ಹಿಂದಿ ಸಿನಿಮಾಗಳಲ್ಲಿ ರಾಷ್ಟ್ರೀಯತೆ, ದೇಶಭಕ್ತಿ ಮೊರೆತ

Column F
Published on
ಕಳೆದ ಎರಡು ದಶಕಗಳಿಂದ, ರಾಷ್ಟ್ರೀಯತೆ ಮತ್ತು ದೇಶಭಕ್ತಿ ವಿಷಯವು ಭಾರತದ ಸಿನಿಮಾ ಜಗತ್ತನ್ನು ಬಹುತೇಕ ಹಿಡಿದಿಟ್ಟುಕೊಂಡಿದೆ ಎಂಬುದು ಅತಿಶಯೋಕ್ತಿಯೇನಲ್ಲ. 2001ರಿಂದ ಬಿಡುಗಡೆಯಾದ ಬಹುತೇಕ ಹಿಂದಿ ಚಲನಚಿತ್ರಗಳ ಕಥಾವಸ್ತು ಮತ್ತು ಪಾತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಅಂಶ ಹೊರಹೊಮ್ಮುತ್ತದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರವಂತೂ, ಚಿತ್ರ ಜಗತ್ತನ್ನು ಈ ವಿಷಯ ಮತ್ತಷ್ಟು ಆವರಿಸಿದೆ.

1999ರಲ್ಲಿ ವಾಜಪೇಯಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. 2001ರಲ್ಲಿ ಹಿಂದಿ ಚಲನಚಿತ್ರ ‘ಲಗಾನ್’ ಬಿಡುಗಡೆಯಾಯಿತು. ಈ ಚಲನಚಿತ್ರದಲ್ಲಿ, ಹಳ್ಳಿಯ ಹುಡುಗ ಭುವನ್- ಅಮೀರ್ ಖಾನ್-ಕ್ರಿಕೆಟ್ ಗಂಧಗಾಳಿಯೂ ಇಲ್ಲದ ಜನರ ತಂಡ ಕಟ್ಟಿ ಬಲಿಷ್ಠ ಬ್ರಿಟಿಷ್ ಕ್ರಿಕೆಟ್ ತಂಡವನ್ನು ಬಗ್ಗು ಬಡಿಯುತ್ತಾನೆ. ಈ ಚಿತ್ರವು ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಆಧರಿಸಿತ್ತು. ಜೊತೆಗೆ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಮರ್ಥವಾಗಿ ಪ್ರದರ್ಶಿಸಿತು ಕೂಡ.

ಭಾರತದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಕುರಿತಾದ ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಚಲನಚಿತ್ರವು 2002ರಲ್ಲಿ ಎನ್.ಡಿ.ಎ. ಸರ್ಕಾರದಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಬಿಡುಗಡೆಯಾಯಿತು. ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ತಳಹದಿಯ ಈ ಚಲನಚಿತ್ರವೂ ದೇಶವಾಸಿಗಳಲ್ಲಿ ಸಂಚಲನ ಉಂಟುಮಾಡಿತ್ತು.

ಅಜಯ್ ದೇವಗನ್ ಅಭಿನಯದ ಹಿಂದಿ ಚಲನಚಿತ್ರ ‘ಜಮೀನ್’ ಸಹ ದೇಶಭಕ್ತಿ ಮತ್ತು ರಾಷ್ಟ್ರೀಯತೆ ನೆಲೆಗಟ್ಟಿನಲ್ಲಿ ತಯಾರಾದ, 2003ರಲ್ಲಿ ತೆರೆಕಂಡ ಚಲನಚಿತ್ರ. ಅದು ಬಿಡುಗಡೆಯಾಗಿದ್ದೂ ಎನ್​ಡಿಎ ಆಡಳಿತಾವಧಿಯಲ್ಲೇ. ಇಸ್ಲಾಮಿಕ್ ಜಿಹಾದಿಗಳು ಕಂದಹಾರ್​ಗೆ ಐಸಿ 814 ವಿಮಾನವನ್ನು ಅಪಹರಣ ಮಾಡಿದ ಘಟನೆ ಚಲನಚಿತ್ರದ ಕಥಾವಸ್ತು. ನೈಜ ಘಟನೆಗಿಂತ ಭಿನ್ನವಾಗಿ, ನಾಯಕ ಭಯೋತ್ಪಾದಕರನ್ನು ಹೆಡೆಮುರಿಕಟ್ಟಿ, ಪ್ರಯಾಣಿಕರನ್ನು ಮತ್ತು ವಿಮಾನವನ್ನು ಕಂದಹಾರ್​ನಿಂದ ಸುರಕ್ಷಿತವಾಗಿ ದೇಶಕ್ಕೆ ತರುವ ಸುಖಾಂತ್ಯದ ಕಥೆ ಹೊಂದಿತ್ತು. ನೈಜ ಘಟನೆಯೂ ಹೀಗೆ ಆಗಬೇಕಿತ್ತು ಎಂಬ ಭಾವನೆಯನ್ನು ದೇಶವಾಸಿಗಳಲ್ಲಿ ಮೂಡಿಸಿತ್ತು. 2003ರಲ್ಲೇ ತೆರೆಕಂಡ ಮತ್ತೊಂದು ಹಿಂದಿ ಚಲನಚಿತ್ರ ‘ಗಂಗಾಜಲ್’ ಬಿಹಾರದಲ್ಲಿ ಭೂಗತ ಪಾತಕಿ ಮತ್ತು ಮಾಫಿಯಾಗಳ ವಿರುದ್ಧ ಪೊಲೀಸ್ ಹೋರಾಟದ ಕುರಿತಾಗಿತ್ತು; ಪ್ರಮುಖ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದರು.

ಗಲ್ಪ್ ಮೂಲದ ಇಸ್ಲಾಮಿಕ್ ಭಯೋತ್ಪಾದಕರ ಬೆಂಬಲಪಡೆದ ಭೂಗತ ಪಾತಕಿಗಳ ವಿರುದ್ಧ ಭಾರತದ ಹೋರಾಟದ ಕಥಾವಸ್ತುವಿನ ಹಿಂದಿ ಚಿತ್ರ ‘ಆನ್ - ಮೆನ್ ಅಟ್ ವರ್ಕ್’ 2004ರ ಆರಂಭದಲ್ಲಿ ತೆರೆಕಂಡಿತು. ಅಕ್ಷಯ್ ಕುಮಾರ್, ಶತ್ರುಘ್ನ ಸಿನ್ಹಾ, ಸುನಿಲ್ ಶೆಟ್ಟಿ ಅಭಿನಯದ ಚಿತ್ರ ರಾಷ್ಟ್ರೀಯತೆ, ದೇಶಭಕ್ತಿಯನ್ನು ಪ್ರಚುರಪಡಿಸಿತ್ತು.

ಕಾಕತಾಳೀಯವೋ ಎಂಬಂತೆ, 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬಂದಾಗಿನಿಂದ ಮತ್ತು 2014ರ ಆದಿಯವರೆಗೆ ಅದು ಆಡಳಿತದಲ್ಲಿದ್ದ ಕಾಲದಲ್ಲಿ ಬಾಲಿವುಡ್​ನಲ್ಲಾಗಲೀ ಅಥವಾ ಇತರ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳಲ್ಲಿ ದೇಶ ಪ್ರೇಮ, ರಾಷ್ಟ್ರೀಯತೆ ಅಷ್ಟಾಗಿ ಕಾಣಸಿಗಲಿಲ್ಲ. ಇದಕ್ಕೆ ಅಪವಾದ ವೆಂಬಂತೆ 2008ರಲ್ಲಿ ಬಿಡುಗಡೆಯಾದ, ನಾಸಿರುದ್ದೀನ್ ಷಾ ಅಭಿನಯದ ಹಿಂದಿ ಚಲನಚಿತ್ರ ‘ಎ ವೆನ್ಸ್​ಡೇ’ ದೇಶಪ್ರೇಮ, ರಾಷ್ಟ್ರೀಯತೆಯನ್ನು ಬಿಂಬಿಸಿತ್ತು. ಇದು ಭಯೋತ್ಪಾದನೆ, ಹಿಂಸಾಚಾರ ಮತ್ತು ಮುಗ್ಧ ನಾಗರಿಕರ ಹತ್ಯೆಯ ವಿರುದ್ಧ ಸಾಮಾನ್ಯ ಮನುಷ್ಯನ ಕ್ರೋಧ ಮತ್ತು ಕೋಪವನ್ನು ಅದ್ಭುತವಾಗಿ ಅಭಿವ್ಯಕ್ತಿಪಡಿಸಿತ್ತು.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹಿಂದಿ ಚಲನಚಿತ್ರಗಳಲ್ಲಿ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಅಭಿವ್ಯಕ್ತಿಪಡಿಸುವ ಪ್ರವೃತ್ತಿಯ ಪುನರಾರಂಭವಾಯಿತು. 2018ರಲ್ಲಿ ತೆರೆಕಂಡ, ಜಾನ್ ಅಬ್ರಹಾಮ್ ಅಭಿನಯದ ‘ಪರ ಮಾಣು’ ಹಿಟ್ ಆಯಿತು. 1998ರ ಮೇನಲ್ಲಿ ಪೋಖ್ರಾನ್​ನಲ್ಲಿ ನಡೆದ ಪರಮಾಣು ಪರೀಕ್ಷೆಯ ನಂತರ ಭಾರತದ ಸಾಮರ್ಥ್ಯವನ್ನು ಈ ಚಲನಚಿತ್ರ ಸಾರಿತ್ತು.

2019ರಲ್ಲಿ ದೇಶಪ್ರೇಮ, ದೇಶದ ಸಾಧನೆ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುವ ಅನೇಕ ಚಲನಚಿತ್ರಗಳು ತೆರೆ ಕಂಡವು. ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ (2019) ದೊಡ್ಡ ಯಶಸ್ಸನ್ನು ಕಂಡಿತು. ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಮೇಲೆ ಇಳಿಯುವಾಗ, ಚಲನಚಿತ್ರ ವೀಕ್ಷಿಸುತ್ತಿದ್ದ ಕೋಟ್ಯಂತರ ಜನರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು.

ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನದ ನೈಜ ಕಥೆಯಾಧಾರಿತ ‘ಮಣಿಕರ್ಣಿಕಾ’ 2019ರಲ್ಲಿ ತೆರೆಕಂಡು ಅದ್ಭುತ ಯಶಸ್ಸನ್ನು ಕಂಡಿತು. ಝಾನ್ಸಿ ರಾಣಿಯ ಧೈರ್ಯ, ಶೌರ್ಯವನ್ನು ಕಂಗನಾ ರಣಾವತ್ ಸಮರ್ಥವಾಗಿ ಬಿಂಬಿಸಿದ್ದರು.

ಬ್ರಿಟಿಷರ ವಿರುದ್ಧ ಹೋರಾಡಿ ಆಂಧ್ರಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿದ್ದ ಉಯ್ಯಲವಾಡ ನರಸಿಂಹ ರೆಡ್ಡಿ ಕುರಿತ ಸಿನಿಮಾ ‘ಸಾಯ್ ರಾ ನರಸಿಂಹ ರೆಡ್ಡಿ’ 2019ರಲ್ಲಿ ತೆರೆಗೆ ಬಂತು. ನರಸಿಂಹ ರೆಡ್ಡಿ ಪಾತ್ರವನ್ನು ಚಿರಂಜೀವಿ ನಿರ್ವಹಿಸಿದ್ದರು. ಇದು ಭಾರತದ ಸ್ವಾತಂತ್ರ್ಯ ಹೋರಾಟದ ಎಲೆಮರೆಯ ಕಾಯಿಯಂತಿದ್ದ ವೀರರನ್ನು ಬೆಳಕಿಗೆ ತರುವ ಪ್ರಯತ್ನವಾಗಿತ್ತು.

2019ರಲ್ಲಿ ಬಿಡುಗಡೆಯಾದ ‘ಕೇಸರಿ’ ಚಲನಚಿತ್ರ ರಾಷ್ಟ್ರೀಯತೆ ಮತ್ತು ದೇಶಪ್ರೇಮದ ಕಥೆಯನ್ನು ಹೊಂದಿರುವ ಮತ್ತೊಂದು ಹಿಂದಿ ಚಲನಚಿತ್ರವಾಗಿದ್ದು, ಇದರಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಭಾರತೀಯ ಸೇನೆಯ ಶಕ್ತಿ ಮತ್ತು ಪರಾಕ್ರಮ, ಅದರ ನಿಖರವಾದ ಯೋಜನೆ ಮತ್ತು ನಿರ್ದಿಷ್ಟ ಗುರಿಯ ಕಾರ್ಯಾಚರಣೆ ಇವೆಲ್ಲವೂ ಅದ್ಭುತವಾಗಿ ಮೂಡಿಬಂದ ‘ಉರಿ - ಸರ್ಜಿಕಲ್ ಸ್ಟ್ರೈಕ್’ ಚಲನಚಿತ್ರ, ಪುಲ್ವಾಮಾದಲ್ಲಿ 40 ಸಿಆರ್​ಪಿಎಫ್ ಯೋಧರು ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಬಳಿಕ, ಗಡಿಯ ಮತ್ತೊಂದು ಭಾಗದಲ್ಲಿ ಬೀಡುಬಿಟ್ಟ ಜೈಷ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯ ಪ್ರತಿರೂಪವಾಗಿತ್ತು.

2020ರಲ್ಲಿ, ಅಜಯ್ ದೇವಗನ್ ನಟನೆಯ ‘ತಾನಾಜಿ- ದಿ ಅನ್​ಸಂಗ್ ಹೀರೋ’ ಹಿಂದಿ ಚಲನಚಿತ್ರ ತೆರೆಗೆ ಬಂತು. ಈ ಚಲನಚಿತ್ರವು ಕೊಂಡಾಣ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಮರಾಠ ಯೋಧ ತಾನಾಜಿಯ ಕುರಿತಾಗಿತ್ತು. 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಸಾವಿರಾರು ಅಮಾಯಕರನ್ನು ಕೊಂದ ಸೇಡು ತೀರಿಸಿಕೊಳ್ಳಲು ಲಂಡನ್​ನಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದ ಯುವಕ ಸರ್ದಾರ್ ಉಧಮ್ ಸಿಂಗ್. ಆ ಘಟನೆಯ 102 ವರ್ಷಗಳ ನಂತರ ಉಧಮ್ ಸಿಂಗ್ ಮೇಲೆ 2021ರಲ್ಲಿ ಹಿಂದಿ ಚಲನಚಿತ್ರ ಮೂಡಿಬಂತು.

ಮೋದಿ ಅವರು ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಸ್ಪೂರ್ತಿಯನ್ನು ಪುನಶ್ಚೇತನಗೊಳಿಸಿದ್ದು, ‘ಏಕ್ ಕಾಮ್ ದೇಶ್ ಕೆ ನಾಮ್ ಇದು ಅವರು ನೀಡಿದ ಕರೆ. ಇದರಿಂದ ದೊಡ್ಡ ಸಂಖ್ಯೆಯ ಜನರು ಪ್ರೇರಣೆಗೊಂಡು ರಾಷ್ಟ್ರೀಯತೆ, ದೇಶಭಕ್ತಿ ಮತ್ತು ಸಮಾಜ ಸೇವೆಯ ಭಾವನೆ ಬೆಳೆಸಿಕೊಂಡಿದ್ದಾರೆ. ದೇಶದ ಚಲನಚಿತ್ರ ಜಗತ್ತನ್ನೂ ಈ ಭಾವನೆ ಆವರಿಸಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳು ಸಾಕ್ಷಿ. ಇಲ್ಲದಿದ್ದರೆ ಡಿ-ಗ್ಯಾಂಗ್​ನ ಹಿಡಿತದಲ್ಲಿತ್ತು ಎಂದು ಶಂಕಿಸಲಾಗಿದ್ದ ಹಿಂದಿ ಚಲನಚಿತ್ರೋದ್ಯಮದಲ್ಲಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಸ್ಪೂರ್ತಿಯನ್ನು ಕಾಣುವುದು ಬಹುತೇಕ ಅಸಾಧ್ಯ ಮತ್ತು ಅನೂಹ್ಯವಾಗಿತ್ತೇನೋ?

(ಲೇಖಕರು ಹವ್ಯಾಸಿ ಪತ್ರಕರ್ತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net