

ನಿಮ್ಮ ಸಹೋದರರು ರಿಜಿಸ್ಟರ್ ವಿಭಾಗಪತ್ರದ ಮೂಲಕ ಭಾಗ ಹಂಚಿಕೆ ಮಾಡಿಕೊಂಡಿಲ್ಲದೇ ಇರುವುದರಿಂದ ನೀವು ಹೆದರಬೇಕಾಗಿಲ್ಲ. ಖಾತೆ ಅವರ ಹೆಸರಿಗೆ ಬಂದ ಮಾತ್ರಕ್ಕೆ ನಿಮ್ಮ ಹಕ್ಕು ಕಳೆದು ಹೋಗುವುದಿಲ್ಲ. ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ನಿಮ್ಮೆಲ್ಲರಿಗೂ ಸಮಭಾಗ ಇದ್ದೇ ಇರುತ್ತದೆ. ಅನುಕೂಲಕ್ಕಾಗಿ ಮಾತ್ರ ನಿಮ್ಮ ಸಹೋದರರು ಅನುಭವಿಸುತ್ತಿದ್ದಾರೆ, ನಾವೂ ಒಟ್ಟು ಕುಟುಂಬದ ಸದಸ್ಯರೇ ಎಂದು ಎಲ್ಲ ಆಸ್ತಿಗಳನ್ನೂ ಸೇರಿಸಿ ವಿಭಾಗಕ್ಕೆ ದಾವೆ ಸಲ್ಲಿಸಬಹುದು. ಪ್ರಕರಣದ ನೋಟಿಸು ನಿಮ್ಮ ಸಹೋದರರಿಗೆ ಜಾರಿ ಆದ ಮೇಲೆ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ, ಕೂತು ಮಾತಾಡಿ ಎಲ್ಲರೂ ಒಪ್ಪಿಗೆಗೆ ಬಂದರೆ ನಿಮ್ಮ ರಾಜಿಗೆ ಅನುಗುಣವಾಗಿ ಆಸ್ತಿ ಹಂಚಿಕೊಳ್ಳಿ. ನಿಮ್ಮ ಸಹೋದರರು ಒಪ್ಪದಿದ್ದರೆ ಧೈರ್ಯವಾಗಿ ಕೇಸು ನಡೆಸಿ. ವಿಭಾಗದ ಕೇಸಿಗೆ ಕೋರ್ಟು ಶುಲ್ಕ ಹೆಚ್ಚು ಇರುವುದಿಲ್ಲ. ನೀವು ನಿಮ್ಮ ತಾಲ್ಲೂಕಿನ ಉಚಿತ ಕಾನೂನು ಸೇವಾ ಕೇಂದ್ರಕ್ಕೆ ಅರ್ಜಿ ಕೊಟ್ಟರೆ ಯಾವ ಖರ್ಚೂ ಇಲ್ಲದೇ ಕಾನೂನು ಸಹಾಯವನ್ನು ಕೊಡುತ್ತಾರೆ. ವಕೀಲರನ್ನೂ ಅವರೇ ವ್ಯವಸ್ಥೆ ಮಾಡಿಸಿಕೊಡುತ್ತಾರೆ.
ನಿಮ್ಮ ತಂದೆ ನಿಮ್ಮ ತಾಯಿಗೆ ವಿಲ್ ಮಾಡಿದ ಮೇಲೆ ಅದು ನಿಮ್ಮ ತಾಯಿಯ ಆಸ್ತಿಯೇ ಆಗುತ್ತದೆ, ನಿಮ್ಮ ತಾಯಿ ತೀರಿಕೊಂಡ ನಂತರ ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ ನಿಮ್ಮ ತಾಯಿಯ ಎಲ್ಲ ಮಕ್ಕಳಿಗೂ ಸಮಪಾಲು ಬರುತ್ತದೆ. ನಿಮ್ಮ ತೀರಿಕೊಂಡ ಅಣ್ಣನ ಐದನೇ ಒಂದು ಭಾಗ ಅವರ ವಿಧವೆ ಪತ್ನಿಗೆ ಸೇರುತ್ತದೆ.
ನೀವು ಧೈರ್ಯವಾಗಿ ವಿಭಾಗದ ದಾವೆ ಹಾಕಬಹುದು. ನಿಮ್ಮ ಸಹೋದರರು ಮಾಡಿಕೊಂಡಿರುವ ವಿಭಾಗ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹಕ್ಕು ಘೊಷಣೆಯನ್ನೂ ಕೇಳಬಹುದು. ಲಿಮಿಟೇಷನ್ ಕಾಯ್ದೆಯ ಮತ್ತು ಔಸ್ಟರ್ ಎನ್ನುವ ಕಾನೂನಿನ ಅಂಶದ ತಡೆ ಬಾರದಂತೆ ವಕೀಲರ ಹತ್ತಿರ ಹೋಗಿ ಸರಿಯಾದ ಸಲಹೆ ಪಡೆದು ದಾವೆ ಸಲ್ಲಿಸಿ.