ಆಗ ಸಾಲ ಮೂರು ಸಾವಿರ, ಈಗ ಕೋಟಿ ವ್ಯವಹಾರ!

narishakti
Published on

ಮಾನಸಿಕ ಅಸ್ವಸ್ಥ ಗಂಡ, ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ತುತ್ತು ಅನ್ನದ ಕನಸು ಹೊತ್ತು ದೆಹಲಿಗೆ ಬಂದಿಳಿದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಇಂದು ಕೋಟಿ ಕೋಟಿ ವ್ಯವಹಾರಗಳ ಮಾಲೀಕಳಾದ ಕುತೂಹಲ ಕಥನವಿದು. ರಾಷ್ಟ್ರಪತಿಯಿಂದ ‘ನಾರಿಶಕ್ತಿ’ ಹಾಗೂ ಪ್ರಧಾನಿಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿರುವ ಈಕೆಯ ಸಾಹಸಮಯ ಜೀವನದ ಕಿರುಚಿತ್ರವೀಗ ಬಿಡುಗಡೆಯಾಗುತ್ತಿದೆ.

2019ರ ಒಂದು ಸಂಜೆ. ದೆಹಲಿಯಲ್ಲಿ ನಡೆದಿತ್ತು ಬೃಹತ್ ಸಮಾವೇಶ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ರಾಷ್ಟ್ರದ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು. ಆಗ ಸಾಮಾನ್ಯ ಹೆಣ್ಣುಮಗಳೊಬ್ಬಳು ವೇದಿಕೆ ಏರಿದಾಗ ಅಲ್ಲಿ ನೆರೆದಿದ್ದವರಿಗೆ ಅಷ್ಟೇನೂ ವಿಶೇಷ ಎನ್ನಿಸಿದರಲಿಲ್ಲ. ಆದರೆ ಆಕೆಯ ಜೀವನದ ಕುರಿತಾಗಿ ವಿವರಿಸುತ್ತಿದ್ದಂತೆಯೇ ಚಪ್ಪಾಳೆಗಳ ಸುರಿಮಳೆ. ಈ ಹೆಣ್ಣು ಮಗಳ ಹೆಸರು ಕೃಷ್ಣಾ ಯಾದವ್. ಉತ್ತರ ಪ್ರದೇಶದ ಕೋಟಿ ಕೋಟಿ ವ್ಯವಹಾರಗಳ ಒಡತಿ. ದೇಶ- ವಿದೇಶಗಳಲ್ಲಿ ಹೆಸರು ಗಳಿಸಿರುವ ಸುಪ್ರಸಿದ್ಧ ಶ್ರೀಕೃಷ್ಣಾ ಪಿಕಲ್ಸ್​ಗಳ ಮಾಲೀಕರು ಇವರು. 500ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿರುವ ಆಶ್ರಯದಾತೆ. ಕೇವಲ 20 ವರ್ಷಗಳ ಹಿಂದೆ ತುತ್ತು ಊಟಕ್ಕಾಗಿ ಪರದಾಡುತ್ತಿದ್ದ ಕೃಷ್ಣಾ ಇಂದು ಈ ಪರಿಯಲ್ಲಿ ಬೆಳವಣಿಗೆ ಹೊಂದಿ, ರಾಷ್ಟ್ರಪತಿ, ಪ್ರಧಾನಿಯವರಿಂದ ಪ್ರಶಸ್ತಿ ಗಳಿಸಿರುವ ಯಶೋಗಾಥೆಯನ್ನು ಬಣ್ಣಿಸುತ್ತಿದ್ದಂತೆಯೇ, ಎಲ್ಲರೂ ಅಚ್ಚರಿಯಿಂದ ಮೂಕ ವಿಸ್ಮಿತರಾಗಿದ್ದರು.

ಕೈಯಲ್ಲಿರಲಿಲ್ಲ ಬಿಡಿಗಾಸು!: ಕೃಷ್ಣಾ ಅವರ ಕಥನ ಶುರುವಾಗುವುದು 90ರ ದಶಕದಿಂದ. ಉತ್ತರ ಪ್ರದೇಶದ ಬುಲುಂದರ್​ಶೆಹರ್​ಗೆ ಮದುವೆಯಾಗಿ ಬಂದಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ ದಂಪತಿ ಇಬ್ಬರೂ ಕೂಲಿ ನಾಲಿ ಮಾಡಿ ಸಂಸಾರ ಸಾಗಿಸುತ್ತಿದ್ದರು. ಅದಾಗಲೇ ಎರಡು ಮಕ್ಕಳು ಕೃಷ್ಣಾ ಮಡಿಲು ಸೇರಿದವು. 1995, ಕೃಷ್ಣಾ ಪಾಲಿಗೆ ಆಘಾತ ಕಾದಿತ್ತು. ಅನಾರೋಗ್ಯ ಸಮಸ್ಯೆಯಿಂದ ಬಳಲಿದ ಪತಿ ಮಾನಸಿಕ ಅಸ್ವಸ್ಥರಾದರು.

ಸಂಸಾರದ ಸಂಪೂರ್ಣ ಜವಾಬ್ದಾರಿ ಕೃಷ್ಣಾ ಅವರ ಮೇಲೆ ಬಿತ್ತು. ಮೊದಲೇ ಬಡತನ, ಮೇಲಾಗಿ ಇಬ್ಬರು ಮಕ್ಕಳು, ಈಗ ಅಸ್ವಸ್ಥ ಗಂಡ... ಕೃಷ್ಣಾ ನಲುಗಿ ಹೋದರು. ಉಪ್ಪಿನಕಾಯಿ ತಯಾರಿಸುವುದನ್ನು ಅರಿತಿದ್ದ ಕೃಷ್ಣಾ ಅದನ್ನೇ ತಯಾರಿಸಿ ಮಾರಾಟ ಮಾಡತೊಡಗಿದರು. ಆದರೆ ಮಾರಾಟ ಮಾಡಿ ಬಂದ ಹಣವೆಲ್ಲವೂ ಉಪ್ಪಿನಕಾಯಿ ತಯಾರಿಸುವುದಕ್ಕಷ್ಟೇ ಸೀಮಿತವಾಗತೊಡಗಿತು. ಪುನಃ ಅದೇ ಸಮಸ್ಯೆ. ಉಪ್ಪಿನಕಾಯಿ ಮಾರಾಟವಾದರಷ್ಟೇ ಕೈಯಲ್ಲಿ ಕಾಸು. ಅದು ಸಿಕ್ಕರೂ ಅದಕ್ಕೇ ಎಲ್ಲ ಹಣ ಖರ್ಚು. ಕೃಷ್ಣಾ ಅವರಿಗೆ ದಿಕ್ಕೇ ತೋಚದಾಯಿತು. ಇಂಥ ಪರಿಸ್ಥಿತಿಯಲ್ಲಿದ್ದ ಬೇರೆ ಮಹಿಳೆಯರಾದರೆ ದಿಕ್ಕು ಕಾಣದೇ ಸಾವಿನ ಮಾರ್ಗ ಹಿಡಿಯುತ್ತಿದ್ದರೋ ಗೊತ್ತಿಲ್ಲ. ಆದರೆ ತನ್ನಿಬ್ಬರು ಪುಟಾಣಿ ಕಂದಮ್ಮಗಳು ಹಾಗೂ ಅನಾರೋಗ್ಯಪೀಡಿತ ಗಂಡ... ಕೃಷ್ಣಾ ಮನಸ್ಸು ಗಟ್ಟಿಮಾಡಿಕೊಂಡರು. ತಮ್ಮೂರಿನಲ್ಲಿಯೇ ಇದ್ದರೆ, ಎಲ್ಲರೂ ಉಪವಾಸದಿಂದ ಸಾಯಬೇಕಾಗುತ್ತದೆ ಎನ್ನುವುದನ್ನು ಅರಿತ ಅವರು, ಗಂಡ ಮತ್ತು ಮಕ್ಕಳನ್ನು ಕಟ್ಟಿಕೊಂಡು ರಾಜಧಾನಿ ದೆಹಲಿಯತ್ತ ಮುಖ ಮಾಡಿದರು.

ಗುರುತು, ಪರಿಚಯವಿಲ್ಲದ ಊರಿಗೆ ಬಂದಾಗಿದೆ ಮುಂದೇನು? ಉಳಿಯಲು ಒಂದು ಸೂರು ಕಂಡುಕೊಂಡ ಕೃಷ್ಣಾರಿಗೆ ಅಡುಗೆ ಕಲಿತಲೆ ದೆಹಲಿಯಲ್ಲಿ ಕೆಲಸ ಸಿಗುತ್ತದೆ ಎಂದು ಯಾರೋ ಸಲಹೆ ಇತ್ತರು. ಅದರಂತೆಯೇ ಒಂದು ತರಬೇತಿ ಸಂಸ್ಥೆಗೆ ಸೇರಿದ ಅವರು ಅಡುಗೆ ತರಬೇತಿಯನ್ನೂ ಪಡೆದರು.

ಆದರೆ ಅದೃಷ್ಟ ಅವರ ಕೈಹಿಡಿಯಲಿಲ್ಲ. ತಾವು ಚೆನ್ನಾಗಿ ಅಡುಗೆ ಮಾಡುತ್ತೇವೆ ಎಂದರೂ ಯಾರೂ ಅವರನ್ನು ನಂಬಲಿಲ್ಲ. ಸಿಕ್ಕಸಿಕ್ಕಲ್ಲೆಲ್ಲಾ ಅಡುಗೆ ಕೆಲಸ ಕೇಳಿಕೊಂಡು ಅಲೆದಾಡಿದರು. ಆದರೆ ಫಲಿತಾಂಶ ಮಾತ್ರ ಶೂನ್ಯ. ಕೃಷ್ಣಾರಿಗೆ ತಮ್ಮ ಸುತ್ತಲೂ ಕತ್ತಲು ಕವಿದಂಥ ಅನುಭವ. ಏನು ಮಾಡುವುದು ಎಂದು ದಿಕ್ಕೇ ತೋಚದಾಯಿತು. ಹಾಗೆಂದು ಸುಮ್ಮನೆ ಕುಳಿತುಕೊಳ್ಳಲಾದೀತೆ? ಇಲ್ಲವಲ್ಲ! ಸರಿ, ಇನ್ನೇನು ಮಾಡಬಹುದು ಎಂದು ಯೋಚಿಸಿದರು. ಇನ್ನೊಮ್ಮೆ ಉಪ್ಪಿನಕಾಯಿಯಿಂದಲೇ ಅದೃಷ್ಟ ಪರೀಕ್ಷೆ ಮಾಡೋಣ ಎಂದುಕೊಂಡರು. ರಾಜಧಾನಿಯಲ್ಲಿ ತಮ್ಮ ಉಪ್ಪಿನಕಾಯಿಗೆ ಬೆಲೆ ಬರಬಹುದು ಎಂದು ಅವರು ಆಶಾಭಾವ ತಾಳಿದರು. ಅದೇ ಭಾವದೊಂದಿಗೆ ಉಪ್ಪಿನಕಾಯಿ ತಯಾರಿಕೆ ಶುರು ಮಾಡೋಣ ಎಂದು ಮನದಲ್ಲಿಯೇ ಅಂದುಕೊಂಡರು. ಮನಸ್ಸೇನೋ ಮಾಡಿಬಿಟ್ಟರು, ಆದರೆ ದುಡ್ಡು? ಉಪ್ಪಿನಕಾಯಿಗೆ ಅಗತ್ಯವಾಗಿ ಬೇಕಾಗುವ ಸಾಮಾನುಗಳನ್ನು ತರಲು ದುಡ್ಡು ಬೇಕಲ್ಲವೆ? ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಕೆಲವರ ಬಳಿ ಸಾಲ ಕೇಳಿದರು. ಆದರೆ ಆರಂಭದಲ್ಲಿ ಯಾರೂ ಸಹಾಯ ಮಾಡಲಿಲ್ಲ. ನಂತರ ಪರಿಚಯದವರೊಬ್ಬರು 500 ರೂಪಾಯಿ ನೀಡಿದರು.

500 ರೂಪಾಯಿ ತೆಗೆದುಕೊಂಡು ಹೋದ ಕೃಷ್ಣಾ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿ ತೆಗೆದುಕೊಳ್ಳಲು ಮುಂದಾದರು. ಆದರೆ ಅದು ಎಲ್ಲಿಯೂ ಸಾಕಾಗಲಿಲ್ಲ. ನಂತರ ಕಂಡ ಕಂಡವರ ಬಳಿ ಸಾಲ ಕೇಳಿದರು. ಅವರ ಅದೃಷ್ಟ ಚೆನ್ನಾಗಿತ್ತು. ಅಂತೂ ಇಂತೂ ಮೂರು ಸಾವಿರ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾದರು.

ಅದೃಷ್ಟದ ಬಾಗಿಲು ತೆರೆದ ಹಣ...: ಅಲ್ಲಿಂದ ಆರಂಭವಾದದ್ದು ಕೃಷ್ಣಾ ಅವರ ಯಶಸ್ಸಿನ ಪಯಣ. ಮೂರೂವರೆ ಸಾವಿರ ಹಣದಿಂದ ಬೇಕಾದ ಸಾಮಗ್ರಿ ಕೊಂಡು ಉಪ್ಪಿನಕಾಯಿ ತಯಾರಿಸಿದರು. ಅಷ್ಟೊತ್ತಿಗಾಗಲೇ ಪತಿಯೂ ಸ್ವಲ್ಪ ಚೇತರಿಸಿಕೊಳ್ಳತೊಡಗಿದ್ದರು. ಹೆಂಡತಿ ಮಾಡಿದ ಉಪ್ಪಿನಕಾಯಿಯನ್ನು ತಳ್ಳುಗಾಡಿಯಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರು. ಮೊದಲಿನಂತೆ ನಷ್ಟ ಆಗದೇ ಅವರಿಗೆ ಆರಂಭದಲ್ಲಿ 5,250 ರೂಪಾಯಿ ಲಾಭ ಬಂತು. ಮನೆಗಾಗುವಷ್ಟು ಸ್ವಲ್ಪಸ್ವಲ್ಪವೇ ಹಣವನ್ನು ಖರ್ಚು ಮಾಡಿ, ಅರ್ಧ ಹಣವನ್ನು ಉಳಿಸಿ ಮತ್ತೆ ಉಪ್ಪಿನಕಾಯಿ ತಯಾರಿಸಿದರು. ಗಂಡ ಅದನ್ನು ಮಾರಾಟ ಮಾಡಿದರು. ಅದರಿಂದ ಬಂದ ಹಣದಿಂದ ಮತ್ತಷ್ಟು, ಇನ್ನಷ್ಟು ಉಪ್ಪಿನಕಾಯಿ ತಯಾರಿಸುವುದು, ಮಾರಾಟ ಮಾಡುವುದು ಮುಂದುವರೆಯಿತು. ಅವರ ಉಪ್ಪಿನಕಾಯಿಯ ಸವಿರುಚಿಗೆ ಮನಸೋತ ಜನರು ಮತ್ತೆ ಮತ್ತೆ ಬೇಡಿಕೆ ಒಡ್ಡಿದರು. ಹೀಗೆ ಅವರ ಯಶಸ್ಸಿನ ಪಯಣ ಮುಂದುವರೆಯಿತು. ಅದೃಷ್ಟ ಲಕ್ಷ್ಮಿ ಕೃಷ್ಣಾ ಮನೆಯ ಬಾಗಿಲು ತಟ್ಟಿಯಾಗಿತ್ತು. ಯಶಸ್ಸಿನ ಮೇಲೆ ಯಶಸ್ಸಿ ಅವರಿಗೆ ಒಲಿದು ಬಂತು. ಹಂತಹಂತವಾಗಿ ಬೆಳೆದ ಕೃಷ್ಣಾ ಹಿಂತಿರುಗಿ ನೋಡಲೇ ಇಲ್ಲ. ಕೈಯಲ್ಲಿ ಕಾಸು ಸೇರುತ್ತಿದ್ದಂತೆಯೇ ವಿಧವಿಧ ಬಗೆಯ ಉಪ್ಪಿನಕಾಯಿಯಲ್ಲಿ ತೊಡಗಿದರು. ಹೊಸಹೊಸ ಪ್ರಯೋಗ ಮಾಡತೊಡಗಿದರು. ಒಂದಕ್ಕಿಂತ ಒಂದು ರುಚಿಯಾಗಿ ಮಾರುಕಟ್ಟೆಯಲ್ಲಿ ಭರ್ಜರಿ ಬಿಕರಿಯಾಗತೊಡಗಿದವು. ಹೀಗೆ ಯಶಸ್ಸಿನ ಒಂದೊಂದೇ ಹೆಜ್ಜೆ ಏರುತ್ತಿರುವ ಕೃಷ್ಣಾ ಈಗ ಕೋಟಿ ಕೋಟಿ ವ್ಯವಹಾರಗಳ ಒಡತಿ. ಇವರ ನಂಬಲಸಾಧ್ಯವೆನಿಸಿರುವ ಯಶೋಗಾಥೆಗೆ ಮೆಚ್ಚಿ ‘ನಾರಿಶಕ್ತಿ’ ಸೇರಿದಂತೆ ನೂರಾರು ಪ್ರಶಸ್ತಿಗಳು ಒಲಿದು ಬಂದಿವೆ.

ಸಂತಸದಲ್ಲಿ ರೈತ: ಕೃಷ್ಣಾ ಅವರು ತರಕಾರಿಗಳಿಂದಲೂ ಬಗೆಬಗೆ ಉಪ್ಪಿನ ಕಾಯಿ ತಯಾರಿಸುತ್ತಾರೆ. ಇದಕ್ಕಾಗಿ ಅವರು ರೈತರಿಂದ ನೇರವಾಗಿ ತರಕಾರಿ ಖರೀದಿಸುತ್ತಿದ್ದಾರೆ. ರೈತರಿಗೆ ಯೋಗ್ಯ ಬೆಲೆಯನ್ನು ಇವರು ನೀಡುತ್ತಿರುವ ಕಾರಣ, ರೈತರ ಮೊಗದಲ್ಲಿ ಸಂತಸ ಮೂಡಿದೆ. ‘ಮೊದಲು ನಾವು ಬೆಳೆದ ತರಕಾರಿಗಳಿಗೆ ಅತ್ಯಂತ ಕಡಿಮೆ ಬೆಲೆ ಬರುತ್ತಿತ್ತು. ಈಗ ನಾವು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಯೋಗ್ಯ ಬೆಲೆ ನಮಗೆ ಸಿಗುತ್ತಿದೆ’ ಎಂದು ರೈತರು ಹೇಳುತ್ತಿದ್ದಾರೆ.

ಕಂಪನಿ ಆರಂಭ: 2011ರಲ್ಲಿ ಶ್ರೀಕೃಷ್ಣಾ ಪಿಕಲ್ಸ್ ಎಂಬ ಹೆಸರಿನಲ್ಲಿ ತಮ್ಮದೇ ಆದ ಉಪ್ಪಿನಕಾಯಿ ಕಂಪನಿಯನ್ನು ಕೃಷ್ಣಾ ಆರಂಭಿಸಿದರು. 152 ಬಗೆಯ ಉಪ್ಪಿನಕಾಯಿಯನ್ನು ಇಲ್ಲಿ ತಯಾರಿಸತೊಡಗಿದರು. ಈ ಉದ್ಯಮ ನಿಧಾನವಾಗಿ ಬೆಳೆಯತೊಡಗಿತು. ಉದ್ಯಮ ಬೆಳೆದಂತೆ ಉದ್ಯೋಗಿಗಳ ಅವಶ್ಯಕತೆ ಬಿತ್ತು. ಉಪ್ಪಿನಕಾಯಿ ತಯಾರಿಸಲು ಮಹಿಳೆಯರನ್ನು ನೇಮಕ ಮಾಡಿಕೊಳ್ಳತೊಡಗಿದರು ಕೃಷ್ಣಾ. ಹೀಗೆ 400ಕ್ಕೂ ಅಧಿಕ ಮಹಿಳೆಯರಿಗೆ ಇಲ್ಲೀಗ ಕೆಲಸ ಸಿಕ್ಕಿದೆೆ. ಹೀಗೆ ಕೃಷ್ಣಾ ದೆಹಲಿಯಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಈಗ ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾರೆ. ಉಪ್ಪಿನಕಾಯಿಯ ಜತೆಗೀಗ ಹಣ್ಣುಗಳ ಜ್ಯೂಸ್, ಸ್ಕ್ವಾಷಸ್​ ಮತ್ತು ಸೂಪ್​ಗಳನ್ನೂ ತಯಾರು ಮಾಡುತ್ತಿದ್ದಾರೆ. ಇವರ ಆದರ್ಶಮಯ ಜೀವನದ ಕುರಿತ ಕಿರುಚಿತ್ರವನ್ನು ತಯಾರಿಸಲಾಗಿದ್ದು ಅದೀಗ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net