ಇತ್ತ ಭಾರತ ಪುಲಿ, ಅತ್ತ ಅಮೆರಿಕಾ ದರಿ

untitled-design-3-68890ac51305e
Published on
ಶಬ್ದದ ವೇಗಕ್ಕಿಂತ ಏಳೆಂಟು ಪಟ್ಟು ವೇಗವಾಗಿ ಚಲಿಸಬಲ್ಲ ಹೈಪರ್​ಸಾನಿಕ್ ಮಿಸೈಲ್ ಅನ್ನು ಚೀನಾ ಮೂರು ವರ್ಷಗಳ ಹಿಂದೆಯೇ ಪರೀಕ್ಷಿಸಿ ಅಮೆರಿಕಾವನ್ನು ಬೆಚ್ಚಿಸಿತು. ಅಂತಹ ಕ್ಷಿಪಣಿಯನ್ನು ನಿರ್ವಿುಸಲು ಅಮೆರಿಕಾಗೆ ಇನ್ನೂ ಸಾಧ್ಯವಾಗಿಲ್ಲ. ಹಾಗಿರುವಾಗ ಶಬ್ದದ ವೇಗಕ್ಕಿಂತಲೂ ಇಪ್ಪತ್ತು ಪಟ್ಟು ವೇಗವಾಗಿ ಚಲಿಸಬಲ್ಲ ಕ್ಷಿಪಣಿಯ ನಿರ್ವಣದಲ್ಲಿ ಚೀನಾ ಈಗ ತೊಡಗಿದೆಯೆಂಬ ಸುದ್ದಿ!

ಅದು ಸಾಧ್ಯವಾದರೆ ಗಂಟೆಗೆ 13,000 ಕಿಲೋಮೀಟರ್​ಗಳ ಪ್ರಚಂಡ ವೇಗದಲ್ಲಿ ಚಲಿಸುವ ಆ ಪ್ರಳಯಾಂತಕ ಅಸ್ತ್ರ ಚೀನಿ ನೆಲೆಯಿಂದ ಹೊರಟು ಅಮೆರಿಕಾದ ಮೇಲೆ ಎರಗಲು ಮುಕ್ಕಾಲು ಗಂಟೆ ಸಾಕಾಗಬಹುದು. ಇಷ್ಟು ವೇಗದ ಕ್ಷಿಪಣಿಯ ನಿರ್ಮಾಣ ತಾತ್ವಿಕವಾಗಿ ಸಾಧ್ಯವೆನಿಸಬಹುದು. ಆದರೆ ಪ್ರಾಯೋಗಿಕವಾಗಿಯೂ ಸಾಧ್ಯವೇ? ಸಾಧ್ಯವಾಗುವುದಾದರೆ ಅದನ್ನು ಚೀನಾ ಸಾಧಿಸಬಲ್ಲುದೇ ಎಂಬ ಪ್ರಶ್ನೆಗಳೂ ಎದ್ದಿವೆ. ಇದಕ್ಕೆ ಕಾರಣ ತಾನು ಇದುವರೆಗೆ ಏನೇನು ಸಾಧಿಸಿದ್ದೇನೆ ಎಂದು ಚೀನಾ ಹೇಳಿಕೊಳ್ಳುವುದೆಲ್ಲಾ ನಿಜವಿರಲಾರದು ಎಂಬ ಅನುಮಾನಗಳೂ ಜಾಗತಿಕವಾಗಿ ದಟ್ಟವಾಗಿ ಏಳುತ್ತಿರುವುದರಿಂದ.

ಚೀನಾ ಹೇಳಿಕೊಳ್ಳುವುದೆಲ್ಲವೂ ಬರೀ ಬುರುಡೆ, ಅದರಲ್ಲಿ ಸತ್ಯದ ಅಂಶ ಕಡಿಮೆ ಎಂಬ ಅಭಿಪ್ರಾಯವೂ ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಆದಾಗ್ಯೂ ಚೀನಾದ ಹೈಪರ್​ಸಾನಿಕ್ ಕ್ಷಿಪಣಿಯ ಕುರಿತಾಗಿ ಅಮೆರಿಕಾದ ಸಾಮರಿಕ ವಿಶ್ಲೇಷಕರು ವ್ಯಕ್ತಪಡಿಸುವ ಮತ್ತು ಪತ್ರಕರ್ತರು ಪ್ರತಿಧ್ವನಿಸುವ ಅನಿಸಿಕೆ ಕೇವಲ ನಾಲ್ಕು ಪದಗಳಲ್ಲಿರುತ್ತದೆ. ಅದೆಂದರೆ A truely worrying threat ಎಂದು! ಆದರೆ ಇದೇ ವಿಶ್ಲೇಷಕರು ಮತ್ತು ಪತ್ರಕರ್ತರು ಭಾರತದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಏನು ಹೇಳುತ್ತಾರೆ?

ಇತ್ತೀಚೆಗೆ ನಮ್ಮ ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್​ವೆುಂಟ್ ಆರ್ಗನೈಝೇಷನ್ (ಡಿಆರ್​ಡಿಓ) ಹೈಪರ್​ಸಾನಿಕ್ ಕ್ಷಿಪಣಿಯೊಂದನ್ನು ಪರೀಕ್ಷಿಸಿತು. ಅದರ ವೇಗ ಶಬ್ದದ ವೇಗಕ್ಕಿಂತಲೂ 8 ಪಟ್ಟು ಹೆಚ್ಚು. ಇದು ಈಗ ಚೀನಾ ‘ಸಾಧಿಸಿರುವ’ ವೇಗವನ್ನು ಸರಿಗಟ್ಟುತ್ತದೆ. ಈ Long Duration Hypersonic Cruise Missile (ಎಲ್​ಡಿಎಚ್​ಸಿಎಂ) ಕ್ಷಿಪಣಿ ಸೆಕೆಂಡ್ ಒಂದರಲ್ಲಿ 24 ಕಿ.ಮೀ.ಗಿಂತಲೂ ಅಧಿಕ ದೂರವನ್ನು ಕ್ರಮಿಸುತ್ತದೆ ಮತ್ತು ಕ್ರೂಯಿಸ್ ಮಿಸೈಲ್ ಆದ ಕಾರಣ ತನ್ನ ಪಥದಲ್ಲಿ ಮೇಲೇರುವ, ಕೆಳಗಿಳಿಯುವ, ವೇಗವನ್ನು ಬದಲಿಸಿಕೊಳ್ಳುವ ಸಾಮರ್ಥ್ಯವಿರುವ ಇದು ಚಲನೆಯಲ್ಲಿರುವಾಗಲೂ ತನ್ನ ಮಾರ್ಗವನ್ನು ಬದಲಿಸಿಕೊಳ್ಳಬಲ್ಲದು! (ಬ್ಯಾಲಿಸ್ಟಿಕ್ ಮಿಸೈಲ್​ಗಳು ಹಾಗಲ್ಲ. ಒಮ್ಮೆ ಗುರಿ ನಿಗದಿಪಡಿಸಿ ಉಡಾಯಿಸಿದರೆ ಅತ್ತಿತ್ತ ತಿರುಗದೇ ಅಲ್ಲಿಗೇ ಅಪ್ಪಳಿಸುತ್ತವೆ). ಭಾರತದ ಎಲ್​ಡಿಎಚ್​ಸಿಎಂ ಕ್ಷಿಪಣಿಯ ವ್ಯಾಪ್ತಿ 1,500 ಕಿ.ಮೀ.; ಚೀನಾ ಹೇಳಿಕೊಳ್ಳುವ ಪ್ರಕಾರ ಅದರ ಈಗಿನ ಹೈಪರ್​ಸಾನಿಕ್ ಕ್ಷಿಪಣಿಯ ವ್ಯಾಪ್ತಿ 2,500 ಕಿ.ಮೀ.; ಭಾರತ ತನ್ನ ಹೈಪರ್​ಸಾನಿಕ್ ಕ್ಷಿಪಣಿಯ ವ್ಯಾಪ್ತಿಯನ್ನು ಮುಂದಿನ ದಿನಗಳಲ್ಲಿ ಶೀಘ್ರವಾಗಿ ಹೆಚ್ಚಿಸಿಕೊಳ್ಳುವುದು ನಿಶ್ಚಿತ.

ಭಾರತದ ಈ ಸಾಧನೆ ಅಮೆರಿಕಾದ ಸಾಮರಿಕ ಹಾಗೂ ಮಾಧ್ಯಮ ವಲಯದಲ್ಲಿ ಕುತೂಹಲವನ್ನಷ್ಟೇ ಕೆರಳಿಸಿಲ್ಲ, ಅಪಾರ ಮೆಚ್ಚುಗೆಯನ್ನೂ ಗಳಿಸಿದೆ. ‘ದ ಮಿರರ್ ಯುಎಸ್’ ಪತ್ರಿಕೆ ‘ಭಾರತ ಕೊನೆಗೂ ಚೀನಾದ ಕ್ಷಿಪಣಿ ಸಾಮರ್ಥ್ಯವನ್ನು ಸರಿಗಟ್ಟುತ್ತಿದೆ’ ಎಂದು ಬರೆದು ಸಂಭ್ರಮಿಸಿದ್ದರಿಂದ ಆರಂಭವಾಗಿ ಕಳೆದೊಂದು ವಾರದಲ್ಲಿ ಅಮೆರಿಕಾದ ವಿವಿಧ ಮಾಧ್ಯಮಗಳು ಭಾರತದ ಸಾಧನೆಯ ಬಗ್ಗೆ ವಿವರವಾದ ವರದಿ/ ವಿಶ್ಲೇಷಣೆ ಪ್ರಕಟಿಸಿದೆ. ಪೃಥ್ವಿ 2, ಅಗ್ನಿ 1 ಕ್ಷಿಪಣಿಗಳನ್ನು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಪ್ರಮಾಣಕ್ಕೆ ಭಾರತ ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿದ್ದು, ಜತೆಗೆ ಆಕಾಶ್ ಪ್ರೖೆಮ್ ವಾಯು ಸುರಕ್ಷಾ ವ್ಯವಸ್ಥೆಯನ್ನು ಲದಾಖ್​ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದ್ದೂ ಅಮೆರಿಕಾದಲ್ಲಿ ಪ್ರಶಂಸೆಗೆ ಪಾತ್ರವಾಗುತ್ತಿದೆ. ಈ ಸಾಧನೆಗಳು ಅಮೆರಿಕಾದಲ್ಲಿ ಏಕೆ ಇಷ್ಟೊಂದು ಕುತೂಹಲ ಮತ್ತು ಸಂಭ್ರಮಕ್ಕೆ ಕಾರಣವಾಗುತ್ತಿವೆಯೆಂದರೆ ಚೀನಾವನ್ನು ನಿಗ್ರಹಿಸಲು ಭಾರತವೀಗ ಸಮರ್ಥ ಸಹಯೋಗಿ ಎಂಬ ನಂಬಿಕೆ ಅಲ್ಲಿ ಗಟ್ಟಿಯಾಗುತ್ತಿರುವುದು. ಚೀನಿ ಸೇನೆ ಬಗ್ಗೆ ಅಮೆರಿಕಾ ಚಿಂತಿಸುವುದನ್ನು ಮರೆತು ಬಹಳ ಕಾಲವೇ ಆಯಿತು. ಅದಕ್ಕೂ ಕಾರಣವಿದೆ. ಚೀನಿ ಭೂಸೇನೆ ಸಂಖ್ಯೆಯ ದೃಷ್ಟಿಯಲ್ಲಿ ಆರೇಳು ದಶಕ ಗಳಿಂದ ಜಗತ್ತಿನ ಅತಿ ದೊಡ್ಡ ಸೇನೆ. ಆದರೆ ಅದರ ಕಾದುವ ಸಾಮರ್ಥ್ಯ ಪ್ರಶ್ನಾರ್ಹ.

ಇದುವರೆಗೆ ಸಾಧಿಸಿರುವ ಏಕೈಕ ಗೆಲುವು 1962ರಲ್ಲಿ ಭಾರತದ ವಿರುದ್ಧ. ಅದಾದದ್ದು ಭಾರತೀಯ ಸೇನೆಯ ಬಲಹೀನತೆಯಿಂದಲ್ಲ, ಬದಲಿಗೆ ಭಾರತದ ರಾಜಕೀಯ ನಾಯಕತ್ವದ ಅರ್ತಾಕ ಹಾಗೂ ಆತ್ಮಹತ್ಯೀಯ ನಿಲುವುಗಳಿಂದಾಗಿ. ಐದು ವರ್ಷಗಳಲ್ಲಿ ಹೊಸ ನಾಯಕತ್ವ ನೀಡಿದ ಪೂರ್ಣ ಬೆಂಬಲ ಹಾಗೂ ಸ್ವಾತಂತ್ರ್ಯದ ಪರಿಣಾಮವಾಗಿ ಸಿಕ್ಕಿಂ ವಲಯದಲ್ಲಿ ತಂಟೆ ತೆಗೆದ ಚೀನಿ ಸೇನೆಯನ್ನು ಭಾರತೀಯ ಸೇನೆ ಮಣ್ಣುಮುಕ್ಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೆಯೇ 1979ರಲ್ಲಿ ಬೃಹತ್ ಚೀನಿ ಸೇನೆ ಪುಟ್ಟ ವಿಯೆಟ್ನಾಂನಿಂದ ಅವಮಾನಿತಗೊಂಡಿತು.

ಇನ್ನು ಚೀನಿ ಸೈನಿಕರ ಬಲಹೀನತೆ ಜಗತ್ತಿನ ಮುಂದೆ ಗೋಚರವಾದದ್ದು ಐದು ವರ್ಷಗಳ ಹಿಂದೆ ಗಲ್ವಾನ್ ಕಣಿವೆಯಲ್ಲಿ. ಚೀನಿ ಸೇನೆ ಈ ಪ್ರಮಾಣದಲ್ಲಿ ಶಕ್ತಿಹೀನವಾಗಲು ಮೊದಲೇ ಇದ್ದ ಕೇವಲ ಸಿದ್ಧಾಂತಪ್ರೇರಿತ ನಾಯಕತ್ವ ಮತ್ತು ದೇಶನಿಷ್ಠೆಯ ಕೊರತೆಯ ಜತೆಗೆ ಮಾಜಿ ಅಧ್ಯಕ್ಷ ಷ ದೆಂಗ್ ಷಿಯಾವೋಪಿಂಗ್​ರ ನೀತಿಯೂ ಕಾರಣ. ಬೃಹದಾಕಾರದ ಸೇನೆಯನ್ನು ಸಾಕುವುದು ಸರಕಾರದ ಮೇಲೆ ಅತಿಯಾದ ಹೊರೆಯಾಗಿದೆ ಎಂದು ತಿಳಿದ ದೆಂಗ್ 1986ರಲ್ಲಿ ಒಂದು ಸುಧಾರಣಾ ಹಾಗೂ ಪರಿಹಾರಾತ್ಮಕ ಕಾರ್ಯಯೋಜನೆಯನ್ನು ಜಾರಿಗೆ ತಂದರು. ಅದರ ಪ್ರಕಾರ ತನಗೆ ಅಗತ್ಯವಾದ ಆಹಾರ ವಸ್ತುಗಳನ್ನು, ಸಣ್ಣಪುಟ್ಟ ಆಯುಧ/ ಉಪಕರಣ ಗಳನ್ನು ಸೇನೆ ತಾನೇ ಉತ್ಪಾದಿಸಿಕೊಳ್ಳಬೇಕಾದ ಒತ್ತಡಕ್ಕೆ ಒಳಗಾಯಿತು. ವಿಧಿಯಿಲ್ಲದೇ ಆ ಹಾದಿಗಿಳಿದ ಸೇನೆ ಆಹಾರ ಧಾನ್ಯಗಳನ್ನು ಬೆಳೆಯಲು, ಕೋಳಿ ಮತ್ತು ಹಂದಿಗಳನ್ನು ಸಾಕಲು ಆರಂಭಿಸಿತು.

ಕೆಲವೇ ವರ್ಷಗಳಲ್ಲಿ ಅದು ತನ್ನ ಸಮವಸ್ತ್ರಗಳನ್ನೂ ತಾನೇ ತಯಾರಿಸಿಕೊಳ್ಳತೊಡಗಿತು. ಇಂದು ಚೀನಿ ಸೇನೆಯ ‘ಆತ್ಮನಿರ್ಭರತೆ’ ಅದೆಷ್ಟು ಮಟ್ಟಿಗೆ ಹೆಚ್ಚಿದೆಯೆಂದರೆ ಅದು ತನಗೆ ಬೇಕಾದ್ದೆಲ್ಲವನ್ನೂ ತಾನೇ ಉತ್ಪಾದಿಸಿಕೊಳ್ಳುವುದರ ಜತೆಗೆ ಲಾಭಕ್ಕಾಗಿ ಜೂಜು ಕಟ್ಟೆಗಳನ್ನೂ, ವೇಶ್ಯಾವಾಟಿಕೆಗಳನ್ನೂ ನಡೆಸುತ್ತಿದೆ! ಹೆಚ್ಚಿನ ಸೇನಾಧಿಕಾರಿಗಳು ಹೀಗೆ ಸೇನೆಯದ್ದಲ್ಲದ ಕೆಲಸಗಳಲ್ಲಿ ತೊಡಗಿರುವುದರಿಂದಾಗಿ ಚೀನಿ ಸೇನೆಯ ಕಾದುವ ಸಾಮರ್ಥ್ಯ ಹಂತಹಂತವಾಗಿ ಕುಗ್ಗುತ್ತಾ ಬಂದಿತು. ಆ ಕುಸಿತ ಯಾವ ಮಟ್ಟದ್ದು ಎನ್ನವುದು ಜಗತ್ತಿಗೆ ಗೋಚರವಾದದ್ದು ಐದು ವರ್ಷಗಳ ಹಿಂದೆ ಗಲ್ವಾನ್ ಕಣಿವೆಯಲ್ಲಿ.

ಹೀಗಾಗಿ ಚೀನಿ ಸೇನೆಯ ಬಗ್ಗೆ ಅಮೆರಿಕಾಗೆ ಚಿಂತೆಯೇನೂ ಇಲ್ಲ. ಅದು ಅದು ಅತಿಯಾಗಿ ಚಿಂತೆಗೀಡು ಮಾಡಿದ್ದು ಚೀನಾದ ಕ್ಷಿಪಣಿ ಸಾಮರ್ಥ್ಯ. ಕ್ಷಿಪಣಿಗಳಿಂದ ನೆಲವನ್ನು ಆಕ್ರಮಿಸಿಕೊಳ್ಳಲಾ ಗುವುದಿಲ್ಲ, ನಿಜ; ಆದರೆ ಎದುರಾಳಿಯನ್ನು ತೀವ್ರವಾಗಿ ಹಾಗೂ ತೀಕ್ಷ ್ಣಾಗಿ ಹಾನಿಗೀಡು ಮಾಡಬಹುದು. ಆ ಹಾನಿ ತೈವಾನ್​ಗೆ ಅತೀವವಾಗಿ ಮಾರಕವೆನಿಸಬಹುದು ಮತ್ತು ಅಮೆರಿಕಾಗೆ ಘಾತಕವೆನಿಸಬಹುದು.

ಯುದ್ಧದಲ್ಲಿ ಅಂತಿಮವಾಗಿ ಚೀನಾ ಸೋಲಬಹುದು, ಆದರೆ ಅಷ್ಟರವರೆಗೆ ತೈವಾನ್ ಮಧ್ಯಯುಗಕ್ಕೆ ದೂಡಲ್ಪಟ್ಟಿರುತ್ತದೆ ಮತ್ತು ಅಮೆರಿಕಾ ತನ್ನ ಗಾಯಗಳನ್ನು ನೆಕ್ಕುತ್ತಿರುತ್ತದೆ! ಇಂತಹ ಆತಂಕದ ಸನ್ನಿವೇಶದಲ್ಲಿ ಅಮೆರಿಕಾದ ಆಶಾಕಿರಣವಾಗಿ ಕಾಣತೊಡಗಿರುವುದು ಭಾರತ. ಪರ್ವತೀಯ ಸಮರಾಂಗಣದಲ್ಲಿ ಭಾರತೀಯ ಸೇನೆಗೆ ಸರಿಸಾಟಿಯಾದುದು ಜಗತ್ತಿನಲ್ಲೇ ಇಲ್ಲ. ಹಿಮಾಲಯದಲ್ಲಿ ಭಾರತೀಯ ಸೈನಿಕರ ಮುಂದೆ ನಿಲ್ಲುವ ಸಾಮರ್ಥ್ಯ ಚೀನಿ ಸೈನಿಕರಿಗಿಲ್ಲ. ಇಂತಹ ಸನ್ನಿವೇಶದಲ್ಲಿ ಚೀನಿ ಕ್ಷಿಪಣಿ ಸಾಮರ್ಥ್ಯವನ್ನು ಭಾರತ ಸರಿಗಟ್ಟಿದರೆ ಅದು ಅಮೆರಿಕಾಗೆ ಅದೆಷ್ಟು ನೆಮ್ಮದಿಕಾರಕ!

ಇದು ಅಮೆರಿಕಾದ ಲೆಕ್ಕಾಚಾರವಾದರೆ ಭಾರತದ್ದೇನು? ಎರಡೂ ದೇಶಗಳ ಲೆಕ್ಕಾಚಾರಗಳು ಎಲ್ಲಿ ಸಂಧಿಸುತ್ತವೆ? ಭಾರತವನ್ನು ಚೀನಾ ವಿರೋಧಿಸುವುದಕ್ಕೆ, ಈ ವಲಯದಲ್ಲಿ ಭಾರತದ ಶತ್ರುದೇಶಗಳ ಬೆನ್ನಿಗೆ ನಿಲ್ಲುವುದಕ್ಕೆ ಕೇವಲ ಗಡಿವಿವಾದ ಮತ್ತು ಭಾರತದ ಆರ್ಥಿಕ ಪ್ರಗತಿಯಷ್ಟೇ ಕಾರಣವಲ್ಲ. 2014ರಲ್ಲಿ ಅಧ್ಯಕ್ಷ ಷಿ ಜಿನ್​ಪಿಂಗ್ ಚೀನಿ ಸೇನಾಧಿಕಾರಿಗಳೊಂದಿಗಿನ ಒಂದು ರಹಸ್ಯ ಸಭೆಯಲ್ಲಿ ಅಮೆರಿಕಾ ಮತ್ತು ಭಾರತದಿಂದಾಗುವ ‘ಅಪಾಯ’ಗಳನ್ನು ಗುರುತಿಸಿದ್ದು ಆಸಕ್ತಿಕರ. ‘ಪಶ್ಚಿಮದ ಪ್ರಜಾಪ್ರಭುತ್ವವಾದಿ ರಾಜಕೀಯ ತತ್ವಗಳನ್ನು ಮಿಖಾಯಿಲ್ ಗೋರ್ಬಚೆವ್ 1980ರ ದಶಕದ ಅಂತ್ಯದಲ್ಲಿ ಸೋವಿಯೆತ್ ಯೂನಿಯನ್​ನೊಳಗೆ ಬಿಟ್ಟುಕೊಂಡದ್ದೇ ಆ ದೇಶದಲ್ಲಿ ಕಮ್ಯೂನಿಸಂ ಅಂತ್ಯಗೊಳ್ಳಲು ಮತ್ತು ಆ ದೇಶ ಛಿದ್ರಗೊಳ್ಳಲು ಕಾರಣ’ ಎಂದು ವಾದಿಸಿದ ಷಿ ಇಂದು ಚೀನಾ ಹಾಗೇ ಮಾಡಿದರೆ ಸೋವಿಯೆತ್ ಯೂನಿಯನ್​ಗಾದ ಗತಿ ಅದಕ್ಕೂ ಆಗುತ್ತದೆ ಎಂದು ಎಚ್ಚರಿಸಿದರು.

ಹೀಗಾಗಿ ಅಮೆರಿಕಾದ ಪ್ರಜಾಪ್ರಭುತ್ವವಾದಿ ತತ್ವಗಳು ಎಂದೂ ಚೀನಾದೊಳಗೆ ಪ್ರವೇಶಿಸದಂತೆ ತಡೆಯುವುದು ತಮ್ಮ ಕರ್ತವ್ಯವಾಗಬೇಕೆಂದು ಷಿ ಸೇನಾಧಿಕಾರಿಗಳಿಗೆ ಕರೆಯಿತ್ತರು. ಅವರ ಆ ಮಾತುಗಳನ್ನು ಅದೇ ನಿಟ್ಟಿನಲ್ಲಿ ಮುಂದುವರೆಸಿದರೆ ಇಂದು ಭಾರತವೂ ಅವರ ಶತ್ರುವಿನ ಸ್ಥಾನದಲ್ಲಿ ನಿಲ್ಲಲು ಅರ್ಹವಾಗುತ್ತದೆ. ಇಂದು ಆರ್ಥಿಕವಾಗಿ ಕಮ್ಯೂನಿಸ್ಟ್ ಚೀನಾ ಕುಗ್ಗುತ್ತಿರುವಾಗ ಪ್ರಜಾಪ್ರಭುತ್ವವಾದಿ ಭಾರತ ಪ್ರಗತಿ ಸಾಧಿಸುತ್ತಾ ಹೋದರೆ ಅದು ಚೀನಿ ಜನತೆಯ ಮನೋಭಾವದ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಹೀಗಾಗಿ ಭಾರತದ ಪ್ರಗತಿಯನ್ನು ಹಾಳುಗೆಡವುದರ ಮೂಲಕ ಭಾರತದ ಪ್ರಜಾಪ್ರಭುತ್ವವಾದಿ ಮೌಲ್ಯಗಳು ಚೀನಿ ಜನತೆಯ ಮನಗೆಲ್ಲುವುದನ್ನು ತಡೆಯಬಹುದು ಎನ್ನುವುದು ಇಂದು ಚೀನಿ ನಾಯಕತ್ವದ ಲೆಕ್ಕಾಚಾರ. ಹೀಗಾಗಿಯೇ ಅದು ಭಾರತದಲ್ಲಿ ಅಶಾಂತಿಯನ್ನುಂಟುಮಾಡಲು, ಆ ಮೂಲಕ ವಿದೇಶಿ ಬಂಡವಾಳ ಹೂಡಿಕೆ ಭಾರತಕ್ಕೆ ಬಾರದಂತೆ ಮಾಡಲು, ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುವುದನ್ನು ತಡೆಯಲು ಇನ್ನಿಲ್ಲದ ಆಟ ಆಡುತ್ತಿದೆ.

ದುರಂತವೆಂದರೆ ಅದರ ಆ ಆಟಗಳಲ್ಲಿ ಭಾರತದ ಕೆಲವರು ರಾಜಕೀಯ ನಾಯಕರು ಮತ್ತು ಪಕ್ಷಗಳು ಹಾಗೂ ಮಾಧ್ಯಮ ಮತ್ತು ವೈಚಾರಿಕ ವರ್ಗದ ಒಂದು ಗುಂಪು ಸಹಕಾರ ನೀಡುತ್ತಿದೆ. ಇದೆಲ್ಲಾ ಕಾರಣಗಳಿಂದಾಗಿ ಕಮ್ಯೂನಿಸ್ಟರ ಚೀನಾ ಎಲ್ಲ ಬಗೆಯಲ್ಲೂ ಭಾರತಕ್ಕೆ ಅಹಿತ ಬಯಸುವ ಒಂದು ದೊಡ್ಡ ಶಕ್ತಿ ಎನ್ನುವುದು ಸಿದ್ಧವಾದ ಸಂಗತಿ. ಇದೇನೂ ಹೊಸದಲ್ಲ. ಆದರೆ ಹಿಂದಿನ ಕೆಲವು ಸರ್ಕಾರಗಳು ಚೀನಾ ವಿರುದ್ಧ ಏನೂ ಮಾಡದೇ ಹೋದರೆ ಮತ್ತೆ ಕೆಲವು ಸರ್ಕಾರಗಳು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಚೀನಾಗೇ ಸಹಕಾರಿಯಾಗುವಂತಹ ನೀತಿನಿಲುವುಗಳನ್ನು ಅನುಸರಿಸಿದವು. ಆದರೆ ಇಂದಿನ ಭಾರತ ಸರ್ಕಾರ ಚೀನಾದ ಭಾರತ-ವಿರೋಧಿ ನೀತಿಗಳನ್ನು ಸ್ಪಷ್ಟವಾಗಿ ಗುರುತಿಸಿರುವುದಷ್ಟೇ ಅಲ್ಲ, ಅವುಗಳನ್ನು ನಿಷ್ಪಲಗೊಳಿಸಲೂ ಪಣತೊಟ್ಟಿದೆ. ಆ ನಿಟ್ಟಿನಲ್ಲಿ ಅಗತ್ಯವೆನಿಸಿದರೆ ಚೀನಾಗೇ ಹಾನಿಯೆಸಗಲು ಅದು ಸಿದ್ಧ! ಅದಕ್ಕಾಗಿ ಅಮೆರಿಕಾದ ಜತೆ ಕೈಜೋಡಿಸುವುದು ಅನುಕೂಲಕರ ಎಂದೂ ಅದು ತಿಳಿದಿದೆ.

ಇದರ ಮುಂದುವರಿಕೆಯಾಗಿ ಅತ್ತ ತೈವಾನ್ ವಿಷಯದಲ್ಲಿ ಟ್ರಂಪ್​ರ ಅಮೆರಿಕಾ ಕಠಿಣ ನಿಲುವು ತಳೆದರೆ ಇತ್ತ ಭಾರತ ತನ್ನ ಟಿಬೆಟ್ ನೀತಿಯನ್ನು ಮಾರ್ಪಾಡುಗೊಳಿಸುತ್ತಿದೆ. 90 ವರ್ಷ ಪೂರೈಸಿದ ದಲಾಯಿ ಲಾಮಾರ ಉತ್ತರಾಧಿಕಾರಿಯ ವಿಷಯದಲ್ಲಿ ಚೀನಾದ ಹಸ್ತಕ್ಷೇಪ ಸರಿಯಲ್ಲ, ಅದು ಧಾರ್ವಿುಕ ವಿಚಾರ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಜತೆಗೆ, ನಮಗೆ ಚೀನಾದೊಂದಿಗೆ ಯಾವ ಗಡಿಯೂ ಇಲ್ಲ, ನಮ್ಮ ಗಡಿ ಇರುವುದು ಟಿಬೆಟ್​ನೊಂದಿಗೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಪೇಮಾ ಖಂಡು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಅವರ ಆ ಮಾತು ಸ್ವತಂತ್ರ ಟಿಬೆಟ್ ಬಗ್ಗೆ ಟ್ರಂಪ್ ಆಡಳಿತದಿಂದ ಹೊರಬರುತ್ತಿರುವ ಹೇಳಿಕೆಗಳಿಗೆ ಅನುಗುಣವಾಗಿರುವಂತೆ ಇದೆಯಲ್ಲ! ಕೇಂದ್ರ ಸರ್ಕಾರದ ಒಪ್ಪಿಗೆಯಿಲ್ಲದೇ ಮುಖ್ಯಮಂತ್ರಿ ಖಂಡು ಆ ಮಾತುಗಳನ್ನು ಹೇಳಲಾದೀತೇ? ಇದೆಲ್ಲದರ ಅರ್ಥ ಚೀನಾದ ಈ ಕಡೆ ಅಥವಾ ಆ ಕಡೆ ಯುದ್ಧ ಆರಂಭವಾದರೆ ಅದು ತಕ್ಷಣ ಇನ್ನೊಂದು ಕಡೆಗೂ ಹರಡುತ್ತದೆ ಎನ್ನುವ ಸೂಚನೆ ಇದು. ಹೀಗೆ ಚೀನಾ ಕುರಿತಾಗಿ ವಾಷಿಂಗ್ಟನ್ ಮತ್ತು ನವದೆಹಲಿಗಳ ನಡುವೆ ಇರುವ ಈ ಸಹಮತವನ್ನು ಅವೆರಡೂ ದೊಡ್ಡದಾಗಿ ತೋರಿಸಿಕೊಳ್ಳುತ್ತಿಲ್ಲ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾಗಳ ಜತೆಗೂಡಿ ಆಸ್ಟ್ರೇಲಿಯಾದ ಜಲ ಮತ್ತು ನೆಲ ಪ್ರದೇಶದಲ್ಲಿ ತಾನು ನಡೆಸುವ ಸೇನಾ ಕವಾಯಿತುಗಳಿಗೆ ಅಮೆರಿಕಾ ಭಾರತವನ್ನು ಸೇರಿಸಿಕೊಂಡು ಭಾರತದ ವಿರುದ್ಧ ಚೀನಿ ಕಣ್ಣನ್ನು ‘ಈಗಲೇ’ ಕೆಂಪಗಾಗಿಸುವುದು ಸರಿಯಲ್ಲ ಎಂದು ಟ್ರಂಪ್ ಆಡಳಿತಕ್ಕೆ ಗೊತ್ತು. ಆದರೆ ಭಾರತದ ಕ್ಷಿಪಣಿ ಯಶೋಗಾಥೆಗಳನ್ನು ಶ್ಲಾಘಿಸಲು ತನ್ನ ಸಾಮರಿಕ ವಿಶ್ಲೇಷಕರಿಗೆ ಮತ್ತು ಮಾಧ್ಯಮದ ಒಂದು ವರ್ಗಕ್ಕೆ ಅದು ಮೌನ ಸಮ್ಮತಿ ಹಾಗೂ ಸಹಕಾರ ನೀಡುತ್ತಿದೆ. ಒಟ್ಟಿನಲ್ಲಿ ಅಮೆರಿಕಾಗೆ ಮುಂದೆ ಒದಗಬಹುದಾದ ಅಪಾಯವನ್ನು ಆದಷ್ಟು ಬೇಗನೆ ನಿವಾರಿಸಿಕೊಳ್ಳಲು ಟ್ರಂಪ್ ಆಡಳಿತ ತೀರ್ವನಿಸಿದ್ದರೆ, ನೆಹರೂ ಸರ್ಕಾರ ಎಸಗಿದ ತಪ್ಪುಗಳನ್ನು ಸರಿಪಡಿಸಲು ಇದು ಸಕಾಲವೆಂದು ಮೋದಿ ಸರ್ಕಾರ ಲೆಕ್ಕಹಾಕಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net