ಹಾಳೆಗಳಿಗೆ ಹೊಸ ಬದುಕು; ಯೂತ್​ ಫಾರ್​ ಸೇವಾದ ಕಾರ್ಯ 45 ನಗರಗಳಿಗೆ ವಿಸ್ತರಣೆ

Masth 3 March 20
Published on

ನೋಟ್​ಬುಕ್​ಗಳಲ್ಲಿ ಬಳಸದೇ ಇರುವ ಹಾಳೆಗಳು ಎಷ್ಟೋ ಇರುತ್ತವೆ. ಶೈಕ್ಷಣಿಕ ವರ್ಷ ಮುಗಿದ ಬಳಿಕ ಇಂಥ ಪುಸ್ತಕಗಳು ರದ್ದಿಗೆ ಸೇರುತ್ತವೆ. ಆದರೆ, ಶಾಲೆ-ಶೈಕ್ಷಣಿಕ ಸಂಸ್ಥೆಗಳಿಂದ ಇವುಗಳನ್ನು ಸಂಗ್ರಹಿಸಿ, ಅದರಿಂದ ಖಾಲಿ ಹಾಳೆಗಳನ್ನು ಪ್ರತ್ಯೇಕ ಮಾಡಿ, ಹೊಸ ನೋಟ್​ಪುಸ್ತಕ ಬೈಂಡ್ ಮಾಡಿಸಿ ಅವುಗಳನ್ನು ಗ್ರಾಮೀಣ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳಿಗೆ ವಿತರಿಸುತ್ತಿದೆ ‘ಯೂತ್ ಫಾರ್ ಸೇವಾ’. ಬೆಂಗಳೂರಿನಲ್ಲಿ ನಡೆಯುವ ಈ ಅಭಿಯಾನ ಪ್ರಸಕ್ತ ವರ್ಷ ದೇಶದ 45 ನಗರಗಳಿಗೆ ವಿಸ್ತರಣೆ ಆಗುತ್ತಿರುವುದು ವಿಶೇಷ.

ಒಂದು ಕ್ಷಣ ಆ ಅಸಂಖ್ಯ ಮಕ್ಕಳನ್ನು ನೆನಪಿಸಿಕೊಳ್ಳಿ...

ನೋಟ್​ಪುಸ್ತಕ, ಪಠ್ಯಪುಸ್ತಕ ಖರೀದಿಸಲು ಶಕ್ತಿ ಇಲ್ಲದೆ ಅರ್ಧಕ್ಕೇ ಓದು ನಿಲ್ಲಿಸುವ, ಶಾಲೆ ಬಿಡುವ ಮಕ್ಕಳು ಅಕ್ಷರದ ಹಸಿವಿದ್ದರೂ ಅದರಿಂದ ವಂಚಿತವಾಗುತ್ತಾರೆ. ಯಾರಾದರೂ ತಮ್ಮ ನೆರವಿಗೆ ಬಂದರೆ ಓದು ಮುಂದುವರಿಸಬಹುದಲ್ವ ಅಂತ ಮನಸ್ಸಿನಲ್ಲೇ ಆಸೆಯ ಗೋಪುರ ಕಟ್ಟಿಕೊಳ್ಳುತ್ತಾರೆ. ಮತ್ತೊಂದೆಡೆ, ಸ್ಥಿತಿವಂತ ಮಕ್ಕಳ ಚಿತ್ರಣ. ಅವರಿಗೆ ಓದಲು ಬೇಕಾದ ಎಲ್ಲ ಅನುಕೂಲಗಳನ್ನು ಪಾಲಕರು ಮಾಡಿಕೊಡುತ್ತಾರೆ. ಅಷ್ಟೇ ಅಲ್ಲ, ಸಣ್ಣ ಕೊರತೆಯೂ ಕಾಡದಿರಲಿ ಎಂಬ ಉದ್ದೇಶದಿಂದ ಅಗತ್ಯಕ್ಕಿಂತ ಕೊಂಚ ಹೆಚ್ಚೇ ಶೈಕ್ಷಣಿಕ ಸಾಮಗ್ರಿಗಳನ್ನು ಕೊಡಿಸುತ್ತಾರೆ. ಇತ್ತೀಚಿನ ಆಧುನಿಕ ಶಾಲೆಗಳಲ್ಲೂ ಅಷ್ಟೆ. ಪ್ರತಿ ವಿಷಯಕ್ಕೂ ಪ್ರತ್ಯೇಕ ನೋಟ್​ಬುಕ್, ಮತ್ತೊಂದು ಮಗದೊಂದು ಎಂಬ ನಿಬಂಧನೆ. ಹೀಗೆ ಶೈಕ್ಷಣಿಕ ಸಾಲಿನಲ್ಲಿ ನೋಟ್​ಪುಸ್ತಕ್​ಗಳನ್ನು ಬಳಸಿ ಪರೀಕ್ಷೆ ಮುಗಿದಾಗ ಅವುಗಳನ್ನು ಸುಮ್ಮನೇ ತಿರುವು ಹಾಕಿದರೆ ಬಹುಶಃ ಅರ್ಧಕ್ಕರ್ಧ ಪುಟಗಳು ಖಾಲಿಯೇ ಇರುತ್ತವೆ!

ಹಿಂದೆಲ್ಲ ಪಾಲಕರೇ ಆಸ್ಥೆ ವಹಿಸಿ ಬೇಸಿಗೆ ರಜೆಯಲ್ಲಿ ಮಕ್ಕಳ ಜತೆ ಕುಳಿತುಕೊಂಡು ಅಂಥ ಖಾಲಿ ಹಾಳೆಗಳನ್ನೆಲ್ಲ ಒಟ್ಟು ಮಾಡುತ್ತಿದ್ದರು. ಬಳಿಕ ಅವುಗಳ ಬೈಂಡಿಂಗ್ ಮಾಡಿಸಿ, ಮರುಬಳಕೆ ಮಾಡಿಸುತ್ತಿದ್ದರು. ಆ ವ್ಯವಧಾನ ಇಂದಿನ ಬಹುತೇಕ ಪಾಲಕರಲ್ಲೂ ಇಲ್ಲ, ಮಕ್ಕಳಲ್ಲೂ ಇಲ್ಲ. ಅಂಥ ಖಾಲಿ ಹಾಳೆಗಳ ನೋಟ್​ಬುಕ್​ಗಳು ರದ್ದಿ ಸೇರಿ ವ್ಯರ್ಥವಾಗುತ್ತವೆ. ಆದರೆ, ಇವು ಅವಶ್ಯವಿರುವವರ ಕೈ ಸೇರುವಂತಾದರೆ...?

ಆಶಯವೇನೋ ಒಳ್ಳೆಯದು. ಆದರೆ, ಇಂಥ ಸಾಹಸಕ್ಕೆ ಮುಂದಾಗುವವರು ಯಾರು? ಇತ್ತೀಚಿನ ದಿನಗಳಲ್ಲಿ ಕೆಲ ಸಾಮಾಜಿಕ ಸಂಸ್ಥೆಗಳೇ ಈ ಹೊಣೆಯನ್ನು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿವೆ ಎಂಬುದು ಸಮಾಧಾನಕರ ಸಂಗತಿ. ಶಿಕ್ಷಣ, ಆರೋಗ್ಯ, ಯುವ, ಮಹಿಳಾ ಸಬಲೀಕರಣ, ಡಿಜಿಟಲ್ ಸಾಕ್ಷರತೆ, ಗ್ರಾಮವಿಕಾಸ ಹೀಗೆ ಹಲವು ಕ್ಷೇತ್ರ ಮತ್ತು ವಿಶೇಷ ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆ ‘ಗಿವ್ ಪೇಪರ್ ಬ್ಯಾಕ್’ ಯೋಜನೆ ಅಡಿಯಲ್ಲಿ ಇಂಥದ್ದೊಂದು ಆಂದೋಲನ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಸುತ್ತಿದೆ. ಏಳು ಸಾವಿರಕ್ಕಿಂತ ಅಧಿಕ ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ವೈಎಫ್​ಎಸ್ ಕರ್ನಾಟಕದ ಗಡಿಯನ್ನು ದಾಟಿ ದೆಹಲಿ, ಅಸ್ಸಾಂ, ಒಡಿಶಾ, ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಧ್ಯದಲ್ಲೇ ಶಾಲೆ ತ್ಯಜಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರಿ ಶಾಲೆ ಮಕ್ಕಳಿಗೆ ‘ಸ್ಕೂಲ್ ಕಿಟ್’ಗಳನ್ನು ವಿತರಿಸುತ್ತಿದೆ. ಇದು ಶಾಲಾಬ್ಯಾಗ್, ನೋಟ್​ಬುಕ್ ಮತ್ತು ಜಾಮೆಟ್ರಿ ಬಾಕ್ಸ್​ನ್ನು ಒಳಗೊಂಡಿರುತ್ತದೆ. 240 ಎನ್​ಜಿಒಗಳ ಸಹಯೋಗದೊಂದಿಗೆ ಈವರೆಗೆ 6.50 ಲಕ್ಷಕ್ಕಿಂತ ಅಧಿಕ ಮಕ್ಕಳಿಗೆ ಈ ಕಿಟ್​ಗಳನ್ನು ವಿತರಿಸಲಾಗಿರುವುದು ವಿಶೇಷ.

ಒಎನ್​ಜಿಸಿ ಫೌಂಡೇಷನ್ ಸಾಥ್!: 2020ರ ಶೈಕ್ಷಣಿಕ ವರ್ಷದಲ್ಲಿ ಎಂಟು ಲಕ್ಷ ಮಕ್ಕಳಿಗೆ ನೋಟ್​ಬುಕ್​ಗಳನ್ನು ವಿತರಿಸುವ ಗುರಿ ವೈಎಫ್​ಎಸ್​ನದ್ದು. ಹಲವು ರಾಜ್ಯಗಳಲ್ಲಿ ಸಂಸ್ಥೆಯ ಕಾರ್ಯ ವಿಸ್ತರಣೆ ಆಗಿರುವುದರಿಂದ ಈ ವರ್ಷ ಬೆಂಗಳೂರು ಸೇರಿ ದೇಶದ 45 ಮಹಾನಗರಗಳಲ್ಲಿ ‘ಗಿವ್ ಪೇಪರ್ ಬ್ಯಾಕ್’ ಅಭಿಯಾನ ನಡೆಯಲಿದೆ. ಸರ್ಕಾರಿ ಸ್ವಾಮ್ಯದ ಒಎನ್​ಜಿಸಿ ಫೌಂಡೇಷನ್ ಈ ಕಾರ್ಯಕ್ಕೆ ಯೂತ್ ಫಾರ್ ಸೇವಾಗೆ ಜತೆಯಾಗಿದೆ. ಈಗಾಗಲೇ ಈ ಕುರಿತು ಜನರಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆ ನೋಟ್​ಬುಕ್​ಗಳ ಸಂಗ್ರಹ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಕರ್ನಾಟಕ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಇದನ್ನು ಜನಾಂದೋಲನದಂತೆ ನಡೆಸಲು ನಿರ್ಧರಿಸಲಾಗಿದೆ. ಹೆಚ್ಚೆಚ್ಚು ಮಕ್ಕಳಿಗೆ ಇದರ ಲಾಭ ದೊರೆಯಬೇಕು, ಹಾಳೆಗಳ ಮರುಬಳಕೆಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶ ಇದರ ವಿಸ್ತರಣೆ ಹಿಂದಿದೆ. ಉಳಿದ ರಾಜ್ಯಗಳಲ್ಲೂ ಈ ಕುರಿತು ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದರಿಂದ ಎಂಟು ಲಕ್ಷ ಮಕ್ಕಳಿಗೆ ನೋಟ್​ಬುಕ್​ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ವೈಎಫ್​ಎಸ್​ನ ಶ್ರೀಕಾಂತ ಜೋಶಿ. ಹಾಗಾಗಿ, ಇನ್ನಿತರ ಸ್ವಯಂಸೇವಾ ಸಂಸ್ಥೆಗಳ ಸಹಕಾರವನ್ನೂ ಪಡೆಯಲಾಗುತ್ತಿದ್ದು, ಮುಖ್ಯವಾಗಿ ಒಎನ್​ಜಿಸಿ ಫೌಂಡೇಷನ್ ನೆರವು ನೀಡಲಿದೆ. ರಾಷ್ಟ್ರವ್ಯಾಪಿ ಈ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಜನರಲ್ಲಿ ಅರಿವು ಹೆಚ್ಚಲಿದೆ, ಹಾಳೆಗಳ ಹಾನಿ ತಪ್ಪಿ, ಅವುಗಳಿಗೆ ಮರುಜೀವ ಸಿಗಲಿದೆ ಎಂಬ ಆಶಾವಾದ.

ಪರಿಸರಕ್ಕೂ ಪೂರಕ

ಒಂದೊಂದು ಹಾಳೆ ಉಳಿಸಿದರೂ ಹತ್ತಾರು ಮರಗಳನ್ನು ಉಳಿಸಿದಂತೆ! ಈ ಸಣ್ಣ ಪ್ರಯತ್ನದ ಮೂಲಕವೂ ಪರಿಸರದ ಮೇಲಾಗುತ್ತಿರುವ ಆಘಾತವನ್ನು ತಪ್ಪಿಸಬಹುದು. ಒಂದು ಟನ್ ಪೇಪರ್ ತಯಾರಿಕೆಗೆ 12 ಮರಗಳು ಆಹುತಿಯಾಗುತ್ತಿವೆ. ಪರಿಸರಕ್ಕೆ ಸಂಬಂಧಿಸಿ ಜಾಗತಿಕ ಸಂಸ್ಥೆಗಳು ನಡೆಸಿದ ಅಧ್ಯಯನಗಳು ತಿಳಿಸಿದಂತೆ, ಕಾಗದ ತಯಾರಿಕೆಗೆಂದೇ ವಿಶ್ವಾದ್ಯಂತ ಪ್ರತಿ ನಿತ್ಯ ಸರಾಸರಿ 80 ಸಾವಿರದಿಂದ 1.60 ಲಕ್ಷದಷ್ಟು ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ, ವರ್ಷಕ್ಕೆ 60 ಸಾವಿರ ಚದರ ಕಿಲೋಮೀಟರ್​ನಷ್ಟು ಅರಣ್ಯ ಬರಿದಾಗುತ್ತಿದೆ. ಆದರೆ, 1 ಟನ್ ಕಾಗದವನ್ನು ಮರುಬಳಕೆಗೆ ಒಳಪಡಿಸುವುದರಿಂದ ಕನಿಷ್ಠ 12-17 ಮರಗಳನ್ನು ಉಳಿಸಬಹುದಾಗಿದೆ. ಕಾಗದದ ಬಳಕೆ ಅವಶ್ಯ ಮತ್ತು ಅನಿವಾರ್ಯ ಆಗಿರುವುದರಿಂದ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ, ಬಳಕೆಗೆ ನಿಯಂತ್ರಣ ಹಾಕುವುದು ಮತ್ತು ಮರುಬಳಕೆಗೆ ಒತ್ತು ಕೊಡುವುದು ಉತ್ತಮ ಹೆಜ್ಜೆ. ಈ ನಿಟ್ಟಿನಲ್ಲಿ ವೈಎಫ್​ಎಸ್ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ.

ಉಪಯೋಗಗಳು
  1. ಖಾಲಿ ಹಾಳೆಗಳು ವ್ಯರ್ಥವಾಗುವುದನ್ನು ತಪ್ಪಿಸಿದಂತಾಗುತ್ತದೆ.
  2. ಮಕ್ಕಳಿಗೆ ಪೇಪರ್ ತಯಾರಿಕೆ ಮತ್ತು ಅದರ ಜತೆಗೆ ಕೂಡಿಕೊಂಡಿರುವ ಪರಿಸರದ ಕಳವಳಗಳನ್ನು ಅರ್ಥ ಮಾಡಿಸಿದಂತಾಗುತ್ತದೆ.
  3. ಕಾಗದದ ಉಳಿತಾಯದಿಂದ ಅಷ್ಟು ಪ್ರಮಾಣದ ಮರಗಳನ್ನು ಕಡಿಯುವುದನ್ನು ತಡೆದಂತಾಗುತ್ತದೆ.
  4. ನೋಟ್​ಪುಸ್ತಕಗಳನ್ನು ಕೊಂಡುಕೊಳ್ಳಲು ಕಷ್ಟ ಇರುವ ಬಡ, ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು ನೀಡಿದಂತಾಗುತ್ತದೆ.
  5. ಹೆಚ್ಚೆಚ್ಚು ನಗರಗಳಿಗೆ ತಲುಪುವುದರಿಂದ ಇದು ಜನಾಂದೋಲನದ ಸ್ವರೂಪ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಹೇಗೆ ನಡೆಯುತ್ತೆ ಕೆಲಸ?
  • ವಾರ್ಷಿಕ ಪರೀಕ್ಷೆಗಳು ಆರಂಭವಾಗುವ ಮುನ್ನವೇ ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವಕರು ಶಾಲೆ, ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿ ಸಂಬಂಧ ಪಟ್ಟವರೊಂದಿಗೆ ಮಾಕುಕತೆ ನಡೆಸುತ್ತಾರೆ.
  • ಪ್ರತೀ ಕಾಗದ(ಹಾಳೆ)ವನ್ನು ಎಚ್ಚರಿಕೆಯಿಂದ ಬಳಸುವ, ಅದನ್ನು ಮರುಬಳಕೆ ಮಾಡುವ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೂ ಮನದಟ್ಟು ಮಾಡಿಕೊಡುತ್ತಾರೆ. ಅಲ್ಲದೆ, ಅರ್ಧ ತುಂಬಿದ ಅಥವಾ ಪೂರ್ತಿ ಖಾಲಿ ಇರುವ, ಒಂದಿಷ್ಟೇ ಹಾಳೆಗಳನ್ನು ಬಳಸಿರುವ ನೋಟ್​ಪುಸ್ತಕಗಳನ್ನು ಪರೀಕ್ಷೆ ಮುಗಿದ ಬಳಿಕ ಶಾಲೆಗೇ ಕೊಡಲು ಹೇಳುತ್ತಾರೆ.
  • ಪರೀಕ್ಷೆಯ ಬಳಿಕ, ಇಂಥ ನೋಟ್​ಪುಸ್ತಕಗಳ ಸಂಗ್ರಹಕ್ಕೆ ಶಾಲೆಗಳಿಗೆ ತೆರಳುತ್ತಾರೆ. ಅವನ್ನೆಲ್ಲ ವೈಎಫ್​ಎಸ್​ನ ‘ಕಲೆಕ್ಷನ್ ಸೆಂಟರ್’ಗಳಿಗೆ ತರಲಾಗುತ್ತದೆ. ಆ ಬಳಿಕ ಹಾಳೆಗಳನ್ನು ಪ್ರತ್ಯೇಕಿಸುವ ಕಾರ್ಯ ನಡೆಯುತ್ತದೆ.
  • ಪೂರ್ತಿ ತುಂಬಿದ ಹಾಳೆಗಳನ್ನು ಒಂದು ಕಡೆ ಮಾಡಿದರೆ, ಖಾಲಿ ಹಾಳೆಗಳನ್ನು ಮತ್ತೊಂದು ಕಡೆ ಒಟ್ಟು ಮಾಡಲಾಗುತ್ತದೆ. ಈ ಖಾಲಿ ಹಾಳೆಗಳನ್ನೆಲ್ಲ ಸೇರಿಸಿ ಬೈಂಡ್ ಮಾಡಲಾಗುತ್ತದೆ. ಅದಕ್ಕೆ ಕವರ್ ಅಳವಡಿಸಿ, ಹೊಸ ನೋಟ್​ಪುಸ್ತಕಗಳು ತಯಾರಾಗುತ್ತವೆ.
  • ಅಲ್ಲಿಂದ ಅವು ಅವಶ್ಯವಿರುವ ಶಾಲೆ, ಗ್ರಾಮಗಳಿಗೆ ಕಳುಹಿಸಿ, ವಿತರಣೆ ಮಾಡಲಾಗುತ್ತದೆ. ಈ ಮೂಲಕ ಹಾಳೆಗಳಿಗೆ ಹೊಸ ಬದುಕು ಕಲ್ಪಿಸಿದರೆ, ಹೊಸ ನೋಟ್ ಪುಸ್ತಕ ಪಡೆದುಕೊಂಡ ವಿದ್ಯಾರ್ಥಿಗಳ ಮೊಗದಲ್ಲೂ ಚೆಂದದ ನಗು ಅರಳುತ್ತದೆ.

ಯೋಜನೆಯ ಫಲಶ್ರುತಿ

‘ಗಿವ್ ಪೇಪರ್ ಬ್ಯಾಕ್’ ಯೋಜನೆ ಅಡಿಯಲ್ಲಿ ವೈಎಫ್​ಎಸ್ 2016ರಿಂದ 2019ರವರೆಗೆ 2.84 ಲಕ್ಷ ನೋಟ್​ಬುಕ್​ಗಳನ್ನು ಸಂಗ್ರಹಿಸಿದೆ. 1,400 ಕಾರ್ಯಕರ್ತರು ಇದರಲ್ಲಿ ಭಾಗವಹಿಸಿ ಸರ್ಕಾರಿ ಶಾಲೆಯ 82 ಸಾವಿರ ಮಕ್ಕಳಿಗೆ ನೋಟ್​ಬುಕ್ ವಿತರಿಸಿದ್ದಾರೆ.

ನೀವೇನು ಮಾಡಬಹುದು?

ಶಾಲೆ ಅಥವಾ ಶೈಕ್ಷಣಿಕ ಸಂಸ್ಥೆಗಳು ಮಕ್ಕಳಿಂದ ನೋಟ್​ಪುಸ್ತಕಗಳನ್ನು ಸಂಗ್ರಹಿಸಿ, ವೈಎಫ್​ಎಸ್ ಸ್ವಯಂಸೇವಕರಿಗೆ ಅಥವಾ ಅವರ ಕಲೆಕ್ಷನ್ ಕ್ಲಸ್ಟರ್​ಗಳಿಗೆ ನೀಡಬಹುದು. ವಿವರಗಳಿಗಾಗಿ, ಮೊಬೈಲ್ ಸಂಖ್ಯೆ 7349246275 ಅಥವಾ https://www.youthforseva.org/ವೆಬ್​ಸೈಟ್​ಗೆ ಭೇಟಿ ನೀಡಿ.

ಶಾಲೆಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಸಂಘಟನೆಯ ಕಾರ್ಯಕರ್ತರು ಸಮರ್ಪಣಾಭಾವದಿಂದ ಮತ್ತು ಕೌಶಲದಿಂದ ಈ ಚಟುವಟಿಕೆಯನ್ನು ನಿರ್ವಹಿಸುತ್ತಿದ್ದಾರೆ. ಕಾಗದದ ರಿಸೈಕಲ್ ಈಗಿನ ಕಾಲದ ಅಗತ್ಯವೂ ಆಗಿದ್ದು, ಅದಕ್ಕೆ ರಚನಾತ್ಮಕ ರೂಪ ಕೊಡುವುದರ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. | ಶ್ರೀಕಾಂತ್ ಜೋಷಿ ವೈಎಫ್​ಎಸ್

| ರವೀಂದ್ರ ಎಸ್​ ದೇಶ್​ಮುಖ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net