ಕರೊನಾ ಮೂರನೇ ಅಲೆ, ಮಕ್ಕಳಿಗಿಲ್ಲ ಆತಂಕ...

Third wave
Published on
ಕರೊನಾ ಮೂರನೇ ಅಲೆ ಅಂದಾಕ್ಷಣ ಎಲ್ಲರ ಮನದಲ್ಲೂ ಮಕ್ಕಳ ರಕ್ಷಣೆ ಹೇಗೆ ಎಂಬ ಆತಂಕಭರಿತ ಪ್ರಶ್ನೆ ಮೂಡುತ್ತೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಸಂತಸದ ಸುದ್ದಿ ಸಿಕ್ಕಿದೆ. ಈ ಅಲೆ ಮಕ್ಕಳ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲವಂತೆ. ನೂರರಲ್ಲಿ ಇಬ್ಬರಿಗೆ ಮಾತ್ರ ತೀವ್ರತರ ಲಕ್ಷಣಗಳು ಕಾಣಿಸುತ್ತವೆಯಾದರೂ ಸಾವು ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ಆಗಸ್ಟ್ ಕೊನೇ ವಾರದಲ್ಲಿ ಈ ಅಲೆ ರಾಜ್ಯಕ್ಕೆ ಬರಲಿದೆ ಎನ್ನುತ್ತಾರೆ ತಜ್ಞರು.

| ಹರೀಶ್ ಬೇಲೂರು

ಕರೊನಾ ಮೊದಲನೇ ಅಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚು ಸೋಂಕು ತಗುಲಿತ್ತು. 2ನೇ ಅಲೆಯಲ್ಲಿ ಹಿರಿಯ ನಾಗರಿಕರು ಎಚ್ಚರಿಕೆ ವಹಿಸಿ ಲಸಿಕೆ ಪಡೆದರು. ಪರಿಣಾಮ ಈ ಹಂತ ಹಿರಿಯರ ಬದಲು ಮಧ್ಯ ವಯಸ್ಸಿನ ಜನರನ್ನು ಹೆಚ್ಚು ಬಾಧಿಸಿತ್ತು. ಈಗ ಮಧ್ಯ ವಯಸ್ಕರೂ ಲಸಿಕೆ ಪಡೆಯುತ್ತಿದ್ದಾರೆ. 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಬಂದಿಲ್ಲ. ಸದ್ಯ 3ನೇ ಅಲೆಯು ಮಕ್ಕಳ ಜೀವಕ್ಕೆ ಕುತ್ತು ತರಲಿದೆ ಎಂಬ ಭೀತಿ ಜನರಲ್ಲಿ ದಟ್ಟವಾಗಿ ಆವರಿಸಿದೆ. ಆದರೆ, ಈ ಅಲೆ ಮಕ್ಕಳ ಮೇಲೆ ಅಷ್ಟೇನೂ ಪರಿಣಾಮ ಬೀರಲ್ಲ ಎನ್ನುವ ಮೂಲಕ ತಜ್ಞರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಸೋಂಕು ತಗುಲಿದ ವಯಸ್ಕರಲ್ಲಿ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗುವ ‘ಸೈಟೋಕಿನ್ ಸ್ಟಾಮ್ರ್’ನಿಂದ ಸಾವಿನ ಸಾಧ್ಯತೆ ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸೈಟೋಕಿನ್ ಸ್ಟಾಮ್ರ್ ಆಗುವುದಿಲ್ಲ. ಎಸಿ2 ರೆಸೆಪ್ಟರ್ಸ್ ಹೆಚ್ಚಿದ್ದರೆ ಗಂಟಲಿನಿಂದ ಶ್ವಾಸಕೋಶದೊಳಗೆ ವೈರಾಣು ಹೋಗಲು ಅನುವು ಮಾಡಿಕೊಡುತ್ತದೆ. ಆದರೆ ಮಕ್ಕಳಲ್ಲಿ ಇದು ಕಡಿಮೆ. ಹಾಗಾಗಿ ಮಕ್ಕಳ ಪಾಲಿಗೆ 3ನೇ ಅಲೆ ಗಂಭೀರ ಪರಿಣಾಮ ತರುವುದಿಲ್ಲ. 2ನೇ ಅಲೆಯಲ್ಲಿ ಲಕ್ಷಾಂತರ ಮಕ್ಕಳಿಗೆ ಕರೊನಾ ಬಂದು ಹೋಗಿದೆ ಎನ್ನುತ್ತಾರೆ ತಜ್ಞರು. ಸಿಂಗಾಪುರ ಮತ್ತು ಇತರ ದೇಶಗಳಲ್ಲಿ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಿದೆ ಎನ್ನಲಾಗಿದೆ. ಆದರೆ, ಶೇ. 100 ಮಕ್ಕಳಿಗೇ ಬರುತ್ತದೆ ಎಂಬ ಬಗ್ಗೆ ಎಲ್ಲಿಯೂ ಪುರಾವೆ ಇಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 40ರಷ್ಟು 18 ವರ್ಷದೊಳಗಿನವರಿದ್ದಾರೆ. ಈ ಪೈಕಿ ಶೇ. 90 ಜನರಿಗೆ ಕಡಿಮೆ ಪ್ರಮಾಣದ ಅಥವಾ ರೋಗ ಲಕ್ಷಣ ರಹಿತ ಕರೊನಾ ಕಾಣಿಸಿಕೊಳ್ಳಲಿದೆ. ಶೇ. 10ರಷ್ಟು ಮಕ್ಕಳಿಗೆ ಗಂಭೀರವಲ್ಲದ ಹಾಗೂ ಶೇ. 1-2ರಷ್ಟು ಜನರಿಗೆ ತೀವ್ರತರ ಲಕ್ಷಣ ಇರಲಿದೆ. ಸಾವಿನ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಕೆಲ ವೈರಾಣುಗಳು ಮಾತ್ರ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. 3ನೇ ಅಲೆಯಲ್ಲಿ ಮಕ್ಕಳಿಗೆ ಮಾತ್ರವೇ ಕರೊನಾ ಬರಲಿದೆ ಎಂಬುದು ಸುಳ್ಳು ಎಂದು ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ್ ಹೇಳಿದ್ದಾರೆ.

ಸರ್ಕಾರ ಸನ್ನದ್ಧ

ಮಕ್ಕಳಿಗೆ ಕರೊನಾ ಬಂದರೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಈಗಾಗಲೇ 16 ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮಕ್ಕಳ ತಜ್ಞರು ಈ ಸಮಿತಿಯಲ್ಲಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ ಕರ್ನಾಟಕ ರಾಜ್ಯ ಶಾಖೆಯು 18 ವರ್ಷದೊಳಗಿನವರ ಮೇಲೆ ವಿಶೇಷ ನಿಗಾ ವಹಿಸಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಮಕ್ಕಳ ವೈದ್ಯರ ಸಂಖ್ಯೆ 3 ಸಾವಿರದಷ್ಟಿದ್ದು, ಚಿಕಿತ್ಸೆ ನೀಡಲು ಸನ್ನದ್ಧರಾಗಿದ್ದಾರೆ.

ಯಾರಿಗೆ ಬರಲಿದೆ?

ಚಿಕಿತ್ಸೆ ಪಡೆಯದಿರುವವರು, ರೋಗ ನಿರೋಧಕ ಶಕ್ತಿ ಇಲ್ಲದಿರುವವರು, ಬಿಪಿ, ಕ್ಯಾನ್ಸರ್, ಮಧುಮೇಹ ಮುಂತಾದ ಕಾಯಿಲೆಗಳಿಂದ ಬಲುತ್ತಿರುವವರಿಗೆ 3ನೇ ಅಲೆಯಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳಲಿದೆ.

ಕರೊನಾ 3ನೇ ಅಲೆ ಮಕ್ಕಳನ್ನೇ ಹೆಚ್ಚು ಬಾಧಿಸುತ್ತದೆ ಅಂತೇನಿಲ್ಲ. 100 ಮಕ್ಕಳಲ್ಲಿ ಇಬ್ಬರಿಗೆ ಮಾತ್ರ ತೀವ್ರತರ ಪರಿಣಾಮವಾಗುತ್ತದೆ. ಉಳಿದವರ ಮೇಲೆ ಅಷ್ಟೇನೂ ಪರಿಣಾಮ ಆಗುವುದಿಲ್ಲ. ಮಕ್ಕಳಿಗೆ ಕೆಮ್ಮು, ಶೀತ ಹಾಗೂ ಆಯಾಸ ಕಾಣಿಸಿಕೊಂಡರೆ ಮೂರ್ನಾಲ್ಕು ದಿನಗಳ ಬಳಿಕ ಗುಣವಾಗುತ್ತದೆ.

| ಡಾ. ಅಶೋಕ್ ದಾತಾರ ಅಧ್ಯಕ್ಷ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಕರ್ನಾಟಕ ಶಾಖೆ

ಕರೊನಾ 3ನೇ ಅಲೆ ಒಂದು ವೇಳೆ ಮಕ್ಕಳಿಗೆ ಬಂದರೂ ತೀವ್ರತೆ ಕಡಿಮೆ. ಲಸಿಕೆ ಪಡೆದಿರುವವರಿಗೆ ಕರೊನಾ ಬಂದರೆ ಶ್ವಾಸಕೋಶಕ್ಕೆ ಸೋಂಕು ತಗುಲುವುದಿಲ್ಲ. ಆಸ್ಪತ್ರೆಗೆ ಹೋಗಬೇಕಿಲ್ಲ. ಆದರೆ, ಲಸಿಕೆ ಪಡೆಯದಿರುವವರಿಗೆ ಇದರ ತೀವ್ರತೆ ಹೆಚ್ಚಿರುತ್ತದೆ.

| ಡಾ. ಸಿ.ಎನ್. ಮಂಜುನಾಥ್ ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ

ಇವುಗಳನ್ನು ತಪ್ಪದೇ ಪಾಲಿಸಿ...

  • ಮಕ್ಕಳಿಗೆ ಶೀತ, ಕೆಮ್ಮು, ಮೈ-ಕೈ ನೋವಿದ್ದರೆ ಉದಾಸೀನ ಬೇಡ, ಕೂಡಲೇ ವೈದ್ಯರನ್ನು ಸಂಪರ್ಕಿಸಿ
  • ಅನಿವಾರ್ಯ ಇದ್ದಲ್ಲಿ ಮಾತ್ರ ಹೊರಗಡೆ ತೆರಳಿ, ಅನಗತ್ಯ ಓಡಾಟ ಬೇಡ
  • ಹೊರಗಿನಿಂದ ಮನೆಗೆ ಬಂದ ತಕ್ಷಣ ಮಕ್ಕಳನ್ನು ಮುಟ್ಟದಿರಿ, ಮೊದಲು ಸ್ನಾನ ಮಾಡಿ
  • ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲಿಸಿ
  • ಮಕ್ಕಳಿಗೆ ಸೋಂಕು ಕಾಣಿಸಿಕೊಂಡರೆ ದೊಡ್ಡವರಿಗೆ ಬರುವ ಸಾಧ್ಯತೆ ಹೆಚ್ಚು, ಲಕ್ಷಣ ಕಂಡ ಕೂಡಲೇ ಪರೀಕ್ಷಿಸಿ ಕೊಳ್ಳಿ
  • ವರದಿ ಬರುವವರೆಗೂ ಕ್ವಾರಂಟೈನ್​ನಲ್ಲಿರಿ, ಪಾಸಿಟಿವ್ ಬಂದರೆ ಕ್ವಾರಂಟೈನ್ ಮುಂದುವರಿಸಿ
  • ಪಾಲಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net