

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ |
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ||
‘ಯಾರು ಎಲ್ಲ ಜೀವಿಗಳಲ್ಲೂ ತಾಯಿಯಾಗಿ ನೆಲಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ನನ್ನ ನನ್ನ ನಮಸ್ಕಾರಗಳು’.
ತಾಯಿಯ ಗರ್ಭದಿಂದ ಹೊರಬಂದಿನಿಂದ ಮಾತೃಪ್ರೇಮದ ಅಮೃತವನ್ನು ನಾವು ಸವಿಯುತ್ತ ಬೆಳೆಯುತ್ತೇವೆ. ನಾವು ಬೆಳೆಯುತ್ತ ಆ ಮಾತೃಪ್ರೇಮವೂ ವಿಸ್ತಾರವಾಗುತ್ತದೆ. ನಾವು ಓಡಾಡುವ ಭೂಮಿ ಭೂತಾಯಿಯಾಗಿ, ನಮ್ಮ ನಾಡು ತಾಯ್ನಾಡಾಗಿ, ನಮ್ಮ ದೇಶ ಭರತ ಮಾತೆಯಾಗಿ ಪೂಜಿತಳಾಗುತ್ತಾಳೆ. ನಮ್ಮ ಜೀವನದಲ್ಲಿ ನೆರವಾಗುವ ಅನೇಕ ಸ್ತ್ರೀಯರನ್ನು ನಾವು ತಾಯಿಯಂತಲೇ ಕಾಣುತ್ತೇವೆ. ಇನ್ನು ಪರಬ್ರಹ್ಮ ಶಕ್ತಿಯು ನಮಗೆ ಜ್ಞಾನ ನೀಡಿದಾಗ ಸರಸ್ವತಿ, ಸಂಪತ್ತನ್ನು ನೀಡಿದಾಗ ಲಕ್ಷ್ಮೀ, ಶಕ್ತಿಯನ್ನು ನೀಡಿದಾಗ ಪಾರ್ವತಿ, ದುರ್ಗೆ ಹೆಸರುಗಳಿಂದ ಕರೆದು, ಅರ್ಚಿಸುತ್ತೇವೆ. ಅನಾದಿ ಕಾಲದಿಂದಲೂ ನಮ್ಮ ಭರತ ಭೂಮಿಯಲ್ಲಿ, ಸನಾತನ ಧರ್ಮದಲ್ಲಿ ಮಾತೃಪೂಜೆ, ದೇವಿಯ ಪೂಜೆ ವಿಶೇಷವಾಗಿ ನಡೆದುಕೊಂಡು ಬಂದಿದೆ.
ಯಾ ದೇವೀ ಸರ್ವಭೂತೇಷು ದೇವಿರೂಪೇಣ ಸಂಸ್ಥಿತಾ |
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ||
ಯಾರು ಎಲ್ಲ ಜೀವಿಗಳಲ್ಲೂ ಶಕ್ತಿಯ ಸೆಲೆಯಾಗಿ ನೆಲೆಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ನನ್ನ ನನ್ನ ನಮಸ್ಕಾರಗಳು. ಅಲ್ಲದೆ ಶ್ವೇತಾಶ್ವತರೋಪನಿಷತ್ತು ‘ಸಂಜೀವಯತ್ಯಖಿಲಶಕ್ತಿಧಸ್ವಧಾಮ್ನಾಂ’- ಭಗವಂತನೂ ಶಕ್ತಿವಿಶಿಷ್ಟನೇ ಆಗಿದ್ದಾನೆ. ಶಕ್ತಿಯ ನೆರವಿಲ್ಲದೆ ಅವನಿಲ್ಲ. ಪಾರ್ವತೀ ಇಲ್ಲದೆ ಶಿವನಿಲ್ಲ, ಲಕ್ಷ್ಮೀ ಇಲ್ಲದೆ ನಾರಾಯಣನಿಲ್ಲ, ಸರಸ್ವತಿಯಿಲ್ಲದೆ ಬ್ರಹ್ಮನಿಲ್ಲ ಅಂದರೆ ಅವನು ಪೂರ್ಣನಾಗುವುದಿಲ್ಲ. ಭಗವಂತನ ಶಕ್ತಾ ್ಯಶವನ್ನು ವಿಶೇಷವಾಗಿ ಆರಾಧಿಸುವ ಹಬ್ಬವೇ ಈ ನವರಾತ್ರಿ ಹಬ್ಬ. ಇತಿಹಾಸದ ಪುಟಗಳನ್ನು ನಾವು ಅವಲೋಕಿಸಿದಾಗಲೂ, ಶ್ರೀರಾಮ, ಶ್ರೀಕೃಷ್ಣ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಚೈತನ್ಯ ಮಹಾಪ್ರಭು, ಶ್ರೀರಾಮಕೃಷ್ಣ ಪರಮಹಂಸರು ಶಕ್ತಿಯ ಆರಾಧನೆಯನ್ನು ಮಾಡಿದ ಮೇಲೆಯೇ ಅವರ ಮುಖ್ಯ ಅವತಾರ ಕಾರ್ಯಗಳನ್ನು ಪ್ರಾರಂಭಿಸಿರುವುದು ಗಮನಾರ್ಹ.
ನಾಲ್ಕು ರೀತಿಯ ನವರಾತ್ರಿಗಳು: ಭಗವಾನ್ ಶ್ರೀರಾಮನು ರಾವಣನನ್ನು ಸಂಹಾರ ಮಾಡುವ ಮುನ್ನ ದೇವಿಯನ್ನು ವಿಶೇಷವಾಗಿ ಪೂಜಿಸಿ, ಅವಳ ಕೃಪೆಗೆ ಪಾತ್ರನಾಗಿ ರಾವಣನ ಸಂಹಾರ ಮಾಡಿದ. ಶರದ ಋತುವಿನಲ್ಲಿ ಬರುವ ಈ ನವರಾತ್ರಿ ಪ್ರಸಿದ್ಧವಾಯಿತು. ಆದ್ದರಿಂದಲೇ ಈ ನವರಾತ್ರಿಯನ್ನು ‘ಶರನ್ನವರಾತ್ರಿ’ ಎಂದು ಕರೆಯುವುದು. ಅದಕ್ಕೆ ಮುನ್ನ ವಸಂತ ಋತು, ಚೈತ್ರ ಮಾಸದಲ್ಲಿ ಬರುವ ನವರಾತ್ರಿಯಲ್ಲಿ ದೇವಿ ಪೂಜೆಯನ್ನು ಮಾಡಲಾಗುತ್ತಿತ್ತು. ಅದನ್ನು ‘ವಸಂತ ನವರಾತ್ರಿ’ ಎಂದು ಕರೆಯುತ್ತೇವೆ. ಇದಲ್ಲದೆ ಆಷಾಢ ಮಾಸದಲ್ಲಿ ‘ಆಷಾಢ ನವರಾತ್ರಿ’ಯನ್ನು ಮತ್ತು ಮಾಘ ಮಾಸದಲ್ಲಿ ‘ಮಾಘ ನವರಾತ್ರಿ’ಯನ್ನು ಆಚರಿಸಲಾಗುತ್ತದೆ. ಒಟ್ಟು 4 ನವರಾತ್ರಿಗಳು ಇದ್ದರೂ, ಶರನ್ನವರಾತ್ರಿಯು ಪ್ರಸಿದ್ಧಿಯನ್ನು ಪಡೆದು, ಅದನ್ನು ಮಾತ್ರ ಎಲ್ಲರೂ ಆಚರಿಸುತ್ತಾರೆ. ಈ ವಿಶಿಷ್ಟ ಹಬ್ಬವನ್ನು ನವರಾತ್ರಿ, ದುರ್ಗಾ ಪೂಜೆ, ದಸರಾ, ದಶಹರ, ಶರನ್ನವರಾತ್ರಿ, ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ನವರಾತ್ರಿಯಲ್ಲಿ ಪ್ರತಿದಿವಸ ದುರ್ಗಾಮಾತೆಯ ಒಂದು ಒಂದು ರೂಪವನ್ನು ಪೂಜಿಸುವುದು ನಮಗೆಲ್ಲ ತಿಳಿದಿರುವ ವಿಷಯ. ಇದರ ಉಲ್ಲೇಖವನ್ನು ನಾವು ಬ್ರಹ್ಮವೈವರ್ತ ಪುರಾಣದಲ್ಲಿ ಕಾಣಬಹುದು.
ಶಕ್ತಿಆರಾಧನೆ ಹಾಗೂ ನವರಾತ್ರಿ ಹಬ್ಬದ ವಿಶೇಷ:
ಉಪಾಸಿಕಾನಾಂ ಕಾರ್ಯಾರ್ಥೇ ಬ್ರಹ್ಮಣೋ ರೂಪ ಕಲ್ಪ್ಯತೇ |
ಪರಬ್ರಹ್ಮನನ್ನು ಉಪಾಸಿಸುವ, ಆರಾಧಿಸುವ ಭಕ್ತರ ಉಪಯೋಗಕ್ಕಾಗಿ, ಪ್ರಯೋಜನಕ್ಕಾಗಿ ಭಗವಂತನು ವಿವಿಧ ರೂಪಗಳನ್ನು ತಳೆಯುತ್ತಾನೆ. ಅದೇ ರೀತಿ ಭಕ್ತರ ಉಪಯೋಗಕ್ಕಾಗಿ, ರಕ್ಷಣೆಗಾಗಿ ಭಗವತಿಯೂ ಸರಸ್ವತಿ, ಲಕ್ಷ್ಮೀ, ಪಾರ್ವತಿ, ಚಾಮುಂಡಿ, ಭವಾನಿ, ಮುಂತಾದ ಅನೇಕ ರೂಪಗಳನ್ನು ತಾಳಿದ್ದಾಳೆ. ಆ ಎಲ್ಲ ಅವತಾರ ತತ್ತ ್ವಗಳೂ ಪರಬ್ರಹವನ್ನೇ ಬಿಂಬಿಸುತ್ತವೆ. ಅವಳ ಮೂಲ ಉದ್ದೇಶ ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆ. ಈ ಸಮಯದಲ್ಲಿ ದೇವಿಗೆ ವಿಶೇಷ ಪೂಜೆ ಮಾಡಿ ಅವಳ ಕೃಪೆಗೆ ಪಾತ್ರರಾಗುವುದೇ ಮುಖ್ಯ ಗುರಿ. ಅವಳ ಕೃಪೆಯಿಂದ ಮಾಯಾ ಬಂಧನದಿಂದ ಮುಕ್ತರಾಗಲು, ಸಚ್ಚಿದಾನಂದನ ದರ್ಶನವನ್ನು ಪಡೆಯಲು ಅಥವಾ ವಿಶೇಷ ಶಕ್ತಿಗಳನ್ನು ಪಡೆಯಲು ಭಕ್ತರು ಅವಳನ್ನು ಪೂಜಿಸುತ್ತಾರೆ. ಒಂಬತ್ತು ದಿನಗಳಲ್ಲೂ ಹಬ್ಬವನ್ನು ಆಚರಿಸಲು ಸಾಧ್ಯವಾಗದಿದ್ದಾಗ, ಕೊನೆಯ ನಾಲ್ಕು ದಿನಗಳು, ಮೂರು ದಿನಗಳು ಅಥವಾ ಒಂದು ದಿನವಾದರೂ ಆಚರಿಸಲೇಬೇಕಾದ ಮಹಾಹಬ್ಬವಿದು.
ಜೀವನದಲ್ಲಿ ನವತ್ವವನ್ನು ಉಂಟುಮಾಡುವ ಹಬ್ಬವಿದು. ಬಾಹ್ಯ ಪ್ರಕೃತಿಯಲ್ಲಿ ಮೋಡವಿಲ್ಲ ಶುದ್ಧಾಕಾಶ, ಒಳಗಡೆ ಪರಿಶುದ್ಧವಾದ ಜ್ಞಾನಾಕಾಶ. ಹೊರಗಡೆ ಧನಧಾನ್ಯ ಸಮೃದ್ಧಿಗೆಂದು ಅವಳಲ್ಲಿ ಪ್ರಾರ್ಥನೆ, ಅಂತರಂಗದಲ್ಲಿ ಜ್ಞಾನಧನ, ಶಾಂತಿ-ಸೌಖ್ಯಧನಗಳನ್ನು ಪಡೆಯಲು ಅರ್ಚನೆ, ಹೊರಗಡೆ ದೇಶ-ಧರ್ಮಗಳಿಗೆ ಕಂಟಕವಾಗಿರುವ ನಾಶಮಾಡಲು ಯುದ್ಧವನ್ನು ಸಾರಿ ವಿಜಯಪ್ರಾಪ್ತಿಗಾಗಿ ಪ್ರಾರ್ಥನೆ, ಆಂತರಿಕವಾಗಿ ಆತ್ಮವಿಜಯಕ್ಕಾಗಿ ಮಾಡುವ ಯುದ್ಧದಲ್ಲಿ ವಿಜಯವನ್ನು ಸಾಧಿಸಲು ಅವಳಲ್ಲಿ ಶರಣು ಹೊಂದುವುದು ಈ ನವರಾತ್ರಿಯ ವಿಶೇಷ. ಅಲ್ಲದೆ ನಮ್ಮಲ್ಲಿರುವ ಆಂತರಿಕ ಶತ್ರುಗಳಾದ ಅಹಂಕಾರ, ಮಮಕಾರ, ಅಜ್ಞಾನ, ಅರಿಷಡ್ವರ್ಗಗಳಾದ ಅನೇಕ ಅಸುರರು ನಮ್ಮಲ್ಲಿದ್ದಾರೆ. ಅವರ ನಾಶವನ್ನು ಮಾಡಲು ಅನೇಕ ಬಾರಿ ನಮಗೆ ಸಾಧ್ಯವಿಲ್ಲ. ಅವರ ನಾಶಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ ಶಕ್ತಿ ಪೂಜೆ ಬಹಳ ಆವಶ್ಯಕ. ಆದ್ದರಿಂದಲೇ ಉಪಾಸಕರು, ಭಕ್ತರು ಈ ಸಮಯದಲ್ಲಿ ವಿಶೇಷವಾದ ಪೂಜೆ-ವ್ರತ ಅನುಷ್ಠಾನಗಳನ್ನು ಮಾಡುವುದು. ರಾಜರು ತಮ್ಮ ಶತ್ರುಗಳನ್ನು ನಾಶಮಾಡಲು ವಿಜಯ ಯಾತ್ರೆಯನ್ನು ಕೈಗೊಳ್ಳುತ್ತಿದ್ದ ಸಮಯವಿದು. ಜಗನ್ಮಾತೆ ನಮ್ಮ ದೇಶಕ್ಕೆ, ಧರ್ಮಕ್ಕೆ ಹಾಗೂ ನಮಗೆ ತೊಂದರೆಯುಂಟು
ಮಾಡುವ ಶತ್ರುಗಳ ಸಂಹರಾಮಾಡಲೆಂದು, ಎಲ್ಲರನ್ನೂ ರಕ್ಷಿಸಲೆಂದು ನಾವು ಅರ್ಚಿಸೋಣ. ಜೈ ಭುವನೇಶ್ವರಿ! ಜೈ ದುರ್ಗಾ!
(ಲೇಖಕರು ಐರ್ಲೆಂಡ್ ರಾಮಕೃಷ್ಣ ವೇದಾಂತ ಕೇಂದ್ರದ ಅಧ್ಯಕ್ಷರು)