ಜೀವಿಗಳಿಲ್ಲದ ಜಾಗವಿದು; ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರದೇಶ!

JEEVI
Published on

ದಲ್ಲೋಲ ಎನ್ನುವುದು ಪೂರ್ವ ಆಫ್ರಿಕಾದ ಇಥಿಯೋಪಿಯಾದಲ್ಲಿರುವ ಒಂದು ಪ್ರದೇಶ. ಈ ಪ್ರದೇಶದ ವಿಶೇಷತೆ ಎಂದರೆ ಇಲ್ಲಿ ಮನುಷ್ಯ, ಪ್ರಾಣಿ, ಪಕ್ಷಿಗಳಷ್ಟೇ ಅಲ್ಲ... ಸೂಕ್ಷ್ಮಾತಿಸೂಕ್ಷ್ಮ ಜೀವಿಗಳೂ ಬದುಕಲಾರವು. ಈ ವಿಚಿತ್ರ ಪ್ರದೇಶಗಳ ಬಗ್ಗೆ ಅನೇಕ ವರ್ಷಗಳಿಂದ ಸಂಶೋಧನೆ ನಡೆಯುತ್ತಲೇ ಇದೆ. ಇಲ್ಲಿ ಜೀವಿಗಳು ಇರಬಹುದು ಎಂಬ ಫ್ರಾನ್ಸ್​ನ ವಿಜ್ಞಾನಿಗಳ ನಂಬಿಕೆಯೂ ಹುಸಿಯಾಗಿದೆ. ಅಷ್ಟಕ್ಕೂ ಒಂದು ಸೂಕ್ಷ್ಮ ಜೀವಿಯನ್ನೂ ಬದುಕಲು ಬಿಡದ ಈ ಪ್ರದೇಶದಲ್ಲಿ ಅಂಥದ್ದೇನಿದೆ?

ಭೂಮಂಡಲದಲ್ಲಿಯೇ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿರುವ ಪ್ರದೇಶ ದಲ್ಲೋಲ ಎಂಬ ಕುಖ್ಯಾತಿ ಗಳಿಸಿದೆ. ಅದು ಎಂಥ ತಾಪಮಾನ ಎನ್ನುತ್ತೀರಿ. ಚುಮುಚುಮು ಚಳಿಗಾಲದಲ್ಲಿಯೇ ಇಲ್ಲಿಯ ತಾಪಮಾನ 45 ಡಿಗ್ರಿಯನ್ನು ದಾಟಿರುತ್ತದೆ. ಅಂದರೆ ನಮ್ಮಲ್ಲಿ ಬಿರು ಬೇಸಿಗೆ ಕಾಲದಲ್ಲಿಯೂ ಇಷ್ಟೊಂದು ತಾಪಮಾನ ಇರಲಾರದು. ಅಂಥ ಉಷ್ಣ ಪ್ರದೇಶವಿದು. ಅನೇಕ ಬಿಸಿನೀರಿನ ಬುಗ್ಗೆಗಳು , ಅತಿಹೆಚ್ಚು ಲವಣ ಮತ್ತು ಆಮ್ಲ ಪ್ರಮಾಣವನ್ನು ಹೊಂದಿರುವ ಕೆರೆಗಳು ಇಲ್ಲಿದೆ.

ಇಲ್ಲಿರುವ ಕೆರೆಗಳ ನೀರು ಅತ್ಯಂತ ಅಪಾಯಕಾರಿ. ಬಳಸಲು ಯೋಗ್ಯವಾಗಿಲ್ಲ. ಅತ್ಯಂತ ಪರಿಶುದ್ಧ ನೀರಿನ ಪಿ.ಹೆಚ್ (ಪೊಟೆನ್​ಷಿಯಲ್ ಆಫ್ ಹೈಡ್ರೋಜನ್) ಏಳು ಪ್ರಮಾಣದಷ್ಟು ಇರುತ್ತದೆ. ನಾವು ಕುಡಿಯುವ ನೀರಿನ ಪಿ.ಹೆಚ್ ಏಳೂವರೆ ಇರಲೇಬೇಕು. ಆದರೆ ಈ ಪ್ರದೇಶದಲ್ಲಿನ ಪ್ರಮಾಣ ಶೂನ್ಯಕ್ಕಿಂತಲೂ ಕೆಳಗಿದೆ!

ದಲ್ಲೋಲದ ಭೂಭಾಗದಲ್ಲಿ ಮೆಗ್ನೀಷಿಯಂ ಹೇರಳವಾಗಿದೆ. ಭೂಮಿಯೊಳಗಿನಿಂದ ನಿರಂತರವಾಗಿ ಆಮ್ಲಯುಕ್ತ ಅನೀಲಗಳು ಹೊರಹೊಮ್ಮುತ್ತಿರುತ್ತವೆ. ಇದರ ಪರಿಣಾಮದಿಂದ ಗಾಳಿಯಲ್ಲಿ ಈ ಅನಿಲಗಳು ಸೇರಿಕೊಂಡು ಇಲ್ಲಿನ ವಾತಾವರಣ ಕಲುಷಿತವಾಗಿಸಿವೆೆ. ಈ ಜಾಗ ಸಮುದ್ರ ಮಟ್ಟಕ್ಕಿಂತ 410 ಅಡಿ ಕೆಳಗಿದ್ದು ಇಲ್ಲಿನ ಕೆರೆಗಳೆಲ್ಲ ತಮ್ಮೊಳಗೆ ನಡೆಯುವ ನಿರಂತರ ರಾಸಾಯನಿಕ ಚಟುವಟಿಕೆಗಳಿಂದ ಹಳದಿ, ನೀಲಿ ಹೀಗೆ ಬಣ್ಣ ಬದಲಿಸಿಕೊಳ್ಳುತ್ತಿರುತ್ತವೆ. ಹೀಗೆ ಯಾವುದೇ ಜೀವಿಯೂ ಬದುಕಿರಲಾರದಂತಹ ಸ್ಥಿತಿ ಇದೆ.

ಅನ್ಯಲೋಕದಲ್ಲಿ ಜೀವಿಗಳು ಇರಬಹುದೇ ಎಂಬ ಹುಡುಕಾಟ ನಡೆಸುವಾಗ ಮೊದಲು ಗಮನ ಹರಿಸುವುದು ಅಲ್ಲಿ ನೀರು ಮತ್ತು ಗಾಳಿಯ ಲಭ್ಯತೆ ಇವೆಯೇ ಎಂದು. ಇವಷ್ಟೇ ಜೀವಿಗಳ ಇರುವಿಕೆಯ ಕುರುಹುಗಳೆಂದು ಬಲವಾಗಿ ನಂಬಲಾಗಿದೆ. ಆದರೆ ದಲ್ಲೋಲ ಪ್ರದೇಶದಲ್ಲಿ ಇವೆಲ್ಲವೂ ಇದೆ, ಆದರೆ ಮನುಷ್ಯರು ವಾಸವಿಲ್ಲ. ಇದು ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಸವಾಲಾಗಿದೆ. ಜೀವಿಗಳ ಪತ್ತೆಗೆ ಬೇರೆ ರೀತಿಯಲ್ಲಿಯೂ ಯೋಚನೆ ಮಾಡಬೇಕಾಗುತ್ತದೆ ಎಂಬುದನ್ನು ದಲ್ಲೋಲ ತೋರಿಸಿಕೊಟ್ಟಿದೆ.

| ಸುನೀಲ್ ಬಾರ್ಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net