

ಅಡಿಗೆ ತೈಲ ಮತ್ತು ಸಾಬೂನು ತಯಾರಿಸುವ ಒಂದು ಪುಟ್ಟ ಕಂಪನಿ ಜಗತ್ತಿನ ನೂರು ಟಾಪ್ ಕಂಪನಿಗಳಲ್ಲೊಂದಾಗಿ ಬೆಳೆದ ಕಥೆ ಇದು. ಕಠಿಣ ಶ್ರಮ, ಸರಿಯಾದ ನಿರ್ಧಾರ, ವಿಶ್ವಾಸ ಇವುಗಳಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ‘ವೆಸ್ಟರ್ನ್ ಇಂಡಿಯಾ ಪ್ರಾಡಕ್ಟ್ ಲಿಮಿಟೆಡ್’ ಅಥವಾ ನಮ್ಮೆಲ್ಲರಿಗೂ ಚಿರಪರಿಚಿತವಿರುವ ವಿಪ್ರೋ ಕಂಪನಿಯೇ ಸಾಕ್ಷಿ. ಮುಂಬೈನ ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಹಮ್ಮದ್ ಹಾಶಿಮ್ ಪ್ರೇಮ್ ಈ ಕಂಪನಿಯ ಸ್ಥಾಪಕರು. 1945 ಡಿಸೆಂಬರ್ 29ರಂದು ಅವರು ಮಹಾರಾಷ್ಟŠದ ಜಲಗಾಂವ್ ಜಿಲ್ಲೆಯಲ್ಲಿ ‘ವೆಸ್ಟರ್ನ್ ಇಂಡಿಯಾ ಪಾಮ್ ರಿಫೈನ್ಡ್ ಆಯ್್ಲ್ಸ ಲಿಮಿಟೆಡ್’ ಸಂಸ್ಥೆಯನ್ನು ಸ್ಥಾಪಿಸಿದರು. ‘ವನಸ್ಪತಿ’ ಅವರ ಬಹುಖ್ಯಾತ ಖಾದ್ಯ ತೈಲ. ಅವರ ಪುತ್ರ ಅಜೀಮ್ ಪ್ರೇಮ್ ಹುಟ್ಟಿದ್ದು ಅದೇ ವರ್ಷದ ಜುಲೈ 24 ರಂದು.
ಹನ್ನೆರಡನೇ ತರಗತಿಯವರೆಗೆ ಮುಂಬೈನಲ್ಲೇ ಓದು ಮುಗಿಸಿದ ಅಜೀಮ್ ನಂತರ ಹೆಚ್ಚಿನ ಓದಿಗೆ ತಂದೆಯ ಇಚ್ಛೆಯಂತೆ ಅಮೆರಿಕದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಭಾರತದಲ್ಲಿ ಕಂಪ್ಯೂಟರ್ ಅಪರೂಪವಾಗಿದ್ದ ಕಾಲವದು. ಆದರೆ ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ಪ್ರಾಮುಖ್ಯ ಗಳಿಸಿಕೊಳ್ಳುತ್ತಿದ್ದ ಸಮಯ. ಅಜೀಮ್ ಎಲೆಕ್ಟಿŠಕಲ್ ಇಂಜಿನಿಯರಿಂಗ್ನ ಓದಿನಲ್ಲಿ ನಿರತರಾದರು. 1966ರಲ್ಲಿ ಹಾಶಿಮ್ ಪ್ರೇಮ್ ಮೃತಪಟ್ಟರು. ಇಪ್ಪತ್ತೊಂದರ ಅಜೀಮ್ ವಾಪಸು ಬರಬೇಕಾಯಿತು. ತನ್ನ ತಂದೆಯ ವ್ಯವಹಾರವನ್ನು ಮುಂದುವರಿಸುವ ತೀಮಾನವನ್ನು ಅಜೀಮ್ ಕೈಗೊಂಡರು. ನೆಂಟರಿಷ್ಟರೆಲ್ಲ ಹೇಳಿದರು, ‘ಅಲ್ಲ ಮಾರಾಯ, ಅಮೆರಿಕದಲ್ಲಿ ಓದಿ ಬಂದಿದೀಯ. ಈ ಸೋಪು, ಎಣ್ಣೆ ಮಾರುವ ಕೆಲಸ ಬೇಕಾ ನಿಂಗೆ. ನಿಮ್ಮ ಅಪ್ಪನ ಬಿಸ್ನೆಸ್ ಬದಿಗಿರ್ಲಿ, ನೀನು ಇದ್ರಲ್ಲೆಲ್ಲಾ ಬೀಳ್ಬೇಡ. ಒಳ್ಳೆ ಕಂಪನಿಯಲ್ಲಿ ಕೈತುಂಬ ಸಂಬಳ ತರೋ ನೌಕರಿ ಮಾಡಿ ಹಾಯಾಗಿರು’. ಆದರೆ ಅಜೀಮ್ ಅಪ್ಪನ ವ್ಯವಹಾರವನ್ನು ಮುಂದುವರಿಸುವ ನಿರ್ಧಾರ ಮಾಡಿಯಾಗಿತ್ತು.ಇಪ್ಪತ್ತೊಂದರ ಹುಡುಗ ಕಂಪನಿಯ ಚೇರ್ವುನ್ ಆದ! ಮೊದಲ ವಾರ್ಷಿಕ ಸಭೆಯಲ್ಲೇ ಕಂಪನಿಯ ಶೇರುದಾರರೊಬ್ಬರು ಕಂಪನಿ ನಡೆಸುವುದು ಇಪ್ಪತ್ತೊಂದರ ಹುಡುಗನ ಕೈಲಾಗದ್ದೆಂದು ಹೇಳಿ ಅಜೀಮ್ ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು! ಮಜವೆಂದರೆ ಅಲ್ಲಿಯವರೆಗೆ ಅಜೀಮ್ಗೆ ತಾನು ಕಂಪನಿ ನಡೆಸುವ ಬಗ್ಗೆ ಅಂತಹ ವಿಶ್ವಾಸವೇನೂ ಇರಲಿಲ್ಲ! ಆದರೆ ತನ್ನ ಸಾಮರ್ಥ್ಯದ ಬಗ್ಗೆ ಅನುಮಾನದ ಮಾತು ಕೇಳುತ್ತಲೇ ಅವರಲ್ಲಿ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಛಲ ಉಕ್ಕಿತು. ಅಲ್ಲಿಂದ ಮುಂದೆ ಅಜೀಮ್ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ! ಕೇವಲ ಧನಾತ್ಮಕ ಮಾತುಗಳಲ್ಲ, ಋಣಾತ್ಮಕ ಮಾತುಗಳನ್ನೂ ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು, ಸಾಧಿಸಬಹುದು ಎಂಬುದಕ್ಕೆ ಅಜೀಮ್ ಪ್ರೇಮ್ ಅವರೇ ಸಾಕ್ಷಿ!
ಕೆಲವೇ ಕಾಲದಲ್ಲಿ ಉದ್ಯಮ ಎಷ್ಟು ಪ್ರಗತಿ ಹೊಂದಿತೆಂದರೆ ಅಜೀಮ್ಗೆ ವ್ಯವಹಾರ ಬೇಡ ಎಂದವರೇ ಈತ ಅಪ್ಪನನ್ನು ಮೀರಿಸುತ್ತಾನೆ ಎಂದು ಶಾಭಾಶ್ಗಿರಿ ಕೊಡಲಾರಂಭಿಸಿದರು. ಹೆಚ್ಚು ಸಮಯ ಕಂಪನಿಯಲ್ಲೇ ಕಳೆಯುತ್ತಿದ್ದ ಅಜೀಮ್ ತನ್ನದೇ ರೀತಿಯಿಂದ ಕಂಪನಿ ನಡೆಸತೊಡಗಿದರು. 1976ರಲ್ಲಿ ಹೈಡ್ರಾಲಿಕ್ ಸಿಲಿಂಡರ್ ಉತ್ಪಾದನೆಯೂ ಸೇರಿ ಹಲವಾರು ಉತ್ಪನ್ನಗಳು ವಿಪ್ರೋದಿಂದ ತಯಾರಾಗತೊಡಗಿದವು.
1977ರಲ್ಲಿ ಕಂಪನಿಯ ಹೆಸರನ್ನು ‘ವಿಪ್ರೋ ಪ್ರಾಡಕ್ಟ್ಸ್ ಲಿಮಿಟೆಡ್’ ಎಂದು ಬದಲಾಯಿಸಲಾಯಿತು. ಆ ಸಮಯದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಭಾರತದಲ್ಲಿ ಒಳ್ಳೆಯ ಭವಿಷ್ಯ ಇದೆಯೆಂದು ಅವರಿಗೆ ಅನ್ನಿಸತೊಡಗಿತ್ತು. ಅಮೆರಿಕದ ಓದಿನ ಅನುಭವ ಹೊಸ ಹೆಜ್ಜೆಯನ್ನಿಡಲು ಪ್ರೋತ್ಸಾಹಿಸುತ್ತಿತ್ತು. ಅದೇ ವೇಳೆಗೆ ಐಬಿಎಮ್ ಕಂಪನಿ ಭಾರತದಿಂದ ಹೊರಟುಹೋಯಿತು. ಆ ನಂತರ ಐಟಿಯ ಹಾರ್ಡ್ವೇರ್ ಕ್ಷೇತ್ರದಲ್ಲಿ ಅವಕಾಶಗಳು ವಿಪುಲವಾಗಿರುವುದು ಪ್ರೇಮ್ ಕಂಡುಕೊಂಡರು. 1980ರಲ್ಲಿ ಕಂಪನಿಯ ಹೆಸರನ್ನು ವಿಪ್ರೋ ಲಿಮಿಟೆಡ್ ಎಂದು ಬದಲಾಯಿಸುವುದರ ಜತೆಗೆ ಅಮೆರಿಕದ ಕಂಪನಿಯೊಂದರ ಜತೆ ಸೇರಿ ಮಿನಿ ಕಂಪ್ಯೂಟರ್ ತಯಾರಿಸಲು ಪ್ರಾರಂಭಿಸಿತು. ಮೈಕ್ರೋ ಕಂಪ್ಯೂಟರ್, ಸಾಫ್ಟ್ವೇರ್... ನೋಡನೋಡುತ್ತಿದ್ದಂತೆಯೇ ವಿಪ್ರೋ ಭಾರತದ ನಂಬರ್ ಒನ್ ಕಂಪನಿಯಾಗಿಬಿಟ್ಟಿತು! 1989ರಲ್ಲಿ ಅದು ಜೆನರಲ್ ಎಲೆಕ್ಟ್ರಾನಿಕ್ಸ್ ಜತೆ ಸೇರಿ ‘ವಿಪ್ರೋ ಜಿಇ ಮೆಡಿಕಲ್ ಸಿಸ್ಟಮ್ ಎಂಬ ಕಂಪನಿ ಪ್ರಾರಂಭಿಸಿತು. 1990ರ ದಶಕದಲ್ಲಿ ವಿಪ್ರೋ ಐಟಿ ಕ್ಷೇತ್ರದಲ್ಲಿ ಸೊಲ್ಯೂಷನ್ ಪ್ರೊವೈಡಿಂಗ್ ಪ್ರಾರಂಭಿಸಿತು, ಮತ್ತು ಆನಂತರ ಇದೇ ಕಂಪನಿಯ ಬಹುಮುಖ್ಯ ವ್ಯವಹಾರವಾಯಿತು! ಗಮನಿಸುವ ವಿಚಾರವೆಂದರೆ ವಿಪ್ರೋ ಐಟಿ ಪ್ರೊಫೆಷನಲ್ಗಳನ್ನು ನೇಮಿಸಿಕೊಳ್ಳುವ ಜತೆಗೆ ಇತರ ಪದವೀಧರರಿಗೂ ತರಬೇತಿ ನೀಡಿ ಈ ಕೆಲಸದಲ್ಲಿ ನಿಪುಣರಾಗಿಸುತ್ತದೆ. ಹೊಸ ಹೊಸ ವಿಚಾರಗಳನ್ನು ಕಲಿಯುವವರಿಗೆ ವಿಪ್ರೋ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯುತ್ತದೆ. ನಂತರ ಬಿಪಿಓಗಳಲ್ಲೂ ವಿಪ್ರೋ ಪದಾರ್ಪಣೆ ಮಾಡಿತು! ಅಬ್ಬ, ಒಂದು ಸಣ್ಣ ಸೋಪು ಮಾರುವ ಕಂಪನಿ ಎಲ್ಲಿಯವರೆಗೆ ತಲುಪಿತು ನೋಡಿ! ಗುಣಮಟ್ಟ ಮತ್ತು ಗ್ರಾಹಕರ ತೃಪ್ತಿ ಇವೆರಡೂ ಕಂಪನಿಯ ಮುಖ್ಯ ಅಂಶಗಳಾಗಿದ್ದವು!
ಒಂದೆಡೆ ನಿರಂತರವಾಗಿ ತಯಾರಾಗುತ್ತಿರುವ ಬೇರೆಬೇರೆ ಉತ್ಪನ್ನಗಳು, ಇನ್ನೊಂದೆಡೆ ಐಟಿ ವಲಯದಲ್ಲೂ ದಾಪುಗಾಲು! ವಿಪ್ರೋದ ಉತ್ಪನ್ನಗಳಿಗೆ ಐಎಸ್ಓ 9001 ಪ್ರಮಾಣಪತ್ರ ಲಭಿಸಿತು. 2003ರಲ್ಲಿ ವಿಪ್ರೋ ಲ್ಯಾಪ್ಟಾಪ್ ಉತ್ಪಾದನೆ ಪ್ರಾರಂಭಿಸಿತು. 2004ರಲ್ಲಿ ಬಿಲಿಯನ್ ಡಾಲರ್ ಕಂಪನಿಯಾಯಿತು. ಬೆಂಗಳೂರಲ್ಲಿ ಕೇಂದ್ರಕಚೇರಿ ಹೊಂದಿರುವ ಈ ಕಂಪನಿ ದೊಡ್ಡದಾಗುತ್ತ ಹೋದಂತೆ 2013ರಲ್ಲಿ ತನ್ನ ಇತರೆ ಎಲ್ಲ ಉತ್ಪನ್ನಗಳ ತಯಾರಿಕೆಯನ್ನು ಬೇರೆಯಾಗಿಸಿ ವಿಪ್ರೋವನ್ನು ಐಟಿ ಸೆಕ್ಟರಿಗೆ ಮಾತ್ರ ಸಂಬಂಧಿಸಿದ ಕಂಪನಿಯಾಗಿಸಲಾಯಿತು. ಇತ್ತೀಚೆಗೆ ಕಂಪನಿ ಕೃತಕ ಬುದ್ಧಿಮತ್ತೆಯ ಕ್ಷೇತ್ರಕ್ಕೂ ಕಾಲಿರಿಸಿದೆ!
ಅಜೀಮ್ ಚತುರ ವ್ಯವಹಾರಸ್ಥ. ಅವರು ‘ಪ್ರೇಮ್ ಇನ್ವೆಸ್ಟ್’ ಎಂಬ ಕಂಪನಿಯನ್ನು ಸ್ಥಾಪಿಸಿ ಹೊಸ ಸ್ಟಾರ್ಟ್ಅಪ್ಗಳಲ್ಲಿ ಹಣ ತೊಡಗಿಸುತ್ತಿದ್ದಾರೆ. ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಸಾವಿರ ಕೋಟಿ ಬಂಡವಾಳ ಹೂಡಿದ್ದಾರೆ. 2014ರಲ್ಲಿ ಮಿಂತ್ರಾ ಕಂಪನಿಯಲ್ಲಿ 25 ಮಿಲಿಯನ್ ಡಾಲರ್ ಹೂಡಿದ್ದರು ಪ್ರೇಮ್. ನಂತರ ಮಿಂತ್ರಾ ಫ್ಲಿಫ್ಕಾರ್ಟ್ ಜತೆ ಸೇರಿತು, ಇತ್ತೀಚೆಗೆ ವಾಲ್ಮಾರ್ಟ್, ಫ್ಲಿಫ್ಕಾರ್ಟ್ ಅನ್ನು ಖರೀದಿಸಿತು. ಈ ಸಂದರ್ಭದಲ್ಲಿ ಅಜೀಮ್ ಪ್ರೇಮ್ ಅವರಿಗೆ ಐನೂರು ಶೇಕಡ ಲಾಭವಾಯಿತು! 25 ಮಿಲಿಯನ್ ಡಾಲರ್ನ ಐನೂರು ಶೇಕಡ ಎಷ್ಟೆಂದು ಲೆಕ್ಕ ಮಾಡಿಕೊಳ್ಳಿ! ಆದರೆ ಸುಭಿಕ್ಷಾ, ಸ್ನಾಪ್ಡೀಲ್ ವಿಚಾರದಲ್ಲಿ ನಷ್ಟವೂ ಆಗಿದೆ ಎನ್ನಿ! ಅಜೀಮ್ ಪ್ರೇಮ್ಯುವರು ಹೇಗೆ ಕಂಪನಿಯನ್ನು ಯಶಸ್ವಿಯಾಗಿಸಿದರು ಎಂಬುದಕ್ಕೆ ಚಿಕ್ಕ ಉದಾಹರಣೆ ಇಲ್ಲಿದೆ. ವಿಪ್ರೋದ ಮೊದಲ ಕಂಪನಿ ಅಮಲ್ನೇರ್ ಎಂಬ ಜಾಗದಲ್ಲಿತ್ತು. ಅಲ್ಲಿ ಬಿಸಿಲು ಜಾಸ್ತಿ ಎಂದು ಉದ್ಯೋಗಿಗಳು ದೂರುತ್ತಿದ್ದರು. ಹೀಗಾಗಿ ಬೇಸಿಗೆಯಲ್ಲಿ ಕಂಪನಿಯ ಉತ್ಪನ್ನ ಕಡಿಮೆಯಾಗುತ್ತಿತ್ತು. ಒಂದು ಬೇಸಿಗೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ಅಜೀಮ್ ಬೇಸಿಗೆ ಪೂರ್ತಿ ಅಲ್ಲಿಯೇ ಕೆಲಸ ಮಾಡಿದರು. ಅದಾದ ಮೇಲೆ ಉದ್ಯೋಗಿಗಳು ಸೆಕೆಯ ಬಗ್ಗೆ ದೂರುವುದನ್ನು ಬಿಟ್ಟರು! ಮತ್ತೆ ಉತ್ಪಾದನೆ ಮೊದಲಿನ ಪ್ರಮಾಣ ತಲುಪಿತು! ಮತ್ತೆ ಸುಮ್ಮನೇ ಅವರು ಇಪ್ಪತ್ತು ಬಿಲಿಯನ್ ಡಾಲರ್ಗೂ ಮಿಕ್ಕಿ ಆಸ್ತಿಯ ಮೌಲ್ಯ ಹೊಂದಿದ್ದಾರೆಯೇ?
ಅಜೀಮ್ ಪ್ರೇಮ್ ಪ್ರಕಾರ ದೇವರು ಇಷ್ಟೆಲ್ಲ ಸಂಪತ್ತು ನೀಡಿದಾಗ ಬೇರೆಯವರ ಬಗ್ಗೆ ಯೋಚಿಸುವುದು ಅನಿವಾರ್ಯ. 2001ರಲ್ಲಿ ಸ್ಥಾಪಿಸಿದ ‘ಅಜೀಮ್ ಪ್ರೇಮ್ ಫೌಂಡೇಶನ್’ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಓದುವ ಕನಸಿಗೆ ನೀರೆರೆಯುತ್ತಿದ್ದಾರೆ. ತಮ್ಮ ಆದಾಯದ ದೊಡ್ಡ ಭಾಗವನ್ನು ಜನರಿಗಾಗಿ ದಾನ ಮಾಡುವ ದಾನವೀರರೂ ಹೌದು. ಅದಕ್ಕೇ ಇವರನ್ನು ಭಾರತದ ಬಿಲ್ ಗೇಟ್ಸ್ ಎಂದು ಕರೆಯುವುದು!
2010ರಲ್ಲಿ ವಿಶ್ವದ ಅತೀದೊಡ್ಡ ಶ್ರೀಮಂತರಾದ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ‘ದ ಗಿವಿಂಗ್ ಪ್ಲೆಡ್ಜ್’ ಅಭಿಯಾನ ಶುರು ಮಾಡಿದರು. ಶ್ರೀಮಂತ ವ್ಯಕ್ತಿಗಳು ತಮ್ಮ ಆದಾಯದ ಕೆಲ ಭಾಗವನ್ನು ಜನರಿಗಾಗಿ ನೀಡಲು ಈ ಅಭಿಯಾನ ಒತ್ತಾಯಿಸುತ್ತದೆ. ಸಹಜವಾಗಿ ಅಜೀಮ್ ಪ್ರೇಮ್ ಈ ಅಭಿಯಾನಕ್ಕೆ ಕೈ ಜೋಡಿಸಿದ ಮೊದಲ ಭಾರತೀಯ ಉದ್ಯಮಿಯಾದರು! 2013ರಲ್ಲಿ ತಮ್ಮ ಆಸ್ತಿಯ ಕಾಲುಭಾಗವವನ್ನು ದಾನ ಮಾಡಿದರು! ಆರು ವರ್ಷ ಭಾರತದ ನಂಬರ್ ಒನ್ ಶ್ರೀಮಂತರಾಗಿದ್ದರೂ ಅವರ ಗಮನ ನಂಬರ್ಗೇಮ್ ಮೇಲಿರಲಿಲ್ಲ, ದಾನದ ಕಡೆಗಿತ್ತು! ಹಾ! ಮೊನ್ನೆಯಷ್ಟೇ 52,750 ಕೋಟಿ ಹಣವನ್ನು ದಾನ ಮಾಡಿದ್ದಾರೆ! ‘ಇದು ದಾನವಲ್ಲ ಕರ್ತವ್ಯ’ ಎಂದ ವಿನಯಿ ಕೂಡ. ಇಲ್ಲಿಯವರೆಗೆ ಒಟ್ಟೂ 1,45,000 ಕೋಟಿ ಅಥವಾ 21 ಬಿಲಿಯನ್ ದಾನ ಮಾಡಿ ಜಗತ್ತಿನ ಅತಿದೊಡ್ಡ ದಾನಿಗಳಲ್ಲಿ ಒಬ್ಬರಾಗಿದ್ದಾರೆ!
ಇಂತಹ ಪ್ರೇಮ್ ಇಕಾನಮಿ ಕ್ಲಾಸಿನಲ್ಲೇ ವಿಮಾನ ಪ್ರಯಾಣ ಮಾಡುವ ಸರಳರೂ ಹೌದು! ಸೆಕೆಂಡ್ ಹ್ಯಾಂಡ್ ಕಾರು ಉಪಯೋಗಿಸಲೂ ಅವರಿಗೇನು ಮುಜುಗರವಿಲ್ಲ. ಪದ್ಮಭೂಷಣ ಅಜೀಮ್ ಪ್ರೇಮ್ ಭಾರತದ ಅಮೂಲ್ಯ ರತ್ನ.