

ನಮ್ಮೊಳಗಿನ ಶತ್ರುಗಳನ್ನು ಹೊಡೆದೋಡಿಸುವ ಪ್ರಕ್ರಿಯೆಯನ್ನೇ ಈ ನವರಾತ್ರಿಯ ಆರಾಧನೆ ಮೂಲಕ ನಡೆಸುವುದನ್ನು ಹಿರಿಯರು ಋಷಿಗಳು ಕಲ್ಪಿಸಿದ್ದಾರೆ. ವಿಜಯದಶಮಿಯೊಂದಿಗೆ ಮುಕ್ತಾಯಗೊಳ್ಳುವ ಈ ಹಬ್ಬವನ್ನು ಆಚರಿಸಿದವರ ಬದುಕಿನುದ್ದಕ್ಕೂ ಎಲ್ಲದರಲ್ಲೂ ವಿಜಯವನ್ನೇ ಒದಗಿಸುತ್ತದೆ. ಸಮಾಜವನ್ನು, ಕುಟುಂಬವನ್ನು, ರಾಷ್ಟ್ರವನ್ನು ಒಟ್ಟುಗೂಡಿಸುತ್ತದೆ.
ಮಳೆಯು ಸುರಿದು ಇಳೆಯು ತಣಿದು, ಉಕ್ಕಿ ಹರಿವ ನದಿ ಹದವಾಗುವ ಕಾಲ. ನೀಲಿ ಆಗಸದ ಮೋಡಗಳೆಲ್ಲ ಹಸಿರು ಮರಗಳಿಗೆ ಬೆಳ್ಗೊಡೆ ಹಿಡಿದು ನಿಲ್ಲುವ ಸಮಯ. ಪೈರು ಬಾಗಿ ಭಾಗ್ಯದ ಬಾಗಿಲನ್ನು ತೆರೆದ ಹೊತ್ತು. ಶರತ್ಕಾಲದ ತಂಗದಿರನ ಬಣ್ಣಿಸುವುದಕ್ಕೆ ಪದಗಳೇ ಸೋಲುತ್ತವೆ.
ಹಬ್ಬಗಳು ಒಂದನ್ನೊಂದು ತಬ್ಬಿಕೊಂಡು, ಮಬ್ಬಿನಲ್ಲಿರುವವನ ಚೈತನ್ಯವನ್ನು ಬಡಿದೆಬ್ಬಿಸುವಂತೆ ಸಂಸ್ಕೃತಿಯನ್ನು ಹೆಣೆದಿರುವ ಪ್ರಕೃತಿಯ ಜಾಣ್ಮೆ ಅನ್ಯಾದೃಶ. ಕೃಷ್ಣನನ್ನು ತೂಗಿ, ಗಣಪತಿಗೆ ಬಾಗಿ, ಜಗದಂಬೆಯ ತಾಯ್ತನದ ಪ್ರೀತಿಯಲ್ಲಿ ಮಿಂದೇಳುವ ಭಕ್ತಸಮೂಹ ಸಿದ್ಧವಾದರೆ ಅದು ನವರಾತ್ರಿ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ದುರ್ಗೆಯದೇ ದರ್ಬಾರ್. ಹಬ್ಬಗಳಲ್ಲಿ ಉಳಿದದ್ದಕ್ಕಿಂತ ತುಸು ದೀರ್ಘವಾದದ್ದು. ಆಶ್ವಯುಜ ಶುಕ್ಲ ಪಾಡ್ಯದಿಂದ ನವಮಿಯ ಒಂಬತ್ತು ರಾತ್ರಿಗಳ ಸಮಷ್ಟಿಯೇ ಈ ನವರಾತ್ರಿ.
ದೇವತಾ ಸ್ವರೂಪ ಏನು?: ‘ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ ತದೇವ ವೀರ್ಯವತ್ತರಂ ಭವತಿ’ - ತಿಳಿದು ಮಾಡಬೇಕು, ನಂಬಿ ಮಾಡಬೇಕು, ಗುಟ್ಟಾಗಿ ನಡೆಸಬೇಕು, ಹೀಗೆ ನಡೆಸಿದ ಸಕಲ ಅನುಷ್ಠಾನಗಳು ಬಹಳ ಬೇಗನೆ ಸಿದ್ಧಿಯನ್ನು ಕೊಡುತ್ತವೆ. ಗೀತೆಯೂ ಕೂಡ ಈ ಪರಾಶಕ್ತಿಯ ತತ್ವದ ಬಗೆಗೆ ಬೆಳಕು ಚೆಲ್ಲಿದೆ.
ದೈವೀಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ|
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ||
ದೇವತಾ ಶಕ್ತಿಗಳಲ್ಲಿ ಮಿಗಿಲಾದ, ಪ್ರಕೃತಿಯ ಭಾಗವಾದ, ಸತ್ವ-ರಜಸ್ತಮೋಗುಣಗಳ ಅಭಿಮಾನಿನಿಯಾದ, ಪರಾಶಕ್ತಿ ನನ್ನವಳಾಗಿದ್ದಾಳೆ. ಮಾಯಾಶಕ್ತಿಯಾಗಿ ಜಗವನ್ನೇ ತನ್ನ ವಶದಲ್ಲಿ ಇರಿಸಿಕೊಂಡಿದ್ದಾಳೆ. ಯಾರು ನಮ್ಮಲ್ಲಿ ಶರಣಾಗುವರೋ ಅವರು ಈ ಸಂಸಾರದ ಚಕ್ರದಿಂದ ಪಾರಾಗುವರು. ಇದು ಕೃಷ್ಣನ ಮಾತು.
ಪೌರಾಣಿಕ ರಾತ್ರಿ ಸೂಕ್ತವೂ ಅವಳನ್ನು ಹೀಗೆ ಸ್ತುತಿಸುತ್ತದೆ.
ವಿಶ್ವೇಶ್ವರೀಂ ಜಗದ್ಧಾತ್ರೀಂ ಸ್ಥಿತಿ-ಸಂಹಾರ ಕಾರಿಣೀಂ|
ನಿದ್ರಾಂ ಭಗವತೀಂ ವಿಷ್ಣೋರತುಲತೇಜಸಃ ಪ್ರಭೋಃ||
ಜಗವ ಹೆತ್ತು-ಹೊತ್ತು-ಸಲಹಿ, ಕೊನೆಗೆ ಕರಗಿಸುವ ಒಡತಿ ಇವಳು. ಪರಮಪುರುಷ ನಾರಾಯಣನ ಕಣ್ಣಾಲಿಗಳಲ್ಲಿ ಜನುಗಿದ ನಿದ್ದೆ ಇವಳು. ತಡೆ ಇರದವಳು ಅಷ್ಟೈಶ್ವರ್ಯ ಸಂಪನ್ನಳು. ದುರ್ಗಾ ಎಂದರೆ ಪಾರ್ವತಿಯನ್ನು ಈ ನಾಮದಿಂದ ಉಪಾಸಿಸುವುದಿದೆ. ಲಕ್ಷ್ಮಿಯ ಮೂರು ರೂಪಗಳಲ್ಲಿ ಒಂದು ಅನ್ನೋದು ಕೂಡ ಶಾಸ್ತ್ರ ಸಿದ್ಧ.
ಮಹಾಕಾಳಿ- ಮಹಾಲಕ್ಷ್ಮಿ- ಮಹಾಸರಸ್ವತಿ ಎಂಬ ಹೆಸರಿನಿಂದಲೂ ದುರ್ಗೆಯ ಪೂಜೆಯಾಗುತ್ತದೆ. ಸತ್ವದ ಅಭಿಮಾನಿನಿ ಶ್ರೀ, ರಾಜೋಭಿಮಾನಿನಿ ಭೂ, ತಮೋಭಿಮಾನಿನೀ ದುರ್ಗಾ ಹೀಗೆ ಗುಣಗಳ ನಿಯಮಗಳಾಗಿ ಉಪಾಸನೆಗೊಳ್ಳುತ್ತಾಳೆ. ಈ ಜಗದಂಬೆಯನ್ನು ಶೈಲಪುತ್ರೀ ಬ್ರಹ್ಮಚಾರಿಣೀ ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾರ್ತಯ ಕಾಳರಾತ್ರಿ, ಮಹಾಗೌರೀ, ಸಿದ್ಧಿದಾತ್ರೀ ಎಂದು ಒಂಭತ್ತು ರೂಪಗಳಲ್ಲಿ ಒಂಭತ್ತು ರಾತ್ರಿಗಳಲ್ಲಿ ಆರಾಧಿಸುವುದು ಶ್ರೇಷ್ಠ.
ಉಪಾಸನೆಯಲ್ಲಿ ವೈವಿಧ್ಯ: ಪ್ರಕೃತಿಸ್ವಂಚ ಸರ್ವಸ್ಯ ಗುಣ- ತ್ರಯ- ವಿಭಾವಿನೀ| ಕಾಲರಾತ್ರಿರ್ಮಹಾರಾತ್ರಿ ರ್ವೇಹರಾತ್ರಿಶ್ಚದಾರುಣಾ||
ಹೇಗೆ ಸೃಷ್ಟಿ- ಸ್ಥಿತಿ- ಲಯ ಕರ್ಮಗಳಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ನಡುವೆ ಭಿನ್ನಮತವೇ ಇಲ್ಲವೋ, ಅಂತೆಯೇ ಅವರ ಮಡದಿಯರಾದ ಸರಸ್ವತಿ ಲಕ್ಷ್ಮಿ, ಪಾರ್ವತಿಯರಲ್ಲಿಯೂ ಪರಸ್ಪರ ಹೊಂದಾಣಿಕೆ ಇದೆ. ತಮ್ಮತಮ್ಮ ಪತಿಯರು ನಡೆಸುವ ಮಹಾಕಾರ್ಯದಲ್ಲಿ ಪಾಲುದಾರರಾಗಿ ಪೂರ್ಣ ಕಾರ್ಯನಿರ್ವಹಣೆ ಮಾಡುತ್ತಾರೆ. ಹೀಗೆ ಮೂವರು ಆರಾಧನೆಗೊಳ್ಳುವ ಒಂದು ವಿಶಿಷ್ಟ ಚಿಂತನೆಯನ್ನು ಕಾಣುತ್ತೇವೆ. ಜಗದ ರಕ್ಷಕಿಯರಾಗಿ, ವಿದ್ಯೆ- ಸಂಪತ್ತು- ಅನ್ನಗಳ ಒದಗಿಸುವ ಅವರ ಕಾರುಣ್ಯವನ್ನು ಸ್ಮರಿಸುವ ಕಾಲವಾಗಿದೆ. ನಮ್ಮ ನಿತ್ಯದ ಬೆಳಗಿನ ಪ್ರಾರ್ಥನೆಯಲ್ಲೂ ಹೀಗೊಂದು ಮಾತಿದೆ.
ಕರಾಗ್ರೇ ವಸತಿ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಂ||
ಐಶ್ವರ್ಯಕ್ಕೆ ಒಡತಿಯಾಗಿ ಲಕ್ಷ್ಮಿಯನ್ನು ಕೈಬೆರಳುಗಳ ತುದಿಯಲ್ಲಿ ಚಿಂತಿಸಬೇಕು. ಕೈಬೆರಳುಗಳ ಬುಡದಲ್ಲಿ ವಿದ್ಯೆಯ ತಾಯಿಯಾದ ಸರಸ್ವತಿಯನ್ನು ನೆನೆಯಬೇಕು. ಅಂಗೈಯ ಕೊನೆಯಲ್ಲಿ ಬುದ್ಧಿಮಾನಿನಿಯಾದ ಗೌರಿಯನ್ನು ಕಾಣಬೇಕು. ಹೀಗೆ ದಿನವನ್ನು ಆರಂಭಗೊಳಿಸುವ ಶಿಷ್ಟ ಸಂಪ್ರದಾಯವನ್ನು ಹಿರಿಯರು ಹಾಕಿಕೊಟ್ಟಿದ್ದಾರೆ. ಇದೇ ಉಪಾಸನೆ ವಿಶಿಷ್ಟ ಕ್ರಮದಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿ ನಡೆಯುತ್ತದೆ. ಸಮಸ್ತ ಜಡಪ್ರಕೃತಿಯ ನಿಯಾಮಕಳಾಗಿ ಮೂರುಗುಣಗಳ ಬಲೆಯನ್ನು ವಿಧವಿಧವಾಗಿ ಹೆಣೆದಿದ್ದಾಳೆ. ಜಡ-ಜೀವಗಳ ಕಲೆಹಾಕುವ ಕಾಳರಾತ್ರಿ ಇವಳೆ. ಮಹತ್ವದ ಬೆಳವಣಿಗೆಯನ್ನು ಕೊಟ್ಟು ಮಹಾರಾತ್ರಿಯೂ ಇವಳೆನಿಸಿದ್ದಾಳೆ. ಅರಿವುಗೇಡಿತನದ ಮೋಹವನ್ನು ಬರಿಸಿ ಕೊನೆಗಾಣಿಸುವ ಮೋಹರಾತ್ರಿಯೂ ಇವಳೇ ಆಗಿರುವಳು. ಹೀಗೆ ದುರುಳರಿಗೆ ಮಾರಕಳಾಗಿದ್ದಾಳೆ. ದುರಿತಗಳ ತಾರಿಣಿಯಾಗಿದ್ದಾಳೆ.
ಆಚರಣೆಯ ವಿಶೇಷತೆಗಳು: ಕೆಲವು ಕಡೆ ಸಾವಿರಾರು ಗೊಂಬೆಗಳನ್ನಿಟ್ಟು ಅನೇಕ ಕಥೆಗಳನ್ನು ಜೋಡಿಸಿ ಪ್ರದರ್ಶನಕ್ಕೆ ಇಡುತ್ತಾರೆ. ಇದರಿಂದ ಹೊಸ ಪೀಳಿಗೆಯ ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಕಥೆಯನ್ನು ಪರಿಚಯಿಸಲಾಗುತ್ತದೆ. ಸಂಸ್ಕೃತಿಯ ಕೊಂಡಿ ಮುಂದುವರಿಯುತ್ತದೆ.
ಶಾರದೀ ಚಂಡಿಕಾ ಪೂಜಾ ತ್ರಿವಿಧಾ ಪರಿಗೀಯತೇ|
ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು||
ಸಾತ್ವಿಕೀ ಜಪ-ಯಜ್ಞಾದ್ಯೈಃ ನೈವೇದ್ಯೈಶ್ಚ ನಿರಾಮಿಷೈಃ|
ಮಹಾತ್ಮ್ಯಂ ಭಗವತ್ತಯ ಪುರಾಣಾದಿಷು ಕೀರ್ತಿತಃ||
ಸಾರಸ್ತಸ್ಯ ಜಪಃ ಪೋ›ಕ್ತಃ ಪಠೇದ್ದೇವೀಮನಾಃ ಪ್ರಿಯೇ|
ರಾಜಸೀ ಬಲಿದಾನೇನ ನೈವೇದ್ಯೈಃ ಸಾಮಿಷೈಸ್ತಥಾ||
ಸುರಾ-ಮಾಂಸಾದ್ಯುಪಹಾರೈಃ ಜಪ-ಯಜ್ಞೈರ್ವಿನಾ ತು ಯಾ|
ವಿನಾ ಮಂತ್ರಸ್ತಾಮಸೀಸ್ಯಾತ್ ಕಿರಾತಾನಾಂ ಸ ಸಮ್ಮತಃ|| (ಸ್ಕಾಂದ ಪುರಾಣ)
ನವರಾತ್ರಿಯಲ್ಲಿ ಶಾರದೆಯ ಅಥವಾ ಚಂಡಿಕೆಯ ಪೂಜೆಯು ಮೂರು ರೀತಿಯಲ್ಲಿ ನಡೆಯುತ್ತದೆ. ಸಾತ್ವಿಕೀ ರಾಜಸಿ ತಾಮಸಿ ಎನ್ನುವುದಾಗಿ ವಿಭಾಗ ಮಾಡಲಾಗುತ್ತದೆ. ಭಗವತಿಯ ಮಹಾತ್ಮ್ಯವನ್ನು ಪುರಾಣಗಳಲ್ಲಿ ತಿಳಿಸಿದಂತೆ ಸ್ತೋತ್ರ ಮಾಡುತ್ತಾ, ಜಪ-ಚಂಡಿಕಾಯಜ್ಞ, ಗುಡಾನ್ನ ನಿವೇದನೆಯ ಮೂಲಕ ಸಾತ್ವಿಕ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಸಾಧ್ಯವಾದಷ್ಟು ದುರ್ಗಾ ಮಂತ್ರಗಳನ್ನ ಜಪಿಸಿ ತಾಯಿ ದುರ್ಗೆಯಲ್ಲಿ ಮನಸ್ಸಿಟ್ಟು ಅರ್ಪಿಸಲಾಗುತ್ತದೆ. ಮಂತ್ರಪೂರ್ವಕವಾಗಿ ಶಾಸ್ತ್ರೀಯ ಕ್ರಮದಲ್ಲಿ ಪ್ರಾಣಿಬಲಿಗೈದು ಅದರ ಮಾಂಸವನ್ನು ನಿವೇದಿಸುವುದು, ಆರಾಧಿಸುವುದು ರಾಜಸ ಪೂಜೆ ಎನಿಸುತ್ತದೆ. ಮದ್ಯ ಮಾಂಸ ಮೊದಲಾದ ಪದಾರ್ಥಗಳನ್ನು ಅರ್ಪಿಸಿ ಮಂತ್ರ- ಜಪಗಳಿಲ್ಲದೆ ಕಿರಾತರು ನಡೆಸುವ ಆರಾಧನೆಯು ತಾಮಸವೆಂದು ಕರೆಯಲ್ಪಡುತ್ತದೆ.
ನವರಾತ್ರಿಯ ಸಂದರ್ಭದಲ್ಲಿ ಮೊದಲನೆಯ ದಿನ ಬೆಳಗ್ಗೆ ಅಭ್ಯಂಗ ಸ್ನಾನವನ್ನು ಮಾಡಬೇಕು. ಪುಂಡ್ರಗಳನ್ನು ಧರಿಸಬೇಕು. ಒಗೆದು ಹಾಕಿದ ಬಟ್ಟೆಗಳನ್ನು ಉಡಬೇಕು. ನಿರ್ವಿಘ್ನತೆಗಾಗಿ ಗಣಪತಿಯನ್ನು ಪೂಜಿಸಬೇಕು.
ಪೂರ್ಣ ಕುಂಭದಲ್ಲಿ ಪುಣ್ಯತೀರ್ಥಗಳನ್ನು, ವರುಣನನ್ನು, ದುರ್ಗೆಯನ್ನು ಪ್ರತಿಷ್ಠಾಪಿಸಬೇಕು. ಒಂಭತ್ತು ದಿನವೂ ಈ ಕಲಶದಲ್ಲಿ ವಿಶೇಷವಾದ ಆರಾಧನೆ ಮಾಡುವುದು ಶಾಸ್ತ್ರವಿಧಾನ. ಇನ್ನು ಕೆಲವು ಕಡೆ ಮಂಡಲಗಳನ್ನು ರಚಿಸಿ ಮೂರು ಕಾಲದಲ್ಲಿಯೂ ಪುರುಷಸೂಕ್ತ, ಶ್ರೀಸೂಕ್ತಗಳ ಮೂಲಕ ಷೋಡಶೋಪಚಾರ ತ್ರಿಕಾಲಪೂಜೆಯನ್ನು ಮಾಡುವುದಿದೆ. ಮತ್ತೆ ಕೆಲವು ಕಡೆ ಬಗೆಬಗೆಯ ಹೂಗಳಿಂದ ಅರ್ಚಿಸಿ ಒಂಭತ್ತು ದಿನವೂ ತುಪ್ಪ ಅಥವಾ ಎಳ್ಳೆಣ್ಣೆಯ ಅಖಂಡದೀಪ ಬೆಳಗಿ ದುರ್ಗೆಯನ್ನು ಆವಾಹಿಸಿ ಪೂಜಿಸುವುದಿದೆ. ಈ ನಡುವೆ ಮುತೆôದೆಯರನ್ನು ಕುಮಾರಿಯರನ್ನು ಗೌರವಿಸುವುದು, ಅವರಲ್ಲಿ ದುರ್ಗೆಯ ಒಂಭತ್ತು ರೂಪಗಳನ್ನು ಅನುಸಂಧಾನ ಮಾಡಿ ಆರಾಧಿಸುವುದು ಮನೆಗೆ ಒದಗಿದ ಎಲ್ಲ ದುರಿತಗಳನ್ನು ಕೂಡ ಕಳೆಯುತ್ತದೆ ಎಂಬುದು ಶಾಸ್ತ್ರ ವಿಹಿತವಾದ ಕ್ರಮ. ಸಪ್ತಶತಿ, ನಾರಾಯಣಹೃದಯ, ಲಕ್ಷ್ಮಿ ಹೃದಯ ಮೊದಲಾದವುಗಳ ಪಾರಾಯಣ ವಿಶೇಷ ಫಲಪ್ರದ. ಪಾರಾಯಣವನ್ನು ಕೂಡ ನಿಧಾನವಾಗಿ ಅರ್ಥವತ್ತಾಗಿ ಸ್ಪಷ್ಟ ಉಚ್ಚಾರಣೆಯ ಜೊತೆಗೆ ನಡೆಸಬೇಕು. ಮನೆಯವರೆಲ್ಲ ಭಕ್ತಿಯಿಂದ ಕುಳಿತು ಶ್ರವಣ ಮಾಡಬೇಕು.
ಈ ದಿನಗಳ ನಡುವೆ ಮೂಲ ನಕ್ಷತ್ರದಿಂದ ಶ್ರವಣದ ತನಕ ಶಾರದಾ ಮತ್ತು ವ್ಯಾಸ ಪೂಜೆಯನ್ನು ನಡೆಸಬೇಕು. ಅಧ್ಯಯನಶೀಲರು ತಾವು ಓದುವ ವೇದ ಪುರಾಣ ಇತಿಹಾಸ ಗ್ರಂಥಗಳನ್ನು ದೇವರ ಕೋಣೆಯ ಬದಿಯಲ್ಲಿಟ್ಟು ಲೇಖನಿ, ವ್ಯಾಸ ಪೀಠಗಳನ್ನು ಜೊತೆಯಲ್ಲಿಟ್ಟು ಪೂಜಿಸಬೇಕು. ರಕ್ಷಣೆ ಪೋಷಣೆಯ ಭಾರ ಹೊತ್ತವರು ತಮ್ಮ ಆಯುಧಗಳನ್ನು ಪೂಜಿಸಿ ದುರ್ಗೆಯ ರಕ್ಷಣೆಯನ್ನು ಬೇಡುತ್ತಾರೆ. ದುರ್ಗಾಷ್ಟಮಿ ಈ ಆಯುಧಪೂಜೆಗಾಗಿ ಮೀಸಲಾಗಿದೆ. ಅಂತೆಯೇ ವ್ಯಾಪಾರಿಗಳು ಕೃಷಿಕರು ತಮ್ಮ ನೇಗಿಲು, ತಕ್ಕಡಿ ಇನ್ನುಳಿದ ಬೇಸಾಯದ ವ್ಯವಹಾರದ ವಸ್ತುಗಳನ್ನೆಲ್ಲ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂಗಳನೇರಿಸಿ ಪೂಜಿಸುತ್ತಾರೆ. ತಾಯಿದುರ್ಗೆ ಚಂಡ-ಮುಂಡ ಶುಂಭ-ನಿಶುಂಭ, ಧೂಮ್ರಲೋಚನ, ರಕ್ತಬೀಜಾಸುರರೆಂಬ ಕಾಮ- ಕ್ರೋಧ- ಲೋಭ- ಮೋಹ- ಮದ- ಮತ್ಸರ ಮೊದಲಾದ ನಮ್ಮೊಳಗಿನ ಶತ್ರುಗಳನ್ನು ಹೊಡೆದೋಡಿಸುವ ಪ್ರಕ್ರಿಯೆಯನ್ನೇ ಈ ನವರಾತ್ರಿಯ ಆರಾಧನೆ ಮೂಲಕ ನಡೆಸುವುದನ್ನು ಹಿರಿಯರು ಋಷಿಗಳು ಕಲ್ಪಿಸಿದ್ದಾರೆ. ವಿಜಯದಶಮಿಯೊಂದಿಗೆ ಮುಕ್ತಾಯಗೊಳ್ಳುವ ಈ ಹಬ್ಬವನ್ನು ಆಚರಿಸಿದವರ ಬದುಕಿನುದ್ದಕ್ಕೂ ಎಲ್ಲದರಲ್ಲೂ ವಿಜಯವನ್ನೇ ಒದಗಿಸುತ್ತದೆ. ಸಮಾಜವನ್ನು, ಕುಟುಂಬವನ್ನು, ರಾಷ್ಟ್ರವನ್ನು ಒಟ್ಟುಗೂಡಿಸುತ್ತದೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು)