ಸುಖ ಸಮೃದ್ಧಿ ಕರುಣಿಸುವ ಶರನ್ನವರಾತ್ರಿ

Navaratri 2
Published on

ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳೆಂಬ ಅರ್ಥವೂ ಇದೆ. ಪಾಡ್ಯದಿಂದ ಆರಂಭಿಸಿ ನವಮಿಯವರೆಗೆ ಒಂಬತ್ತು ರಾತ್ರಿಗಳ ಉತ್ಸವವು ನಡೆದು ದಶಮಿಯ ದಿನ ಮುಗಿಯುವುದರಿಂದ ಅದು ಅನ್ವರ್ಥವಾದ ಹೆಸರು. ಒಂಬತ್ತು ದಿನಗಳವರೆಗೆ ದೇವಿಯ ಪೂಜೆಯಂತೆ ಉಪವಾಸ ವ್ರತವು ಸಹ ಮುಖ್ಯವಾದುದು.

| ಡಾ. ಹಿತ್ಲಳ್ಳಿ ಸೂರ್ಯನಾರಾಯಣ ನಾಗೇಂದ್ರ ಭಟ್ಟ

ಹೆಸರೇ ಹೇಳುವಂತೆ ನವರಾತ್ರಿ ಎಂದರೆ ನವೀನತೆಯನ್ನು ಹೊರಸೂಸುವ ರಾತ್ರಿಯಾಗಿದ್ದು ಇದು ವರ್ಷದಲ್ಲಿ ಎರಡು ಸಾರೆ ಬರುತ್ತದೆ. ಒಂದು ಚೈತ್ರ ಮಾಸದ ಯುಗಾದಿಯಂದು ಬಂದರೆ, ಇನ್ನೊಂದು ಆಶ್ವಯುಜ ಮಾಸದ ಮೊದಲ ದಿನ ಬರುತ್ತದೆ. ಮೊದಲಿನದು ವಸಂತ ನವರಾತ್ರಿಯಾದರೆ, ಇನ್ನೊಂದು ಶರನ್ನವರಾತ್ರಿ. ಒಂದು ಸಂವತ್ಸರದಲ್ಲಿ ಎರಡು ಸಮಾನ ಭಾಗ ಮಾಡಿದರೆ, ಪೂರ್ವಾರ್ಧ ಆರಂಭದಲ್ಲಿ ಒಂದು ನವರಾತ್ರಿಯಾದರೆ ಉತ್ತರಾರ್ಧದ ಆರಂಭದಲ್ಲಿ ಇನ್ನೊಂದು ನವರಾತ್ರಿ. ಇವೆರಡರ ಉಲ್ಲೇಖವೂ ಸಪ್ತಶತಿಯ ಭಗವತೀ ವಾಕ್ಯದಲ್ಲಿದೆ. ನವರಾತ್ರಿಯ ಸಮಯದಲ್ಲಿ ಜಗನ್ಮಾತೆಯನ್ನು ಸ್ತುತಿಸಿದರೆ, ಎಲ್ಲ ತೊಂದರೆಗಳಿಂದ ಮುಕ್ತರಾಗಬಹುದು ಹಾಗೂ ಎಲ್ಲ ಸುಖ ಸಮೃದ್ಧಿಗಳನ್ನು ಪಡೆಯಬಹುದು.

ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳೆಂಬ ಅರ್ಥವೂ ಇದೆ. ಪಾಡ್ಯದಿಂದ ಆರಂಭಿಸಿ ನವಮಿಯವರೆಗೆ ಒಂಬತ್ತು ರಾತ್ರಿಗಳ ಉತ್ಸವವು ನಡೆದು ದಶಮಿಯ ದಿನ ಮುಗಿಯುವುದರಿಂದ ಅದು ಅನ್ವರ್ಥವಾದ ಹೆಸರು. ಪಾಡ್ಯ ಎಂದರೆ, ಅಮಾವಾಸ್ಯೆಯ ಶೇಷವಾಗುವಂತಿಲ್ಲ ಎಂದು ದೇವೀಪುರಾಣದಲ್ಲಿದೆ. ಅಮಾವಾಸ್ಯೆಯ ರಾತ್ರಿಯೇ ಪಾಡ್ಯ ಇದೆ ಎಂಬ ಕಾರಣಕ್ಕೆ ಅಂದೇ ನವರಾತ್ರಿಯನ್ನು ಆರಂಭಿಸಕೂಡದು. ಪಾಡ್ಯ ಮತ್ತು ಬಿದಿಗೆಯು ಸೇರಿದ್ದರೆ, ಅದು ಶುಭಾವಹವಾಗುತ್ತದೆ. ಈ ಕಾರಣದಿಂದ ನವರಾತ್ರಿಯನ್ನು ಅಮಾವಾಸ್ಯೆಯ ಮರುದಿನವೇ ಆರಂಭಿಸಬೇಕಾಗುತ್ತದೆ.

ಒಂಬತ್ತು ದಿನಗಳವರೆಗೆ ದೇವಿಯ ಪೂಜೆಯಂತೆ ಉಪವಾಸ ವ್ರತವು ಮುಖ್ಯವಾದುದು. ಈ ಉಪವಾಸವು ಮೂರು ವಿಧವಾಗಿರುತ್ತದೆ. ಒಂದು, ಊಟವನ್ನೇ ಮಾಡದಿರುವುದು. ಇನ್ನೊಂದು, ದಿನದಲ್ಲಿ ಒಮ್ಮೆ ಮಾತ್ರ ಊಟ ಮಾಡುವುದು. ಮತ್ತೊಂದು, ರಾತ್ರಿಯಲ್ಲಿ ಊಟ ಮಾಡುವುದು. ಊಟಕ್ಕಾಗಿ ಪ್ರತಿದಿನವೂ ಕುಮಾರಿಯರನ್ನು ಆಮಂತ್ರಿಸಬೇಕಲ್ಲದೆ, ಅವರನ್ನು ವಸ್ತ್ರ ಅಲಂಕಾರ ದಕ್ಷಿಣೆಗಳಿಂದ ಪುರಸ್ಕರಿಸಬೇಕೆಂದಿದೆ. ಇದರಿಂದ ನವರಾತ್ರಿಯು ಸ್ತ್ರೀಪ್ರಧಾನವಾದ ಹಬ್ಬವೆನ್ನಬಹುದು.

ಕನ್ಯೆಯ ಪೂಜೆಯಲ್ಲಿ ಒಂದು ವಿಶೇಷವಿದೆ. ನವರಾತ್ರಿಯ ಒಂದೊಂದು ದಿನವೂ ಕನ್ಯೆಯ ಸಂಖ್ಯೆಯನ್ನು ಹೆಚ್ಚಿಸುವುದು ಏಕವೃದ್ಧಿಯೆನ್ನಲಾಗಿದೆ. ಸಂಪನ್ನತೆಯ ಶಕ್ತಿಯನ್ನು ಅನುಸರಿಸಿ ಅದನ್ನು ದುಪ್ಪಟ್ಟು ಮಾಡಬಹುದು ಅಥವಾ ಮೂರು ಪಟ್ಟು ಮಾಡಬಹುದು. ಪ್ರತಿದಿನವೂ ಒಂಬತ್ತು ಕನ್ಯೆಯರನ್ನೂ ಪೂಜಿಸಬಹುದು. ಆ ಆದರೋಪಚಾರವನ್ನು ಅನುಸರಿಸಿ ಫಲದಲ್ಲಿ ವೃದ್ಧಿಯನ್ನೂ ಹೇಳಿದೆ. ಒಂಬತ್ತು ಕನ್ಯೆಯರನ್ನು ಪ್ರತಿದಿನ ಪೂಜಿಸಿದರೆ, ಭೂಲಾಭವಾಗುವುದು. ಎರಡು ಪಟ್ಟು ಪೂಜಿಸಿದರೆ ಅಷ್ಟೈಶ್ವರ್ಯಗಳುಂಟಾಗುವವು. ಏಕೋತ್ತರ ವೃದ್ಧಿಯಿಂದ ಕ್ಷೇಮವುಂಟಾಗುವುದು.

ಹೀಗೆ ವಿಧಿಯಿರುವಂತೆ ನಿಷೇಧವೂ ಇದೆ. ಒಂದು ವರ್ಷದ ಕುವರಿಯನ್ನು ಪೂಜಿಸಬಾರದು. ಏಕೆಂದರೆ ಆ ಶಿಶುವಿಗೆ ಪೂಜೆಯು ತೊಂದರೆಯನ್ನು ಉಂಟುಮಾಡಬಹುದು. ಶ್ರೀಗಂಧ, ಹೂಗಳು ಮುಂತಾದ ಪೂಜೆಯು ಸಂತಸವನ್ನು ಹೆಚ್ಚಿಸುವ ಬದಲಾಗಿ ಕಿರಿಕಿರಿ ಉಂಟುಮಾಡಬಹುದು. ಅಲ್ಲದೆ ಆ ಮಗು ಊಟ ಮಾಡಲು ನಿರಾಕರಿಸಬಹುದು. ಎರಡು ವರ್ಷದಿಂದ ಆರಂಭಿಸಿ ಹತ್ತು ವರ್ಷದವರೆಗಿನ ಆರೋಗ್ಯವಾಗಿರುವ ಕನ್ಯೆಯನ್ನು ಸಂತೋಷವಾಗಿರುವಂತೆ ಪೂಜಿಸಬೇಕು. ಅವರಿಗೆ ಕ್ರಮವಾಗಿ ಹೆಸರುಗಳು ಹೀಗಿವೆ - ಕುಮಾರಿಕಾ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಳೀ, ಚಂಡಿಕಾ, ಶಾಂಭವೀ ದುರ್ಗಾ ಮತ್ತು ಸುಭದ್ರಾ. ಎಲ್ಲರೂ ತಮ್ಮ ಸಮುದಾಯದ ಕನ್ಯೆಯನ್ನು ಪೂಜಿಸುವುದು ಶ್ರೇಯಸ್ಕರವಾದುದು. ಒಂದುವೇಳೆ ಅದು ಅಸಂಭವವಾದರೆ, ಬೇರೆ ಸಮುದಾಯದ ಕನ್ಯೆಯನ್ನಾದರೂ ಪೂಜಿಸಬೇಕು.

ನವರಾತ್ರಿಯನ್ನು ಎಲ್ಲ ಸ್ಥಾನಗಳಲ್ಲಿಯೂ ಎಲ್ಲ ಪೇಟೆಗಳಲ್ಲಿಯೂ ಜಾತಿ-ಮತಗಳನ್ನು ಮೀರಿ ಎಲ್ಲರೂ ಸ್ನಾನಾದಿಗಳನ್ನು ಮಾಡಿ ಒಂದೆಡೆ ಸೇರಿ ಭಕ್ತಿಯಿಂದ ಆಚರಿಸಬೇಕೆಂದು ಪುರಾಣದಲ್ಲಿ ಹೇಳಿದೆ. ದಿನದಲ್ಲಿ ಮೂರು ಬಾರಿ ದೇವಿಯನ್ನು ಪೂಜಿಸಬೇಕಲ್ಲದೆ ಪ್ರತಿದಿನವೂ ಸಸ್ಯಾಹಾರಿಗಳು ಅನ್ನದ ಬಲಿಯನ್ನು ಕೊಡಬೇಕು. ಅದರಂತೆ ಮಾಂಸಾಹಾರಿಗಳು ಮಾಂಸದ ಬಲಿಯನ್ನು ಕೊಡುವುದುಂಟು. ಆದರೆ ಶಾಸ್ತ್ರದಲ್ಲಿ ಹೇಳಿದಂತೆ ಮಾಂಸದ ಬದಲಾಗಿ ಕುಂಬಳಕಾಯಿಯ ಬಲಿಯನ್ನು ಕೊಡುವುದು ರೂಢಿಯಲ್ಲಿದೆ.

ನವರಾತ್ರಿಯ ದಿನ ಸಂಖ್ಯೆಯಲ್ಲಿ ಕೆಲವೊಮ್ಮೆ ವ್ಯತ್ಯಾಸವಾಗುವುದುಂಟು. ಕೆಲವೊಮ್ಮೆ ತಿಥಿಯ ವೃದ್ಧಿ ಅಥವಾ ಹ್ರಾಸವಾಗುವುದೂ ಇದೆ. ಅಂತಹ ಸಂದರ್ಭದಲ್ಲಿ ನವರಾತ್ರಿಯ ಬದಲಾಗಿ ದಶರಾತ್ರಿಯೋ ಅಷ್ಟರಾತ್ರಿಯೋ ಆಗಬಹುದು. ತಿಥಿಯ ವೃದ್ಧಿಯಾದರೆ ಹೆಚ್ಚು ಫಲವನ್ನು ನಿರೀಕ್ಷಿಸಬಹುದು. ಹಾಗೆಂದು ತಿಥಿಯ ಕ್ಷಯವಾದರೆ ಕಡಿಮೆ ಫಲವೇನೂ ಬರುವುದಿಲ್ಲ. ಆದರೆ ಆ ಕಾರಣದಿಂದಾಗಿ ನವರಾತ್ರಿ ಎಂಬ ಅಭಿಧಾನವು ಬದಲಾಗುವುದಿಲ್ಲ.

ಅಲ್ಲಿ ಶ್ರೀದೇವಿಯ ಭಕ್ತಿಯೇ ಮುಖ್ಯವಾದುದು. ಅದು ಪೂರ್ಣವಾಗಿದ್ದರೆ, ಸಂಖ್ಯೆಯ ಬದಲಾವಣೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ನವರಾತ್ರಿಯಲ್ಲಿ ವೇದಪಾರಾಯಣವನ್ನೂ ಚಂಡೀ ಪಾರಾಯಣವನ್ನೂ ಮಾಡಬೇಕು ಅಥವಾ ಮಾಡಿಸಬೇಕು. ಇಲ್ಲಿಯೂ ಏಕೋತ್ತರ ವೃದ್ಧಿಯನ್ನು ಹೇಳಿದೆ. ಕುದುರೆಯಿರುವವರು ಅದನ್ನು ಪ್ರತಿದಿನವೂ ಪೂಜಿಸಬೇಕು. ಅದರಂತೆ ಆನೆಯಿರುವವರು ಆನೆಯನ್ನು ಪೂಜಿಸಬೇಕು. ಸಾಮಾನ್ಯವಾಗಿ ಅರಮನೆಯಲ್ಲಿ ಅದು ಇಂದಿಗೂ ನಡೆಯುತ್ತದೆ.

ಮೂಲಾ ನಕ್ಷತ್ರದಲ್ಲಿ ಸರಸ್ವತಿಯನ್ನು ಪೂಜೆಗಾಗಿ ಸ್ಥಾಪಿಸಬೇಕು. ಅದಕ್ಕಾಗಿ ಪುಸ್ತಕ ಸ್ಥಾಪನೆಯ ರೂಢಿಯಿದೆ. ಪೂರ್ವಾಷಾಢದಲ್ಲಿ ಪೂಜಿಸಬೇಕು. ಉತ್ತರಾಷಾಢದಲ್ಲಿ ಬಲಿಯನ್ನು ಕೊಡಬೇಕು. ಶ್ರವಣಾ ನಕ್ಷತ್ರವಿರುವಾಗ ವಿಸರ್ಜಿಸಬೇಕು. ಹೀಗೆ ನವರಾತ್ರಿಯನ್ನು ಆಚರಿಸಲು ಶಕ್ತಿಯಿಲ್ಲದಿದ್ದರೆ ಮೂರು ದಿನಗಳಾಗಲಿ, ಕೊನೆಗೆ ಒಂದು ದಿನವಾಗಲಿ ವ್ರತವನ್ನು ಮಾಡಬೇಕು. ದಶಮಿಯಂದು ಶಮೀಪೂಜೆ ಮಾಡಬೇಕು. ಹೀಗೆ ನವರಾತ್ರಿಯನ್ನು ಮಾಡಿದರೆ ಸಮಸ್ತ ಸಮೃದ್ಧಿಯೂ ಲಭಿಸುವುದು.

ನವರಾತ್ರಿಯ ಮೊದಲ ದಿನ ಯೋಗನಿದ್ರೆಯನ್ನೂ, ಎರಡನೆಯ ದಿನ ದೇವಜಾತೆಯನ್ನೂ, ಮೂರನೆಯ ದಿನ ಮಹಿಷಮರ್ದಿನಿಯನ್ನೂ, ನಾಲ್ಕನೆಯ ದಿನ ಶೈಲಜೆಯನ್ನೂ, ಐದನೆಯ ದಿನ ಧೂಮ್ರಘಾತಿನಿಯನ್ನೂ, ಆರನೆಯ ದಿನ ಚಂಡ-ಮುಂಡಘಾತಿನಿಯನ್ನೂ, ಏಳನೆಯ ದಿನ ರಕ್ತಬೀಜಘಾತಿನಿಯನ್ನೂ, ಎಂಟನೆಯ ದಿನ ನಿಶುಂಭಘಾತಿನಿಯನ್ನೂ, ಒಂಬತ್ತನೆಯ ದಿನ ಶುಂಭಘಾತಿನಿಯನ್ನೂ ಪೂಜಿಸುತ್ತಾರೆ. ಈ ಅವತಾರಗಳ ಕಥೆಗಳು ದುರ್ಗಾಸಪ್ತಶತಿಯಲ್ಲಿವೆ.

ಇದರಂತೆ ಕ್ರಮವಾಗಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರೀ, ಸಿದ್ಧಿದಾತ್ರಿ - ಎಂದೂ ಪೂಜಿಸುವುದುಂಟು. ಅಲ್ಲದೆ, ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ ಎಂಬ ಸಪ್ತ ಮಾತೃಕೆಯರನ್ನೂ ಪೂಜಿಸಬಹುದು. ಶಾರದೆಯ ಸ್ಥಾಪನೆಯಾದ ಮೇಲೆ ದಶಮಿಯವರೆಗೂ ವಿದ್ಯೆ-ಬುದ್ಧಿಗಳ ಅಭಿವೃದ್ಧಿಗಾಗಿ ಎಲ್ಲರೂ ಸರಸ್ವತಿ ಪೂಜೆಯನ್ನು ಮಾಡುವುದು ರೂಢಿಯಲ್ಲಿದೆ. ಆಯುಧಪೂಜೆ, ವಾಹನ ಪೂಜೆ ಮುಂತಾದವುಗಳೂ ನಡೆಯುತ್ತವೆ. ಈ ವರ್ಷ ಇವೆಲ್ಲವುಗಳನ್ನೂ ಪ್ರತ್ಯೇಕ ವಾಗಿಯೇ ಆಚರಿಸಿ ಜಗನ್ಮಾತೆಯ ಅನುಗ್ರಹವನ್ನು ಸಂಪಾದಿಸಬಹುದು.

(ಲೇಖಕರು ಹಿರಿಯ ವಿದ್ವಾಂಸರು, ನಿವೃತ್ತ ಪ್ರಾಧ್ಯಾಪಕರು, ಸಂಶೋಧಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net