ಪ್ರಚಂಡ ಪುಟಾಣಿಗಳು; ಇಂದು ಮಕ್ಕಳ ದಿನ

Feature Photo
Published on
ಪುಟಾಣಿಗಳೆಂದರೆ ಹಾಗೇ. ಉತ್ಸಾಹ, ಸೃಜನಶೀಲತೆ, ತುಂಟಾಟ ಒಳಗೊಂಡ ನಿರಂತರ ಚಟುವಟಿಕೆ. ಇದಕ್ಕೆ ಪಾಲಕರು, ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಸಿಕ್ಕಿಬಿಟ್ಟರೆ ಬಾಲ್ಯ ಗಟ್ಟಿ ವ್ಯಕ್ತಿತ್ವಕ್ಕೆ ತಳಪಾಯವಾಗುತ್ತದೆ. ಚಿಣ್ಣರು ಪ್ರತಿಭೆ, ಸಾಧನೆಗಳಿಂದ ಗಮನ ಸೆಳೆಯುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಣ್ಣ ವಯಸ್ಸಿನಲ್ಲೇ ಹೀಗೆ ಸಾಧನಾಮುಖಿ ಆಗಿರುವ ಕೆಲ ಮಕ್ಕಳ ಪರಿಚಯ ಇಲ್ಲಿದೆ. ಇದು ಮಕ್ಕಳ ದಿನದ ವಿಶೇಷ.

ಏಳನೇ ತರಗತಿ, ಏಳು ವಿಶ್ವದಾಖಲೆ!

ಬಾಲ್ಯದಲ್ಲೇ ಯೋಗ ಮತ್ತು ನೃತ್ಯದಲ್ಲಿ ಸಾಧನೆ ಮಾಡಿರುವ ಬಹುಮುಖ ಪ್ರತಿಭೆ ಉಡುಪಿಯ ತನುಶ್ರೀ ಪಿತ್ರೋಡಿ. ಸಂಧ್ಯಾ-ಉದಯಕುಮಾರ್ ದಂಪತಿ ಪುತ್ರಿ ತನುಶ್ರೀ ಜನಿಸಿದ್ದು 2009ರಲ್ಲಿ. ಪ್ರಸ್ತುತ ಸೇಂಟ್ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ. ಈಗಾಗಲೇ ಈಕೆಯ ಹೆಸರಿನಲ್ಲಿ 7 ವಿಶ್ವದಾಖಲೆಗಳಿವೆ. 8ರ ಹರೆಯದಲ್ಲಿ 2017ರಲ್ಲಿ 1 ನಿಮಿಷದಲ್ಲಿ 19 ಬಾರಿ ನಿರಾ ಲಾಂಭ ಪೂರ್ಣ ಚಕ್ರಾಸನ ಮಾಡಿ ಮೊದಲ ಬಾರಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಹೆಸರು ದಾಖಲಿಸಿ ದ್ದಾಳೆ. 2018ರಲ್ಲಿ 1 ನಿಮಿಷದಲ್ಲಿ 62 ಉರುಳು ಹಾಗೂ ಜತೆಗೆ 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡನೇ ವಿಶ್ವದಾಖಲೆ. 2019ರಲ್ಲಿ 1.40 ನಿಮಿಷ ಕಾಲಾವಧಿಯಲ್ಲಿ 96 ಬಾರಿ ಧನುರಾಸನ ಹಾಕಿ ದಾಖಲೆ, 2020ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 1.14 ನಿಮಿಷದಲ್ಲಿ ಅತಿ ವೇಗವಾಗಿ 100 ಬಾರಿ ಉರುಳಿ ದಾಖಲೆ, 2021ರಲ್ಲಿ ಮೋಸ್ಟ್ ಬ್ಯಾಕ್​ವರ್ಡ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್​ನಲ್ಲಿ 6ನೇ ವಿಶ್ವದಾಖಲೆ ಮಾಡಿದ್ದಳು. 2021ರಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ 7ನೇ ವಿಶ್ವದಾಖಲೆಗಾಗಿ 45 ನಿಮಿಷದಲ್ಲಿ 200 ಯೋಗಾಸನ ಪ್ರದರ್ಶನ ನೀಡಿದ್ದಾಳೆ. 197ಕ್ಕೂ ಅಧಿಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. 2019ರಲ್ಲಿ ಧರ್ಮಸ್ಥಳದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಯೋಗರತ್ನ ಪ್ರಶಸ್ತಿ, 2020ರಲ್ಲಿ ತುಳು ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಬಾಲಪ್ರತಿಭಾ ಪ್ರಶಸ್ತಿಗಳು ತನುಶ್ರೀ ಮುಡಿಗೇರಿವೆ.

ಸ್ಕೇಟಿಂಗ್ ಶೂರ

ವಿಜಯಪುರ ಜಿಲ್ಲೆ ತಾಳಿಕೋಟೆಯ ಪವಾಡೆಪ್ಪ ಬಸರಕೋಡ ಅವರ ಪುತ್ರ 10 ವರ್ಷದ ಚಂದ್ರಶೇಖರ ಸ್ಕೇಟಿಂಗ್​ನಲ್ಲಿ ದಾಖಲೆ ಸೃಷ್ಟಿಸಿದ್ದಾನೆ. ಈಚೆಗೆ ಬೆಳಗಾವಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಚಂದ್ರಶೇಖರ 81 ಗಂಟೆ ಸ್ಕೇಟಿಂಗ್ ಮಾಡಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 120 ಬಾಲಕರನ್ನು ಮೀರಿಸಿ ಗಮನ ಸೆಳೆದಿದ್ದಾನೆ. ಇಂಡಿಯಾ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಯಂಗ್ ಬುಕ್, ಗ್ಲೋಬಲ್ ನ್ಯಾಷನಲ್ ರೆಕಾರ್ಡ್, ಏಷಿಯಾ ಬುಕ್, ಬೆಸ್ಟ್ ಆಫ್ ಇಂಡಿಯಾ, ನ್ಯಾಷನಲ್ ರೆಕಾರ್ಡ್, ಏಷಿಯಾ ಫೆಸಿಪಿಕ್ ರೆಕಾರ್ಡ್ ಸೇರಿ ಒಟ್ಟು 9 ವಿಶ್ವದಾಖಲೆಯನ್ನು ಬರೆದಿದ್ದಾನೆ. ವಿಜಯ್ ಮಾಲ್ಜಿ ಬಾಲಕನಿಗೆ ತರಬೇತಿ ನೀಡಿದ್ದಾರೆ. ಚಂದ್ರಶೇಖರ ಬಸರಕೋಡ ಪುಣೆಯ ಪ್ರತಿಷ್ಠಿತ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೆ. 7ನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕಲಿಯಲು ಆರಂಭಿಸಿದ್ದು, ಮೂರು ವರ್ಷಗಳಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾನೆ.

ಅಗಾಧ ಜ್ಞಾಪಕಶಕ್ತಿಯ ಗಣಿ 

ವಿಜಯನಗರ ಜಿಲ್ಲೆಯ ನಾಲ್ಕು ವರ್ಷದ ಬಾಲಕ ಅಪಾರ ಜ್ಞಾಪಕಶಕ್ತಿ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಹೆಸರು ದಾಖಲಿಸಿದ್ದಾನೆ. ಹರಪನಹಳ್ಳಿಯ ಮಕ್ಕಳ ವೈದ್ಯ ಅಮರ್ ಗುಪ್ತ ಹಾಗೂ ದಂತ ವೈದ್ಯೆ ಚಂದನಾ ದಂಪತಿ ಪುತ್ರ ನಿನಾದ್ ಗುಪ್ತ ಈ ಸಾಧಕ ಬಾಲಕ. ಈತ ಹಿಂದೂ ಸಂವತ್ಸರ ಚಕ್ರದ 60 ಸೂತ್ರಗಳನ್ನು ಕೇವಲ 62 ಸೆಕೆಂಡ್​ಗಳಲ್ಲಿ ಹೇಳುತ್ತಾನೆ. 1ನೇ ವಯಸ್ಸಿನಲ್ಲೇ ಜಗತ್ತಿನ ಸಾಧಕ ವ್ಯಕ್ತಿಗಳ ಭಾವಚಿತ್ರ ನೋಡಿ ಹೆಸರು ಹೇಳುವುದು, ಪ್ರಾಣಿ, ಪಕ್ಷಿಗಳನ್ನು ಗುರುತಿಸುವಷ್ಟು ಜ್ಞಾಪಕ ಶಕ್ತಿ ಹೊಂದಿದ್ದ ಈತ ಪ್ರಪಂಚದ 196 ರಾಷ್ಟ್ರಗಳ ರಾಜ್ಯಧಾನಿಗಳ ಹೆಸರು, ಸೌರಮಂಡಲದ ಹೆಸರುಗಳನ್ನು ಅರಳು ಹುರಿದಂತೆ ಹೇಳುತ್ತಾನೆ. 2021 ಏಪ್ರಿಲ್ 24ರಂದು ಹರಿಯಾಣದ ಫರಿದಾಬಾದ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಇಂಡಿಯಾ ಬುಕ್ ಆಫ್ ರೆಕಾಡ್ಸ್ರ್ನಲ್ಲಿ ಪ್ರವೇಶ ಪಡೆದಿದ್ದಾನೆ.

ರಿಯಾಲಿಟಿ ಶೋ ಪ್ರತಿಭೆ

ಈ ಬಾಲಗೆ 11 ವರ್ಷ. ತೆಲುಗು ಜೀ ಟಿವಿ ವಾಹಿನಿಯ ಜ್ಯೂನಿಯರ್ಸ್ ಡಾನ್ಸ್ ರಿಯಾಲಿಟಿ ಶೋ ವಿಜೇತೆ. ‘ಡ್ಯಾನ್ಸ್ ಜೋಡಿ ಡ್ಯಾನ್ಸ್’ ರಿಯಾಲಿಟಿ ಶೋ ರನ್ನರ್ ಅಪ್, ಕನ್ನಡ ಟಿವಿ ವಾಹಿನಿಯ ಮೂರು ಡ್ಯಾನ್ಸ್ ರಿಯಾಲಿಟಿ ಶೋಗಳ ಪೈಕಿ ಒಂದರಲ್ಲಿ ಈಕೆಗೆ ಮೂರನೇ ಸ್ಥಾನ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಉಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಹಾಲಕ್ಷ್ಮೀ ನೃತ್ಯಕಲೆಯನ್ನು ಆವಾಹನೆ ಮಾಡಿಕೊಂಡ ಅಪ್ಪಟ ಗ್ರಾಮೀಣ ಪ್ರತಿಭೆ. ಬಡಕುಟುಂಬದ ಹಿನ್ನೆಲೆಯನ್ನೂ ಮೀರಿ ಸೋದರ ಮಾವ ಕರಿಬಸಪ್ಪ ಮಾರ್ಗದರ್ಶನದಲ್ಲಿ ಅಲ್ಪಸಮಯದಲ್ಲೇ ನೆರೆಯ ಆಂಧ್ರಪ್ರದೇಶದಲ್ಲಿ ಮನೆಮಾತಾಗಿದ್ದಾಳೆ. ‘ದಂತಪುರಾಣ’ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಇನ್ನೂ ತೆರೆ ಕಾಣಬೇಕಿದೆ. ಪ್ರಸ್ತುತ ತಮಿಳಿನಲ್ಲಿ ‘ಮಾ’ ಎಂಬ ಚಿತ್ರದಲ್ಲಿ ನಾಯಕನ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾಳೆ. 2018ರಿಂದ ರಿಯಾಲಿಟಿ ಶೋಗಳಲ್ಲಿನ ಅಪರೂಪದ ನೃತ್ಯ ಪ್ರದರ್ಶನಗಳ ಮೂಲಕ ಮಹಾಲಕ್ಷ್ಮೀ ತೀರ್ಪಗಾರರ ಮನಸೂರೆಗೊಂಡಿದ್ದಾಳೆ.

ರೈತ ಕಾಳಜಿಯ ಬಾಲಕಿ

ದೇಹದ ಕಾಯಿಲೆಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ನಾವು ಮಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇವೆ. ರೈತರು ಮಣ್ಣಿನ ಪರೀಕ್ಷೆ ಮಾಡಿಸದೇ ಕೃಷಿ ಮಾಡುವುದರಿಂದ ಆಗುವ ಅಪಾಯದ ಬಗ್ಗೆ ಬೆಳಕು ಚೆಲ್ಲುವ ಪ್ರಾಜೆಕ್ಟ್ ಮೂಲಕ ದಾವಣಗೆರೆಯ ಬಾಲಕಿ ಆಪ್ತಾ ಶೆಟ್ಟಿ ಗಮನ ಸೆಳೆದಿದ್ದಾಳೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್​ನಿಂದ ಈ ವರ್ಷ ನಡೆದ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ತೀರ್ಪಗಾರರ ಮೆಚ್ಚುಗೆ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಪ್ರತಿಭೆ ಮೆರೆದಿದ್ದಾಳೆ. ದಾವಣಗೆರೆಯ ಚೇತನಾ ಒಲಂಪಿಯಾಡ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಆಪ್ತಾ ಶೆಟ್ಟಿಯ ತಂದೆ ವಿಶ್ವಾಂಬರ ಶೆಟ್ಟಿ ವೈದ್ಯರು, ತಾಯಿ ಪರಿಣಿತಾ ಶೆಟ್ಟಿ ಶಿಕ್ಷಕಿ. ಹರಿಹರ ತಾಲೂಕು ಸತ್ಯನಾರಾಯಣ ಕ್ಯಾಂಪ್​ನಲ್ಲಿ ಅಧ್ಯಯನ ನಡೆಸಿ, 100 ರೈತರನ್ನು ಸಂದರ್ಶನ ಮಾಡಿದ ಈ ಬಾಲಕಿ, ಬಹುತೇಕ ಕೃಷಿಕರು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಾಡುತ್ತಿರುವುದನ್ನು ಗಮನಿಸಿ, ಮಣ್ಣಿನ ಪರೀಕ್ಷೆ ಕಡ್ಡಾಯಗೊಳಿಸಬೇಕು ಎಂದು ಪ್ರತಿಪಾದಿಸಿದ್ದಾಳೆ.

ವಯಸ್ಸು ಎಂಟು, ಗಳಿಸಿದ ಪದಕ 60!

ಈತನಿಗೆ ಎಂಟು ವರ್ಷ ವಯಸ್ಸು. ಆಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಕೇಟಿಂಗ್ ಟೂರ್ನಿಗಳಲ್ಲಿ ಮಿಂಚುತ್ತಿದ್ದಾನೆ. ಒಂದಲ್ಲ, ಎರಡಲ್ಲ, 60ಕ್ಕೂ ಅಧಿಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಇದು, ಬೆಳಗಾವಿ ನಗರದ ಸ್ಕೇಟಿಂಗ್​ಪಟು ಅವನೀಶ ಕಾಮಣ್ಣವರ ಯಶೋಗಾಥೆ. ಬೆಳಗಾವಿಯ ಗುಡ್ ಶೆಫರ್ಡ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮೆರೆಯುತ್ತಿದ್ದಾನೆ. ಈವರೆಗೆ ರಾಷ್ಟ್ರಮಟ್ಟದ ಟೂರ್ನಿಯಲ್ಲಿ 5 ಚಿನ್ನ, 2 ಬೆಳ್ಳಿ, 1 ಕಂಚು ಸೇರಿ 8 ಪದಕ, ರಾಜ್ಯಮಟ್ಟದಲ್ಲಿ 3 ಚಿನ್ನ, ತಲಾ 1 ಬೆಳ್ಳಿ, ಕಂಚು ಸೇರಿ 5 ಪದಕ ಗಳಿಸಿದ್ದಾನೆ. ಜಿಲ್ಲಾಮಟ್ಟದಲ್ಲಿ 50ಕ್ಕೂ ಅಧಿಕ ಪದಕ ಪಡೆದಿದ್ದಾನೆ.

ಬಹುಮುಖ ಪ್ರತಿಭೆ ಇಶಾನ್

ಗಣಿತ, ಕರಾಟೆ, ರನ್ನಿಂಗ್​ರೇಸ್ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಿರುವ ಕಲಬುರಗಿ ಸ್ವಾಮಿ ನಾರಾಯಣ ಗುರುಕುಲದ ವಿದ್ಯಾರ್ಥಿ 14 ವರ್ಷದ ಇಶಾನ್ ಎಸ್. ಬುಕ್ಕೆಗಾರ, ಗಣಿತ ಕ್ಷೇತ್ರದಲ್ಲಿ ಸಾಧನೆ ಮೆರೆದಿದ್ದಾನೆ. ಥೈಲ್ಯಾಂಡ್​ನ ಬ್ಯಾಂಕಾಕ್​ನಲ್ಲಿ ಗ್ಲೋಬಲ್ ಅಸೋಸಿಯೇಷನ್ ಆಫ್ ಜಪಾನೀಸ್ ಸೋರೋಬನ್ ಆಂಡ್ ಮೆಂಟಲ್ ಅರ್ಥಮೆಟಿಕ್ (ಗಾಜ್ಮಾ ) ಸಂಸ್ಥೆ ಹಮ್ಮಿಕೊಂಡ ಸೋರೋಬನ್ ಮತ್ತು ಮಾನಸಿಕ ಕ್ಷಮತೆ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಜೈಪುರದಲ್ಲಿ ನಡೆದ ರಾಷ್ಟ್ರೀಯ ಅಬ್ಯಾಕಸ್ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ, ಇತ್ತೀಚೆಗೆ ಕಲ್ಯಾಣ ಕರ್ನಾಟಕ ಕ್ರಿಕೆಟ್ ಕ್ಲಬ್ ಹಮ್ಮಿಕೊಂಡಿದ್ದ ಅಂಡರ್ 14 ಕ್ರಿಕೆಟ್ ಪ್ರೀಮಿಯರ್ ಲೀಗ್​ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದಿದ್ದಾನೆ. ತಾಯಿ-ತಂದೆ ಕೆಪಿಟಿಸಿಎಲ್​ನಲ್ಲಿ ಎಇಇಗಳಾಗಿದ್ದಾರೆ.

ಮಲ್ಲಕಂಬದಲ್ಲಿ ಕಾರ್ತಿಕ್ ಕೀರ್ತಿ

ದೈಹಿಕ ಕಸರತ್ತಿನ ಸ್ಪರ್ಧೆಯಾದ ಮಲ್ಲಕಂಬದಲ್ಲಿ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಕಾರ್ತಿಕ್ ರಾಮಪ್ಪ ವಾಲಿಕಾರ ವಿವಿಧ ಆಸನ ಪ್ರದರ್ಶಿಸಿ ರಾಷ್ಟ್ರಮಟ್ಟದಲ್ಲಿ ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಬೆಳಗಿದ್ದಾನೆ. 5ನೇ ತರಗತಿ ಓದುತ್ತಿರುವ 11 ವರ್ಷದ ಬಾಲಕ ಕಾರ್ತಿಕ್ ಮಲ್ಲಕಂಬದಲ್ಲಿ ಪದ್ಮಾಸನ, ವೀರಭದ್ರ ಆಸನ, ಚಕೋರ ಸಂಖ್ಯೆ, ಬ್ಯಾಕ್-ಫಂಟ್ ಪ್ಲಾಂಕ್ ಸೇರಿ ಹಲವು ಆಸನಗಳನ್ನು ಸಲೀಸಾಗಿ ಮಾಡುತ್ತಾನೆ. ದೈಹಿಕ ಶಿಕ್ಷಕ ಸಿ.ಕೆ.ಚನ್ನಾಳ ಮಾರ್ಗದರ್ಶನದಿಂದ ಸ್ಪೂರ್ತಿ ಪಡೆದ ಕಾರ್ತಿಕ್ ವಾಲಿಕಾರ ಚಿಕ್ಕವಯಸ್ಸಿನಲ್ಲಿ ಮಲ್ಲಕಂಬ ಸೆಳೆತಕ್ಕೆ ಒಳಗಾಗಿದ್ದಾನೆ. ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಮಧ್ಯಪ್ರದೇಶದಲ್ಲಿ ಭಾರತೀಯ ಮಲ್ಲಕಂಬ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ತೋರಿದ್ದಾನೆ.
ವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net