ವಿಶ್ವಾವಸು ಸಂವತ್ಸರ ಶುಭಕರ ಹೊಸ ಯುಗ, ಹೊಸ ಸಮೃದ್ಧಿ

ವಿಜಯವಾಣಿ (12)
Published on

(ಲೇಖಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು)

ಕ್ರೋಧಿನಾಮ ಸಂವತ್ಸರವನ್ನು ಬೀಳ್ಕೊಟ್ಟು ಇದೀಗ ನಾವು ವಿಶ್ವಾವಸು ಸಂವತ್ಸರ ಪ್ರವೇಶಿಸಿದ್ದೇವೆ. ಕ್ರೋಧಿ ಎಂಬ ಹೆಸರೇ ಸೂಚಿಸುವಂತೆ ಕಳೆದ ವರ್ಷ ರಾಷ್ಟ್ರಜೀವನದಲ್ಲಿ, ವ್ಯಕ್ತಿಗತ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡದ್ದಾಗಿದೆ. ಭಾವನೆಗಳನ್ನು ಪ್ರಚೋದಿಸುವ ಕುಜ ಮತ್ತು ರಾಹು ಕ್ರೋಧಿನಾಮ ಸಂವತ್ಸರವನ್ನು ಅತಿಹೆಚ್ಚು ಪ್ರಭಾವಿಸಿದ್ದವು. ವಿಶ್ವಾವಸು ಹಾಗಲ್ಲ, ಆ ಹೆಸರಿನಲ್ಲೇ ಶುಭಕರ ಅರ್ಥಗಳಿವೆ. ವಿಶ್ವಾವಸು ಎಂದರೆ ವಿಶ್ವದಲ್ಲಿ ಶಾಂತಿ, ಸಮೃದ್ಧಿ ಉಂಟುಮಾಡುವ ಸಂವತ್ಸರ.

ನಾವೇನೋ ಪ್ರತಿವರ್ಷ ಚೈತ್ರಮಾಸದ ಮೊದಲ ದಿನ ಯುಗಾದಿಯನ್ನು ಆಚರಿಸುತ್ತೇವೆ. ಯುಗಾದಿ ಎಂದರೆ ಕಾಲದ ಪ್ರಾರಂಭ ಎಂಬ ಅರ್ಥವಿದೆ. ಆದರೆ ನಿಜಕ್ಕೂ ಕಾಲಕ್ಕೆ ಪ್ರಾರಂಭ-ಅಂತ್ಯ ಇದೆಯೇ? ಸೃಷ್ಟಿಗೆ ಮೊದಲು-ಕೊನೆ ಉಂಟೇ? ಇವೆಲ್ಲ ನಾಸ್ತಿಕರು ಕೇಳುವ ಪ್ರಶ್ನೆಗಳಲ್ಲ. ಋಗ್ವೇದದಲ್ಲಿ ಈ ಜಿಜ್ಞಾಸೆಯುಂಟು. ವಿಜ್ಞಾನ ಹೇಗೆ ಪ್ರಶ್ನೆಗಳಿಂದ ಪ್ರಾರಂಭವಾಗುವುದೋ ಹಾಗೆಯೇ ವೇದೋಪನಿಷತ್ತುಗಳೂ ಬದುಕಿನ ನಿಗೂಢಗಳ ಅನ್ವೇಷಣೆಯಿಂದ ಪ್ರಾರಂಭವಾಗುತ್ತವೆ. ಇದಕ್ಕೆ ಉದಾಹರಣೆಯಾಗಿ ಎಲ್ಲ ವಿದ್ವಾಂಸರೂ ಒಪ್ಪಿಕೊಂಡಿರುವ ಋಗ್ವೇದದ ನಾಸದೀಯ ಸೂಕ್ತದ ಮಂತ್ರಗಳನ್ನು ಇಲ್ಲಿ ಉದ್ಧರಿಸಬಹುದು.

ನಾಸದಾಸೀನ್ನೋ ಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |

ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ ||

‘ಮೊದಲಿಗೆ ಸತ್ಯ, ಅಸತ್ಯವೆರಡೂ ಇರಲಿಲ್ಲ, ಲೋಕ-ಆಕಾಶವೂ ಇರಲಿಲ್ಲ. ಏನು, ಎಲ್ಲಿ, ಯಾರ ಆಶ್ರಯದಲ್ಲಿ ಆವರಿಸಿತ್ತು? ಅಲ್ಲಿ ಗಹನವೂ ಗಭೀರವೂ ಆದ ನೀರೇನಾದರೂ ಇತ್ತೆ?’

ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರಾ್ಯ ಅಹ್ನ ಅಸೀತ್ಪ್ರಕೇತಃ |

ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||

‘ಆಗ ಮೃತ್ಯು, ಅಮೃತತ್ವಗಳೆರಡೂ ಇರಲಿಲ್ಲ, ರಾತ್ರಿಹಗಲುಗಳಿಗೆ ಭೇದವಿರಲಿಲ್ಲ; ಅದು (ಗಾಳಿ ಇಲ್ಲದೆ) ತನ್ನ ಬಲದಿಂದಲೇ ಉಸಿರಾಡುತ್ತಿತ್ತು. ಹೊರಗೆ ಬೇರೆ ಏನೂ ಇರಲಿಲ್ಲ.’

ಇಯಂ ವಿಸೃಷ್ಟಿರ್ಯತ ಆಬಭೂವ ಯದಿ ವಾ ದಧೇ ಯದಿ ವಾ ನ |

ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್ ಸೋ ಅಂಗ ವೇದ ಯದಿ ವಾ ನ ವೇದ ||

‘ಈ ಸೃಷ್ಟಿ ಎಲ್ಲಿಂದ ಉದ್ಭವವಾಯಿತು; ಅವನು ಅದನ್ನು ಸ್ಥಾಪಿಸಿದನೋ ಅಥವಾ ಇಲ್ಲವೋ? ಮೇಲಿನಿಂದ ಎಲ್ಲವನ್ನೂ ನೋಡುವ ಅವನಿಗೇ ಅದು ಗೊತ್ತು; ಇಲ್ಲ ಅವನಿಗೂ ತಿಳಿಯದೋ?’

ಭಾರತೀಯ ಧರ್ಮಗಳು ಪ್ರಶ್ನೆ-ಜಿಜ್ಞಾಸೆ, ವೈಜ್ಞಾನಿಕ ದೃಷ್ಟಿಕೋನ, ಪ್ರಕೃತಿಯ ಮೇಲಿನ ಶ್ರದ್ಧೆಯನ್ನು ಆಧರಿಸಿವೆ. ಯುಗಾದಿಯೂ ಪ್ರಕೃತಿಯ ಮೇಲಿನ ಶ್ರದ್ಧೆಯಿಂದ ಆಚರಿಸುವ ಹಬ್ಬವಾಗಿದೆ.

ಯುಗಾದಿಯಂದು ಸೂರ್ಯಚಂದ್ರರಲ್ಲಷ್ಟೇ ಅಲ್ಲ ಪ್ರಕೃತಿ, ವನಸ್ಪತಿ, ಮಾನವ ಶರೀರದಲ್ಲಿ ಪರಿವರ್ತನೆಗಳು ಉಂಟಾಗುತ್ತವೆ ಎಂದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ರೈತರು ಯುಗಾದಿಯಂದು ಹೊಸದಾಗಿ ಕೃಷಿ ಚಟುವಟಿಕೆ ಪ್ರಾರಂಭಿಸುವುದರಿಂದ ಇದು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮುಖ್ಯವಾದ ಹಬ್ಬ. ಪುರಾಣಗಳ ಪ್ರಕಾರ ಯುಗಾದಿ ಬ್ರಹ್ಮ ಸೃಷ್ಟಿಕ್ರಿಯೆಯನ್ನು ಪ್ರಾರಂಭಿಸಿದ ದಿವಸ; ಕಾಲಚಕ್ರದ ಪ್ರವರ್ತನೆಯ ದಿವಸ. ಶ್ರೀರಾಮಚಂದ್ರನ ಪಟ್ಟಾಭಿಷೇಕವಾದುದೂ ಈ ಹಬ್ಬದಂದೇ.

ಯುಗಾದಿಗೊಂದು ವೈಜ್ಞಾನಿಕ ನೆಲೆಗಟ್ಟಿದೆ. ಪ್ರಸ್ತುತ ವಿಶ್ವಸೃಷ್ಟಿಯ ಮೂಲವನ್ನು ಪ್ರಸ್ತಾಪಿಸುವ ಬಿಗ್ ಬ್ಯಾಂಗ್ ಥಿಯರಿ ಅಥವಾ ಮಹಾಸ್ಪೋಟ ಸಿದ್ಧಾಂತದ ಹಿನ್ನೆಲೆಯಲ್ಲಿ ಯುಗಾದಿಯನ್ನು ವಿವೇಚಿಸಬಹುದು. ಪುರಾಣಗಳಲ್ಲಿ ಪ್ರಸ್ತಾಪಿತವಾಗಿರುವ ಸೃಷ್ಟಿಮೂಲದ ಮತ್ತು ಕಾಲದ ಕಲ್ಪನೆಗೂ ಬಿಗ್ ಬ್ಯಾಂಗ್ ಸಿದ್ಧಾಂತಕ್ಕೂ ಸಾಕಷ್ಟು ಸಾಮ್ಯವಿದೆ. 13.82 ಬಿಲಿಯನ್ ವರ್ಷಗಳ ಹಿಂದೆ ಘಟಿಸಿದ ಮಹಾಸ್ಪೋಟದಿಂದ ಈ ವಿಶ್ವ (ಯುನಿವರ್ಸ್) ಸೃಷ್ಟಿಯಾಯಿತು ಎನ್ನುತ್ತದೆ ಬಿಗ್ ಬ್ಯಾಂಗ್ ಸಿದ್ಧಾಂತ. ಅಂದರೆ ಈ ವಿಶ್ವಕ್ಕೆ ಇಂದಿಗೆ 13.82 ಬಿಲಿಯನ್ ವರ್ಷ ವಯಸ್ಸಾಗಿದೆ. ಇದು ಕಾಲದ ಅಥವಾ ಪ್ರಾಚೀನತೆಯ ವಿಷಯವಾಯಿತು.

ಇನ್ನು ವಿಸ್ತೀರ್ಣದ ವಿಷಯಕ್ಕೆ ಬರುವುದಾದರೆ, ಬಿಗ್ ಬ್ಯಾಂಗ್ ಮಹಾಸ್ಪೋಟ ಸಂಭವಿಸಿದ ಮೇಲೆ ಈ ವಿಶ್ವ 93.5 ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾಗಿ ಬೆಳೆದಿದೆ ಎಂದು ಖಗೋಳ ವಿಜ್ಞಾನಿಗಳು ಹಬಲ್ ದೂರದರ್ಶಕ ಯಂತ್ರದ ನೆರವಿನಿಂದ ಊಹಿಸಿದ್ದಾರೆ (ಬೆಳಕು ಪ್ರತಿ ಸೆಕೆಂಡಿಗೆ 3 ಲಕ್ಷ ಕಿ.ಮೀ. ಪಯಣಿಸುತ್ತದೆ. ಈ ವೇಗದಲ್ಲಿ ಬೆಳಕು ಒಂದು ಇಡೀ ವರ್ಷ ಪಯಣಿಸಿದರೆ ಆ ದೂರವನ್ನು ಒಂದು ಜ್ಯೋತಿರ್ವರ್ಷ ಎನ್ನಲಾಗುತ್ತದೆ). ಭವಿಷ್ಯದಲ್ಲಿ ಇನ್ನೂ ಸುಧಾರಿತ ದೂರದರ್ಶಕ ಯಂತ್ರಗಳ ಆವಿಷ್ಕಾರವಾದರೆ ವಿಶ್ವ ಇನ್ನೂ ಹಲವು ಬಿಲಿಯನ್, ಟ್ರಿಲಿಯನ್ ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾದುದೆಂದು ಗೊತ್ತಾಗಬಹುದು. ವಿಜ್ಞಾನದ ಈ ವಿಶ್ವಸೃಷ್ಟಿಯ ಸಿದ್ಧಾಂತ ಇಂದಿಗೂ ಕಲ್ಪನೆಯಾಗಿದೆಯೇ ವಿನಾ ಮನುಷ್ಯಕೃತವಾದ ಯಾವ ಉಪಕರಣಕ್ಕೂ ಇದನ್ನು ರುಜುವಾತುಪಡಿಸಲು ಸಾಧ್ಯವಾಗಿಲ್ಲ.

ಇನ್ನು ಪದಾರ್ಥದ ವಿಷಯಕ್ಕೆ ಬರುವುದಾದರೆ, ಅಂದಿನ ಸ್ಪೋಟದಲ್ಲಿ ಸುಮಾರು 2 ಟ್ರಿಲಿಯನ್ ಬ್ರಹ್ಮಾಂಡಗಳು (ಗ್ಯಾಲಕ್ಸಿ) ಸೃಷ್ಟಿಯಾದವು ಎನ್ನುತ್ತಾರೆ ವಿಜ್ಞಾನಿಗಳು. ಅಗಣಿತ ತಾರೆ ನೀಹಾರಿಕೆಗಳು, ಗ್ರಹೋಪಗ್ರಹಗಳು, ಉಲ್ಕೆ-ಧೂಮಕೇತುಗಳು, ಕ್ಷುದ್ರಗ್ರಹಗಳು, ಅಸಂಖ್ಯ ಆಕಾಶಕಾಯಗಳು ಅಸ್ತಿತ್ವಕ್ಕೆ ಬಂದವು. ಕ್ರಮೇಣ ಸಕಲ ಜೀವರಾಶಿಗಳೂ ಸೃಷ್ಟಿಯಾದವು. ಇಂದಿಗೂ ಭೌತದ್ರವ್ಯವು ಉಪಾಣು (ಸಬ್ ಅಟಾಮಿಕ್ ಪಾರ್ಟಿಕಲ್), ಪರಮಾಣು(ಆಟಂ)ಗಳಾಗಿ ದ್ವಿಗುಣಿತವಾಗುತ್ತ ವಿಸ್ತರಿಸುತ್ತಲೇ ಇದೆ.

ಹಿಂದೂ ಪುರಾಣಗಳಲ್ಲಿಯೂ ಇದನ್ನೇ ಹೋಲುವ ವಿಚಾರಗಳಿವೆ. ಆದರೆ ಒಂದು ವ್ಯತ್ಯಾಸವಿದೆ. ಆಧುನಿಕ ವಿಜ್ಞಾನವು ದ್ರವ್ಯದ ನೆಲೆಯಿಂದ ಸಂಶೋಧನೆ ಪ್ರಾರಂಭಿಸಿ ಪ್ರಜ್ಞೆಯ ನೆಲೆಯನ್ನು ತಲುಪಿದರೆ ಅಧ್ಯಾತ್ಮವು ಪ್ರಜ್ಞಾನೆಲೆಯಿಂದ ಜಿಜ್ಞಾಸೆ ಪ್ರಾರಂಭಿಸಿ ಪದಾರ್ಥದ್ರವ್ಯ ಸೃಷ್ಟಿಯ ನೆಲೆಯನ್ನು ತಲುಪುತ್ತದೆ. ಸೃಷ್ಟಿಪೂರ್ವದಲ್ಲಿದ್ದ ಅಖಂಡ ಪ್ರಜ್ಞೆಯು ಆವಿರ್ಭಾವವಾಗಿ ವಿಕಾಸವಾಯಿತು. ಪ್ರಜ್ಞೆ ಶಾಂತವಾಯಿತು, ಅತಿಶಾಂತವಾಯಿತು, ಅಕಾರ, ಉಕಾರ, ಮಕಾರಗಳು, ಅಂದರೆ, ಪ್ರಣವ ಬೀಜಾಕ್ಷರ ಹುಟ್ಟಿತು. ಪ್ರಣವದಿಂದ ನಾದ, ನಾದದಿಂದ ಬಿಂದು, ಬಿಂದುವಿನಿಂದ ಕಲೆ ವಿಕಾಸವಾದವು. ಕಲ್ಪದ (ಬ್ರಹ್ಮನ ಒಂದು ದಿವಸ) ಆದಿಯಲ್ಲಿ ಬ್ರಹ್ಮ ತನ್ನ ಪ್ರಜ್ಞಾಶಕ್ತಿಯಿಂದ ಜಗತ್ತನ್ನು ಅಂದರೆ ಭೌತದ್ರವ್ಯ, ದೇಶ, ಕಾಲಗಳನ್ನು ಸೃಷ್ಟಿಸಿದ. ಈ ಮೂರನ್ನು ಕ್ರಮವಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಸಂಕೇತಿಸುವರು. ಬ್ರಹ್ಮ ಮಹಾಸ್ಪೋಟವನ್ನೂ (ಬಿಗ್ ಬ್ಯಾಂಗ್), ವಿಷ್ಣು ಬ್ರಹ್ಮಾಂಡ(ಗ್ಯಾಲಕ್ಸಿ)ದ ವಿಸ್ತರಣೆಯನ್ನೂ (ಕಾಸ್ಮಿಕ್ ವಿಸ್ತರಣೆ) ಮತ್ತು ಶಿವ ಬ್ರಹ್ಮಾಂಡದ ಲಯವನ್ನೂ (ಬಿಗ್ ಕ್ರಂಚ್) ಸಂಕೇತಿಸುವರು.

ಬ್ರಹ್ಮ ನಾಲ್ಕು ವೇದಗಳನ್ನು (ಋಗ್, ಯಜುರ್, ಸಾಮ, ಅಥರ್ವ), ಸಪ್ತ ಋಷಿಗಳನ್ನು (ಭೃಗು, ಅತ್ರಿ, ಅಂಗೀರಸ, ಮರೀಚಿ, ಪುಲಸ್ಱ, ಪುಲಃ, ಕ್ರತು), ಸಪ್ತಲೋಕಗಳನ್ನು (ಭೂಲೋಕ, ಭುವಲೋಕ, ಸುವಲೋಕ, ಮಹಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ), ಸಪ್ತಪಾತಾಳಗಳನ್ನು (ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಲ, ಪಾತಾಲ), ಹದಿನಾಲ್ಕು ಮನ್ವಂತರಗಳನ್ನು (ಸ್ವಯಂಭೂ, ಸ್ವರೋಚ್ಛಿಶ, ಉತ್ತಮ, ತಾಮಸ, ರೈವತ, ಚಾಕ್ಷುಷ, ವೈವಸ್ವತ, ಸವರ್ಣಿ, ದಕ್ಷ ಸವರ್ಣಿ, ಬ್ರಹ್ಮಸವರ್ಣಿ, ಧರ್ಮಸವರ್ಣಿ, ರುದ್ರಸವರ್ಣಿ, ರೌಚ್ಯ, ಭೌತ್ಯ), ಸಪ್ತಕುಲಪರ್ವತಗಳನ್ನು (ಹಿಮಾಲಯ, ಹೇಮಕೂಟ, ನಿಷಧ, ನೀಲ, ಶ್ವೇತ, ಶ್ರೀ, ವಿಂಧ್ಯ), ಸಪ್ತಸಿಂಧುಗಳನ್ನು (ಗಂಗಾ, ಯಮುನಾ, ಸರಸ್ವತೀ, ಸಿಂಧೂ, ಗೋದಾವರಿ, ನರ್ಮದಾ, ಕಾವೇರಿ), ದೇವತೆಗಳು, ಅಸುರರು, ರಾಕ್ಷಸರು, ನಾಗರು, ಗಂಧರ್ವರು, ಅಪ್ಸರೆಯರು, ಮಾನವರು, ತಿರ್ಯಕ್ ಜಂತುಗಳನ್ನು ಸೃಷ್ಟಿಸಿದ.

4.32 ಬಿಲಿಯನ್ ವರ್ಷಗಳಿಗೆ ಒಂದು ಕಲ್ಪ. ಈ ಅವಧಿಯು ಬ್ರಹ್ಮನ ಒಂದು ದಿವಸ. ಭೂಮಿಯ ವಯಸ್ಸೂ 4.32 ಬಿಲಿಯನ್ ವರ್ಷ. ಚಕ್ರೀಯವಾದ ಒಂದೊಂದು ಮಹಾಯುಗದಲ್ಲೂ ನಾಲ್ಕು ಯುಗಗಳಿವೆ. ಕೃತಯುಗ 17,28,000 ವರ್ಷಗಳು, ತ್ರೇತಾಯುಗ 12,96,000 ವರ್ಷಗಳು, ದ್ವಾಪರಯುಗ 8,64,000 ವರ್ಷಗಳು ಮತ್ತು ಕಲಿಯುಗ 4,32,000 ವರ್ಷಗಳು- ಹೀಗೆ ನಾಲ್ಕು ಯುಗಗಳು ಸೇರಿ ಒಂದು ಮಹಾಯುಗವಾಗಿ ಒಟ್ಟಾರೆ 4.32 ಮಿಲಿಯನ್ ವರ್ಷಗಳಾಗುತ್ತವೆ. ಒಂದು ಮನ್ವಂತರದ ಅವಧಿ 30.672 ಕೋಟಿ ವರ್ಷ. 14 ಮನ್ವಂತರ ಸೇರಿ ಒಂದು ಕಲ್ಪ. ಇದು ಬ್ರಹ್ಮನ ಒಂದು ದಿವಸದ ಕಾಲಚಕ್ರವಾಗಿದೆ. ಬ್ರಹ್ಮ ಏತಕ್ಕಾಗಿ ಇದನ್ನೆಲ್ಲ ಸೃಷ್ಟಿಸಿದ ಎಂಬ ಪ್ರಶ್ನೆಗೆ ಪುರಾಣಗಳು ತನ್ನ ಲೀಲೆಗಾಗಿ ಸೃಷ್ಟಿಸಿದನೆಂದು ಉತ್ತರ ನೀಡುತ್ತವೆ.

ಪುರಾಣಗಳ ಪ್ರಕಾರ ಕೃತ, ತ್ರೇತಾದಿ ಯುಗಗಳೂ ಒಂದೇ ಗುಣಧರ್ಮದ್ದಲ್ಲ. ಕೃತಯುಗದ ಧರ್ಮ, ನ್ಯಾಯ, ನೀತಿಗಳು ತ್ರೇತಾಯುಗದಲ್ಲಿ ಕ್ಷೀಣಿಸುತ್ತವೆ. ದ್ವಾಪರ ಮತ್ತು ಕಲಿಯುಗದಲ್ಲಿ ಇನ್ನಷ್ಟು ಕ್ಷೀಣಿಸುತ್ತವೆ. ಅಂದರೆ ಕಾಲವೆಂಬುದು ನಿರ್ಗಣ, ನಿರಪೇಕ್ಷವಲ್ಲ, ಅದು ಗುಣಧರ್ಮ ಸ್ವರೂಪದ್ದು, ಸಾಪೇಕ್ಷವಾದುದು. ಆಧುನಿಕ ಭೌತವಿಜ್ಞಾನವೂ ಇದನ್ನೇ ಪ್ರತಿಪಾದಿಸುತ್ತದೆ. ಕಾಲವೆಂಬುದು ಸಾಪೇಕ್ಷವಾದುದು, ಗುರುತ್ವಾಕರ್ಷಣೆ, ವಿಕರ್ಷಣೆ, ವಿಸ್ತರಣೆಗಳಿಂದ ಪ್ರಭಾವಗೊಳ್ಳುವಂತಹುದು ಎನ್ನುತ್ತದೆ. ಖಗೋಳ ಭೌತಶಾಸ್ತ್ರ ಹಾಗೂ ಪುರಾಣ, ಧರ್ಮಶಾಸ್ತ್ರ ಎಲ್ಲವೂ ಕಾಲವನ್ನು ಆವರ್ತನಶೀಲವೆಂದೂ, ನಿತ್ಯ ಪರಿವರ್ತನಶೀಲವೆಂದೂ ಸಾರುತ್ತವೆ. ಹೀಗೆ ಯುಗಾದಿ ಕೇವಲ ಹೊಸ ವರ್ಷಾಚರಣೆಗೆ ಸೀಮಿತವಾದ ಹಬ್ಬವಲ್ಲ, ಅಖಂಡ ಬ್ರಹ್ಮಾಂಡದೊಳಗಿನ ಶಾಶ್ವತ ಸತ್ಯಗಳನ್ನು ನೆನಪಿಸುವ ಒಂದು ಅಪೂರ್ವಕಾಲ. ಪುರಾಣಗಳ ಪ್ರಕಾರ ಕಾಲ ಚಕ್ರಗತಿಯದ್ದಾಗಿದೆ. ಕಲ್ಪಾಂತ್ಯವಾದ ಮೇಲೆ ಮತ್ತೆ ಹೊಸ ಕಲ್ಪ ಸೃಷ್ಟಿಯಾಗುತ್ತದೆ. ಯುಗಾದಿ ಸಂಕೀರ್ಣಮಯವಾದ ಈ ಕಾಲಚಕ್ರದ ಒಂದು ಸಣ್ಣ ವ್ಯಾಪ್ತಿಯ ಸೃಷ್ಟಿ, ಸ್ಥಿತಿ ಮತ್ತು ಲಯವೆಂಬ ಈ ಕೊನೆಯಿರದ ಆವರ್ತನದ ಆದಿಯನ್ನು ಸಂಕೇತಿಸುತ್ತದೆ.

ಯುಗಾದಿಗೆ ಆಯುರ್ವೆದಿಕ ಮಹತ್ವವೂ ಉಂಟು. ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯು ಉಪ್ಪು, ಹುಳಿ, ಖಾರ, ಸಿಹಿ, ಕಹಿ ಮತ್ತು ಒಗರು ಈ ಆರು ರುಚಿಗಳನ್ನು ಒಳಗೊಂಡಿದ್ದು ಇದನ್ನು ಷಡ್ರಸಗಳು ಎಂದು ಕರೆಯುತ್ತಾರೆ. ಯುಗಾದಿಯಂದು ಈ ಆರೂ ರುಚಿಗಳಿಂದ ಕೂಡಿದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ಆರು ರಸಗಳು ಕೇವಲ ನಾಲಗೆಯ ರುಚಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ಮನುಷ್ಯನ ಆರು ಗುಣಗಳನ್ನು, ಕಾಲಚಕ್ರದ ಗತಿಯಲ್ಲಿ ಸಂಭವಿಸುವ ಜೀವವಿಕಾಸ ಮತ್ತು ವಿವಿಧ ಪರಿವರ್ತನೆಗಳನ್ನು ಪ್ರತಿನಿಧಿಸುತ್ತವೆ. ಆಯುರ್ವೆದದ ಪ್ರಕಾರ ಕಹಿ ದುಃಖವನ್ನೂ, ಸಿಹಿ ಸಂತೋಷವನ್ನೂ, ಹುಳಿ ಅಚ್ಚರಿಯನ್ನೂ, ಒಗರು ಜಿಗುಪ್ಸೆಯನ್ನೂ, ಖಾರ ಸಿಟ್ಟನ್ನೂ, ಉಪ್ಪು ಭಯವನ್ನೂ ಪ್ರಚೋದಿಸುತ್ತವೆ. ಈ ಆರೂ ರಸಗಳು ಶರೀರದ ತ್ರಿದೋಷಗಳ (ಕಫ, ವಾತ, ಪಿತ್ತ) ನಡುವೆ ಸಮತೋಲನ ಉಂಟು ಮಾಡುತ್ತವೆ.

ಕಾಲಧರ್ಮವನ್ನು ಆರಾಧಿಸುವ ಪರಿಕಲ್ಪನೆ ಹಿಂದೂಗಳಿಗಷ್ಟೇ ಸೀಮಿತವಾದುದಲ್ಲ, ಇತರ ಧರ್ಮಗಳಲ್ಲೂ ಕಾಲಚಕ್ರ ಪ್ರವರ್ತನೆಯನ್ನು ಆರಾಧಿಸುವ ಪರಿಪಾಠವುಂಟು. ಕ್ರಿಶ್ಚಿಯನ್ನರ ಹೊಸಯುಗದ ಆರಂಭವನ್ನು ಹಳೆಯ ಒಡಂಬಡಿಕೆಯ ಜೆನೆಸಿಸ್​ನಲ್ಲಿ ತಿಳಿಯಬಹುದು. ದೇವರು ಶೂನ್ಯದಿಂದ ಸಮಸ್ತ ಜಗತ್ತನ್ನೂ ಸೃಷ್ಟಿಸಿದ ಸಮಯವನ್ನು ಜೆನೆಸಿಸ್ ಎನ್ನುತ್ತಾರೆ. ಪ್ರತಿಯೊಂದಕ್ಕೂ ಒಂದು ಸಮಯವಿದೆ, ಪ್ರತಿಯೊಂದು ಉದ್ದೇಶಕ್ಕೂ ಕಾಲ ಕೂಡಿಬರಬೇಕಿದೆ (ಎಕ್ಲೆಸಿಯಾಸ್ಟಸ್ 3.1). ಮನುಷ್ಯರನ್ನು ಹೊಸ ಜೀವನಕ್ಕೆ ಸಜ್ಜುಗೊಳಿಸುವ ಪಾಪನಿವೇದನೆ, ಪುನರುಜ್ಜೀವನ, ದೀಕ್ಷಾಸ್ನಾನ, ಈಸ್ಟರ್ ಹಬ್ಬ ಮುಂತಾದ ಕ್ರಿಶ್ಚಿಯನ್ ಕಲ್ಪನೆ ಯುಗಾದಿಯ ಆಚರಣೆಯನ್ನೇ ನೆನಪಿಗೆ ತರುತ್ತದೆ.

ಹಿಜಿರಾ ಶಕೆಯನ್ನು ಅನುಸರಿಸುವ ಇಸ್ಲಾಂ ಹೊಸವರ್ಷವೂ ಭಾರತೀಯ ಪಂಚಾಂಗದಂತೆಯೇ ಆಕಾಶದಲ್ಲಿ ಚಂದ್ರನ ಚಲನೆಯನ್ನು ಆಧರಿಸಿದೆ. ಕಾಲದ ಗತಿಯನ್ನು, ತತ್ಪರಿಣಾಮವಾಗಿ ಸಂಭವಿಸುವ ಹೊಸತನವನ್ನು ಕುರಾನ್ ಹಲವೆಡೆ ಪ್ರಸ್ತಾಪಿಸುತ್ತದೆ. ‘ಅಲ್ಲಾಹುವೇ (ದೇವರು) ದಿನ, ರಾತ್ರಿಗಳನ್ನು ಸೃಷ್ಟಿಸಿದ, ಸೂರ್ಯ ಚಂದ್ರರಿಗೆ ಜನ್ಮ ನೀಡಿದ, ಅವು ತಮ್ಮ ತಮ್ಮ ಕಕ್ಷೆಯಲ್ಲಿ ಚಲಿಸುವಂತೆ ಮಾಡಿದ’ (ಕುರಾನ್ 21.33). ನಮ್ಮ ಯುಗಾದಿಯಂತೆಯೇ ಮುಸ್ಲಿಮರ ರಂಜಾನ್ ಹಬ್ಬವೂ ಸಹ ಹೊಸ ಪ್ರಾರಂಭಕ್ಕೆ, ಆತ್ಮಶುದ್ಧಿಗೆ ಪ್ರೇರೇಪಿಸುವ ಹಬ್ಬವಾಗಿದೆ. ವಜ್ರಯಾನ ಬೌದ್ಧಧರ್ಮದಲ್ಲಿ ‘ಕಾಲಚಕ್ರ ತಂತ್ರ’ವೆಂಬ ಹೆಸರಿನ ಶಾಸ್ತ್ರಗ್ರಂಥವೇ ಇದೆ. ಬೌದ್ಧಧರ್ಮ ಅನಿತ್ಯತೆಯನ್ನು, ಕ್ಷಣಿಕವಾದವನ್ನು ಪ್ರತಿಪಾದಿಸುತ್ತದೆ, ಅಂದರೆ ಲೋಕದಲ್ಲಿ ಯಾವುದೂ ನಿತ್ಯವಲ್ಲ, ಎಲ್ಲವೂ ಕ್ಷಣಿಕವಾದುದು, ಎಲ್ಲವೂ ಮತ್ತೆ ಮತ್ತೆ ಹೊಸದಾಗಿ, ಪುನರುಜ್ಜೀವಿಸುವಂತಹುದು. ವೈಶಾಖ ಶುದ್ಧ ಪೂರ್ಣಿಮೆ ಬೌದ್ಧರಿಗೆ ಮಹತ್ವದ ಹಬ್ಬವಾಗಿದ್ದು ಈ ಹಬ್ಬವು ಯುಗಾದಿಯ ಸಂದೇಶವನ್ನೇ ಒಳಗೊಂಡಿದೆ.

ಇನ್ನು ಜೈನರು ಕಾಲದ ಆವರ್ತನವನ್ನು ಉರ್ತÕಣೀ ಮತ್ತು ಅವಸರ್ಪಿಣೀ ಎಂದು ವಿಂಗಡಿಸುತ್ತಾರೆ. ಉರ್ತÕಣಿಯಲ್ಲಿ ಧರ್ಮ ಪ್ರವರ್ಧಿಸಿದರೆ ಅವಸರ್ಪಿಣೀ ಯುಗದಲ್ಲಿ ಧರ್ಮಕ್ಷಯ ಉಂಟಾಗುತ್ತದೆ. (ಮಯಾಧ್ಯಕ್ಷೇನ) ಸೌರಮಾನ ಪಂಚಾಂಗವನ್ನು ಅನುಸರಿಸುವ ಸಿಖ್ಖರು ಯುಗಾದಿಯನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸುತ್ತಾರೆ, ವೈಶಾಖೀ ಎಂದು ಕರೆಯುತ್ತಾರೆ. ವೈಶಾಖೀ ಹಬ್ಬದಂದು ಅವರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. ಇರಾನೀ ಅನುಭಾವಿಯಾದ ಝುರತುಷ್ಟ್ರನನ್ನು ಅನುಸರಿಸುವ ಪರ್ಷಿಯನ್ನರು ಯುಗಾದಿಯನ್ನು ‘ನೌರಜ್’ ಎಂದು ಕರೆಯುತ್ತಾರೆ. ವಸಂತ ಋತುವಿನ ಪ್ರಾರಂಭವನ್ನು ಅವರು ಯುಗಾದಿಯೆಂದು ಭಾವಿಸುತ್ತಾರೆ. ಹೀಗೆ ಯುಗಾದಿ ಭೌತವಿಜ್ಞಾನ, ಖಗೋಳ ವಿಜ್ಞಾನಗಳನ್ನೂ ಒಳಗೊಂಡಂತೆ ಸರ್ವಧರ್ಮಗಳನ್ನೂ ಸಮನ್ವಯಿಸುವ, ಸರ್ವಧರ್ಮಗಳಲ್ಲೂ ಸಮಾನ ಅಂಶಗಳನ್ನು ಕಾಣಿಸುವ ಹಬ್ಬವಾಗಿದೆ.

ಆ ಎಲ್ಲ ಧರ್ಮಗಳೂ ಪರಮ ನಿಗೂಢವಾದ ಆ ತತ್ವವನ್ನು, ಅಂದರೆ ದೇವರನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ, ಹಲವು ಬಗೆಯ ರೂಪಗಳಲ್ಲಿ ವರ್ಣಿಸುತ್ತಾರೆ. ಧರ್ಮಗಳ ನಡುವಿನ ವ್ಯರ್ಥ ಕಲಹಗಳಿಗೆ ಪ್ರಾಯಶಃ ಈ ವ್ಯತ್ಯಾಸವೇ ಕಾರಣವೆನಿಸುತ್ತದೆ. ಬ್ರಹ್ಮ, ಇಂದ್ರಾದಿ ದೇವತೆಗಳಿಗಾಗಲಿ, ವೇದ ಉಪನಿಷತ್ತು ಮುಂತಾದ ಶಾಸ್ತ್ರಗಳಿಗಾಗಲಿ, ದೇವಾಸುರರಿಗಾಗಲಿ ಅಗೋಚರವಾದ, ಯೋಗಿಗಳ ಅಂತರ್ದೃಷ್ಟಿಗಷ್ಟೇ ಗೋಚರಿಸಬಲ್ಲ ಆ ಪರಮ ಚೈತನ್ಯದ ಬಾಹ್ಯರೂಪವೇ ಈ ಪ್ರಕೃತಿಯಾಗಿದೆ. ಪ್ರಕೃತಿಯ ಹೊಸತನವನ್ನು ಕಂಡು ಸಂಭ್ರಮಿಸುವ ಹಬ್ಬವಾದ ಯುಗಾದಿ ವಾಸ್ತವದಲ್ಲಿ ಆ ಅಗೋಚರನಾದ ಪರಮ ಚೈತನ್ಯದ ಆರಾಧನೆಯೇ ಆಗಿದೆ. ವಿಶ್ವಾವಸು ಸಂವತ್ಸರದ ಯುಗಾದಿ ಸರ್ವರಿಗೂ ಸಕಲ ಸಮೃದ್ಧಿ ನೀಡಲೆಂದು, ಪ್ರಕೃತಿಯ ಮೂಲಕವೇ ಪ್ರಕೃತಿಗೆ ಅತೀತವಾದ ಆ ಪರಮಚೈತನ್ಯವು ನಮ್ಮ ಒಳಗಣ್ಣಿಗೂ ಗೋಚರಿಸುವಂತಾಗಲೆಂದು ಈ ಸಂದರ್ಭದಲ್ಲಿ ಆಶಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net