‘ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ’ ಎನ್ನುವ ವಿದ್ಯಾರ್ಥಿಗಳೇ ಗಮನಿಸಿ- ಓದಿನ ಸಂಗಾತಿ ಟಿಪ್ಪಣಿ

STUDENTS EXAM 15 FEB 20
Published on

10 ಸಲ ಓದುವುದಕ್ಕಿಂತ ಒಂದು ಸಲ ಬರೆದರೆ ನೆನಪಿನಲ್ಲಿ ಉಳಿಯುತ್ತದೆ ಎಂಬ ಮಾತು ನೀವೂ ಕೇಳಿರಬೇಕಲ್ಲವೆ? ಪರೀಕ್ಷೆ ಸಮೀಪಿಸುತ್ತಿರುವ ಈ ದಿನಗಳಲ್ಲಿ, ಪದೇ ಪದೇ ಓದುವ ಬದಲು ಒಮ್ಮೆ ಓದಿದ್ದನ್ನು ಬರೆದು, ಜತೆಗೆ ಟಿಪ್ಪಣಿ ಮಾಡಿ ನೋಡಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಅಷ್ಟಕ್ಕೂ ಬರೆಯುವುದು ಏಕೆ, ಟಿಪ್ಪಣಿ ಹೇಗೆ ಮಾಡಬೇಕು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

‘ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ’... ಇದು ಬಹುತೇಕ ವಿದ್ಯಾರ್ಥಿಗಳ ಮಾತು. ಹೌದು, ಓದು ಕೇವಲ ಯಾಂತ್ರಿಕವಾದಾಗ ಓದಿದ ಅಂಶಗಳು ಅಗತ್ಯ ಎನಿಸಿದಾಗ ಸ್ಮರಣೆಗೆ ಬರುವುದು ಕಷ್ಟವಾಗುತ್ತದೆ. ಇದಕ್ಕೆ ಪರ್ಯಾಯ ತಂತ್ರಗಾರಿಕೆಯನ್ನು ಅನುಸರಿಸಿದರೆ ಮಾತ್ರ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಅಂತಹ ಕೆಲವು ಪರ್ಯಾಯ ಮಾರ್ಗಗಳೆಂದರೆ ಪಠ್ಯವನ್ನು ಹೈಲೈಟ್ ಮಾಡುವುದು ಹಾಗೂ ಪದಗಳ ಕೆಳಗೆ ಗೆರೆ ಎಳೆಯುವುದು. ಆದರೆ ಇವುಗಳಿಗಿಂತ ಭಿನ್ನವಾದ ಹಾಗೂ ಪರಿಣಾಮಕಾರಿಯದ ತಂತ್ರಗಾರಿಕೆ ಎಂದರೆ ಟಿಪ್ಪಣಿ ಮಾಡಿಕೊಳ್ಳುವುದು. ಅಂದರೆ ಓದಿದ ಅಂಶವನ್ನು ನಿಮ್ಮದೇ ಸ್ವಂತ ರೀತಿಯಲ್ಲಿ ನೋಟ್ ಪುಸ್ತಕ ಅಥವಾ ಹಾಳೆಯಲ್ಲಿ ಬರೆದುಕೊಳ್ಳುವುದು. ವಿಷಯವನ್ನು ಅರ್ಥೈಸಿಕೊಳ್ಳಲು ಮತ್ತು ಅಗತ್ಯ ಎನಿಸಿದಾಗ ಅದನ್ನು ಪ್ರಸ್ತುತ ಪಡಿಸಲು ಟಿಪ್ಪಣಿ ಸಹಕಾರಿ.

ಟಿಪ್ಪಣಿಯ ಮಹತ್ವ: ಟಿಪ್ಪಣಿಯು ಸದಾ ನಿಮ್ಮನ್ನು ಜಾಗೃತ ಓದುಗರನ್ನಾಗಿಸುತ್ತದೆ. ಓದಿನ ಹರವನ್ನು ವಿಸ್ತರಿಸುತ್ತದೆ. ದೇಹ ಮತ್ತು ಮನಸ್ಸು ಕ್ರಿಯಾಶೀಲ ಆಗಿರುವಂತೆ ಮಾಡುತ್ತದೆ. ಓದಿನ ವೇಳೆಯ ಅರೆ ನಿದ್ರಾವಸ್ಥೆಯನ್ನು ದೂರ ಮಾಡುತ್ತದೆ. ವಿವರವಾದ ಮಾಹಿತಿ ಸಂಗ್ರಹಣೆಗೆ ಸಹಕಾರಿ. ಅಧ್ಯಯನ ಮತ್ತು ಸಂಶೋಧನಾತ್ಮಕ ಬರಹಗಳಿಗೆ ಅನುಕೂಲ. ಕಲಿಕೆಯ ವಿಮರ್ಶೆಗೆ ಸಹಕಾರಿ. ಮರೆವಿನ ಭಯ ದೂರ ಮಾಡುತ್ತದೆ. ಪರೀಕ್ಷೆ ವೇಳೆಯ ಆತ್ಮಮಿತ್ರ. ್ಣದಿದ ಮಾಹಿತಿಯನ್ನು ಒತ್ತಿ ಹೇಳುತ್ತದೆ.ಕಲಿಕೆಯನ್ನು ಸುಲಭವಾಗಿಸುತ್ತದೆ. ಗ್ರಹಿಕಾ ಶಕ್ತಿಯನ್ನು ಹೆಚ್ಚಿಸುತ್ತದೆ. ಗಮನವನ್ನು ಕೇಂದ್ರೀಕರಿಸುತ್ತದೆ. ಸೃಜನಶೀಲ ಬರವಣಿಗೆಗೆ ಸಹಕಾರಿಯಾಗುತ್ತದೆ. ಕಲಿಕೆಯ ಹೊಸ ವಿಧಾನಗಳನ್ನು ಪರಿಚಯಿಸುತ್ತದೆ. ವಿಚಾರ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಿಷಯದ ಆಳವಾದ ಜ್ಞಾನ ಗ್ರಹಿಕೆ ಇದರಿಂದ ಸಾಧ್ಯ.

ಬರೆಯುವುದರಿಂದ ಎಷ್ಟೊಂದು ಪ್ರಯೋಜನ...: ಓದಿಗಿಂತ ಬರೆಯುವುದು ತುಂಬಾ ಮುಖ್ಯ ಏಕೆ ಗೊತ್ತಾ? ನೀವೇ ಯೋಚನೆ ಮಾಡಿ ನೋಡಿ. ಓದುವಾಗ ಮನಸ್ಸು ಅತ್ತಿತ್ತ ಹರಿಯುವುದಿದೆ. ಕೆಲವೊಂದು ಸಬ್ಜೆಕ್ಟ್ ಗಳು ನಿಮಗೆ ಬೋರಿಂಗ್ ಇರಬಹುದು, ಇನ್ನು ಕೆಲವು ಕಷ್ಟ ಎನಿಸಬಹುದು. ಆದರೆ ಪಾಸ್ ಆಗಬೇಕಾದರೆ ಓದಲೇಬೇಕಾದ ಅನಿವಾರ್ಯತೆ ಇದೆ. ಅಂಥ ಸಮಯದಲ್ಲಿ ನೀವು ಓದುತ್ತಿದ್ದರೂ ತಲೆ ಮಾತ್ರ ಎಲ್ಲೋ ಓಡುತ್ತಿರುತ್ತದೆ. ಹೀಗಾದಲ್ಲಿ, ಓದು ನಿಮ್ಮ ಮೆದುಳಿಗೆ ರೆಜಿಸ್ಟರ್ ಆಗುವುದೇ ಇಲ್ಲ. ಪುಟ ತಿರುವು ಹಾಕಿದಾಗ, ಹಿಂದಿನ ಪುಟದಲ್ಲಿ ಏನಿತ್ತು ಎನ್ನುವುದೇ ಮರೆತುಹೋಗುತ್ತದೆ. ಇದು ನಿಮ್ಮ ಅನುಭವಕ್ಕೂ ಬಂದಿರಲಿಕ್ಕೆ ಸಾಕಲ್ಲವೆ? ಆದ್ದರಿಂದ ನಿಮಗೆ ಬೋರಿಂಗ್ ಅಥವಾ ಕಷ್ಟ ಎನಿಸುವ ಸಬ್ಜೆಕ್ಟ್ ಗಳನ್ನು ಬರೆದು ನೋಡಿ. ನೀವು ಬರೆಯುವಾಗ ಮನಸ್ಸು ಬೇರೆ ಕಡೆ ಹರಿಸಿದರೂ, ಓದಿದ್ದನ್ನು ನೆನಪು ಮಾಡಿಕೊಳ್ಳಬೇಕಾಗುವ ಕಾರಣ, ಗಮನ ಪೂರ್ತಿ ಅದರೆಡೆ ಕೇಂದ್ರೀಕೃತವಾಗಿರುತ್ತದೆ. ಒಂದು ವೇಳೆ ಬರೆಯುವ ಸಂದರ್ಭದಲ್ಲಿ ಯಾವುದಾದರೊಂದು ಪಾಯಿಂಟ್ಸ್ ನೆನಪಿಗೆ ಬರದೇ ಹೋದಲ್ಲಿ ಪುನಃ ನೀವು ಪುಸ್ತಕ ತೆರೆದು ನೋಡಬೇಕಾಗುತ್ತದೆ. ಅವೆಲ್ಲ ಪ್ರಕ್ರಿಯೆಗಳು ನಿಮಗೆ ಆ ವಿಷಯದ ಕಡೆ ಇನ್ನಷ್ಟು ಗಮನ ಹರಿಸುವಂತೆ ಮಾಡುತ್ತವೆ. ಅಲ್ಲಿಗೆ ಓದು ಕೂಡ ಆಯಿತು, ಬರವಣಿಗೆ ಕೂಡ ಆಯಿತು.

ಇನ್ನೂ ಮುಖ್ಯವಾದ ವಿಷಯವೆಂದರೆ ಅಕ್ಷರ ಮುದ್ದುಮುದ್ದಾಗಿರಬೇಕು ಎಂದು ಎಲ್ಲರೂ ಬಯಸುತ್ತೀರಿ ಅಲ್ಲವೆ? ಅಂಥವರಿಗೆ ಕೂಡ ಟಿಪ್ಪಣಿ ತಯಾರಿಕೆ ತುಂಬಾ ಸಹಾಯ ಮಾಡುತ್ತದೆ. ಪದೇ ಪದೇ ಬರೆಯುವುದರಿಂದ ಬರವಣಿಗೆ ಕೂಡ ಅಂದವಾಗುತ್ತ ಹೋಗುತ್ತದೆ.

ಟಿಪ್ಪಣಿ ಟಿಪ್ಸ್

ಪಠ್ಯ ಅಥವಾ ನಿಯೋಜಿತ ಪುಸ್ತಕ ಓದುವಾಗ ಈ ತಂತ್ರಗಳನ್ನು ಅನುಸರಿಸಿ:

01 ಪುಸ್ತಕದ ಓದುವ ಭಾಗವನ್ನು ಪ್ಯಾರಾಗಳಾಗಿ ಅಥವಾ ತುಂಡುಗಳಾಗಿ ವಿಭಾಗಿಸಿಕೊಳ್ಳಿ. ಭಾಗಗಳನ್ನು ಒಂದೊಂದಾಗಿ ಎಚ್ಚರಿಕೆಯಿಂದ ಓದಿ. ಅನಾವಶ್ಯಕವಾಗಿ ಪದ/ಸಾಲುಗಳನ್ನು ಸ್ಕಿಪ್ ಮಾಡಬೇಡಿ. ಪರಿಚಯವಿಲ್ಲದ ಪದಗಳಿದ್ದರೆ ಅವುಗಳ ಅರ್ಥಗ್ರಹಿಸಿಕೊಂಡು ಮುನ್ನಡೆಯಿರಿ. ಅರ್ಥವಾಗದಿದ್ದರೆ ಇನ್ನೊಮ್ಮೆ ಓದಿ.

02 ಓದಿದ ಭಾಗದಲ್ಲಿ ನೀವು ಗಮನಿಸಿದ ಮುಖ್ಯ ಅಂಶಗಳನ್ನು ಹುಡುಕಲು ಪ್ರಯತ್ನಿಸಿ. ಪಠ್ಯದ/ಲೇಖಕನ ಆಶಯವನ್ನು ಸಾಬೀತುಪಡಿಸುವ ಅಂಶಗಳತ್ತ ಚಿತ್ತ ಹರಿಸಿ.

03 ನಿಮಗೆ ಮಹತ್ವದ್ದು ಎನಿಸಿದ ಅಂಶಗಳನ್ನು ನಿಮ್ಮದೇ ಶೈಲಿಯಲ್ಲಿ ಸಂಕ್ಷಿಪ್ತವಾಗಿ ಬರೆದುಕೊಳ್ಳಿ. ಹೆಸರು, ಇಸ್ವಿ, ಅಂಕಿ-ಅಂಶ, ವ್ಯಾಖ್ಯಾನಗಳು ಅಥವಾ ನೀವು ಮುಖ್ಯವೆಂದು ಭಾವಿಸುವ ಅಂಶಗಳನ್ನು ವಿವರವಾಗಿ ಬರೆದುಕೊಳ್ಳಿ.

04 ನೀವು ಯಾವ ಅಂಶವನ್ನು ಮರೆಯುತ್ತವೆಂದು ಭಾವಿಸುವಿರೋ ಅದನ್ನೇ ಟಿಪ್ಪಣಿ ಮಾಡಿಕೊಳ್ಳಿ.

05 ನಿಯೋಜಿತ ಪಠ್ಯ ಹಾಗೂ ಬರೆದುಕೊಂಡ ಅಂಶವನ್ನು ಓದಿ ತುಲನೆ ಮಾಡಿಕೊಳ್ಳಿ. ಬೇಡವಾದ ಅಂಶವನ್ನು ತೆಗೆದುಹಾಕಿ, ಬಿಟ್ಟರುವ ಅಂಶವನ್ನು ಸೇರಿಸಿಕೊಳ್ಳಿ.

06 ಟಿಪ್ಪಣಿಯಲ್ಲಿ ಪ್ರಮುಖ ಅಂಶದ ಕೆಳಗೆ ಗೆರೆ ಎಳೆಯಿರಿ ಅಥವಾ ಹೈಲೈಟ್ ಮಾಡಿಕೊಳ್ಳಿ.

07 ಮನೆಯಲ್ಲಿ ಕಂಪ್ಯೂಟರ್ ಇದೆ ಎಂದು ಟಿಪ್ಪಣಿಯನ್ನು ಟೈಪ್ ಮಾಡಲು ಹೋಗಬೇಡಿ. ಕೈಬರಹದ ಟಿಪ್ಪಣಿ ತುಂಬಾ ಒಳ್ಳೆಯದು.

08 ಟಿಪ್ಪಣಿಯಲ್ಲಿ ಸಂಕ್ಷಿಪ್ತಾಕ್ಷರ, ಚಿತ್ರ, ಸಂಕೇತಗಳಿರಲಿ.

09 ಅಗತ್ಯ ಎನಿಸಿದಾಗ ಟಿಪ್ಪಣಿಯ ಮೂಲ ರೂಪಕ್ಕೆ ಮರಳಲು ಸುಳಿವುಗಳಿರಲಿ.

10 ಟಿಪ್ಪಣಿ ಬುಲೆಟ್ ಪಾಯಿಂಟ್ ರೂಪದಲ್ಲಿದ್ದರೆ ಉತ್ತಮ.

11 ಟಿಪ್ಪಣಿಯನ್ನು ಆಗಾಗ್ಗೆ ಓದುತ್ತಾ ಇರಿ. ಹೊಸ ಆಲೋಚನೆಗಳಿದ್ದರೆ ಸಂಕ್ಷಿಪ್ತವಾಗಿ ಸೇರಿಸಿ.

12 ಟಿಪ್ಪಣಿ ಸ್ಪಷ್ಟವಾಗಿರಲಿ, ಕೈಬರಹ ಸುಂದರವಾಗಿರಲಿ.

ಇವು ಕೆಲವು ತಂತ್ರಗಳು ಮಾತ್ರ. ಟಿಪ್ಪಣಿ ಮಾಡಿಕೊಳ್ಳಲು ತೊಡಗಿದಾಗ, ಸೂಕ್ತ ಎನಿಸಿದ ರೀತಿಯಲ್ಲಿ ಮಾಡಿಕೊಳ್ಳಿ. ಉತ್ತಮ ಟಿಪ್ಪಣಿ ಖಂಡಿತವಾಗಿ ನಿಮಗೆ ತುಂಬಾ ಸಹಕಾರಿಯಾಗುತ್ತದೆ.

ಆರ್​. ಬಿ.ಗುರುಬಸವರಾಜ, ಶಿಕ್ಷಕರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net