

| ಭಾರತಿ ಎ.ಕೊಪ್ಪ
ಸಹನಾ ಮುಂಜಾನೆ 5ಕ್ಕೇ ಎದ್ದು ಮನೆ ಕೆಲಸ ಆರಂಭಿಸಿ ತಿಂಡಿ, ಅಡುಗೆ, ಲಂಚ್ ಬಾಕ್ಸ್ ತಯಾರಿ, ಬಟ್ಟೆ ಇಸ್ತ್ರಿ, ಮಕ್ಕಳ ಕಾಳಜಿ, ಪೂಜೆ... ಹೀಗೆ ಒಂದರ ನಂತರ ಇನ್ನೊಂದು ಕೆಲಸ ಮುಗಿಸಿ ಕಚೇರಿಗೆ ಹೊರಡುವಷ್ಟರಲ್ಲಿ ಸಮಯ ಓಡಿಯೇ ಬಿಡುತ್ತದೆ. ತಾನು ತಿಂಡಿ ಕೂಡಾ ಸರಿಯಾಗಿ ತಿನ್ನಲಾರದಷ್ಟು ಗಡಿಬಿಡಿ. ಒತ್ತಡದ ನಡುವೆಯೇ ಕಚೇರಿ ತಲುಪಿ, ಸುದೀರ್ಘ ನಿಟ್ಟುಸಿರು ಬಿಡುತ್ತಾಳೆ. ನಂತರ ಮನೆಯ ಜಂಜಾಟ ಮೂಲೆಗಿಟ್ಟು ಕಚೇರಿ ಕೆಲಸ ಆರಂಭ. ಇದು ಸಹನಾ ಮಾತ್ರವಲ್ಲ, ಕೆಲಸಕ್ಕೆ ಹೊರಗೆ ಹೋಗಿ ದುಡಿದು ಬರುವ ಎಲ್ಲ ಮಹಿಳೆಯರ ದಿನಚರಿ. ಈಗ ಲಾಕ್ಡೌನ್ ಎಂಬ ಕಂದಕದಿಂದ ಹೊರಬಂದು ಮತ್ತೆ ಮೊದಲಿನ ಲಯ ಕಂಡುಕೊಳ್ಳುವಲ್ಲಿ ಒಂದಿನಿತು ಪ್ರಯಾಸ ಆಗುವುದಂತೂ ದಿಟ.
ಒಂದು ವಾರ ರಜೆ ಸಿಕ್ಕರೆ ಕುಟುಂಬದೊಂದಿಗೆ ಕಾಲ ಕಳೆದು, ಮನೆಯ ಒಪ್ಪ ಓರಣಕ್ಕೆ ಗಮನ ಕೊಡುತ್ತಿದ್ದೆ ಎಂದು ಯೋಚಿಸುತ್ತಿದ್ದವಳಿಗೆ, ವರ್ಕ್ ಫ್ರಮ್ ಹೋಂ ಬಹಳಷ್ಟು ಒತ್ತಡದ ಪಾಠ ಕಲಿಸಿದೆ. ದೈನಂದಿನ ಕಚೇರಿಗೆ ಹೋಗಿ ಬರುವಾಗಿನ ಒತ್ತಡಕ್ಕಿಂತಲೂ, ಮನೆಯೊಳಗೆ ಭಾವನೆಗಳ ತಿಕ್ಕಾಟದೊಂದಿಗೆ, ಕುಟುಂಬದ ಸದಸ್ಯರ ಆಗುಹೋಗು ಗಮನಿಸಿಕೊಂಡು, ಕಚೇರಿಯ ವರ್ಕ್ ಫ್ರಮ್ ಹೋಂ ನಡೆಸುವುದು ಸವಾಲಾಗಿ ಪರಿಣಮಿಸಿದ ಅನೇಕ ಉದಾಹರಣೆಗಳಿವೆ. ನೆಟ್ವರ್ಕ್ ಸಮಸ್ಯೆಯಿಂದ ಕೆಲಸದಲ್ಲಿ ಏರುಪೇರು, ಕೌಟುಂಬಿಕ ಸಮಸ್ಯೆಯಿಂದ ಕೆಲಸದಲ್ಲಿ ಹಿನ್ನಡೆ ಇವೆಲ್ಲವೂ ಮನಸ್ಸನ್ನು ಗೊಂದಲದ ಗೂಡಾಗುವಂತೆ ಮಾಡಿದೆ. ಮತ್ತೆ ಕಚೇರಿ ಕೆಲಸದತ್ತ ಮುಖ ಮಾಡುವಲ್ಲಿ ತುಸು ಗೊಂದಲ, ಏನೋ ಆತಂಕದ ಯೋಚನೆ ಗಳು ಸಹಜವಾಗಿವೆ.
ಜಗವನ್ನು ಬೆಳಗುವ ಸೂರ್ಯನಿಗೆ ಹಗಲು-ರಾತ್ರಿ ಎಂಬ ಬೆಳಕಿನಾಟ ಇರುವಂತೆ, ಈ ರೀತಿಯ ಗೊಂದಲದ ಮನಕ್ಕೂ ಪರಿಹಾರವಿದೆ. ಕರೊನೋತ್ತರ ಬದುಕಿಗೆ ಸಮಾಜ ಮತ್ತು ಜಗತ್ತು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಬಹುತೇಕ ಎಲ್ಲ ರಂಗಗಳಲ್ಲಿ ಭೌತಿಕವಾಗಿ ಕಚೇರಿ, ಶಾಲೆ, ಸಂಸ್ಥೆಗಳ ಕಾರ್ಯಚಟುವಟಿಕೆ ಆರಂಭವಾಗುತ್ತಿವೆ. ಸುದೀರ್ಘ ರಜಾ ಕಾಲವೆಂಬಂತೆ ವರ್ಕ್ಫ್ರಮ್ ಹೋಂನಲ್ಲಿ ಮನೆಯ ದೈನಂದಿನ ಚಟುವಟಿಕೆ ಗಳಿಗೆ, ಸಮಯಕ್ಕೆ ಹೊಂದಾಣಿಕೆಯಾಗಿದ್ದ ಮನಸ್ಸು, ಈಗ ಕಚೇರಿ ಸಮಯ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ.
ನಾಗಾಲೋಟದಲ್ಲಿ ಓಡುವ ಸಮಯಕ್ಕೆ ಸರಿಯಾಗಿ ನಮ್ಮ ಕೆಲಸ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತೊಂದು ಸವಾಲೇ ಸರಿ. ವರ್ಕ್ಫ್ರಮ್ ಹೋಂ ಕಾಲದಲ್ಲಿ ಅಡುಗೆ-ಊಟ ಇವೆಲ್ಲವೂ ಆಮೆಗತಿಯಲ್ಲಿ ಸಾಗುತ್ತಿತ್ತು. ಲಾಕ್ಡೌನ್ ಎಂಬ ಕೃತಕ ಬಂಧನ ಬಾಯಿ ರುಚಿ ತಣಿಸುವ ಅಡುಗೆಗೂ ಅಣಿ ಮಾಡಿಕೊಟ್ಟಿತ್ತು. ಆದರೀಗ ವಿಶೇಷ ತಿನಿಸು ತಯಾರಿ, ಹೊಸ ರುಚಿಯ ಪ್ರಯೋಗ ಇವೆಲ್ಲದರ ಸಮಯ ಹೊಂದಾಣಿಕೆಯು ಕಚೇರಿ ಕೆಲಸದ ಸಮಯಕ್ಕೆ ತೊಡಕಾಗದಂತಿರಬೇಕು. ವಿಶೇಷ ಅಡುಗೆಗೆ ಮತ್ತೆ ವೀಕೆಂಡ್ನತ್ತ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕುಟುಂಬದ ಸದಸ್ಯರೆಲ್ಲರೂ ದುಡಿಯುವ ಮಹಿಳೆಗೆ ಸಹಕಾರ ನೀಡಬೇಕಿದೆ.
ಕಚೇರಿಯ ಸಹೋದ್ಯೋಗಿಗಳೊಡನೆ ಶಿಸ್ತುಬದ್ಧ, ಹೊಂದಾಣಿಕೆಯ, ವೃತ್ತಿಪರತೆಯ ಕೆಲಸಗಳನ್ನು ಈ ಮುಖಾಮುಖಿ ಕೆಲಸದಲ್ಲಿ ಹೆಚ್ಚು ಕರಾರುವಕ್ಕಾಗಿ ನಡೆಸಬೇಕಿದೆ. ವರ್ಕ್ಫ್ರಮ್ ಹೋಂನಲ್ಲಿ ಮುಖಾಮುಖಿ ಇಲ್ಲದ ಕಾರಣ, ಅಭಿಪ್ರಾಯ ಭೇದಗಳಿಗೆ ಅವಕಾಶ ಕಡಿಮೆ. ಮುಖಾಮುಖಿ ಕೆಲಸದಲ್ಲಿ ಅಭಿಪ್ರಾಯಭೇದ ತಲೆದೋರಿದರೂ ಸಮರ್ಥವಾಗಿ ನಿಭಾಯಿಸುತ್ತಾ ಸಾಗಬೇಕಿದೆ. ಕರೊನೋತ್ತರ ದಿನಗಳಲ್ಲಿ ದುಡಿಯುವ ಮಹಿಳೆಯು ಮನೆ ಹಾಗೂ ಕಚೇರಿ ಕೆಲಸದ ನಡುವೆ ಸಮತೋಲನ ಕಾಯ್ದುಕೊಂಡು, ಯಶಸ್ವಿಯಾಗಿ ಮುನ್ನಡೆಯಬೇಕಿದೆ.
ಕರೊನಾ ಮೊದಲ ಅಲೆ ಸಮಯದಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಕೆಲಸ ಕಳೆದುಕೊಂಡಿದ್ದಾರೆ. ಶೇ.7ರಷ್ಟು ಪುರುಷರು ಕೆಲಸ ಕಳೆದುಕೊಂಡರೆ ಶೇ. 47ರಷ್ಟು ಮಹಿಳೆಯರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಯ ಕೆಲಸದೊಂದಿಗೆ ಹೊರಗಿನ ಕೆಲಸವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದ ಅನೇಕ ಮಹಿಳೆಯರು ಲಾಕ್ಡೌನ್ ಮುಗಿದ ಮೇಲೆ ಮನೆ ಕೆಲಸಕ್ಕಷ್ಟೇ ಸೀಮಿತವಾಗಿದ್ದಾರೆ.
ಕಚೇರಿ ಕೆಲಸದಲ್ಲಿಯೂ ಕರೊನಾಪೂರ್ವ ದಿನಗಳಂತೆ ಅಜಾಗ್ರತೆ ಮಾಡುವಂತಿಲ್ಲ. ಸುರಕ್ಷತೆ ಕಡೆಯೂ ಗಮನವಿರಬೇಕು. ತನ್ನ ಆರೋಗ್ಯದ ಕಾಳಜಿಯಲ್ಲಿ ಕುಟುಂಬದ ಸದಸ್ಯರೆಲ್ಲರ ಆರೋಗ್ಯವನ್ನೂ ಕಾಪಾಡುವ ಹೊಣೆಗಾರಿಕೆ ಆಫ್ಲೈನ್ನಲ್ಲಿ ಕೆಲಸಗಳಿಗೆಂದು ಹಾಜರಾಗುವ ಮಹಿಳೆಯ ಮೇಲಿದೆ. ಮಾಸ್ಕ್, ಸ್ಯಾನಿಟೈಜರ್, ಸಹೋದ್ಯೋಗಿಗಳೊಡನೆ ಅಂತರ ಕಾಪಾಡಿಕೊಳ್ಳುವುದು ಇವೆಲ್ಲದಕ್ಕೂ ಮಾನಸಿಕವಾಗಿ ಸಿದ್ಧರಾಗಿರಬೇಕು. ಅಂತೆಯೇ ಇರಬೇಕಾದುದು ಕೂಡ ಅನಿವಾರ್ಯ. ಪ್ರತಿಯೊಂದರಲ್ಲೂ ಒಂದಿಷ್ಟು ಕಾಳಜಿಯ ಜೀವನ ಇರಲೇಬೇಕಿದೆ.