

ಈಗಷ್ಟೇ ಕಾಲೇಜು ಮುಗಿಸಿರುವ, ಮೊದಲ ಉದ್ಯೋಗಕ್ಕೆ ಅಡಿ ಇಟ್ಟಿರುವ ಯುವಕ-ಯುವತಿಯರು ಬ್ಯಾಂಕು ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ತಹತಹಿಸುತ್ತಾರೆ ಎಂಬ ಅಂಶ ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ಅವರು ಯಾವ್ಯಾವ ಉದ್ದೇಶಕ್ಕಾಗಿ ಸಾಲ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲಕರ.
ಮಿಲೆನಿಯಲ್ಗಳೆಂದರೆ 25ರಿಂದ 35 ವರ್ಷದೊಳಗಿನ ಯುವಪೀಳಿಗೆ. ಬೇರೆ ಬೇರೆ ದೇಶಗಳಲ್ಲಿ ಇದರ ವ್ಯಾಖ್ಯಾನ ತುಸು ಬದಲಾಗುತ್ತದೆಯಾದರೂ ಒಟ್ಟಾರೆಯಾಗಿ ಇದೊಂದು ಯುವಪಡೆ ಎಂದೇ ಸಾರ್ವತ್ರಿಕ ಅರ್ಥ. ಭಾರತದಲ್ಲಿ ಈ ವಯೋಮಾನದೊಳಗೆ ಇರುವವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ 34ರಷ್ಟಿದೆ. ನಿಜಕ್ಕೂ ಖರ್ಚು ಮಾಡುತ್ತಿರುವ ಮಂದಿ ಎಂದರೆ ಇವರೇ.
ಇವರು ತಮ್ಮ ವಿವಿಧ ಅಗತ್ಯಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿರುವ ಪ್ರಮಾಣ ಮತ್ತು ವೇಗವನ್ನು ನೋಡಿ ಹಣಕಾಸು ಸಂಸ್ಥೆಗಳೇ ಅಚ್ಚರಿಗೀಡಾಗಿವೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾಲ ನೀಡಿಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿರುವವರು ಮಿಲೇನಿಯಲ್ಗಳೇ. ಅದರಲ್ಲಿ ಬಹುತೇಕ ಜನ ‘ಅಸುರಕ್ಷಿತ ಸಾಲ’ ಪಡೆದಿರುವುದು ಸ್ವತಃ ಸಾಲ ನೀಡುವ ಸಂಸ್ಥೆಗಳೇ ಕಳವಳಕ್ಕೆ ಈಡಾಗುವಂತೆ ಮಾಡಿದೆ.
ಟ್ರಾನ್ಸ್ಯೂನಿಯನ್ ಸಿಬಿಲ್ ಇತ್ತೀಚೆಗೆ ನಡೆಸಿದ ಮಾರುಕಟ್ಟೆ ಸಮೀಕ್ಷೆಯಲ್ಲಿ ಹಲವು ಆಸಕ್ತಿಕರ ಸಂಗತಿಗಳು ಬಹಿರಂಗವಾಗಿವೆ. ಮಿಲೆನಿಯಲ್ಗಳಿಗೆ ಆ ವಯಸ್ಸಿನಲ್ಲಿ ಸಹಜವಾಗಿಯೇ ಮಹತ್ವಾಕಾಂಕ್ಷೆಗಳು ಹೆಚ್ಚು. ನಿರ್ದಿಷ್ಟ ಆರ್ಥಿಕ ಗುರಿ ಇಟ್ಟುಕೊಂಡು ಸಾಲ ಪಡೆಯುವ ತಹತಹಿಕೆ ಅವರಲ್ಲೇ ಜಾಸ್ತಿ.
ಹಾಗಾಗಿ ಸಾಲ ನೀಡುವ ಸಂಸ್ಥೆಗಳ ದೃಷ್ಟಿಯಲ್ಲಿ ಈಗ ಅತಿ ವೇಗವಾಗಿ ಬೆಳೆಯುತ್ತಿರುವ ಸೆಗ್ಮೆಂಟ್ ಎಂದರೆ ಮಿಲೆನಿಯಲ್ಗಳದು. ಆದರೆ ಹಣಕಾಸಿನ ವಿಷಯದಲ್ಲಿ ಅವರು ನಡೆದುಕೊಳ್ಳುವ ರೀತಿಯನ್ನು ನೋಡಿದರೆ ಆತಂಕವೂ ಆಗುತ್ತದೆ. ವೆಚ್ಚದ ವಿಷಯದಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಉಳಿತಾಯದ ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನ ಅವರದಲ್ಲ ಎಂಬುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.
ತಮ್ಮ ಲೈಫ್ಸ್ಟೈಲ್ ವಿಷಯದಲ್ಲಿ ಅವರು ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಹೊಸ ಹೊಸ ವಾಹನಗಳ ಖರೀದಿಯಲ್ಲೂ ಅವರು ಎತ್ತಿದ ಕೈ. ಕುಟುಂಬದಲ್ಲಿ ಆರೋಗ್ಯವೂ ಸೇರಿದಂತೆ ಯಾವುದಾದರೂ ಎಮರ್ಜೆನ್ಸಿ ತಲೆದೋರಿದರೆ ಆರ್ಥಿಕವಾಗಿ ನೆರವು ನೀಡುವುದಕ್ಕೆ ಮೊದಲು ಮುಂದಾಗುವವರೇ ಇವರು. ಈ ಎಲ್ಲ ಕಾರಣಗಳಿಗಾಗಿಯೇ ಅವರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ಯಾವತ್ತೂ ಹಿಂಜರಿಯುವುದಿಲ್ಲ.
ಐಷಾರಾಮಿ ಜೀವನಕ್ಕೂ ಸಾಲ!: ಆದರೆ ಅವರಲ್ಲಿ ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್ ಮತ್ತು ಕನ್ಸೂಮರ್ ಡ್ಯುರೇಬಲ್ ಲೋನ್ಗಳೂ ಸೇರಿದಂತೆ ಅಸುರಕ್ಷಿತ ಸಾಲಗಳನ್ನು ಶೇಕಡ 72ರಷ್ಟು ಮಂದಿ ತೆಗೆದುಕೊಳ್ಳುತ್ತಾರೆ. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ವಿದೇಶದ ಐಷಾರಾಮಿ ಸ್ಥಳಗಳಿಗೆ ಜಾಲಿ ಪ್ರವಾಸ ಕೈಗೊಳ್ಳುವುದು, ಲಕ್ಷುರಿ ವಸ್ತುಗಳನ್ನು ಖರೀದಿಸುವುದು ಮುಂತಾದ ವೈಯಕ್ತಿಕ ಕಾರಣಗಳಿಗೂ ಅವರು ಸಾಲದ ಮೇಲೆಯೇ ಅವಲಂಬಿತರಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಇದನ್ನು ಹೊರತುಪಡಿಸಿ ದ್ವಿಚಕ್ರವಾಹನಗಳು ಮತ್ತು ಕಾರುಗಳ ಖರೀದಿಯಂತಹ ಸುರಕ್ಷಿತ ಸಾಲ ಪಡೆಯುತ್ತಿರುವ ಮಿಲೆನಿಯಲ್ಗಳ ಸಂಖ್ಯೆ ಶೇಕಡ 9ರಷ್ಟಿದೆ.
ತೀರಿಸುವ ಪ್ರಜ್ಞೆಯೂ ಇದೆ: ಇದೇ ವೇಳೆ ಸಾಲ ಯಾವಾಗ ಪಡೆಯಬೇಕು, ಯಾವಾಗ ತೀರಿಸಬೇಕು, ಅದರಿಂದ ತಮ್ಮ ಸಿಬಿಲ್ ಸ್ಕೋರ್ ಮೇಲೆ ದುಷ್ಪರಿಣಾಮ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬ ಪ್ರಜ್ಞೆ ಹೊಂದಿರುವವರಲ್ಲಿ ಮಿಲೆನಿಯಲ್ಗಳ ಸಂಖ್ಯೆಯೇ ದೊಡ್ಡದಿದೆ. 2016ರಿಂದ 2018ರವರೆಗಿನ ಅಂಕಿ ಅಂಶಗಳ ಪ್ರಕಾರ, ಆ ರೀತಿಯ ‘ಸಾಲಪ್ರಜ್ಞೆ’ ಹೊಂದಿರುವ ಮಿಲೆನಿಯಲ್ಗಳ ಸಂಖ್ಯೆ ಶೇಕಡ 58ರಷ್ಟಿದ್ದರೆ, ವಯಸ್ಕರ ಸಂಖ್ಯೆ ಶೇಕಡ 14ರಷ್ಟಿದೆ.
ಮಿಲೆನಿಯಲ್ಗಳ ಪೈಕಿ ಗುಜರಾತ್ನವರು ಇಡೀ ದೇಶದಲ್ಲೇ ಅತಿ ಗರಿಷ್ಠ ಸರಾಸರಿ ಸಿಬಿಲ್ ಸ್ಕೋರ್ (747) ಹೊಂದಿದ್ದಾರೆ. ನಂತರದ ಸ್ಥಾನಗಳಲ್ಲಿ ಹರ್ಯಾಣಾ (743) ಮತ್ತು ರಾಜಸ್ಥಾನ (742) ಇವೆ. ಬ್ಯಾಂಕುಗಳ ಡಿಜಿಟೈಸೇಷನ್, ಹಣದ ಹರಿವಿನ ಪ್ರಮಾಣ ಹೆಚ್ಚಳ ಮತ್ತಿತರ ಕಾರಣಗಳಿಂದಾಗಿ ಈಗ ಸಾಲ ಪಡೆಯುವುದು ಸುಲಭವೂ ಆಗಿದೆ.
ಅದರಲ್ಲೂ ಮೊದಲ ಬಾರಿ ಸಾಲ ಪಡೆಯುವ ಯುವಪೀಳಿಗೆಯವರಿಗೆ ಇದು ಇನ್ನಷ್ಟು ಸುಲಭ. ಅದರಲ್ಲೂ ಈಗ ಯುವಕ/ಯುವತಿಯರು ಸಾಕಷ್ಟು ಟೆಕ್ಫ್ರೆಂಡ್ಲಿ ಆಗಿರುತ್ತಾರೆ. ಮೊಬೈಲು, ಕಂಪ್ಯೂಟರ್ ಮೂಲಕ ನೂತನ ತಂತ್ರಜ್ಞಾನಗಳನ್ನು ಬಳಸುವಲ್ಲಿ ಅವರು ಮುಂದಿರುತ್ತಾರೆ. ಬ್ಯಾಂಕಿನ ಶಾಖೆಗೇ ಹೋಗಿ ಅರ್ಜಿ ಸಲ್ಲಿಸುವ ಪ್ರಮೇಯವೇ ಇಲ್ಲ. ಅವರೆಲ್ಲ ಈಗ ಮೊಬೈಲ್ನಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಯಶಸ್ವಿಯಾಗುವಲ್ಲಿ ಸಿದ್ಧಹಸ್ತರು.
ಇಂತಹವರಿಗೆ ಅನುಕೂಲವಾಗಲೆಂದೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೂತನ ತಂತ್ರಜ್ಞಾನದ ಮೂಲಕವೇ ಸಾಲ ನೀಡಿಕೆಗೆ ಅನುಕೂಲವಾಗುವ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡಿವೆ. ಅದಕ್ಕಾಗಿ ಮೊಬೈಲ್ ಆಪ್ಗಳನ್ನು ರೂಪಿಸಿವೆ. ಡಿಜಿಟಲ್ ಆಪ್ಗಳ ಮೂಲಕ ಸಾಲ ನೀಡುವವರು ಅಲ್ಪಾವಧಿಯ ಪರ್ಸನಲ್ ಲೋನ್ಗಳನ್ನೇ ಹೆಚ್ಚಾಗಿ ಆಫರ್ ಮಾಡುತ್ತಾರೆ. ಅದನ್ನು ಮಿಲೆನಿಯಲ್ಗಳು ತುದಿಗಾಲ ಮೇಲೆ ನಿಂತವರಂತೆ ತಮ್ಮದಾಗಿಸಿಕೊಳ್ಳುತ್ತಾರೆ.
ಅಗತ್ಯವಿಲ್ಲದಿದ್ದರೂ ಸಾಲ ತಗೋತಾರೆ!
ಇದಲ್ಲದೆ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕವೇ ತಮ್ಮ ಸಿಬಿಲ್ ಸ್ಕೋರನ್ನು ಹೆಚ್ಚಿಸಿಕೊಳ್ಳುವ ಮಿಲೆನಿಯಲ್ಗಳೂ ಇದ್ದಾರೆ. ಇದೇ ಉದ್ದೇಶಕ್ಕಾಗಿಯೇ ಅವರು ಕ್ರೆಡಿಟ್ ಕಾರ್ಡ್ಗಳನ್ನೂ ಪಡೆಯುತ್ತಾರೆ. ತಮ್ಮ ಬಳಿ ಲಿಕ್ವಿಡ್ ಕ್ಯಾಷ್ ಇದ್ದರೂ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇಲ್ಲವೆ ಲೋನ್ಗಳನ್ನು ಪಡೆಯುತ್ತಾರೆ. ಅಂಥವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದ್ದು, ಹಣಕಾಸು ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದೆ.