

ಮನೆ ಹಳೆಯದಾಯಿತು, ಈಗಿನ ಟ್ರೆಂಡ್ಗೆ ತಕ್ಕಂತೆ ಮನೆ ನವೀಕರಣ ಮಾಡಬೇಕು. ಒಳಾಂಗಣ ವಿನ್ಯಾಸವನ್ನು ಸಂಪೂರ್ಣ ಬದಲಾಯಿಸಬೇಕು ಎನ್ನುವವರಿಗೆ ಈಗ ನೂರಾರು ಆಯ್ಕೆಗಳಿವೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಳೆಯ ಕಟ್ಟಡಗಳಿಗೆ ಹೊಸ ಲುಕ್ ನೀಡುವುದು ಈಗಿನ ಫ್ಯಾಷನ್ ಆಗಿದೆ. 30-40 ವರ್ಷಗಳ ಹಿಂದೆ ಕಟ್ಟಿದ ಮನೆಗೆ ಬಳಸಿದ ಟೈಲ್ಸ್, ಕಿಟಕಿ ,ಬಾಗಿಲುಗಳು , ಚಾವಣಿಗಳು ಈಗ ಬಹಳಷ್ಟು ಹಳೆಯದಾಗಿ ಕಾಣುತ್ತವೆ. ಕೆಲವರು ಕಳೆಯ ಮನೆಯನ್ನೇ ಕೆಡವಿ ಹೊಸ ಮನೆ ಕಟ್ಟೋಣವೆಂದರೆ ಸಾಕಷ್ಟು ಹಣ ಖರ್ಚಾಗುತ್ತದೆ. ಹಳೇ ಮನೆಯನ್ನೇ ನವೀಕರಿಸಿದರೆ ಹಣ ಉಳಿತಾಯವಾಗುತ್ತದೆ.
ಗಾಳಿ ಬೆಳಕು ಇರಲಿ
ಹಳೆ ಕಾಲದ ಮನೆಗಳಲ್ಲಿ ಗಾಳಿ, ಬೆಳಕು ಕಡಿಮೆ ಇರುತ್ತದೆ. ಮನೆ ಕಟ್ಟುವಾಗ ಗಾಳಿ ಬೆಳಕಿದ್ದರೂ ನಂತರ ಅಕ್ಕಪಕ್ಕದಲ್ಲಿ ಬಹುಮಹಡಿ ಕಟ್ಟಡಗಳು ಬಂದು ಸಮಸ್ಯೆಯಾಗಿರುತ್ತದೆ. ಇಂಥ ಮನೆಗಳಿಗೆ ವೆಂಟಿಲೇಷನ್ ಅಳವಡಿಸುವುದು. ಕಿಟಕಿಗಳ ಗಾತ್ರ ಹೆಚ್ಚಿಸುವುದು. ನೈಸರ್ಗಿಕ ಬೆಳಕು ಬರುವಂತೆ ಚಾವಣಿಗೆ ಗಾಜು ಅಳವಡಿಸಬಹುದು.
ಹೊಸ ವಿನ್ಯಾಸದ ಟೈಲ್ಸ್ಗಳು
ಅಂದಿನ ಕಾಲದ ಮನೆಗಳಿಗೆ ನೆಲಕ್ಕೆ ಸಿಮೆಂಟ್ ಅಥವಾ ರೆಡ್ ಆಕ್ಸೈಡ್ ಹಾಕಲಾಗಿತ್ತು. ಹಳೆಯ ಟೈಲ್ಸ್ಗಳನ್ನು ಬದಲಾಯಿಸಿ ಹೊಸ ಬಗೆಯ ವೆಟ್ರಿಫೈಡ್ ಟೈಲ್ಸ್ಗಳು, ಬಣ್ಣ ಬಣ್ಣದ ಗ್ರಾನೈಟ್ಸ್ ನೆಲಕ್ಕೆ ಹೊಸ ರೂಪ ನೀಡುತ್ತದೆ. ದೇವರ ಮನೆಗೆ ವೈಟ್ ಗ್ಲಾಸ್ ಟೈಲ್ಸ್ಗಳು ಮಧ್ಯ ಮಧ್ಯದಲ್ಲಿ ದೇವರುಗಳ ಚಿತ್ರವಿರುವ ಟೈಲ್ಸ್ಗಳು ಮತ್ತಷ್ಟು ಅಂದವನ್ನು ಹೆಚ್ಚಿಸುತ್ತದೆ.
ಸಾಂಪ್ರದಾಯಿಕ ಲುಕ್
ಹಳೆಯ ಮನೆಗೆ ಹೊಸ ಸ್ಪರ್ಶ ನೀಡಬೇಕು ಎಂದು ಬಯಸುವವರು ಮರದ ಪ್ಲೋರ್ಗಳು ಈಗ ಹೆಚ್ಚು ಚಾಲ್ತಿಯಲ್ಲಿದೆ. ಇದಕ್ಕೆ ನೆಲ ಒಡೆಯಬೇಕಾದ ಅಗತ್ಯವಿಲ್ಲ. ದುಬಾರಿ ಗ್ರಾನೈಟ್ ಮತ್ತು ಟೈಲ್ಸ್ಗಳಿಗಿಂತ ಕಡಿಮೆ ಖರ್ಚಿನಲ್ಲಿ ಮರದ ಫ್ಲೋರಿಂಗ್ ಸಾಧ್ಯವಿದೆ. ಗೋಡೆಗಳ ಅಂದ ಹೆಚ್ಚಿಸಲು ವಾಲ್ಪೇಪರ್ಗಳು ಬಂದಿವೆ. ಅವುಗಳನ್ನು ಗೋಡೆಗಳಿಗೆ ಅಂಟಿಸುವುದರಿಂದ ಗೋಡೆಗೆ ಹೊಸ ಲುಕ್ ಬರುತ್ತದೆ. ಹಳೆಯ ಬಾಗಿಲುಗಳನ್ನು ತೆರವುಗೊಳಿಸಿ, ಹೊನ್ನೆ, ಟೀಕ್ ಮರಗಳಿಂದ ನಿರ್ವಿುತವಾದ ಬಾಗಿಲುಗಳ ಮೇಲೆ ವಿವಿಧ ಕಲಾಕೃತಿಗಳ ಕೆತ್ತನೆ, ಮನೆಯ ಸುತ್ತಲಿನ ಗೋಡೆಗೆ ವಿವಿಧ ಬಣ್ಣಗಳಿಂದ ಅಲಂಕರಿಸಬಹುದು.
ಮನೆಯ ಪ್ರಾಂಗಣವನ್ನು ಅಂದಗೊಳಿಸಿ
ಮನೆಯ ಮುಂಭಾಗದಲ್ಲಿ ಜಾಗವಿದ್ದರೆ ಹೂವಿನ ಗಿಡಗಳನ್ನು ಬೆಳೆಸುವುದು. ವಿಶಾಲವಾದ ಜಾಗವಿದ್ದರೆ, ಆ ಜಾಗದಲ್ಲಿ ಹೆಂಚಿನ ಮೇಲ್ಚಾವಣಿ ಅಳವಡಿಸಿ, ಮಕ್ಕಳು ಆಟವಾಡಲು ತೂಗುಯ್ಯಾಲೆ, ಪಕ್ಷಿಗಳ ಗೂಡು ನಿರ್ವಿುಸುವುದು. ಹೀಗೆ ಹಲವು ರೀತಿಯಲ್ಲಿ ಪ್ರಾಂಗಣವನ್ನು ಅಂದಗೊಳಿಸಬಹುದು.
ಸಿವಿಲ್ ಇಂಜಿನಿಯರ್ ಸಲಹೆ ಪಡೆಯಿರಿ
ಹಳೆಯ ಫ್ಲಾ್ಯಟ್, ಮನೆ, ಅಂಗಡಿ ಮತ್ತಿತರ ಕಟ್ಟಡಗಳನ್ನು ಹಲವರು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ನವೀಕರಿಸುವುದು ಸಹಜ. ಆದರೆ, ನವೀಕರಿಸುವಾಗ ಕಟ್ಟಡದ ಬಾಳಿಕೆ, ತಳಪಾಯ, ಗೋಡೆಗಳ ಬಿರುಕು, ಲಿಕೇಜ್ ಬಗ್ಗೆ ಅನುಭವಿ ಸಿವಿಲ್ ಇಂಜಿನಿಯರ್ ಸಲಹೆ ಪಡೆಯುವುದು ಉತ್ತಮ.
| ದ್ವಾರಕಾನಾಥ್