

ಪುರುಷ ಸೂಕ್ತಕ್ಕೆ ಒಂದು ವಿಶೇಷವಾದ ಸ್ಥಾನವಿದೆ. ವೇದ ಸಾಹಿತ್ಯದಲ್ಲಿ ನಾಲ್ಕೂ ವೇದಗಳಲ್ಲಿ ಪುರುಷ ಸೂಕ್ತ ಬರುತ್ತದೆ. ಅದರ ಅರ್ಥ ಬಹು ನಿಗೂಢ. ಇಡೀ ವೇದರಾಶಿಯೇ ನಿಗೂಢ. ಬಹಳಷ್ಟು ಮನನ, ಶ್ರದ್ಧೆ, ಗುರುಸೇವಾ ಪರಾಯಣತೆ, ಶುದ್ಧ ಜೀವನ ಇಲ್ಲದವರಿಗೆ ಅದು ಯಾವ ಕಾಲಕ್ಕೂ ಎಟುಕುವುದಿಲ್ಲ. ಸಾಯಣಾಚಾರ್ಯರಂತೂ ಇದನ್ನು ಸ್ಪಷ್ಟವಾಗಿಯೇ ಹೇಳಿದ್ದಾರೆ.
ವ್ಯಾಸ ಭಾರದ್ವಾಜಾದಿಗಳೂ ಹೇಳಿದ್ದಾರೆ. ಶಂಕರಾಚಾರ್ಯರಂತೂ ಸಾಂಪ್ರದಾಯಿಕ ಶಿಸ್ತಿಗೆ ಒಳಗಾಗದವನಿಗೆ ಇದನ್ನು ಹೇಳಬಾರದು ಎಂದಿದ್ದರೆ, ಶ್ರೀಕೃಷ್ಣ, ವೇದಸಾರವಾದ ಭಗವದ್ಗೀತೆಯನ್ನು ಬಹಳ ಹಿಂದೆಯೇ- ಸೃಷ್ಟಿಯ ಪ್ರಾರಂಭದಲ್ಲೇ- ಸೂರ್ಯನಿಗೆ ಹೇಳಿದ್ದಾಗಿಯೂ ಕಾಲ ಮಹಿಮೆಯಿಂದ ಅದು ನಷ್ಟವಾಯಿತೆಂದೂ ಹೇಳಿದ್ದರೆ ಕಾಲಮಹಿಮೆಯ ಅರ್ಥ ಅಜಿತೇಂದ್ರಿಯರು ಇದರಲ್ಲಿ ಕೈಯಾಡಿಸಿದರೆಂದು ಶಾಂಕರ ಭಾಷ್ಯ ಹೇಳುತ್ತದೆ.
ವೇದ ಸಂಶೋಧನಾ ಸಾಹಿತ್ಯ; ಇದರ ಪ್ರಧಾನ ವಸ್ತು ಜೀವಿ, ಜಗತ್ತುಗಳ ಅರ್ಥವೇನು ಮತ್ತು ಇವುಗಳ ಅಸ್ತಿತ್ವದ ಉದ್ದೇಶವೇನು ಎಂದು ತಿಳಿಸುವುದು. ಇದೇ ಅದರ ಸಾರ, ತತ್ವ. ಯಾವುದೇ ಧರ್ಮಕ್ಕೆ ಒಂದು ತತ್ವವಿರಬೇಕು. ಆ ತತ್ವವನ್ನು ಯಾರೂ ಪ್ರಶ್ನಿಸುವಂತಿರಬೇಕು, ಆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗುವಂತಿರಬೇಕು. ಪ್ರಶ್ನೆಗಳನ್ನು ಪ್ರೋತ್ಸಾಹಿಸದ ಧರ್ಮ, ಪ್ರಾಶ್ನಿಕನನ್ನು ಶಿಕ್ಷಿಸುವ ಧರ್ಮ ಎಂದಿಗೂ ಧರ್ಮವಾಗುವ ಅರ್ಹತೆಯನ್ನು ಪಡೆದಿಲ್ಲ.
ವಿಜ್ಞಾನವನ್ನು ಎದುರಿಸದ ಧರ್ಮ, ತನ್ನ ಚಿಂತನೆಗಳನ್ನು ಪ್ರಯೋಗಕ್ಕೊಳಪಡಿಸಿ ಜಗತ್ತಿನ ಮುಂದೆ ಸಂಶಯಕ್ಕೆಡೆಯಿಲ್ಲದಂತೆ ಸಾಬೀತು ಪಡಿಸದ ಧರ್ಮ ಎಂದಿಗೂ ಧರ್ಮವಾಗಬಾರದು. ನಮ್ಮ ಧರ್ಮ ಅರ್ಥಾತ್ ವೇದ ಧರ್ಮದ ಹೆಗ್ಗಳಿಕೆಯೇ ಇದೆಂದು ವಿಶ್ವದಾದ್ಯಂತ ನಿಜಾರ್ಥದಲ್ಲಿ ಚಿಂತಕರೆನಿಸಿಕೊಂಡವರು ಇನ್ನಿಲ್ಲದಂತೆ ಹಾಡಿ ಹೊಗಳುತ್ತಿದ್ದಾರೆ. ಅಶಿಕ್ಷಿತರ ಮಾತು ಬೇರೆ. ಒಂದು ಕಡೆ ವಿಜ್ಞಾನಕ್ಕೇ ವಿಜ್ಞಾನವನ್ನು ಹೇಳಿಕೊಡುವ ಸಾಮರ್ಥ್ಯ ವೇದಕ್ಕಿದೆಯೆಂದು ಇಡೀ ಪಾಶ್ಚಾತ್ಯ ಬೌದ್ಧಿಕ ಜಗತ್ತು ಪ್ರಶಂಸಿಸುತ್ತಿದ್ದರೆ ಅದರ ಚಿಂತನೆಗಳ ಪ್ರಯೋಗಶೀಲತೆ ಮತ್ತು ಸತ್ಯತೆಯನ್ನು ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ ಭಗವಾನ್ ಶ್ರೀರಾಮಕೃಷ್ಣರು.
ಇದು ತತ್ವಭಾಗವಾದರೆ ಇದನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದು ಹೇಗೆ ಎಂಬುದಕ್ಕೂ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ. ಈ ವ್ಯವಸ್ಥೆ ವೇದದ ‘ಬ್ರಾಹ್ಮಣ’ ಭಾಗದಲ್ಲಿ ಪ್ರಾರಂಭವಾಯಿತಾದರೂ ನಿರಂತರ ಬದಲಾವಣೆಗಳ ಸರಮಾಲೆಯನ್ನೇ ದಾಟಿಕೊಂಡು ಹೋಗುತ್ತದೆ. ಪ್ರಖ್ಯಾತ ಶ್ಲೋಕವೊಂದು ಈ ರೀತಿ ಇದೆ. ‘ಕೃತಯುಗದಲ್ಲಿ ಧ್ಯಾನ, ತ್ರೇತಾಯುಗದಲ್ಲಿ ಯಜ್ಞ, ದ್ವಾಪರಯುಗದಲ್ಲಿ ಪೂಜೆ, ಕಲಿಯುಗದಲ್ಲಿ ಭಜನೆ, ಸಂಕೀರ್ತನೆಗಳು ಪ್ರಭಾವಪೂರ್ಣ’ ಎಂದು.
ಪ್ರತಿ ಯುಗವೂ ಹಿಂದಿನ ಯುಗಗಳ ವ್ಯವಸ್ಥೆಗಳನ್ನು ಇಟ್ಟುಕೊಂಡೇ ಅಂದಿನ ವ್ಯವಸ್ಥೆಯನ್ನು ನಿರ್ವಿುಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಒಳಿತನ್ನು ಮಾಡಿದ್ದ ಯಾವುದನ್ನೂ ಧ್ವಂಸಗೊಳಿಸದೆ ಅದನ್ನೇ ಉದಾತ್ತೀಕರಿಸಿ ಆಧುನಿಕ ಯುಗಕ್ಕೆ ಅದನ್ನು ಅನ್ವಯಿಸುವ ಸಾಮರ್ಥ್ಯ ಸನಾತನ ಸಂಸ್ಕೃತಿಗಿರುವ ಕಾಲುಭಾಗದಷ್ಟೂ ಬೇರಾವ ಸಂಸ್ಕೃತಿಗೂ ಇಲ್ಲ. ರಾಷ್ಟ್ರಕವಿ ಕುವೆಂಪು ಇದನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದರಷ್ಟೇ ಅಲ್ಲ ತಮ್ಮಲ್ಲಿ ಬಂದವರಿಗೂ ಇದನ್ನು ಉಪದೇಶಿಸುತ್ತಿದ್ದರು. ಸಂಸ್ಕೃತದ ಬಗ್ಗೆ ಇನ್ನಿಲ್ಲದ ಭಕ್ತಿಯನ್ನೂ ಇಟ್ಟುಕೊಂಡು ಕನ್ನಡವನ್ನು ಬೆಳೆಸಿದ್ದು ಅವರು ಹಾಗೆಯೇ. ನಾಣ್ಯವನ್ನು ಬದಲಾಯಿಸಬೇಕೆಂದರೆ ತಾಮ್ರವನ್ನೇ ಅಥವಾ ಹಾಳೆಯನ್ನೇ ಬಿಟ್ಟುಬಿಡಬೇಕೆಂದೇನೂ ಇಲ್ಲ.
ಎಲ್ಲ ದೇಶಗಳ ಹಣವೂ ಲೋಹ ಮತ್ತು ಹಾಳೆಯೇ. ಕಾಲಕಾಲಕ್ಕೆ ಅದರ ಮೇಲಿನ ಮುದ್ರೆ ಬದಲಾಯಿಸುತ್ತದೆ ಅಷ್ಟೇ. ವೇದ ಪ್ರಣೀತ ತತ್ವಗಳನ್ನು ಅನುಭವಿಸಲು ವ್ಯಕ್ತಿ ದೀಕ್ಷಿತನಾಗಬೇಕು, ಕೆಲ ಶಿಸ್ತುಗಳಿಗೆ ಬದ್ಧನಾಗಬೇಕು ಎನ್ನುತ್ತದೆ ಇದೇ ವೇದ. ಈ ವ್ರತಗಳನ್ನು ಸಾವಿರ ರೀತಿಯಲ್ಲಿ ಪ್ರತಿಯೊಬ್ಬರ ರುಚಿಗನುಗುಣವಾಗಿ ನಿರ್ವಿುಸಿದ್ದ ಏಕಮೇವ ಹೆಗ್ಗಳಿಕೆ ಈ ದೇಶದ್ದು, ಈ ಸಂಸ್ಕೃತಿಯದ್ದು. ಇದು ಔತಣದಿಂದ ಪ್ರಾರಂಭವಾಗಿ ಉಪವಾಸದವರೆಗೂ, ಕೋಟ್ಯಂತರ ಜನಸೇರುವ ಕುಂಭಮೇಳದಿಂದ ಹಿಡಿದು ಗುಹೆಯಲ್ಲಿ ಮೌನವಾಗಿ ಧ್ಯಾನಸ್ಥನಾಗುವವರೆಗೆ ತನ್ನ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಪ್ರತಿಯೊಬ್ಬರೂ ತಮಗಿಷ್ಟವಾದ ರೀತಿಯನ್ನು ಅನುಸರಿಸಬಹುದು. ಅದಾವುದೂ ನನ್ನಿಂದಲೇ ನಿರ್ವಿುತವಾದದ್ದು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಯಾವುದನ್ನೂ ಪಾಲಿಸುವ ಅಧಿಕಾರ ಯಾರಿಗೂ ಇದೆ. ಅದರ ಆಚರಣೆಯಿಂದ ಮತ್ತೊಬ್ಬರಿಗೆ ತೊಂದರೆಯಾಗದಿದ್ದರೆ ಸಾಕು ಅಷ್ಟೇ.
ಧರ್ವಧಾರಿತ ಘರ್ಷಣೆಗಳಿಗೆಲ್ಲ ಕಾರಣ ಈ ವೈಶಾಲ್ಯ ಎಲ್ಲರಲ್ಲೂ ಇಲ್ಲದಿರುವುದು. ಈ ಸ್ವಾತಂತ್ರ್ಯವನ್ನು ಜೀರ್ಣಿಸಿಕೊಳ್ಳದವರೇ ನಿಂದನೆ, ಅಸಹನೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವುದು. ಈ ದೀಕ್ಷೆಗಳಲ್ಲಿ ಕೆಲವು ಅಖಂಡವಾಗಿ ಹಲವು ದಿನ, ಹಲವು ಪಕ್ಷ ಇತ್ಯಾದಿ ಇದ್ದರೆ ಇನ್ನು ಕೆಲವು ಈಗೊಂದು ದಿನ, ಹಲವು ದಿನಗಳ ನಂತರ ಇನ್ನೊಂದು ದಿನ ಈ ರೂಪದಲ್ಲಿ ಬರುತ್ತದೆ ಮತ್ತು ಕೆಲವು ಒಂದೇ ದಿನ ಇದ್ದರೆ ಇನ್ನು ಕೆಲವು ಒಂದು ವಾರ, ಹತ್ತುದಿನ ಇತ್ಯಾದಿ ರೂಪವನ್ನು ತಳೆಯುತ್ತದೆ. ಯುಗಾದಿ ಅಂತಹ ಒಂದು ದಿನದ ಹಬ್ಬ.
ಯುಗ ಎಂದರೆ ಕೇವಲ ಕೃತ, ತ್ರೇತಾ ಇತ್ಯಾದಿ ನಾಲ್ಕೇ ಎಂದು ಯಾರೂ ಭಾವಿಸಬಾರದು. ಇದು ಇಂಗ್ಲಿಷಿನ Epoch ಇದ್ದ ಹಾಗೆ. ಒಂದು ಬೃಹತ್ ಬದಲಾವಣೆಯನ್ನು ತಂದ ಕಾಲ. ಶ್ರೀರಾಮಕೃಷ್ಣರ ಆವಿರ್ಭಾವದ ನಂತರ ಜಗತ್ತು ಸತ್ಯಯುಗವನ್ನು ಕಾಣುತ್ತದೆ ಎಂದು ಮಹಾನ್ ವಿಮರ್ಶಕ ಸ್ವಾಮಿ ವಿವೇಕಾನಂದರು ಜಗತ್ತಿನ ಹಲವು ವೇದಿಕೆಗಳಿಂದ ಘಂಟಾಘೊಷವಾಗಿ ಸಾರಿದ್ದಾರೆ. ಹೌದು; ಸಹ! ‘ಅಂತರ್ಧರ್ವಿುಯ ಸ್ನೇಹಪರತೆ ಬಿಡಿ ತಾಳ್ಮೆಯೇ ಎಂದಿಗೂ ಸಾಧ್ಯವಿಲ್ಲದ್ದು. ಇವರೇನು ಸರ್ವಧರ್ಮ ಸಮ್ಮೇಳನ ಮಾಡುತ್ತಾರೆ’ ಎಂದು ಆ ಕಾಲದ ಪ್ರತಿಯೊಂದು ಅಮೆರಿಕನ್ ಪತ್ರಿಕೆಯೂ ಆರ್ಭಟಿಸಿತ್ತು. ಇದನ್ನು ಅರಿತಿದ್ದ ವಿವೇಕಾನಂದರು ಅದಕ್ಕಾಗಿಯೇ we not only believe in universal tolerance but we accept all religions as true ಎಂದು ಅವರನ್ನು ದಂಗು ಬಡಿಸಿದ್ದರು.
ಅಂತರ್ಧರ್ವಿುಯ ಸಹಬಾಳ್ವೆ, ದೀನರಲ್ಲಿ ಶಿವನನ್ನು ಕಂಡು ಪೂಜೆಗೈಯ್ಯುವುದು, ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ, ತ್ಯಾಗ ಮತ್ತು ಸೇವೆ ಹಾಗೂ ಭಾರತೀಯರು ಸಂಘಟಿತರಾಗುವುದನ್ನು ಕಲಿಯದಿದ್ದಲ್ಲಿ ಉಳಿಗಾಲವಿಲ್ಲ; ಭಾರತೀಯ ಧರ್ಮ ಸಾರ್ವಕಾಲಿಕ ದೋಷ ರಹಿತ. ಸಮಸ್ಯೆಯಿರುವುದು ಭಾರತೀಯ ಸಮಾಜದಲ್ಲಿ ಎಂದು ಎಂತಹ ಅಲ್ಪಬುದ್ಧಿಯವನಿಗೂ ಅರ್ಥವಾಗುವ ರೀತಿಯಲ್ಲಿ ತಮ್ಮ ಜೀವನ ಮತ್ತು ಉಪದೇಶಗಳ ಮೂಲಕ ತೋರಿಸಿದ ಮಹಾತ್ಮರು ಶ್ರೀರಾಮಕೃಷ್ಣರು. ಆದ್ದರಿಂದ ಇದೊಂದು ಹೊಸ ಯುಗ.
ಹೀಗೆ ಹಲವಾರು ಯುಗಗಳು ಬರುತ್ತಲೇ ಇರುತ್ತವೆ. ಆ ನಿಟ್ಟಿನಲ್ಲಿ ಪ್ರತಿ ವರ್ಷವನ್ನೂ ತನ್ನ ಜೀವನದ ಒಂದು ಯುಗ, ಪರ್ವಕಾಲವನ್ನಾಗಿಸಿ ತಾನು ಬಯಸಿದ ಬದಲಾವಣೆಗಳನ್ನೆಲ್ಲ ಜೀವನದಲ್ಲಿ ತಂದು ನಿರಂತರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಲಿ ಎಂದು ಸನಾತನಧರ್ಮ ಚೈತ್ರ ಶುದ್ಧ ಪಾಡ್ಯಮಿಯನ್ನು ಯುಗಾದಿ ಎಂದು ಕರೆಯುತ್ತದೆ. ಏಕೆಂದರೆ ಇಡೀ ಪ್ರಕೃತಿ ಈ ಕಾಲಕ್ಕೆ ಎಲ್ಲ ಹಳೆಯದನ್ನು ವಿಸರ್ಜಿಸಿ ನವಿರಾಗಿ ಸಿಂಗರಿಸಿಕೊಂಡು ಹೊಸ ಉತ್ಸಾಹ, ನಲಿವು, ಹೊಸ ಸಂಭ್ರಮಗಳಿಂದ ಸಜ್ಜಾಗಿ ನಿಂತಿರುತ್ತದೆ. ಪ್ರಕೃತಿಯ ಮಡಿಲಲ್ಲೇ ಬೆಳೆಯುವ ಅವಳ ಮುದ್ದು ಮಕ್ಕಳು ಕೂಡ ಅಮ್ಮನೊಂದಿಗೆ ತಾವೂ ಸಿಂಗರಿಸಿಕೊಂಡು ನಲಿಯುತ್ತ ಹೊಸ ಜೀವನದ, ಹೊಸ ಯುಗದ ಹೊಸ್ತಿಲೆಡೆಗೆ ಹೆಜ್ಜೆ ಇಡುವುದು ಸಹಜವೇ ಆಗಿದೆ.
ಈ ದಿನದಂದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಆಗತಾನೇ ಚಿಗುರಿದ ಬೇವಿನೆಲೆಯೊಂದಿಗೆ ಬೆಲ್ಲವನ್ನೂ ಸವಿದು ಆನಂದಿಸುವುದು ಬಹಳ ಸರಳ. ಆದರೆ ಅದ್ಭುತ ಅರ್ಥವುಳ್ಳ ಒಂದು ಪುರಾತನ ಸಂಪ್ರದಾಯ. ಏನಿದರರ್ಥ?!
ಬೇವು, ಹಾಗಲಕಾಯಿ ಇತ್ಯಾದಿಗಳೆಲ್ಲ ಬಹಳ ಕಹಿ. ಆದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅರ್ಥಾತ್ ನಾಲಿಗೆಯ ಮೇಲಿಟ್ಟಾಗ ಅಸಹನೀಯ. ನಾಲಿಗೆ ದಾಟಿ ಕೆಳಗಿಳಿದಂತೆ ಆರೋಗ್ಯಕ್ಕೆ ರಾಮಬಾಣ. ಬೆಲ್ಲ ನಾಲಿಗೆಯ ಮೇಲೆ ಮಾತ್ರ ಆನಂದಕಾರಕ, ಸುಖಕಾರಕ. ನಾಲಿಗೆಯಿಂದ ಕೆಳಗಿಳಿದರೆ ರೋಗದಾಯಕ. ಮಿತಿಯಲ್ಲಿ ತಿಂದರೆ ತೊಂದರೆಯಿಲ್ಲ. ಆದರೆ ಯಾವುದೆಲ್ಲ ಇಂದ್ರಿಯಗಳಿಗೆ ಮುದ ನೀಡುತ್ತೋ ಅದಾವುದನ್ನೂ ಮಿತಿಯಲ್ಲಿ ಸೇವಿಸುವುದರಲ್ಲಿ ಮನುಷ್ಯ ಸೋತು ಹೋಗಿದ್ದಾನೆ. ಮಿತಿಗಳನ್ನೆಲ್ಲ ಕಿತ್ತು ಅದರಲ್ಲೇ ಲೋಲುಪನಾಗುತ್ತಾನೆ.
ಇದೇ ಭೋಗಜೀವನದ ದುರಂತ ಮುಖ. ‘ಬೇವು ಬೇಡವೇ ಬೇಡ ಕೇವಲ ಬೆಲ್ಲವನ್ನೇ ತಿನ್ನೋಣ’ ಎಂದರೆ ಕೆಲ ದಿನಗಳ ನಂತರ ರೋಗಕ್ಕೆ ತುತ್ತಾಗಿ ವೈದ್ಯರು ‘ಇನ್ನು ಮುಂದೆ ಸ್ವಲ್ಪವೂ ಬೆಲ್ಲ ತಿನ್ನಬಾರದು. ತಿಂದರೆ ಪ್ರಾಣಕ್ಕೇ ಸಂಚಕಾರ’ ಎಂದು ಎಚ್ಚರಿಕೆ ನೀಡುವ ಸ್ಥಿತಿಗೆ ಬರುತ್ತಾನೆ. ಆದರೆ ಬೆಲ್ಲ ಮಿತಿಯಲ್ಲಿದ್ದಾಗ ಮತ್ತು ಬೇವು ಜೊತೆಗಿದ್ದಾಗ ಜೀವನ ಪೂರ್ತಿ ಬೆಲ್ಲವನ್ನು ತಿನ್ನುವ ಸಾಮರ್ಥ್ಯ ಉಳಿಯುತ್ತದೆ. ಇಲ್ಲಿ ಬೆಲ್ಲ ಎಂದರೆ ಸುಖ ಟ್ಟ ಟ್ಝಛಿಚಠ್ಠ್ಟ ಬೇವು ಎಂದರೆ ಸಂಯಮ ಮತ್ತು ಮನಸ್ಸಿಗೆ ಸುಖವಲ್ಲದ ಆದರೆ ಶ್ರೇಯಸ್ಕರವಾದದ್ದು. ಕಷ್ಟಗಳು, ಶಿಕ್ಷಣ, ಸಂಯಮ, ದೀಕ್ಷೆ ಇವೆಲ್ಲ ಇಲ್ಲಿ ಬೇವಿನ ಲೆಕ್ಕವೇ.
ಜೀವನದಲ್ಲಿ ಮನುಷ್ಯ ಕೊನೆಯವರೆಗೂ ಬೆಲ್ಲ ತಿನ್ನಬಲ್ಲ ಸಾಮರ್ಥ್ಯವಿರಬೇಕಾದರೆ ಇದೊಂದು ‘ದೀಕ್ಷೆ’ ಎಂದರೂ ತಪ್ಪಿಲ್ಲ. ಸದಾ ಸುಖಿಯಾಗಿರಲು ವರ್ಷದ ಪ್ರಾರಂಭದಲ್ಲೇ ನಮಗೆಲ್ಲ ಸನಾತನ ಸಂಸ್ಕೃತಿ ತಿಳಿಸಿಕೊಟ್ಟ ಸೂತ್ರ ಏನೆಂದರೆ ‘ಬೆಲ್ಲ ತಿನ್ನು; ಆದರೆ ಜೊತೆಗೆ ಬೇವು ಇರಲಿ’ ಎಂದು. ಇನ್ನೂ ಕೆಲ ಪ್ರಬುದ್ಧ, ಧೀರ ವ್ಯಕ್ತಿಗಳು ಇದನ್ನು ಸವಾಲಾಗೇ ಸ್ವೀಕರಿಸಿ ಬೆಲ್ಲವನ್ನೇ ತಿರಸ್ಕರಿಸಿ ಬೇವಿನಲ್ಲೇ ಆನಂದ ಪಡೆಯುವ ಅದ್ಭುತ ಸ್ಥಿತಿಗೆ ಏರುತ್ತಾರೆ. ಇವರನ್ನು ಭಾರತ ಆದರ್ಶ ವ್ಯಕ್ತಿಗಳನ್ನಾಗಿಸಿದೆ ಮತ್ತು ಮುಕ್ತಕಂಠದಿಂದ ಪ್ರಶಂಸಿಸಿದೆ. ಇವರನ್ನೇ ‘ಸಂನ್ಯಾಸಿ’ಗಳು ಎನ್ನುತ್ತಾರೆ.
ಹಾಗೆ ಹೇಳಬೇಕೆಂದರೆ ‘ಬ್ರಾಹ್ಮಣ’ನೂ ಇದೇ ಚೌಕಟ್ಟಿನವನೇ. ಆದ್ದರಿಂದಲೇ ಇವನಿಗೆ ನೂರು ಕಟ್ಟುಪಾಡುಗಳು. ಏಕೆಂದರೆ ಅದು ಸಂನ್ಯಾಸಕ್ಕೆ ತಯಾರಿ. ಈ ಪ್ರಕೃತಿಯೊಡ್ಡುವ ನೂರಾರು ಸುಖಗಳಿಗೆ, ಆಕರ್ಷಣೆಗಳಿಗೆ ಬೆನ್ನು ತಿರುಗಿಸಿ ವ್ರತಜೀವನ, ‘ದೀಕ್ಷಾಜೀವನ’ವನ್ನು ನಡೆಸುವುದು ಪ್ರತಿಯೊಬ್ಬರಿಗೂ ಸಾಧ್ಯವಾಗಲಿ, ಅವಕಾಶವಿರಲಿ ಎಂದು ಭಾವಿಸಿಯೇ ‘ವಾನಪ್ರಸ್ಥಾಶ್ರಮ’ ಮತ್ತು ‘ಸಂನ್ಯಾಸಾಶ್ರಮ’ ಎಂಬ ಎರಡು ಜೀವನಘಟ್ಟಗಳನ್ನು ಸನಾತನ ಧರ್ಮ ನಿರ್ವಿುಸಿಕೊಟ್ಟಿದೆ. ಹೇಗಿದ್ದರೂ ಐವತ್ತರ ನಂತರ ಭೋಗಾಚಾಪಲ್ಯ ಅಥವಾ ಇಂದ್ರಿಯಚಾಪಲ್ಯ ಕಡಿಮೆಯಾಗಿರುತ್ತದೆ ಎಂದು ಭಾವಿಸಿ ಐವತ್ತರಿಂದಎಪ್ಪತೆ ôದ
ರವರೆಗೆ ಸಾಧುಸಂಗದಲ್ಲಿ ಮತ್ತು ಎಪ್ಪತೆôದರ ನಂತರ ‘ಸಾಧುಜೀವನ’ದಲ್ಲಿ ಬದುಕು ಎಂದು ಒಂದರ್ಥದಲ್ಲಿ ಕಟ್ಟುನಿಟ್ಟಾಗಿಯೇ ಹೇಳಿದೆ. ಒಂದೆರೆಡು ಜನ್ಮದಲ್ಲಿ ಇದು ಅಭ್ಯಾಸವಾದರೆ ಮುಂದೆ ಮನುಷ್ಯ ಕ್ರಾಂತಿಕಾರಿಯಾಗಿ ನಿರ್ವಣವಾಗುತ್ತಾನೆ. ಇಂದ್ರಿಯ ಮನಸ್ಸುಗಳನ್ನು ಗೆದ್ದವನು ಮಾತ್ರವೇ ಕ್ರಾಂತಿಕಾರಿ. ಸಿದ್ಧಾರ್ಥ ಸುಖಜೀವನಕ್ಕೆ ಬೆನ್ನು ತಿರುಗಿಸಿ ಓಡಿ ಹೋಗಿದ್ದು ಸುಮ್ಮನೆ ಆಟಕ್ಕಲ್ಲ. ಅವನಿಗಿಂತಲೂ ಕ್ರಾಂತಿಕಾರಿ ಯಾರು? ತಪಸ್ವಿ, ತತ್ವಾನುಭವಿ, ಬ್ರಹ್ಮವಿತ್ ಇವರು ಕ್ರಾಂತಿಕಾರರು; ಧೂಳೆಬ್ಬೆಸಿದವರೆಲ್ಲ ಅಲ್ಲ. ಧೂಳೆಬ್ಬೆಸಿದ ನಾಗರಿಕತೆಗಳು ಒಂದೊಂದು ಏಟಿಗೇ ಧೂಳಿಪಟವಾಗಿದ್ದನ್ನು ನಾವು ನೋಡಿದ್ದೇವೆ. ಜರ್ಮನಿಯ ಫ್ರೆಡ್ರಿಕ್ ಹೆಗೆಲ್ ಏನು ಹೇಳುತ್ತಾನೆ ಸ್ವಲ್ಪ ನೋಡಬೇಕು ನಮ್ಮವರು.
‘ನಿಜಕ್ಕೂ ಕಷ್ಟಗಳು ಎಂದರೇನು? ವೇಷಮರೆಸಿಕೊಂಡು ಬಂದ ಸೌಭಾಗ್ಯಗಳು ಅವು’. ಕಷ್ಟಗಳ ಸರಮಾಲೆಯಲ್ಲಿ ಬೇಯದ ಯಾವ ವ್ಯಕ್ತಿಯೂ ಮಹತ್ತದ್ದನ್ನು ಸಾಧಿಸಿಲ್ಲ. ಕಷ್ಟಗಳನ್ನು ಸ್ವಾಗತಿಸಬೇಕು. ಮಹಾಭಾರತದ ಕುಂತಿ ಹೆಜ್ಜೆಹೆಜ್ಜೆಗೂ ಕಷ್ಟಗಳನ್ನೇ ಕೊಡು ಎಂದು ಕೃಷ್ಣನಲ್ಲಿ ವರವನ್ನೇ ಬೇಡುತ್ತಾಳೆ. ಅವಳ ಜೀವನದಲ್ಲಿ ಈಗಾಗಲೇ ಪಟ್ಟ ಕಷ್ಟಗಳು ಸಾಲದೇ?! ಆದರೂ ಹೀಗೇಕೆ ಕೇಳಿದಳು? ಸುಖಗಳ ಹಂಗೇ ಬೇಡ. ಮನಸ್ಸಿಗೆ ನಾವು ಕೊಟ್ಟ ತರಬೇತಿಯಂತೆಯೇ ಇರುತ್ತದೆ ಅದರ ಆಸೆ, ಆಕಾಂಕ್ಷೆಗಳು ಎಂಬುದನ್ನು ಅರಿತ ಜ್ಞಾನಿ ಅವಳು.
ಮಹಾತ್ಮನೊಬ್ಬ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾನೆ, ‘ಭಗವಂತನಲ್ಲಿ ಶಕ್ತಿಗಾಗಿ ಬೇಡಿದೆ ಅವನು ಕಳಿಸಿದ ಕಷ್ಟಗಳನ್ನು; ಜ್ಞಾನಕ್ಕಾಗಿ ಬೇಡಿದೆ ಕಳಿಸಿದ ಸಮಸ್ಯೆಗಳನ್ನು; ಧೈರ್ಯಕ್ಕಾಗಿ ಬೇಡಿದೆ ಕೊಟ್ಟಿದ್ದು ಅಪಾಯಗಳನ್ನು, ಪ್ರೀತಿಗಾಗಿ ಮೊರೆಯಿಟ್ಟೆ ಕಳಿಸಿದ್ದು ದೀನರನ್ನು. ಕೇಳಿದ್ದನ್ನು ಪಡೆಯಲಿಲ್ಲ ಬಯಸಿದ್ದು ಬಾರದಿರಲಿಲ್ಲ’ ಎಂದು.
ಇದೆಲ್ಲ ಅರ್ಥಮಾಡಿಕೊಂಡರೆ ಹೊಸವರ್ಷ ನಮ್ಮ ಪಾಲಿಗೆ ಹೊಸಯುಗ (ಛಿಟಟ್ಚಜ) ಆಗಬಲ್ಲದು. ಜೀವನ ಸಾರ್ಥಕವಾಗಬಲ್ಲದು. ಕಷ್ಟ-ಸುಖಗಳೆರೆಡೂ ಸಮಾನವಾಗಿಯೇ ನಮ್ಮ ಹಿತೈಷಿಗಳು. ಅವೆರಡಕ್ಕೂ ಸಮಾನವಾಗಿಯೇ ಸ್ವಾಗತ. ಇದೇ ನಿಜಾರ್ಥದಲ್ಲಿ ಯುಗಾದಿ; ಹೊಸಯುಗಕ್ಕೆ ನಾಂದಿ. (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)