

ಕಾಲಕ್ರಮೇಣ ರಂಗಪ್ಪನ ಮೂರು ಮೊಮ್ಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿ ಅವರೂ ಮನೆಯಿಂದ ಹೊರಟುಹೋದರು. ಮೂರನೆಯವಳಾದ ಕುಸುಮ 8ನೆಯ ತರಗತಿಯಲ್ಲಿ ಕಲಿಯುತ್ತಿದ್ದು ಪಕ್ಕದ ಗ್ರಾಮದಲ್ಲಿದ್ದ ಶಾಲೆಗೆ ಹೋಗುತ್ತಿದ್ದಳು. ಒಂದು ದಿನ ಏಕಾಏಕಿ ಹನುಮಂತನಿಗೆ ಹೃದಯಾಘಾತವಾಗಿ ಅಸುನೀಗಿದಾಗ ರಂಗಪ್ಪನ ಮೇಲೆ 45 ವರ್ಷ ವಯಸ್ಸಿನ ಸೊಸೆ ಪಾರ್ವತಿ ಮತ್ತು ಮೊಮ್ಮಗಳು ಕುಸುಮಳನ್ನು ಸಾಕುವ ಜವಾಬ್ದಾರಿಯೂ ಬಿದ್ದಿತು. ಹೊಲದ ಉಸ್ತುವಾರಿಯನ್ನು ನೋಡಿಕೊಳ್ಳಲು ರಂಗಪ್ಪ, ಲಕ್ಷ್ಮಣ್ ಎನ್ನುವವನನ್ನು ನೇಮಿಸಿಕೊಂಡಿದ್ದ. ಆತನಿದ್ದ ಊರು ಹತ್ತಿರದಲ್ಲಿಯೇ ಇದ್ದರೂ ನೆರೆರಾಜ್ಯದಲ್ಲಿತ್ತು. ತನ್ನ ಊರಿನಿಂದ ಪ್ರತಿದಿನ ಬೆಳಗಿನ ಜಾವವೇ ಬರುತ್ತಿದ್ದ ಲಕ್ಷ್ಮಣ್, ರಾತ್ರಿಯವರೆಗೆ ಇರುತ್ತಿದ್ದುದಲ್ಲದೇ ರಂಗಪ್ಪನ ಮನೆ ಮತ್ತು ಹೊಲಗಳ ಸಂಬಂಧದ ಎಲ್ಲ ಕೆಲಸಕಾರ್ಯಗಳನ್ನೂ ಮಾಡುತ್ತಿದ್ದು ಮನೆಯವನಂತೆಯೇ ಆಗಿಬಿಟ್ಟಿದ್ದ.
ಆದರೆ ಲಕ್ಷ್ಮಣನ ನಿಜರೂಪ ಹೊರಬಿದ್ದದ್ದು ಹನುಮಂತ ಸತ್ತ ನಂತರವೇ. ಒಮ್ಮೆ ಮನೆಯಲ್ಲಿ ಯಾರೂ ಇರದಿದ್ದಾಗ, ಒಬ್ಬಂಟಿಯಾಗಿದ್ದ ಪಾರ್ವತಿಯನ್ನು ಆತ ಲೈಂಗಿಕ ಕ್ರಿಯೆಗಾಗಿ ಆಹ್ವಾನಿಸಿದ. ಕೋಪಗೊಂಡ ಪಾರ್ವತಿ, ಇನ್ನು ಮುಂದೆ ಹೀಗೆ ಮಾತನಾಡಿದರೆ ಊರ ಪಂಚಾಯಿತಿಗೆ ದೂರು ಕೊಡುವೆ ಎಂದಳು. ಆದರೆ ಆತ ಹೆದರದೆ, ‘ನೀನು ಯಾರಿಗಾದರೂ ಕಂಪ್ಲೇಂಟ್ ಕೊಡು. ಈಗಾಗಲೇ ನಾನು ಎರಡು ಕೊಲೆ ಮಾಡಿ ಜೈಲುವಾಸವನ್ನೂ ಅನುಭವಿಸಿರುವೆ, ನನಗೆ ಯಾರ ಭಯವೂ ಇಲ್ಲ. ನಾನೊಮ್ಮೆ ನಿನ್ನನ್ನು ಅನುಭವಿಸದಿದ್ದರೆ ನನ್ನ ಹೆಸರು ಲಕ್ಷ್ಮಣನೇ ಅಲ್ಲ’ ಎಂದ. ಆತ ಒಣಬಡಾಯಿ ಕೊಚ್ಚುತ್ತಿದ್ದಾನೆಂದು ಭಾವಿಸಿದ ಪಾರ್ವತಿ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಕೆಲ ತಿಂಗಳ ನಂತರ ಪಾರ್ವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಲಕ್ಷ್ಮಣ್ ಅವಳನ್ನು ಅಪ್ಪಿಕೊಂಡು ಚುಂಬಿಸಿದ. ಗಾಬರಿಗೊಂಡ ಪಾರ್ವತಿ ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಅವನನ್ನು ಥಳಿಸಿದಳು. ಆತ ಓಡಿ ಹೋಗುವಾಗ, ‘ನಿನ್ನನ್ನು ಅನುಭವಿಸಿಯೇ ತೀರುತ್ತೇನೆ’ ಎಂದು ಮತ್ತೊಮ್ಮೆ ಬೆದರಿಕೆ ಹಾಕಿದ. ಆಗ ಪಾರ್ವತಿ ತನ್ನ ಹಿರಿಯ ಮಗಳಿಗೆ ಈ ವಿಷಯವನ್ನು ಫೋನ್ ಮೂಲಕ ತಿಳಿಸಿದಳು. ಪೊಲೀಸರಿಗೆ ದೂರು ಕೊಡುವುದು ಒಳ್ಳೆಯದೆಂದು ಸೂಚಿಸಿದ ಆಕೆ, ಏನನ್ನಾದರೂ ಮಾಡುವ ಮೊದಲು ಅಜ್ಜ ರಂಗಪ್ಪನಿಗೆ ತಿಳಿಸಲು ಹೇಳಿದಳು. ಅತ್ತೆ ಮಾವ ಮನೆಗೆ ವಾಪಸಾದ ನಂತರ ಪಾರ್ವತಿ ಘಟನೆಯನ್ನು ವಿವರಿಸಿದಳು. ಕಾದು ನೋಡೋಣವೆಂದು ಅವರು ತೀರ್ವನಿಸಿದರು.
ಹದಿನೈದು ದಿನಗಳ ನಂತರ ಬಸಮ್ಮ ಮಗಳ ಮನೆಗೆಂದು ಹೋದಳು. ತೋಟದಮನೆಯಲ್ಲಿ ರಂಗಪ್ಪ, ಪಾರ್ವತಿ ಮತ್ತು ಕುಸುಮ ಇದ್ದರು. ಆ ಅವಧಿಯಲ್ಲಿ ಒಂದು ಮುಂಜಾನೆ ಪಾರ್ವತಿಯ ಎರಡನೆಯ ಮಗಳು ತಾಯಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ಆಗ ಆಕೆ ಅಜ್ಜಿ ಬಸಮ್ಮನಿಗೆ ಕರೆ ಮಾಡಿದಳು. ಬಸಮ್ಮ ತಾನು ಬೇರೆ ಊರಿನಲ್ಲಿದ್ದೇನೆಂದು ಹೇಳಿದಾಗ ಆಕೆ ಅದೇ ಗ್ರಾಮದಲ್ಲಿದ್ದ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ತೋಟದ ಮನೆಗೆ ಹೋಗಿ ವಿಚಾರಿಸಲು ಕೋರಿದಳು.
ಆತ ರಂಗಪ್ಪನ ತೋಟದ ಮನೆಗೆ ಹೋದಾಗ ಬೆಳಗಿನ 10 ಗಂಟೆಯಾಗಿತ್ತು. ರಂಗಪ್ಪ ಮನೆಯಿಂದ ಸುಮಾರು ನೂರು ಅಡಿ ದೂರದಲ್ಲಿ ರಸ್ತೆಯ ಮೇಲೆ ಶವವಾಗಿ ಬಿದ್ದಿದ್ದ. ಅವನ ಕತ್ತನ್ನು ಭೀಕರವಾಗಿ ಕತ್ತರಿಸಲಾಗಿದ್ದು ರುಂಡವು ಮುಂಡದಿಂದ ಹೊರಬಂದಿತ್ತು. ಅವನ ಮೈಮೇಲೆ ಹರಿತವಾದ ಆಯುಧದಿಂದಾದ ಹಲವಾರು ಗಾಯಗಳಿದ್ದವು. ಗಾಬರಿಯಾಗಿ ಆತ ಮನೆಯೊಳಗೆ ಹೋಗಿ ನೋಡಿದಾಗ ಅಲ್ಲಿ ಕಂಡ ದೃಶ್ಯ ಇನ್ನೂ ಭಯಾನಕವಾಗಿತ್ತು. ಮನೆಯ ಹಜಾರದಲ್ಲಿ ಪಾರ್ವತಿ ಮತ್ತು ಕುಸುಮ ಶವವಾಗಿ ಬಿದ್ದಿದ್ದರು. ಪಾರ್ವತಿ ಸಂಪೂರ್ಣ ವಿವಸ್ತ್ರಳಾಗಿದ್ದರೆ ಕುಸುಮ ಸೊಂಟದಿಂದ ಕೆಳಗೆ ನಗ್ನಳಾಗಿದ್ದಳು. ಇಬ್ಬರ ದೇಹಗಳ ಮೇಲೆಯೂ ಹರಿತವಾದ ಆಯುಧಗಳ ಏಟುಗಳು ಬಿದ್ದಿದ್ದು ರಕ್ತ ಹರಿದು ಕೋಡಿ ಕಟ್ಟಿತ್ತು. ಆತ ಗ್ರಾಮದ ಇತರರನ್ನು ಸ್ಥಳಕ್ಕೆ ಕರೆದ. ಹಿರಿಯರು ಪೊಲೀಸ್ ಠಾಣೆಗೆ ಕರೆ ಮಾಡಿದರು.
ತ್ರಿವಳಿ ಕೊಲೆ ಕೇಸನ್ನು ದಾಖಲಿಸಿದ ಪೊಲೀಸರು ಪಂಚನಾಮೆ ಮಾಡಿದಾಗ ಪಾರ್ವತಿ ಮತ್ತು ಕುಸುಮಳ ಮುಖ, ಎದೆ ಮತ್ತು ಮರ್ವಂಗಗಳ ಮೇಲೆ ಹೆಚ್ಚಿನ ಗಾಯಗಳಾದದ್ದು ಕಂಡವು. ಕುಸುಮ ಧರಿಸಿದ್ದ ಪೈಜಾಮ ಕಾಣೆಯಾಗಿತ್ತು. ಮನೆಯಲ್ಲಿನ ಯಾವುದೇ ವಸ್ತುವನ್ನು ಕಳವು ಮಾಡಿರಲಿಲ್ಲವೆಂದು ಆರಂಭಿಕ ತನಿಖೆಯಲ್ಲಿಯೇ ತಿಳಿಯಿತು. ಆಸ್ತಿಗಾಗಿ ನಡೆದ ಕೊಲೆಯಿರಬಹುದೆಂದು ತನಿಖಾಧಿಕಾರಿ ಊಹಿಸಿದರು.
ಮರಣೋತ್ತರ ಪರೀಕ್ಷೆಯಲ್ಲಿ ರಂಗಪ್ಪನ ದೇಹದ ಮೇಲಾಗಿದ್ದ ಗಾಯಗಳಲ್ಲದೆ, ಆತನ ಕುತ್ತಿಗೆ ಕತ್ತರಿಸಲಾಗಿದ್ದ ಕಾರಣ ಸಾವಾಗಿದೆ ಎಂದು ತಿಳಿಯಿತು. ಪಾರ್ವತಿಯ ಎದೆ, ಕಿವಿ, ತಲೆ, ಹಣೆಗಳ ಮೇಲಾಗಿದ್ದ ಗಾಯಗಳ ಫಲವಾಗಿ ತೀವ್ರ ರಕ್ತಸ್ರಾವದಿಂದ ಆಕೆ ಸತ್ತಿದ್ದಳೆನ್ನುವುದು ತಿಳಿಯಿತು. ಕುಸುಮಾಳ ಸಾವೂ ಹಾಗೆಯೇ ಆಗಿತ್ತು ಎಂದು ವೈದ್ಯರು ತಿಳಿಸಿ ಇಬ್ಬರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿದೆ ಎಂದರು. ಕುಸುಮಳಿನ್ನೂ 16 ವರ್ಷದವಳಾಗಿದ್ದರಿಂದ ಆಕೆಯ ಮೇಲಿನ ಅತ್ಯಾಚಾರವನ್ನು ಪೋಕ್ಸೋ ಪ್ರಕರಣ ಎಂದು ಪರಿಗಣಿಸಲಾಯಿತು.
ರಂಗಪ್ಪ ಯಾರೊಡನೆಯೂ ವೈರತ್ವ ಹೊಂದಿರದಿದ್ದರಿಂದಲೂ, ಯಾವ ವಸ್ತುವೂ ಕಳುವಾಗದಿದ್ದದರಿಂದಲೂ ಈ ಕೊಲೆಗಳ ಉದ್ದೇಶ ಲೈಂಗಿಕ ಕೃತ್ಯಕ್ಕಾಗಿರಬಹುದು ಎಂದು ರ್ತಸಲಾಯಿತು. ಮೃತ ಕುಟುಂಬಕ್ಕೆ ಪರಿಚಯವಿರುವವರೇ ಅಪರಾಧ ಮಾಡಿರುವರೆಂಬ ಸಂಶಯ ಪೊಲೀಸರಿಗೆ ಬಲವಾದಾಗ ರಂಗಪ್ಪನ ಹೊಲದ ಅಕ್ಕಪಕ್ಕದವರು, ರಂಗಪ್ಪನ ಕೂಲಿ ಕಾರ್ವಿುಕರು ಇವರನ್ನೇ ತೀಕ್ಷ್ಣವಾಗಿ ವಿಚಾರಿಸಲಾಯಿತು. ಗ್ರಾಮಸ್ಥನೊಬ್ಬ ಹಿಂದಿನ ರಾತ್ರಿ ತಾನು ಬಸ್ಸಿನಿಂದ ಇಳಿದು ಮನೆಗೆ ಹೋಗುವಾಗ ಹಾದಿಯಲ್ಲಿ ಲಕ್ಷ್ಮಣನನ್ನು ಕಂಡಿದ್ದಾಗಿ ಪೊಲೀಸರಿಗೆ ತಿಳಿಸಿದ. ಲಕ್ಷ್ಮಣ್ ಚಡ್ಡಿ ಮತ್ತು ಬನಿಯನ್ ಧರಿಸಿ, ಕೈಯಲ್ಲಿ ಮಚ್ಚು ಹಿಡಿದು ಹೊರಟಿದ್ದ. ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಿದಾಗ, ಆತ ರಂಗಪ್ಪನ ಹೊಲ ಕಾಯಲು ಹೊರಟಿರುವೆ. ರಾತ್ರಿ ವೇಳೆ ಹಂದಿಗಳ ಕಾಟ ಜಾಸ್ತಿಯಾಗಿದೆ ಎಂದನೆಂದು ಆ ಸಾಕ್ಷಿ ತಿಳಿಸಿದ. ಲಕ್ಷಣ್ನನ್ನು ಹುಡುಕಿಕೊಂಡು ಹೋದಾಗ ಆತ ಮನೆಯಲ್ಲಿರದಿದ್ದ ಕಾರಣ ಅವನ ಮೇಲೆ ಸಂಶಯ ಹೆಚ್ಚಾಯಿತು.
ಮಾರನೆಯ ದಿನವೇ ಲಕ್ಷ್ಮಣ ಪಕ್ಕದ ರಾಜ್ಯದಲ್ಲಿದ್ದ ತನ್ನ ಸೋದರಿಯ ಮನೆಯಲ್ಲಿ ಪತ್ತೆಯಾದ. ಅವನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ಪ್ರಶ್ನಿಸಿದಾಗ, ಆತ ಹೀಗೆ ಹೇಳಿದ: ‘ಹನುಮಂತ ಬದುಕಿದ್ದಾಗಲೇ ನನಗೆ ಪಾರ್ವತಿಯ ಮೆಲೆ ಕಣ್ಣಿತ್ತು. ಆತ ಸತ್ತ ನಂತರ ಅವಳನ್ನು ಅನುಭವಿಸಬೇಕೆನ್ನುವ ಬಯಕೆ ತೀವ್ರವಾಯಿತು. ಆದರೆ, ಎಷ್ಟೇ ಪ್ರಯತ್ನಿಸಿದರೂ ಆಕೆ ನನ್ನ ಹತ್ತಿರ ಬರಲಿಲ್ಲ. ಒಮ್ಮೆ ಅತ್ಯಾಚಾರ ಮಾಡಲು ಹೋದಾಗ ಆಕೆ ನನ್ನನ್ನು ಥಳಿಸಿ ನನ್ನ ಬಗ್ಗೆ ಊರಿಗೆಲ್ಲಾ ತಿಳಿಸುವೆನೆಂದು ಬೆದರಿಸಿದ್ದಳು. ಆದರೆ, ನಾನು ಹೆದರಲಿಲ್ಲ. ಏಕೆಂದರೆ ಈಗಾಗಲೇ ನಾನು ಎರಡು ಕೊಲೆ ಮಾಡಿ ಜೈಲಿನಲ್ಲಿದ್ದು ಬಿಡುಗಡೆಯಾಗಿ ಬಂದಿದ್ದೇನೆ. ಬಸಮ್ಮ ತನ್ನ ಮಗಳನ್ನು ನೋಡಲು ಊರಿಗೆ ಹೋದಾಗ ಪಾರ್ವತಿಯನ್ನು ಅನುಭವಿಸಲು ಅದೇ ಸೂಕ್ತ ಸಮಯವೆಂದು ಭಾವಿಸಿದೆ. ಏಕೆಂದರೆ, ತೋಟದ ಮನೆಯಲ್ಲಿ ರಂಗಪ್ಪ, ಪಾರ್ವತಿ ಮತ್ತು ಕುಸುಮ ಇವರು ಮಾತ್ರ ಇರುತ್ತಿದ್ದು ರಂಗಪ್ಪ ಮುದುಕನಾಗಿದ್ದ ಕಾರಣ ಅವನು ನನಗೇನೂ ಮಾಡಲಾಗುವುದಿಲ್ಲವೆಂದು ತಿಳಿದಿತ್ತು. ಆ ದಿನ ಕೆಲಸ ಮುಗಿಸಿ ನನ್ನ ಮನೆಗೆ ವಾಪಸಾಗಿ ಮತ್ತೆ ಅದೇ ರಾತ್ರಿ ರಂಗಪ್ಪನ ತೋಟಕ್ಕೆ ಬಂದೆ. ಆಗ ವೇಳೆ ಸುಮಾರು 10 ಗಂಟೆಯಾಗಿತ್ತು. ರಂಗಪ್ಪ ಮನೆಯ ಹೊರಗೇ ಕುಳಿತಿದ್ದ. ಏಕೆ ಬಂದೆಯೆಂದು ಕೇಳಿದಾಗ ನನ್ನ ವಸ್ತುವೊಂದನ್ನು ಹೊಲದಲ್ಲಿಯೇ ಬಿಟ್ಟಿದ್ದು ಅದನ್ನು ಒಯ್ಯಲು ಬಂದಿರುವೆ ಎಂದೆ. ನಂತರ ಅವನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅವನನ್ನು ಮನೆಯಿಂದ ಸ್ವಲ್ಪ ದೂರ ಕರೆತಂದು ಹೊಡೆದು ಸಾಯಿಸಿದೆ. ನಂತರ ಮನೆಯೊಳಗೆ ಹೋದೆ. ಮಲಗಿದ್ದ ಪಾರ್ವತಿಯ ಮೇಲೆ ಅತ್ಯಾಚಾರ ಮಾಡಲು ಹೊರಟಾಗ ಅವಳು ಮತ್ತು ಪಕ್ಕದಲ್ಲಿದ್ದ ಕುಸುಮ ಎದ್ದು ಚೀರತೊಡಗಿದರು. ನಾನು ಮಚ್ಚು ತೋರಿಸಿ ಇಬ್ಬರನ್ನೂ ಸುಮ್ಮನಿರಿಸಿದೆ. ಪಾರ್ವತಿಯನ್ನು ರೇಪ್ ಮಾಡಿದ ನಂತರ ಅವಳನ್ನು ಕೊಲೆ ಮಾಡಿ ಆನಂತರ ಕುಸುಮಳನ್ನೂ ಅನುಭವಿಸಿ ಅವಳನ್ನೂ ಕೊಂದೆ. ಕುಸುಮ ಧರಿಸಿದ್ದ ಪೈಜಾಮಾ ಮತ್ತು ಒಳಉಡುಪಿನಲ್ಲಿ ನನ್ನ ರಕ್ತಸಿಕ್ತ ಮಚ್ಚನ್ನು ಒರೆಸಿ ಅದೇ ಬಟ್ಟೆಗಳಲ್ಲಿಯೇ ಅದನ್ನು ಅಡಗಿಸಿಟ್ಟುಕೊಂಡು ಮನೆಗೆ ಹೋದೆ’.
ನಂತರ ಪೊಲೀಸರನ್ನು ತನ್ನ ಮನೆಗೆ ಕರೆದೊಯ್ದ ಲಕ್ಷ್ಮಣ್ ಕುಸಮಾಳ ಬಟ್ಟೆಗಳಲ್ಲಿ ಸುತ್ತಿದ್ದ ಮಚ್ಚನ್ನು ತೋರಿಸಿದ. ಅವನನ್ನು ಬಂಧಿಸಿದ ಪೊಲೀಸರು ಪೂರಕ ತನಿಖೆಯನ್ನು ಮುಗಿಸಿದರು. ಆತ ನೆರೆ ರಾಜ್ಯದ ಕೊಲೆ ಕೇಸೊಂದರ ಆರೋಪಿಯಾಗಿದ್ದು ಖುಲಾಸೆಯಾಗಿದ್ದನೆಂದು ಗೊತ್ತಾಯಿತು. ಲಕ್ಷ್ಮಣನ ಮೇಲೆ ತ್ರಿವಳಿ ಕೊಲೆಯ ಆರೋಪದ ಮೇಲೆ ಚಾರ್ಜ್ಷೀಟ್ ಸಲ್ಲಿಸಲಾಯಿತು. ಈ ಪ್ರಕರಣವು ಕೇವಲ ಸಾಂರ್ದಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದ್ದರೂ ನ್ಯಾಯಾಲಯ ಲಕ್ಷ್ಮಣನಿಗೆ ಮರಣದಂಡನೆ ವಿಧಿಸಿತು. ಅಮೆರಿಕದ ಲೇಖಕಿ ಗ್ವೆಂಡಾ ಬಾಂಡ್ ತನ್ನ ಕಾದಂಬರಿ ‘ಗರ್ಲ್ ಆನ್ ಅ ವರ್ಲ್’ನಲ್ಲಿ, ‘ಎಚ್ಚರಿಕೆಯನ್ನು ಗಾಳಿಗೆ ತೂರಿದರೆ ಅದೇ ಗಾಳಿಯೇ ಬಿರುಗಾಳಿಯಾಗಿ ನಿಮ್ಮನ್ನು ದೂರಕ್ಕೆ ಎತ್ತೆದೆಸೆದುಬಿಡುತ್ತದೆ’ ಎಂದಿದ್ದಾಳೆ. ಲಕ್ಷ್ಮಣನ ಬೆದರಿಕೆಯನ್ನು ರಂಗಪ್ಪನ ಕುಟುಂಬ ಗಂಭೀರವಾಗಿ ಪರಿಗಣಿಸಿ ಅವನ ಪೂರ್ವಾಪರಗಳನ್ನರಿತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಪ್ರಾಯಶಃ ಮೂರು ಜೀವಗಳು ಉಳಿಯುತ್ತಿದ್ದವೇನೋ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)