

ಬಸವಣ್ಣನವರು ವಿಶ್ವಮಾನವರು. ಅವರ ತತ್ತ್ವಗಳು ಜಗತ್ತಿನಾದ್ಯಂತ ಪ್ರಸಾರಗೊಳ್ಳುತ್ತಿವೆ. ಕೆಲ ಬಸವತತ್ತ್ವ ಆಧಾರಿತ ಮಠಗಳು, ಬಸವ ಸಂಘಟನೆಗಳು, ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರಗಳು ಬಸವ ಸಂದೇಶವನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಕಾರ್ಯವನ್ನು ಮುಂದುವರಿಸಿವೆ. ಹೀಗಿದ್ದರೂ, ಕೆಲವರು ಬಸವಣ್ಣನವರಿಗೆ ಅವಮಾನ ಆಗುವಂತಹ ರೀತಿಯಲ್ಲಿ ಅಪ್ರಸ್ತುತ ವಿಚಾರ ಮತ್ತು ಅಪ್ರಬುದ್ಧ ಆಚರಣೆಯಲ್ಲಿ ತೊಡಗಿರುವುದು ದುರದೃಷ್ಟಕರ. ಕರೊನಾ ಇಡೀ ಜಗತ್ತನ್ನು ಆವರಿಸಿಕೊಂಡಿದ್ದು, ಸಂತ್ರಸ್ತರಿಗೆ ತಮ್ಮ ಸಂಘ-ಸಂಸ್ಥೆಯಿಂದ ಮತ್ತು ಮಠ-ಪೀಠದಿಂದ ಯಾವರೀತಿ ಸಹಕರಿಸಬೇಕು ಎಂಬುದನ್ನು ಮರೆತು ತಮ್ಮ ಹಳೆಯ ಚಾಳಿಯಂತೆ ಸಮಾಜದ ಸ್ವಾಸ್ಥ್ಯ ಕದಡುತ್ತಿರುವುದು ಖಂಡನೀಯ. ಈ ಸಂದರ್ಭದಲ್ಲಿ ಸೈದ್ಧಾಂತಿಕ ಚರ್ಚೆಗಳಿಗೆ ವಿರಾಮ ಇಟ್ಟು, ಜನಸೇವೆಗೆ ನಮ್ಮನ್ನು ತೊಡಗಿಸಿಕೊಳ್ಳೋಣವೆಂಬ ಸಂದೇಶ ರವಾನಿಸಿದ್ದರೂ ಕೆಲವರು ಬುದ್ಧಿಪೂರ್ವಕವಾಗಿ ಬಸವಣ್ಣನವರನ್ನು ಅವಮಾನಿಸುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ.
ಬಸವಣ್ಣ ಸಮಸಮಾಜದ ನಿರ್ವಪಕರು. ಸ್ತ್ರೀ ವಿಮೋಚಕರು. ಬಸವತತ್ತ್ವವು ಒಳಗೊಳ್ಳುವ ತತ್ತ್ವವಾಗಿದ್ದು, ಸರ್ವರನ್ನು ಸಮಭಾವ- ಸಮದೃಷ್ಟಿಯಿಂದ ನೋಡುತ್ತದೆ. ಒಂದುಧರ್ಮವು ಸ್ಥಾಪನೆಗೊಂಡು ಎಷ್ಟುವರ್ಷಗಳಾದವು ಎಂಬುದಕ್ಕಿಂತ ಅದು ಜನಸಾಮಾನ್ಯರ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಸಹಕರಿಸುತ್ತದೆ; ಶ್ರಮಿಸುತ್ತದೆಯೆಂಬುದು ಮುಖ್ಯ. ಬಸವಧರ್ಮ, ಶರಣಧರ್ಮ ಮತ್ತು ಲಿಂಗಾಯತ ಧರ್ಮವಲ್ಲದೆ ವೀರಶೈವರಿಗೂ ವಚನಗಳೇ ಸಂವಿಧಾನ. ಕೆಲ ಮಠೀಯ ಪರಂಪರೆಯವರಿಗೆ ಮಾತ್ರ ವೇದಾಗಮಗಳ ವಿಧಾನ. ಅವರವರ ತತ್ತ್ವಧಾರೆಯಂತೆ, ಅವರವರು ನಡೆದುಕೊಳ್ಳಲಿ. ಬಸವತತ್ತ್ವವನ್ನು ಒಪ್ಪಿಕೊಳ್ಳುವ ವಿಶಾಲ ಹೃದಯವಿದ್ದಲ್ಲಿ ಒಪ್ಪಿಕೊಳ್ಳಲಿ: ಇಲ್ಲವಾದರೆ, ಸುಮ್ಮನೆ ಇದ್ದುಬಿಡಲಿ. ಮತೀಯ ಸಂಘರ್ಷಗಳಿಂದ ಸಮಾಜ ವಿಭಜನೆ ಆಗುತ್ತದೆ. ಕೆಲವರಲ್ಲಿ ಧಾರ್ವಿುಕತೆಯೊಟ್ಟಿಗೆ ಶ್ರೀಮಂತಿಕೆ ಇದೆ; ಆದರೆ ಸಾಮಾನ್ಯ ಜ್ಞಾನವಿಲ್ಲ. ಕೆಲವರಲ್ಲಿ ವಿದ್ವತ್ತು ಇದೆ; ವಿಶಾಲ ಹೃದಯ ಇಲ್ಲ. ಅನುಭಾವದ ಅಭಾವ.
ಬಸವಪೂರ್ವದಲ್ಲಿ ಶೈವಧರ್ಮ ಅಥವಾ ಶೈವಸಿದ್ಧಾಂತ ಇತ್ತು. ಬಸವಾದಿ ಶರಣರ ಪ್ರಯತ್ನ, ಪ್ರಯೋಗಶೀಲತೆ ಮತ್ತು ಪರಿವರ್ತನೆಯಿಂದಾಗಿ ಶರಣಧರ್ಮ ಸ್ಥಾಪನೆಗೊಂಡಿತು. ಇದನ್ನೇ ಕೆಲವರು ವೀರಶೈವ ಧರ್ಮವೆಂದು ಕರೆದುಕೊಂಡರು. ಬಹುರೂಪಿ ಚೌಡಯ್ಯನವರು- ‘ಬಸವಣ್ಣನಿಂದ ಬದುಕಿತ್ತೀ ಲೋಕ’ ಎಂದು ಪ್ರತಿಪಾದಿಸಿದ್ದಾರೆ. ಪ್ರಭುದೇವರು- ‘ಯುಗದ ಉತ್ಸಾಹವ ನೋಡಿರೆ’ ಎಂದು ಬಣ್ಣಿಸಿದ್ದಾರೆ. ಬಸವಣ್ಣನವರು ಹುಟ್ಟಿದ ಜಾತಿಯನ್ನು ಮತ್ತು ಹೆತ್ತವರನ್ನು ತೊರೆದುಬರುವ ಕಾರಣವಾದರೂ ಏನಿತ್ತು? ವೈದಿಕತೆಯಲ್ಲಿ ಅಸಮಾನತೆ ಇದ್ದುದರಿಂದ ಬಸವಣ್ಣನವರು ಅದರ ವಿರುದ್ಧ ಬಂಡೆದ್ದರು, ಹೊರಬಂದು ಹೊಸಧರ್ಮ ಸ್ಥಾಪಿಸಿದರು. ಶರಣರು ವೇದಾಗಮ(ಕರ್ಮಕಾಂಡ)ಗಳಲ್ಲಿರಬಹುದಾದ ಶೋಷಣೆ, ಅಸಮಾನತೆ, ಪಶುಬಲಿ, ಮೌಢ್ಯತೆ ಇತ್ಯಾದಿಗಳನ್ನು ವಿರೋಧಿಸಿಲ್ಲವೆ? ಬಸವಣ್ಣನವರಿಂದ ಏನೆಲ್ಲ ಪ್ರಗತಿ ಸಾಧ್ಯವಾಯಿತು ಎಂಬುದನ್ನು ಅಲ್ಲಮಪ್ರಭುದೇವರು ಕೆಳಗಿನಂತೆ ವಿಶ್ಲೇಷಿಸಿದ್ದಾರೆ-
ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯ ಒಬ್ಬ ಶರಣನ!/ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ/ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು/ಅಮರಗಣಂಗಳೆಂದು ಹೆಸರಿಟ್ಟು ಕರೆದು/ಅಗಣಿತಗಣಂಗಳೆಲ್ಲರ ಹಿಡಿತಂದು/ಅಸಂಖ್ಯಾತರೆಂಬ ಹೆಸರಿಟ್ಟು ಕರೆದು/ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮರೆದು ತೋರಿ/ಜಗವರಿಯಲು ಶಿವಾಚಾರದ ಧ್ವಜವನೆತ್ತಿಸಿ/ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು/ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು, ಎನ್ನ ಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ!/ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣನ/ ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ.
ಈ ವಚನವು ಬಸವಣ್ಣ ಒಬ್ಬ ಕಲ್ಯಾಣಕರ್ತ ಎನ್ನುತ್ತದೆ. ಸೃಷ್ಟಿಕರ್ತ ಕಣ್ಣಿಗೆ ಕಾಣಬರುವುದಿಲ್ಲ; ಮಾನವ ಕುಲದಲ್ಲಿರಬಹುದಾದ ಅಂಕು-ಡೊಂಕುಗಳನ್ನು ತಿದ್ದುತ್ತ, ಸರ್ವರಿಗು ಸಮಬಾಳು ಸರ್ವರಿಗು ಸಮಪಾಲು ನಿಯಮವನ್ನು ಅನುಸರಿಸುವ ದಾರ್ಶನಿಕರು ಮಾತ್ರ ಸಮಸಮಾಜ ನಿರ್ವಪಕರು ಮತ್ತು ಸಮಾಜಕರ್ತರು. ಆಗಾಗ ಅವರು ಕಾಣಿಸಿಕೊಳ್ಳುತ್ತಾರೆ. ಬಸವಣ್ಣನವರನ್ನು ನಂದಿ ಅವತಾರವೆಂದು ಭಾವಿಸುವುದಕ್ಕಿಂತ ಅವರೊಬ್ಬ ದಾರ್ಶನಿಕರು ಎಂಬ ಭಾವನೆ ಕೆಲವರಲ್ಲಿ ಮೂಡಬೇಕಾಗಿದೆ. ಶರಣ ಧರ್ಮದಲ್ಲಿ ಅವತಾರದ (ಐ್ಚrಚಠಿಜಿಟ್ಞ) ಕಲ್ಪನೆ ಇರುವುದಿಲ್ಲ; ಬದಲಾಗಿ ಅನಾವರಣ ಪ್ರಕ್ರಿಯೆ ಇರುತ್ತದೆ. ಈಗ ಕೆಲವರು ಸೃಷ್ಟಿಸುತ್ತಿರುವುದು ಅವಾಂತರ.
ಕೆಲವರು ಹಳೆಯ ವಿಚಾರವನ್ನು ಹೊಸದಾಗಿ ಹೇಳುತ್ತಿದ್ದಾರಷ್ಟೆ. ಅವು ಪೂರ್ವಾಗ್ರಹಪೀಡಿತವಾಗಿದ್ದು, ತಿರಸ್ಕರಿಸಬೇಕಷ್ಟೆ. ಸಮಾಜದ ಶಾಂತಿ-ನೆಮ್ಮದಿ ಕೆಡಿಸುವುದು ಕೆಲವರಿಗೆ ಚಾಳಿ ಆಗಿದೆ. ಶರಣರು ಬಸವಣ್ಣನವರ ನೇತೃತ್ವದಲ್ಲಿ ಒಗ್ಗೂಡಿ ಹೊಸಧರ್ಮ ಕಟ್ಟಿದರು. ಇದನ್ನು ಒಪ್ಪದ ಕೆಲವರು ಪರಂಪರಾಗತವಾಗಿ ನಡೆಸಿಕೊಂಡು ಬಂದಂತಹ ವೈದಿಕತೆಯನ್ನು ತೊರೆಯಲಿಲ್ಲ. ಉದ್ದೇಶಪೂರ್ವಕವಾಗಿ ಪ್ರತ್ಯೇಕತೆಯನ್ನು ಜೀವಂತವಾಗಿ ಉಳಿಸಿಕೊಂಡು ಬಂದರು.
ಅಂಥವರು ಹಳೆಮನೆ ಬಿಡುವಂತಿಲ್ಲ; ಹೊಸಮನೆಗೆ ಪ್ರವೇಶ ಆಗುವಂತಿಲ್ಲ. ದ್ವಂದ್ವಮತಿ: ತ್ರಿಶಂಕುಸ್ಥಿತಿ. ಪ್ರತ್ಯೇಕವಾದಿಗಳು ವಚನಗಳಲ್ಲಿ ಸೇರಿಸಬಾರದ್ದನ್ನೆಲ್ಲ ಸೇರಿಸುತ್ತ ಪ್ರಕ್ಷೇಪಗೊಳಿಸಿರಬಹುದೆಂಬ ಅನುಮಾನ. ಹೀಗಾಗಿ ಕೆಲವರು ವಚನಗಳನ್ನು ಪುನಃ ಪರಿಷ್ಕರಿಸಬೇಕಾದೀತು ಎಂದು ಆಲೋಚಿಸುತ್ತಿದ್ದಾರೆ.
ಇನ್ನಾದರೂ ಮೊಂಡುವಾದವನ್ನು ಬಿಟ್ಟುಕೊಟ್ಟು, ವಿಧಾಯಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ. ಒಡಕಿನ ಮಾತುಗಳನ್ನಾಡದಿದ್ದರೆ ಸಮಾಜ ಒಂದಾಗುತ್ತದೆ.
(ಲೇಖಕರು ಚಿತ್ರದುರ್ಗ ಶ್ರೀಮುರುಘರಾಜೇಂದ್ರ ಮಠದ ಪೀಠಾಧ್ಯಕ್ಷರು)