

ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಹೊಸ ಕಾದಂಬರಿ ‘ಅಶ್ವತ್ಥಾಮನ್’ ಮಾ. 1ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಬಿಡುಗಡೆಯಾಗಲಿದೆ.
ಕಥೆ, ಕಾದಂಬರಿಗಳ ಬರೆವಣಿಗೆಯಲ್ಲಿ ಸ್ಥೂಲವಾಗಿ ಎರಡು ರೀತಿಗಳನ್ನು ಕಾಣಬಹುದು. ಮೊದಲನೆಯದು, ಮನುಷ್ಯ ಅವನ ಹೊರಜಗತ್ತಿನ ವಿವರಗಳ ಮೂಲಕವೇ ಬದುಕನ್ನು ಕಟ್ಟಿ ಕೊಡುವುದು. ಎರಡನೆಯದು, ಅವನ ಒಳಜಗತ್ತಿನ ತಲ್ಲಣಗಳನ್ನು ಕಟ್ಟಿ ಕೊಡುವುದು. ಜೋಗಿ ತಮ್ಮ ಇತ್ತೀಚಿನ ಕಾದಂಬರಿಗಳಲ್ಲಿ ಈ ಎರಡನೇ ರೀತಿ ಅನುಸರಿಸುವ ಮೂಲಕ ವ್ಯಕ್ತಿತ್ವದ ಒಳಾವರಣವನ್ನು ದಾಖಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಆ ಪಯಣದ ಮೊದಲ ಹಂತವಾಗಿ ಅವರ ‘ಎಲ್’ ಕಾದಂಬರಿಯಿದ್ದರೆ ಎರಡನೇ ಪ್ರಮುಖ ಹಂತವಾಗಿ ‘ಅಶ್ವತ್ಥಾಮನ್’ ಕಾದಂಬರಿಯಿದೆ. ಶಿವ, ಯಮ, ಕಾಮ, ಕ್ರೋಧಗಳ ಸಂಯುಕ್ತ ರೂಪವಾಗಿ ಅಶ್ವತ್ಥಾಮನ ಜನ್ಮವಾಯಿತೆಂದು ಪುರಾಣ ಹೇಳುತ್ತದೆ. ಅದಕ್ಕೆ ಸರಿಯಾಗಿ ಅಶ್ವತ್ಥಾಮನಿಗೆ ಬಾಲ್ಯವೇ ಇಲ್ಲ. ಹಿಟ್ಟು ಬೆರೆಸಿದ ನೀರನ್ನೇ ಹಾಲೆಂದು ಭಾವಿಸಿ ಕುಡಿದು ಬೆಳೆದವನವನು. ಬಾಲ್ಯವಿಲ್ಲದವನು ರಾಕ್ಷಸನಾಗುತ್ತಾನಂತೆ.
ರಾಕ್ಷಸನಿಗೂ ಬಾಲ್ಯವಿಲ್ಲವಷ್ಟೆ! ಬಾಲ್ಯವಿಲ್ಲದ ಈ ಅಶ್ವತ್ಥಾಮನೂ ಬದುಕಿನುದ್ದಕ್ಕೂ ದ್ವೇಷ, ಸಿಟ್ಟು ಅಸಹನೆ, ಸೇಡು, ಹಿಂಸೆಗಳನ್ನು ಆವಾಹಿಸಿಕೊಂಡು ಬೇಯುತ್ತಾ, ಕ್ರೌರ್ಯದ ಪರಾಕಾಷ್ಟೆಯಲ್ಲಿ ಚಡಪಡಿಸುತ್ತಾ ಸಾಯಲೂ ಆಗದೆ ಚಿರಂಜೀವಿಯಾಗಿ ಉಳಿದವನು. ಆತ ಇಂದಿಗೂ ಎಲ್ಲಿ ಭಾರತ ಕಥಾ ಶ್ರವಣ ನಡೆಯುತ್ತದೋ ಅಲ್ಲಿಗೆ ಹಾಜರಾಗಿ, ಕಥೆ ಕೇಳುತ್ತಾ ಪಶ್ಚಾತ್ತಾಪದಿಂದ ಬೇಯುತ್ತಿರುತ್ತಾನೆ ಎಂದು ಕಥೆಯಿದೆ. ಈ ಕಾದಂಬರಿಯ ಮುಖ್ಯ ಪಾತ್ರವಾದ ಅಶ್ವತ್ಥಾಮನೂ ಆ ಅಶ್ವತ್ಥಾಮನ ಆಧುನಿಕ ರೂಪದಂತಿರುವವನು. ಇವನಿಗೂ ಬಾಲ್ಯವಿಲ್ಲ.
ಮದುವೆಗೂ ಮೊದಲು ತಾಯಿಯ ಮೇಲೆ ಅತ್ಯಾಚಾರ ಮಾಡಿದ ಫಲವಾಗಿ ಹುಟ್ಟಿದ ಅಶ್ವತ್ಥಾಮನಿಗೆ ಇದಕ್ಕೆ ಸೇಡು ತೀರಿಸಿಕೊಳ್ಳುವ ತವಕ. ನೋವು, ಸಂಕಟ, ಅವಮಾನದೊಂದಿಗೆ ಸೇಡು, ಕ್ರೌರ್ಯ ಅಸಹನೆಯಿಂದ ಕುದಿಯುತ್ತಿದ್ದ ಅಶ್ವತ್ಥಾಮನು ತನ್ನ ಈ ನಿಜದ ಸಂಕಟಗಳನ್ನು ಮೀರುವುದಕ್ಕಾಗಿ, ಸ್ವಂತದ ವ್ಯಕ್ತಿತ್ವವನ್ನು ಕಳೆದುಕೊಂಡು, ಇತರರು ಸೂಚಿಸಿದಂತೆ ನಟಿಸುವ ನಟನಾಗಿ ಬದಲಾಗಿ, ಅಶ್ವತ್ಥಾಮನ್ ಆಗುತ್ತಾನೆ.
ಜತೆಗೇ ಅವನು ಹೊಸದಾಗಿ ಗಳಿಸಿಕೊಂಡ ‘ಅದ್ಭುತ ನಟ’ ಎನ್ನುವ ಪಾತ್ರಕ್ಕೆ ತಕ್ಕಂತೆ ಉಡಾಫೆ, ಜಗಳಗಂಟತನ, ಎಲ್ಲವನ್ನೂ ನಿರಾಕರಿಸುವ ದಾಷ್ಟರ್್ಯ, ಯಾರನ್ನೂ ಲೆಕ್ಕಿಸದ ದಿಟ್ಟತನ, ಮೊದಲಾದ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ಹೋಗುವುದರೊಂದಿಗೆ ಬದುಕಿನ ನವಿರು ಭಾವಗಳನ್ನು ರೋಚಕತೆಯನ್ನು ಕಳೆದುಕೊಂಡು ಎಲ್ಲದರ ಕುರಿತಾದ ನಿರ್ಲಕ್ಷ್ಯವನ್ನು ತಾಳುತ್ತಾ ಹೋಗುತ್ತಾನೆ.
ಇದು, ಅವನು ತನ್ನ ಬಾಲ್ಯದ ಸೋಲು, ಅವಮಾನಗಳನ್ನು ಮರೆಯುವ ಕ್ರಮವಾಗಿತ್ತು. ಅವನ ಬದುಕಿನಲ್ಲಿ ಅನೇಕ ಸ್ತ್ರೀಯರು ಬಂದು ಹೋಗುತ್ತಾರೆ. ಇಲ್ಲಿ ಅಶ್ವತ್ಥಾಮನ್ ಹೇಗೆ ದ್ವಿಧಾ ವ್ಯಕ್ತಿತ್ವದ ರೂಪಕವಾಗುತ್ತಾ ಹೋಗುತ್ತಾನೋ ಹಾಗೆಯೇ ಅವನ ಬದುಕಿನಲ್ಲಿ ಬಂದು ಮರೆಯಾಗುವ ಶುಭಾಂಗಿನಿ, ಸರೋಜಿನಿ, ಸಂಯುಕ್ತಾ, ಧಾತ್ರಿ ಮೊದಲಾದವರೂ ಒಬ್ಬಳೇ ಸ್ತ್ರೀಯ ವಿವಿಧ ರೂಪಗಳಿಗೆ ರೂಪಕಗಳಾಗಿ ಕಾಣಿಸುತ್ತಾರೆ. ಕಾದಂಬರಿಯು ಒಂದು ಥ್ರಿಲ್ಲರ್ ಥರ ಆರಂಭವಾಗಿ ನಿಧಾನವಾಗಿ ಹರಿದು ಕೊನೆಗೆ ಧುಮ್ಮಿಕ್ಕುವ ಪ್ರವಾಹವಾಗಿ ಬದಲಾಗುತ್ತದೆ.
ಕುತೂಹಲಕರವಾಗಿ ಆರಂಭವಾಗುವ ಈ ಕಥಾನಕವು ದಿಗ್ಭ›ಮೆಯ, ತಲ್ಲಣಗೊಳಿಸುವ ನಾಟಕೀಯ ದೃಶ್ಯಾವಳಿಯಲ್ಲಿ ಅಂತ್ಯ ಕಾಣುತ್ತದೆ. ಮನುಷ್ಯನ ಒಳಜಗತ್ತಿನ ತಲ್ಲಣಗಳನ್ನು ರೂಪಕಗಳ ಮೂಲಕವೇ ಹೇಳ ಹೊರಟಿರುವ ಈ ಕಾದಂಬರಿಯು ಜೋಗಿಯವರ ಬರೆವಣಿಗೆಯ ಒಂದು ಮುಖ್ಯ ಹಂತ. ವಿಭಿನ್ನ ಬಗೆಯ ಈ ಕಾದಂಬರಿಯು ಜೋಗಿಯವರ ಮುಖ್ಯ ಕೃತಿಗಳಲ್ಲಿ ಒಂದು.
(ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿಯ ಆಯ್ದ ಭಾಗ)