ಜೀವನದಲ್ಲಿ ಸಂಕಷ್ಟವಿದೆ ಎಂದು ಹಳಿಯುವವರೇ ಹೆಚ್ಚು. ಆದರೆ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ಸುಲೇಪೇಟ ಗ್ರಾಮದ ಶಿವಕುಮಾರ ನಾಲ್ಕು ವರ್ಷ ಕಾಲ ಸೋದರ ಮಾವ (ತಾಯಿಯ ಸಹೋದರ)ನ ಜುವೆಲ್ಲರಿ ಶಾಪ್ನಲ್ಲಿ ಚಿನ್ನಾಭರಣ ದುರಸ್ತಿ ಕೆಲಸ ಕಲಿತು, ಆರು ತಿಂಗಳ ಹಿಂದೆ ಸ್ವಂತ ಜ್ಯುವೆಲ್ಲರಿ ಶಾಪ್ ಆರಂಭಿಸಿದ್ದಾರೆ. ಮೂರು ವರ್ಷದವನಿರುವಾಗಲೇ ತಂದೆಯನ್ನು ಕಳೆದುಕೊಂಡ ಶಿವಕುಮಾರ, ತಾಯಿ ಆಶ್ರಯದಲ್ಲೇ ಬೆಳೆದವರು. ಪದವಿ ಓದಿನ ಜತೆಗೆ ಸ್ವ ಉದ್ಯೋಗ ಮಾಡುತ್ತ ಕುಟುಂಬ ನಿರ್ವಹಣೆಯನ್ನೂ ಮಾಡುತ್ತಿದ್ದಾರೆ. ಉದ್ಯೋಗದ ಜತೆಗೆ ಓದಿನ ಮೇಲೂ ಆಸಕ್ತಿ ಹೊಂದಿರುವ ಶಿವಕುಮಾರ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದು, ಅದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಪೊಲೀಸ್ ಹುದ್ದೆ ಸೇರುವ ಮಹದಾಸೆಯನ್ನೂ ಇಟ್ಟುಕೊಂಡಿದ್ದಾರೆ. ‘ಪೊಲೀಸ್ ಹುದ್ದೆಗೆ ಬೇಕಾದ ಎಲ್ಲ ಅರ್ಹತೆಗಳಿದ್ದು, ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಅವಕಾಶ ಸಿಕ್ಕರೆ ಸರ್ಕಾರಿ ನೌಕರಿಯಲ್ಲಿ ಮುಂದುವರಿಯುತ್ತೇನೆ. ಇಲ್ಲದಿದ್ದರೆ ಆಭರಣ ಮಳಿಗೆಯನ್ನೇ ಶೋರೂಂ ಆಗಿ ಪರಿವರ್ತಿಸುವ ಮಹದಾಸೆ ಹೊಂದಿದ್ದು, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗಲಿದೆ’ ಎನ್ನುತ್ತಾರೆ ಶಿವಕುಮಾರ.