ಹುನ್ನಾರಗಳನ್ನು ಹಣೆಯುತ್ತಲೇ ಇರುತ್ತಾರೆ. ಅಲ್ಲಿಯ ಸರ್ಕಾರವಂತೂ ಇಂತಹ ಹುನ್ನಾರಗಳಿಗೆ ಎಲ್ಲ ರೀತಿಯ ಬೆಂಬಲವನ್ನು ಧಾರಾಳವಾಗಿ ಕೊಡುತ್ತಲೇ ಬಂದಿದೆ. ಪ್ರಜೆಗಳಿಗೆ ದೇಶ ಮತ್ತು ಧರ್ಮದೊಂದಿಗಿನ ಭಾವನಾತ್ಮಕ ಬೆಸುಗೆ ಮುರಿದುಬಿಟ್ಟರೆ ಮತಾಂತರ ಬಹಳ ಸುಲಭ. ಅದೊಂದಾಗಿ ಬಿಟ್ಟರೆ ರಾಷ್ಟ್ರವನ್ನು ಛಿದ್ರಗೊಳಿಸುವುದು ಕಷ್ಟವೇನಲ್ಲ ಎಂಬುದನ್ನು ಭಾರತದ ಇತಿಹಾಸ ಸ್ಪಷ್ಟವಾಗಿಯೇ ತೋರಿಸಿಕೊಟ್ಟಿದೆ. ಭಾರತೀಯನ ಸರ್ವಸ್ವವೂ ಅಡಗಿರುವುದು ಅವನ ಧರ್ಮದಲ್ಲಿ. ಅದರ ರಕ್ಷಣೆಗಾಗಿ ದೇಶ. ಸ್ವಾಮಿ ವಿವೇಕಾನಂದರು ಇದನ್ನು ಸ್ಪಷ್ಟ ಮಾತುಗಳಲ್ಲಿ ಸಾರಿದ್ದಾರೆ. ‘ಮೊದಲು ಸತ್ಯ ; ನಂತರ ಸಮಾಜ’ ಎಂದು ಸ್ಪಷ್ಟವಾಗಿಯೇ ಘೊಷಿಸಿದ್ದಾರೆ ಅವರು. ಆದ್ದರಿಂದಲೇ ಸೋದರಿ ನಿವೇದಿತೆ, ‘ವಿವೇಕಾನಂದರು ಮೂರು ವಿಷಯಗಳಲ್ಲಿ ಬಹಳ ಸೂಕ್ಷ್ಮ ಸಂವೇದಿಯಾಗಿದ್ದರು. ಅವೇ ತಮ್ಮ ಧರ್ಮ, ತಮ್ಮ ದೇಶ ಮತ್ತು ತಮ್ಮ ಗುರು’ ಎಂದು ಹೇಳುತ್ತಾಳೆ.

‘ವಿವೇಕಾನಂದರ ಅಧ್ಯಯನವಿಲ್ಲದಿದ್ದಲ್ಲಿ ಭಾರತ ಸಾಯುತ್ತದೆ’ ಎಂದು ಪಾಶ್ಚಾತ್ಯ ಚಿಂತಕನೊಬ್ಬ ಎಚ್ಚರಿಸಿದ್ದಾನೆ. "India can not neglect him. It can do so only at its peril' ಇದೇ ಆ ಮಾತು. ಭಾರತೀಯರಿಗೆ ಇದೆಲ್ಲ ಹೇಗೆ ತಿಳಿಯುತ್ತೊ ಆ ದೇವನೇ ಬಲ್ಲ. ಅವರ ದೀರ್ಘನಿದ್ದೆಗೆ ಭಂಗವೇ ಇಲ್ಲ. ಇದು ಮುಗ್ಧತೆಯೋ ಅಜ್ಞಾನವೋ ತಿಳಿಯದು. ಅವನಿಗಾದ ಅನ್ಯಾಯಗಳನ್ನು ಕಂಡು ಕಣ್ಣೀರಿಟ್ಟವರು ಪ್ರಪಂಚದ ಇತಿಹಾಸವನ್ನೆಲ್ಲ ಬರೆದಿಟ್ಟ ಅಮೆರಿಕದ ವಿಲ್ ಡ್ಯೂರಂಟ್. ಅದೇ ರೀತಿ ಸುಪ್ರಸಿದ್ಧ ಜರ್ಮನಿಯ ಚಿಂತಕ ಫ್ರೆಡ್ರಿಕ್ ಹೆಗೆಲ್. ಮುಂದೆ ತನ್ನ ಜೀವನದಲ್ಲಿ ವಾಮದೇವ ಶಾಸ್ತ್ರಿ ಎಂದು ಸ್ವಯಂ ಪ್ರೇರಣೆಯಿಂದಲೇ ಪರಿವರ್ತಿತನಾದ, ಕಾಳಿಯ ಮಹಾ ಆರಾಧಕ ಡೇವಿಡ್ ಫ್ರಾಲಿ ಭಾರತೀಯರನ್ನು ಎಚ್ಚರಿಸುವುದಕ್ಕಾಗಿ ‘ಏಟಡಿ ಐ ಚಿಛ್ಚಿಚಞಛಿ ಚ ಏಜ್ಞಿಛ್ಠ’ ಮತ್ತು ‘ಅಜಿಠಛಿ ಅj್ಞ’ ಎಂಬ ಪುಸ್ತಕಗಳನ್ನೇ ಬರೆದರು. ಸ್ವಾಮಿ ವಿವೇಕಾನಂದರಂತೂ ಭಾರತೀಯರ ತಮಸ್ಸನ್ನು ಕಂಡು ತಡೆಯಲಾಗದೆ ಪ್ರತಿದಿನವೆಂಬಂತೆ ಕಣ್ಣಿರು ಹಾಕಿದರು. ಈ ಭಾರತೀಯರು ಸಂವೇದಿಗಳೋ ಜಡವಸ್ತುಗಳೋ ಯಾರಿಗೂ ತಿಳಿಯುತ್ತಿಲ್ಲ. ಆದರೆ ಇದಂತೂ ಒಳ್ಳೆಯ ಲಕ್ಷಣವಲ್ಲ. ವಿನಾಶಕಾರಿಯೆಂದರೆ ತಪ್ಪೇನಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net