

ಭಾರತೀಯ ಸಂಸ್ಕೃತಿಯ ಸಾರಸರ್ವಸ್ವವನ್ನು ಅದರ ನೈಜತೆಯಲ್ಲಿ ಅರ್ಥೈಸಿಕೊಂಡ ಪಾಶ್ಚಿಮಾತ್ಯರಲ್ಲಿ ಸೋದರಿ ನಿವೇದಿತಾ ಅಗ್ರಗಣ್ಯಳು. ಆಧುನಿಕ ಯುಗದ ಸಮಕಾಲೀನ ಸಂದರ್ಭಗಳಲ್ಲಿಯೂ ಆಕೆ ಭಾರತೀಯ ಮಹಿಳೆಯರ ಮುಂದೆ ಆದರ್ಶ ವ್ಯಕ್ತಿಯಾಗಿ ನಿಲ್ಲಬಲ್ಲಳು. ಸೋದರಿ ನಿವೇದಿತಾಳ ಜೀವನ, ಸಂದೇಶ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು ಪುನಶ್ಚೇತನಗೊಳಿಸಲು ಅವಳು ಪಟ್ಟ ಪಾಡನ್ನು ವರ್ತಮಾನ ಭಾರತದ ಸಾಮಾಜಿಕ ಸಂದರ್ಭವನ್ನು ವಿಶ್ಲೇಷಿಸುವುದರ ಮೂಲಕ ಅರ್ಥಪೂರ್ಣವಾಗಿ ಅರಿಯಬಹುದು. ನಮ್ಮ ದೇಶದ ಕೆಲವು ವರ್ಗದ ಜನರಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯನ್ನು ಆತಂಕಕಾರಿ ಎನಿಸುವ ಪ್ರಮಾಣದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಕಾಣಬಹುದಾಗಿದೆ. ಇತಿಹಾಸವನ್ನು ಅಧ್ಯಯನ ಮಾಡಿದಾಗ ಅದು ವರ್ತಮಾನದ ಜೀವನ ವಿಧಾನಗಳ ದಿಕ್ಸೂಚಿಯಾಗಿ, ಸಮಕಾಲೀನ ಸಮಸ್ಯೆಗಳಿಗೆ ಪರಿಹಾರವಾಗಿ ಒದಗಿ ಬರಬೇಕು.
ಭಾರತೀಯ ಮನಸ್ಸಿನ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಮುದ್ರೆ ತುಂಬ ಆಳವಾಗಿ ಬಿದ್ದಿದೆ. ದೇಶದ ಪ್ರಮುಖ ನಗರಗಳಲ್ಲಿ ಪಾಶ್ಚಾತ್ಯ ಜೀವನ ವಿಧಾನ ಮತ್ತು ಪಶ್ಚಿಮ ದೇಶಗಳಿಂದ ಬರುವ ಯಾವುದೇ ವಿಷಯ ಅಥವಾ ವಸ್ತುಗಳ ಬಗ್ಗೆ ಒಂದು ಬಗೆಯ ಹುಚ್ಚು ಪ್ರೀತಿ, ವ್ಯಾಮೋಹಗಳಿರುವುದನ್ನು ಕಾಣಬಹುದು. ಯಾವ ವರ್ಗಗಳು ಆಧುನಿಕ ಶಿಕ್ಷಣ ಪಡೆದಿವೆಯೋ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿರುವುವೋ, ಅಂತಹ ವರ್ಗಗಳಲ್ಲಿ ‘ಭಾರತೀಯ’ ಎನಿಸುವುದು ಏನಾದರೂ ಉಳಿದಿದೆಯೇ ಎಂಬ ಸಂಶಯ ಬರುತ್ತದೆ. ನಾಗರಿಕ ಜೀವನದ ಕೆಲವೆಡೆ ನಮ್ಮ ಆಹಾರ ಪದ್ಧತಿ, ನಮ್ಮ ವ್ಯಸಗಳು, ನಮ್ಮ ನೃತ್ಯ, ಸಂಗೀತ, ಹಾಡು, ಜೀವನಶೈಲಿ ಎಲ್ಲವೂ ನಮ್ಮ ಧರ್ಮ-ಸಂಸ್ಕೃತಿಗಳಿಂದ ಸಂಪೂರ್ಣ ವಿಚ್ಛೇದನಗೊಂಡು ಪಾಶ್ಚಿಮಾತ್ಯ ಜೀವನಶೈಲಿಯ ಗಾಢವಾದ ಪ್ರಭಾವಕ್ಕೆ ಒಳಗಾದಂತಿರುವುದು ಸ್ಪಷ್ಟ.
ನಾಗರಿಕತೆಗಳು ಪರಸ್ಪರ ಸಂಧಿಸುತ್ತವೆ ಮತ್ತು ಒಂದರೊಡನೊಂದು ಮಿಳಿತವಾಗುತ್ತವೆ ಎಂಬುದು ಐತಿಹಾಸಿಕ ಸತ್ಯ. ಜಪಾನ್, ಚೀನಾ, ಇಸ್ರೇಲ್ ಮುಂತಾದ ದೇಶಗಳಲ್ಲಿ ಆಧುನಿಕತೆ ಪ್ರವೇಶಿಸಿದ್ದರೂ ತಮ್ಮ ಮೂಲ ಸಂಸ್ಕೃತಿಯ ಬೇರುಗಳನ್ನು ಅವು ಉಳಿಸಿಕೊಂಡಿವೆ. ಆದರೆ ಭಾರತದ ಸನ್ನಿವೇಶ ಆಘಾತಕಾರಿಯಾಗಿದೆ. ಭಾರತೀಯ ಸಂಸ್ಕೃತಿಯ ಸಾರವು ಆಧುನಿಕತೆಯ ಆರ್ಭಟ ಮತ್ತು ವಿಜೃಂಭಣೆಯಲ್ಲಿ ಎಲ್ಲೋ ಕಳೆದುಹೋಗಿದೆ ಎಂಬ ಭಾವನೆಯುಂಟಾಗುತ್ತದೆ. ಆಕ್ರಮಣಗಳ ನಂತರ ಆಕ್ರಮಣಗಳು, ಸುದೀರ್ಘ ಕಾಲದ ಬ್ರಿಟಿಷರ ಪ್ರಭಾವಗಳ ತುಳಿತಕ್ಕೆ ಒಳಗಾದ ನಮ್ಮ ದೇಶದಲ್ಲಿ ನಮ್ಮ ನೈಜ ಅಸ್ಮಿತೆಯೇ ಕಳೆದುಹೋಗಿರುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ‘ಭಾರತೀಯ’ ಎನಿಸುವ ಯಾವುದೇ ಸಂಗತಿಯ ವಿರುದ್ಧ ಬಂಡೇಳುವ ಪ್ರವೃತ್ತಿ ನಮ್ಮ ಗ್ರಹಿಕೆಯನ್ನು ಮೀರಿದುದಾಗಿದೆ. ಭೌತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತದ ಮೇಲಿನ ಆಕ್ರಮಣ ಇನ್ನೂ ಮುಂದುವರಿಯುತ್ತಿದೆ ಎಂಬ ಕಹಿಸತ್ಯ ಇದರಿಂದ ಸ್ಪಷ್ಟವಾಗುತ್ತದೆ. ಈಗಲೂ ಶಿಕ್ಷಿತರು, ವಿದ್ಯಾವಂತರು ಎನಿಸಿಕೊಂಡ ಒಂದು ವರ್ಗದಲ್ಲಿ ಭಾರತೀಯ ಸಂಸ್ಕೃತಿಯ ಪ್ರಸ್ತಾಪವಾದರೆ ತಿರಸ್ಕಾರ, ತಾತ್ಸಾರಗಳ ಪ್ರತಿಕ್ರಿಯೆ ಹೊರಹೊಮ್ಮುತ್ತದೆ.
ಪಾಶ್ಚಿಮಾತ್ಯ ಜೀವನವಿಧಾನವನ್ನು ಟೀಕಿಸುವುದು ಈ ಲೇಖನದ ಉದ್ದೇಶವಲ್ಲ; ಅವರ ಸಮಯಪ್ರಜ್ಞೆ, ವೈಜ್ಞಾನಿಕ ಮನೋಭಾವ, ಶ್ರಮಸಂಸ್ಕೃತಿ, ಪೌರಪ್ರಜ್ಞೆ, ಸಂಘಟನಾ ಕೌಶಲ ಮತ್ತು ಸ್ವಚ್ಛತೆ ಮುಂತಾದ ಪೂರಕ ಅಂಶಗಳನ್ನು ನಾವು ಸ್ವಾಗತಿಸಲೇಬೇಕು. ಇದರಿಂದ ಒಂದು ಸಮತೋಲನವು ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳ ಮಿಲನದಿಂದ ಉಂಟಾಗುವುದು. ಅಂತಹ ಅಪೂರ್ವ ಸಂಗಮಸ್ಥಾನವನ್ನು ನಾವು ಸೋದರಿ ನಿವೇದಿತಾಳ ಜೀವನದಲ್ಲಿ ಕಾಣುತ್ತೇವೆ.
ನಿವೇದಿತಾ ಹುಟ್ಟಿ ಬೆಳೆದದ್ದು ಪಶ್ಚಿಮದಲ್ಲಿ; ತನ್ನನ್ನು ಸಮರ್ಪಿಸಿಕೊಂಡು ದುಡಿದಿದ್ದು ಭಾರತದಲ್ಲಿ. ಅಕೆಯ ಜೀವನ ಮತ್ತು ಸಾಧನೆಯಿಂದ ಭಾರತದಲ್ಲಿ ಸಮೃದ್ಧವಾದ ಧಾರ್ವಿುಕ ಮತ್ತು ಆಧ್ಯಾತ್ಮಿಕ ಸಂಪತ್ತಿದೆ ಎಂದೂ, ಅವುಗಳಲ್ಲಿ ಜನರಿಗೆ ಅಗತ್ಯವಾಗಿರುವ ಸಾರ್ವತ್ರಿಕ ಅಂಶಗಳಿವೆ ಎಂದೂ ತಿಳಿದುಬರುತ್ತದೆ. ಆದ್ದರಿಂದಲೇ ‘ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ’ಯ ಮುನ್ನುಡಿಯಲ್ಲಿ ಆಕೆ ವ್ಯಕ್ತಪಡಿಸುವ ಅಭಿಪ್ರಾಯವಿದು:
‘ಇನ್ನು ಮುಂದೆ ಪವಿತ್ರ ಮತ್ತು ಲೌಕಿಕ ಎಂದು ಭೇದ ಮಾಡಲಾಗದು, ದುಡಿಯುವುದೆಂದರೆ ಪ್ರಾರ್ಥಿಸುವುದು, ಜಯಿಸುವುದೆಂದರೆ ತ್ಯಜಿಸುವುದು. ಜೀವನವೇ ಒಂದು ಧರ್ಮ’. ಇಂದಿನ ಯುವಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕ ಮೂಲಗಳ ಬಗ್ಗೆ ಸಾಕಷ್ಟು ತಿಳಿದಿಲ್ಲದಿರುವುದು ದುರದೃಷ್ಟಕರ. ಇದು ಅವರ ತಪ್ಪು ಎನ್ನಲಾಗುವುದಿಲ್ಲ. ನಮ್ಮ ನಾಯಕರ ದೂರದರ್ಶಿತ್ವದ ಕೊರತೆ, ಅವರ ಪಾಲಕರ ಅವಜ್ಞೆ ಮತ್ತು ಸೀಮಿತವಾದ ಶಿಕ್ಷಣ ವ್ಯವಸ್ಥೆಗಳು ಶ್ರೀಮಂತ ಸಂಸ್ಕೃತಿಯ ಮೂಲ ಮತ್ತು ಮಹತ್ವವನ್ನು ಜನರಿಗೆ ಮನಗಾಣಿಸುವಲ್ಲಿ ವಿಫಲವಾಗಿವೆ. ಈಗ ನಮ್ಮ ನಾಯಕರು ಮತ್ತು ಯುವಜನತೆ ಮನಗಾಣಬೇಕಾದ ವಿಚಾರವೆಂದರೆ ಪಾಶ್ಚಾತ್ಯ ಜಗತ್ತು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪತ್ತಿನ ಕಡೆಗೆ ಕುತೂಹಲದಿಂದ ನೋಡಲಾರಂಭಿಸಿದೆ ಎಂಬುದು. ನಿದರ್ಶನವಾಗಿ ಭಾರತೀಯಮೂಲದ ಯೋಗ ವಿಜ್ಞಾನಕ್ಕೆ ವಿಶ್ವದೆಲ್ಲೆಡೆ ದೊರೆತಿರುವ ಪ್ರೋತ್ಸಾಹ ಮತ್ತು ಸ್ವಾಗತ. ಆದ್ದರಿಂದ ನಮ್ಮ ನೆಲದ ಮೇಲೆ ನಮ್ಮ ಸಂಸ್ಕೃತಿಯನ್ನೇ ತಿರಸ್ಕಾರ ಭಾವದಿಂದ ಕಾಣುವುದು ಜಗತ್ತಿಗೆ ಒಂದು ದೊಡ್ಡ ನಷ್ಟವಾಗಿ ಪರಿಣಮಿಸುವುದು. ಈ ವಾಸ್ತವವನ್ನು ಚೆನ್ನಾಗಿ ಅರಿತ ಸೋದರಿ ನಿವೇದಿತಾ ಕ್ಷೀಣದೆಸೆಗೆ ಬಂದು ಶಿಥಿಲವಾಗುತ್ತಿದ್ದ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಶ್ರಮಿಸಿದಳು.
ಸ್ವಾಮಿ ವಿವೇಕಾನಂದರಿಂದ ನಿವೇದಿತಾ ಪಡೆದ ಶಿಕ್ಷಣ: ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಕಾರ್ಯೋನ್ಮುಖಳಾಗುವ ಮುನ್ನ ನಿವೇದಿತಾ ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆದಳು. ಹಿಂದೂ ಧರ್ಮಕ್ಕೆ ಒಂದು ಸ್ಪಷ್ಟ ಅಸ್ಮಿತೆಯನ್ನು ನೀಡಿದ ಸ್ವಾಮೀಜಿ ನಿವೇದಿತಾಳ ವ್ಯಕ್ತಿತ್ವವನ್ನು ಕಡೆದು ರೂಪಿಸಿದರು. ಭಾರತೀಯರಿಗೆ ಪಾಶ್ಚಿಮಾತ್ಯವಾದುದ್ದೆಲ್ಲವೂ ಆರಾಧ್ಯವೆನಿಸಿದ ಸಂದರ್ಭದಲ್ಲಿ ಆಕೆ ಸ್ವಾಮೀಜಿಯವರ ಜ್ಞಾನಪ್ರಸಾರದಿಂದ ಪ್ರಭಾವಿತಳಾದಳು.
ನಿವೇದಿತಾಳ ಮೂಲ ಹೆಸರು ಮಾರ್ಗರೆಟ್ ಎಲಿಜಬೆತ್ ನೋಬಲ್. ಆಕೆ ಐರ್ಲೆಂಡಿನಲ್ಲಿ 1867ರಲ್ಲಿ ಜನಿಸಿದಳು. ಸತ್ಯಾನ್ವೇಷಕಿಯಾಗಿದ್ದ ಆಕೆ ಒಂದು ಕಠಿಣವಾಗಿದ್ದ ತನ್ನ ಜೀವನದ ಕಾಲಘಟ್ಟದಲ್ಲಿ ಸ್ವಾಮೀಜಿಯವರನ್ನು ಮೊದಲ ಬಾರಿಗೆ ಭೇಟಿ ಮಾಡಿದಳು. ಆಕೆಯೇ ಹೇಳುವಂತೆ, ‘ನಾನು ದುಃಖದುಮ್ಮಾನಗಳಿಗೆ ಈಡಾಗಿದ್ದರೂ, ಸತ್ಯಾನ್ವೇಷಣೆಗೆ ಉತ್ಸುಕಳಾಗಿರುವೆ’. ಸ್ವಾಮೀಜಿಯ ಮಾತುಗಳಿಂದ ಅವಳಿಗೆ ಸಾಂತ್ವನ ದೊರಕಿತು. ಅಲ್ಲಿಂದಾಚೆಗೆ ಅವರನ್ನು ಅವಳು ‘ಗುರುದೇವ’ ಎಂದೇ ಸಂಬೋಧಿಸಲಾರಂಭಿಸಿದಳು. ಸತ್ಯಕ್ಕಾಗಿ ಮತ್ತು ಭಾರತಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳಲು ಸಿದ್ಧವೆಂದು ಅವಳು ಸ್ವಾಮೀಜಿಗೆ ತಿಳಿಸಿದಳು. ಈ ಮಾರ್ಗರೆಟ್ ನೋಬಲ್ಳ ಸಮರ್ಪಣಾ ವ್ಯಕ್ತಿತ್ವದಲ್ಲಿ ಭವ್ಯಭಾರತದ ಉಜ್ವಲ ಭವಿಷ್ಯ ಇಣುಕುತ್ತಿರುವುದನ್ನು ಸ್ವಾಮೀಜಿ ಕಂಡುಕೊಂಡರು. ಅವರು ಆಕೆಗೆ ಹೀಗೆ ಪತ್ರ ಬರೆದರು: ‘ಭಾರತದ ಸೇವೆಯಲ್ಲಿ ನಿನ್ನ ಜೀವನದ ಭವಿಷ್ಯವಿದೆ ಎಂದು ನಾನು ನಂಬಿರುವೆ ಎಂದು ಸ್ಪಷ್ಟ ಹೇಳುತ್ತೇನೆ. ಇಲ್ಲಿಗೆ ನಿಜವಾಗಿ ಬೇಕಾಗಿದ್ದು ಒಬ್ಬ ಪುರುಷನಲ್ಲ, ಒಬ್ಬ ಸ್ತ್ರೀ; ಭಾರತೀಯರಿಗಾಗಿ, ಇಲ್ಲಿನ ಮಹಿಳೆಯರಿಗಾಗಿ ಕೆಲಸ ಮಾಡಲು ಒಬ್ಬ ನಿಜವಾದ ಸಿಂಹಿಣಿ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮಹಾ ಮಹಿಳೆಯರನ್ನು ಭಾರತವು ಕೊಡಲು ಸಾಧ್ಯವಾಗಿಲ್ಲ; ಅವರನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ನಿನ್ನಲ್ಲಿರುವ ಶಿಕ್ಷಣ, ಪ್ರಾಮಾಣಿಕತೆ, ಪರಿಶುದ್ಧತೆ, ಅಪಾರಪ್ರೇಮ, ದೃಢನಿರ್ಧಾರ ಮತ್ತು ಎಲ್ಲಕ್ಕೂ ಮಿಗಿಲಾಗಿ ನಿನ್ನ ಕೆಲ್ಟಿಕ್ ರಕ್ತವು ನಿನ್ನನ್ನು ಈ ಕಾರ್ಯಕ್ಕೆ ಅಗತ್ಯವಾಗಿರುವ ಸೂಕ್ತ ವ್ಯಕ್ತಿಯನ್ನಾಗಿಸಿದೆ’. ಆದರೆ ಮಾಡಬೇಕಾದ ಮಹತ್ಕಾರ್ಯದ ಬಗ್ಗೆ ಮತ್ತು ಅದಕ್ಕೆ ಅತ್ಯಗತ್ಯವಾದ ಮಹಾತ್ಯಾಗದ ಬಗ್ಗೆ ಸ್ವಾಮೀಜಿ ಆಕೆಗೆ ಎಚ್ಚರಿಕೆಯನ್ನೂ ನೀಡಿದರು. ಆದರೆ ಸತ್ಯಾನ್ವೇಷಕರಿಗೆ ಯಾವ ತ್ಯಾಗವೂ ದೊಡ್ಡದೆನಿಸುವುದಿಲ್ಲ. ದೃಢವಾದ ನಿರ್ಧಾರ ಮತ್ತು ಅಚಲವಾದ ಶ್ರದ್ಧೆಯಿಂದ ಹೆಜ್ಜೆ ಮುಂದಿಟ್ಟಳು ನಿವೇದಿತಾ. ಇಂಗ್ಲೆಂಡನ್ನು ತೊರೆದು 1898ರಲ್ಲಿ ಭಾರತಕ್ಕೆ ಬಂದು ಸ್ವಾಮೀಜಿಯವರ ಪಾದಕ್ಕೆರಗಿದಳು. ಸ್ವಾಮೀಜಿ ಅವಳಿಗೆ ಬ್ರಹ್ಮಚರ್ಯ ದೀಕ್ಷೆ ನೀಡಿ, ಹಿಂದೂಧರ್ಮವನ್ನು ಪರಿಪೂರ್ಣವಾಗಿ ಅನುಸರಿಸುವಂತೆ ಹೇಳಿದರು ಮತ್ತು ಮರುನಾಮಕರಣ ಮಾಡಿದರು. ಆಗ ಅವರು ಹೇಳಿದ್ದು: ‘ನಿನ್ನ ಚಿಂತನೆ, ಅಗತ್ಯಗಳು, ಪರಿಕಲ್ಪನೆಗಳು, ಅಭ್ಯಾಸಗಳು ಎಲ್ಲವೂ ಭಾರತೀಯವಾಗಲಿ. ನಿನ್ನ ಜೀವನದ ಅಂತರಂಗ ಮತ್ತು ಬಹಿರಂಗಗಳು ಒಬ್ಬ ಸಾಂಪ್ರದಾಯಿಕ ಹಿಂದೂ ಬ್ರಹ್ಮಚಾರಿಣಿಯ ಜೀವನದಂತೆಯೇ ಇರಲಿ. ಆದರೆ ನೀನು ನಿನ್ನ ಭೂತಕಾಲವನ್ನು ಮರೆಯಲೇಬೇಕು ಮತ್ತು ಅದು ಮರೆತುಹೋಗುವಂತೆ ಮಾಡಬೇಕು. ಅದರ ಕಿಂಚಿತ್ ಸ್ಮೃತಿಯೂ ನಿನ್ನ ಮನಸ್ಸಿನಿಂದ ಮರೆಯಾಗಿ ಹೋಗಲಿ’.
ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ ಬೇರುಬಿಟ್ಟಿದ್ದ ಒಬ್ಬ ಪ್ರತಿಭಾನ್ವಿತ ಮಹಿಳೆಯನ್ನು ಆಮೂಲಾಗ್ರವಾಗಿ ಪರಿವರ್ತಿಸಿ ಭಾರತೀಯ ಸಂಸ್ಕೃತಿಯ ಬೇರನ್ನು ಅರಿತು, ಅರಗಿಸಿಕೊಂಡು ಆರಾಧಿಸುವಂತೆ ಸ್ವಾಮೀಜಿ ಅವಳನ್ನು ಸಿದ್ಧಗೊಳಿಸಿದರು. ಅಕ್ಕ ಕೂಡ ಅವಳ ಪಾಲಿನ ಅಗ್ನಿಪರೀಕ್ಷೆಯನ್ನು ಎದುರಿಸಲೇಬೇಕಾಯಿತು. ವಿರಕ್ತ ಸಂನ್ಯಾಸ ಜೀವನದ ತಪೋಜೀವನಕ್ಕೆ ಅಣಿಯಾದಳು ನಿವೇದಿತಾ. ಈ ರೂಪಾಂತರವು ಒಂದು ಸಾಹಸ! ಧೀರ ಹೃದಯವಿದ್ದ ಸೋದರಿ ನಿವೇದಿತಾ ಮಾತ್ರ ಇಂಥ ಕಠಿಣ ಪರೀಕ್ಷೆಯನ್ನು ಮುಗುಳ್ನಗುತ್ತ ಎದುರಿಸಬಲ್ಲವಳಾಗಿದ್ದಳು. ಸ್ವಾಮೀಜಿ ತ್ಯಾಗದ ಉನ್ನತ ಆದರ್ಶವನ್ನು ಅವಳ ಮುಂದೆ ಹೀಗೆ ಎತ್ತಿ ಹಿಡಿದರು- ‘ಹಿಂದೆ ತ್ಯಾಗವೇ ಧರ್ಮವಾಗಿತ್ತು. ದಿಟವಾಗಿಯೂ ಮುಂಬರುವ ಯುಗಗಳಲ್ಲಿಯೂ ತ್ಯಾಗವೇ ನಿಜವಾದ ಧರ್ಮ’. ಗುರುದೇವನು ತನ್ನ ಮುಂದಿಟ್ಟ ಧ್ಯೇಯವನ್ನು ನಿವೇದಿತಾ ಮನಸಾರೆ ಸ್ವೀಕರಿಸಿದಳು.
ಪಾಶ್ಚಿಮಾತ್ಯ ರಾಷ್ಟ್ರಗಳ ವಕ್ಷಸ್ಥಳದಲ್ಲಿ ಸಂಗ್ರಹಗೊಂಡಿದ್ದ ಅಗಾಧ ಶಕ್ತಿಯನ್ನು ಭಾರತೀಯ ಜೀವನದಲ್ಲಿ ತುಂಬಿಹೋಗಿದ್ದ ಯುಗಯುಗಗಳ ನಿದ್ರೆ ಮತ್ತು ಜಡತೆಯನ್ನು ತುಂಡರಿಸಲು ಬಿಡುಗಡೆ ಮಾಡಬೇಕಾದ ಅಗತ್ಯವಿತ್ತು. ಛಿದ್ರವಾಗಿ ಚದುರಿಹೋಗಿದ್ದ ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳನ್ನು ಸ್ವಾತಂತ್ರ್ಯಪ್ರಾಪ್ತಿಯ ಪಥದಲ್ಲಿ ಮುಂದೆ ಕೊಂಡೊಯ್ಯಬೇಕಾಗಿತ್ತು. ಭಾರತದ ಸೇವೆಗಾಗಿ ಸೋದರಿ ನಿವೇದಿತಾಗೆ ದೀಕ್ಷೆಯನ್ನು ಅನುಗ್ರಹಿಸಿದ ಸ್ವಾಮೀಜಿ, ಅವಳ ಮನದಾಳದಲ್ಲಿ ನೆಟ್ಟಿದ್ದು ಈ ಕಾಣ್ಕೆಯನ್ನೇ. ತನ್ಮೂಲಕ ಭಾರತೀಯ ಸಂಸ್ಕೃತಿಯ ಪುನರುಜ್ಜೀವನ ಎಂಬ ಮಹತ್ಕಾರ್ಯದ ಆರಂಭಕ್ಕಾಗಿ ಸ್ವಾಮೀಜಿ ಒಂದು ಹೊಸ ಶಕ್ತಿಯನ್ನೇ ಚಾಲನೆಗೆ ತಂದರು. ಆಳುವ ಜನಾಂಗಕ್ಕೆ ಸೇರಿದ ಆಕೆ ದಾಸ್ಯದಲ್ಲಿದ್ದ ಭಾರತೀಯರ ಸೇವೆಯನ್ನು ಮಾಡಲು ಸಿದ್ಧಳಾದಳೆ? ಈ ಸಾಧನೆ ಅವಳ ವ್ಯಕ್ತಿತ್ವದ ಸಂಪೂರ್ಣ ಪರಿವರ್ತನೆಯನ್ನು ಬೇಡುತ್ತದೆ. ಈ ಅಗತ್ಯವನ್ನು ಚೆನ್ನಾಗಿ ಅರಿತಿದ್ದ ಸ್ವಾಮೀಜಿ ಅವಳಿಗೆ ತಕ್ಕ ತರಬೇತಿ ನೀಡಲು ತಾವೇ ಮುಂದಾದರು. ಶಿಷ್ಯಳಾಗಿ ತಯಾರಾಗುತ್ತಿದ್ದ ನಿವೇದಿತಾಗೆ ಈ ಅವಧಿಯಲ್ಲಿ ಹೊಸ ಜೀವನದರ್ಶನವೇ ಪ್ರಾಪ್ತವಾಯಿತು. ವಿವೇಕಾನಂದ ಎಂಬ ಸಾಗರದಲ್ಲಿ ತನ್ಮೂಲಕ ಭರತವರ್ಷದಲ್ಲಿ, ತನ್ನನ್ನು ಸಂಪೂರ್ಣವಾಗಿ ಮುಳುಗಿಸಿಕೊಂಡಳು ನಿವೇದಿತಾ. ಅವಳ ವಿಶಾಲ ದೃಷ್ಟಿಕೋನ, ಧೈರ್ಯ, ಕುತೂಹಲ, ಶಿಸ್ತು ಮತ್ತು ಉತ್ಸಾಹ ಅನುಪಮವಾಗಿದ್ದವು. ಅವಳಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆ ಕುರಿತು ಮೂಡಿದ ಒಳನೋಟ ಮತ್ತು ಭಾರತೀಯರ ಪ್ರಶಾಂತ ಸ್ವಭಾವವು ಭಾರತದ ಸೇವೆಗೆ ತನ್ನನ್ನು ಮುಡಿಪಾಗಿಡುವಂತೆ ಪ್ರೇರಣೆ ನೀಡಿದವು. ನಿವೇದಿತಾ ಭಾರತವನ್ನು ತನ್ನ ಹೃದಯಾಂತರಾಳದಿಂದ ಪ್ರೀತಿಸಿದ ವೈಶಿಷ್ಟ್ಯವನ್ನು ಅರಿಯೋಣ ಮುಂದಿನ ಅಂಕಣದಲ್ಲಿ.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)