

ಇಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಏರುತ್ತಿರುವ ತಾಪಮಾನ, ಇಂಗಾಲ ಹೊರಸುಸುವಿಕೆಯನ್ನು ಶೂನ್ಯವಾಗಿಸುವ ಗುರಿ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಪರಿಸರದ ಬಹು ಆಯಾಮಗಳ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ನಮ್ಮ ಬದುಕನ್ನು ಪರಿಸರಸ್ನೇಹಿಯಾಗಿಸುವ ಮತ್ತು ನಮ್ಮ ಮಕ್ಕಳನ್ನು ಈ ನಿಟ್ಟಿನಲ್ಲಿ ಅಣಿಯಾಗಿಸುವ ಪ್ರಯತ್ನಗಳು ಎಷ್ಟರಮಟ್ಟಿಗೆ ನಡೆಯುತ್ತಿವೆ ಎಂಬುದರ ಪ್ರಾಮಾಣಿಕ ಅವಲೋಕನವೂ ಪರಿಸರ ದಿನದ ಪ್ರಯುಕ್ತ ನಡೆಸುವುದು ಸೂಕ್ತ.
ಪರಿಸರದ ಬಗ್ಗೆ ನಮ್ಮ ಶಿಕ್ಷಣ ವ್ಯವಸ್ಥೆ ಹೇಳಿಕೊಡುತ್ತಿಲ್ಲ ಅಂತೇನಿಲ್ಲ. ಒಂದನೇ ತರಗತಿಯಿಂದಲೇ ‘ಪರಿಸರ ವಿಜ್ಞಾನ’ವನ್ನು ಒಂದು ವಿಷಯವನ್ನಾಗಿ ಬೋಧಿಸಲಾಗುತ್ತಿದೆ. ಈ ವ್ಯವಸ್ಥೆ ಕೆಲ ದಶಕಗಳಿಂದ ಜಾರಿಯಲ್ಲಿದೆ. ಒಂದೆಡೆ, ಪರಿಸರಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಆದರೆ, ಪ್ಲಾಸ್ಟಿಕ್ನ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ವೈರುಧ್ಯ ಏಕೆ ಎಂಬುದು ಯೋಚಿಸಬೇಕಾದ ವಿಷಯ. ಶಿಕ್ಷಣದಲ್ಲಿ ಪಾಠವಾಗಿ ಹೇಳಿಕೊಡುತ್ತಿರುವುದಕ್ಕೂ, ಜೀವನದಲ್ಲಿ ಅನುಸರಿಸಲಾಗುತ್ತಿರುವ ಸಂಗತಿಗಳಿಗೂ ಅಂತರ ಗಮನಾರ್ಹವಾಗಿ ಹೆಚ್ಚಾಗುತ್ತಲೇ ಸಾಗಿರುವುದು ತುಂಬ ಸ್ಪಷ್ಟ ಮತ್ತು ಇದು ಸಮಸ್ಯೆಯ ಮೂಲ ಕೂಡ ಹೌದು.
ಕಳೆದ 27 ವರ್ಷಗಳಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಅದಮ್ಯ ಚೇತನದ ಬಿಸಿಯೂಟ ಯೋಜನೆ ಪ್ರಯುಕ್ತ ಶಾಲೆಮಕ್ಕಳೊಂದಿಗಿನ ಒಡನಾಟದ ಜತೆ ಈಗ ಪಶ್ಚಿಮ ಬಂಗಾಳದ ಶಿಬಪುರ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೈನ್ಸ್ ಆಂಡ್ ಟೆಕ್ನಾಲಜಿಯ (ಐಐಇಎಸ್ಟಿ) ಅಧ್ಯಕ್ಷೆಯಾಗಿ, ಐಐಟಿ ರುಡಕಿಯ (ಉತ್ತರಾಖಂಡ) ಬೋರ್ಡ್ ಮೆಂಬರ್ ಆಗಿ ಮತ್ತು ಹೆಚ್ಚುವರಿ ಹೊಣೆಗಾರಿಕೆಯಾಗಿ ಎನ್ಐಟಿ ಕುರುಕ್ಷೇತ್ರದ (ಹರಿಯಾಣ) ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತ ಉನ್ನತ ಶಿಕ್ಷಣವನ್ನು ಮತ್ತು ಪಿಎಚ್ಡಿ ಸಂಶೋಧನೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಶಿಕ್ಷಣದಲ್ಲಿ ಹೇಳಿ ಕೊಡುವದಕ್ಕೂ, ಜೀವನದಲ್ಲಿ ಅಳವಡಿಸಿ ಕೊಳ್ಳುವುದಕ್ಕೂ ಅಜಗಜಾಂತರವಿದೆ.
ಈ ಸಂದಿಗ್ಧ ಸ್ಥಿತಿ ಇಂದು ಶಿಕ್ಷಕರು ಮತ್ತು ಶಿಕ್ಷಣ ತಜ್ಞರಿಗೂ ಸವಾಲಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು ಶಾಲೆ ಅಥವಾ ಶಿಕ್ಷಣಕ್ರಮದಲ್ಲಿ ಹೇಳಿಕೊಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರಾ ಅಥವಾ ಬಾಹ್ಯ ಜೀವನದ ಸಂಗತಿಗಳನ್ನು ಅಳವಡಿಸಿಕೊಳ್ಳುತ್ತಾರಾ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ‘ಆಕ್ಟ್ ಲೋಕಲ್, ಥಿಂಕ್ ಗ್ಲೋಬಲ್’ ಎಂಬ ಆಶಯದಂತೆ ಸಣ್ಣ ಸಣ್ಣ ವಿಷಯಗಳನ್ನು ಗಮನಿಸಿ, ವೈವಿಧ್ಯತೆಯೇ ತುಂಬಿರುವ ಬದುಕಿನಲ್ಲಿ ಅದನ್ನು ಹೇಗೆ ಅಳವಡಿಸಬಹುದು ಎಂಬುದನ್ನು ಯೋಚಿಸಬೇಕಾಗಿದೆ.
ಮನದಟ್ಟಾಗುವಂತೆ ಹೇಳಿಕೊಡಬೇಕು: ಬದಲಾವಣೆ ಎಂಬುದು ಶಾಲೆಗಳಿಂದಲೂ, ಮನೆಗಳಿಂದಲೂ ಆರಂಭವಾಗಬೇಕು. ಮಗುವಿನ ಜೀವನಶೈಲಿಯಲ್ಲಿ ಬದಲಾವಣೆ ತರಬೇಕು. ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಶಾಲೆ ಮತ್ತು ಮನೆಗಳಲ್ಲಿ ಮುಕ್ತವಾಗಿ ಚರ್ಚೆ ನಡೆಯಬೇಕು. ನಮ್ಮ ಮನೆಯಲ್ಲಿನ ವಸ್ತುಗಳು, ದಿನಬಳಕೆಯ ಸಾಮಗ್ರಿಗಳ ಮೂಲಕವೇ ಮಕ್ಕಳಿಗೆ ಅರಿವು ಮೂಡಿಸಬೇಕು. ಇದಕ್ಕೆ ಸಂಬಂಧಿಸಿದ ಪ್ರಸಂಗವೊಂದು ಇಲ್ಲಿ ಹಂಚಿಕೊಳ್ಳಬೇಕು.
ನನ್ನ ಆರು ವರ್ಷದ ಮೊಮ್ಮಗ ‘ನಿಮ್ಮ ಬಳಿ ಇನ್ನೂ ಹೊಗೆ ಉಗುಳುವ ಡೀಸೆಲ್ ವಾಹನವೇ ಇದೆಯಾ ಅಥವಾ ಎಲೆಕ್ಟ್ರಿಕ್ ವಾಹನ ಇದೆಯಾ?’ ಎಂದು ಪರಿಚಿತರ ಬಳಿ ಪ್ರಶ್ನಿಸುತ್ತಾನೆ. ಅಂದರೆ, ಡೀಸೆಲ್, ಪೆಟ್ರೋಲ್ ವಾಹನ ಪರಿಸರಕ್ಕೆ ಮಾರಕ, ಎಲೆಕ್ಟ್ರಿಕ್ ವಾಹನ ಪರಿಸರಕ್ಕೆ ಪೂರಕ ಎಂಬುದನ್ನು ಆರು ವರ್ಷದ ಪೋರ ಅರಿತಿದ್ದಾನೆ ಎಂದರೆ ಅದಕ್ಕೆ ಕಾರಣ ಆತನ ತಂದೆ-ತಾಯಿ ಈ ವಿಷಯದ ಬಗ್ಗೆ ಅವನ ಜತೆ ರ್ಚಚಿಸಿರುವುದು ಮತ್ತು ಅರಿವು ಮೂಡಿಸಿರುವುದು. ಎಲ್ಲ ಮನೆಗಳಲ್ಲಿ ಇಂಥ ಸಂಗತಿಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಈ ವಿಷಯದಲ್ಲಿ ತಂದೆ-ತಾಯಿ ಪಾತ್ರ ತುಂಬ ಮುಖ್ಯ. ಪಾಕಶಾಲೆಯಿಂದ ಪಾಠಶಾಲೆಗೆ... ಎಂಬ ಸೂತ್ರ ಇಲ್ಲಿ ಅಳವಡಿಸಿಕೊಳ್ಳಬಹುದು.
ದಿನನಿತ್ಯದಲ್ಲಿ ಬಳಕೆಯಾಗುವ ವಸ್ತುಗಳು ಹೇಗೆ ತಯಾರಾಗುತ್ತವೆ, ನಮ್ಮವರೆಗೆ ಹೇಗೆ ತಲುಪುತ್ತವೆ, ಅವು ಪರಿಸರಕ್ಕೆ ಹಾನಿ ಮಾಡುತ್ತಿವೆಯೇ, ಹಾಗಾದರೆ ಇದರ ಬಳಕೆ ತಗ್ಗಿಸಲು, ಕ್ರಮೇಣ ನಿಲ್ಲಿಸಲು ಏನೆಲ್ಲ ಮಾಡಬಹುದು? ಇಂಥ ಸಣ್ಣ ಸಣ್ಣ ಸಂಗತಿಗಳನ್ನೇ ಮನದಟ್ಟಾಗಿ ಹೇಳಿಕೊಟ್ಟರೆ ಮಗುವಿನ ವ್ಯಕ್ತಿತ್ವವೇ ಬದಲಾಗುತ್ತದೆ. ಹಾಗಾಗಿ, ಶಾಲೆಗಳಲ್ಲೂ ಹೇಳಿಕೊಡುವ ವಿಧಾನ ಬದಲಾಗಬೇಕು ಮತ್ತು ಇನ್ನಷ್ಟು ಆಪ್ತವಾಗಬೇಕು. ಬೆಳಗ್ಗೆ ಎದ್ದಾಕ್ಷಣ ಹಲ್ಲು ಉಜ್ಜಲು ಬಳಸುವ ಪೇಸ್ಟ್ ಯಾವೆಲ್ಲ ರಾಸಾಯನಿಕ ಹೊಂದಿದೆ, ಬ್ರಶ್ನಲ್ಲಿ ಇರುವ ಪ್ಲಾಸ್ಟಿಕ್ ಅಂಶಗಳು ಹೀಗೆ ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತ ಹೋದರೆ, ಆ ಕುರಿತಾದ ಅರಿವು ಜೀವನಶೈಲಿಯನ್ನೇ ಬದಲಿಸಬಲ್ಲದು. ಮುಖ್ಯವಾಗಿ, ನೀರು. ಬ್ರಶ್ ಮಾಡುವಾಗ, ಕೈ, ಮುಖ ತೊಳೆಯುವಾಗ ನಲ್ಲಿ ನೀರನ್ನು ಆನ್ನಲ್ಲೇ ಇಟ್ಟು, ನೀರನ್ನು ಹರಿಸುವ, ವ್ಯರ್ಥ ಮಾಡುವ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ನೀರನ್ನು ಯಾರಿಂದಲೂ ಉತ್ಪಾದಿಸಲು ಸಾಧ್ಯವಿಲ್ಲ. ನೀರು ನಮಗೆ ದೇವರು ಕೊಟ್ಟ ಕೊಡುಗೆ. ಹೀಗಿರುವಾಗ ನೀರನ್ನು ಪೋಲು ಮಾಡುವ ಹಕ್ಕು ನಮಗಿಲ್ಲ. ಹಾಗೆ ಮಾಡಿದರೆ ಅಕ್ಷಮ್ಯ ಅಪರಾಧ. ನಗರಪ್ರದೇಶಗಳಲ್ಲೇನೋ ಮನೆ-ಮನೆಗೂ ನಲ್ಲಿ ಮೂಲಕ ನೀರು ಬರುತ್ತದೆ. ಆದರೆ, ಹಳ್ಳಿಗಳಲ್ಲಿ ಇಂದಿಗೂ ನೀರು ತರಲು ಸಾಕಷ್ಟು ದೂರ ಕ್ರಮಿಸಬೇಕಾಗುತ್ತದೆ.
ಹೀಗಿರುವಾಗ, ನಮ್ಮ ಮನೆಗೆ ನೀರು ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ, ಎಷ್ಟು ದೂರದಿಂದ ಬರುತ್ತದೆ, ಜಲಮೂಲಗಳು ಯಾವವು, ಅವುಗಳ ಸ್ಥಿತಿ ಹೇಗಿದೆ, ಬ್ರಶ್ ಮಾಡಿದ ರಾಸಾಯನಿಕಯುಕ್ತ ನೀರು ಹೋಗಿ ಎಲ್ಲಿ ಸೇರುತ್ತದೆ, ಅದು ವಾತಾವರಣವನ್ನು ಎಷ್ಟು ಮಲೀನಗೊಳಿಸುತ್ತದೆ ಎಂಬುದನ್ನೆಲ್ಲ ಮಕ್ಕಳಿಗೆ ಹೇಳಿಕೊಟ್ಟರೆ, ಮರುದಿನದಿಂದ ಅವರು ಪೇಸ್ಟ್ ಬಳಕೆ, ನೀರಿನ ಬಳಕೆ ತಗ್ಗಿಸುತ್ತಾರೆ. ಅಂದರೆ, ಜಾಗೃತಿ ಎಂಬುದು ಮಕ್ಕಳ ಮನಸ್ಸಿನಲ್ಲಿ ಮೂಡಿದರೆ ಅವರ ವ್ಯಕ್ತಿತ್ವ ಸಕಾರಾತ್ಮಕವಾಗಿ ಬದಲಾಗುತ್ತದೆ. ಸರಿ ಯಾವುದು, ತಪು್ಪ ಯಾವುದು ಎಂಬುದರ ಬಗ್ಗೆ ಸ್ಪಷ್ಟತೆ ಮೂಡುತ್ತದೆ. ಮುಂದಿನ ಹೆಜ್ಜೆಯಾಗಿ ಮನೆಗಳು ಶೂನ್ಯತ್ಯಾಜ್ಯವಾಗಿ ಮಾರ್ಪಡಬೇಕು. ಮನೆಗಳು ಶೂನ್ಯತ್ಯಾಜ್ಯವಾದರೆ ಕಸದ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಬಹುದು. ಹಾಗೆಯೇ, ಹೊಗೆ ಉಗುಳುವ ವಾಹನವನ್ನು ತ್ಯಜಿಸಿ ಎಲೆಕ್ಟ್ರಿಕ್ ವಾಹನದ ಬಳಕೆ ಹೆಚ್ಚಿಸಬೇಕು. ಮೀರಮೀರ ಮಿಂಚುವ ಪಾಲಿಸ್ಟರ್ ಬಟ್ಟೆಗಿಂತ ಸ್ವಲ್ಪ ಮಂಕಾಗಿರುವ ಕಾಟನ್ ಬಟ್ಟೆಯ ಬಳಕೆ ಹೆಚ್ಚಬೇಕು.
ಅಂದರೆ ಯಾವುದೇ ವಸ್ತು ಅಥವಾ ಉತ್ಪನ್ನದ ಹಿನ್ನೆಲೆಯಲ್ಲಿನ ವಿಷಯ, ಅದು ಸೃಷ್ಟಿಸುವ ಅನಾಹುತಗಳು ಗೊತ್ತಾದಾಗ ಬದಲಾವಣೆ ಸಾಧ್ಯವಾಗುತ್ತದೆ. ಆದರೆ, ವಿಪರ್ಯಾಸವೆಂದರೆ, ನಮ್ಮ ಶಿಕ್ಷಣ ಕ್ರಮದಲ್ಲಾಗಲಿ, ಮನೆಯಲ್ಲಾಗಲಿ ಇಂಥ ಸಂಗತಿಗಳ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ. ಹೀಗಿರುವಾಗ ಮಕ್ಕಳಲ್ಲಿ ಬದಲಾವಣೆ ತರುವುದು ಹೇಗೆ? ಇದು ಬರೀ ಮಕ್ಕಳಿಗೆ ಸೀಮಿತವಾದ ವಿಷಯವಲ್ಲ. ದೊಡ್ಡವರಿಗೂ ಅನ್ವಯವಾಗುತ್ತದೆ. ಏಕೆಂದರೆ, ‘ಪರಿಸರ ಸಂರಕ್ಷಣೆ’ ಎಂಬುದು ಭಾಷಣದ ಸರಕಲ್ಲ ಅಥವಾ ಯಾರಿಗೋ ಉಪದೇಶ ಮಾಡುವ ಸಿದ್ಧಾಂತವಲ್ಲ. ಈಗಾಗಲೇ ಪರಿಸರದ ವಿಷಯದಲ್ಲಿ ಅಕ್ಷಮ್ಯ ಅಪರಾಧಗಳನ್ನು ಮಾಡಿದ್ದೇವೆ. ಇನ್ನಷ್ಟು ತಪು್ಪಗಳು ನಮ್ಮಿಂದ ಆಗಬಾರದು ಎಂಬ ಅತ್ಯಂತ ಎಚ್ಚರಿಕೆಯ ಹೊಣೆಗಾರಿಕೆಯನ್ನು ನಿಭಾಯಿಸಲು ಇದು ಸರಿಯಾದ ಸಮಯ. ನಮ್ಮ ಜೀವನಶೈಲಿಯು ನಿನ್ನೆಗಿಂತ ಇಂದು ನಿಸರ್ಗಕ್ಕೆ ಪೂರಕವಾಗಿದೆಯೆ ಎಂಬುದನ್ನು ಅವಲೋಕಿಸಿಕೊಂಡು ಒಂದು ಹೆಜ್ಜೆ ಮುಂದೆ ಇಟ್ಟರೂ ಅದು ಸಾರ್ಥಕ ಕ್ರಮವೇ. ಇದರಿಂದ ಪರಿಸರದಲ್ಲಿ ದೊಡ್ಡ ಬದಲಾವಣೆ ಆಗುತ್ತದೆಯೋ ಇಲ್ಲವೋ ಬೇರೆ ಮಾತು. ಆದರೆ, ಪರಿಸರಕ್ಕೆ ಅಪಚಾರ ಮಾಡಿ ಬದುಕುತ್ತಿಲ್ಲ, ನಿಸರ್ಗಸ್ನೇಹಿ ಜೀವನಶೈಲಿ ನಮ್ಮದಾಗುತ್ತಿದೆ ಎಂಬ ಸಮಾಧಾನದ ಭಾವವೇ ನಮಗೆ ನೆಮ್ಮದಿಯ ನಿದ್ರೆಯನ್ನು ನೀಡಬಲ್ಲದು, ನಾಳೆಗಳ ಭವಿಷ್ಯವನ್ನು ಉತ್ತಮಗೊಳಿಸಬಲ್ಲದು. ಅಲ್ಲವೇ? ಹಾಗಾಗಿ, ಪರಿಸರದ ಬಗ್ಗೆ ಬರೀ ಕಳವಳ ಪಡುವುದಕ್ಕಿಂತ ಅಥವಾ ಈಗಿನ ದುಸ್ಥಿತಿಗೆ ಯಾರತ್ತಲೋ ಬೊಟ್ಟು ಮಾಡುವುದಕ್ಕಿಂತ ಬದಲಾವಣೆಯ ಸಾರ್ಥಕ ಪಯಣ ನಮ್ಮಿಂದ, ನಮ್ಮ ಮನೆಯಿಂದ ಪ್ರಾರಂಭವಾಗಲಿ. ಈ ನಿಟ್ಟಿನಲ್ಲಿ ಈ ಪರಿಸರ ದಿನ ಸ್ಪೂರ್ತಿ ನೀಡಲಿ ಎಂದು ಆಶಿಸುತ್ತೇನೆ.
ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರು ಯಾವುದೇ ಕಾರ್ಯಕ್ರಮ, ಯೋಜನೆಯನ್ನು ರೂಪಿಸುವಾಗ ಪರಿಸರದ ಕಾಳಜಿಯನ್ನು ಮರೆಯುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ಕ್ರಾಂತಿಕಾರಿ ಬದಲಾವಣೆ ತರುತ್ತದೆ ಮತ್ತು ಇದು ಪರಿಸರಕ್ಕೂ ಪೂರಕ ಎಂಬುದನ್ನು ಬಹುಹಿಂದೆಯೇ ಸ್ಪಷ್ಟವಾಗಿ ಪ್ರತಿಪಾದಿಸಿ, ಮೆಟ್ರೋ ಯೋಜನೆ ಜಾರಿ ನಿಟ್ಟಿನಲ್ಲಿ ಶ್ರಮ ಹಾಕಿದರು. ದೆಹಲಿಗೆ ಹೋಗಿಳಿದಾಗ ವಿಮಾನ ನಿಲ್ದಾಣದಿಂದ ಮನೆಗೆ ಮೆಟ್ರೋ ಮೂಲಕವೇ ಪ್ರಯಾಣಿಸುತ್ತಿದ್ದರು. ಅಲ್ಲದೆ, ಅದಮ್ಯ ಚೇತನ ಸಂಸ್ಥೆ 2006ರಲ್ಲಿಯೇ ಹಸಿರು ರಕ್ಷಾಬಂಧನವನ್ನು ಪರಿಚಯಿಸಿತು. ‘ಹಸಿರು ಭಾನುವಾರ’ಗಳ ಮೂಲಕ ಗಿಡಗಳ ನೆಡುವಿಕೆ ಹಲವು ವರ್ಷಗಳಿಂದ ನಡೆಯುತ್ತಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರರಾಜ್ಯದ ಹಲವು ನಗರಗಳಲ್ಲಿ ಪ್ಲೇಟ್ ಬ್ಯಾಂಕ್ ಸ್ಥಾಪಿಸುವ ಮೂಲಕ ಪ್ಲಾಸ್ಟಿಕ್ ಪರಿಕರಗಳ ಬಳಕೆಗೆ ಕಡಿವಾಣ ಹಾಕಲಾಗಿದೆ.