

ಮಹಾನಗರವೊಂದರ ಮಹಿಳಾ ಪೊಲೀಸ್ ಠಾಣೆಗೆ ಹಾಜರಾದ ಒಬ್ಬ ವಿವಾಹಿತ ಸ್ತ್ರೀ ಲಿಖಿತ ದೂರೊಂದನ್ನು ಹೀಗೆ ನೀಡಿದಳು:
‘‘ನನ್ನ ಹೆಸರು ಸುಧಾ. ಇಪ್ಪತ್ತೆಂಟು ವರ್ಷ. ರಾಜ್ಯದ ಜಿಲ್ಲಾ ಕೇಂದ್ರವೊಂದರಲ್ಲಿರುವ ಸರ್ಕಾರಿ ಅಧಿಕಾರಿಯೊಬ್ಬರ ಏಕೈಕ ಪುತ್ರಿ. ಒಂದೂವರೆ ವರ್ಷಗಳ ಹಿಂದೆ ನನಗೆ ಆನಂದ್ ಎನ್ನುವವನ ಜೊತೆ ಲಗ್ನವಾಯಿತು. ಆನಂದ್ ನನಗಿಂತ ನಾಲ್ಕು ವರ್ಷ ದೊಡ್ಡವನಾಗಿದ್ದು ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆಯ ಸಮಯದಲ್ಲಿ ಆನಂದ್ನ ಮನೆಯವರು ಯಾವುದೇ ರೀತಿಯ ವರದಕ್ಷಿಣೆ ಕೇಳಲಿಲ್ಲ. ಮದುವೆಯ ನಂತರ ನಾವಿಬ್ಬರೂ ಮಧುಚಂದ್ರಕ್ಕೆಂದು ಶಿಮ್ಲಾಗೆ ಹೋದೆವು. ನಮ್ಮ ಪ್ರಥಮ ರಾತ್ರಿಯೇ ಆನಂದ್, ‘ನಾನು ನಿನಗೆ ಲೈಂಗಿಕ ಸುಖವನ್ನು ಕೊಡಲು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸು’ ಎಂದ. ‘ಏನಾಗಿದೆ’ ಎಂದು ಕೇಳಿದಾಗ ತನಗಿರುವ ಯಾವುದೋ ದೈಹಿಕ ತೊಂದರೆಯಿಂದ ತನ್ನಿಂದ ಲೈಂಗಿಕ ಕ್ರಿಯೆ ನಡೆಸುವುದು ಅಸಾಧ್ಯ ಎಂದ. ವೈವಾಹಿಕ ಜೀವನದ ಬಗ್ಗೆ ಹಲವಾರು ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ ನನಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದ್ದತಾಯಿತು. ‘ನೀನು ನನಗೆ ಮದುವೆಗೆ ಮುಂಚೆಯೇ ಈ ವಿಷಯವನ್ನು ಏಕೆ ಹೇಳಲಿಲ್ಲ’ ಎಂದು ಕೇಳಿದಾಗ, ‘ಒಂದು ವೇಳೆ ಈ ವಿಷಯವನ್ನು ಹೇಳಿದ್ದರೆ ಯಾರ ಜೊತೆಯೂ ನನಗೆ ಮದುವೆಯಾಗುವುದಿಲ್ಲ ಮತ್ತು ನಮ್ಮ ಮನೆತನದ ಮಾನ ಹೋಗುತ್ತದೆಂದು ತಂದೆ-ತಾಯಿ ಈ ವಿಷಯವನ್ನು ಮುಚ್ಚಿಟ್ಟರು’ ಎಂದ. ‘ಒಬ್ಬ ಅಮಾಯಕ ಹೆಣ್ಣುಮಗಳ ಜೀವನವನ್ನು ಹಾಳುಮಾಡಿದೆಯಲ್ಲ, ನಾಚಿಕೆ ಆಗುವುದಿಲ್ಲವೇ’ ಎಂದು ರೇಗಿದಾಗ, ‘ನೀನು ಬೇಕಾದರೆ ಇದೇ ಕಾರಣದ ಮೇರೆಗೆ ನನ್ನಿಂದ ಡೈವೋರ್ಸ್ ಪಡೆಯಬಹುದು’ ಎಂದು ಹೇಳಿ ಮಲಗಿಕೊಂಡ. ನಾನು ನನ್ನ ತಾಯಿಗೆ ಫೋನ್ ಮಾಡಿ ಈ ವಿಷಯ ತಿಳಿಸಿದೆ. ‘ನೀವಿಬ್ಬರೂ ಊರಿಗೆ ವಾಪಸ್ಸಾಗಿ, ನಿನ್ನ ಗಂಡನ ಮನೆಯವರ ಜತೆಗೆ ಕುಳಿತು ಮಾತನಾಡೋಣ’ ಎಂದರು. ಎರಡು ದಿನಗಳ ಬಳಿಕ ಊರಿಗೆ ವಾಪಸ್ಸಾದೆವು.
ತಂದೆ-ತಾಯಿ ನನ್ನ ಗಂಡ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದು ಅತ್ತೆಯವರೊಡನೆ ಈ ವಿಷಯವನ್ನು ಪ್ರಸ್ತಾಪಿಸಿದರು. ಆಕೆ ಅಂತಹ ದೊಡ್ಡ ಸಮಸ್ಯೆಯೇನೂ ಆಗಿಯೇ ಇಲ್ಲದಂತೆ ‘ಹೌದು, ನಮ್ಮ ಆನಂದನಿಗೆ ಸಣ್ಣ ತೊಂದರೆಯಾಗಿದೆ, ಸ್ವಲ್ಪ ದಿನಗಳು ಕಾದರೆ ಎಲ್ಲವೂ ಸರಿಹೋಗುತ್ತದೆ’ ಎಂದರು. ‘ಹಾಗಾದರೆ ಅವನ ಮದುವೆಯನ್ನೇಕೆ ಮಾಡಿದಿರಿ’ ಎಂದು ತಾಯಿ ಕೇಳಿದಾಗ, ‘ವೈದ್ಯರನ್ನು ವಿಚಾರಿಸಿದ್ದೇವೆ, ಇದೇನೂ ಶಾಶ್ವತ ತೊಂದರೆಯಲ್ಲ, ಆನಂದನ ಮದುವೆ ಮಾಡಿದರೆ ಆತ ಸರಿಹೋಗಬಹುದು ಎಂದಿದ್ದಾರೆ, ಅದೇ ಕಾರಣಕ್ಕಾಗಿಯೇ ಮದುವೆ ಮಾಡಿದೆವು. ಚಿಂತೆ ಮಾಡಬೇಡಿ, ಮತ್ತೊಮ್ಮೆ ವೈದ್ಯರನ್ನು ವಿಚಾರಿಸಿ ಅವರ ಸಲಹೆಯಂತೆ ಮುಂದುವರಿಯೋಣ’ ಎಂದರು. ನನ್ನ ತಂದೆ-ತಾಯಿ ಅವರ ಈ ಮಾತುಗಳಿಗೆ ಒಪ್ಪಿ ಕೆಲಕಾಲ ತಾಳ್ಮೆಯಿಂದಿರಲು ನನಗೆ ಸೂಚಿಸಿ ಹೊರಟುಹೋದರು.
ನಾನೂ ತಾಳ್ಮೆಯಿಂದ ಮೂರು ತಿಂಗಳು ಸುಮ್ಮನಿದ್ದೆ. ಆಗಲೂ ಯಾವುದೇ ಪರಿಹಾರ ಸಿಗದಿದ್ದಾಗ ಈ ವಿಷಯವನ್ನು ಅತ್ತೆಯೊಡನೆ ಪ್ರಸ್ತಾಪಿಸಿದೆ. ಆಗವರು ಆನಂದನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ನನಗೇ ಹೇಳಿದರು. ಆನಂದನಿಗೆ ಬಲವಂತ ಮಾಡಿ ವೈದ್ಯರ ಬಳಿ ಕರೆದುಕೊಂಡು ಹೋದೆ. ಆನಂದನ ಸಮಸ್ಯೆಗೆ ಇರುವ ಪರಿಹಾರವೆಂದರೆ ಶಸ್ತ್ರಚಿಕಿತ್ಸೆ ಎಂದು ತಿಳಿಸಿ, ಹೊಸದಾದ ತಂತ್ರಜ್ಞಾನವನ್ನು ಬಳಸಿ ಶಸ್ತ್ರಚಿಕಿತ್ಸೆಯನ್ನು ಮಾಡುವ ಕಾರಣ -ಠಿ; 20 ಲಕ್ಷ ಖರ್ಚು ಬರುತ್ತದೆ ಎಂದರು.
ಇದನ್ನು ಕೇಳಿ ಹೌಹಾರಿದೆ. ನಂತರ ಅತ್ತೆಗೆ ವಿಷಯ ತಿಳಿಸಿದೆ. ‘ನೋಡು ಸುಧಾ, ಈ ಚಿಕಿತ್ಸೆಗೆ ಆನಂದನಿಗಿರುವ ಇನ್ಷೂರೆನ್ಸ್ನಿಂದ ಯಾವುದೇ ಮರುಪಾವತಿ ಬರದಿರುವುದರಿಂದ ನಮ್ಮ ಕೈಯಿಂದಲೇ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನಮ್ಮ ಬಳಿ ಅಷ್ಟು ಹಣವಿಲ್ಲ, ನೀನು ನಿಮ್ಮ ತಂದೆ ಮನೆಯಿಂದ ಹಣ ತೆಗೆದುಕೊಂಡು ಬಂದು ಶಸ್ತ್ರಚಿಕಿತ್ಸೆಯನ್ನು ಮಾಡಿಸು’ ಎಂದರು. ‘ಈ ವಿಷಯಕ್ಕಾಗಿ ನಮ್ಮ ಅಪ್ಪನಿಂದ ಹಣವನ್ನು ಕೇಳುವುದು ಸರಿಯಲ್ಲ’ ಎಂದಾಗ , ‘ನಿನಗೆ ತೋಚಿದಂತೆ ಮಾಡು’ ಎಂದರು. ಕೆಲ ದಿನಗಳ ನಂತರ ನಾವೆಲ್ಲರೂ ಊಟಕ್ಕೆ ಕುಳಿತಿದ್ದಾಗ ಆನಂದ್ ನನ್ನನ್ನು ಉದ್ದೇಶಿಸಿ, ‘ನಾನಂತೂ ನಿನಗೆ ಸುಖ ಕೊಡಲು ಸಾಧ್ಯವಾಗಲಿಲ್ಲ. ನೀನು ನನ್ನ ಸೋದರ ವಿವೇಕನನ್ನು ಮದುವೆ ಮಾಡಿಕೊಂಡು ಸುಖವಾಗಿರು’ ಎಂದ. ವಿವೇಕ್ ನನ್ನದೇ ವಯಸ್ಸಿನವನಾಗಿದ್ದು ಆ ಸಮಯದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು ಅವನಿಗೆ ಮದುವೆಯಾಗಿರಲಿಲ್ಲ. ಈ ಸಲಹೆಯನ್ನು ಕೇಳಿ ಗಾಬರಿಯಾದೆ. ‘ಈ ರೀತಿ ಮಾಡಲು ಸಾಧ್ಯವಿಲ್ಲ, ನಿಮ್ಮ ಸಲಹೆಗೆ ಒಪ್ಪುವುದಿಲ್ಲ’ ಎಂದೆ. ಆಗ ಆತ ಮತ್ತು ಆತನ ಮನೆಯವರು, ‘ನೀನು ಒಂದು ರಾತ್ರಿ ವಿವೇಕನ ಜತೆಗೆ ಕಳೆದು ನೋಡು, ಆಗ ನಿನ್ನ ಮನಸ್ಸು ಬದಲಾಗಬಹುದು’ ಎಂದರು. ಅವರ ಮಾತುಗಳನ್ನು ಕೇಳಿ ನನಗೆ ಅಸಹ್ಯ ಬಂದಿತು. ‘ನಿಮಗೆ ಒಬ್ಬ ಮಗಳಿದ್ದರೆ ನೀವು ಈ ರೀತಿ ಹೇಳುತ್ತಿದ್ದಿರಾ, ನಿಮ್ಮ ಮನೆಗೆ ಸೊಸೆಯಾಗಿ ಬಂದಿದ್ದೇನೆ ಎಂದು ತಿಳಿದು ಹೀಗೇ ಬೇಕಾಬಿಟ್ಟಿ ಮಾತನಾಡುತ್ತಿರುವಿರಲ್ಲ’ ಎಂದು ಕೋಪದಿಂದ ಹೇಳಿದೆ. ಆಗ ಆನಂದ್, ‘ನೀನು ಕಾಲೇಜಿನಲ್ಲಿ ಓದುತ್ತಿದ್ದಾಗ ಬಾಯ್ ಫ್ರೆಂಡ್ಗಳ ಜತೆಗೆ ಓಡಾಡಿರಲಿಲ್ಲವೇ, ಅವರ ಜತೆಗೆ ಮಲಗಿರಲಿಲ್ಲವೇ, ನನ್ನ ಸೋದರನ ಜತೆ ಮಲಗಲು ನಿನಗೇನು ತೊಂದರೆ?’ ಎಂದ. ಕೋಪದಿಂದ ಅವನ ಕೆನ್ನೆಗೆ ಎಲ್ಲರ ಎದುರಿನಲ್ಲಿಯೇ ಬಾರಿಸಿದೆ. ಈ ವಿಷಯವನ್ನು ತಂದೆ-ತಾಯಿ ಮುಂದೆ ಹೇಳದೆ ಹೇಗೋ ವೈವಾಹಿಕ ಜೀವನ ಮುಂದುವರಿಸಿದೆ. ಪ್ರತಿದಿನವೂ ಆನಂದ್ ಹಾಗೂ ನನ್ನ ಅತ್ತೆ ಶಸ್ತ್ರಚಿಕಿತ್ಸೆಗಾಗಿ ಹಣವನ್ನು ತರಲು ಪೀಡಿಸುತ್ತಿದ್ದರು. ಅವರ ಬೇಡಿಕೆಗೆ ಒಪ್ಪದಿದ್ದಾಗ ನನ್ನನ್ನು ಮೂದಲಿಸುತ್ತಿದ್ದರು. ಹಲವಾರು ಬಗೆಯ ಮಾನಸಿಕ ಕಿರುಕುಳಗಳನ್ನು ನೀಡಲು ಪ್ರಾರಂಭಿಸಿದರು. ಈ ಯಾವ ತೊಂದರೆಗೂ ನಾನು ಜಗ್ಗಲಿಲ್ಲ.
ಒಂದು ರಾತ್ರಿ ಊಟ ಮಾಡಿ ಕೋಣೆಗೆ ಬಂದು ಮಲಗಿದ ಕೂಡಲೇ ನನಗೆ ತಡೆಯಲಾರದಂಥ ನಿದ್ರೆ ಬಂದಿತು. ಮಧ್ಯರಾತ್ರಿಯ ಸಮಯದಲ್ಲಿ ಎಚ್ಚರಗೊಂಡಾಗ ನಾನು ಸಂಪೂರ್ಣ ವಿವಸ್ತ್ರಳಾಗಿದ್ದೆ. ನನ್ನ ಬಟ್ಟೆಗಳು ಹಾಸಿಗೆಯ ಮೇಲಾಗಲೀ ಹತ್ತಿರದಲ್ಲಾಗಲೀ ಇರಲಿಲ್ಲ. ಗಾಬರಿಯಾದ ನಾನು ನನ್ನ ಮಂಚದ ಕೆಳಗೇ ಮಲಗಿದ್ದ ಆನಂದನನ್ನು ಎಬ್ಬಿಸಿ ‘ರಾತ್ರಿ ಮಲಗಿದ್ದಾಗ ನೈಟಿ ಮತ್ತು ಒಳಉಡುಪುಗಳನ್ನು ಧರಿಸಿಯೇ ಮಲಗಿದ್ದೆ, ಈಗೇಕೆ ಅವು ಇಲ್ಲ?’ ಎಂದು ಕೇಳಿದಾಗ ಆನಂದ್ ‘ನನಗೇನೂ ಗೊತ್ತಿಲ್ಲ. ಸೆಖೆ ಎಂದು ನೀನೇ ಬಟ್ಟೆಗಳನ್ನು ಬಿಚ್ಚಿರಬಹುದು’ ಎಂದ. ಅವನು ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದು ನನಗನಿಸಿತು. ರಾತ್ರಿ ಮಾಡಿದ್ದ ಊಟದಲ್ಲಿ ಯಾವುದೋ ಮಾದಕ ಪದಾರ್ಥವನ್ನು ಬೆರೆಸಿರಬಹುದು ಎನ್ನುವ ಅನುಮಾನ ಬಂದರೂ ಪೂರಕ ಮಾಹಿತಿ ದೊರೆಯಲಿಲ್ಲ.
ಇದಾದ ಕೆಲದಿನಗಳ ನಂತರ ಸ್ನೇಹಿತೆ ಕರೆ ಮಾಡಿ, ‘ಏನು ಸುಧಾ ಫೇಸ್ಬುಕ್ನ ನಿನ್ನ ವಾಲ್ನಲ್ಲಿ ನೀನು ಇತರರೊಡನೆ ಸೆಕ್ಸ್ಗೆ ತಯಾರಿಗಿರುವೆ ಎಂದು ಹೇಳಿಕೊಂಡು ನಗ್ನಳಾಗಿ ಮಲಗಿರುವ ಫೋಟೋವನ್ನು ಹಾಕಿರುವೆಯಲ್ಲ’ ಎಂದಾಗ ನನಗೆ ಗಾಬರಿಯಾಯಿತು. ‘ನನ್ನ ಫೇಸ್ಬುಕ್ ಖಾತೆಗೆ ಲಾಗ್ಇನ್ ಆಗಿಯೇ ಆರು ತಿಂಗಳಾಯಿತಲ್ಲ’ ಎಂದು ಅವಳಿಗೆ ಹೇಳಿ ಕೂಡಲೇ ಫೇಸ್ಬುಕ್ ಪುಟವನ್ನು ತೆಗೆದು ನೋಡಿದಾಗ ನಾನು ನನ್ನ ಕೋಣೆಯಲ್ಲಿ ಬೆತ್ತಲೆಯಾಗಿ ನಿದ್ರಿಸುತ್ತಿ್ತ್ದ ಚಿತ್ರವನ್ನು ಹಾಕಲಾಗಿದ್ದು, ‘ಹತ್ತು ಸಾವಿರ ರೂ. ಕೊಟ್ಟರೆ ನಾನು ಒಂದು ರಾತ್ರಿ ಇತರರೊಡನೆ ಕಳೆಯಲು ಸಿದ್ಧ’ ಎಂದು ಅದರ ಕೆಳಗೆ ಬರೆದಿತ್ತು. ನಾನು ಗಾಬರಿಯಿಂದ ಬೆವೆತುಹೋದೆ.
ಆ ಸಂಜೆ ಆನಂದ್ ತನ್ನ ಕಚೇರಿಯಿಂದ ಮನೆಗೆ ಮರಳಿದ ಕೂಡಲೇ ಎಲ್ಲರೆದುರೂ ಅವನನ್ನು ತರಾಟೆಗೆ ತೆಗೆದುಕೊಂಡೆ. ‘ಹೌದು ನಾವೇ ನಿನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ಈ ರೀತಿ ಮಾಡಿದ್ದೇವೆ. ಈಗ ನಿನ್ನ ಮುಂದೆ ಇರುವುದು ಎರಡೇ ದಾರಿ. ನನ್ನ ತಮ್ಮನನ್ನು ಮದುವೆಯಾಗಿ ಸುಖವಾಗಿರು, ಇಲ್ಲವೇ ನಿನ್ನ ತವರುಮನೆಯಿಂದ -ಠಿ; 20 ಲಕ್ಷ ತಂದು ನನ್ನ ಚಿಕಿತ್ಸೆ ಮಾಡಿಸಿ ನನ್ನ ಜೊತೆ ವೈವಾಹಿಕ ಜೀವನವನ್ನು ಮುಂದುವರಿಸು’ ಎಂದ. ನಾನಿದನ್ನು ಕೇಳಿದ ಕೂಡಲೇ ಅವನ ಮನೆ ಬಿಟ್ಟು ತಾಯಿಯ ಮನೆಗೆ ಬಂದಿದ್ದೇನೆ. ತಾವು ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದು’’.
ಈ ದೂರಿನ ಮೇರೆಗೆ ಸುಲಿಗೆ, ವರದಕ್ಷಿಣೆ ಕಿರುಕುಳ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ತನಿಖೆಯಲ್ಲಿ ಆನಂದ್ ಹಾಗೂ ಆತನ ತಾಯಿಯ ಮೇಲೆ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅವರಿಬ್ಬರ ಮೇಲೆ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿದರು. ಅವರಿಬ್ಬರಿಗೂ ಏಳು ವರ್ಷದ ಜೈಲುವಾಸವಾಯಿತು. ‘ದುರುಳತನವು (ಈವಿಲ್) ಅನಾಕರ್ಷಕವಾಗಿದ್ದು ನಿರಂತರವಾಗಿ ಮಾನವನಂತೆ ಇರುತ್ತಿದ್ದು ನಮ್ಮ ಹಾಸಿಗೆಯನ್ನೇ ಹಂಚಿಕೊಂಡು ನಮ್ಮ ಮೇಜಿನ ಮೇಲೆಯೇ ಊಟ ಮಾಡುತ್ತದೆ’ ಎಂದ ಇಂಗ್ಲಿಷ್ ಕವಿ ಆಡೆನ್ನ ಮಾತುಗಳು ನಿಜವಾದವು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)