

ಶೃಂಗೇರಿ ಶಾರದಾ ಪೀಠದ ಎಲ್ಲ 37 ಜಗದ್ಗುರುಗಳ ವಿವರಗಳನ್ನು ತಿಳಿಸುವ ಕೃತಿ ಇದೇ ಮೊದಲು. ಕನ್ನಡದಲ್ಲಿಯಾಗಲಿ, ಬೇರೆ ಭಾಷೆಗಳಲ್ಲಿಯಾಗಲಿ ಇಂಥದೊಂದು ಕೃತಿ ಈವರೆಗೆ ಬಂದಿಲ್ಲ. ಐತಿಹಾಸಿಕ ಮಹತ್ವವುಳ್ಳ ಈ ಪುಸ್ತಕ ಮಾ. 1ರಂದು ಶೃಂಗೇರಿ ಶಾರದಾಪೀಠದ ಗುರುನಿವಾಸದಲ್ಲಿ ಲೋಕಾರ್ಪಣೆಯಾಗಲಿದೆ.
ಕೇರಳದ ‘ಕಾಲಟಿ’ ಎಂಬ ಗ್ರಾಮದಲ್ಲಿ ಶಿವಗುರು ಮತ್ತು ಆರ್ಯಾಂಬ ದಂಪತಿಯ ಪುತ್ರರಾಗಿ ಜನಿಸಿ, ಕೇವಲ 32 ವರ್ಷಗಳ ಜೀವನಾವಧಿಯಲ್ಲಿ ಅವರು ಮಾನವತೆಗೆ ನೀಡಿದ ಜ್ಞಾನ ಅಪಾರ. 8ನೇ ವಯಸ್ಸಿನಲ್ಲೇ ಗುರುಕುಲದಲ್ಲಿ ಸಂಸ್ಕೃತ, ವೇದಗಳನ್ನು ಕಲಿತು, 12ನೇ ವಯಸ್ಸಿನಲ್ಲಿ ಸಕಲ ಶಾಸ್ತ್ರಗಳಲ್ಲಿಯೂ ಪಾಂಡಿತ್ಯ ಸಂಪಾದಿಸಿ ಮಹಾಜ್ಞಾನಿಯಾದರು. ಧೀರ ಸಂನ್ಯಾಸಿಗಳಾದರು. 16ನೇ ವಯಸ್ಸಿನಲ್ಲಿಯೇ ಪ್ರಸ್ಥಾನತ್ರಯ ಗ್ರಂಥಗಳಿಗೆ ಗಂಭೀರವಾದ ಭಾಷ್ಯಗಳನ್ನು ಬರೆದರು.
ಶಂಕರಾಚಾರ್ಯರು ಮೊದಲ ಸಲ ಶೃಂಗೇರಿಗೆ ಬಂದಾಗ ತುಂಗಾನದಿ ದಡದಲ್ಲಿ ಸರ್ಪವೊಂದನ್ನು ಕಂಡರು. ಅದು ಬಿಸಿಲಿನ ತಾಪದಲ್ಲಿ ಬಸವಳಿಯುತ್ತಿದ್ದ ಗರ್ಭಿಣಿ ಕಪ್ಪೆಗೆ ತನ್ನ ಹೆಡೆಯಿಂದ ನೆರಳು ನೀಡುತ್ತಿತ್ತು! ಸಹಜ ಶತ್ರುಗಳೂ ಪ್ರೀತಿಯಿಂದ ಬಾಳುವ ಸ್ಥಳವಿದು ಎಂದು ಮನಗಂಡು ಅವರು ಇಲ್ಲಿಯೇ ಪ್ರಥಮ ಆಮ್ನಾಯ ಪೀಠವನ್ನು ಸ್ಥಾಪಿಸಿದರು. ತುಂಗಾನದಿ ಪೂರ್ವಕ್ಕೆ ಹರಿದು ಪುನಃ ಉತ್ತರಕ್ಕೆ ಪ್ರವಹಿಸುತ್ತಿರುವುದೂ ಇಲ್ಲಿ ಪೀಠ ಸ್ಥಾಪನೆಗೆ ಇನ್ನೊಂದು ಕಾರಣ. ನಂತರ 12 ವರ್ಷಗಳನ್ನು ಅವರು ಇಲ್ಲಿಯೇ ಕಳೆದರು.
ಶಂಕರಾಚಾರ್ಯರಿಗೆ ಪದ್ಮಪಾದಾಚಾರ್ಯ, ತೋಟಕಾಚಾರ್ಯ, ಹಸ್ತಾಮಲಕಾಚಾರ್ಯ ಮತ್ತು ಸುರೇಶ್ವರಾಚಾರ್ಯ ಎಂಬ ನಾಲ್ವರು ಶಿಷ್ಯರಿದ್ದರು. ಶೃಂಗೇರಿಮಠದ ಮೊದಲನೇ ಪೀಠಾಧಿಪತಿಯನ್ನಾಗಿ ಸುರೇಶ್ವರಾಚಾರ್ಯರನ್ನು ನೇಮಿಸಲಾಯಿತು. ಅಲ್ಲಿಂದ ಪ್ರಾರಂಭವಾದ ಗುರುಪರಂಪರೆ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿದೆ. ಸುರೇಶ್ವರಾಚಾರ್ಯರು ಕ್ರಿ.ಶ. 820ರಿಂದ 834ರವರೆಗೆ ಪೀಠಾಧಿಪತಿಯಾಗಿದ್ದರು.
ವಿದ್ಯಾರಣ್ಯರ ಪ್ರಭಾವ: ನಂತರ ಸ್ಥಾಪನೆಗೊಂಡ ವಿಜಯನಗರ ಸಾಮ್ರಾಜ್ಯ 200 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದು, ಎಂದಿಗೂ ಮರೆಯಲಾಗದ ಸಾಮ್ರಾಜ್ಯ ಎಂದು ಇತಿಹಾಸದಲ್ಲಿ ದಾಖಲಾಗಿದೆ. ವಿದ್ಯಾರಣ್ಯ ಮಹಾಸ್ವಾಮಿಗಳು ಶೃಂಗೇರಿಯ 12ನೇ ಪೀಠಾಧಿಪತಿಯಾಗಿದ್ದರು. ಅವರ ಕಾಲದಲ್ಲಿ ಪೀಠವು ರಾಜ್ಯದ ಪ್ರಭಾವೀ ಆಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತನೆಯಾಯಿತು. ಅವರು ಆಧ್ಯಾತ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿದರು. ಕೇವಲ 6 ವರ್ಷ ಪೀಠದಲ್ಲಿದ್ದರೂ ಅವರು ಶೃಂಗೇರಿ ಮತ್ತು ಹಂಪಿಯಲ್ಲಿ ಹಲವಾರು ದೇವಾಲಯ, ಮಠಗಳನ್ನು ನಿರ್ವಿುಸಿ ಸನಾತನ ಧರ್ಮವನ್ನು ಸಂರಕ್ಷಿಸಿ ವೇದಾಂತವನ್ನು ಪ್ರಚಾರ ಮಾಡಿದರು.
ನಂತರ ಆ ಸ್ಥಾನವನ್ನು ಪ್ರಥಮ ಚಂದ್ರಶೇಖರ ಭಾರತಿ ಸ್ವಾಮಿಗಳು 1386ರಿಂದ 1389ರವರೆಗೆ ಅಲಂಕರಿಸಿದ್ದರು. 14ರಿಂದ 31ರವರೆಗಿನ ಜಗದ್ಗುರುಗಳ ಬಳಿಕ ಶ್ರೀ ನೃಸಿಂಹ ಭಾರತೀ ಮಹಾಸ್ವಾಮಿಗಳು ಪೀಠದಲ್ಲಿ ವಿರಾಜಮಾನರಾದರು. 1866ರಲ್ಲಿ ಅವರಿಗೆ 60 ವರ್ಷ ವಯಸ್ಸಾಗಿದ್ದಾಗ, ಬ್ರಹ್ಮಚಾರಿಯಾದ ಶಿವಸ್ವಾಮಿಗೆ ಸಂನ್ಯಾಸ ದೀಕ್ಷೆ ಕೊಟ್ಟು ಉತ್ತರಾಧಿಕಾರಿಯನ್ನಾಗಿಸಿದರು.
ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಎಂಬ ಯೋಗಪಟ್ಟ ನೀಡಿದರು. ಅವರ ವಿಜಯಯಾತ್ರೆ 12 ವರ್ಷ ನಡೆದಿದ್ದು ಒಂದು ದಾಖಲೆ. ನೃಸಿಂಹ ಭಾರತೀ ಸ್ವಾಮಿಗಳು 1879ರಲ್ಲಿ ವಿದೇಹ ಮುಕ್ತರಾದಾಗ ಕಿರಿಯ ಸ್ವಾಮಿಗಳಿಗೆ ಕೇವಲ 20 ವರ್ಷ. ಕಾಲಟಿ ಕ್ಷೇತ್ರದ ಪುನರುತ್ಥಾನ, ಅಲ್ಲೊಂದು ದೇವಾಲಯ ನಿರ್ವಣ, ಪ್ರತಿವರ್ಷ ಶಂಕರ ಜಯಂತ್ಯುತ್ಸವ, ಬೆಂಗಳೂರಿನಲ್ಲಿ ಶಂಕರಮಠ, ವಾರಣಾಸಿಯಲ್ಲಿ ಹಿಂದು ವಿಶ್ವವಿದ್ಯಾಲಯ ಸ್ಥಾಪನೆ, ಶಂಕರಾಚಾರ್ಯರ ಎಲ್ಲ ಕೃತಿಗಳ ಪ್ರಕಟಣೆ, ವಿವೇಕಚೂಡಾಮಣಿಗೆ ವಿವೇಕೋದಯ ಎಂಬ ಗಂಭೀರಶೈಲಿಯ ವ್ಯಾಖ್ಯಾನ ಮುಂತಾದ ಕಾರ್ಯಗಳನ್ನು ಮಾಡಿದ ಕೀರ್ತಿ ಅವರದು.
ಅವಧೂತ ಗುರು: 1912ರಲ್ಲಿ ನರಸಿಂಹಶಾಸ್ತ್ರಿಗಳು 34ನೇ ಪೀಠಾಧಿಪತಿಯಾಗಿ ಚಂದ್ರಶೇಖರ ಭಾರತೀ ಎಂದು ನಾಮಾಂಕಿತರಾದರು. ಆಗ ಅವರಿಗೆ 20 ವರ್ಷ. ತಪಸ್ಸಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ಅವರು ಅವಧೂತ ಗುರು ಎನಿಸಿಕೊಂಡರು. ಅನೇಕ ಗ್ರಂಥ, ಸ್ತೋತ್ರಗಳನ್ನು ರಚಿಸಿದರು. ಶೃಂಗೇರಿ ಮಠದಲ್ಲಿ ಶಾರದಾ ದೇವಾಲಯದ ನವೀಕರಣ, ಬೆಂಗಳೂರಿನ ಶಂಕರಮಠದಲ್ಲಿ ಶಾರದಾಂಬೆ ದೇವಾಲಯ ಸ್ಥಾಪನೆ ಇವು ಅವರ ಕೊಡುಗೆಗಳು. 1954ರಲ್ಲಿ ಮಹಾಲಯ ಅಮಾವಾಸ್ಯೆಯಂದು ತುಂಗಾ ನದಿಯಲ್ಲಿ ಜಲಸಮಾಧಿ ಹೊಂದಿದರು.
35ನೇ ಜಗದ್ಗುರುಗಳಾಗಿ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಪೀಠಾಧಿಪತಿಯಾದರು. 1979ರಲ್ಲಿ ಶೃಂಗೇರಿಯಲ್ಲಿ ನಡೆದ ಐತಿಹಾಸಿಕ ಚತುರಾಮ್ನಾಯ ಪೀಠಾಧಿಪತಿಗಳ ಸಮ್ಮೇಳನದಲ್ಲಿ ದ್ವಾರಕ, ಬದರಿ, ಪುರಿ ಪೀಠಾಧಿಪತಿಗಳು ಭಾಗವಹಿಸಲು ಕಾರಣಕರ್ತರಾದರು. ಅನೇಕ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿದರು. ಶೃಂಗೇರಿಯಲ್ಲಿ ನರಸಿಂಹವನಕ್ಕೆ ಹೋಗಲು ತುಂಗಾ ನದಿಗೆ ಸೇತುವೆ ನಿರ್ವಿುಸಿದರು. 1956ರಲ್ಲಿ 6 ವರ್ಷ ದಕ್ಷಿಣ ಭಾರತ ಪ್ರವಾಸ ಮಾಡಿ, ಕಾಲಟಿಯಲ್ಲಿ ವ್ಯಾಸಪೂಜೆ, ನವರಾತ್ರಿ ಕಾರ್ಯಕ್ರಮ ಆಚರಿಸಿದರು.
1960ರಲ್ಲಿ ಮದ್ರಾಸಿನಲ್ಲಿ ಚಾತುರ್ವಸ್ಯ ನಡೆಸಿದರು. ಬೆಂಗಳೂರಿನ ಶಂಕರಮಠದಲ್ಲಿ ಕಲ್ಯಾಣಮಂಟಪ ಸ್ಥಾಪಿಸಿದರು. ವಾರಾಣಸಿಯಲ್ಲಿ ಅನ್ನಪೂರ್ಣೆಶ್ವರಿ ವಿಗ್ರಹ ಮರುಪ್ರತಿಷ್ಠಾಪಿಸಿದರು. ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್, ಸರ್ವಪಲ್ಲಿ ರಾಧಾಕೃಷ್ಣನ್, ಜೇಲ್ಸಿಂಗ್, ಶಂಕರದಯಾಳ ಶರ್ವ, ಪ್ರಧಾನಿಗಳಾಗಿದ್ದ ವಾಜಪೇಯಿ, ಇಂದಿರಾ ಗಾಂಧಿ ಮುಂತಾದವರು ಮಠಕ್ಕೆ ಬಂದು ಇವರ ಆಶೀರ್ವಾದ ಪಡೆದಿದ್ದರು.
ಭಾರತೀತೀರ್ಥರಿಂದ ಸುವರ್ಣಯುಗ: 1974ರ ನ. 11ರಂದು ಅವರು ಶ್ರೀ ಭಾರತೀತೀರ್ಥ ಎಂಬ ಪಂಡಿತೋತ್ತಮರನ್ನು ತಮ್ಮ ಉತ್ತರಾಧಿಕಾರಿಯಾಗಿಸಿ 1989ರ ಸೆ. 21ರಂದು ವಿದೇಹ ಕೈವಲ್ಯ ಪಡೆದರು. ಭಾರತೀತೀರ್ಥರು 1989ರ ಅ. 19ರಂದು 36ನೇ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದರು. ಶಾರದಾಪೀಠದ ಅನೇಕ ಶಾಖಾಮಠಗಳಲ್ಲಿ ವೇದಶಾಸ್ತ್ರಗಳ ಪಾಠಶಾಲೆಗಳನ್ನು ತೆರೆದರು. ಶೃಂಗೇರಿಯಿಂದ ಕಾಶ್ಮೀರದವರೆಗೆ ಧರ್ಮಯಾತ್ರೆ ಮಾಡಿದರು. ಶೃಂಗೇರಿಯಲ್ಲಿ ಶಾಂತಿಕುಟೀರ, ವೃದ್ಧಾಶ್ರಮ ಸ್ಥಾಪಿಸಿದರು. 127 ಅಡಿ ಎತ್ತರದ ಆಕರ್ಷಕ ಪ್ರವೇಶ ಗೋಪುರ ಇವರ ಕೊಡುಗೆ. ರಾಜಕೀಯದ ಕುರಿತು ಶ್ರೀಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲ. ಆದರೂ ದೇಶದ ರಾಷ್ಟ್ರಪತಿ, ಪ್ರಧಾನಿ, ಮಂತ್ರಿಗಳು, ಉನ್ನತ ಅಧಿಕಾರಿಗಳು ಬಂದು ಇವರ ದರ್ಶನಾಶೀರ್ವಾದ ಪಡೆದಿದ್ದಾರೆ.
ಶಾರದಾಂಬೆಗೆ ವಜ್ರದ ಕಿರೀಟ, ಅಭಯಹಸ್ತ, ಚಿನ್ನದ ರಥ, ಬಾಗಿಲು, ಗರ್ಭಗೃಹದ ಭಿತ್ತಿಗಳಿಗೆ ಚಿನ್ನದ ಹೊದಿಕೆ, ಚಂದ್ರಮೌಳೀಶ್ವರ ಸ್ವಾಮಿಗೆ ಬೃಹತ್ ಚಿನ್ನದ ಮಂಟಪ ಇತ್ಯಾದಿಗಳನ್ನು ಸಮರ್ಪಿಸಿ, ಮಠದ ಇತಿಹಾಸದಲ್ಲಿ ಅಕ್ಷರಶಃ ಸುವರ್ಣಯುಗ ನಿರ್ವಿುಸಿದ್ದಾರೆ.
ಈಗ 37ನೇ ಜಗದ್ಗುರುಗಳಾಗಿರುವ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಮೊದಲ ಸಲ ಶೃಂಗೇರಿಗೆ ಬಂದು ಭಾರತೀತೀರ್ಥ ಶ್ರೀಗಳ ದರ್ಶನ ಪಡೆದಿದ್ದು 2006ರಲ್ಲಿ. ಗುರುಗಳ ದರ್ಶನ ಇವರ ಮೇಲೆ ಅಪಾರ ಪ್ರಭಾವ ಬೀರಿತು. ಜಗದ್ಗುರುಗಳ ಸನ್ನಿಧಿಯಲ್ಲಿ ಶಾಸ್ತ್ರಾಧ್ಯಯನ ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಅದಕ್ಕೆ ಭಾರತೀತೀರ್ಥರ ಸಮ್ಮತಿಯೂ ಲಭಿಸಿತು. ಜಗದ್ಗುರುಗಳ ಜತೆಯಲ್ಲೇ ಇದ್ದು ವಿದ್ವಾನ್ ತಂಗಿರಾಲ ಶಿವಕುಮಾರ ಶರ್ಮರ ಬಳಿ ಸಂಸ್ಕೃತ ಕಾವ್ಯಗಳನ್ನು ಅಧ್ಯಯನ ಮಾಡಿದರು. ಕೆಲವೇ ದಿನಗಳಲ್ಲಿ ಸಂಸ್ಕೃತದಲ್ಲಿ ಪಾಂಡಿತ್ಯ ಸಾಧಿಸಿದರು. ಇವರ ವಿನಯ, ಪ್ರತಿಭೆ, ಅಧ್ಯಯನಶೀಲತೆಯನ್ನು ಕಂಡು ಭಾರತೀತೀರ್ಥರೇ ಶಾಸ್ತ್ರಪಾಠ ಮಾಡಿದರು. 2015ರ ಜ. 23ರಂದು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಿದರು. ಕುಪ್ಪಾವೆಂಕಟೇಶ ಪ್ರಸಾದಶರ್ಮ ಎಂದು ಇದ್ದ ಮೂಲ ನಾಮ ಶ್ರೀ ವಿಧುಶೇಖರ ಭಾರತೀ ಎಂದಾಯಿತು.
ಮಂಡಗದ್ದೆ ಪ್ರಕಾಶ ಬಾಬು ಅವರ ‘ಶೃಂಗೇರಿ ಶಾರದಾಪೀಠ ಗುರುಪರಂಪರೆ ಮತ್ತು ಸ್ಥಳ ಮಹತ್ವ’ ಪುಸ್ತಕದಲ್ಲಿ ಈ ಎಲ್ಲ ವಿವರಗಳಿವೆ. ಇದೇ ಪುಸ್ತಕದ ಎರಡನೇ ಭಾಗದಲ್ಲಿ ಶೃಂಗೇರಿ ಕ್ಷೇತ್ರದ ಸ್ಥಳ ಮಹಿಮೆಯನ್ನು ಸವಿಸ್ತಾರವಾಗಿ ಬರೆಯಲಾಗಿದೆ. ಮಠದಲ್ಲಿರುವ ವಿಶೇಷ ಗಣಪತಿ ದೇವಾಲಯಗಳ ಪರಿಚಯ, ಚಂದ್ರಮೌಳೀಶ್ವರ ಮತ್ತು ರತ್ನಗರ್ಭ ಗಣಪತಿ, ಶರನ್ನವರಾತ್ರಿ ಉತ್ಸವ, ಶೃಂಗೇರಿ ಶಾರದಾ ಪೀಠದ ವೈಶಿಷ್ಟ್ಯ, ಚಾತುರ್ವಸ್ಯ ವ್ರತ ಕ್ರಮ, ಕನಕಧಾರ ಸ್ತೋತ್ರದ ಸ್ಥಳ, ಅದ್ಭುತ ಗುರು ನಿವಾಸ, ಮಠದಿಂದ ಧಾರ್ವಿುಕ ಶೈಕ್ಷಣಿಕ ಸೇವೆ ಮತ್ತಿತರ ವಿಷಯಗಳ ಬಗ್ಗೆ ವಿವರಗಳಿವೆ.