ತ್ಯಾಗಮಯಿ ಹೆಣ್ಣು; ಬಾಳ ಸಂಗ್ರಾಮದ ಗಟ್ಟಿಗಿತ್ತಿಯರು

Edit 23 Jan 20
(ಚಿತ್ರ: ಹರ್ಷದ್​ ಉದಯ್ ಕಾಮತ್​)
Published on

ಕುಟುಂಬ, ಸಮಾಜವನ್ನು ಕಟ್ಟುವಲ್ಲಿ ಹೆಣ್ಣಿನ ಶ್ರಮ, ತ್ಯಾಗ, ಬದ್ಧತೆ ಅಸಾಧಾರಣ. ಕಡುಕಷ್ಟಗಳಿಗೂ ಬೆದರದೆ, ಸ್ವಹಿತವನ್ನು ಮರೆತು ತನ್ನವರಿಗಾಗಿ ಬದುಕುವ ಹೆಣ್ಣು ಸಾರ್ಥಕ ಬಾಳಿನ ದಾರಿಯನ್ನು ಅನಾವರಣಗೊಳಿಸುತ್ತಾಳೆ. ‘ರಾಷ್ಟ್ರೀಯ ಹೆಣ್ಣುಮಗುವಿನ ದಿನ’ದ ಹಿನ್ನೆಲೆಯಲ್ಲಿ, ಬದುಕಿಗೆ ಹೊಸ ದಿಕ್ಕು ಕೊಟ್ಟ ಮಾದರಿ ಮಹಿಳೆಯರ ಬಗ್ಗೆ ಓದುಗರಿಂದಲೇ ಅನುಭವ ಆಹ್ವಾನಿಸಿದ್ದೆವು. ರಾಜ್ಯದ ಎಲ್ಲ ಭಾಗಗಳಿಂದಲೂ ವಿಜಯವಾಣಿ ಓದುಗರು ಅಭೂತಪೂರ್ವಗಾಗಿ ಸ್ಪಂದಿಸಿದ್ದು, ಅಸಂಖ್ಯ ಪತ್ರಗಳು ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಿದ್ದೇವೆ.

ದಿನಾಚರಣೆ ಹಿನ್ನೆಲೆ

ಹೆಣ್ಣು ಎದುರಿಸುತ್ತಿರುವ ಅಸಮಾನತೆ ನಿವಾರಿಸಲು ಮತ್ತು ಸಮಾನ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ 2008ರಲ್ಲಿ ‘ರಾಷ್ಟ್ರೀಯ ಹೆಣ್ಣುಮಗುವಿನ ದಿನ’ ಆಚರಣೆ ಆರಂಭಿಸಿತು. ಆಗಿನಿಂದ ಪ್ರತಿ ವರ್ಷ ಜನವರಿ 24ರಂದು ಮಹಿಳೆಯರ ಘನತೆ ಕಾಪಾಡುವ, ಸಮಾಜದಲ್ಲಿ ಅವಕಾಶ ಹೆಚ್ಚಿಸುವ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೆಣ್ಣುಭ್ರೂಣ ಹತ್ಯೆ ವಿರುದ್ಧ ಅರಿವು, ಹೆಣ್ಣುಮಗುವಿಗಾಗಿ ಸುರಕ್ಷಿತ ಹಾಗೂ ಆರೋಗ್ಯಯುತ ವಾತಾವರಣ ಸೃಷ್ಟಿ, ಹೆಣ್ಣಿಗೆ ಶಿಕ್ಷಣ ನೀಡುವ ಅಗತ್ಯದ ಬಗ್ಗೆ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಧ್ಯಪ್ರದೇಶದಲ್ಲಿ ಇಂದು ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಜ.30ರವರೆಗೂ ಒಂದು ವಾರದ ಕಾಲ ಈ ಜಾಗೃತಿ ಅಭಿಯಾನ ಮುಂದುವರಿಯಲಿದೆ.

ಅಮ್ಮನ ಆದರ್ಶ

ನಾನು ಕಡು ಬಡತನದಲ್ಲೇ ಬೆಳೆದವನು. ತಂದೆ-ತಾಯಿ ಬೇರೆಯವರ ಹೊಲಗಳಲ್ಲಿ ದಿನಗೂಲಿ ಮಾಡಿ ನನಗೆ ಶಿಕ್ಷಣ ಕೊಡಿಸುತ್ತಿದ್ದರು. ಆದರೆ ತಂದೆ-ತಾಯಿ ಹಂಬಲ ಈಡೇರಿಸಲು ಆಗಲಿಲ್ಲವೆಂಬ ಕೊರಗು ಈಗಲೂ ಆಗಾಗ ಕಾಡುತ್ತದೆ. ಯಾಕೆಂದರೆ, ವಿಜಯಪುರ ನಗರಕ್ಕೆ ಪದವಿ ಪೂರ್ವ ಶಿಕ್ಷಣಕ್ಕಾಗಿ ಆಗಮಿಸಿದೆನಾದರೂ, ಎಲ್ಲ ವಿಷಯಗಳಲ್ಲೂ ಅನುತ್ತೀರ್ಣನಾದೆ. ಪಿಯುಸಿ ಕಲಿಯುವಾಗ ತಾಯಿ ಕಳಿಸಿಕೊಡುವ ರೊಟ್ಟಿ ಬುತ್ತಿಯನ್ನು ಬಸ್​ಸ್ಟಾ್ಯಂಡಿನಲ್ಲಿ ಬಸ್ಸಿಗಾಗಿ ಕಾದುಕುಳಿತು ತೆಗೆದುಕೊಳ್ಳುವುದು ಮತ್ತು ತಂದೆಗೆ ಗೊತ್ತಾಗದ ಹಾಗೆ ರೊಟ್ಟಿ ಕೆಳಗಡೆ ಇಟ್ಟು ಕಳಿಸುವ ಆ ಹಣ ನನ್ನನ್ನು ಮನುಷ್ಯನನ್ನಾಗಿ ಮಾಡಿತು ಹಾಗೂ ನನ್ನ ಕಾಲ ಮೇಲೆ ನಿಂತುಕೊಳ್ಳಲು ಪ್ರೇರಣೆಯಾಯಿತು. ಪ್ರಸ್ತುತ ವಿಜಯಪುರದಲ್ಲಿ ಓಂ ಗ್ರಾಫಿಕ್ಸ್ (ಡಿಟಿಪಿ ಕೇಂದ್ರ), ವಿವೇಕಸಿರಿ ಸೌಹಾರ್ದ ಸಹಕಾರಿ ನಿಯಮಿತ (ಬ್ಯಾಂಕ್), ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೋರವಾರ ಇವೆಲ್ಲವುಗಳನ್ನೂ ಮುನ್ನಡೆಸಿಕೊಂಡು 7-8 ವರ್ಷಗಳಲ್ಲಿ ಸೇವಾ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು, ಔಷಧವನ್ನು ಉಚಿತವಾಗಿ ನೀಡಿದ್ದೇವೆ. ವಿವೇಕಾನಂದರ 3 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದೇವೆ. ನಾನು ಅನುತ್ತೀರ್ಣನಾದಾಗ ತಾಯಿಯು ನೀಡಿದ ಧೈರ್ಯ ಮತ್ತು ಪ್ರೋತ್ಸಾಹವೇ ನಾನು ನಡೆಸಿಕೊಂಡು ಹೋಗುವ ಈ ಎಲ್ಲ ಕಾರ್ಯಗಳಿಗೆ ಪ್ರಮುಖ ಕಾರಣ.

| ಅಪ್ಪು ಶಿರೋಳಮಠ ವಿಜಯಪುರ

ಫಲಕೊಟ್ಟ ಪರಿಶ್ರಮ

ಅಮ್ಮ ಅವರ ಕುಟುಂಬದಲ್ಲಿ ಹಿರಿಯಳು. ಮನೆತುಂಬ ಮಕ್ಕಳು, ಗ್ರಾಮದಲ್ಲಿ ಹುಟ್ಟಿಬೆಳೆದು ಹೈಸ್ಕೂಲ್ ಶಿಕ್ಷಣ ಮುಗಿಸಿದ ಅಮ್ಮನಿಗೆ ಚಿಕ್ಕಂದಿನಿಂದಲೂ ಸಂಗೀತ, ಸಾಹಿತ್ಯ ಪ್ರದರ್ಶನ ಕಲೆಗಳಲ್ಲಿ ಆಸಕ್ತಿ. ಆದರೆ ಸಾಮಾಜಿಕ ಕಟ್ಟುಪಾಡುಗಳ ಕಾರಣದಿಂದಾಗಿಯೋ ಏನೋ ಇವರ ಓದು, ಆಸಕ್ತಿಗಳು ಕುಂಠಿತವಾದವು. ನಂತರ ಅಮ್ಮನಿಗೆ ಚಿಕ್ಕವಯಸ್ಸಿಗೆ ಮದುವೆಯಾಗಿದ್ದು ನಾವಿಬ್ಬರು ಹೆಣ್ಣುಮಕ್ಕಳು ಹುಟ್ಟಿದೆವು. ಸಣ್ಣ ಹೋಟೆಲ್ ವ್ಯಾಪಾರದ ಆದಾಯದಲ್ಲಿ ಬದುಕು ಸಾಗುತ್ತಿತ್ತು. ವಾಸವಿದ್ದದ್ದು ಬೆಂಗಳೂರಿನಿಂದ 50 ಕಿ.ಮೀ. ದೂರದ ಊರಿನಲ್ಲಿ. ಅಕ್ಕನೊಂದಿಗೆ 3 ವರ್ಷದ ನನಗೂ ಶಾಲಾಶಿಕ್ಷಣದೊಂದಿಗೆ ಭರತನಾಟ್ಯ ತರಬೇತಿ ಶುರುವಾಯಿತು. ದೂರದ ಬೆಂಗಳೂರಿಗೆ ಅಮ್ಮನ ಎಡಬಲಗಳಲ್ಲಿ ಅವಳ ಕೈಹಿಡಿದುಕೊಂಡು ಜನಜಂಗುಳಿಯಲ್ಲಿ ಓಡುತ್ತ, ತುಂಬಿದ ಬಸ್ಸನ್ನು ಹತ್ತುವುದು, ನಾಟ್ಯಶಾಲೆಗೆ ದೌಡಾಯಿಸುವುದು ಇದೆಲ್ಲ ಹತ್ತಾರು ವರ್ಷಗಳ ಕಾಲ ನಮ್ಮ ಮೂರೂ ಜನರ (ವಾರದಲ್ಲಿ 4 ದಿನ) ದಿನಚರಿಯಾಗಿತ್ತು. ಅಮ್ಮನ ಶಿಸ್ತು, ಶ್ರದ್ಧೆ, ಸಂಕಲ್ಪಶಕ್ತಿ ಅನುಕರಣೀಯ. ಅವರ ಪರಿಶ್ರಮ ಫಲಕೊಟ್ಟಿದೆ. ಪದವಿ ಓದುತ್ತಿರುವ ನಾನು ಹಾಗೂ ಇಂಜಿನಿಯರ್ ಅಕ್ಕ ಇಬ್ಬರೂ ಭರತನಾಟ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ‘ಚನ್ನಪಟ್ಟಣ ಸೋದರಿಯರು’ ಎಂದೇ ಹೆಸರಾಗಿದ್ದೇವೆ. ಅಮ್ಮ ಈಗ ಸಾಂಸ್ಕೃತಿಕ ಸಂಘಟಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ರಾಮನಗರದ ಬಳಿಯ ಕೃಷ್ಣಾಪುರದೊಡ್ಡಿಯಲ್ಲಿ ದಾರಿದೀಪ ವೃದ್ಧಾಶ್ರಮದ ಮೂಲಕ 50 ಜನ ವೃದ್ಧರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

| ಚಿತ್ರ ರಾವ್ ಕೃಷ್ಣಾಪುರದೊಡ್ಡಿ (ರಾಮನಗರ ತಾಲೂಕು)

ತಂಗಿಯ ತ್ಯಾಗ

‘ಹೆಣ್ಮಕ್ಕಳನ್ನು ಜಾಸ್ತಿ ಓದಿಸಬಾರದು’ ಎಂಬ ಹಳೆಯ ಕಾಲದ ಧೋರಣೆ ನಮ್ಮ ಮನೆಯಲ್ಲಿಯೂ ಇತ್ತು. ಕಷ್ಟಪಟ್ಟು ಬಡತನದಲ್ಲಿಯೇ ತಂಗಿ ಪಿಯುಸಿವರೆಗೂ ಓದಿದಳು. ನಂತರ ವಿದ್ಯಾಭ್ಯಾಸ ನಿಂತಿತು, ದುಡಿತ ಹೆಚ್ಚಾಯಿತು. ಮನೆಯಲ್ಲಿ ಕೆಲಸ ಮತ್ತು ನಮ್ಮದೇ ಹೋಟೆಲ್​ನಲ್ಲಿ ತಿಂಡಿ ರೆಡಿ ಮಾಡುವುದು, ಪಾತ್ರೆ ತೊಳೆಯುವುದು. ಮುಂಜಾನೆ 5 ಗಂಟೆಗೆ ಶುರುವಾದ ಕೆಲಸ, ರಾತ್ರಿ 9 ಗಂಟೆವರೆಗೂ ಇದ್ದೇ ಇರುತ್ತಿತ್ತು. ನಾನು ಡಿಗ್ರಿ ಮುಗಿಸಿದ್ದೆ. ನನಗೆ ಬಿ.ಎಡ್. ಮಾಡಲು ಹೇಳಿ, ತಂಗಿ, ತಂದೆ- ತಾಯಿಯೊಂದಿಗೆ ಒಂದು ದಿನವೂ ಹೋಟೆಲ್ ರಜಾ ಮಾಡದೆ ದುಡಿಯುತ್ತಿದ್ದಳು. ಎಲ್ಲರಂತೆ ಕಾಲೇಜ್​ನಲ್ಲಿ ಪಾಠ ಕೇಳುತ್ತ, ಸ್ನೇಹಿತರೊಂದಿಗೆ ನಗು-ನಗುತ್ತ ಹರೆಯದ ದಿನಗಳನ್ನು ಸಂಭ್ರಮದಿಂದ ಕಳೆಯಬೇಕಾದ ತಂಗಿ ಕುಟುಂಬದ ಜವಾಬ್ದಾರಿಗೆ ಹೆಗಲು ಕೊಟ್ಟಳು. ಆಕೆಯ ತ್ಯಾಗ, ದುಡಿತದ ಫಲವಾಗಿ ನಾನು ಉಪನ್ಯಾಸಕ ವೃತ್ತಿಯಲ್ಲಿದ್ದೇನೆ. ತವರುಮನೆಯ ಸ್ಥಿತಿ ಸುಧಾರಿಸಲು ಆಕೆ ತನ್ನ ಓದನ್ನೇ ತ್ಯಾಗ ಮಾಡಿದಳು. ಈಗ ಗಂಡನ ಮನೆಯಲ್ಲಿ ಆತ ಮಾಡಿರುವ ಲಕ್ಷಾಂತರ ಸಾಲಕ್ಕೆ ಕೊರಗುತ್ತಿದ್ದಾಳೆ.

| ಮಂಜುನಾಥ್ ಜಿ ಹಗರಿಬೊಮ್ಮನಹಳ್ಳಿ

ಎಲ್ಲಿ ಮರೆಯಾದೆ...

ನಾ ಅಳುವಾಗ ಕಣ್ಣೀರನೊರೆಸಿ, ಬೆಳೆಯುವಾಗ ಬೆನ್ನು ತಟ್ಟಿ ಬೆಂಬಲಿಸಿ, ಹಸಿದಾಗ ತಾಯಿಯಂತೆ ಕೈ ತುತ್ತನಿರಿಸಿ ಆತ್ಮವಿಶ್ವಾಸ ಬೆಳೆಸಿ, ಬಾಳಿಗೆ ಬೆಳಕು ಹರಿಸಿ ಬೆಳಗಿ ಬಾಳುತಿಹ ಪ್ರೀತಿಯ ತಮ್ಮನ ಬದುಕನ್ನು ಕಾಣುವ ಮುನ್ನವೇ ಕಣ್ಮರೆಯಾಗಿ ಎಲ್ಲೋ ಮರೆಯಲ್ಲಿ ಹಾರೈಸುತ್ತಿರುವ ಅಕ್ಕ ದಿ.ಶೋಭಾ ವಿದ್ಯಾಸಾಗರ ಮಿಣಿಜಿಗಿ ಅವರೇ ನನ್ನ ಪಾಲಿಗೆ ತ್ಯಾಗಮಯಿ ಹೆಣ್ಣು. ಹತ್ತನೆಯ ಕ್ಲಾಸು ಉತ್ತೀರ್ಣನಾದ ನಂತರ ‘ಸುಮ್ನೆ ಕಿರಾಣಿ ಅಂಗಡಿಯಲ್ಲಿ ದುಡಿಯಾಕ ಹೋಗು. ನಮ್ಗೂ ಅನೂಕೂಲ ಅಗ್ತಾದ’ ಎಂದು ಅಪ್ಪ ತನ್ನ ಬಡತನದ ಕತೆ ಹೇಳಿದಾಗ ನನ್ನ ಬೆನ್ನಿಗೆ ನಿಂತು ಅಪ್ಪನೊಂದಿಗೆ ವಾದಿಸಿ ‘ನಿಮಗೆ ಓದಿಸಲಾಗದಿದ್ದರೆ ನಾ ಕರಕೊಂಡು ಹೋಗಿ ಓದಸ್ತೀನಿ. ಅವನು ಎಷ್ಟು ಓದ್ತಾನ ಓದಲಿ’ ಎಂದು ಹೇಳಿ ಸ್ನಾತಕೋತ್ತರ ಪದವಿಯವರಿಗೆ ಅಭ್ಯಾಸ ಮಾಡಲು ಅನುಕೂಲ ಮಾಡಿಕೊಟ್ಟವರು ಅಕ್ಕ. ಪ್ರಸಕ್ತ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕ ವೃತ್ತಿ ಜೊತೆಗೆ ಪ್ರವೃತ್ತಿಯಿಂದ ಬರಹಗಾರನಾಗಿ, ಭಾಷಣಕಾರನಾಗಿ ವ್ಯಕ್ತಿತ್ವ ರೂಪಿಸಿಕೊಂಡಿದ್ದೇನೆ. ಇದನ್ನೆಲ್ಲ ನೋಡಿ ಖುಷಿ ಪಡುವ ಅಕ್ಕ ಮಾತ್ರ ಅಸ್ತಂಗತವಾಗಿದ್ದಾರೆ ಎನ್ನುವ ನೋವು ಸದಾ ಕಾಡುತ್ತಿದೆ.

| ರಮೇಶಬಾಬು ಯಾಳಗಿ ಮಾನ್ವಿ

ಅಮ್ಮನಂಥ ಅಕ್ಕನ ಮಮತೆ

ನನಗೂ ಅಕ್ಕನಿಗೂ ಎರಡು ವರ್ಷ ಅಂತರ. ಓದಿನಲ್ಲಿ ಇಬ್ಬರೂ ಚುರುಕು. ಆದರೂ ಅಕ್ಕ ಒಂದು ಹೆಜ್ಜೆ ಮುಂದು. ವಿಜ್ಞಾನ ಪದವೀಧರೆಯಾಗಿ ಕೆಲಸ ಹುಡುಕುತ್ತಿದ್ದಾಗ ಅವಳಿಗೆ ಕಂಕಣಬಲ ಕೂಡಿಬಂದು ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಯ ಕೈಹಿಡಿದಳು. ಚೆಂದದ ಸಂಸಾರವನ್ನು ವಿಧಿಗೆ ನೋಡಲಾಗಲಿಲ್ಲ. ಮದುವೆ ಆಗಿ ಎರಡು ವರ್ಷ ತುಂಬುವುದರೊಳಗೆ ಕೆಲಸ ಮಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾದ ಭಾವ ಅಕ್ಕನನ್ನು ಒಂಟಿಯಾಗಿಸಿದರು. ಅನಪೇಕ್ಷಿತ ಘಟನೆ ಹೆತ್ತೊಡಲನ್ನು ಚಿಂತೆಯ ಕೂಪಕ್ಕೆ ತಳ್ಳಿತು. ಅಂತಹ ಸಮಯದಲ್ಲಿ ಅಕ್ಕನೇ, ‘ಬದುಕೇ ಆಕಸ್ಮಿಕ, ವಿಧಿಯಾಟದಲ್ಲೆನಿದೆ ಅದನ್ನು ತಪ್ಪಿಸಕ್ಕಾಗಲ್ಲ, ಬಂದದ್ದನ್ನೆಲ್ಲ ಧೈರ್ಯದಿಂದ ಎದುರಿಸೋಣ’ ಎಂದು ಎಲ್ಲರನ್ನೂ ಸಮಾಧಾನಿಸಿದಾಗ ಅವಳ ಅಗಾಧ ಆತ್ಮವಿಶ್ವಾಸದ ಅರಿವಾಗಿತ್ತು. ಅವಳಿಗೆ ನನ್ನ ಭಾವ ಇದ್ದ ಬ್ಯಾಂಕ್​ನಲ್ಲಿ ದೊರೆತ ಕೆಲಸ ಜೀವನಕ್ಕೊಂದು ಆಧಾರವಾಯಿತು. ಹೃದಯರೋಗಿ ಅಪ್ಪ ಆಂತರ್ಯದಲ್ಲೆ ಕೊರಗಿ ಇಹಲೋಕ ತ್ಯಜಿಸಿದಾಗಲಂತೂ ನನ್ನಕ್ಕ ತಾನು ದುಃಖದ ಮಡುವಿನಲ್ಲಿ ಮುಳುಗುತ್ತಿದ್ದರೂ ಎಲ್ಲ ಮರೆತು ಅಮ್ಮನನ್ನು, ನನ್ನನ್ನು ಸಮಾಧಾನಿಸಿದ್ದು ಈಗಲೂ ಕಣ್ಮುಂದೆ ಕಟ್ಟಿದಂತಿದೆ. ತನ್ನೆಲ್ಲ ಸುಖಗಳನ್ನು ತ್ಯಾಗ ಮಾಡಿ ಅಪ್ಪನಂತೆ, ಅಮ್ಮನಂತೆ ಮಮತೆಯನ್ನು ಧಾರೆ ಎರೆಯುತ್ತ ಬದುಕಿನಲ್ಲಿ ಬಂದೊದಗುವ ಕಷ್ಟಗಳನ್ನೆಲ್ಲ ಮೆಟ್ಟಿ ನಿಂತು ಧೈರ್ಯದಿಂದ ಮುನ್ನುಗ್ಗಿ ಮಾಡುತ್ತಿದ್ದ ಕಾರ್ಯ, ನೀಡುತ್ತಿದ್ದ ಮಾರ್ಗದರ್ಶನ ಇಂದಿಗೂ ನನ್ನ ಬಾಳು ಬೆಳಗುವ ನಂದಾದೀಪವಾಗಿದೆ.

| ಅರವಿಂದ ಜಿ.ಜೋಷಿ ಮೈಸೂರು

ಅಜ್ಜಿ ಹೊಲಿದ ಬದುಕು

ನನಗೆ ಮಾದರಿಯಾಗಿ ನಿಲ್ಲುವ ಮಹಿಳೆ ಅಂದರೆ ‘ನನ್ನಜ್ಜಿ’. ತನ್ನ ಹದಿನೈದನೇ ವರ್ಷದಲ್ಲಿ ಮದುವೆ, ಬಹಳ ಜಾಣೆ ಎನ್ನುವ ಬಿರುದು, ಇಪ್ಪತ್ತೆಂಟನೇ ವರ್ಷದಲ್ಲಿ ಮೂರು ಗಂಡು ಮಕ್ಕಳು ಒಂದು ಹೆಣ್ಣುಮಗು. ಕೊನೆಯ ಗಂಡುಮಗು ಇಪ್ಪತ್ತುದಿನದ ಹಸುಗೂಸು ಇದ್ದಾಗ ಅಜ್ಜನ ಸಾವು! ಆಗ ಅಜ್ಜಿಯ ಸಂಕಟ ಹೇಳತೀರದು. ಮುಂದೇನು ಎಂಬ ಸಾವಿರ ಪ್ರಶ್ನೆಗಳು. ಹಸಿಬಾಣಂತಿ ಬೇರೆ! ಎಲ್ಲರ ಸಾಂತ್ವನ, ಉಪಚಾರ ಎಷ್ಟು ದಿನ?! ಅಳುತ್ತ ಕುಳಿತರೆ ಸಂಸಾರ ನಡೆಯಬೇಕಲ್ಲ? ಅಜ್ಜಿ ತುಂಬ ಸ್ವಾಭಿಮಾನಿ. ಹಸುಗೂಸನ್ನು ಎದೆಗವಚಿಕೊಂಡು ಹೊಲ, ಗದ್ದೆಗಳಲ್ಲಿ ಕೆಲಸ ಮಾಡಿ, ಅಜ್ಜನಿಂದ ಕಲಿತ ಹೊಲಿಗೆಯನ್ನು ಮಾಡುತ್ತ ಸಂಸಾರದ ದೋಣಿ ಮುಳುಗದೆ ದಡವನ್ನು ಸೇರಿಸಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವುದು ಸಾಮಾನ್ಯ ಮಾತಾಗಿರಲಿಲ್ಲ. ಅದನ್ನು ಅಜ್ಜಿ ಮಾಡಿ ತೋರಿಸಿದಳು. ಅವಳ ಆತ್ಮಶಕ್ತಿ, ಮನೋಬಲವನ್ನು ಮೆಚ್ಚಲೇಬೇಕು. ಮುಂದೆ ಮನೆಯಲ್ಲಿ ಐದಾರು ರಾಟಿಗಳನ್ನಿಟ್ಟು, ಹೊಲಿಗೆಯನ್ನು ಕಲಿಯುವವರಿಗೆ ಕಲಿಸಿ, ಅವರಿಗೂ ಕೆಲಸ ಕೊಟ್ಟು, ಅವರನ್ನೂ ಸ್ವಾವಲಂಬಿಗಳನ್ನಾಗಿ ಮಾಡಿದಳು. ಅಜ್ಜಿಯಿಂದಾಗಿ ನಮ್ಮ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಹೊಲಿಗೆಯನ್ನು ಕಲಿತು, ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

| ದೀಪ್ತಿ ದಿನೇಶ್ ಖಟಾವಕರ್

ಅಕ್ಕ ಕೊಟ್ಟ ಕುರ್ಚಿ

1971ನೇ ಇಸವಿಯಲ್ಲಿ ಕುಂದಾಪುರದ ಭಂಡಾರ್​ಕಾರ್ಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೆ. ಆಗ ನನ್ನಕ್ಕ ಹುಬ್ಬಳ್ಳಿಯ ಬ್ಯಾಂಕೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಮದುವೆ ಸೆಟ್ಲ್ ಆಯಿತು. ಒಂದು ದಿನ ಅವರು ಫೋನ್ ಮಾಡಿ, ‘ಒಂದು ವೇಳೆ ನನ್ನ ಬದಲಿಗೆ ನೀನು ಕೆಲಸಕ್ಕೆ ಸೇರುವುದಾದರೆ ನಾನು ರಿಸೈನ್ ಮಾಡುತ್ತೇನೆ. ಇಲ್ಲದಿದ್ದಲ್ಲಿ ಮದುವೆಯಾಗಿ ಹೋಗುವ ಊರಿಗೆ ಟ್ರಾನ್ಸ್ ಫರ್ ಮಾಡಿಸಿಕೊಳ್ಳುತ್ತೇನೆ’ ಎಂದರು. ನಾನು ಕಾಲೇಜ್ ಬಿಟ್ಟು ಸೀದಾ ಹುಬ್ಬಳ್ಳಿಗೆ ಹೋಗಿ ನನ್ನಕ್ಕನ ಬದಲಿಗೆ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಮೊದಲ 3 ತಿಂಗಳು ತಾತ್ಕಾಲಿಕ ಕೆಲಸದ ಬಳಿಕ ನನ್ನನ್ನು ಪರ್ಮನೆಂಟ್ ಮಾಡಿದರು. ಆಗ ನನ್ನ ತಿಂಗಳ ಸಂಬಳ ಬರೀ -ಠಿ; 277. ಆ ಬ್ಯಾಂಕಿನ ಬೇರೆ-ಬೇರೆ ಶಾಖೆಗಳಲ್ಲಿ 41 ವರ್ಷ ಕಾರ್ಯನಿರ್ವಹಿಸಿ ನಾನೀಗ ನಿವೃತ್ತ ಜೀವನ ನಡೆಸುತ್ತಿದ್ದೇನೆ. ಪಿಂಚಣಿಯೂ ಬರುತ್ತಿದೆ. ಹೆಸರಾಂತ ಬ್ಯಾಂಕಿನ ತನ್ನ ಕೆಲಸ ಬಿಟ್ಟು ಅದೇ ಕುರ್ಚಿಯಲ್ಲಿ ನನ್ನನ್ನು ಕೂರಿಸಿ ಬದಕು ನೀಡಿದ ಅಕ್ಕನ ಹೃದಯವಂತಿಕೆಯನ್ನು ಎಂದಾದರೂ ಮರೆಯಲಾದೀತೆ?

| ಪಿ.ಜಯವಂತ ಪೈ ಕುಂದಾಪುರ

ರತ್ನದಂತಹ ಅತ್ತೆ

ಸೋದರತ್ತೆ ರತ್ನ ಅವರದ್ದು ದುಡಿಮೆ ನಂಬಿದ ಬದುಕು. ಅಂತರಂಗದ ಅರಿವಿಗೆ ಪ್ರಾಮುಖ್ಯವೇ ಹೊರತು ಅವರಿಗೆ ಬಾಹ್ಯಾಡಂಬರದ ಗೊಡವೆಯೇ ಬೇಕಿಲ್ಲ. ಬೇಂದ್ರೆಯವರ ‘ಪಟ್ಟ ಪಾಡನ್ನು ಹಾಡಾಗಿಸುವ’ ಪರಿಯ ಚೈತನ್ಯ ಇವರದ್ದು. ಮೆಲುಮಾತಿನ, ವಾತ್ಸಲ್ಯಭರಿತ ಹೃದಯಿಯಾದ ಇವರು ಪರರ ಸಹಾಯಕ್ಕೆ ಎಲ್ಲ ರೀತಿಯಲ್ಲೂ ಮುನ್ನುಗ್ಗುವವರು. ತನ್ನವರು ಎಂಬ ಅಭಿಮಾನದ ಮೂಟೆಯನ್ನೇ ಹೊತ್ತಿರುವವರು. ಇವರ ಬಾಳಪಯಣದ ಸಂಗಾತಿ ರಂಗನಾಥ್ ಮಾವನವರೂ ಸಹ ಮಾತಿಗೆ ಮೊರೆ ಹೋಗದೆ ಕೃತಿಯಲ್ಲಿ ನಂಬಿಕೆ ಇಟ್ಟ ಸಹೃದಯಿ. ಯಾವುದೇ ಯಶಸ್ಸಿಗೆ ಮನಸ್ಸೊಂದೇ ಮಾರ್ಗ ಎಂಬುದು ನನಗೆ ರತ್ನ ಅತ್ತೆಯನ್ನು ನೋಡಿದಾಗ ಅರ್ಥವಾದ ಮಾತು. ಅರವತ್ತರ ವಯೋಮೆಟ್ಟಿಲನ್ನು ಹತ್ತುತ್ತಿರುವಾಗಲೇ ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ದಾಸ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಗಳಿಸುವ ಮೂಲಕ ಸಾಧಿಸಿ ತೋರಿಸಿದವರು. ಸುತ್ತಲೂ ಇರುವವರ ಗುಣಗಳನ್ನು ಗುರುತಿಸಿ, ಪೋ›ತ್ಸಾಹಿಸುವ ಇವರು, ಅವಗುಣಗಳ ಬಗ್ಗೆ ಗಮನವೇ ಕೊಡದವರು. ನಾನು ಅರಿವಿನ ಜೋಳಿಗೆಗೆ ಮತ್ತಷ್ಟು ಜ್ಞಾನ ತುಂಬಿ ಕೊಳ್ಳುತ್ತ ಸಾಗಲು ದಾರಿ ತೋರಿದವರೇ ಇವರು.

| ಸುಮಾ ರಮೇಶ್ ಬೆಂಗಳೂರು

ಕಠಿಣ ತಪಸ್ಸು

ಕಲ್ಲು ಅಗೆದು ಹಸಿರೂಡಿದವಳು... ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲೀಬೆಳಕಾನಿಟ್ಟು ತೂಗಿದಾಕೆ ನಿನಗೇ ಬೇರೆ ಹೆಸರೂ ಬೇಕೆ, ‘ಸ್ತ್ರೀ’ ಎಂದರೆ ಅಷ್ಟೆ ಸಾಕೆ...

ಕವಿಗಳ ಈ ಮಾತು, ಎಷ್ಟು ಅರ್ಥಪೂರ್ಣ ಎನ್ನುವುದನ್ನು ನನ್ನದೇ ಕುಟುಂಬದಲ್ಲಿ ಸಾಧಿಸಿ ತೋರಿಸಿದ್ದು ನನ್ನ ದೊಡ್ಡಪ್ಪನ ಸೊಸೆ! ಮನೆಯೇ ಇಲ್ಲದ ಬದುಕಿನಲ್ಲಿ, ಮನೆಯನ್ನು, ಹೊಸತೇ ಬದುಕನ್ನು ಒಂದೊಂದೇ ಇಟ್ಟಿಗೆ ಹೊತ್ತಿಟ್ಟು, ಅಲ್ಲಿ ಮೂಲಭೂತ ಅಗತ್ಯಗಳನ್ನು ಯಾರ ನೆರವಿಲ್ಲದೆ ಹೊಂದಿಸಿಕೊಳ್ಳುತ್ತ, ಕಾಲಕ್ರಮೇಣ, ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಿದೆಯಲ್ಲಾ, ಅದು ಅವಳದ್ದೇ ಕಠಿಣ ತಪಸ್ಸು! ಹಿರಿಯರ ಮರಣ, ಕಾಲಿಗೆ ತೊಡರಿದ ಕಷ್ಟದ ಕುಣಿಕೆಗಳು, ಇದ್ದ ಗೂಡೂ ಬೇರೆಯವರದೇ ಆದಾಗ, ಈ ಸುಶೀಲೆ ತನ್ನೆರಡು ಮಕ್ಕಳ ಕಟ್ಟಿಕೊಂಡು, ಊರಿನಾಚೆ ಯಾರೆಂದರೆ ಯಾರೂ ಇಲ್ಲದ ಕಾಡಿನೊಳಗೇ, ಮಾವನ ಒಂದು ತುಂಡು ಜಾಗದಲ್ಲಿ ಮನೆ ಕಟ್ಟಿ ವಾಸಮಾಡುವ ನಿರ್ಧಾರಕ್ಕೆ ಬಂದೇಬಿಟ್ಟಳು. ಕೈಯ್ಯಲ್ಲಿ ಬಿಡಿಗಾಸಿಲ್ಲ. ಗಂಡ ಅಲ್ಲೆಲ್ಲೋ ಪುಟ್ಟ ಕೆಲಸದಲ್ಲಿ. ಒಂದು ಕ್ಷಣ ಜಾಗ ನೋಡಿ ಎದೆ ಧಸಕ್ಕೆಂದರೂ, ಸೆರಗು ಸೊಂಟಕ್ಕೆ ಸಿಕ್ಕಿಸಿದಳು. ಊರೆನ್ನುವ ಜಾಗದಲ್ಲಿ ಅಂಗೈ ಅಂಕಣದ ಮನೆ ಬಾಡಿಗೆ ಹಿಡಿದು, ದಿನಾ ಹತ್ತಾರು ಮೈಲಿ ನಡೆದು, ಅಕ್ಷರಶಃ, ನೆಲ ಹದಮಾಡಿ, ಹತ್ತಿರದ ತೊರೆಯಿಂದ ನೀರು ಹೊತ್ತು, ತಕ್ಷಣದಲ್ಲಿ ಫಲ ಕೊಡುವ ತರಕಾರಿ ಬೆಳೆದು ಜೊತೆಗೆ ಹಪ್ಪಳಗಳನ್ನು ಮಾಡಿ ಮಾರುತ್ತ, ಕಡೆಗೆ ಅಲ್ಲೇ ಗುಡಿಸಲೊಂದ ಕಟ್ಟಿ, ಎಣ್ಣೆದೀಪ, ರಾತ್ರಿ ಬೆದರಿಸುವ ಕಾಡುಪ್ರಾಣಿಗಳ ಅಂಜಿಕೆಯಲ್ಲೂ, ನಾಲ್ಕಾರು ಹತ್ತಿರದವರ ಚೂರು ನೆರವಿನಲ್ಲಿ ‘ಬದುಕು’ ಎನ್ನುವುದನ್ನು ಕಟ್ಟಿಯೇಬಿಟ್ಟಳು. ‘ಏಕಶಕ್ತಿ’ಯಾಗಿ ಬೆಳೆಸಿದ ನೂರಾರು ಅಡಿಕೆ, ತೆಂಗು ನಗುತ್ತ ಬದುಕನ್ನು ಹರಸಿಯೇಬಿಟ್ಟವು. ಕಿಮೀಗಟ್ಟಳೆ ಕಾಡಿನಲ್ಲಿ ನಡೆದು ಓದಿದ ಮಕ್ಕಳೀಗ ಇಂಜಿನಿಯರಿಂಗ್ ಪದವೀಧರರು. ಗುಡಿಸಲೀಗ ಚಂದದ ತಾರಸೀ ಮನೆಯಾಗಿದೆ, ಮಗನ ನೇತೃತ್ವದಲ್ಲಿ.

| ಎಸ್.ಪಿ.ವಿಜಯಲಕ್ಷ್ಮಿ ಬೆಂಗಳೂರು

ಅಕ್ಕನ ಅಕ್ಕರೆ

ಜೀವನದಲ್ಲಿ ನನಗೆ ಸಿಕ್ಕ ದೇವರು ಅಂದರೆ ನನ್ನ ಅಕ್ಕ. ಬೀಡಿ ಕಟ್ಟಿ ನಮಗೆ ಮೂರು ಜನರಿಗೂ ವಿದ್ಯಾಭ್ಯಾಸ ಕೊಡಿಸಿದ್ದು ದೊಡ್ಡಕ್ಕ. ನಮ್ಮದು ಬಡ ಕುಟುಂಬ. ತಂದೆ-ತಾಯಿ ಬೀಡಿ ಕಟ್ಟುತ್ತಿದ್ದರೂ ಆ ದುಡಿಮೆ ಸಾಕಾಗುತ್ತಿರಲಿಲ್ಲ. ಆಗ ದೊಡ್ಡಕ್ಕ 7ನೇ ತರಗತಿಯಲ್ಲಿ ಕಲಿಯುತ್ತಿದ್ದರೂ ಮನೆಯ ಕಷ್ಟವನ್ನರಿತು ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿ ಬೀಡಿ ಕಟ್ಟತೊಡಗಿದಳು. ಮುಳಿ ಹುಲ್ಲಿನ ಮನೆಯಲ್ಲಿ ವಾಸ ಮಾಡುತ್ತಿದ್ದ ನಮಗೆ ಹೆಂಚಿನ ಮನೆ ಆಗಬೇಕಾದರೆ ಅದಕ್ಕೆ ಕಾರಣ ದೊಡ್ಡಕ್ಕ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ನಮ್ಮ ಸಂಸಾರದಲ್ಲಿ ಕಷ್ಟಗಳು ಬಂದರೆ ಅದಕ್ಕೆ ಹೆಗಲು ಕೊಡುವ ದೊಡ್ಡಕ್ಕನ ಹೆಸರು ಹೇಮಲತಾ. ನಾವೆಲ್ಲರೂ ಪ್ರೀತಿಯಿಂದ ‘ಅಮ್ಮಿ ಅಕ್ಕ’ ಅಂತಾನೆ ಕರೆಯುವ ರೂಢಿ.

| ಪ್ರವೀಣ್ ಕುಲಾಲ್ ಅಲ್ಲಿಪಾದೆ

ತ್ಯಾಗದ ಈ ಪರಿ...

ಅಪ್ಪ-ಅಮ್ಮ ಪುಟ್ಟಹಳ್ಳಿಯಲ್ಲಿದ್ದರು. ಅಲ್ಲಿ ಶಿಕ್ಷಕರಾಗಿದ್ದರು. ಮೂರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ನಾನು ಅವರಿಗೆ ಕೊನೆಯ ಮಗಳು. ನಾನು ಹುಟ್ಟಿ 5-6 ತಿಂಗಳೊಳಗೆ ಅಮ್ಮ ಅನಾರೋಗ್ಯದಿಂದ ಕೊನೆಯುಸಿರು ಎಳೆದರು. ಅಪ್ಪ ಎಲ್ಲ ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಸಣ್ಣ ಕೂಸಾಗಿದ್ದ ನನ್ನನ್ನು ನೋಡಿಕೊಳ್ಳಲು ಕಷ್ಟವಾಗಬಹುದೆಂದು ಅಕ್ಕ-ಪಕ್ಕದ ಮನೆಯವರು ಸೇರಿ ನಮ್ಮಪ್ಪನಿಗೆ ಇನ್ನೊಂದು ಮದುವೆ ಮಾಡಿಸಿದರು. ಈ ತಾಯಿ ಬೆಂಗಳೂರಿನವರು. ಬಳ್ಳಾರಿಯಲ್ಲಿ ಶಿಕ್ಷಕಿಯಾಗಿದ್ದರು. ‘ಈ ಮಕ್ಕಳೇ ನನ್ನ ಮಕ್ಕಳು’ ಎಂದು ತಿಳಿದು ಇವರೇ ತನ್ನ ಸರ್ವಸ್ವವೆಂದು ತಮ್ಮ ಗರ್ಭಾಶಯವನ್ನೇ ತೆಗೆಸಿಬಿಟ್ಟರು! ನಾವು ಇದ್ದದ್ದು ಕಪ್ಪಗಲ್​ಹಳ್ಳಿಯಲ್ಲಿ. ಅಲ್ಲಿ ಮಕ್ಕಳ ವಿದ್ಯಾಭ್ಯಾಸ ಸರಿಯಾಗುವುದಿಲ್ಲ ಎಂದು ಬಳ್ಳಾರಿಗೆ ಬಂದು ಅಮ್ಮ ಬಾಲಭಾರತಿ ಸ್ಕೂಲಿನ ಶಿಕ್ಷಕಿಯಾದರು. ಮಕ್ಕಳನ್ನು ಓದಿಸಿ, ಬೆಳೆಸಿ ಎಲ್ಲ ಮಕ್ಕಳಿಗೂ ಮದುವೆ ಮಾಡಿ ಮೊಮ್ಮಕ್ಕಳೊಂದಿಗೆ ಖುಷಿಯಿಂದ ಇರುವಾಗಲೇ ದೊಡ್ಡಣ್ಣನನ್ನು ಕಳೆದುಕೊಂಡವು. ತಂದೆ-ತಾಯಿ ಇದರಿಂದ ಕುಸಿದರು. ತಂದೆ ಅನಾರೋಗ್ಯದಿಂದ ಮದರ್ಸ್ ಡೇ ದಿನವೇ ಕೊನೆಯುಸಿರೆಳೆದರು. ಈಗ ಅಮ್ಮ, ನಾಲ್ಕು ಮಕ್ಕಳು, ಸೊಸೆಯರು, ಅಳಿಯಂದಿರು, ಮೊಮ್ಮಕ್ಕಳ ಜತೆಯಲ್ಲಿ ಇದ್ದಾರೆ.

| ಗಾಯತ್ರಿ ಜೋಶಿ ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net