

ಜಾನ್ ಭಿ ಔರ್ ಜಹಾ ಭಿ- ಜೀವ ಮತ್ತು ಜೀವನ. ಪ್ರಧಾನಿ ನರೇಂದ್ರ ಮೋದಿಯವರ ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣಾ ಕಾರ್ಯತಂತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅವಳಿ ಆದ್ಯತೆಗಳಿವು. ಪ್ರತಿಯೊಂದು ದೇಶಗಳೂ ಈ ಅವಳಿ ಆದ್ಯತೆಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿವೆ. ಆದರೆ ಕೆಲವು ದೇಶಗಳು ಮಾತ್ರ ಈ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸುತ್ತಿವೆ. ಅವುಗಳಲ್ಲಿ ಭಾರತವೂ ಒಂದು.
ಭಾರತವು ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಮಧ್ಯಮ ಆದಾಯದವರೇ ಹೆಚ್ಚಾಗಿರುವ ದೇಶ. ಉತ್ತಮ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಶ್ರೀಮಂತ ರಾಷ್ಟ್ರಗಳು ವಿಫಲವಾಗುತ್ತಿರುವಾಗ, ಭಾರತವು ಹೇಗೆ ಯಶಸ್ವಿಯಾಗುತ್ತಿದೆ? ಮೋದಿ ಸರ್ಕಾರವು ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ: (1) ಉತ್ತಮ ಅನುಕ್ರಮ, ಹಂತ ಹಂತ ವಿಧಾನದ ಅನುಸರಣೆ (2) ಕಠಿಣವಾದ ಲಾಕ್ಡೌನ್ ಅನುಷ್ಠಾನ ಮತ್ತು ನಂತರ ಕ್ರಮೇಣ ಸಡಿಲಿಕೆ (3) ಎಲ್ಲಾ ದುರ್ಬಲ ವರ್ಗಗಳಿಗೆ ತಕ್ಷಣದ ಪರಿಹಾರ (4) ಈ ಜಾಗತಿಕ ಬಿಕ್ಕಟ್ಟನ್ನು ಭವಿಷ್ಯದ ‘ಆತ್ಮನಿರ್ಭರ ಭಾರತ’ ನಿರ್ವಣಕ್ಕೆ ಬಳಸಿಕೊಳ್ಳುವುದು.
ಅನಿಶ್ಚಿತತೆಯ ಸಮಯದಲ್ಲಿ ಉತ್ತಮ ಅನುಕ್ರಮದ, ಹಂತ ಹಂತದ ವಿಧಾನ ಅಗತ್ಯವಾಗಿರುತ್ತದೆ. ಇತರ ಕೆಲವು ದೇಶಗಳು ತೀರಾ ಮುಂಚಿತವಾಗಿ ಒಂದರಿಂದ ಇನ್ನೊಂದು ಕಾರ್ಯತಂತ್ರಕ್ಕೆ ಬದಲಾಗುತ್ತಿವೆ. ಉದಾಹರಣೆಗೆ, ಇಂಗ್ಲೆಂಡ್ ಮೊದಲು ಸಾಮುದಾಯಿಕ ರೋಗನಿರೋಧ ತಂತ್ರ ಅನುಸರಿಸಿತು, ನಂತರ ಬಹು ಬೇಗನೇ ಅದನ್ನು ಬದಲಾಯಿಸಿ ಕಠಿಣ ಲಾಕ್ಡೌನ್ ಜಾರಿಗೆ ತಂದಿತು.
ಮೋದಿ ಸರ್ಕಾರವು ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಕಟವಾಗಿ ಪತ್ತೆ ಹಚ್ಚುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ಜಾರಿಗೆ ತರುತ್ತಿದೆ. ಚೀನಾದಿಂದ ಪ್ರಯಾಣಿಕರನ್ನು ನಿಷೇಧಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದು. ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಹರಡಲು ಆರಂಭಿಸಿದಾಗ ಮತ್ತು ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ ಎಂದು ತಿಳಿಯುತ್ತಿದ್ದಂತೆ, ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೆ ತಂದಿತು. ಭಾರತದಲ್ಲಿ ಆಗ ಕೇವಲ 536 ಪ್ರಕರಣಗಳು ಇದ್ದವು. ಈಗ ಲಾಕ್ಡೌನ್ ಪರಿಣಾಮಕಾರಿ ಎಂದು ಸಾಬೀತಾಗಿದೆ ಮತ್ತು ಚಿಕಿತ್ಸೆಗಳು ಲಭ್ಯವಾಗುತ್ತಿವೆ.
ಕಾರ್ಯತಂತ್ರದ ಎರಡನೆಯ ಅಂಶವೆಂದರೆ, ಕಠಿಣವಾದ ಲಾಕ್ಡೌನ್ ಅನುಷ್ಠಾನ ಮತ್ತು ನಂತರ ಅದನ್ನು ಕ್ರಮೇಣ ಸಡಿಲಿಸುವುದು. ಮಾರ್ಚ್ 25ರಂದು ಲಾಕ್ಡೌನ್ ಜಾರಿಗೆ ಬಂದಾಗ, ಕೋವಿಡ್ ಪ್ರಕರಣಗಳ ದೈನಂದಿನ ಬೆಳವಣಿಗೆ ದರವು ಶೇ.16ಕ್ಕಿಂತ ಹೆಚ್ಚಾಗಿತ್ತು. ಈ ದರದಲ್ಲಿ, ದೇಶದಲ್ಲೀಗ 40 ಲಕ್ಷ ಪ್ರಕರಣಗಳು ಇರಬೇಕಿತ್ತು ಮತ್ತು ಸಾಂಕ್ರಾಮಿಕ ರೋಗವು ನಮ್ಮನ್ನು ಆವರಿಸಬೇಕಿತ್ತು. ಆದರೆ ನಮ್ಮಲ್ಲೀಗ 1,44,000 ಪ್ರಕರಣಗಳು ಮಾತ್ರ ಇವೆ. ಚಿಕಿತ್ಸೆ ಮತ್ತು ಔಷಧಕ್ಕಾಗಿ ಮತ್ತು ಪ್ರಮುಖವಾಗಿ, ನಾವು ಸನ್ನದ್ಧರಾಗಲು ಲಾಕ್ಡೌನ್ ನಮಗೆ ಅಮೂಲ್ಯವಾದ ಸಮಯವನ್ನು ನೀಡಿತು.
ನಮ್ಮ 1.36 ಶತಕೋಟಿ ಜನರಿಗೆ ದೈಹಿಕ ಅಂತರ, ಕೈ ಸ್ವಚ್ಛತೆ ಮತ್ತು ಮುಖಗವಸು ಬಳಸುವ ಬಗ್ಗೆ ನಾವು ತಿಳಿವಳಿಕೆ ನೀಡಿದ್ದೇವೆ. ವೈದ್ಯಕೀಯ ಸೌಲಭ್ಯಗಳನ್ನು ತ್ವರಿತವಾಗಿ ವಿಸ್ತರಿಸಲಾಯಿತು.
ಸಹಕಾರಿ ಒಕ್ಕೂಟದ ಆಧಾರದಲ್ಲಿ ದಿಗ್ಬಂಧನವನ್ನು ಈಗ ತೆಗೆದುಹಾಕಲಾಗುತ್ತಿದೆ. ಪ್ರತಿ ರಾಜ್ಯಗಳು ಕಂಟೇನ್ವೆುಂಟ್ ವಲಯಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಖ3 ವಿಧಾನವನ್ನು (ಪರೀಕ್ಷೆ, ಚಿಕಿತ್ಸೆ, ಪತ್ತೆಹಚ್ಚು) ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ. ಸರಬರಾಜು ಸರಪಳಿಗಳು ಮತ್ತೊಮ್ಮೆ ಭರದ ಚಟುವಟಿಕೆಯನ್ನು ಪ್ರಾರಂಭಿಸಿವೆ. ಕಾರ್ಖಾನೆಗಳು ಆರಂಭವಾಗುತ್ತಿವೆ, ಅಂಗಡಿಗಳು ತೆರೆಯುತ್ತಿವೆ, ಕಚೇರಿಗಳು ಮತ್ತೆ ಕೆಲಸ ಮಾಡುತ್ತಿವೆ, ರೈಲುಗಳು, ವಿಮಾನಗಳು, ಟ್ರಕ್ಗಳು ಮತ್ತು ಬಸ್ಗಳನ್ನು ಸೂಕ್ತ ಸುರಕ್ಷತೆಯೊಂದಿಗೆ ಪುನರಾರಂಭಿಸಲಾಗಿದೆ.
ಜೀವಗಳನ್ನು ಉಳಿಸುವ ಜೊತೆಗೆ ಸರ್ಕಾರ ಜೀವನದ ಕಡೆಗೂ ಗಮನ ಹರಿಸಿತು. ಸರ್ಕಾರವು ದುರ್ಬಲ ವರ್ಗಗಳಿಗೆ ತಕ್ಷಣದ ಭಾರೀ ಆರ್ಥಿಕ ಪರಿಹಾರ ನೀಡಲು ಪ್ರಾರಂಭಿಸಿತು. ಲಾಕ್ಡೌನ್ ಘೊಷಣೆಯಾದ ಕೆಲವೇ ದಿನಗಳಲ್ಲಿ ಮೊದಲ ಪರಿಹಾರ ಪ್ಯಾಕೇಜ್ ಬಂತು. ನಗರಗಳ ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಭದ್ರತೆಯನ್ನು ಒದಗಿಸಲಾಯಿತು. ಮಧ್ಯಮ ವರ್ಗ ಮತ್ತು ಎಂಎಸ್ಎಂಇಗಳಿಗೆ ಪರಿಹಾರ ಮತ್ತು ಸಾಲ ಪಾವತಿಗೆ ತಡೆ ನೀಡಲಾಯಿತು. ಕಾರ್ಪೆರೇಟ್ ಸಂಸ್ಥೆಗಳಿಗೆ ಸಾಕಷ್ಟು ಸಾಲ ಒದಗಿಸಲು ಆರ್ಬಿಐ ಸಾಲ ದರಗಳನ್ನು ಕಡಿತಗೊಳಿಸಿತು ಮತ್ತು ಹಣಕಾಸು ವ್ಯವಸ್ಥೆಗೆ ಹಣದ ಹರಿವನ್ನು ಹೆಚ್ಚಿಸಿತು.
ರಾಬಿ ಬೆಳೆಗಳು ಜಮೀನಿನಲ್ಲಿರುವಾಗ, ಕೃಷಿಗೆ ಸಾಕಷ್ಟು ಬೆಂಬಲ ನೀಡಲಾಯಿತು. ನರೇಗಾ ಚಟುವಟಿಕೆಗಳು ಪುನರಾರಂಭಗೊಂಡವು. ಭಾರತದ 9 ಕೋಟಿ ರೈತ ಕುಟುಂಬಗಳು ಕಳೆದ 60 ದಿನಗಳಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲಾ 12,000 ರೂ. ಪಡೆದಿವೆ. ರಾಜ್ಯ ಸರ್ಕಾರಗಳು ವಿವಿಧ ಕಾರ್ಯಕ್ರಮಗಳ ಮೂಲಕ ಇನ್ನೂ ಹೆಚ್ಚಿನ ಹಣ ಒದಗಿಸಿವೆ.
ಎಂಎಸ್ಎಂಇ ವಲಯಕ್ಕೆ 3 ಲಕ್ಷ ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. ದುರದೃಷ್ಟವಶಾತ್, ಅನೇಕ ಎಂಎಸ್ಎಂಇಗಳು ತಮ್ಮ ದೈನಂದಿನ ಕಾರ್ವಿುಕರನ್ನು ಬಿಡುಗಡೆ ಮಾಡಿದ್ದರಿಂದ, ಈ ಕಾರ್ವಿುಕರು ಸ್ವಂತ ಊರುಗಳಿಗೆ ಮರಳಲು ಪ್ರಾರಂಭಿಸಿದರು. ರೈಲು ಮತ್ತು ಬಸ್ಸುಗಳಲ್ಲಿ ವಲಸಿಗರನ್ನು ಅವರ ಊರುಗಳಿಗೆ ಸೇರಿಸಲು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದವು. ಈ ಬೃಹತ್ ವಲಸೆ ಈಗ ಕಡಿಮೆಯಾಗುತ್ತಿದೆ.
ಮೇ 12ರಂದು ಪ್ರಧಾನಿ ಮೋದಿ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನವನ್ನು ಘೊಷಿಸಿದರು. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಇತರ ದೇಶಗಳು ಇನ್ನೂ ಹೆಣಗಾಡುತ್ತಿರುವಾಗ, ಸರ್ಕಾರವು ಈ ಬಿಕ್ಕಟ್ಟನ್ನು ಭಾರತಕ್ಕೆ ಪ್ರಬಲ ಸುಧಾರಣಾ-ಪ್ರೇರಿತ ವರ್ಧಕವಾಗಿ ಪರಿವರ್ತಿಸಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 13 ರಿಂದ 17 ರವರೆಗೆ ಐದು ಹಂತಗಳಲ್ಲಿ ಇದರ ವಿವರಗಳನ್ನು ನೀಡಿದರು.
ಕೋವಿಡ್ -19 ಸಾಂಕ್ರಾಮಿಕ ರೋಗವು ಕನಿಷ್ಠ ಎರಡು ವರ್ಷಗಳವರೆಗೆ ನಮ್ಮೊಂದಿಗೆ ಇರುತ್ತದೆ. ಕೋವಿಡ್ ನಂತರದ ಜಾಗತಿಕ ವಾತಾವರಣವು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹೆಚ್ಚು ಚೇತರಿಕೆಯ ಭಾರತವನ್ನು ನಿರ್ವಿುಸಲು ಪ್ರಧಾನಿ ಮೋದಿಯವರು ಇತಿಹಾಸದ ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ಜೀವ ಮತ್ತು ಜೀವನ ಎರಡನ್ನೂ ರಕ್ಷಿಸಲು ಭಾರತ ಸಮರ್ಥವಾಗಿದೆ. ಆಶಾವಾದ ಮತ್ತು ಭರವಸೆಯೊಂದಿಗೆ ಭವಿಷ್ಯವನ್ನು ನೋಡಬಲ್ಲ ಬಲವಾದ, ಹೆಚ್ಚು ಸ್ವಾವಲಂಬಿ ಭಾರತ ಇದಾಗಿದೆ.
(ಲೇಖಕರು ಲೋಕಸಭಾ ಸದಸ್ಯರು ಮತ್ತು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರು. ಇಲ್ಲಿನ ಅಭಿಪ್ರಾಯಗಳು ವೈಯಕ್ತಿಕ)