

ಕಾಂಗ್ರೆಸ್ 2022ರ ಡಿಸೆಂಬರ್ನಲ್ಲಿ ಆಯೋಜಿಸಿದ್ದ ‘ಭಾರತ್ ಜೋಡೋ’ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಛೀಮಾರಿ ಹಾಕಿದೆ.
‘ಭಾರತದ 2 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡು 20 ಭಾರತೀಯ ಸೈನಿಕರನ್ನು ಕೊಂದಿದೆ, ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ್ದಾರೆ’ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಈ ರೀತಿ ಹೇಳಿಕೆ ನೀಡುವ ಮೂಲಕ ರಾಹುಲ್ ಭಾರತೀಯ ಸೇನೆಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಉದಯ್ ಶಂಕರ್ ಶ್ರೀವಾಸ್ತವ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆಗೆ ತಡೆ ನೀಡುವಂತೆ ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದರಿಂದ ಪ್ರಕರಣ ಸುಪ್ರೀಂಕೋರ್ಟ್ವರೆಗೆ ಬಂದಿತ್ತು. ಲಖನೌ ನ್ಯಾಯಾಲಯದಲ್ಲಿನ ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆಯಾದರೂ, ಈ ಸಂದರ್ಭದಲ್ಲಿ ನ್ಯಾ. ದೀಪಂಕರ್ ದತ್ತ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಹೇಳಿರುವ ಮಾತುಗಳು ರಾಹುಲ್ ಗಾಂಧಿ ಅವರಿಗೆ ಮಾತ್ರವಲ್ಲ, ಇಡೀ ದೇಶದ ಎಲ್ಲ ರಾಜಕಾರಣಿಗಳಿಗೂ ಮಾರ್ಗದರ್ಶಕವಾಗಿವೆ.
‘ನೀವು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದೀರಿ, ಈ ವಿಷಯವನ್ನು ನೀವು ಸಂಸತ್ತಿನಲ್ಲಿಯೇ ಮಾತನಾಡಬಹುದಿತ್ತು. ಅದರ ಬದಲು ಇಂತಹ ಸೂಕ್ಷ್ಮ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪ ಮಾಡಿದ್ದೀರಿ. ಭಾರತದ 2000 ಚದರ ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದು ನಿಮಗೆ ಹೇಗೆ ಗೊತ್ತಾಯಿತು? ನೀವು ಅಲ್ಲಿಗೆ ಹೋಗಿ ಬಂದಿದ್ದೀರಾ? ನಿಮ್ಮ ಬಳಿ ಅದರ ದಾಖಲೆಗಳಿವೆಯೇ? ಸಾಕ್ಷ್ಯಾಧಾರಗಳಿಲ್ಲದೆ ಇಂಥ ಹೇಳಿಕೆ ಏಕೆ ನೀಡುತ್ತೀರಿ? ನೀವು ನಿಜವಾದ ಭಾರತೀಯರಾಗಿದ್ದರೆ ಹೀಗೆ ಮಾತಾಡುತ್ತಿರಲಿಲ್ಲ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ರಾಹುಲ್ ಅವರ ಹೇಳಿಕೆ ರಾಷ್ಟ್ರೀಯ ಭದ್ರತೆ ಮತ್ತು ಭಾರತೀಯ ಸೇನೆಯ ಸಾಮರ್ಥ್ಯವನ್ನೇ ಕಡೆಗಣಿಸಿ ನೀಡಿದ ಹೇಳಿಕೆಯಂತಿದೆ. ಸಾಮಾನ್ಯ ಜನರೂ ಇಷ್ಟು ಅಜಾಗರೂಕತೆಯಿಂದ ಮಾತನಾಡಬಾರದು. ಅಂಥದ್ದರಲ್ಲಿ ವಿರೋಧ ಪಕ್ಷದ ನಾಯಕನಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಹೇಳಿಕೆ ನೀಡಿದರೆ ಅದರಿಂದ ಸೇನೆಯ ನೈತಿಕ ಸ್ಥೈರ್ಯ ಉಡುಗಿದಂತಾಗುತ್ತದೆ. ದೇಶ ರಕ್ಷಣೆಗಾಗಿ ಗಡಿಯಲ್ಲಿ ಹಗಲಿರುಳು ದುಡಿಯುವ ಯೋಧರ ಉತ್ಸಾಹವನ್ನು ಕುಂದಿಸಿದಂತಾಗುತ್ತದೆ. ಎಂಥದೇ ಸಂದರ್ಭದಲ್ಲಿಯೂ ನಾವು ನಮ್ಮ ದೇಶ ಮತ್ತು ನಮ್ಮ ಸೇನೆಯ ಪರವಾದ ನೀತಿ-ನಿಲುವುಗಳನ್ನು ಹೊಂದಿರಬೇಕು.
ಸುಪ್ರೀಂ ಕೋರ್ಟ್ ಸೋಮವಾರ ಹೇಳಿರುವ ಮಾತುಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಸಾಕ್ಷ್ಯ, ನಿಖರ ಮಾಹಿತಿ ಇಲ್ಲದೆ ಪ್ರಚಾರ ಮತ್ತು ರಾಜಕೀಯ ಲಾಭ ಪಡೆಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ರಾಜಕೀಯ ನಾಯಕರ ಚಾಳಿಯೇ ಆಗಿದೆ. ನ್ಯಾಯಾಲಯದ ಮಾತನ್ನು ರಾಜಕೀಯ ನಾಯಕರು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ, ವಿವೇಚನಾತ್ಮಕ ನಡವಳಿಕೆ ತೋರಬೇಕು.